Tag: Anant Kumar

  • ಬೆಂಗಳೂರಿಗೆ ವಾಜಪೇಯಿ, ಅನಂತ್ ಕುಮಾರ್ ಕೊಡುಗೆ ಅಪಾರ: ಆರ್. ಅಶೋಕ್

    ಬೆಂಗಳೂರಿಗೆ ವಾಜಪೇಯಿ, ಅನಂತ್ ಕುಮಾರ್ ಕೊಡುಗೆ ಅಪಾರ: ಆರ್. ಅಶೋಕ್

    ಬೆಂಗಳೂರು: HSR ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಅಂತರರಾಷ್ಟ್ರೀಯ ದರ್ಜೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಉದ್ಘಾಟನೆ ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು.

    ಇದೇ ವೇಳೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸುಮಾರು 6 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಬೆಂಗಳೂರಿನ ಎಲ್ಲ ರಸ್ತೆಗಳನ್ನು ನೂತನವಾಗಿ ನಿರ್ಮಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸರ್ಕಾರ 206 ಕೋಟಿ ಅನುದಾನವನ್ನು ಈಗಾಗಲೇ ನೀಡಲಾಗಿದೆ. ಬೆಂಗಳೂರಿನಲ್ಲಿ ಪಾರ್ಕ್‍ಗಳು, ಕ್ರೀಡಾಂಗಣ ಇವುಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಕ್ರೀಡಾಂಗಣಕ್ಕೆ ಅಜಾತಶತ್ರು ವಾಜಪೇಯಿ ಅವರ ಹೆಸರನ್ನು ಇಟ್ಟಿದ್ದು ಸಾರ್ಥಕ. ಯಾಕೆಂದರೆ ಬೆಂಗಳೂರಿಗೆ ಮೆಟ್ರೊ, ಅಂತರರಾಷ್ಟ್ರೀಯ ಏರ್‌ಪೋರ್ಟ್‌, ಕಾವೇರಿ 4 ಹಂತದ ಕುಡಿಯುವ ನೀರಿನ ಯೋಜನೆ ವಾಜಪೇಯಿ ಮತ್ತು ಅನಂತ್ ಕುಮಾರ್ ಅವರ ಕೊಡುಗೆ ಎಂದರು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    R. Ashok

    ಅಧಿಕಾರ ಇದ್ದಾಗ ಏನು ಮಾಡದೇ ಅಧಿಕಾರ ಕೊಡಿ ಮಾಡುತ್ತೇವೆ ಎಂದರೆ ಯಾರು ನಂಬಲ್ಲ. ಅಧಿಕಾರ ಇದ್ದಾಗ ವಿಶ್ರಾಂತಿ ಪಡೆದು, ಅಧಿಕಾರಕ್ಕಾಗಿ ಹೋರಾಟ ಮಾಡಿದರೆ ರಾಜ್ಯದ ಜನ ನಂಬುವುದಿಲ್ಲ. ನಾವು ಪಾದಯಾತ್ರೆ ಮಾಡದೇ ಅಭಿವೃದ್ಧಿ ಮಾಡುತ್ತೇವೆ. ಕೆಲಸಕ್ಕಾಗಿ ಪಾದಯಾತ್ರೆ ಮಾಡಬೇಕು. ರಾಜಕೀಕ್ಕಾಗಿ ಅಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ಲೇವಡಿ ಮಾಡಿದರು.

    R. Ashok

    ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ, ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ ಹಾಗೂ ಇತರರು ಉಪಸ್ಥಿತರಿದ್ದರು.  ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

  • ಮಾದರಿ ರಾಜ್ಯ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ – ಅನಂತ್ ಕುಮಾರ್‌ರನ್ನು ಸ್ಮರಿಸಿದ ಬಿಎಸ್‍ವೈ

    ಮಾದರಿ ರಾಜ್ಯ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ – ಅನಂತ್ ಕುಮಾರ್‌ರನ್ನು ಸ್ಮರಿಸಿದ ಬಿಎಸ್‍ವೈ

    ಬೆಂಗಳೂರು: ಎಲ್ಲರ ಸಹಕಾರದಿಂದ ಕರ್ನಾಟಕ ಮಾದರಿ ರಾಜ್ಯ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

