Tag: anant kumar hegde

  • BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

    BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

    – ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತೇವೆ

    ಕಾರವಾರ: ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಕುಮಟಾದಲ್ಲಿ ಇಂದು ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ಎನ್‍ಎಲ್ ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಸಮರ್ಪಕ ಸೇವೆ ನೀಡಲು ಬಿಎಸ್‍ಎನ್‍ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗೋದಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳುಹಿಸುತ್ತೇವೆ ಎಂದರು.

    ಎಲ್ಲ ಸೌಕರ್ಯಗಳಿದ್ದರೂ ಸಂಸ್ಥೆಯ ನೌಕರರು ಕೆಲಸ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ ಎಂದಿದ್ದಾರೆ. ಬಿಎಸ್‍ಎನ್‍ಎಲ್ ಎಂಬ ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ಅಧೀನದಲ್ಲಿರುವ ಬಿಎಸ್‍ಎನ್‍ಎಲ್ ಸಂಸ್ಥೆ ವಿರುದ್ಧ ಹರಿಹಾಯ್ದರು.

    ಕಾರ್ಯ ವೈಖರಿ ವಿರುದ್ಧ ಅಸಮದಾನ
    ಕಳೆದ ತಿಂಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ಹಾಗೂ ಪಂಚಾಯಿತಿಗಳಿಗೆ ಇಂಟರ್‍ನೆಟ್ ಸೇವೆ ನೀಡದೇ ನೀಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ಸಭೆಯಲ್ಲೇ ಪ್ರತಿಭಟನೆಗೆ ಕುಳಿತು, ಒಂದು ವಾರದ ವರೆಗೆ ಸಮಯ ನೀಡಿ ತೆರಳಿದ್ದರು. ಆದರೆ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳನ್ನು ಮಾಡದೇ ನುಣಚಿಕೊಂಡಿದ್ದರು. ಹೀಗಾಗಿ ಮತ್ತೆ ಸಭೆ ಕರೆದು ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇಂದು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿವಾದಿತ ಹೇಳಿಕೆ ನೀಡಿದ್ದಾರೆ.

  • ಡಿಸಿ ಕಚೇರಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಧರಣಿ- ಅಧಿಕಾರಿಗಳು ಕಕ್ಕಾಬಿಕ್ಕಿ!

    ಡಿಸಿ ಕಚೇರಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಧರಣಿ- ಅಧಿಕಾರಿಗಳು ಕಕ್ಕಾಬಿಕ್ಕಿ!

    – ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್
    – ರಾತ್ರಿ 9 ಬಳಿಕ ಬಿಡುಗಡೆಯಾದ ಅಧಿಕಾರಿಗಳು

    ಕಾರವಾರ: ಕೆಲಸ ಆಗುವವರೆಗೂ ಧರಣಿ ಕೂರುತ್ತೇನೆ. ಇಂದು ಎಲ್ಲಿಗೂ ಹೋಗೊಲ್ಲ ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಕುಳಿತ ಪ್ರಸಂಗ ಇಂದು ನಡೆದಿದೆ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಕಚೇರಿಯಿಂದ ಹೊರ ನಡೆದು ಮಂಗಳವಾರದವರೆಗೆ ಅಧಿಕಾರಿಗಳಿಗೆ ಸಮಯ ನೀಡಿದ್ದಾರೆ.

    ಹೌದು. ಈ ಕೋಪಕ್ಕೆ ಕಾರಣವೂ ಇದೆ. ಗುರುವಾರ ಕಾರವಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದರು ಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿನ 231 ಗ್ರಾಮ ಪಂಚಾಯ್ತಿಗಳಿಗೆ ಉಚಿತ ಬಿಎಸ್‍ಎನ್‍ಎಲ್ ವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು. ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಪಂಚಾಯ್ತಿಗಳಿಗೂ ವೈಪೈ ನೀಡಲಾಗಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್‍ಎನ್‍ಎಲ್‍ನ ಜಿಎಂ ಆರ್.ವಿ.ಜನ್ನು ದಾಖಲೆಗಳನ್ನು ನೀಡಿದರು. ಆದರೆ ಜಿಲ್ಲೆಯಲ್ಲಿ ಉಚಿತ ವೈಫೈ ನೀಡಿರುವ ಪೈಕಿ ಕೇವಲ 148 ಗ್ರಾಮ ಪಂಚಾಯ್ತಿಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ 62 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

    ಇದಲ್ಲದೇ ಈ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯದ ಕಾರ್ಯಕ್ರಮದಲ್ಲಿ ಬಿಎಸ್‍ಎನ್‍ಎಲ್‍ನ ನೆಟ್‍ವರ್ಕ್ ಸಮಸ್ಯೆ ಸರಿಪಡಿಸುವಂತೆ ಜನರು ಕೇಳಿಕೊಂಡಿದ್ದರು. ಹೀಗಾಗಿ ಈ ಕುರಿತು ಸಹ ಪಬ್ಲಿಕ್ ಟಿವಿ ಸಂಸದರಿಗೆ ಮಾಹಿತಿ ನೀಡಿತ್ತು. ಬಿಎಸ್‍ಎನ್‍ಎಲ್‍ನ ಸುಳ್ಳುಮಾಹಿತಿ ಬಗ್ಗೆ ಬೆಳಕು ಚಲ್ಲಿತ್ತು. ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿಗಳಿಗಲ್ಲದೇ ಹಲವು ಮೊಬೈಲ್ ಟವರ್ ಸಿದ್ಧವಾಗಿದ್ದರೂ ಯಾವುದೂ ಕೂಡ ಕಾರ್ಯನಿರ್ವಹಿಸದಿದ್ದರೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಸುಳ್ಳುದಾಖಲೆ ತೋರಿಸಿತ್ತು. ಹೀಗಾಗಿ ಈ ವಿಷಯ ಕುರಿತು ಗರಂ ಆದ ಸಂಸದ ಅನಂತ್‍ಕುಮಾರ್ ಹೆಗ್ಡೆ ಸಂಜೆ ಆರು ಘಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು ಎಂದು ಪಟ್ಟು ಹಿಡಿದರು.

