Tag: Amravati Chandrashekhar

  • ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ಚುನಾವಣೆಯಿಂದೆ ಹಿಂದೆ ಸರಿದರೂ ಅವರ ಬಗ್ಗೆ ಜಿಲ್ಲೆಯಲ್ಲಿ ದಿನಕ್ಕೊಂದು ಚರ್ಚೆ ನಡೆಯುತ್ತಿದೆ. ಅಂಬರೀಶ್ ಅವರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿ ಇದ್ದವರೇ ಕಾರಣ. ಅಕ್ಕಪಕ್ಕದಲ್ಲಿದ್ದವರೇ ಅವರನ್ನು ಹಾಳು ಮಾಡಿದ್ರು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್‍.ಬಿ.ರಾಮು ಪರೋಕ್ಷವಾಗಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಅಂಬಿ ಉತ್ತಮ ನಟ, ಉತ್ತಮ ವ್ಯಕ್ತಿ. ರಾಜಕಾರಣಕ್ಕೆ ಅವರ ನಡವಳಿಕೆ ಇಷ್ಟವಾಗಲಿಲ್ಲ. ಅವರ ಅಕ್ಕಪಕ್ಕ ಇದ್ದ ಹತ್ತಾರು ಮಂದಿ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊಂಡರು. ಅಂಬಿ ಮೇಲೆ ಜನತೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ತಿಂಗಳಿಗೊಮ್ಮೆಯಾದ್ರೂ ಅವರು ಕಚೇರಿಯಲ್ಲಿ ಕುಳಿತುಕೊಂಡು ಜನಸಾಮಾನ್ಯರ ಕೆಲಸ ಮಾಡಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಅಂಬಿ ಆಪ್ತರ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದೇ ತಪ್ಪಾಗಿದೆ ಎಂದು ಹೇಳಿದ್ದಾರೆ.

    ಅಂಬರೀಶ್ ಜೊತೆಯಲ್ಲಿ ಇದ್ದಂತವರಾದ್ರೂ ವ್ಯವಸ್ಥಿತವಾಗಿ ಕೆಲಸ ಮಾಡಿಸಿದ್ದರೆ ಅವರ ಇಮೇಜ್ ಇಷ್ಟು ಹಾಳಾಗುತ್ತಿರಲಿಲ್ಲ. ಅಂಬರೀಶ್ ಅವರು ಕೆಲವರಿಗೆ ಮಾತ್ರ ಸೀಮಿತವಾದರು. ಪಕ್ಕದಲ್ಲಿ ಇದ್ದವರು ಮರ ಬೆಳೆದರೆ ಅದರ ನೆರಳಲ್ಲಿ ಹಲವರು ಇರಬಹುದು ಎಂದು ಯೋಚಿಸಬಹುದಿತ್ತು. ಆದರೆ ಮರವನ್ನು ಪೋಷಿಸುವ ಕೆಲಸ ಪಕ್ಕದಲ್ಲಿದ್ದವರು ಮಾಡಲಿಲ್ಲ ಎಂದ್ರು.

    ಅಂಬರೀಶ್ ಅವರು ಕಿವಿ ಮಾತನ್ನು ಹೆಚ್ಚು ಕೇಳುತ್ತಿದ್ದರು. ಕಬ್ಬಿಣ ಯಾವುದು ಚಿನ್ನ ಯಾವುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರಲ್ಲಿ ಉದಾರತನವಿತ್ತು ಅದನ್ನು ಜೊತೆಯಲ್ಲಿದ್ದವರು ದುರ್ಬಳಕೆ ಮಾಡಿಕೊಂಡು. ಇದು ತುಂಬಾ ನೋವಾಗುತ್ತೆ ಎಂದು ಅಮರಾವತಿ ಚಂದ್ರಶೇಖರ್ ವಿರುದ್ಧ ಮಾಜಿ ಶಾಸಕ ರಾಮು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆದ್ರೆ ರಾಮು ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಮರಾವತಿ ಚಂದ್ರಶೇಖರ್, ನಾನು ಈ ಬಗ್ಗೆ ನೋಡು ಇಲ್ಲ. ಕೇಳು ಇಲ್ಲ. ಇದರ ಬಗ್ಗೆ ನಾನೇನು ಮಾತನಾಡಲ್ಲ ಎಂದಿದ್ದಾರೆ.

  • ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ ಅಂಬಿ ಆಪ್ತ – ರಮ್ಯಾಗೆ ಎಂಪಿ ಟಿಕೆಟ್ ಸಿಕ್ಕ ಗುಟ್ಟು ಬಹಿರಂಗಗೊಳಿಸಿದ್ರು!

    ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ ಅಂಬಿ ಆಪ್ತ – ರಮ್ಯಾಗೆ ಎಂಪಿ ಟಿಕೆಟ್ ಸಿಕ್ಕ ಗುಟ್ಟು ಬಹಿರಂಗಗೊಳಿಸಿದ್ರು!

    ಮಂಡ್ಯ: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಸಂದರ್ಭ ನೆನೆದು ಬಹಿರಂಗ ಸಭೆಯಲ್ಲಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಕಣ್ಣೀರು ಹಾಕಿದ್ದಾರೆ.

    ಇಂದು ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅಮರಾವತಿ ಚಂದ್ರಶೇಖರ್, ಶಾಸಕ ಅಂಬರೀಶ್ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. 20 ವರ್ಷಗಳಿಂದ ನಮ್ಮ ನಾಯಕರಾದ ಅಂಬರೀಶ್ ಜೊತೆ ನಾವೆಲ್ಲರೂ ಇದ್ದೇವೆ. ನಮ್ಮ ಕಷ್ಟ ಸುಖದಲ್ಲಿ ಅವರು ಪಾಲ್ಗೊಂಡಿದ್ದಾರೆ. ಆದರೆ ಅಂಬರೀಶ್ ಅವರ ಆರೋಗ್ಯದ ಕಾರಣದಿಂದ ಒಳ್ಳೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂಬುದು ನನ್ನ ಭಾವನೆ. ಏಕಾ ಏಕಿ ಎಲ್ಲವನ್ನು ತ್ಯಜಿಸಿ ಪಕ್ಷದ ಕಾರ್ಯಕರ್ತರಿಗೆ ಆಘಾತ ಉಂಟು ಮಾಡಿ ಅವರು ಮೌನವಹಿಸಿದ್ದಾರೆ. ಅಂಬರೀಶ್ ವಿರುದ್ಧ ಚುನಾವಣೆಗೆ ನಿಲ್ಲಬೇಕು ಎಂದು ನಾನು ಬಿ-ಫಾರಂ ಕೇಳಲಿಲ್ಲ. ಚುನಾವಣೆಗೆ ಸ್ಪರ್ಧಿಸುವ ಆಸೆಯೂ ನನಗಿರಲಿಲ್ಲ. ಆದರೆ ಕೊನೆಗೆ ಈ ಬಹುಮಾನ ತೆಗೆದುಕೊಂಡು ಈಚೆಗೆ ಬಂದೆ. ಇದು ತುಂಬಾ ಬೇಸರದ ಸಂಗತಿ ಎಂದು ತಮ್ಮ ಬೆಂಬಲಿಗರೆದುರು ಕಣ್ಣೀರು ಹಾಕಿದರು. ಇದನ್ನು ಓದಿ: ಅಮರಾವತಿಗೆ ಅಂಬರೀಷ್ ಮಂಗಳಾರತಿ!

    ರಮ್ಯಾ ಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದೆ ರಮ್ಯಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರ ಬಗ್ಗೆ ಗುಟ್ಟು ಬಿಚ್ಚಿಟ್ಟಿರು. ರಮ್ಯಾ ಅವರಿಗೆ ಎರಡು ಬಾರಿ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿದಾಗಲೂ ಅಸಮಾಧಾನ ನನಗಿತ್ತು. ಈ ಹಿಂದೆ ಎಂಪಿ ಚುನಾವಣೆಯಲ್ಲಿಯೂ ಹೈಕಮಾಂಡ್ ಏಕಾಏಕಿ ರಮ್ಯಾ ಅವರಿಗೆ ಟಿಕೆಟ್ ನೀಡಿತ್ತು. ಆದರು ನಾವೆಲ್ಲರೂ ಸೇರಿ ಗೆಲ್ಲಿಸಿದ್ದೇವು. ಮತ್ತೆ ಆರು ತಿಂಗಳಲ್ಲಿ ಎಂಪಿ ಎಲೆಕ್ಷನ್ ಬಂತು. ಅಂಬರೀಶ್ ಅವರಿಗೆ ಅನಾರೋಗ್ಯದ ಕಾರಣದಿಂದ ಸಿಂಗಾಪೂರದಲ್ಲಿದ್ದರು. ಮತ್ತೆ ರಮ್ಯಾ ಅವರಿಗೆ ಟಿಕೆಟ್ ಕೊಟ್ಟರು. ಎಲೆಕ್ಷನ್ ಹೇಗೆ ಮಾಡುವುದು ಎಂಬ ಗೊಂದಲವಿತ್ತು. ಚುನಾವಣೆ ಮಾಡುವುದು ಕಾಂಗ್ರೆಸ್‍ನಲ್ಲಿ ಇಷ್ಟ ಇರಲಿಲ್ಲ. ಈ ವೇಳೆ ಅಂಬರೀಶ್ ಸಿಂಗಾಪುರದಲ್ಲಿದ್ದಾರೆ ಇನ್ನು ಯಾರು ಚುನಾವಣೆ ಮಾಡಬೇಕು, ನೀನೇ ಚುನಾವಣೆ ಮಾಡಬೇಕು ಎಂದು ಸಿದ್ದರಾಮಯ್ಯ ಗದರಿದ್ರು. ಅದ್ದರಿಂದ ಚುನಾವಣೆಯಲ್ಲಿ ಗೆಲುವುಗಾಗಿ ಶ್ರಮ ವಹಿಸಿದ್ದೆವು ಎಂದರು.

    ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ರಮ್ಯಾ ಸೋತರು. ಅವತ್ತು ಸೋತವರು ಮತ್ತೆ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಮಂಡ್ಯ ಜಿಲ್ಲೆಯ ನಾಯಕರು, ಕಾರ್ಯಕರ್ತರನ್ನು ಕೇಳದೇ ಪಕ್ಷದ ಹಿರಿಯರು ಎಲ್ಲೋ ಕುಳಿತು ಬಿ-ಫಾರಂ ಕೊಡುತ್ತಾರೆ. ಬಿಫಾರಂ ಪಡೆದು ಬಂದವರು ಚುನಾವಣೆ ಮಾಡಿಕೊಂಡು ಹೋಗುತ್ತಾರೆ. ಕ್ಷೇತ್ರದ ಜನರ ಕಷ್ಟ ಕೇಳುವವರು ಯಾರು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಿದರು.

    ಸದ್ಯ ಮಂಡ್ಯ ಕ್ಷೇತ್ರದ ಬಿ ಫಾರಂ ಕೊಟ್ಟಿದ್ದೀರಿ. ನಾವು ಚುನಾವಣೆ ಮಾಡುತ್ತೇವೆ. ಆದರೆ ಹೈಕಮಾಂಡ್ ಬಂದು ಮಾತನಾಡಿ ಕಷ್ಟ ಸುಖದಲ್ಲಿ ಇರುತ್ತೇವೆ ಎಂದು ನಾಯಕತ್ವ ಕೊಡಲಿ. ಇಲ್ಲದಿದ್ದರೆ ಕ್ಷೇತ್ರ ಗೊಂದಲವಾಗೇ ಇರುತ್ತೆ ಎಂದು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

  • ಅಂಬರೀಶ್ ಅವರನ್ನು ನಾನು ನಂಬಿದ್ದೆ, ಆದ್ರೂ ಟಿಕೆಟ್ ತಪ್ತು: ಭಾವುಕರಾದ ಅಮರಾವತಿ ಚಂದ್ರಶೇಖರ್

    ಅಂಬರೀಶ್ ಅವರನ್ನು ನಾನು ನಂಬಿದ್ದೆ, ಆದ್ರೂ ಟಿಕೆಟ್ ತಪ್ತು: ಭಾವುಕರಾದ ಅಮರಾವತಿ ಚಂದ್ರಶೇಖರ್

    ಮಂಡ್ಯ: ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಶಾಸಕ ಅಂಬರೀಶ್ ಹಿಂದೆ ಸರಿದಿದ್ದು, ರವಿಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ.

    ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಬರೀಶ್, ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಹಾಗೂ ಯಾರ ಹೆಸರನ್ನು ನಾನು ಶಿಫಾರಸು ಮಾಡಲ್ಲ. ಹಾಗಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಅಂತಾ ಸ್ಪಷ್ಟಪಡಿಸಿದ್ರು.

    ಇಂದು ಕಾಂಗ್ರೆಸ್ ನಾಯಕರ ಜೊತೆ ನಡೆದ ಮಾತುಕತೆಯಲ್ಲಿ ನನ್ನ ಹೆಸರನ್ನು ಅಂಬರೀಶ್ ಶಿಫಾರಸ್ಸು ಮಾಡಲಿಲ್ಲ. ಒಂದು ವೇಳೆ ಅಭ್ಯರ್ಥಿಯನ್ನು ಸೂಚಿಸಿದ್ರೆ, ಅವರನ್ನು ಗೆಲ್ಲಸಿಕೊಂಡು ಬರುವ ಜವಾಬ್ದಾರಿ ನನ್ನ ಮೇಲಿರುತ್ತದೆ. ಬೇರೆಯವರಿಗೆ ಟಿಕೆಟ್ ಕೊಡಿಸಿದ್ರೆ ನಾನೇ ಪ್ರಚಾರ ಮಾಡಬೇಕಾಗುತ್ತದೆ. ಪ್ರಚಾರ ಮಾಡುವುದಿದ್ದರೆ ನಾನೇ ಸ್ಪರ್ಧೆ ಮಾಡಬಹುದು ಎಂದು ಹೇಳುವ ಮೂಲಕ ನನ್ನನ್ನು ಬೇರೆಯವನ ರೀತಿ ನೋಡಿದ್ರು ಅಂತಾ ಅಮರಾವತಿ ಚಂದ್ರೇಖರ್ ಹೇಳಿದ್ದಾರೆ. ಇದನ್ನೂ ಓದಿ: ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್

    ಈ ಹಿಂದೆ ನಾನು ಚುನಾವಣೆಗೆ ನಿಲ್ಲಲ್ಲ, ನೀನೇ ನಿಲ್ಲು ಅಂತಾ ಹಲವು ಬಾರಿ ಅಂಬರೀಶ್ ಹೇಳುತ್ತಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ನಮ್ಮ ಹಿತೈಷಿಗಳು ಮಾಡಿದ ಪಿತೂರಿನಿಂದ ನನಗೆ ಟಿಕೆಟ್ ತಪ್ಪಿರುವ ಸಾಧ್ಯತೆಗಳಿವೆ. ಜನರ ಬೆಂಬಲದಿಂದಲೇ ಮಂಡ್ಯದಲ್ಲಿ ಆರು ಚುನಾವಣೆಗಳನ್ನು ಮಾಡಿ ಅವುಗಳಲ್ಲಿ ಯಶಸ್ವಿಯಾಗಿದ್ದೇನೆ. ನಾನು ಇಂದು ಬೆಳಗ್ಗೆವರೆಗೂ ಅಂಬರೀಶ್ ಅವರೇ ಚುನಾವಣೆಗೆ ಸ್ಪರ್ಧಿಸಬೇಕೆಂದು ಹೇಳುತ್ತಾ ಬಂದಿದ್ದೆ, ನಾನು ಎಂದು ಅವರ ವಿರುದ್ಧ ನಿಲ್ಲಬೇಕೆಂದು ಪಿತೂರಿ ಮಾಡಿದವನಲ್ಲ ಅಂತಾ ಭಾವುಕರಾದ್ರು. ಇದನ್ನು ಓದಿ: ಅಮರಾವತಿಗೆ ಅಂಬರೀಷ್ ಮಂಗಳಾರತಿ!

