Tag: AmitShah

  • ಸಸ್ಪೆನ್ಸಲ್ಲೇ ಅಮಿತ್ ಶಾ ರಾಜ್ಯ ಪ್ರವಾಸ ಅಂತ್ಯ – ಮೋದಿ ರಿಟರ್ನ್ ಬಳಿಕ ದೊಡ್ಡ ನಿರ್ಧಾರನಾ?

    ಸಸ್ಪೆನ್ಸಲ್ಲೇ ಅಮಿತ್ ಶಾ ರಾಜ್ಯ ಪ್ರವಾಸ ಅಂತ್ಯ – ಮೋದಿ ರಿಟರ್ನ್ ಬಳಿಕ ದೊಡ್ಡ ನಿರ್ಧಾರನಾ?

    ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅವರ ರಾಜ್ಯ ಪ್ರವಾಸ ಬಿಜೆಪಿಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಮೊನ್ನೆ ಬಿಎಲ್ ಸಂತೋಷ್ ಆಡಿದ್ದ ನಿಗೂಢಾರ್ಥದ ಮಾತುಗಳು ಅಮಿತ್ ಶಾ ಭೇಟಿ ಬಗೆಗಿನ ಕುತೂಹಲವನ್ನು ಹೆಚ್ಚಿಸಿದ್ದವು.

    ಅಸೆಂಬ್ಲಿ ಚುನಾವಣೆ ಸನಿಹದಲ್ಲಿರುವ ಕಾರಣ ರಾಜ್ಯ ಬಿಜೆಪಿ ಮತ್ತು ಸರ್ಕಾರದ ಮಟ್ಟದಲ್ಲಿ ಹಾಗೇ ಆಗಬಹುದು. ಹೀಗೆ ಆಗಬಹುದು ಎಂಬ ಸುದ್ದಿಗಳು ಹಬ್ಬಿದ್ವು. ಅದ್ರಲ್ಲೂ ಮುಖ್ಯಮಂತ್ರಿಗಳು ಎಲ್ಲಾ ಶಾಸಕರಿಗೆ ಆಯೋಜಿಸಿದ್ದ ಭೋಜನ ಕೂಟ ನಾನಾ ಮಾತುಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದ್ರೇ, ಸದ್ಯ ಈ ದಿನದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಾಗಲಿ, ಸರ್ಕಾರದ ಮಟ್ಟದಲ್ಲಾಗಲಿ ಯಾವುದೇ ಬದಲಾವಣೆಗಳು ಆಗಿಲ್ಲ.

    ಖಾಸಗಿ ಹೋಟೆಲ್‍ನಲ್ಲಿ ನಿಗದಿ ಆಗಿದ್ದ ಅಮಿತ್ ಶಾ ನೇತೃತ್ವದ ಎರಡು ಸಭೆಗಳು ಕೂಡ ದಿಢೀರ್ ಎಂದು ರದ್ದಾಗಿವೆ. ಭೋಜನಕೂಟವೂ ಕೇವಲ 15 ನಿಮಿಷದಲ್ಲಿ ಮುಗಿದಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಮತ್ತು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಜೊತೆ ಒಂದೇ ಟೇಬಲ್‍ನಲ್ಲಿ ಕುಳಿತು ಅಮಿತ್ ಶಾ ಊಟ ಮುಗಿಸಿದ್ದಾರೆ.