    ಅಷ್ಟಕ್ಕೇ ಸುಮ್ಮನಾಗದ ಸಂಸದರು ಇಂದೇ ಸರಿಯಾಗಬೇಕು ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತರು. ಇದರಿಂದಾಗಿ ಬಿಎಸ್‍ಎನ್‍ಎಲ್ ಅಧಿಕಾರಿಗಳು ಕಕ್ಕಾ ಬಿಕ್ಕಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಕ್ ಆಗಿದ್ದರು.

    ಈ ಮಧ್ಯೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, “ಒಂದು ವರ್ಷಗಳಿಂದ ಬಿಎಸ್‍ಎನ್‍ಎಲ್, ಜಿಎಸ್‍ಎನ್‍ಎಲ್, ಸಿಎಸ್‍ಎ ತಮ್ಮ ಆಂತರಿಕ ಜಗಳದಿಂದ ಗ್ರಾಮ ಪಂಚಾಯ್ತಿಗಳಿಗೆ ವೈಫೈ ನೀಡದೆ ಇಡೀ ಗ್ರಾಮ ಪಂಚಾಯ್ತಿ ಕಾರ್ಯ, ಚಟುವಟಿಕೆ ನಿಂತುಹೋಗುವಂತಾಗಿದೆ. ಇಂದೇ ಎಲ್ಲಾ ಸಮಸ್ಯೆ ಬಗೆಹರಿಯಬೇಕು ಅಲ್ಲಿಯವರೆಗೂ ಕಚೇರಿ ಬಿಟ್ಟು ತೆರಳುವುದಿಲ್ಲ ಇಲ್ಲಿಯೇ ಧರಣಿ ಕೂರುತ್ತೇನೆ, ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದರು.

    ಅಧಿಕಾರಿಗಳು ಸಹ ಸಂಸದರ ಈ ದಿಢೀರ್ ನಿರ್ಧಾರದಿಂದ ತಲೆಕೆಡಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರನ್ನು ಓಲೈಸುವ ಕೆಲಸ ಮಾಡಿದರು. ಬಳಿಕ ಸುಮಾರು ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬಂದರು.

  • ಪರೇಶ್ ಮೇಸ್ತಾ ಕೇಸ್ ಸಂಬಂಧ ಪ್ರಚೋದನಕಾರಿ ಭಾಷಣ – ಪ್ರಾಸಿಕ್ಯೂಷನ್ ಲೋಪ, ಶಿಕ್ಷೆಯಿಂದ ಅನಂತ್‍ಕುಮಾರ್ ಹೆಗಡೆ ಪಾರು

    ಪರೇಶ್ ಮೇಸ್ತಾ ಕೇಸ್ ಸಂಬಂಧ ಪ್ರಚೋದನಕಾರಿ ಭಾಷಣ – ಪ್ರಾಸಿಕ್ಯೂಷನ್ ಲೋಪ, ಶಿಕ್ಷೆಯಿಂದ ಅನಂತ್‍ಕುಮಾರ್ ಹೆಗಡೆ ಪಾರು

    ಕಾರವಾರ: ಕೋಮು ಸೌಹಾರ್ದವನ್ನು ಕೆಡಿಸಿದ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯದಿಂದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗಡೆ ಶಿಕ್ಷೆಯಿಂದ ಪಾರಾಗಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆ ವೇಳೆ ಅನಂತ್‍ಕುಮಾರ್ ಹೆಗಡೆ ಭಟ್ಕಳದಲ್ಲಿ ಪರೇಶ್ ಮೇಸ್ತಾ ಪ್ರಕರಣ ಸಂಬಂಧಿಸಿದಂತೆ ಪ್ರಚೋದನಕಾರಿಯಾಗಿ ಮಾತನಾಡಿ ಎರಡು ಕೋಮುಗಳ ನಡುವೆ ಸಂಘರ್ಷ ಹುಟ್ಟಿಸುವ ವಾತಾವರಣ ಸೃಷ್ಟಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಎನ್. ಸಿದ್ದೇಶ್ವರ್ ಅವರು ಮಂಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಐಪಿಸಿ ಸೆಕ್ಷನ್ 153 ಹಾಗೂ ಜನಪ್ರತಿನಿಧಿ ಕಾಯ್ದೆ 125ರ ಅಡಿಯಲ್ಲಿ ದೂರು ದಾಖಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಹುಡ್ಡರ್ ಅವರು ಇಡೀ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ನಡೆದುಕೊಂಡ ರೀತಿಯ ಬಗ್ಗೆ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ನಡೆದುಕೊಂಡ ರೀತಿ ಬಗ್ಗೆ ಉಲ್ಲೇಖಿಸುತ್ತಾ, ಈ ಪ್ರಕರಣದ ದೂರುದಾರರನ್ನು ಹೊರತುಪಡಿಸಿದರೆ ಪ್ರಕರಣದ ಯಾವ ಸಾಕ್ಷಿಯೂ ಪ್ರಾಸಿಕ್ಯೂಷನ್ ಅನ್ನು ಬೆಂಬಲಿಸಿಲ್ಲ. ಎಲ್ಲರ ಉದ್ದೇಶ ಅನಂತ್‍ಕುಮಾರ್ ಹೆಗಡೆಯವರಿಗೆ ಸಹಾಯ ಮಾಡುವುದೇ ಆಗಿದೆ ಎಂಬಂತೆ ಕಂಡುಬಂದಿದೆ. ಸಾಕ್ಷಿಗಳ ಹೇಳಿಕೆಯಲ್ಲಿ ವೈರುದ್ಯಗಳು ಹಾಗೂ ಲೋಪದೋಷಗಳು ಕಂಡುಬಂದಿದೆ. ಅಲ್ಲದೇ ಪ್ರಕರಣದ ಲೋಪದೋಷಗಳ ಬಗ್ಗೆ ಸಂಬಂಧಿಸಿದ ಸಾಕ್ಷಿಗಳಿಗೆ ಪ್ರಾಸಿಕ್ಯೂಷನ್ ಸರಿಯಾಗಿ ವಿವರಿಸಿಲ್ಲ. ಇಡೀ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಎದ್ದು ಕಾಣುತ್ತದೆ. ಹೀಗಾಗಿ ಪ್ರಕರಣದಲ್ಲಿ ಆರೋಪಿಗೆ ಸಂಶಯದ ಲಾಭ ದೊರೆತಿದೆ. ಅಲ್ಲದೆ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಆರೋಪಿ ವಿರುದ್ಧ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

    ಭಟ್ಕಳದಲ್ಲಿ ಅನಂತ್‍ಕುಮಾರ್ ಹೆಗಡೆ 2018ರ ಮೇ 7ರಂದು ಭಾಷಣ ಮಾಡಿದ ಬಗ್ಗೆ, 2018ರ ಮೇ 12ರಂದು ಸಂಸದರ ವಿರುದ್ಧ ದೂರು ದಾಖಲಿಸಲಾಗಿತ್ತು.

    ವಿಡಿಯೋ ಮಾಡಿದ ಕ್ಯಾಮರಾಮನ್ ಪ್ರತಿಕೂಲ ಸಾಕ್ಷಿ:
    ಈ ಪ್ರಕರಣದಲ್ಲಿ ಹೆಗಡೆರವರು ಪ್ರಚೋದನಕಾರಿ ಭಾಷಣವನ್ನು ಚುನಾವಣಾ ಆಯೋಗವೇ ನೇಮಕ ಮಾಡಿದ್ದ ವಿಡಿಯೋಗ್ರಾಫರ್ ರೆಕಾರ್ಡ್ ಮಾಡಿದ್ದರು. ಈ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು. ಆದರೇ ಸಾಕ್ಷಿಯಾಗಿ ಬಂದಿದ್ದ ವಿಡಿಯೋಗ್ರಾಫರ್ ತಾನು ಕೇವಲ ವಿಡಿಯೋ ರೆಕಾರ್ಡಿಂಗ್ ಮಾಡಿದ್ದೇನೆಯೇ ಹೊರತು ಅನಂತ್‍ಕುಮಾರ್ ಆಗ ಏನು ಹೇಳಿದ್ದರು ಎಂದು ಕೇಳಿಸಿಕೊಂಡಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾನೆ. ಈ ಪ್ರಕರಣದಲ್ಲಿ ಸಿಡಿ(ಕಾಂಪ್ಯಾಕ್ಟ್ ಡಿಸ್ಕ್)ನ್ನು ವಶಪಡಿಸಿಕೊಳ್ಳುವಾಗ ಹಾಜರಾಗಿದ್ದ ವ್ಯಕ್ತಿ ಪೊಲೀಸರು ಏನನ್ನು ವಶಪಡಿಸಿಕೊಂಡಿದ್ದಾರು ಎಂಬುದು ತನಗೆ ತಿಳಿದೇ ಇಲ್ಲ ಎಂದು ಸಾಕ್ಷಿ ಹೇಳಿದ್ದಾನೆ. ಅಲ್ಲದೇ ಆಗ ಚುನಾವಣಾ ಆಯೋಗ ನೇಮಕ ಮಾಡಿದ್ದ ಫ್ಲೈಯಿಂಗ್ ಸ್ಕ್ವಾಡ್ ಡಿವೈಎಸ್‍ಪಿ ನಾಗೇಶ್ ಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಮಂಜುನಾಥ್ ಸುಕ್ರು ಗೌಡ ಅವರು ಸಹ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ.

    ನೆನಪಿಲ್ಲ ಎಂದ ಪೇದೆ:
    ಈ ಪ್ರಕರಣದಲ್ಲಿ ಅನಂತ್‍ಕುಮಾರ್ ಹೆಗಡೆ ಭಾಷಣ ಮಾಡುವಾಗ ಅಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸ್ ಪೇದೆ ವಿಠ್ಠಲ್ ಗೌಡ, ಅನಂತ್‍ಕುಮಾರ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು ನಿಜ. ಆದರೆ ಏನು ಹೇಳಿದರು ಎಂಬುದು ನನಗೆ ನೆನಪಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಅನಂತ್‍ಕುಮಾರ್ ಅವರನ್ನು ಪ್ರಕರಣದಿಂದ ದೋಷ ಮುಕ್ತಗೊಳಿಸಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಪ್ರಕರಣ ಕೈ ಬಿಡುವಂತೆ ಕೋರಿದ್ದ ಸಂಸದ:
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್‍ಕುಮಾರ್ ಅವರು ನ್ಯಾಯಾಲಯಕ್ಕೆ ಕಳೆದ ಡಿಸೆಂಬರ್ ನಲ್ಲಿ ಪ್ರಕರಣ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಪುರಸ್ಕರಿಸದ ನ್ಯಾಯಾಲಯ ಚಾರ್ಜ್‍ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.

    ಏನಿದು ಪರೇಶ್ ಮೇಸ್ತಾ ಪ್ರಕರಣ?
    ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಪರೇಸ್ ಮೇಸ್ತಾ ನಗರದ ಶಟ್ಟಿಕೆರೆಯಲ್ಲಿ ಡಿಸೆಂಬರ್ 8 ರಂದು ಹೆಣವಾಗಿ ಪತ್ತೆಯಾಗಿದ್ದ. ನಿಗೂಢ ಸಾವಿನ ಕುರಿತು ತಂದೆ ಕಮಲಾಕರ್ ಮೇಸ್ತಾ ರವರು ಶವ ಪತ್ತೆಯಾದ ಡಿಸೆಂಬರ್ 8 ರಂದೇ ಐದು ಮಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದರು. ಪರೇಶ್ ಮೆಸ್ತಾ ಸಾವು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೇ ಹಲವು ಭಾಗದಲ್ಲಿ ಘರ್ಷಣೆಗೆ ಕಾರಣವಾಗಿತ್ತು.

  • ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ

    ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ

    ಕಾರವಾರ: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸಿಎಎ ಹೋರಾಟ ಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಚಿಕ್ಕಮಗಳೂರು ಮೂಲದ ಅಮೂಲ್ಯ ಲಿಯೋನ ಜೊತೆಗೆ ವೇದಿಕೆ ಮೇಲಿರುವ ಎಲ್ಲರ ವಿರುದ್ಧ ದೇಶ ದ್ರೋಹದ ವಿರುದ್ಧ ಕೇಸು ದಾಖಲಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗ್ಡೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಅನಂತಕುಮಾರ್ ಹೆಗ್ಡೆ ಎಡಪಂಥೀಯ ವಿಚಾರ, ದೇಶದ್ರೋಹಿ ವಿಚಾರವಾಗಿ ಮಾರ್ಪಟ್ಟಿದೆ. ಸಿ.ಎ.ಎ ಹೋರಾಟ ದೇಶದ್ರೋಹಿ ಹೋರಾಟವಾಗಿ, ದೇಶದ್ರೋಹಿ ಚಟುವಟಿಕೆಯಾಗಿ ಹಿಂದು ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದ್ದಾರೆ.

    ವೇದಿಕೆ ಮೇಲಿರುವ ಎಲ್ಲರ ಮೇಲೆ ದೇಶದ್ರೋಹದ ಕೇಸು ದಾಖಲಿಸಬೇಕು. ದೇಶದ್ರೋಹಿಗಳನ್ನು ತಕ್ಷಣ ಬಂಧಿಸಬೇಕು. ದೇಶದ್ರೋಹಿಗಳ ಆಡಂಬರ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲರನ್ನೂ ದೇಶದ್ರೋಹದ ಪ್ರಕರಣದಲ್ಲಿ ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರು.

  • ಕಟೀಲ್ ಮಾತುಕತೆ ವಿಫಲ – ಕ್ಷಮೆ ಕೇಳಲು ಒಪ್ಪದ ಅನಂತ್‍ಕುಮಾರ್?

    ಕಟೀಲ್ ಮಾತುಕತೆ ವಿಫಲ – ಕ್ಷಮೆ ಕೇಳಲು ಒಪ್ಪದ ಅನಂತ್‍ಕುಮಾರ್?

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಅನಂತ್‍ಕುಮಾರ್ ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ

    ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ದೆಹಲಿಯ ಲೋಧಿ ಎಸ್ಟೇಟ್‍ನಲ್ಲಿರುವ ಹೆಗ್ಡೆ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆರಳಿದ್ದು, ಕ್ಷಮೆ ಕೇಳುವಂತೆ ಮನವೋಲಿಸಲು ಪ್ರಯತ್ನಿಸಿದರು. ಸುಮಾರು ಅರ್ಧ ಗಂಟೆಯ ಸಂಧಾನದ ಬಳಿಕವೂ ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಟೀಲ್ ನಿವಾಸದಿಂದ ವಾಪಸ್ಸಾಗಿದ್ದಾರೆ.

    ವಿವಾದಾತ್ಮಕ ಹೇಳಿಕೆಯಿಂದ ಹೈಕಮಾಂಡ್ ಗರಂ ಆಗಿದೆ, ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವಂತೆ ಕಟೀಲ್ ಸೂಚಿಸಿದರು ಎನ್ನಲಾಗಿದೆ. ಆದರೆ ಹೆಗ್ಡೆ ಮಾತ್ರ ಹೈಕಮಾಂಡ್ ನೀಡಿದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡಿದ್ದೇನೆ. ನಾನು ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ ಎಂದಿದ್ದಾರಂತೆ.

    ಸಭೆ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಎಂದಿನಂತೆ ಭೇಟಿ ಮಾಡಿ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜಕೀಯ ಸ್ನೇಹಿತನಾಗಿ ಹೆಗ್ಡೆ ನಿವಾಸಕ್ಕೆ ಬಂದಿದ್ದೇನೆ. ಗಾಂಧಿಜೀ ಬಗ್ಗೆ ನೀಡಿದ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿದೆ. ಈ ಬಗ್ಗೆ ಹೈಕಮಾಂಡ್‍ಗೆ ಅನಂತ ಕುಮಾರ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತೆ ಎಂದರು. ಕ್ಷಮೆ ಕೇಳುವ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಉತ್ತರಿಸಲು ನಿರಾಕರಿಸಿದರು.

  • ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ

    ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ

    ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್ ನೀಡಿದೆ. ಹೆಗ್ಡೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ್ದು ನಾಳಿನ ಸಂಸದೀಯ ಸಭೆಗೆ ಆಗಮಿಸದಂತೆ ತಾಕೀತು ಮಾಡಿದೆ.

    ಇಂದು ಬೆಳಗ್ಗೆ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಹೈಕಮಾಂಡ್ ಮಾಧ್ಯಮಗಳ ಮೂಲಕ ಬೇಷರತ್ ಕ್ಷಮೆ ಕೇಳಲು ಸೂಚಿಸಿತ್ತು. ಅನಂತ ಕುಮಾರ್ ಕ್ಷಮೆಯಾಚಿಸದ ಹಿನ್ನೆಲೆ ಶೋಕಾಸ್ ನೋಟಿಸ್ ನೀಡಿದ್ದು, ಬಲು ಅಪರೂಪ ಎನ್ನುವಂತೆ ಸಂಸದೀಯ ಸಭೆಗೆ ನಿಷೇಧ ಹೇರಿದೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತ್ ಕುಮಾರ್, ಬ್ರಿಟಿಷರ ಬೆಂಬಲದಿಂದ ನಡೆದ ಪೂರ್ವ ನಿಯೋಜಿತ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ನಾಯಕರನ್ನು ಪೊಲೀಸರು ಎಂದು ಮುಟ್ಟಿಲ್ಲ. ಬ್ರಿಟಿಷರ ಅನುಮತಿಯಿಂದ ಸತ್ಯಾಗ್ರಹ, ಪ್ರತಿಭಟನೆ ನಾಟಕ ನಡೆಸಲಾಗಿತ್ತು. ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ, ಅನುಕೂಲ ಸ್ವಾತಂತ್ರ್ಯ ಚಳುವಳಿ ಎಂದು ಗಾಂಧಿಯನ್ನು ಟೀಕಿಸಿದ್ದರು.

    ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧಿ ಅವರು ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹವೇ ಕಾರಣ ಎಂದು ಬಿಂಬಿಸಲಾಗಿದೆ. ಆದರೆ ಇದು ನಿಜವಲ್ಲ ಸತ್ಯಾಗ್ರಹದಿಂದ ಬ್ರಿಟಿಷರು ಭಾರತವನ್ನು ತೊರೆಯಲಿಲ್ಲ. ಭಾರತದ ಇತಿಹಾಸ ಓದಿದರೆ ನನ್ನ ರಕ್ತಕುದಿಯುತ್ತದೆ. ಇಂಥವರನ್ನು ಹೇಗೆ ಮಹಾತ್ಮ ಎಂದು ಕರೆಯಲಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಮಹಾತ್ಮಗಾಂಧಿ ವಿರುದ್ಧ ಅನಂತಕುಮಾರ್ ವಾಗ್ದಾಳಿ ನಡೆಸಿದ್ದರು.

    ಅನಂತಕುಮಾರ್ ಹೆಗ್ಡೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ತೀವ್ರ ಟೀಕೆಗೆ ಗ್ರಾಸವಾಗಿತ್ತು. ಸ್ವಪಕ್ಷಿಯರಿಂದಲೇ ಅಸಮಾಧಾನಕ್ಕೆ ಕಾರಣವಾಗಿದ್ದ ಈ ಹೇಳಿಕೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ತಂದಿಟ್ಟಿತ್ತು.

  • ಎಲ್ಲಿ ವಿರೋಧ ಇರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು: ಮೀನುಗಾರರ ವಿರುದ್ಧ ಅನಂತಕುಮಾರ್ ಹೆಗ್ಡೆ ಕಿಡಿ

    ಎಲ್ಲಿ ವಿರೋಧ ಇರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು: ಮೀನುಗಾರರ ವಿರುದ್ಧ ಅನಂತಕುಮಾರ್ ಹೆಗ್ಡೆ ಕಿಡಿ

    ಕಾರವಾರ: ಎಲ್ಲಿ ವಿರೋಧ ಕಂಡುಬರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು ಎಂದು ಸಂಸದ ಅನಂತಕುಮಾರ್ ಹೆಗ್ಡೆ ಕಾರವಾರದ ಮೀನುಗಾರರ ವಿರುದ್ಧ ಕಿಡಿಕಾರಿದ್ದಾರೆ.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೋರಾಟ ವಿಚಾರವಾಗಿ ಕುಮಟಾದಲ್ಲಿ ಮಾತನಾಡಿದ ಸಂಸದರು, ಜನರಿಗೆ, ಊರಿಗೆ ಅಭಿವೃದ್ಧಿ ಬೇಕಾಗಿದೆ. ನಮ್ಮ ಮುಂದಿನ ತಲೆಮಾರಿಗೋಸ್ಕರ ಅಭಿವೃದ್ಧಿ ಬೇಕಾಗಿದೆ. ಶಾಶ್ವತವಾಗಿ ಅಧಿಕಾರದ ಖುರ್ಚಿ ಮೇಲೆ ಕುಳಿತುಕೊಳ್ಳಲು ನಾನು ಖಂಡಿತ ಬಂದಿಲ್ಲ. ಆದರೆ ಯಾವ ಹೆಜ್ಜೆ ಇಟ್ಟಿದ್ದೀನೋ ಅದನ್ನ ಮಾಡಿಯೇ ಹೋಗುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ಮಂಗಳೂರಿನಲ್ಲಿ, ಗೋವಾದಲ್ಲಿ ಬಂದರುಗಳು ಅಭಿವೃದ್ಧಿಯಾಗಿವೆ. ಅಲ್ಲಿನ ಮೀನುಗಾರರ ಬದುಕು ಹಾಳಾಗಿ ಹೋಗಿದೆಯಾ? ಸಾಗರಮಾಲಾ ಯೋಜನೆಯಿಂದ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಕಾರವಾರ ತಾಲೂಕು ಬಂದ್ ಮಾಡಿದ್ದರು. ಅಷ್ಟೇ ಅಲ್ಲದೆ ಸಂಸದ ಅನಂತಕುಮಾರ್ ಹೆಗ್ಡೆ ಹಾಗೂ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಚಪ್ಪಲಿ ಹಾರ ಹಾಕಿದ್ದರು. ಜೊತೆಗೆ ಅನಂತಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಶಾಸಕಿ ರೂಪಾಲಿ ನಾಯ್ಕ ಮುಖ ಹಾಗೂ ಶಾಸಕಿ ರೂಪಾಲಿ ನಾಯ್ಕ ಮುಖಕ್ಕೆ ಅನಂತಕುಮಾರ್ ಹೆಗ್ಡೆ ಭಾವ ಚಿತ್ರ ಅಂಟಿಸಿ ಪ್ರತಿಭಟನೆಯಲ್ಲಿ ಪ್ರದರ್ಶನ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಏನಿದು ಸಾಗರಮಾಲ? ಯೋಜನೆ ರೂಪರೇಷೆ ಏನು?
    ಸಾಗರಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆ ಅಡಿ ಹಣ ಬಿಡುಗಡೆ ಮಾಡಿದೆ. ಸಾಗರಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

    ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

  • ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

    ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

    – ವಿಶ್ವದಲ್ಲೇ ಅತಿ ಎತ್ತರದ ಏಸು ಪ್ರತಿಮೆ

    ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿ ನಿರ್ಮಿಸಲು ಮುಂದಾಗಿರುವ ವಿಶ್ವದ ಎತ್ತರದ ಏಕಶಿಲಾ ಏಸು ಪ್ರತಿಮೆಗೆ ಜಮೀನು ನೀಡಿರುವುದನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಮಾಡಿದ್ದ ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು. ತಮ್ಮ ವಿರುದ್ಧದ ಆರೋಪಗಳಿಗೆ ಇಂದು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಎಲ್ಲಾ ಸಮುದಾಯಗಳಿಗೂ ನಾನು ನೆರವಾಗಿದ್ದು, ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ನೀತಿಪಾಠ ನನಗೆ ಬೇಕಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

    ಬಿಜೆಪಿ ನಾಯಕರು ಯಾವಾಗಲೂ ಬೇರೊಬ್ಬರ ವಿಚಾರದಲ್ಲಿ ತಪ್ಪು ಕಂಡು ಹಿಡಿರುವ ಕೆಲಸವನ್ನಷ್ಟೇ ಮಾಡುತ್ತಾರೆ. ಈಗಲೂ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಕಪಾಲ ಬೆಟ್ಟ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಜನರು ನನ್ನ ಪರವಾಗಿ ನಿಂತು ಬೆಳೆಸಿದ್ದಾರೆ. ಇಡೀ ಗ್ರಾಮದ ಜನರು ನನ್ನ ಪರ ಪ್ರಾರ್ಥನೆ ಮಾಡಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಗ್ರಾಮಸ್ಥರು ಮೂರ್ತಿ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಆದರೆ ಈ ಜಾಗ ಸರ್ಕಾರಿ ಸ್ಥಳವಾಗಿದೆ. ಆದ್ದರಿಂದ ಬೇಡ ಎಂದು ಹೇಳಿ ಯಾವುದೇ ತೊಂದರೆ ಇಲ್ಲದೇ ಜಮೀನು ನೀಡುವ ಭರವಸೆ ನೀಡಿದ್ದೆ ಎಂದರು.

    ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈ ಸ್ಥಳವನ್ನು ಮಂಜೂರು ಮಾಡಿಸಿ ಸ್ವತಃ ಹಣವನ್ನೂ ನೀಡಿ ಅವರಿಗೆ ಹಕ್ಕು ಪತ್ರವನ್ನು ನೀಡಿದ್ದೇನೆ. ಬೆಟ್ಟ 16 ಎಕರೆ ಇದ್ದು, 10 ಎಕರೆ ಜಮೀನು ಮಾತ್ರ ಅವರಿಗೆ ಕಾನೂನಾತ್ಮಕವಾಗಿ ನೀಡಿದ್ದೇನೆ. ಈ ಒಂದು ಸ್ಥಳ ಮಾತ್ರವಲ್ಲ, ನನ್ನದೇ ಸ್ವತಃ ಜಮೀನನ್ನು ಕೂಡ ಕರ್ನಾಟಕ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ನೀಡಿದ್ದೇನೆ. ಅಲ್ಲದೇ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಲು ನೆರವು ನೀಡಿದ್ದೇವೆ ಎಂದು ತಿಳಿಸಿದರು.

    ವಿಶ್ವದ ಎತ್ತರದ ಏಕಶಿಲಾ ಪ್ರತಿಮೆ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ 114 ಅಡಿಯ ಏಕಶಿಲಾ ಏಸುಕ್ರಿಸ್ತರ ಪ್ರತಿಮೆ ತಲೆ ಎತ್ತಲಿದೆ. ಪ್ರತಿಮೆಯ ನಿರ್ಮಾಣದ ಶಿಲಾನ್ಯಾಸವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾಡಿದ್ದರು. ಕ್ರಿಸ್ ಮಸ್ ಶುಭ ದಿನದ ಹಿನ್ನೆಲೆಯಲ್ಲಿ ಪ್ರತಿಮೆಗೆ ಸಿದ್ಧವಾಗಿರುವ ಕಲ್ಲಿಗೆ ಉಳಿ ಪೆಟ್ಟು ಹಾಕುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪ್ರತಿಮೆಯ ಮಾದರಿಯನ್ನು ವೀಕ್ಷಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್ ಕೂಡ ಹಾಜರಿದ್ದರು.

    ಏಕಶಿಲೆಯ 114 ಅಡಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣದ ಕಾರ್ಯ ಈಗಾಗಲೇ ಆರಂಭವಾಗಿದೆ. ಅದರಲ್ಲಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದು, ಪ್ರತಿಮೆಯ ಶಿಲಾನ್ಯಾಸದ ಹಿನ್ನೆಲೆಯಲ್ಲಿ ಇಂದು ಬಹುತೇಕ ಗ್ರಾಮಸ್ಥರೆಲ್ಲ ಏಕಶಿಲಾ ಪ್ರತಿಮೆಯ ಮಾದರಿ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದರು. ಅಲ್ಲದೇ ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಕ್ರಿಶ್ಚಿಯನ್ನರು ಕೃತಜ್ಞತೆ ಸಲ್ಲಿಸಿದ್ದರು.

    ಬಿಜೆಪಿ ಆರೋಪ: ಇತ್ತ ಏಸು ಪ್ರತಿಮೆ ಸ್ಥಾಪನೆ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ. ಯಾವುದೋ ಆಸೆಗಾಗಿ ತಿಹಾರ್ ಜೈಲಿನಲ್ಲಿದ್ದು ಬಂದಿರೋ ಡಿಕೆಶಿ, ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಇಂತಹ ಕೆಲಸ ಮಾಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್‍ಕುಮಾರ್ ಹೆಗ್ಡೆ ಟೀಕಿಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ. ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ. ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ..? ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ. ಡಿಕೆ ಶಿವಕುಮಾರ್ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಅಂತ ಮಂಗಳೂರಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

  • ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಗೆ ಫಡ್ನವಿಸ್ ಪ್ರತಿಕ್ರಿಯೆ

    ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಗೆ ಫಡ್ನವಿಸ್ ಪ್ರತಿಕ್ರಿಯೆ

    ಮುಂಬೈ: ಕೇಂದ್ರ ಸರ್ಕಾರದ ಹಣವನ್ನು ವಾಪಸ್ ಕಳುಹಿಸಲು ದೇವೇಂದ್ರ ಫಡ್ನವಿಸ್ ಅವರನ್ನು 80 ಗಂಟೆಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಎಂಬ ಸಂಸದ ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರಸ್ಕರಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 80 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ನಾನು ಯಾವುದೇ ಹಣಕಾಸು ನಿರ್ಧಾರವನ್ನು ಕೈಗೊಂಡಿಲ್ಲ. ಈ ಕುರಿತು ನಾನು ಗಂಭೀರವಾಗಿ ಹೇಳಲು ಬಯಸುತ್ತೇನೆ ಯಾವುದೇ ಹಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿ ಕಳುಹಿಸಿಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಣಕಾಸು ವ್ಯವಸ್ಥೆಯನ್ನು ಪರಿಶೀಲಿಸಿದರೆ ಈ ಕುರಿತು ತಿಳಿಯುತ್ತದೆ ಸ್ಪಷ್ಟಪಡಿಸಿದರು.