    ಸೋಮವಾರ ಅಂಬರೀಶ್ ಚುನಾವಣೆಯಿಂದ ಸ್ಪರ್ಧೆ ಮಾಡುತ್ತಿಲ್ಲ. ಹಾಗಾಗಿ ನಾನೇ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಅಂತಾ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಹೇಳಿದ್ದರು.

    https://youtu.be/j5sNdOb1D40

  • ಸಿಎಂ ಅರ್ಧಗಂಟೆ ಕಾದರೂ ಅಂಬಿ ಬರಲೇ ಇಲ್ಲ- ಕಾಂಗ್ರೆಸ್‍ಗೆ ರೆಬೆಲ್ ಆಗೇ ಉಳಿದ ರೆಬೆಲ್‍ಸ್ಟಾರ್!

    ಸಿಎಂ ಅರ್ಧಗಂಟೆ ಕಾದರೂ ಅಂಬಿ ಬರಲೇ ಇಲ್ಲ- ಕಾಂಗ್ರೆಸ್‍ಗೆ ರೆಬೆಲ್ ಆಗೇ ಉಳಿದ ರೆಬೆಲ್‍ಸ್ಟಾರ್!

    ಬೆಂಗಳೂರು: ಮಂಡ್ಯದ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಂಬರೀಶ್ ಅವರು ರಾಜಕೀಯ ನಿವೃತ್ತಿ ಪಡೆದಂತಿದೆ. ಸಚಿವ ಸ್ಥಾನದಿಂದ ಕೈಬಿಟ್ಟ ಸಿಎಂ ಸಿದ್ದರಾಮಯ್ಯ ಜೊತೆಗಿನ ಮುನಿಸಿನಿಂದ ಕಾಂಗ್ರೆಸ್ ಪಕ್ಷವನ್ನು ಕೊನೇ ಕ್ಷಣದವರೆಗೂ ರೆಬೆಲ್ ಆಗಿಯೇ ಅಂಬರೀಶ್ ಕಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮತ್ತೆ  ಎದ್ದಿದೆ.

    ಮಂಡ್ಯದ ಅಭ್ಯರ್ಥಿಯಾಗಿ ಬಿ-ಫಾರ್ಮ್ ಕೊಟ್ಟರೂ ಸ್ವೀಕರಿಸದ ಅಂಬರೀಶ್ ಕಣದಿಂದ ಹಿಂದೆ ಸರಿಯೋ ಲಕ್ಷಣಗಳು ಗೋಚರಿಸಿವೆ. ಆದರೂ, ನಾಳೆ ಸಂಜೆವರೆಗೆ ಕ್ಲೈಮಾಕ್ಸ್ ಕಾದಿರಿಸಿದ್ದಾರೆ.

    ಬೆಂಗಳೂರಿನಲ್ಲಿ ಕೆಜೆ ಜಾರ್ಜ್ ನಡೆಸಿದ ಸಂಧಾನಕ್ಕೆ ಬಗ್ಗದ ಅಂಬರೀಶ್ ಇವತ್ತು ಸಿಎಂ ಸಿದ್ದರಾಮಯ್ಯನವರಿಗೆ ಬೆಲೆ ಕೊಟ್ಟಿಲ್ಲ. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಅಂಬರೀಶ್-ಸಿದ್ದರಾಮಯ್ಯ ಭೇಟಿಗೆ ವೇದಿಕೆ ಸಿದ್ಧವಾಗಿತ್ತು. ಆದರೆ ಅಂಬರೀಶ್ ಈ ಭೇಟಿಗೆ ಸೊಪ್ಪು ಹಾಕದೇ ಹೋಟೆಲ್ ಮಾಲೀಕ, ಆಪ್ತ ಸ್ನೇಹಿತ, ಎಂಎಲ್‍ಸಿ ಸಂದೇಶ್ ನಾಗರಾಜ್ ಜೊತೆ ತಮ್ಮ ನಿರ್ಧಾರವನ್ನು ಹೇಳಿದ್ದಾರೆ.

    ಅಂಬಿ ಹೇಳಿದ್ದು ಏನು?
    ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಸ್ಪರ್ಧೆ ಬೇಡ ಎಂದು ನಿರ್ಧಾರಕ್ಕೆ ಬಂದಿದ್ದು, ನಾಳೆ ಸಂಜೆ ವೇಳೆ ಅಧಿಕೃತವಾಗಿ ಈ ವಿಚಾರಕ್ಕೆ ಸ್ಪಷ್ಟನೆ ನೀಡುತ್ತೇನೆ. ನಾನು ಯಾರ ಪರವಾಗಿ ಟಿಕೆಟ್ ಕೇಳುವುದಿಲ್ಲ. ಕೇಳಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದೇ ಆಗುತ್ತದೆ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಇನ್ನು, ನಾನು ಪಕ್ಷ ಬಿಡಲ್ಲ. ಯಾವುದೇ ಪಕ್ಷ ಸೇರುವುದಿಲ್ಲ. ಸಿಎಂ ಅವರನ್ನು ಭೇಟಿ ಮಾಡಲು ಆಗುವುದಿಲ್ಲ ಎಂದು ಹೇಳಿ ಬೆಂಗಳೂರಿನತ್ತ ಹೊರಟಿದ್ದಾರೆ ಎಂದು ಹೋಟೆಲ್ ನಲ್ಲಿ ನಡೆದ ಮಾತುಕತೆಯ ಸಾರವನ್ನು ಸಂದೇಶ್ ನಾಗರಾಜ್ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಇದಕ್ಕೂ ಮುನ್ನ ಅಂಬರೀಶ್ ಬರುತ್ತಾರೆ ಎಂದು ಮೈಸೂರಿನ ಶಾರಾದಾದೇವಿ ನಗರದ ತಮ್ಮ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅರ್ಧ ತಾಸು ಕಾದು ಕುಳಿತಿದ್ದರು. ಆದರೆ ಅರ್ಧಗಂಟೆ, ಮುಕ್ಕಾಲು ಗಂಟೆಯಾದರೂ ಅಂಬರೀಶ್ ಸುಳಿವೇ ಇರಲಿಲ್ಲ. ರೋಸಿ ಹೋದ ಸಿಎಂ ಪ್ರಚಾರಕ್ಕೆ ಎದ್ದು ಹೊರ ನಡೆದರು. ಮಾಧ್ಯಮಗಳ ಪ್ರಶ್ನೆಗೆ, ಇನ್ನುಮುಂದೆ ಅಂಬರೀಶ್ ತಾನಾಗಿ ಬಂದರೆ ಮಾತನಾಡುತ್ತೇನೆ. ನಾನಾಗಿ ಹೋಗುವುದಿಲ್ಲ. ಸ್ಪರ್ಧಿಸುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

    ಈ ಎಲ್ಲಾ ವಿದ್ಯಮಾನಗಳ ಮಧ್ಯೆ, ಅಂಬರೀಶ್ ಅವರೇ ಸ್ಪರ್ಧೆ ಮಾಡಬೇಕು. ಒಂದು ವೇಳೆ ಅಂಬರೀಷ್ ಒಪ್ಪದೇ ಇದ್ದರೆ ಅವರ ಸೂಚನೆಯಂತೆ ನಾನೇ ಸ್ಪರ್ಧೆ ಮಾಡ್ತೇನೆ ಎಂದು ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ತಿಳಿಸಿದ್ದಾರೆ.

    ಮಂಡ್ಯದ ಬೆಂಬಲಿಗರು ಎಂಟು ಕಾರುಗಳಲ್ಲಿ ಮೈಸೂರಿಗೆ ತೆರಳಿ ಹಲವು ಹೊಟೇಲ್‍ಗಳಲ್ಲಿ ಅಂಬರೀಶ್ ಅವರಿಗಾಗಿ ಶೋಧ ನಡೆಸಿದರು.. ಆದರೂ ಅವರಾರಿಗೂ ಅಂಬರೀಶ್ ಸುಳಿವು ಸಿಗಲಿಲ್ಲ. ಒಟ್ಟಿನಲ್ಲಿ ಅಂಬರೀಶ್ ಯಾರ ಕೈಗೂ ಸಿಗದೇ ಹೆಸರಿಗೆ ತಕ್ಕಂಥೆ ರೆಬೆಲ್ ಆಗಿಬಿಟ್ಟಿದ್ದರು.