    ಈ ಅವಧಿಯಲ್ಲೇ ಅಮಿತ್ ಶಾ ರಾಜ್ಯ ನಾಯಕರಿಗೆ ತಲುಪಿಸಬೇಕಾದ ಸಂದೇಶವನ್ನು ತಲುಪಿಸಿದ್ದಾರೆ. ಆದರೆ ಆ ಸಂದೇಶದ ಗುಟ್ಟು ರಟ್ಟಾಗಿಲ್ಲ. ಮೋದಿ ವಿದೇಶ ಪ್ರವಾಸ ಮುಗಿಸಿ ಬಂದ್ಮೇಲೆ ರಾಜ್ಯದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ದೊಡ್ಡ ನಿರ್ಧಾರ ಪ್ರಕಟವಾಗುವ ಸಂಭವ ಇದೆ. ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರು, ಯಾವುದೇ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಜಾರಿಕೊಂಡ್ರು. ಇದನ್ನೂ ಓದಿ: ಮುಂದಿನ ಒಲಿಂಪಿಕ್‌ಗಳಲ್ಲಿ ಹೆಚ್ಚು ಪದಕ ಗೆಲ್ಲುವ ಗುರಿ ನಮ್ಮದಾಗಬೇಕು: ಕ್ರೀಡಾಪಟುಗಳಿಗೆ ಅಮಿತ್ ಶಾ ಕರೆ

    ರಾಜ್ಯ ರಾಜಕೀಯದ ಬದಲಾವಣೆ ಚೆಂಡು ಸದ್ಯ ಪ್ರಧಾನಿ ಮೋದಿ ಅಂಗಳದಲ್ಲಿದೆ. ಅವರು ಯಾವ ನಿರ್ಧಾರ ತೆಗೆದುಕೊಳ್ತಾರೋ ಎಂಬ ಕುತೂಹಲ ಹುಟ್ಟಿಕೊಂಡಿದೆ. ಆದರೆ ರಾಜ್ಯ ಬಿಜೆಪಿ ಸಂಘಟನೆಗೆ ಒತ್ತು, ಬಿಜೆಪಿಗೆ ಫೈರ್‍ಬ್ರ್ಯಾಂಡ್ ಅಧ್ಯಕ್ಷ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಯುಪಿ ಮಾಡೆಲ್; ಮೂವರು ಡಿಸಿಎಂ, ಯುವ, ಹೊಸ ಮುಖಗಳಿಗೆ ಮಂತ್ರಿಗಿರಿ, ಮೂವರು ವಲಸಿಗರಿಗೆ ಕೊಕ್ ಮೊದ;ಆದ ವಿಚಾರಗಳ ಬಗ್ಗೆ ಚರ್ಚೆಯಾಗ್ತಿದೆ.

    ರಾಜ್ಯ ಸರ್ಕಾರ ಮತ್ತು ಪಕ್ಷದಲ್ಲಿ ಭಾರೀ ಬದಲಾವಣೆಗಳು ಆಗಲಿವೆ ಎಂಬ ಗುಸುಗುಸು ನಡುವೆ ರಾಜಕಾರಣಿಗಳಿಂದ ಮಾತಿನ ಮತಾಪುಗಳು ಸಿಡಿದ್ವು. ಮೇ 10ರೊಳಗೆ ಸಿಎಂ ಬದಲಾಗಬಹುದು ಎಂದು ಯತ್ನಾಳ್ ಬಾಂಬ್ ಹಾಕಿದ್ರು. ಆದರೆ ಪಕ್ಷದ ಉಳಿದ ನಾಯಕರು ಸಿಎಂ ಬೊಮ್ಮಾಯಿ ಪರವೇ ಬ್ಯಾಟ್ ಬೀಸಿದ್ರು. ಆದಷ್ಟು ಬೇಗ ಸಂಪುಟ ಸರ್ಜರಿ ಆಗಬಹುದು. ನಾಯಕತ್ವ ಬದಲಾವಣೆ ಅನ್ನೋದೆಲ್ಲಾ ಊಹಾಪೋಹ ಎಂದು ಬಿಎಸ್‍ವೈ ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ ಐರನ್ ಮ್ಯಾನ್, ಹಿಡಿದ ಕೆಲಸ ಬಿಡೋದಿಲ್ಲ: ಅನುರಾಗ್ ಠಾಕೂರ್