    ತನ್ನ 78ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಷ್ಟು ವರ್ಷವಾದರೂ ರೈತ ಸಂಕಷ್ಟದಲ್ಲಿರುವುದು ನಮಗೆ ಗೌರವ ತರುವುದಿಲ್ಲ. ನೀರಾವರಿ ಪರಿಸ್ಥಿತಿ, ರೈತರ ಪರಿಸ್ಥಿತಿ ಸುಧಾರಿಸಬೇಕು. ಇದಕ್ಕೆ ಸಿದ್ದರಾಮಯ್ಯ ಅವರ ಸಹಕಾರ ಅಗತ್ಯ ಎಂದು ಹೇಳಿದರು.

    ನನ್ನ 60ನೇ ಜನ್ಮದಿನ ಸ್ಮರಣೀಯವಾಗಿತ್ತು. 60ನೇ ಜನ್ಮದಿನದಂದು ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದ್ದರು. ನನಗೂ ನನ್ನ ಶ್ರೀಮತಿಯವರಿಗೂ ವಾಜಪೇಯಿ ಸನ್ಮಾನ ಮಾಡಿದ್ದರು. ಆ ಕಾರ್ಯಕ್ರಮ ಬಳಿಕ ಇವತ್ತಿನ ಕಾರ್ಯಕ್ರಮ ಸ್ಮರಣೀಯವಾಗಿದ್ದು ರಾಜನಾಥ್ ಸಿಂಗ್ ಅವರು ಬಂದಿದ್ದು ಬಹಳ ಸಂತೋಷ ತಂದಿದೆ ಎಂದರು.

    ಈ ಸಂದರ್ಭದಲ್ಲಿ ಅನಂತ್ ಕುಮಾರ್ ಇರಬೇಕಿತ್ತು. ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅನಂತ್ ಕುಮಾರ್ ಶ್ರಮವೂ ಕಾರಣ ಎಂದು ಬಿಎಸ್‍ವೈ ಸ್ಮರಿಸಿಕೊಂಡರು.

    ಸಿದ್ದರಾಮಯ್ಯ ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷವಾಗಿದ್ದು ಸಿದ್ದರಾಮಯ್ಯ ಆತ್ಮೀಯತೆ ತೋರಿದ್ದಕ್ಕೆ ಅವರಿಗೆ ಋಣಿ ಆಗಿದ್ದೇನೆ. ಸಿದ್ದರಾಮಯ್ಯ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಉತ್ತರ ಕರ್ನಾಟಕದ ಕಣ್ಣೀರು ಕರ್ನಾಟಕದ ಸಂಸದರಿಗೆ ಯಾಕೆ ಕಾಣುತ್ತಿಲ್ಲ: ಸೂಲಿಬೆಲೆ ಪ್ರಶ್ನೆ

    ಉತ್ತರ ಕರ್ನಾಟಕದ ಕಣ್ಣೀರು ಕರ್ನಾಟಕದ ಸಂಸದರಿಗೆ ಯಾಕೆ ಕಾಣುತ್ತಿಲ್ಲ: ಸೂಲಿಬೆಲೆ ಪ್ರಶ್ನೆ

    – ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರು ಇಲ್ಲ
    – ನಮ್ಮ ಸಂಸದರು ತಮಿಳುನಾಡಿನಿಂದ, ಕೇರಳದಿಂದ ಕಲಿಯುವುದು ಸಾಕಷ್ಟಿದೆ
    – ಮೋದಿಯವರೇ ಯಾಕೆ ಈ ದಿವ್ಯ ನಿರ್ಲಕ್ಷ್ಯ?

    ಬೆಂಗಳೂರು: ಉತ್ತರ ಕರ್ನಾಟಕದ ಕಣ್ಣೀರು ಕರ್ನಾಟಕದ ಸಂಸದರಿಗೆ ಯಾಕೆ ಕಾಣುತ್ತಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.

    ಈ ಸಂಬಂಧ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿರುವ ಅವರು, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಬೇಸರ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ. ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ ಅವರದ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾರ್ಯ ಅವಧಿ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ ಎಂದಿದ್ದಾರೆ.

