Tag: AmitShah

  • ಪೋಲಿಯೋ ಅಭಿಯಾನಕ್ಕೆ ಅಮಿತ್ ಶಾ ಚಾಲನೆ

    ಪೋಲಿಯೋ ಅಭಿಯಾನಕ್ಕೆ ಅಮಿತ್ ಶಾ ಚಾಲನೆ

    ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಳೆದ ರಾತ್ರಿ ಜನಿಸಿದ ಮೂವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

    ಹುಬ್ಬಳ್ಳಿಯಲ್ಲಿಂದು ಮುಂಜಾನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಗೆ ಅಮಿತ್ ಶಾ ಉಪಹಾರಕ್ಕೆ ಆಗಮಿಸಿದ್ದರು. ಈ ವೇಳೆ ಅಮಿತ್ ಶಾ ಅವರು ಜೋಶಿ ಮನೆಯಲ್ಲಿ ಮೂವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು.

    2 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಪೋಲಿಯೋ ಲಸಿಕೆ ಹಾಕಿದ ಅಮಿತ್ ಶಾ ಮತ್ತೊಂದು ಮಗುವಿಗೆ ಲಸಿಕೆ ಹಾಕಿ ಮಾತನಾಡಿಸಿ, ಮಕ್ಕಳನ್ನ ಮುದ್ದು ಮಾಡಿದರು. ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಶರೀಫಾ ಕಳ್ಳಿಭಾವಿ, ಶಂಕುತಲಾ ಸೊಂಳಕೆ, ಮರಿಯಮ್ಮ ಬಳ್ಳಾರಿ ಎಂಬ ತಾಯಂದಿರ ಮಕ್ಕಳಿಗೆ ಅಮಿತ್ ಶಾ ಪೋಲಿಯೋ ಲಸಿಕೆ ಹಾಕಿದ್ದು ವಿಶೇಷವಾಗಿತ್ತು.

    ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ನಂದಕುಮಾರ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

  • ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಮೂಡಿದ ವಿವೇಕದೀಪಿನಿ ಶ್ಲೋಕ

    ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಮೂಡಿದ ವಿವೇಕದೀಪಿನಿ ಶ್ಲೋಕ

    ಬೆಂಗಳೂರು : ಏಕ ಕಾಲದಲ್ಲಿ ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಶ್ರೀ ಶಂಕರಾಚಾರ್ಯವಿರಚಿತ ಪ್ರಶೋತ್ತರರತ್ನ ಮಾಲಿಕೆಯ ಸಂಗ್ರಹವಾದ ವಿವೇಕದೀಪಿನಿಯ ಸಾಮೂಹಿಕ ಶ್ಲೋಕ ಪಠಣ ಯಶಸ್ವಿಯಾಗಿ ಮೂಡಿಬಂತು. ಅರಮನೆ ಮೈದಾನದ ಕೃಷ್ಣ ವಿಹಾರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಕ್ಕಳು ಶ್ಲೋಕ ಪಠಣ ಮಾಡಿ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.

    ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದರು. ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಿಎಂ ಯಡಿಯೂರಪ್ಪ, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    https://twitter.com/AmitShah/status/1218520310120468480

    ಬೆಂಗಳೂರಿನ 500ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಶ್ಲೋಕಗಳನ್ನ ವೇದಾಂತ ಭಾರತಿ ಸಂಸ್ಥೆ ಸುಮಾರು 6 ತಿಂಗಳಿಂದ ಕಲಿಸುತ್ತಿದ್ದರು. ಇಂದು ಅಂತಿಮವಾಗಿ ಏಕ ಕಾಲಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಶ್ಲೋಕ ಪಠಣ ಮಾಡುವ ಕಾರ್ಯಕ್ರಮವನ್ನ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿತ್ತು.

    ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿ, ಶಂಕರಾಚಾರ್ಯರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಕೊಳ್ಳಬೇಕು. ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಅಭ್ಯಾಸದಿಂದ ನಮ್ಮ ಜೀವನವೇ ಬದಲಾಗುತ್ತೆ ಅಂತ ಮಕ್ಕಳಿಗೆ ನೀತಿ ಪಾಠ ಮಾಡಿದ್ರು.

    ಸಿಎಂ ಯಡಿಯೂರಪ್ಪ, ಮಾತನಾಡಿ, ವಿವೇಕದೀಪಿನಿ ಕಾರ್ಯಕ್ರಮಕ್ಕೆ ಶಾಲೆಗಳಲ್ಲಿ ಶ್ಲೋಕ ಕಲಿಕೆಗೆ ಸರ್ಕಾರ ಅನುಮತಿ ಕೊಟ್ಟಿದೆ. ವಸುದೈವಕ ಕುಟುಂಬಕಂ, ಸರ್ವೆ ಜನ ಸುಖಿನೋ ಭವಂತೂ ಅನ್ನೋ ಸಂಸ್ಕಾರದಲ್ಲಿ ನಾವು ಇದ್ದೇವೆ. ಶಂಕರಾಚಾರ್ಯರ ಶ್ಲೋಕಗಳು ಇವತ್ತಿನ ಜೀವನಕ್ಕೆ ಹೋಲುತ್ತವೆ ಅಂತ ತಿಳಿಸಿದ್ರು.

    ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಸ್ವಾಮೀಜಿ ಮಾತಾಡಿ, ಉತ್ತಮ ಸಮಾಜ ನಿರ್ಮಾಣದ ಕೆಲಸ ಆಗಬೇಕಾದ್ರೆ, ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಪಠಣ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂತ ಮಾವಿನ ಹಣ್ಣಿನ ಕಥೆ ಸಮೇತ ಮಾರ್ಗದರ್ಶನ ನೀಡಿದರು.

  • ನಾಳೆ ಅಮಿತ್ ಶಾ, ಬಿಎಸ್‍ವೈ ಮಾತುಕತೆ – ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿಗಳು ದೌಡು

    ನಾಳೆ ಅಮಿತ್ ಶಾ, ಬಿಎಸ್‍ವೈ ಮಾತುಕತೆ – ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿಗಳು ದೌಡು

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಸಿಎಂ ಯಡಿಯೂರಪ್ಪ ಮಾತುಕತೆಗೆ ನಾಳೆ ಹೊಸ ಹುಬ್ಬಳ್ಳಿಯಲ್ಲಿ ಮುಹೂರ್ತ ನಿಗದಿಯಾಗಿದೆ. ಒಂದೂಕಾಲು ತಿಂಗಳಿಂದ ವಿಳಂಬವಾಗಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಈಗಲಾದರೂ ತೆರೆ ಬೀಳುತ್ತಾ ಅನ್ನೋ ಕುತೂಹಲ ಕೆರಳಿದೆ. ಈ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರಿದ್ದು ಇಂದು ಸಿಎಂ ಬಿಎಎಸ್‍ವೈ ಭೇಟಿಗೆ ದೌಡಾಯಿಸಲಾರಂಭಿಸಿದ್ದಾರೆ.

    ಸಿಎಂ ಅವರ ಧವಳಗಿರಿ ನಿವಾಸಕ್ಕೆ ಇಂದು ಬೆಳಗ್ಗೆಯಿಂದಲೂ ಹಲವು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡಿದರು. ಪಕ್ಷದ ಶಾಸಕರಾದ ಉಮೇಶ್ ಕತ್ರಿ, ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಅರಗ ಜ್ಞಾನೇಂದ್ರ ಮುಂತಾದವರು ಸಿಎಂ ಬಿಎಸ್ವೈ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಮುಂದಿಟ್ಟರು. ವಲಸಿಗರಾದ ಶಾಸಕ ಗೋಪಾಲಯ್ಯ, ಎಂಟಿಬಿ ನಾಗರಾಜ್, ಆರ್ ಶಂಕರ್ ಸಹ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದರು. ಉಳಿದ ಆಕಾಂಕ್ಷಿಗಳು ಸಹ ಇಂದು ಸಿಎಂ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

    ಸಂಪುಟ ವಿಸ್ತರಣೆ ವಿಳಂಬ, ಸಂಪುಟ ಸೇರ್ಪಡೆಗೆ ಶಾಸಕರ ಆಯ್ಕೆ, ಡಿಸಿಎಂ ಹುದ್ದೆಗಳ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಒತ್ತಡದಲ್ಲಿದ್ದಾರೆ. ನಾಳೆ ಅಮಿತ್ ಶಾ ಭೇಟಿ ಮಾಡಿದರೂ ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ ಅನ್ನೋ ಬಗ್ಗೆ ಖುದ್ದು ಸಿಎಂಗೇ ನಂಬಿಕೆ ಇಲ್ಲ. ಹಾಗಾಗಿ ಸಿಎಂ ಅವರು ತಮ್ಮನ್ನು ಭೇಟಿ ಮಾಡುತ್ತಿರುವ ಆಕಾಂಕ್ಷಿಗಳಿಗೆ ಖಚಿತ ಭರವಸೆ ಕೊಡುತ್ತಿಲ್ಲ ಎಂದು ಹೇಳಲಾಗಿದೆ. ನಾಳೆ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆದ ಮೇಲಷ್ಟೇ ಮುಂದಿನ ಬೆಳವಣಿಗೆಗಳ ಬಗ್ಗೆ ಗೊತ್ತಾಗಲಿದೆ. ಹೈಕಮಾಂಡ್ ಮನಸ್ಸಲ್ಲೇನಿದೆ ಅನ್ನೋದೂ ನಾಳೆಯೇ ಗೊತ್ತಾಗಲಿದೆ.