    ಅಶೋಕ್ ಕೂಡ ಯಾವ ಬದಲಾವಣೆಯೂ ಆಗಲ್ಲ. ಹಗಲುಗನಸು ಕಾಣಬೇಡಿ ಅಂದ್ರು. ನಾಯಕತ್ವ ಬದಲಾವಣೆ ಕಪೋಲಕಲ್ಪಿತ ಎಂದು ಅರುಣ್ ಸಿಂಗ್ ಹೇಳಿದ್ರು. ಭ್ರಮೆಲಿ ಇರೋರು ಮೊದಲು ಹೊರಬನ್ನಿ ಎಂದು ಕಟೀಲ್ ಎಚ್ಚರಿಸಿದ್ರು. ನಾನು ಸಂಪುಟ ಸೇರೋಕೆ ಅಂತಾ ಕೆಲಸ ಮಾಡ್ತಿಲ್ಲ ಎಂದು ವಿಜಯೇಂದ್ರ ಹೇಳಿಕೊಂಡ್ರು. ಡಿಕೆಶಿಯಂತೂ ನೀವೇನಾದ್ರೂ ಮಾಡ್ಕೊಳ್ರಪ್ಪ.. ಆದ್ರೆ ಜನತೆಗೆ ಒಳ್ಳೆ ಆಡಳಿತ ನೀಡಿ ಅಂತಾ ಸಲಹೆ ನೀಡಿದ್ರು.

  • ಅಮಿತ್ ಶಾ ಐರನ್ ಮ್ಯಾನ್, ಹಿಡಿದ ಕೆಲಸ ಬಿಡೋದಿಲ್ಲ: ಅನುರಾಗ್ ಠಾಕೂರ್

    ಅಮಿತ್ ಶಾ ಐರನ್ ಮ್ಯಾನ್, ಹಿಡಿದ ಕೆಲಸ ಬಿಡೋದಿಲ್ಲ: ಅನುರಾಗ್ ಠಾಕೂರ್

    ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐರನ್ ಮ್ಯಾನ್, ಹಿಡಿದ ಕೆಲ ಬಿಡುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

    ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ 2021 ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಭಾಷಣ ಪ್ರಾರಂಭ ಮಾಡಿದರು. ಅಮಿತ್ ಶಾ ಐರನ್ ಮ್ಯಾನ್. ಅವ್ರು ಹಿಡಿದ ಕೆಲಸ ಬಿಡೋದಿಲ್ಲ. ಗುಜರಾತ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಿದ್ದಾರೆ. ನವ ಭಾರತ ನಿರ್ಮಾಣದ ಕೆಲಸ ಮೋದಿ, ಅಮಿತ್ ಶಾ ಮಾಡ್ತಿದ್ದಾರೆ ಎಂದು ತಿಳಿಸಿದರು.

    ಖೇಲೋ ಇಂಡಿಯಾ ಪ್ರಧಾನಿಗಳ ಕಲ್ಪನೆ ಕ್ರೀಡಾಕೂಟ ಆಗಿದೆ. ಕೊರೊನಾದಿಂದ ಎರಡು ವರ್ಷ ಕ್ರೀಡಾಕೂಟ ನಡೆದಿರಲಿಲ್ಲ. ಇದೀಗ ಅತ್ಯಂತ ಯಶಸ್ವಿಯಾಗಿ ಕ್ರೀಡಾಕೂಟ ಮುಗಿದಿದೆ. 209 ವಿವಿಯ 3800 ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸಿದ್ದಾರೆ. ಎರಡು ರಾಷ್ಟ್ರೀಯ ದಾಖಲೆ ಕ್ರೀಡಾಕೂಟದಲ್ಲಿ ದಾಖಲಾಗಿದೆ ಎಂದರು.

