Tag: Anand Prasad

  • ಬುದ್ಧಿ ಹೇಳೋಕೆ ಬಂದಿದ್ವಿ – ಆನಂದ್ ಪ್ರಸಾದ್ ಭೇಟಿ ಮಾಡಿದ ಹ್ಯಾರಿಸ್, ನಲ್‍ಪಾಡ್

    ಬುದ್ಧಿ ಹೇಳೋಕೆ ಬಂದಿದ್ವಿ – ಆನಂದ್ ಪ್ರಸಾದ್ ಭೇಟಿ ಮಾಡಿದ ಹ್ಯಾರಿಸ್, ನಲ್‍ಪಾಡ್

    – ಈ ಟ್ವೀಟ್‍ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ

    ಬೆಂಗಳೂರು: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿ ಅರೆಸ್ಟ್ ಆಗಿರುವ ಕೆಪಿಸಿಸಿ ಸೋಶಿಯಲ್ ಮೀಡಿಯಾ ಸೆಕ್ರೆಟರಿ ಆನಂದ್ ಪ್ರಸಾದ್‍ನನ್ನು ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮತ್ತು ಅವರ ಪುತ್ರ ಮಹಮ್ಮದ್ ನಲ್‍ಪಾಡ್ ಅವರು ಭೇಟಿಯಾಗಿದ್ದಾರೆ.

    ಭಾನುವಾರ ರಾತ್ರಿ ಕೆ.ಆರ್.ಪುರಂನಲ್ಲಿರುವ ನಿವಾಸದಿಂದಲೇ ಆನಂದ್ ಪ್ರಸಾದ್ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಟ್ವಿಟರ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆನಂದ್ ಪ್ರಸಾದ್ ಬರೆದಿದ್ದರು. ಸದ್ಯ ಟ್ವಿಟರ್ ಬರಹ ಡಿಲೀಟ್ ಮಾಡಲಾಗಿದೆ. ಈಗ ಆನಂದ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದ್ದಾರೆ.

    ಇಂದು ಆನಂದ್ ಪ್ರಸಾದ್‍ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಭೇಟಿಯಾದ ಹ್ಯಾರಿಸ್ ಮತ್ತು ನಲ್ಪಾಡ್, ಅನಂದ್ ಪ್ರಸಾದ್‍ಗೆ ಬುದ್ಧಿ ಹೇಳೋಕೆ ಬಂದಿದ್ದೆವು. ಯಾವುದೇ ಪಕ್ಷದ ಮುಖಂಡ ಆಗಿರಲಿ, ಆ ರೀತಿ ಮಾತಾಡಬಾರದು. ಈಗಾಗಲೇ ಆ ಬಗ್ಗೆ ಬುದ್ಧಿ ಹೇಳಿದ್ದೀವಿ, ಆನಂದ್ ಪ್ರಸಾದ್ ಕೂಡ ನನ್ನದು ತಪ್ಪಾಗಿದೆ ಎಂದು ಒಪ್ಕೊಂಡಿದ್ದಾರೆ. ಜೊತೆಗೆ ಆನಂದ್ ಅವರು ಮಾಡಿದ ಟ್ವೀಟ್‍ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧಿವಿಲ್ಲ ಎಂದು ಹ್ಯಾರಿಸ್ ಹೇಳಿದ್ದಾರೆ.

    ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ಆನಂದ್ ಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 505 (1)(ಬಿ)(ನಕಲಿ ಸಂದೇಶ ರವಾನೆ), 505(1) (ಅ), 153(ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.