  • ನಾಳೆ ರಾಜ್ಯಕ್ಕೆ ಅಮಿತ್ ಶಾ ಆಗಮನ- ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

    ನಾಳೆ ರಾಜ್ಯಕ್ಕೆ ಅಮಿತ್ ಶಾ ಆಗಮನ- ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

    ಬೆಂಗಳೂರು: ಕೊನೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಸಚಿವರಾಗಲು ಕಾಯುತ್ತಿದ್ದ ಆಕಾಂಕ್ಷಿ ಶಾಸಕರಲ್ಲಿ ಹುಮ್ಮಸ್ಸು, ನಿರೀಕ್ಷೆ, ಆತಂಕಗಳೆಲ್ಲ ಒಟ್ಟಿಗೆ ಕಾಣಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿ ಪೌರತ್ವ ಕಾಯ್ದೆ(ಸಿಎಎ) ಕುರಿತು ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಮಧ್ಯಾಹ್ನ 12.15ಕ್ಕೆ ಯಲಹಂಕ ವಾಯುನೆಲೆಗೆ ಅಮಿತ್ ಶಾ ಬಂದಿಳಿಯಲಿದ್ದಾರೆ. ಅಮಿತ್ ಶಾ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲೇ ಇದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ವಿವೇಕಾದೀಪಿನಿ ಮಹಾಸಮರ್ಪಣ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.

    ಬಳಿಕ ಮಧ್ಯಾಹ್ನ 3.15ಕ್ಕೆ ಯಲಹಂಕ ವಾಯುನೆಲೆಯಿಂದ ಹುಬ್ಬಳ್ಳಿಗೆ ಅಮಿತ್ ಶಾ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಸಂಜೆ 4.30ಕ್ಕೆ ಹುಬ್ಬಳ್ಳಿಗೆ ತಲುಪಲಿರುವ ಅಮಿತ್ ಶಾ, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ನೆಹರೂ ಸ್ಟೇಡಿಯಂಗೆ ಪ್ರಯಾಣಿಸಲಿದ್ದಾರೆ. ಸಂಜೆ 4.55 ರಿಂದ 5.30 ರವರೆಗೆ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಸಿಎಎ ಕುರಿತ ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರು, ಡಿಸಿಎಂ, ಸಚಿವರುಗಳು ಮತ್ತು ಪಕ್ಷದ ಪ್ರಮುಖರು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

    ಅಮಿತ್ ಶಾ, ಸಿಎಂ ಮಾತುಕತೆ:
    ಹುಬ್ಬಳ್ಳಿಯ ಕಾರ್ಯಕ್ರಮ ಮುಗಿದ ಬಳಿಕ ಅಮಿತ್ ಶಾ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ನಲ್ಲಿ ಅಮಿತ್ ಶಾ ವಾಸ್ತವ್ಯ ಮಾಡಲಿದ್ದಾರೆ. ಡೆನಿಸನ್ ಹೋಟೆಲ್ ನಲ್ಲೇ ನಾಳೆ ಮುಸ್ಸಂಜೆ ಬಳಿಕ ಅಮಿತ್ ಶಾರನ್ನು ಸಿಎಂ ಯಡಿಯೂರಪ್ಪ ಭೇಟಿಯಾಗಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿದ್ದಾರೆ. ಅಮಿತ್ ಶಾ ಭೇಟಿಗೆ ಯಡಿಯೂರಪ್ಪ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

    ಸಂಭಾವ್ಯ ಸಚಿವರ ಪಟ್ಟಿಯನ್ನು ಈಗಾಗಲೇ ಸಿದ್ಧ ಮಾಡಿಕೊಂಡಿರುವ ಸಿಎಂ, ಅದನ್ನು ಅಮಿತ್ ಶಾ ಮುಂದಡಲಿದ್ದಾರೆ. ಜೊತೆಗೆ ಹೊಸ ಶಾಸಕರ ಪೈಕಿ ಎಷ್ಟು ಜನಕ್ಕೆ ಮತ್ತು ಪಕ್ಷದ ಶಾಸಕರ ಪೈಕಿ ಎಷ್ಟು ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು, ಯಾರಿಂದ ಯಾವ ಖಾತೆಗಳನ್ನು ವಾಪಸ್ ಪಡೆಯಬೇಕು ಅನ್ನೋದರ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಇದರ ಜೊತೆಗೆ ಡಿಸಿಎಂ ಹುದ್ದೆಗಳನ್ನು ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

    ಅಮಿತ್ ಶಾ ಭೇಟಿ ಬಳಿಕವೇ ಸಂಪುಟ ವಿಸ್ತರಣೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಆದರೆ ಯಡಿಯೂರಪ್ಪ ಮಾತ್ರ ಈ ತಿಂಗಳಲ್ಲೇ ಸಂಪುಟ ವಿಸ್ತರಣೆಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಇನ್ನು ಜನವರಿ 19ರ ಬೆಳಗ್ಗೆ 9.15ಕ್ಕೆ ಹುಬ್ಬಳ್ಳಿಯಿಂದಲೇ ಅಮಿತ್ ಶಾ ದೆಹಲಿಗೆ ವಾಪಸ್ ಮರಳಲಿದ್ದಾರೆ. ಅಮಿತ್ ಶಾ ಜೊತೆಗೆ ಸಿಎಂ ಯಡಿಯೂರಪ್ಪ ಭೇಟಿ ಮುಗಿಯುವವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳ ಎದೆ ಬಡಿತ ಜೋರಾಗಿಯೇ ಇರಲಿದೆ.

  • ಅಮಿತ್ ಶಾಗೆ ಸಲಹೆ ಕೊಟ್ಟಿದ್ದ ಚಿದಾನಂದ ಮೂರ್ತಿ!