    ಯೋಗ ಮತ್ತು ಮಲ್ಲಕಂಬ ಈ ಬಾರಿ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಮೋದಿ ಅವರ ಕರೆ ಮೇರೆಗೆ ಇಡೀ ವಿಶ್ವ ಯೋಗ ದಿನ ಆಚರಣೆ ಮಾಡುತ್ತದೆ. ಕಳೆದ ಕ್ರೀಡಾಕೂಟದ 76 ರೆಕಾರ್ಡ್ ಈ ಕ್ರೀಡಾಕೂಟದಲ್ಲಿ ಬ್ರೇಕ್ ಆಗಿದೆ. ಶಿವ ಶ್ರೀಧರ್ ಜೈನ್ ವಿವಿ 7 ಚಿನ್ನದ ಪದಕ ಪಡೆದಿದ್ದಾರೆ. ಇಂದು ಕಬ್ಬಡ್ಡಿ ಫೈನಲ್ ನಾನು ವೀಕ್ಷಣೆ ಮಾಡಿದೆ. ಕೆಲ ಆಟಗಾರರಿಗೆ ಪ್ರೊ ಕಬ್ಬಡ್ಡಿಯಲ್ಲಿ ಆಕ್ಷನ್ ನಲ್ಲಿ ಭಾಗವಹಿಸಲು ಸೇರಿಸಲಾಗಿದೆ. ಕರ್ನಾಟಕ ಸರ್ಕಾರ ಬೆಂಗಳೂರಿಗೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದರು.

    ಇದೇ ವೇಳೆ ಜೈನ್ ವಿವಿ 20 ಚಿನ್ನದ ಪದಕ ಪಡೆದಿದೆ. 200 ಮೀಟರ್ ಓಟದಲ್ಲಿ ಒಲಂಪಿಯನ್ ದ್ಯುತಿ ಚಾಂದ್ ಸೋಲಿಸಿ ಪ್ರಿಯಾ ಮೋಹನ್ ಚಿನ್ನದ ಪದಕ ಪಡೆದಿದ್ದಾರೆ ಎಂದು ಖೇಲೋ ಇಂಡಿಯಾದ ಸಾಧಕರ ವಿವರ ಹೇಳಿದರು. ಕಾರ್ಯಕ್ರಮದಲ್ಲಿ ಅಮಿತ್ ಶಾ, ನಟ ಸುದೀಪ್, ಸಂಸದ ತೇಜಸ್ವಿಸೂರ್ಯ, ಸಿಎಂ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸಚಿವ ನಾರಾಯಣಗೌಡ, ಆರಗ ಜ್ಞಾನೇಂದ್ರ, ಸಂಸದ ಪಿಸಿ ಮೋಹನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

  • ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆ: ಅಮಿತ್‌ ಶಾಗೆ ಸಿದ್ದು ತಿರುಗೇಟು

    ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆ: ಅಮಿತ್‌ ಶಾಗೆ ಸಿದ್ದು ತಿರುಗೇಟು

    ಬೆಂಗಳೂರು: ಹಿಂದಿ ಭಾಷೆ ಬಳಸುವಂತೆ ಅಮಿತ್ ಶಾ ಫರ್ಮಾನು ಹೊರಡಿಸಿರುವುದು ಅತ್ಯಂತ ಆಕ್ಷೇಪಾರ್ಹ ನಡವಳಿಕೆಯಾಗಿದೆ. ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲು, ಸಾಲು ಟ್ವೀಟ್ ಮಾಡುವ ಮೂಲಕವಾಗಿ ಗೃಹಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?: ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಂ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ. ನಮ್ಮ ಭಾಷಾ ನಿಲುವು ಮತ್ತು ದೇಶ-ರಾಜ್ಯಗಳ ಸಂಬಂಧವನ್ನು ರಾಷ್ಟ್ರಕವಿ ಕುವೆಂಪು ಅವರು ದಶಕಗಳ ಹಿಂದೆಯೇ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ. ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎನ್ನುವ ಕವಿ ನುಡಿಯೇ ನಮ್ಮ ಭಾಷಾ ಸಿದ್ಧಾಂತ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ.

    ಗುಜರಾತಿನಿಂದ ಬಂದಿರುವ ಅಮಿತ್ ಷಾ ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯವಾಗಿದೆ.

    ಅಮಿತ್‌ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅಮಿತ್ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತವಾಗಿದೆ. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

    ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್‌

    ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

     

  • ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ನವದೆಹಲಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ದೇಶದಲ್ಲಿ ಹಿಂದಿ ಬಳಕೆಯಾಗಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೀಗ ಸಚಿವ ಸಂಪುಟದ ಶೇ.70ರಷ್ಟು ಕಾರ್ಯಸೂಚಿ ಹಿಂದಿಯಲ್ಲೇ ಸಿದ್ಧವಾಗಿದೆ ಎಂದು ಸಭೆಗೆ ತಿಳಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭ್ರಷ್ಟಾಚಾರ ಕಿತ್ತೊಗೆಯುವ ಸಮಯ ಬಂದಿದೆ: ಕೇಜ್ರಿವಾಲ್

    Amith

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಧಿಕೃತ ಭಾಷೆಯಲ್ಲಿ ಸರ್ಕಾರ ಸಂವಹನ ನಡೆಸಬೇಕು ಎಂದು ನಿರ್ಧರಿಸಿದ್ದಾರೆ. ಇದು ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ದೇಶದ ಅಧಿಕೃತ ಭಾಷೆಯನ್ನು ಘೋಷಿಸುವ ಮೂಲಕ ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಬಂದಿದೆ. ಒಂದು ರಾಜ್ಯದ ಜನರು ಇನ್ನೊಂದು ರಾಜ್ಯದ ಜನರ ಜೊತೆ ಭಾರತದ ಭಾಷೆಯಲ್ಲೇ ಸಂವಹನ ಮಾಡಬೇಕು ಎಂದು ಅಮಿತ್ ಶಾ ಹೇಳಿದರು.

    ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನೇ ಬಳಸಬೇಕು ವಿನಾ: ಬೇರೆ ಭಾಷೆಯನ್ನಲ್ಲ. ಬೇರೆ ಭಾಷೆಯಲ್ಲಿರುವ ಪದಗಳನ್ನು ಹಿಂದಿಗೆ ತರುವ ಮೂಲಕ ಭಾಷೆಯನ್ನು ಸರಳಗೊಳಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಅಸ್ತಿತ್ವಕ್ಕಾಗಿ ಶಸ್ತ್ರಾಸ್ತ್ರ ಹಿಡಿಯುವಂತಾಗಿದೆ: ಯತಿ ನರಸಿಂಹಾನಂದ ವಿರುದ್ಧ ಖರ್ಗೆ ಕಿಡಿ 

    shah

    ಈಗಾಗಲೇ 8 ಈಶಾನ್ಯ ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಶಾನ್ಯದ 9 ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಗರಿಗೆ ಪರಿವರ್ತಿಸಿದ್ದಾರೆ. ಈಶಾನ್ಯದ ಎಲ್ಲ 8 ರಾಜ್ಯಗಳು ಶಾಲೆಗಳಲ್ಲಿ 10ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ. ಹೀಗಾಗಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆಯನ್ನೇ ಅನುಷ್ಠಾನಗೊಳಿಸಬೇಕು ಎಂದು ಅಮಿತ್ ಶಾ ಸಭೆಗೆ ತಿಳಿಸಿದ್ದಾರೆ.

  • ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ

    ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ

    ಬೆಂಗಳೂರು: ಎರಡು ದಿನಗಳ ಕಾರ್ಯಕ್ರಮ ಮೇರೆಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಆತ್ಮೀಯವಾಗಿ ಬರಮಾಡಿಕೊಂಡರು.

    ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಮಿತ್ ಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು, ಈ ವೇಳೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ ಹಾಗೂ ಸಿ.ಟಿ ರವಿ ಮತ್ತಿತರು ಸಿಎಂಗೆ ಸಾಥ್ ನಿಡಿದರು.

    ಎಚ್‍ಎಎಲ್ ಏರ್ ಪೋರ್ಟ್ ನಿಂದ ಶಾ ಅವರು ಮಧ್ಯಾಹ್ನದ ಊಟ ಮುಗಿಸಿ ಹೆಲಿಕಾಪ್ಟರ್ ನಲ್ಲಿ ಭದ್ರಾವತಿಗೆ ತೆರಳಿದ್ದಾರೆ. ಅಮಿತ್ ಷಾ ಜೊತೆ ವಿಶೇಷ ವಿಮಾನದಲ್ಲಿ ಸಿಎಂ, ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಷಿ ಕೂಡ ಭದ್ರಾವತಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

    ಇಂದು ಸಂಜೆ 5 ಗಂಟೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ವರ್ಚುವಲ್ ಮೂಲಕ ಪೊಲೀಸ್ ವಸತಿಗೃಹ ಉದ್ಘಾಟನೆ ಮಾಡಲಿದ್ದಾರೆ. ನಂತರ ವಿಜಾಪುರ ಐಆರ್‍ಬಿ ಸೆಂಟರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 6:15 ರಿಂದ 6.30 ರವರೆಗೆ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವರು ಉಪಸ್ಥಿತರಿರಲಿದ್ದಾರೆ.

    ಸಂಜೆ 6:30 ಕ್ಕೆ ಸಮಿತಿ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ (ಎಡಿಜಿಪಿ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗಳು) ನಡೆಸಲಿದ್ದು, 7:30 ಕ್ಕೆ ವಿಧಾನಸೌಧದಿಂದ ವಿಂಡ್ಸರ್ ಮ್ಯಾನರ್ ಹೋಟೆಲ್ ಗೆ ಶಾ ತೆರಳಲಿದ್ದಾರೆ. ಅಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿ ಬಳಿಕ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

  • ಮೋದಿ, ಅಮಿತ್ ಶಾ, ನಡ್ಡಾ ಹೆಸರಲ್ಲಿ ಮಹಾ ಮೋಸ- 100 ಕೋಟಿಗೂ ಅಧಿಕ ವಂಚನೆ

    ಮೋದಿ, ಅಮಿತ್ ಶಾ, ನಡ್ಡಾ ಹೆಸರಲ್ಲಿ ಮಹಾ ಮೋಸ- 100 ಕೋಟಿಗೂ ಅಧಿಕ ವಂಚನೆ

    ನವದೆಹಲಿ/ಬೆಂಗಳೂರು: ಪ್ರಧಾನಿ ಮೋದಿ ಗೊತ್ತು, ಅಮಿತ್ ಶಾ, ಜೆಪಿ ನಡ್ಡಾ ಎಲ್ಲರೂ ಗೊತ್ತು ಅಂತ ಯುವರಾಜ್ ಸ್ವಾಮಿ ಎಂಬ ಮಹಾನ್ ವಂಚಕ ಕೋಟ್ಯಂತರ ರೂಪಾಯಿ ವಂಚಿಸಿರೋದು ಬೆಳಕಿಗೆ ಬಂದಿದೆ. ಅಮಿತ್ ಶಾ ಸೂಚನೆ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಯುವರಾಜ್‍ನ ಮಹಾಮೋಸ ಎಳೆಎಳೆಯಾಗಿ ಬಯಲಾಗಿದೆ.

    ಹೌದು. ನೋಡೋಕೆ ಡೀಸೆಂಟ್ ಆಗಿ ಕಾಣಿಸೋ ಯುವರಾಜ ಸ್ವಾಮಿ ಎಂಬ ಐನಾತಿ ಗಿರಾಕಿ ಮಾಡಿರೋದು ಮಾತ್ರ ಎಲ್ಲರೂ ಬೆರಗಾಗೋ ವಂಚನೆ. ನಂಗೆ ಪ್ರಧಾನಿ ಮೋದಿ ಗೊತ್ತು, ಅಮಿತ್ ಶಾ ಗೊತ್ತು, ಜೆಪಿ ನಡ್ಡಾ ಎಲ್ಲಾ ಗೊತ್ತು ಅಂತ ಹೋದಾಗ ಬಂದಾಗ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೇ ತನ್ನ ