Tag: anandsingh

  • ಹೆತ್ತತಾಯಿಯನ್ನೇ ನಂಬಲಾಗದ ಸ್ಥಿತಿಗೆ ಕಾಂಗ್ರೆಸ್ಸಿಗರು ಬಂದಿದ್ದಾರೆ: ಸಿ.ಟಿ ರವಿ

    ಹೆತ್ತತಾಯಿಯನ್ನೇ ನಂಬಲಾಗದ ಸ್ಥಿತಿಗೆ ಕಾಂಗ್ರೆಸ್ಸಿಗರು ಬಂದಿದ್ದಾರೆ: ಸಿ.ಟಿ ರವಿ

    ಮೈಸೂರು: ಹೆತ್ತ ತಾಯಿಯನ್ನೇ ನಂಬಲಾಗದ ಸ್ಥಿತಿಗೆ ಅವರುಗಳು ಬಂದಿದ್ದಾರೆ ಎಂದು ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

    ಪುಲ್ವಾಮಾ ದಾಳಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಹೆತ್ತ ತಾಯಿಯನ್ನು ನಂಬಲಾಗದ ಸ್ಥಿತಿಗೆ ಅವರುಗಳು ಬಂದಿದ್ದಾರೆ. ಟೆರರಿಸ್ಟ್ ಗಳ ಮಟ್ಟ ಹಾಕಿದ್ರೆ ಅದನ್ನು ನಂಬುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಅಂದ್ರೆ ಸೈನಿಕರನ್ನ ನಂಬಲ್ಲ. ಎಲೆಕ್ಷನ್ ಅಂದ್ರೆ ಇವಿಎಂ ನಂಬಲ್ಲ. ಅವರು ಯಾವ ದೇಶದ ನಾಯಕರು ಎಂಬುದೇ ಗೊತ್ತಿಲ್ಲ. ನಮ್ಮ ಸೈನಿಕರ ದಾಳಿಗಳನ್ನೇ ಅನುಮಾನದಲ್ಲಿ ನೋಡಿದ್ದಾರೆ. ಇಂಥವರ ಬಗ್ಗೆ ಏನು ಹೇಳೋದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಟಿಪ್ಪು ಬಗ್ಗೆ ಮೈಸೂರು ರಂಗಾಯಣ ನಿರ್ದೇಶಕರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಟಿಪ್ಪು ಬಗ್ಗೆ ನಾನು ಕೂಡ ಮಾತನಾಡಿದ್ದೀನಿ. ತಾಕತ್ತಿದ್ದರೆ ನನ್ನನ್ನೂ ವಜಾ ಮಾಡಿ ಎಂದು ಕೇಳಲಿ ಅಂತ ಪ್ರಗತಿಪರ ಚಿಂತಕರಿಗೆ ಸಿ.ಟಿ ರವಿ ತಿರುಗೇಟು ನೀಡಿದರು.

    ಟಿಪ್ಪು ಮತಾಂಧ, ಕೊಡವರ ಮೇಲೆ ದೌರ್ಜನ್ಯ ಮಾಡಿರುವುದು ಸತ್ಯ. ಮಲಬಾರಿಗಳ ಮೇಲೆ ಟಿಪ್ಪು ಹಾಗೂ ಆತನ ಸೈನಿಕರು ಅತ್ಯಾಚಾರ ಮಾಡಿರುವುದು ಸತ್ಯ. ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ಮಾಡಿ ನೆತ್ತರು ಹರಿಸಿದ್ದ ಎಷ್ಟು ಸತ್ಯವ್ಯೋ, ಬ್ರಿಟೀಷರ ವಿರುದ್ಧ ಕೂಡ ಹೋರಾಟ ಮಾಡಿದ್ದು ಅಷ್ಟೇ ಸತ್ಯ. ನಾವೂ ಎರಡೂ ಸತ್ಯಗಳನ್ನು ಹೇಳಬೇಕು ಒಂದನ್ನು ಮಾತ್ರ ಹೇಳಿ ಇನ್ನೊಂದನ್ನು ಮರೆಮಾಚುವುದು ತಪ್ಪು ಎಂದು ಹೇಳಿದರು.

    ಕಾರು ಅಪಘಾತ ಪ್ರಕರಣದಲ್ಲಿ ಸಚಿವ ಆರ್. ಅಶೋಕ್ ಮಗ ಭಾಗಿ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ಅಪಘಾತ ಸುದ್ದಿ ಮಾಡುತ್ತಿರುವುದು ಮಾಧ್ಯಮದವರು. ನನ್ನ ವಿರುದ್ಧವೂ ಪಟ್ಟ ಕಟ್ಟಿದ್ರಿ. ಕುಡಿದು ಗಾಡಿ ಓಡಿಸಿದ್ರು ಅಂತ ಹೇಳಿದ್ರಿ. ನನ್ನ ಪ್ರಕರಣದಲ್ಲೇ ಹೀಗೆ ಮಾಡಿರಬೇಕಾದ್ರೆ ನಾನು ಯಾರನ್ನು ನಂಬಲಿ ಎಂದು ಮಾಧಮ್ಯಗಳ ವಿರುದ್ಧ ಹರಿಹಾಯ್ದರು.

    ಸಚಿವ ಆನಂದ್ ಸಿಂಗ್ ಅರಣ್ಯ ಖಾತೆ ನೀಡಿದಕ್ಕೆ ಟೀಕೆ ವಿಚಾರವಾಗಿಯೂ ಮಾತನಾಡಿದ ಸಚಿವರು, ಆನಂದ್ ಸಿಂಗ್ ಕಾಂಗ್ರೆಸ್ಸಿನಲ್ಲಿದ್ದಾಗ ಶುದ್ಧರಾಗಿದ್ದರು. ಈಗ ಕಾಂಗ್ರೆಸ್ ಬಿಟ್ಟ ಮೇಲೆ ಆಪಾದನೆ ಮಾಡ್ತಿದ್ದಾರೆ. ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು, ಈಗ ಗೆದ್ದ ಮೇಲೆ ಆಪಾದನೆ ಮಾಡೊದು ಎಷ್ಟು ಸರಿ ಎಂದು ಕಾಂಗ್ರೆಸ್ಸಿಗರನ್ನ ಪ್ರಶ್ನಿಸಿದರು.

  • ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದ್ದು ಕಳ್ಳನ ಕೈಗೆ ಕೀ ಕೊಟ್ಟಂತಾಗಿದೆ: ಹೆಚ್.ಎಂ ರೇವಣ್ಣ

    ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದ್ದು ಕಳ್ಳನ ಕೈಗೆ ಕೀ ಕೊಟ್ಟಂತಾಗಿದೆ: ಹೆಚ್.ಎಂ ರೇವಣ್ಣ

    ರಾಯಚೂರು: ಸಚಿವ ಆನಂದ್ ಸಿಂಗ್‍ಗೆ ಅರಣ್ಯ ಇಲಾಖೆ ಖಾತೆ ನೀಡಿದ್ದು ಕಳ್ಳನ ಕೈಗೆ ಕೀಲಿ ಕೈ ಕೊಟ್ಟಂತೆ ಆಗಿದೆ ಅಂತ ಮಾಜಿ ಸಚಿವ ಹೆಚ್.ಎಂ ರೇವಣ್ಣ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ಗಣಿ ವ್ಯವಾಹಾರದಲ್ಲಿ ಸ್ವಲ್ಪ ಅರಣ್ಯ ಅಸ್ತವ್ಯಸ್ತವಾಗುವುದು ಸರಿ ಅಂತ ಹೇಳೋ ಸಚಿವನಿಂದ ಏನನ್ನು ನಿರೀಕ್ಷೆ ಮಾಡಬಹುದು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದ್ದು ನೋಡಿದರೆ ಇಂಥ ಪರಿಸ್ಥಿತಿ ಯಾರಿಗೂ ಬರೋದು ಬೇಡ. ವಿಶ್ವನಾಥ್ ಸ್ಥಿತಿಯಂತೂ ಕೇಳೋದೇ ಬೇಡ ಎಂದಿದ್ದಾರೆ.

