ಕಾರವಾರ: ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ(Anantkumar Hegde) ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಶಿರಸಿಯ KHB ಕಾಲೋನಿಯಲ್ಲಿ ಇರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನೆಯಿದ್ದು, ಮನೆಯ ಮೇಲ್ಭಾಗದ ಜಿಮ್ ಮಾಡುವ ಕೊಠಡಿಯಲ್ಲಿ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿಯಾದ ಪರಿಣಾಮ ಚಿಮ್ ಮಾಡುವ ಯಂತ್ರಗಳಿಗೆ ಅಲ್ಪ ಹಾನಿಯಾಗಿದೆ. ಇದನ್ನು ಹೊರತುಪಡಿಸಿದರೇ ಹೊಗೆಯಿಂದ ಗೋಡೆಗಳಿಗೆ ಹಾನಿಯಾಗಿದ್ದು ಅಂದಾಜು 50 ಸಾವಿರದಷ್ಟು ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಚಾಮರಾಜನಗರ: ಸಂಸದ ಪ್ರತಾಪ್ ಸಿಂಹ (Pratap Simha) ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿ, ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆಂದು ಬಿಜೆಪಿಯವರು ಅಭ್ಯರ್ಥಿ ಬದಲಾವಣೆ ಮಾಡುತ್ತಿರಬಹುದು ನನಗೆ ಗೊತ್ತಿಲ್ಲ. ಯದುವೀರ್ ಆಗುವುದು,ಮಾಧ್ಯಮವರು ಸೃಷ್ಟಿ ಮಾಡಿಕೊಂಡು ಹೊಂದಾಣಿಕೆ ರಾಜಕೀಯ ಎಂದರೆ ಹೇಗೆ ಎಂದು ಕಿಡಿಕಾರಿದರು.
ತಾನು ಎಂಪಿಯಾದರೆ ಸಿಎಂ ಕುರ್ಚಿ ಅಲುಗಾಡಲಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ನೀಡಿ, ಎರಡು ಸಾರಿ ಎಂಪಿ ಆಗಿದ್ದಾರಲ್ಲ ನನ್ನ ಕುರ್ಚಿ ಅಲುಗಾಡಲೇ ಇಲ್ಲಾ, ಕ್ಯಾಂಡಿಡೇಟ್ ಯಾರದಾರೂ ಆಗಲಿ ನಾವು ಈ ಬಾರಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.
ಸಂಸದ ಅನಂತ ಕುಮಾರ್ ಹೆಗಡೆ (Anant Kumar Hegde) ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಅನಂತಕುಮಾರ್ ಹೆಗ್ಡೆ ಆರ್ಡಿನರಿ ವ್ಯಕ್ತಿ ಅಲ್ಲ, 5 ಸಲ ಸಂಸದರಾಗಿದ್ದವರು, ಸಚಿವರಾಗಿದ್ದವರು. ಸಂವಿಧಾನ ಬದಲಿನ ವಿಚಾರ ಹೇಳಬೇಕಾದರೆ ಪಕ್ಷದ ತೀರ್ಮಾನ ಆಗಿರದೇ ಹೇಳಲು ಆಗತ್ತಾ?, ಅವರ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡರಾ ಎಂದು ಪ್ರಶ್ನೆ ಮಾಡಿದರು.
ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದಾಗಿದ್ದು, ಮನುವಾದದಲ್ಲಿ ನಂಬಿಕೆ ಇಟ್ಟವರು, ಸಂವಿಧಾನ ಜಾರಿಯಾದ ದಿನದಿಂದಲೂ ಅವರು ಸಂವಿಧಾನ ವಿರೋಧ ಮಾಡಿಕೊಂಡೇ ಬಂದಿದ್ದಾರೆ, ಈಗ ಅನಂತ ಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ ಎಂದರು.