    ಈ ಎಲ್ಲ ಹೇಳಿಕೆಗಳು ಸುಳ್ಳು, ಬುಲೆಟ್ ರೈಲು ಯೋಜನೆಯಲ್ಲಿ ಸಹ ಕೇಂದ್ರ ಸರ್ಕಾರ ನಿಯೋಜಿಸಿದ ಕಂಪನಿ ಕಾಮಗಾರಿ ನಡೆಸುತ್ತಿದೆ. ರಾಜ್ಯ ಸರ್ಕಾರ ಬುಲೆಟ್ ರೈಲಿಗೆ ಕೇವಲ ಭೂಮಿಯನ್ನು ಮಾತ್ರ ನೀಡುತ್ತಿದೆ. ಇದನ್ನು ಹೊರತು ಪಡಿಸಿದರೆ ಯಾವುದೇ ಹಣಕಾಸು ವ್ಯವಹಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆದಿಲ್ಲ. ಹೀಗಿರುವಾಗ ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಹೇಳಿಕೆಗಳು ಸುಳ್ಳು ಎಂದು ತಿಳಿಸಿದರು.

    ನಾನು ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಂಡಿಲ್ಲ, ಸರ್ಕಾರದ ವಿತ್ತ ವಿಭಾಗವನ್ನು ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದು ಡ್ರಾಮಾ, ಕೇಂದ್ರ ಸರ್ಕಾರದ ಹಣವನ್ನು ಸಿಎಂ ಖಾತೆಯಿಂದ ಮರಳಿ ಕೇಂದ್ರಕ್ಕೆ ಕಳುಹಿಸಲು ಫಡ್ನವಿಸ್ 80 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಹೆಗ್ಡೆ ಮಾತನಾಡಿದ್ದರು.

    ವಿಡಿಯೋದಲ್ಲಿ ಹೇಳಿದ್ದೇನು..?
    ನಿಮಗೆಲ್ಲ ಗೊತ್ತಿದೆ. ಮಹರಾಷ್ಟ್ರದಲ್ಲಿ ಕೇವಲ 80 ತಾಸಿಗೆ ನಮ್ಮವರು ಮುಖ್ಯಮಂತ್ರಿಯಾದರು. ನಂತರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯಾಕೆ ಈ ನಾಟಕ ಮಾಡಬೇಕಿತ್ತು?. ನಮಗೇನೂ ಗೊತ್ತಿರಲಿಲ್ವ. ಬಹುಮತ ಇಲ್ಲ ಎಂದು ಗೊತ್ತಿದ್ದರೂ ಯಾಕೆ ಸಿಎಂ ಆಗಲು ಹೋದ್ರು? ಇಂದು ಸಾಮಾನ್ಯವಾಗಿ ಎಲ್ಲರನ್ನೂ ಕೇಳಬಹುದಾದ ಪ್ರಶ್ನೆಯಾಗಿದೆ.

    ಸುಮಾರು 40 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಸಿಎಂ ಅವರ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ಸಿನವರು, ಎನ್‍ಸಿಪಿ ಮತ್ತು ಶಿವಸೇನೆಯವರು ಬಂದರೆ ಖಂಡಿತವಾಗಿ ಆ 40 ಸಾವಿರ ಕೋಟಿ ರೂ. ಹಣಕ್ಕೂ ತುಳಸಿ ನೀರು ಬಿಡುತ್ತಿದ್ದರು. ಅದು ಅಭಿವೃದ್ಧಿಗೆ ಹೋಗುತ್ತಿರಲಿಲ್ಲ. ಯಾಕಂದರೆ ಅದಷ್ಟೂ ಕೇಂದ್ರ ಸರ್ಕಾರದ್ದಾಗಿತ್ತು.

    ಈ ಎಲ್ಲಾನು ಮುಂಚೆನೇ ಪ್ಲಾನ್ ಮಾಡಿದ್ದರು. ಹೀಗಾಗಿ ಏನಾದ್ರೂ ಆಗಲಿ ಒಂದು ದೊಡ್ಡ ನಾಟಕ ಆದರೂ ಮಾಡಲೇಬೇಕು ಅಂತ ತೀರ್ಮಾನವಾಯಿತು. ಅದಕ್ಕೋಸ್ಕರ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಮಾಡಿ 15 ಗಂಟೆಯೊಳಗಡೆ ಅದಷ್ಟೂ ಗಣವನ್ನು ಎಲ್ಲೆಲ್ಲಿ ತಲುಪಿಸಬೇಕಿತ್ತೋ ಅಲ್ಲಲ್ಲಿ ತಪಿಸುವ ಮೂಲಕ ವ್ಯವಸ್ಥಿತವಾಗಿ ಅದನ್ನು ರಕ್ಷಣೆ ಮಾಡುವ ಕೆಲಸವನ್ನು ಫಡ್ನವಿಸ್ ಮಾಡಿದರು.

    ಸಂಪೂರ್ಣವಾಗಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ನೀಡಿದರು. ಇಲ್ಲೇ ಇದ್ದರೆ ಮುಂದಿನ ಮುಖ್ಯಮಂತ್ರಿ ಮುಂದೇನು ಮಾಡಬಹುದೆಂದು ನಿಮಗೆ ಗೊತ್ತಿದೆ ಅಲ್ವ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.

    ಒಟ್ಟಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯ ಖಾತೆಯಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಈ ದುಡ್ಡನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಖಾತೆಗೆ ವರ್ಗಾ ಮಾಡಬೇಕಿತ್ತು. ಅದಕ್ಕಾಗಿ ನಾಟಕ ಮಾಡಿದರು ಎಂದು ಹೇಳಿದ್ದು, ಸದ್ಯ ಸಂಸದರ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಫಡ್ನವಿಸ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

  • ಅನಂತಕುಮಾರ್ ಹೆಗಡೆ ಬಳಿ ಬೂಟಿನೇಟು ತಿಂದು ಹೆಬ್ಬಾರ್ ಬಿಜೆಪಿ ತೊರೆದಿದ್ದರು- ಕಾಂಗ್ರೆಸ್ ಮುಖಂಡ ಕಿಡಿ

    ಅನಂತಕುಮಾರ್ ಹೆಗಡೆ ಬಳಿ ಬೂಟಿನೇಟು ತಿಂದು ಹೆಬ್ಬಾರ್ ಬಿಜೆಪಿ ತೊರೆದಿದ್ದರು- ಕಾಂಗ್ರೆಸ್ ಮುಖಂಡ ಕಿಡಿ

    ಕಾರವಾರ: ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಬಳಿ ಬೂಟಿನ ಹೊಡೆತ ತಿಂದು ಬಿಜೆಪಿಯಿಂದ ಹೊರ ಬಂದಿದ್ದರು. ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ್ ವಾಗ್ದಾಳಿ ನಡೆಸಿದ್ದಾರೆ.

    ಯಲ್ಲಾಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಹೆಬ್ಬಾರ್ ಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಅನಂತಕುಮಾರ್ ಹಗ್ಡೆ ಬಳಿ ಬೂಟಿನಿಂದ ಹೊಡೆತ ತಿಂದು ಬಿಜೆಪಿ ಬಿಟ್ಟು ಹೊರಬಂದು, ನಂತರ ಕಾಂಗ್ರೆಸ್ ಸೇರಿದ್ದರು. ಈಗ ಮತ್ತೆ ಬಿಜೆಪಿಗೆ ಸೇರಿದ್ದಾರೆ, ಅವರಿಗೆ ನಾಚಿಗೆಯಾಗಬೇಕು. ಅವರ ಬಂಡವಾಳ ಹೊರಹಾಕಿದರೆ ಬೆಟ್ಟದಷ್ಟಿದೆ ಎಂದು ಕಿಡಿಕಾರಿದರು.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅವರನ್ನು ಬಿಜೆಪಿಯಿಂದ ಕಾಂಗ್ರೆಸ್‍ಗೆ ಕರೆತಂದ ದೇಶಪಾಂಡೆಗೆ ಹೆಬ್ಬಾರ್ ಚೂರಿ ಹಾಕಿದ್ದಾರೆ. ಹಾಗೆಯೇ ಮತ ನೀಡಿದವರಿಗೂ ಚೂರಿ ಹಾಕಿದ್ದಾರೆ ಇವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

    ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ, ಅನರ್ಹ ಶಾಸಕರಿಗೆ 20 ಕೋಟಿ ರೂ. ಕೊಡಲಾಗಿದೆ. ಲಂಚದ ಹಣ ತಂದು ಶಾಸಕರಿಗೆ ಕೊಟ್ಟು ಸಮ್ಮಿಶ್ರ ಸರ್ಕಾರ ಕೆಡವಿ ಹಾಕಿದ್ದರು. ಅಲ್ಲದೆ ಮಹಾರಾಷ್ಟ್ರದಲ್ಲಿ ಕಳ್ಳರ ರೀತಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ಕೊನೆ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

    ಅನಂತಕುಮಾರ್ ಹೆಗಡೆ ಗ್ರಾಮಪಂಚಾಯತ್ ಸದಸ್ಯನಾಗುಲು ಸಹ ನಾಲಾಯಕ್, ಸಂವಿಧಾನವೇ ಅವನಿಗೆ ಗೊತ್ತಿಲ್ಲ. ಅನಂತಕುಮಾರ್ ಏನು ಮಾತನಾಡುತ್ತಾರೆ ಎನ್ನುವುದು ಅವರಿಗೇ ಗೊತ್ತಿರುವುದಿಲ್ಲ. ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ. ನಾನು ಪ್ರಧಾನಿಯಾಗಿದ್ದರೆ ಅಂದು ಸಚಿವ ಸ್ಥಾನದಿಂದ ಅವರನ್ನು ಕಿತ್ತು ಹಾಕುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾನು ಬಿಜೆಪಿ ಸೇರುತ್ತೇನೆ ಎನ್ನುತ್ತಾರೆ. ನನ್ನ ಹೋರಾಟವೇ ಕೋಮುವಾದಿ, ಜಾತಿವಾದಿಗಳ ವಿರುದ್ಧ ಹೀಗಿರುವಾಗ ಬಿಜೆಪಿಗೆ ಸೇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಚುನಾವಣೆ ನಂತರ ಯಡಿಯೂರಪ್ಪ ಸರ್ಕಾರ ಹೋಗಲಿದ್ದು, ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಮಧ್ಯಂತರ ಚುನಾವಣೆ ಬರುತ್ತದೆ ನಾವೇ ಆಡಳಿತ ನಡೆಸುತ್ತೇವೆ, ಏಳು ಕೆ.ಜಿ. ಅಕ್ಕಿ ಬದಲು ಹತ್ತು ಕೆ.ಜಿ. ಅಕ್ಕಿಯನ್ನು ಬಡವರಿಗೆ ನೀಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ನಾಯಕರು ಮಾತಿನ ಚಾಟಿ ಬೀಸುತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ರನ್ನು ಗೆಲ್ಲಿಸಲು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಶತ ಪ್ರಯತ್ನ ನಡೆಸುತ್ತಿದ್ದಾರೆ.