    ಸಿದ್ದರಾಮಯ್ಯನವರೇ ಪಕ್ಷದ ಅಧ್ಯಕ್ಷರಾಗಬೇಕಾ..? ಬೇಡವಾ..? ಅನ್ನೋದು ಇನ್ನೊಂದು ವಾರದಲ್ಲಿ ನಿರ್ಧಾರವಾಗಲಿದೆ. ನಾಯಕ ಸಮಾಜ ಹಾಗು ಕುರುಬ ಸಮಾಜದಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗುವ ಪರಿಪಾಠ ನಡೆಯುತ್ತಿದೆ. ಎರಡು ಸಮಾಜದ ಗುರುಗಳ ಹಾಗೂ ಮುಖಂಡರ ಸಭೆ ನಡೆಸಿ ಈ ವೈಷಮ್ಯ ಬಗೆಹರಿಸಲಾಗುವುದು ಅಂತ ಹೇಳಿದರು.

    ಮಾಜಿ ಪ್ರಧಾನಿ ಸಮಯಕ್ಕೆ ಸರಿಯಾಗಿ ಬಣ್ಣ ಬದಲಾಯಿಸಿಕೊಳ್ಳುವಲ್ಲಿ ನಿಸ್ಸೀಮರು ಅಂತ ಕಿಡಿಕಾರಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್ ಕುಮಾರ್ ಸ್ಪರ್ಧೆ ಹಿನ್ನೆಲೆ ದಳದವರು ಚರ್ಚಿಸಿ ಈಗ ಅಭ್ಯರ್ಥಿ ನಿಲ್ಲಿಸಿದ್ದಾರೆ. ನಮ್ಮಲ್ಲಿ ಚರ್ಚೆ ಆಗಿಲ್ಲ. ಎರಡೂ ಪಕ್ಷದವರು ಸೇರಿ ಅಭ್ಯರ್ಥಿ ನಿಲ್ಲಿಸಿಲ್ಲ ಅಂತ ರೇವಣ್ಣ ಹೇಳಿದರು.

    ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿದೆ. ಯಡಿಯೂರಪ್ಪ ಪೆನ್‍ನಲ್ಲಿ ಇಂಕೇ ಇಲ್ಲ ಅನಿಸುತ್ತೆ ಅವರು ಏನು ಬರೆಯುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ನೀಡುತ್ತಿಲ್ಲ ಹೆಚ್.ಎಂ ರೇವಣ್ಣ ಬೇಸರ ವ್ಯಕ್ತಪಡಿಸಿದರು.

  • ನಾವು ಹಗಲುಗನಸು ಕಾಣೋರಲ್ಲ, ಕನಸು ನನಸು ಮಾಡೋ ಜನ- ಸಿ.ಟಿ ರವಿ

    ನಾವು ಹಗಲುಗನಸು ಕಾಣೋರಲ್ಲ, ಕನಸು ನನಸು ಮಾಡೋ ಜನ- ಸಿ.ಟಿ ರವಿ

    ಚಿಕ್ಕಮಗಳೂರು: ನಾವು ಹಗಲು ಕನಸು ಕಾಣೋ ಜನ ಅಲ್ಲ. ನಾವು ಕನಸು ನನಸು ಮಾಡುವ ಜನ. ಸಿಎಂ ಅವರು ಸಾಂದರ್ಭಿಕ ಶಿಶು. ಹಾಗಾಗಿ ಅವರಿಗೆ ಕನಸು ಬೀಳುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಶಾಸಕ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಮ್ಮಿಶ್ರ ಸರ್ಕಾರ ಬೀಳಿಸುವ ಹಗಲುಗನಸು ಕಾಣುತ್ತಿದೆ ಎಂಬ ಮುಖ್ಯಮಂತ್ರಿಗಳ ಟ್ವೀಟ್ ಗೆ ತಿರುಗೇಟು ನೀಡಿದರು. ನಾವು ಸರ್ಕಾರ ಬೀಳಿಸುವ ನಿಟ್ಟಿನಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಬೀಳಿಸುವುದು ನಮ್ಮ ಕೆಲಸ ಅಲ್ಲ. ಸರ್ಕಾರ ಉಳಿಸಿಕೊಳ್ಳುವುದು ಅವರ ಕೆಲಸವಾಗಿದೆ. ಸರ್ಕಾರ ಯಾವಾಗ ಬೀಳುತ್ತದೆ ಎಂದು ನಾವು ಕಾಯುತ್ತಾ ಇದ್ದೇವೆ ಅಷ್ಟೇ ಎಂದು ಹೇಳಿದರು.

    ಇದೇ ವೇಳೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿದ್ದನ್ನ ಆನಂದ್‍ಸಿಂಗ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರಬಹುದು. ಅಥವಾ ರಾಜಕೀಯ ಕಾರಣವೂ ಇರಬಹುದು ನನಗೆ ಮಾಹಿತಿ ಇಲ್ಲ ಎಂದರು.

    ಈಗ ಕಾಂಗ್ರೆಸ್ ಹತಾಷೆಯಲ್ಲಿದೆ. ಕಾಂಗ್ರೆಸ್ ನಲ್ಲಿ ಭವಿಷ್ಯ ಇಲ್ಲ ಅನಿಸಿದ್ರೆ ಅದು ಅವರ ತೀರ್ಮಾನವಾಗುತ್ತದೆ. ರಾಷ್ಟ್ರೀಯ ನಾಯಕರೇ ಯಾವುದೇ ಭವಿಷ್ಯ ಇಲ್ಲದೇ ಹತಾಷೆಯಲ್ಲಿದ್ದಾರೆ. ಹಾಗಾಗಿ ಬೇರೆ ನಾಯಕರಿಗೂ ಇಲ್ಲಿದ್ದರೆ ಉದ್ಧಾರ ಆಗಲ್ಲ ಎಂದು ಅನಿಸಿರಬಹುದು. ಹಾಗಾಗಿ ರಾಜೀನಾಮೆ ನೀಡುತ್ತಿರಬಹುದು ಎಂದು ಅವರು ತಿಳಿಸಿದರು.

    ಸಿಎಂ ಟ್ವೀಟ್ ನಲ್ಲೇನಿತ್ತು?
    ಅಮೇರಿಕದ ನ್ಯೂಜೆರ್ಸಿಯಲ್ಲಿರುವ ಸಿಎಂ ಅವರು ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಟ್ವೀಟ್ ಮಾಡಿ, ಅಮೇರಿಕದ ನ್ಯೂಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ವಿದ್ಯಮಾನವನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

  • ಆನಂದ್‍ಸಿಂಗ್ ನನಗೆ ಅಣ್ಣನ ಸಮಾನ: ಕಂಪ್ಲಿ ಗಣೇಶ್

    ಆನಂದ್‍ಸಿಂಗ್ ನನಗೆ ಅಣ್ಣನ ಸಮಾನ: ಕಂಪ್ಲಿ ಗಣೇಶ್

    ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್‍ಸಿಂಗ್ ನನಗೆ ಅಣ್ಣನ ಸಮಾನ. ನಾನು ಮತ್ತು ನನ್ನ ತಂದೆ ಆನಂದ್‍ಸಿಂಗ್  ಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಉದ್ದೇಶಪೂರ್ವಕವಾಗಿ ನಾವಿಬ್ಬರೂ ಗಲಾಟೆ ಮಾಡಿಕೊಂಡಿಲ್ಲ ಎಂದು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹೇಳಿದ್ದಾರೆ.

    ಆನಂದ್‍ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹೊಸಪೇಟೆ ಮನೆಗೆ ಗಣೇಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಆದ ಗಲಾಟೆ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚಿಗೆ ಎನೂ ಮಾತನಾಡುವುದಿಲ್ಲ. ಆನಂದಸಿಂಗ್ ನನಗೆ ಅಣ್ಣನ ಸಮಾನ. ನಮ್ಮಿಬ್ಬರ ಮಧ್ಯೆ ಗಲಾಟೆಯಾಗಿದ್ದು ಉದ್ದೇಶಪೂರ್ವಕವಾಗಿ ಅಲ್ಲವೆಂದು ತಿಳಿಸಿದರು. ಹಾಗೆಯೇ ಈ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ, ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಆದೇಶ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅಭಿಮಾನದಿಂದ ಅವರು ನಾನು ಸಚಿವನಾಗುತ್ತೇನೆ ಎಂದು ಹೇಳಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ, ಆದ್ರೆ ಕಾಂಗ್ರೆಸ್‍ಗೆ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡಲು ಬಿಡುವುದಿಲ್ಲ, ನಾವೆಲ್ಲಾ ಅವರ ಮನವೊಲಿಸುತ್ತೇವೆ ಎಂದು ತಿಳಿಸಿದರು.

  • ಗನ್ ಮ್ಯಾನ್, ಚಾಲಕನನ್ನು ಬಿಟ್ಟು ಪತ್ನಿ ಜೊತೆ ಕಾರಿನಲ್ಲಿ ಆನಂದ್ ಸಿಂಗ್ ಹೋಗಿದ್ದು ಎಲ್ಲಿಗೆ?

    ಗನ್ ಮ್ಯಾನ್, ಚಾಲಕನನ್ನು ಬಿಟ್ಟು ಪತ್ನಿ ಜೊತೆ ಕಾರಿನಲ್ಲಿ ಆನಂದ್ ಸಿಂಗ್ ಹೋಗಿದ್ದು ಎಲ್ಲಿಗೆ?

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡುತ್ತಿದ್ದು, ಈ ಮಧ್ಯೆ ಇತ್ತೀಚೆಗಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಳ್ಳಾರಿ ಶಾಸಕ ಆನಂದ್ ಸಿಂಗ್ ನಡೆ ಭಾರೀ ಕುತೂಹಲ ಕೆರಳಿಸಿದೆ.

    ರೆಸಾರ್ಟ್ ರಾಜಕಾರಣಕ್ಕೆಂದು ಬುಧವಾರ ಬಳ್ಳಾರಿಯಿಂದ ಹೊರಟವರು ಇದೂವರೆಗೂ ಬೆಂಗಳೂರು ತಲುಪಿಲ್ಲ. ಇಷ್ಟು ಮಾತ್ರವಲ್ಲದೇ ಚಾಲಕ, ಗನ್ ಮ್ಯಾನ್ ಗಳನ್ನು ಬಿಟ್ಟು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಬಳ್ಳಾರಿಯಿಂದ ಹೊರಟಿದ್ದವರು ಇನ್ನೂ ಬೆಂಗಳೂರು ತಲುಪಿಲ್ಲದ್ದು ಅಚ್ಚರಿ ಮೂಡಿಸುತ್ತಿದೆ.

    ಕಾಂಗ್ರೆಸ್ ಮುಖಂಡರಿಗೆ ಖುದ್ದು ಕರೆ ಮಾಡಿ ಬೆಂಗಳೂರಿಗೆ ಬರ್ತಿದ್ದೀನಿ ಡೋಂಟ್ ವರಿ ಅಂತ ಹೇಳಿದ್ದರು. ಆದ್ರೆ ಇದೂವರೆಗೂ ಶಾಸಕರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಲ್ಲ. ಹೀಗಾಗಿ ಸದ್ಯ ಕಾಂಗ್ರೆಸ್ಸಿನ 78 ಶಾಸಕರಲ್ಲಿ 77 ಜನ ಮಾತ್ರ ಇದ್ದಾರೆ. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಅನ್ನೋದಕ್ಕೆ ಉತ್ತರಿಸಿದ್ರು ಹೆಚ್‍ಡಿಕೆ

    ಚುನಾವಣಾ ಫಲಿತಾಂಶದ ಬಳಿಕ ಕಾರ್ಯಕರ್ತರ ಸಂಭ್ರಮ ಕಾರ್ಯಕ್ರಮವಿದ್ದುದರಿಂದ ಮೊನ್ನೆ ರಾತ್ರಿ ಹೊರಡಬೇಕಾಗಿದ್ದ ಆನಂದ್ ಸಿಂಗ್ ನಿನ್ನೆ ಬೆಳಗ್ಗೆ ಹೊರಟಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಬಳ್ಳಾರಿ ಗಡಿಯಲ್ಲಿ ರೆಡ್ಡಿ ಬ್ರದರ್ಸ್ ಅವರ ಸಂಪರ್ಕದಲ್ಲಿದ್ದು, ಅವರನ್ನು ಹೈಜಾಕ್ ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ಅವರ ಆಪ್ತವಲಯದಿಂದ ಕೇಳಿಬಂದಿದೆ. ಆದ್ರೆ ಈ ವಿಚಾರವನ್ನು ಸ್ಪಷ್ಟಪಡಿಸುವುದಾಗಿ ಅಥವಾ ನಿರಾಕರಿಸುವುದಾಗಿ ಆಪ್ತ ವಲಯಗಳು ಬಿಟ್ಟು ಕೊಡುತ್ತಿಲ್ಲ.

    ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದ ವೇಳೆ ಆನಂದ್ ಸಿಂಗ್ ಅವರು ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಈಗಲೂ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಆಪರೇಷನ್ ಕಮಲ ಮಾಡೋದಿಕ್ಕೆ ಜನಾರ್ದನ ರೆಡ್ಡಿಯವರು ಫೀಲ್ಡ್ ಗೆ ಇಳಿದಿದ್ದಾರಾ ಎಂಬ ಅನುಮಾನವೊಂದ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ಗುಜರಾತ್‍ಗೆ ತೆರಳಿದ್ದಾರಾ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್?

    ಬಿಜೆಪಿಯನ್ನು ತೊರೆದು ಬಿಜೆಪಿ ವಿರುದ್ಧವೇ ತೊಡೆತಟ್ಟಿ ಕಾಂಗ್ರೆಸ್ ಸೇರಿ ಗೆದ್ದಿರುವ ಶಾಸಕರು ಇದೀಗ ಮತ್ತೆ ಬಿಜೆಪಿ ಪರ ಯಾಕೆ ಬೆಂಬಲ ಸೂಚಿಸುತ್ತಾರೆ ಎಂಬ ಯಕ್ಷಪ್ರಶ್ನೆ ಕಾಂಗ್ರೆಸ್ಸಿಗರನ್ನು ಕಾಡುತ್ತದೆ. ಆದ್ರೆ ಅವರು ಇಂತಹ ನಿರ್ಧಾರ ಕೈಗೊಳ್ಳಲಾರರು ಎಂಬ ನಂಬಿಕೆಯಲ್ಲಿ ಕೈ ನಾಯಕರಿದ್ದಾರೆ.

    ಒಟ್ಟಿನಲ್ಲಿ ಬಳ್ಳಾರಿಯಿಂದ 3 ಶಾಸಕರು ಒಟ್ಟಾಗಿದ್ದು, ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸುತ್ತೇವೆ ಅಂತ ಹೇಳಿದ್ರೂ ಕೂಡ ಖಚಿತ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ದೂರ ಉಳಿದಿರಬಹುದೆಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.