ಸಿಎಎ ಚುನಾವಣಾ ಸಂದರ್ಭದಲ್ಲಿ ಏಕೆ ಜಾರಿ ಮಾಡಬೇಕಿತ್ತು..? ಧರ್ಮದ ಆಧಾರದ ಮೇಲೆ ಪೌರತ್ವ ಕೊಡಲು ನಮ್ಮ ವಿರೋಧವಿದೆ ಎಂದು ಸಿಎಎ ಜಾರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ : ಪ್ರತಾಪ್ ಸಿಂಹ
ಇದೇ ವೇಳೆ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂಬ ಆರ್.ಆಶೋಕ್ (R Ashok) ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರಾದರೂ ಕದ್ದು ಮುಚ್ಚಿ ನೀರು ಬಿಡುತ್ತಾರಾ? ನೀರು ಇದ್ರೆ ಅಲ್ವಾ ಬಿಡೋದು..? ಅವರು ಹೇಳುವುದು ಸುಳ್ಳು, ತಮಿಳುನಾಡಿಗೆ ತೊಟ್ಟು ನೀರು ಕೊಡುವುದಿಲ್ಲ, ಕುಡಿಯಲು ನೀರು ಇಟ್ಟುಕೊಳ್ಳದೇ ನಾವು ಕೊಡುವುದಿಲ್ಲ, ಅವರು ನೀರು ಕೊಡಿ ಎಂದು ಕೇಳೂ ಇಲ್ಲಾ ಸುಮ್ನೆ ಯಾಕೆ ನೀರು ಕೊಡುತ್ತೇವೆ, ತಮಿಳುನಾಡಿಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ. ತಮಿಳುನಾಡು ಕೇಳಿದರೂ ನೀರು ಕೊಡಲ್ಲ, ಕೇಂದ್ರ ಹೇಳಿದರೂ ನೀರು ಕೊಡಲ್ಲ, ಯಾರೂ ಹೇಳಿದರೂ ನೀರು ಕೊಡಲ್ಲ ಎಂದರು.
ಕಾರವಾರ : ನಾನು ಸೋತಿದ್ದಕ್ಕೆ ನೋವಾಗಲಿಲ್ಲ, ಅನಂತಕುಮಾರ್ ಹೆಗಡೆ (Anant Kumar Hegde) ಪ್ರಚಾರಕ್ಕೆ ಬಾರದೇ ಇರುವುದಕ್ಕೆ ನೋವಾಗಿದೆ ಎಂದು ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ (Rupali Naik) ಅವರು ಸಂಸದರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.
ಇಂದು ಕಾರವಾರದ ಬಿಜೆಪಿ (BJP) ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ವೇಳೆ ಒಂದು ಬಾರಿ ಸಂಸದರು ಬಂದು ಹೋಗಿದ್ರೆ ಕಾರವಾರದಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಈ ಮಾತನ್ನ ನಾನು ಹೇಳುತ್ತಿಲ್ಲ ಇಡೀ ಕಾರವಾರದ ಜನ ಹೇಳುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಹಿಂದೆ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೆ ಎಂದರು.
ಅನಂತಕುಮಾರ್ ಹೆಗಡೆ ಸಕ್ರಿಯರಾಗಿದ್ದಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಆಕಾಂಕ್ಷಿ ಅಲ್ಲ. ನಾನು ಯಾವತ್ತೂ ಅನಂತ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ. ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಖುಷಿ ಆಗಿದೆ ಎಂದರು.
ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಲೋಕಸಭಾ ಚುನಾವಣೆ (Loksabha Election) ಹಿನ್ನೆಲೆಯಲ್ಲಿ ಬಿಜೆಪಿಯಿಂದ (BJP) ರಾಷ್ಟ್ರಾದ್ಯಂತ ‘ಗೋಡೆ ಬರಹ’ ಅಭಿಯಾನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ ಕೊಟ್ಟರು. ಬಳಿಕ ಸಂಸದರ ವಿವಾದಾತ್ಮಕ ಹೇಳಿಕೆಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲೇ ರಾಜಕಾರಣಿಗಳು ಅಂದ್ರೆ ಜನ ನಂಬಲ್ಲ, ಅಂಥ ಪರಿಸ್ಥಿತಿ ಇದೆ. ಯಾರೇ ಇದ್ದರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ಸಮಾಜ ಒಪ್ಪುವಂತೆ ಮಾತು ಇರಬೇಕು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ ಎಂದರು.
ನಾನು ಅವರ ಜೊತೆಗೂ ಇದರ ಬಗ್ಗೆ ಮಾತಾಡುತ್ತೇನೆ. ಅನಂತ್ ಕುಮಾರ್ (Anantkumar Hegde) ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ಹೇಳಿರೋದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು. ಇದರ ಬಗ್ಗೆ ಅವರ ಜೊತೆ ವೈಯಕ್ತಿಕವಾಗಿ ಮಾತಾಡುತ್ತೇನೆ. ನಾವು ಕೂಡಾ ಸೋಮಣ್ಣಗೆ ಸಂಪೂರ್ಣ ಬೆಂಬಲಿಸ್ತೇವೆ. ಅವರು ಹೈಕಮಾಂಡ್ ಎದುರು ಏನು ಅಪೇಕ್ಷೆ ಇಟ್ಟಿದ್ದಾರೋ ಅದರ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ
ಹಾವೇರಿ (Haveri) ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡ್ತಿಲ್ಲ. ಆದರೆ ಪದೇ ಪದೇ ರಾಜ್ಯದಲ್ಲಿ ಇಂಥ ಘಟನೆಗಳು ನಡೀತಿವೆ. ಘಟನೆ ನಡೆದು ವಾರವಾದರೂ ಪೊಲೀಸರು ಎಫ್‍ಐಆರ್ ಹಾಕಿರಲಿಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ಇದು ಗಂಭೀರ ಪ್ರಕರಣ, ಆದರೆ ಸರ್ಕಾರ ಇದನ್ನು ಹಗುರವಾಗಿ ತಗೊಂಡಿದೆ. ಪೊಲೀಸರು ಸರ್ಕಾರದ ತಾಳಕ್ಕೆ ಕುಣಿತಿರೋದು ದುರ್ದೈವ. ಹಾವೇರಿ ಗಂಭೀರ ಪ್ರಕರಣವನ್ನು ಕಾಂಗ್ರೆಸ್ ನವರು (Congress) ಉಡಾಫೆ ಮಾಡ್ತಿದ್ದಾರೆ. ಒಂದು ಹೆಣ್ಣಿನ ಬದುಕಿನ ಪ್ರಶ್ನೆ ಇದು. ಸಿಎಂ ಘಟನೆಯನ್ನು ಗಂಭೀರವಾಗಿ ನೋಡಲಿ ಎಂದರು.
ಬೆಂಗಳೂರು: ನಮ್ಮ ಎದೆ ಬಗೆದರೆ ಶ್ರೀರಾಮನೂ ಕಾಣ್ತಾನೆ, ಸಿದ್ದರಾಮಯ್ಯನೂ ಕಾಣ್ತಾರೆ, ಅಂಬೇಡ್ಕರ್ ಕೂಡ ಕಾಣ್ತಾರೆ, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಹಿಡಿತದಲ್ಲಿ ಇರಲಿ. ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಆಸ್ತಿ ಅಲ್ಲ. ನಮ್ಮ ಎದೆ ಬಗೆದರೆ ರಾಮನೂ ಇದ್ದಾನೆ, ಸಿದ್ದರಾಮಯ್ಯ, ದೇವರಾಜ್ ಅರಸ್ ಕೂಡ ಇದ್ದಾರೆ. ನಮ್ಮ ಎದೆಯಲ್ಲಿ ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳು ಕೂಡ ಇದ್ದಾರೆ. ನಿನ್ನ ರಕ್ತದಲ್ಲಿ ಮಾತ್ರ ಹಿಂದೂ ಇರೋದಾ, ನಿಮ್ಮ ಅಪ್ಪನ ಮನೆ ಆಸ್ತಿ ಥರಾ ಆಡೋದನ್ನ ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.
ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯಿಂದ ಲಾ ಆಂಡ್ ಆರ್ಡರ್ ಸಮಸ್ಯೆಯಾದ್ರೆ ಯಾರು ಹೊಣೆ..!?. ಪ್ರಚೋದನೆಯಿಂದ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೆಗ್ಡೆ ಬರ್ತಾರಾ?. ಹೀಗಾಗಿ ಸಂಸದರ ಮೇಲೆ ಎಫ್‍ಐಆರ್ ಹಾಕಿ, ಒಳಗೆ ಹಾಕಬೇಕು. ಇವರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
ಅನಂತ್ ಕುಮಾರ್ ಹೆಗ್ಡೆ ಮೈಂಡ್ ಯುವರ್ ಟಂಗ್ ಎಂದು ಗರಂ ಆದ ಶಾಸಕರು, ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಸ್ವತ್ತಾ?, ಹಿಂದೂ ಧರ್ಮನ ನಿಮ್ಮ ಅಪ್ಪನ ಮನೆ ಆಸ್ತಿ ತರಹ ಆಡ್ತಿದ್ದೀರಲ್ಲ?, ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಕೊಳ್ಳಿ ಹೆಗ್ಡೆಯವರೇ. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ. ಇವರ ಬಾಯಿ ಚಪಲದಿಂದ ಹಿಂದೆ ಮಂತ್ರಿಗಿರಿ ಕಳೆದುಕೊಂಡರು. ಬಾಯಿಗೆ ಬಂದಂತೆ ಮಾತಾಡುತ್ತಿದ್ದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ ಎಂದು ಪ್ರಶ್ನಿಸಿದರು.
ಮನ್ ಕಿ ಬಾತ್ ಜೊತೆಗೆ ಕಾಮ್ ಕಿ ಬಾತ್ ಮಾತಾಡೋಣ ಬನ್ನಿ. ನಾವೂ ಹಿಂದೂ ಧರ್ಮದವರೇ, ನಮಗೂ ಶ್ರೀರಾಮನ (Shri Rama) ಮೇಲೆ ನಂಬಿಕೆ ಇದೆ. ನೀವು ಒಂದು ಮಾತಾಡಿದರೆ ನಾವು ನಾಲ್ಕು ಮಾತಾಡ್ತೇವೆ. ಬನ್ನಿ ಈ ಫೈಟ್ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡೋಣ ಎಂದು ಕಿಡಿಕಾರಿದರು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ರಿಂದ ಸುರಿದ ಭಾರೀ ಮಳೆ ಜಿಲ್ಲೆಯ ಐದು ತಾಲೂಕುಗಳ ಜನರನ್ನು ತತ್ತರಿಸುವಂತೆ ಮಾಡಿದೆ. ಇಷ್ಟೆಲ್ಲ ಹಾನಿಯಾದರೂ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ವರೆಗೆ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ.
ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಪ್ರವಾಹದಿಂದ ಆದ ಅನಾಹುತಕ್ಕೆ ಸ್ಥಳ ಪರಿಶೀಲನೆ ನಡೆಸಿ, ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯವರೇ ಪ್ರಮಾಣವಚನ ಸ್ವೀಕರಿಸಿ 24 ಘಂಟೆಯೊಳಗಾಗಿ ಖುದ್ದು ಉತ್ತರ ಕನ್ನಡ ಜಿಲ್ಲೆಯ ಪ್ರವಾಹದಿಂದ ಹಾನಿಯಾದ ಕ್ಷೇತ್ರಕ್ಕೆ ಭೇಟಿ ನೀಡಿ ತಕ್ಷಣದಲ್ಲಿ ಪರಿಹಾರಕ್ಕೆ ಸೂಚನೆ ಸಹ ನೀಡಿದ್ದಾರೆ. ಆದರೆ ಪ್ರವಾಹದಿಂದ ತೊಂದರೆಗೊಳಗಾದ ಶಿರಸಿ-ಸಿದ್ದಾಪುರ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ವರೆಗೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ತೊಂದರೆಗೊಳಗಾದ ಪ್ರದೇಶಗಳನ್ನು ವೀಕ್ಷಿಸುವ ಕೆಲಸ ಸಹ ಮಾಡಿಲ್ಲ.
ಶಿರಸಿ-ಸಿದ್ದಾಪುರದಲ್ಲಿ ಹಾನಿಯಾಗಿದ್ದೆಷ್ಟು?
ಸಿದ್ದಾಪುರ ತಾಲೂಕಿನಲ್ಲಿ 5 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ. 11 ಮನೆಗಳು ಸಂಪೂರ್ಣ ಕುಸಿದು ನಷ್ಟವಾಗಿವೆ. 36 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 65 ರಸ್ತೆಗಳು ಹಾನಿಯಾಗಿವೆ. ಶಿರಸಿಯಲ್ಲಿ 2 ಗ್ರಾಮಗಳು ಮಳೆಯಿಂದ ತೊಂದರೆಗೊಳಗಾಗಿದ್ದು, 108 ಮನೆಗಳು ಕುಸಿತ ಕಂಡಿವೆ. 2 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 77.95 ಕಿ.ಮೀ.ರಸ್ತೆ ಹಾಳಾಗಿದೆ. 8 ಸೇತುವೆಗಳು, 14 ಶಾಲೆಗಳು ಮಳೆಯಿಂದ ಹಾನಿಯಾಗಿದೆ. ಹಿಂದಿನ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕಾಗೇರಿಯವರು ತಮ್ಮನ್ನು ಸತತ ಆರು ಬಾರಿ ಗೆಲ್ಲಿಸಿದ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ಬೆಂಗಳೂರಿನ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ.
ಸಂಸದರೂ ಮಾಯ
ಕಳೆದ ತಿಂಗಳು ಪ್ರವಾಹ ಪ್ರಾರಂಭಕ್ಕೂ ಮುನ್ನ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಂಸದ ಅನಂತಕುಮಾರ್ ಹೆಗಡೆ ಇದಾದ ನಂತರ ಚಿಕ್ಕಪುಟ್ಟ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನು ಹಲವು ತಿಂಗಳಿಂದ ಅನಾರೋಗ್ಯದ ಕಾರಣ ದೆಹಲಿ ಮತ್ತು ಶಿರಸಿಯ ತಮ್ಮ ನಿವಾಸದಲ್ಲಿ ರೆಸ್ಟ್ ಮಾಡಿದ್ದರು. ಆದರೆ ಇದೀಗ ಅವರು ಚೇತರಸಿಕೊಂಡಿದ್ದಾರೆ. ಹೀಗಿರುವಾಗ ತಮ್ಮ ಕ್ಷೇತ್ರದ ಜನರು ನೋವಿನಲ್ಲಿರುವಾಗ ಹೃದಯವಂತಿಕೆಯನ್ನು ಸಹ ಮರೆತಿರುವುದು ಇದೀಗ ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರವಾರ : ತನ್ನ ಹೇಳಿಕೆಗಳ ಮೂಲಕವೇ ಹೆಸರು ಮಾಡಿದ್ದ ಮಾಜಿ ಕೌಶಲ್ಯಾಭಿವೃದ್ಧಿ ಸಚಿವ, ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಸದ್ಯ ಕ್ಷೇತ್ರದ ಜನರಿಗೆ ಅಲಭ್ಯರಾಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಅನಂತ ಕುಮಾರ್ ಹೆಗಡೆಯವರು ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಗುಣಮುಖರಾಗುವವರೆಗೆ ಕೆಲವು ಕಾಲ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಫೆ.27 ರಂದು ಮಂಗಳೂರಿನಲ್ಲಿ ಮೊಣಕಾಲಿನ ಚಿಕಿತ್ಸೆಗೆ ಒಳಗಾಗಿರುವ ಸಂಸದ ಅನಂತ ಕುಮಾರ್ ಹೆಗಡೆ ಮಂಗಳೂರಿನಿಂದ ದೆಹಲಿಗೆ ತೆರಳಿದ್ದು ,ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೇಳಿಕೆಯಲ್ಲಿ ಏನಿದೆ?
ಅನಂತ ಕುಮಾರ್ ಹೆಗಡೆಯವರು ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಅದಾಗಿಯೂ ಕಳೆದ ಲೋಕಸಭಾ ಚುನಾವಣೆಯ ನಂತರದಿಂದ ಹೆಚ್ಚಿನ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತಿದ್ದರು.
ಇತ್ತೀಚೆಗೆ ಕೆಲವು ತಿಂಗಳಿಂದ ಬೆನ್ನು ನೋವು ಮತ್ತು ಕಾಲು ನೋವು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ತಜ್ಞರು ತಕ್ಷಣವೇ ಸೂಕ್ತ ಕಾಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.
ಇದೀಗ ಕೆಲವು ದಿನಗಳ ಹಿಂದೆ ನಡೆಸಿದ ಗಂಭೀರ ಶಸ್ತ್ರ ಚಿಕಿತ್ಸೆಯ ನಂತರ ಸಂಸದರು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗೂ ವೈದ್ಯರು ದೀರ್ಘಾವಧಿಯ ವಿಶ್ರಾಂತಿಯನ್ನು ಪಡೆಯುಲು ಸೂಚಿಸಿರುವ ಹಿನ್ನೆಲೆಯಲ್ಲಿ ಪೂರ್ಣವಾಗಿ ಗುಣಮುಖರಾಗುವವರೆಗೆ ಕೆಲವು ಕಾಲ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರದೇಶಗಳು ಅರಣ್ಯಮಯವಾದ್ದರಿಂದ ಸಮಸ್ಯೆಗಳು ಹೆಚ್ಚು. ಇದನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ತಮಗೆ ಸಂಬಂಧವಿಲ್ಲ ಎಂಬಂತೆ ಮೂಗು ಮುರಿಯುತ್ತಾರೆ. ಅದರೆ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸೇತುವೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ವಿಧಾನಸಭೆ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ್ ಹೆಗಡೆಯವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಸರಿಮನೆ ಗ್ರಾಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳಿವೆ. ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೆ ನಾಲ್ಕು ಕಿ.ಮೀ. ನಡೆದು ಹೋಗಬೇಕು. ಈ ಮಾರ್ಗದಲ್ಲಿ ಬಸರಿಮನೆ ಹೊಳೆ ಸಾಗುತ್ತದೆ. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುವುದರಿಂದ ಅಡಿಕೆ ಹಾಗೂ ಮರದ ಹಲಗೆಯಲ್ಲಿ ನಿರ್ಮಿಸಿದ ಕಾಲು ಸಂಕವೇ ಶಾಲೆಗೆ ಹೋಗುವ ಮಕ್ಕಳಿಗೆ ಜೀವರಕ್ಷಕ.
ಮಳೆಗಾಲದಲ್ಲಿ ಈ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಹೀಗಾಗಿ ಇಲ್ಲಿನ ಶಾಸಕರು, ಸದ್ಯ ರಾಜ್ಯದ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದರು.
2019ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ಬಿಡುಗಡೆಯಾದರೂ ಸೇತುವೆ ಮಾತ್ರ ನಿರ್ಮಾಣವಾಗಲಿಲ್ಲ. ಈ ಬಗ್ಗೆ ಸ್ಪೀಕರ್ ಕಾಗೇರಿಗೆ ಹಲವು ಬಾರಿ ಮನವಿ ನೀಡಿದ್ದರು. ಆದರೆ ಕೆಲಸ ಮಾತ್ರ ಪ್ರಾರಂಭ ಆಗಲೇ ಇಲ್ಲ. ಹೀಗಾಗಿ ಅಂದಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ್ ಆಳ್ವ ಅವರ ಗಮನಕ್ಕೆ ತಂದಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೆಲವು ಅಡೆತಡೆಗಳು ಬಂದಿದ್ದರಿಂದ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಹಾಗಂತ ಅವರು ಸುನ್ಮನೆ ಕೂರದೆ ತಮ್ಮ ಸ್ನೇಹಿತರಾಗಿದ್ದ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಗಮನಕ್ಕೆ ತಂದು ಸಹಾಯ ಬೇಡಿದ್ದರು. ಖುದ್ದು ಸ್ಥಳಕ್ಕೆ ಬಂದು ಸಮಸ್ಯೆ ಅರಿತ ಅವರು, ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹತ್ತು ಲಕ್ಷ ರೂ. ಹಣವನ್ನು ಮಂಜೂರು ಮಾಡಿ ಉ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ನಿವೇದಿತ್ ಆಳ್ವ ಸಹ ಈ ಬಗ್ಗೆ ಮುತುವರ್ಜಿ ವಹಿಸಿ ಸೇತುವೆ ನಿರ್ಮಾಣ ಆಗುವ ವರೆಗೆ ಪ್ರತಿ ಬಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತಿದ್ದರು. ಇದರ ಪ್ರತಿಫಲವಾಗಿ ಇಂದು ಸೇತುವೆ ನಿರ್ಮಾಣವಾಗಿದ್ದು, ಜನ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಭಯದಲ್ಲೇ ಸಾಗುತಿದ್ದ ಮಕ್ಕಳಿಗೆ ಈ ಬಾರಿಯಿಂದ ಮಳೆಗಾಲದ ಭಯ ದೂರವಾಗಿದೆ.
ನವದೆಹಲಿ: ಮೊದಲ ದಿನದ ಸಂಸತ್ ಅಧಿವೇಶನದ ವೇಳೆ 17 ಜನ ಸಂಸದರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.
ದೇಶದಲ್ಲಿ ಕೊರೊನಾ ಸಂಕಷ್ಟವಿದ್ದರೂ ಹಲವಾರು ಮನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಂಡು ಇಂದು ಸಂಸತ್ ಅಧಿವೇಶನವನ್ನು ಆರಂಭ ಮಾಡಲಾಗಿತ್ತು. ಆದರೆ ಇದರಲ್ಲಿ ಭಾಗವಹಿಸಿದ್ದ ಬಿಜೆಪಿಯ ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗ್ಡೆ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಅಧಿವೇಶನಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ ಮೋದಿಯವರು, ಈ ಬಾರಿ ವಿಭಿನ್ನ ಪರಿಸ್ಥಿತಿಯಲ್ಲಿ ಅಧಿವೇಶನ ಆರಂಭಗೊಳ್ಳಲಿದೆ. ಕೊರೊನಾ ಜೊತೆಗೆ ಕರ್ತವ್ಯ ನಿರ್ವಹಿಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಗಡಿಯಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗಾಗಿ ಎಲ್ಲ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ನಮ್ಮ ಸಂಸದರು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಬಜೆಟ್ ಅಧಿವೇಶನವನ್ನ ಸಮಯಕ್ಕಿಂಂತ ಮುಂಚಿತವಾಗಿ ನಿಲ್ಲಿಸಬೇಕಾಯ್ತು ಎಂದಿದ್ದರು.
ಮಾಹಾಮಾರಿ ಕೊರೊನಾಗೆ ಲಸಿಕೆ ಸಿಗೋವರೆಗೂ ನಿರ್ಲಕ್ಷ್ಯ ಬೇಡ. ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವಲ್ಲಿ ಆದಷ್ಟು ಬೇಗ ಸಫಲರಾಗಬೇಕಿದೆ. ವಿಶ್ವದ ಯಾವುದೇ ಮೂಲೆಯಿಂದ ಔಷಧಿ ಸಿದ್ಧವಾದ್ರೆ ಅದುವೇ ಸಂತೋಷದ ವಿಚಾರ. ಹಾಗೆ ಪತ್ರಕರ್ತರು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಕೊರೊನಾ ವೈರಸ್ ಹಿನ್ನೆಲೆ ಸದನಗಳಲ್ಲಿ ಹಲವು ನಿಯಮಗಳನ್ನ ರೂಪಿಸಲಾಗಿದ್ದು, ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದರು.
ಕೊರೊನಾ, ಆರ್ಥಿಕತೆ ಕುಸಿತ ಸೇರಿದಂತೆ ದೇಶದ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ಮುಂಗಾರು ಸಂಸತ್ ಅಧಿವೇಶನ ಆರಂಭಿಸುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಒತ್ತಾಯ ಮೇರೆಗೆ ಕೊರೊನಾ ಸಂಕಷ್ಟದ ನಡುವೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆಯ ನಡುವೆ ಇಂದಿನಿಂದ ಸಂಸತ್ ಕಲಾಪ ಆರಂಭವಾಗಿತ್ತು.
ಶಿವಮೊಗ್ಗ: ಬಿಎಸ್‍ಎನ್‍ಎಲ್ ನ್ನು ಖಾಸಗೀಕರಣಗೊಳಿಸಿ, ಬಿಎಸ್‍ಎನ್‍ಎಲ್‍ನ ಎಲ್ಲ ನೌಕರರನ್ನು ವಜಾಗೊಳಿಸಲಾಗುವುದು ಎಂಬ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ, ಅನಂತ್ ಕುಮಾರ್ ಹೆಗಡೆ ವಿರುದ್ಧ ಘೋಷಣೆ ಕೂಗಿದರು. ಬಿಎಸ್‍ಎನ್‍ಎಲ್ ಖಾಸಗೀಕರಣ ಮಾಡುವುದು ಹಾಗೂ ನೌಕರರನ್ನು ಕೆಲಸದಿಂದ ವಜಾ ಮಾಡುವ ಕುರಿತು ಹೇಳಿಕೆ ನೀಡಿದ್ದಾರೆ. ಅಲ್ಲದೆ ನೌಕರರನ್ನು ದೇಶದ್ರೋಹಿಗಳೆಂದು ಕರೆದಿದ್ದಾರೆ. ಹೀಗಾಗಿ ಅನಂತ ಕುಮಾರ್ ಹೆಗಡೆ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು. ಅಲ್ಲದೆ ಸಂಸದರು ನೌಕರರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ
85 ಸಾವಿರ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಬಗ್ಗೆ ಮತ್ತು ಸಂಸ್ಥೆಯನ್ನು ಖಾಸಗೀಕರಣ ಮಾಡುವ ಬಗ್ಗೆ ಹೇಳಿಕೆ ನೀಡುವ ಮೂಲಕ ಅನಂತ್ ಕುಮಾರ್ ಹೆಗಡೆ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಟೆಲಿಕಾಂ ಸೇವಾ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಸಂಸ್ಥೆಯ ಸಿಬ್ಬಂದಿಯನ್ನು ದೇಶದ್ರೋಹಿಗಳೆಂದು ಕರೆದಿರುವ ಸಂಸದ ಅನಂತ್ ಕುಮಾರ್ ಇಡೀ ದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಬಿಎಸ್‍ಎನ್‍ಎಲ್ ಉದ್ಯೋಗಿಗಳ ಕ್ಷಮೆ ಕೋರಬೇಕು. ಜೊತೆಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಯೋಚನೆ ಕೈ ಬಿಟ್ಟು, ಸಂಸ್ಥೆ ಮತ್ತು ನೌಕರರನ್ನು ಉಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪದೇ ಪದೇ ಇಂತಹ ಹೇಳಿಕೆ ನೀಡುವ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಸರ್ಕಾರ ಸಂಸದ ಸ್ಥಾನದಿಂದಲೇ ವಜಾಗೊಳಿಸಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.