    ಅಮಿತ್ ಶಾಗೆ ಸಲಹೆ ಕೊಟ್ಟಿದ್ದ ಚಿದಾನಂದ ಮೂರ್ತಿ!

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿಯವರು ಸಲಹೆ ಕೊಟ್ಟಿದ್ದರು.

    ಹೌದು. ಖುದ್ದು ಅಮಿತ್ ಶಾ ಅವರು ಬಿಜೆಪಿ ಪ್ರಣಾಳಿಕೆಯಲ್ಲಿ ಏನೆಲ್ಲ ಸೇರಿಸಬೇಕು ಅನ್ನುವ ಸಲಹೆ ಕೇಳಲು ಚಿಮೂ ಮನೆಗೆ ಬಂದಿದ್ದರು. ಈ ವೇಳೆ ಚಿಮೂ ಅಮಿತ್ ಶಾಗೆ ಪಂಚ ಸಲಹೆ ಕೂಡ ಕೊಟ್ಟಿದ್ದರು.

    ಬಿಳಿ ನಿಲುವಂಗಿ, ಅದರ ಮೇಲೊಂದು ತ್ರಿವರ್ಣ ಧ್ವಜದ ಸಿಂಬಲ್. ಟಿಪ್ಪು, ಹಿಂದುತ್ವ, ಲಿಂಗಾಯತ ಧರ್ಮದ ವಿಚಾರ ಬಂದರೆ ಗಂಟೆಗಟ್ಲೆ ಮಾತಾನಾಡುವ ಛಾತಿ. ಮಗುವಿನ ಮುಖದ ಚಿಮೂ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದೆಷ್ಟು ಬಾರಿ ಗಲಾಟೆ ಮಾಡಿದ್ದಾರೋ ಗೊತ್ತಿಲ್ಲ. ಟಿಪ್ಪುನ ಕಟ್ಟಾ ವಿರೋಧಿಯಾಗಿದ್ದ ಚಿದಾನಂದ ಮೂರ್ತಿ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ಒಡ್ಡಿದ್ದರು. ಇಷ್ಟು ಮಾತ್ರವಲ್ಲದೇ ಹಂಪಿ ಸ್ಮಾರಕ ರಕ್ಷಣೆಗೂ ಓಡಾಡಿದ್ದ ಚಿಮೂ ಪೌರತ್ವ ಕಾಯ್ದೆಯ ಬಗ್ಗೆಯೂ ಬೆಂಬಲಿಸಿ ಮಾತಾನಾಡಿದ್ದರು. ಲಿಂಗಾಯತ ಧರ್ಮ ಒಡೆಯುವ ವಿಚಾರ ಬಂದಾಗ ಅದನ್ನು ಖಂಡಿಸಿ ಹೋರಾಟ ಮಾಡಿದ್ದರು.

    ಒಟ್ಟಿನಲ್ಲಿ ಸಂಶೋಧಕರಾಗಿ ಅನೇಕ ಅಧ್ಯಯನವನ್ನು ಮಾಡಿ, ಕನ್ನಡ ಸಂಶೋಧನಾ ಜಗತ್ತಿಗೆ ಹೊಸ ಆಯಾಮವನ್ನು ಕೂಡ ಚಿದಾನಂದ ಮೂರ್ತಿ ಕೊಟ್ಟಿರುವುದನ್ನು ಸ್ಮರಿಸಬಹುದು.

  • ಬಿಎಸ್‍ವೈ ದೆಹಲಿ ಭೇಟಿ ಮತ್ತೆ ರದ್ದು – ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭಾರೀ ನಿರಾಸೆ

    ಬಿಎಸ್‍ವೈ ದೆಹಲಿ ಭೇಟಿ ಮತ್ತೆ ರದ್ದು – ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭಾರೀ ನಿರಾಸೆ

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಸದ್ಯಕ್ಕೆ ಶುಭ ಕಾಲ ಕೂಡಿ ಬರುವ ಲಕ್ಷಣ ಕಾಣುತ್ತಿಲ್ಲ. ಯಾಕಂದ್ರೆ ಈ ಬಾರಿಯೂ ಸಿಎಂ ಯಡಿಯೂರಪ್ಪ ಅವರ ದೆಹಲಿ ಭೇಟಿಗೆ ಹೈಕಮಾಂಡ್ ಒಪ್ಪಿಗೆ ಸಿಕ್ಲಿಲ್ಲ. ಕೊನೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಎಸ್‍ವೈಗೆ ದೆಹಲಿಯಲ್ಲಿ ಅಪಾಯಿಂಟ್ಮೆಂಟ್ ಕೊಡಲೇ ಇಲ್ಲ. ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಭೇಟಿಗೆ ಜನವರಿ 12 ರಂದು ಅಂದರೆ ನಾಳೆಗೆ ಯಡಿಯೂರಪ್ಪ ಅವರು ಅಮಿತ್ ಶಾ ಸಮಯ ಕೇಳಿದ್ದರು. ಆದರೆ ಸಂಪುಟ ವಿಸ್ತರಣೆ ಇರಲಿ ಸಿಎಂ ಅವರನ್ನು ದೆಹಲಿಗೆ ಬಂದು ಭೇಟಿ ಮಾಡಲು ಸಹ ಅಮಿತ್ ಶಾ ಒಪ್ಪಿಗೆ ಕೊಡಲಿಲ್ಲ. ಇದೇ 18 ರಂದು ಹುಬ್ಬಳ್ಳಿಯಲ್ಲಿ ಸಿಎಎ ಕುರಿತ ಬಿಜೆಪಿ ಬೃಹತ್ ರ್ಯಾಲಿಯಿದ್ದು, ಅಮಿತ್ ಶಾ ಆಗಮಿಸುತ್ತಿದ್ದಾರೆ. ಹಾಗಾಗಿ ಹುಬ್ಬಳ್ಳಿಯಲ್ಲೇ ಅಮಿತ್ ಶಾ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಲು ಸಿಎಂ ನಿರ್ಧರಿಸಿದ್ದಾರೆ.

    ಇಂದು ಬೆಳಗ್ಗೆ ತಮ್ಮ ಧವಳಗಿರಿ ನಿವಾಸದಲ್ಲಿ ದೆಹಲಿ ಪ್ರವಾಸ ರದ್ದಾದ ಬಗ್ಗೆ ಸಿಎಂ ಯಡಿಯೂರಪ್ಪ ಮಾತಾಡಿದರು. ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೇಗಿದ್ದರೂ ಅಮಿತ್ ಶಾ ಅವರೇ ರಾಜ್ಯಕ್ಕೆ ಬರುತ್ತಿದ್ದಾರೆ. ಜನವರಿ 17, 18 ಕ್ಕೆ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ರಾಜ್ಯಕ್ಕೆ ಬಂದಾಗ ಇಲ್ಲೇ ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುತ್ತೇನೆ. ಅವರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    ಬಿಎಸ್‍ವೈ ದೆಹಲಿ ಭೇಟಿಗೆ ಅಮಿತ್ ಶಾ ನಿರಾಕರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ಭಾರೀ ನಿರಾಸೆಯಾಗಿದೆ. ನಾಳೆ ಅಮಿತ್ ಶಾ ಜೊತೆ ಸಿಎಂ ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುತ್ತಾರೆ ಎಂದು ಆಕಾಂಕ್ಷಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ನಾಳೆಗೆ ತಮ್ಮ ವನವಾಸ ಮುಗಿಯುತ್ತದೆ ಎಂದೇ ಅಂದುಕೊಂಡಿದ್ದರು. ಆದರೆ ಅರ್ಹ ಶಾಸಕರು ಮತ್ತು ಪಕ್ಷದ ಆಕಾಂಕ್ಷಿ ಶಾಸಕರ ನಿರೀಕ್ಷೆ ಮತ್ತೆ ಠುಸ್ ಆಗಿದೆ.

    ಯಡಿಯೂರಪ್ಪರ ದೆಹಲಿ ಪ್ರವಾಸ ರದ್ದು ಬೆನ್ನಲ್ಲೇ ಇದೇ ತಿಂಗಳು ಸಂಪುಟ ವಿಸ್ತರಣೆ ನಡೆಯುತ್ತಾ ಅನ್ನೋ ಭರವಸೆಯನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಇದೇ 18 ಕ್ಕೆ ರಾಜ್ಯಕ್ಕೆ ಅಮಿತ್ ಶಾ ಆಗಮಿಸುತ್ತಿದ್ದು, ಈಗಲಾದರೂ ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ ಕೊಡ್ತಾರಾ ಅನ್ನೋ ಅನುಮಾನ ಈಗ ಆಕಾಂಕ್ಷಿಗಳಲ್ಲಿ ಕಾಡುತ್ತಿದೆ.

  • ಮೋದಿ ಎದುರು ಬಿಎಸ್‍ವೈ ಗರಂ ಭಾಷಣ- ಶಾಗೆ ಸೀಕ್ರೆಟ್ ರಿಪೋರ್ಟ್ ರವಾನೆ

    ಮೋದಿ ಎದುರು ಬಿಎಸ್‍ವೈ ಗರಂ ಭಾಷಣ- ಶಾಗೆ ಸೀಕ್ರೆಟ್ ರಿಪೋರ್ಟ್ ರವಾನೆ

    ಬೆಂಗಳೂರು: ತುಮಕೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಕಿದ ಗುಟುರು ಈಗ ಬಿಜೆಪಿ ಪಾಳಯದಲ್ಲೂ ಸಾಕಷ್ಟು ಸಂಚಲನ ಸೃಷ್ಟಿಸಿದೆ.

    ಪ್ರಧಾನಿ ಮೋದಿಯವರಿಗೆ ಅವರ ಮುಂದೆಯೇ ರಾಜ್ಯದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಯಡಿಯೂರಪ್ಪ ಹೊರಹಾಕಿದ ಅಸಮಾಧಾನದ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಥಂಡಾ ಹೊಡೆದಿದ್ದಾರೆ. ಯಡಿಯೂರಪ್ಪ ಹೇಳಿಕೆ ನೋಡಿ ಬೆಚ್ಚಿ ಬಿದ್ದ ರಾಜ್ಯ ನಾಯಕರು, ಈಗ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಯಾವತ್ತೂ ಹೀಗೆ ಮಾತನಾಡದ ಮುಖ್ಯಮಂತ್ರಿಗಳು ನಿನ್ನೆ ಯಾಕೆ ಹೀಗೆ ಮಾತನಾಡಿದರು?, ಅದೂ ಪ್ರಧಾನಿ ಎದುರೇ ಬಿಎಸ್‍ವೈ ಗುಟುರು ಹಾಕಿದ್ದು ಯಾವ ಧೈರ್ಯದಿಂದ? ಇದರ ಅಸಲಿಯತ್ತು ಏನು?. ಹೀಗೆ ಬಿಜೆಪಿ ಮನೆಯಲ್ಲಿ ತಲೆಗೊಂದು ಪ್ರಶ್ನೆ, ಗೊಂದಲ ಹುಟ್ಟಿಕೊಂಡಿದೆಯಂತೆ.

    ಈ ಮಧ್ಯೆ ಇಂತಹ ಸುಸಂದರ್ಭ ಸಿಕ್ಕಿದ್ದೇ ತಡ, ಬಿಎಸ್‍ವೈ ವಿರೋಧಿ ಬಣ ಸಹ ಅಲರ್ಟ್ ಆಗಿದೆಯಂತೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಡಿಯೂರಪ್ಪ ಅವರ ತುಮಕೂರು ಭಾಷಣ ಕುರಿತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸೀಕ್ರೆಟ್ ರಿಪೋರ್ಟ್ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಹೇಳಿಕೆಯ ಹಿಂದಿನ ಕಾರಣ, ಉದ್ದೇಶಗಳ ಕುರಿತು ಈ ಸೀಕ್ರೆಟ್ ರಿಪೋರ್ಟ್ ನಲ್ಲಿ ನಳಿನ್ ಕುಮಾರ್ ಕಟೀಲ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿಎಂ ಕೈಮುಗಿದು ಮನವಿ ಮಾಡಿದ್ರೂ ನೆರೆ ಪರಿಹಾರದ ಬಗ್ಗೆ ಏನೂ ಮಾತನಾಡದ ಮೋದಿ

    ಬಿಎಸ್‍ವೈ ಅಸಮಾಧಾನದ ಹೇಳಿಕೆ ಪ್ರಕರಣ ಈಗ ಅಮಿತ್ ಶಾ ಕೋರ್ಟ್ ನಲ್ಲಿದೆ. ಅಲ್ಲಿಗೆ ಯಡಿಯೂರಪ್ಪ ಮೇಲೆ ಮತ್ತೆ ಹೈಕಮಾಂಡ್ ‘ಐ’ ಬಿದ್ದಿದೆಯಾ ಅನ್ನುವ ಅನುಮಾನವೂ ಮೂಡಿದಂತಾಗಿದೆ. ಅಮಿತ್ ಶಾ, ಯಡಿಯೂರಪ್ಪ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸ್ತಾರಾ? ಯಡಿಯೂರಪ್ಪ ವಿಚಾರದಲ್ಲಿ ಅಮಿತ್ ಶಾ ಮುಂದೇನ್ ಮಾಡ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.

  • ದೆಹಲಿಗೆ ಮುಂದಿನ ವರ್ಷ ಬನ್ನಿ- ಬಿಎಸ್‍ವೈಗೆ ಅಮಿತ್ ಶಾ ಸಂದೇಶ

    ದೆಹಲಿಗೆ ಮುಂದಿನ ವರ್ಷ ಬನ್ನಿ- ಬಿಎಸ್‍ವೈಗೆ ಅಮಿತ್ ಶಾ ಸಂದೇಶ

    ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲ್ಲ ಅನ್ನೋದು ಈಗ ಖಚಿತಗೊಂಡಿದೆ. ಈ ತಿಂಗಳಲ್ಲಿ ದೆಹಲಿಗೆ ಬರಬೇಡಿ ಅಂತ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಎಂ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದಾರೆ. ಆ ಮೂಲಕ ಸಚಿವ ಸಂಪುಟ ವಿಸ್ತರಣೆಗೆ ಜನವರಿಯಲ್ಲಿ ಧನುರ್ಮಾಸ ಮುಗಿದ ಬಳಿಕ ಮುಹೂರ್ತ ಫಿಕ್ಸ್ ಆಗುವುದು ಖಚಿತವಾಗಿದೆ.

    ಡಿಸೆಂಬರ್ 22 ಅಂದರೆ ಇಂದು ಮುಖ್ಯಮಂತ್ರಿಗಳು ದೆಹಲಿಗೆ ಹೋಗಬೇಕಿತ್ತು. ಆದರೆ ಯಡಿಯೂರಪ್ಪ ಭೇಟಿಗೆ ಅಮಿತ್ ಶಾ ಅವರು ಅಪಾಯಿಟ್ಮೆಂಟ್ ಕೊಟ್ಟಿಲ್ಲ. ಬದಲಾಗಿ ಈ ತಿಂಗಳು ದೆಹಲಿಗೆ ಬರಬೇಡಿ ಎಂದು ಸಿಎಂಗೆ ಅಮಿತ್ ಶಾ ಸಂದೇಶ ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪೌರತ್ವ ಕಾಯ್ದೆಯ ಕಾವು ಇನ್ನೂ ಆರಿಲ್ಲ. ಜೊತೆಗೆ ಜಾರ್ಖಂಡ್ ಫಲಿತಾಂಶ ಇನ್ನೂ ಬಂದಿಲ್ಲ. ಜಾರ್ಖಂಡ್ ಫಲಿತಾಂಶ ಬಂದ ಮೇಲೆ ಅಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ನಾವು ಮುಳುಗಿರುತ್ತೇವೆ. ಹಾಗಾಗಿ ಈ ವಾರ ನಾವು ಫುಲ್ ಬ್ಯುಸಿ ಇರುತ್ತೀವಿ. ದೆಹಲಿಗೆ ಈ ವಾರ ನೀವು ಬರೋದು ಬೇಡ ಎಂದು ಅಮಿತ್ ಶಾ ಅವರು ಯಡಿಯೂರಪ್ಪಗೆ ಸಂದೇಶ ಕಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಸಿಎಂ ದೆಹಲಿ ಭೇಟಿ ಕನ್ಫರ್ಮ್ ಆಗಿದೆ.

    ಜನವರಿ ಮೊದಲ ವಾರದಲ್ಲಿ ದೆಹಲಿಗೆ ತೆರಳಲಿರುವ ಸಿಎಂ, ಆಗಲೇ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜೊತೆ ಮಾತುಕತೆ ಫೈನಲ್ ಮಾಡಿಕೊಂಡು ಬರಲು ನಿರ್ಧರಿಸಿದ್ದಾರೆ. ಜನವರಿಯಲ್ಲಿ ಧನುರ್ಮಾಸ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತವನ್ನೂ ನಿಗದಿ ಮಾಡಲಿದ್ದಾರೆ.

    ಅಲ್ಲದೇ ನೂತನ ಶಾಸಕರ ಪೈಕಿ ಕೆಲವರು ಧನುರ್ಮಾಸದಲ್ಲಿ ಸಚಿವರಾಗಲು ಸಿದ್ಧರಿಲ್ಲ. ಯಡಿಯೂರಪ್ಪ ಮೊದಲೇ ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಲು ಇಚ್ಚಿಸುವುದಿಲ್ಲ. ಈ ಕಾರಣಗಳಿಂದಲೂ ಸಂಪುಟ ವಿಸ್ತರಣೆ ಜಂಜಡ ಜನವರಿಗೆ ಹೋಗಿದೆ. ಸದ್ಯಕ್ಕೆ ಸಂಪುಟ ತಲೆನೋವು ಇಲ್ಲದಿರುವ ಕಾರಣ ಸೋಮವಾರದಿಂದ ಅಂದರೆ ನಾಳೆಯಿಂದ ಯಡಿಯೂರಪ್ಪನವರು ಸರಣಿ ಪ್ರವಾಸ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ರೈತ ಸಮಾವೇಶ, ವಿವಿಧ ದೇವಸ್ಥಾನಗಳಿಗೆ ಭೇಟಿ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಒಂದು ವಾರ ಬ್ಯುಸಿ ಇರಲಿದ್ದಾರೆ. ಡಿಸೆಂಬರ್ 23 ರಿಂದ 29 ರವರೆಗೆ ಯಡಿಯೂರಪ್ಪ ಫುಲ್ ಬ್ಯುಸಿಯಾಗಲಿದ್ದಾರೆ.

  • ಮೋದಿ, ಶಾ ದೇಶ ವಿಭಜಿಸಲು ಹೊರಟಿದ್ದಾರೆ: ಆರ್.ಧ್ರುವನಾರಾಯಣ

    ಮೋದಿ, ಶಾ ದೇಶ ವಿಭಜಿಸಲು ಹೊರಟಿದ್ದಾರೆ: ಆರ್.ಧ್ರುವನಾರಾಯಣ

    ಚಾಮರಾಜನಗರ: ದೇಶದ ಕರಾಳ ಕಾನೂನಾದ ಪೌರತ್ವ ವಿಧೇಯಕದ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿದೆ ಎಂದು ಮಾಜಿ ಸಂಸದ ಆರ್ ಧ್ರುವನಾರಾಯಣ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಕಾನೂನು ವಿಭಾಗ ಸಕ್ರಿಯವಾಗಿದ್ದು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕಾನೂನನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಸಿಎಎ ಮತ್ತು ಎನ್‍ಆರ್‍ಸಿ ದೇಶದ ಅಸ್ಥಿರತೆಗೆ ಕಾರಣವಾಗಲಿದ್ದು, ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ಯೋಜನೆಗಳ ಮೇಲೆ ದುಷ್ಪರಿಣಾಮ ಬೀರಲಿವೆ. ರಾಜ್ಯವ್ಯಾಪಿ ಸೆಕ್ಷನ್ 144 ಜಾರಿಗೊಳಿಸಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೇ ಪೊಲೀಸರ ಮೂಲಕ ನಿಯಂತ್ರಣ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

    ಕೆಲವರ ಕಿಡಿಗೇಡಿತನಕ್ಕೆ ಅಮಾಯಕರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದು, ಗುಂಡು ಹಾರಿಸಿದರು ಯಾರೂ ಮೃತಪಡಲಿಲ್ಲ ಎಂಬ ಪೊಲೀಸರೊಬ್ಬರ ಮಾತು ತೀವ್ರ ಖಂಡನೀಯ. 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಒಂದೂ ಈ ರೀತಿಯ ಅವಘಡಗಳಾಗಿರಲಿಲ್ಲ. ಆದರೆ, ಬಿಜೆಪಿ ಬಂದಾಗಲೆಲ್ಲ ಗೋಲಿಬಾರಾಗಿದೆ. ಅಂದು ರೈತರಿಗೆ ಗುಂಡಿಟ್ಟಿದ್ದರು. ಇಂದು ಅಮಾಯಕರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಕಿಡಿಕಾರಿದರು.

  • ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿಯಿದ್ದಂತೆ: ಜನಾರ್ದನ ಪೂಜಾರಿ

    ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿಯಿದ್ದಂತೆ: ಜನಾರ್ದನ ಪೂಜಾರಿ

    – ಅಮಿತ್ ಶಾ ಬ್ರೈನ್ ಇರೋ ಮನುಷ್ಯ

    ಮಂಗಳೂರು: ಸದಾ ಮಾಜಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಅವರು ಈ ಬಾರಿಯೂ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿಯೇ ಹೋಗುತ್ತಾರೆ. ಅದು ನನಗೆ ಮಾತ್ರವಲ್ಲ ಆ ದೇವರಿಗೆ ಕೂಡ ಗೊತ್ತಿದೆ. ಅವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.

    ಸಿದ್ದರಾಮಯ್ಯರಿಗೆ ಪಕ್ಷದಲ್ಲಿ ಮತ್ತೆ ಪ್ರಾಮುಖ್ಯತೆ ಕೊಟ್ಟಿದ್ದು ತಪ್ಪು. ಅವರಿಗೆ ಯಾವುದೇ ಜವಾಬ್ದಾರಿ ನೀಡಬಾರದು ಎಂದು ಹೈಕಮಾಂಡಿಗೆ ಕೂಡ ನಾನು ಹೇಳುತ್ತೇನೆ. ಹೈಕಮಾಂಡ್ ತಪ್ಪು ಮಾಡುತ್ತಿದೆ. ಹೋಗಿ ಹೈಕಮಾಂಡಿಗೆ ನನ್ನ ವಿರುದ್ಧ ದೂರು ನೀಡಲಿ. ನನ್ನನ್ನು ಪಕ್ಷದಿಂದ ತೆಗೆಯಲಿ. ನಾನೂ ಅಲ್ಲೇ ಇದ್ದವನು. ಇವರಿಗೆಲ್ಲ ಹೊಸಬನಾಗಿ ಕಾಣುತ್ತಿರಬಹುದು. ಆದರೆ ಇಡೀ ಪಾರ್ಟಿಯನ್ನು ನಾನು ನೋಡುತ್ತಿದ್ದೇನೆ. ಇಲ್ಲದಿದ್ದರೆ ಹೈಕಮಾಂಡ್, ಪೂಜಾರಿ ನಮಗೆ ನೀವು ಹೊಸಬರು. ನಿಮಗೂ ನಮಗೂ ಸಂಬಂಧವೇ ಇಲ್ಲ ಎಂದು ಹೇಳಲಿ. ಆಗ ನಾನು ಸಂಬಂಧ ಇದೆಯೋ ಇಲ್ಲವೋ ಎಂಬುದನ್ನು ತೋರಿಸಿಕೊಡುತ್ತೇನೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಿಡಿಕಾರಿದರು.

    ಎರಡು ಬಾರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಸೋತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಇರುವ ತನಕ ಕಾಂಗ್ರೆಸ್ಸಿಗೆ ಶನಿಯೇ ಎಂದರು.

    ಮೈತ್ರಿ ಸರ್ಕಾರ ಪತನದ ಬಗ್ಗೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು ತಾಕತ್ತಿದ್ದರೆ ಅಮಿತ್ ಶಾ ಅವರು, ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಿ. ಇಲ್ಲವೆಂದಲ್ಲಿ ಅಮಿತ್ ಶಾ ಅವರ ಒಪ್ಪಿಗೆ ಇದೆ ಎಂದು ಆಗುತ್ತದೆ. ಅವರು ಹೇಳಿಯೇ 17 ಶಾಸಕರು ರಾಜೀನಾಮೆ ನೀಡಿರುವುದು ಎಂದಾಗುತ್ತದೆ. ಹೀಗಾಗಿ ಯಡಿಯೂರಪ್ಪ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಮಿತ್ ಶಾ ಸೂಚನೆಯಲ್ಲೇ ಸರ್ಕಾರ ಉರುಳಿಸಲಾಗಿತ್ತು. ಅಮಿತ್ ಶಾ ತಲೆಯಲ್ಲಿ ಬ್ರೈನ್ ಇರುವ ಮನುಷ್ಯ ಎಂದು ತಿಳಿಸಿದರು.