    ಅನಂತ್‍ಕುಮಾರ್ ಇದ್ದಾಗ ಕೇಂದ್ರದ ಇತರೆ ಮಂತ್ರಿಗಳೊಂದಿಗೆ ಅವರು ಬೆಳೆಸಿಕೊಂಡಿದ್ದ ಸಂಬಂಧ ಅವರ ಮಾತಿಗೆ ಗೌರವ ತಂದುಕೊಡುವಂತಿತ್ತು. ಅವರಷ್ಟೇ ಬಾರಿ ಸಂಸದರಾಗಿದ್ದರೂ ಅಂಥದ್ದೊಂದು ಬಾಂಧವ್ಯವನ್ನೇ ಬೆಳೆಸಿಕೊಳ್ಳದ ಅನೇಕರನ್ನು ಕಂಡಾಗ ಸಂಕಟವೆನಿಸುತ್ತದೆ. ಕರ್ನಾಟಕದಿಂದಲೇ ಮಂತ್ರಿಗಳಾದವರು ಎಷ್ಟೋ ಜನರಿದ್ದಾರೆ. ಆದರೆ ಪ್ರತ್ಯಕ್ಷ ಕೇಂದ್ರದಲ್ಲಿ ಪ್ರಭಾವ ಬೀರುವ ವಿಚಾರ ಬಂದಾಗ ಕೆಲಸಕ್ಕೆ ಬಾರದವರಾಗಿ ಬಿಡುತ್ತಾರಲ್ಲಾ ಎಂಬುದೇ ನೋವಿನ ಸಂಗತಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಮ್ಮ ಸಂಸದರು ತಮಿಳುನಾಡಿನಿಂದ, ಕೇರಳದ ಸಂಸದರಿಂದ ಕಲಿಯುವುದು ಸಾಕಷ್ಟಿದೆ. ಅವರು ಹಠಕ್ಕೆ ಬಿದ್ದಾದರೂ ಕೊನೆಗೆ ರಾಜಿನಾಮೆ ಕೊಟ್ಟಾದರೂ ತಮ್ಮ ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಕೇಂದ್ರದ ಸಹಕಾರವನ್ನು ತರುತ್ತಾರೆ. ನಾಡಿನ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಬಲಿಕೊಡಲು ಅವರೆಂದಿಗೂ ಸಿದ್ಧರಾಗುವುದಿಲ್ಲ. ಮೋದಿಯವರ ಪ್ರತಿಯೊಂದು ನಡೆಯಲ್ಲಿಯೂ ಭವಿಷ್ಯದ ದೃಷ್ಟಿಕೋನ ಇದ್ದೇ ಇರುತ್ತದೆ ಎಂಬುದನ್ನು ನಂಬಿಕೊಂಡಿರುವ ಅನೇಕರಿಗೆ ಈ ನಿರ್ಲಕ್ಷ್ಯದ ಹಿಂದಿನ ದೃಷ್ಟಿ ಖಂಡಿತ ಅರಿವಾಗುತ್ತಿಲ್ಲ. ಗೊತ್ತಿದ್ದವರು ತಿಳಿಸಿಕೊಡಬೇಕು. ಒಂದೋ ಕರ್ನಾಟಕದ ಜನತೆಗೆ, ಇಲ್ಲವೇ ಸ್ವತಃ ಮೋದಿಗೆ ಎಂದು ನೇರವಾಗಿ ಬರೆದು ಚಾಟಿ ಬೀಸಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ನರೇಂದ್ರ ಮೋದಿ ಅವರ ಪರವಾಗಿ ರಾಜ್ಯವಾಪಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಹತ್ತಿರ ಬಂದಾಗ ಸಮಸ್ಯೆ ಇದೆ ಎಂದು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುವುದಲ್ಲ. ಮತವನ್ನು ಚಲಾಯಿಸಿ ಮೌನವಾಗಿ ಕುಳಿತುಕೊಳ್ಳುವುದಲ್ಲ. ಆರಂಭದಿಂದಲೇ ಸಮಸ್ಯೆಯ ಬಗ್ಗೆ ಒತ್ತಡ ಹೇರಿ ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದರು.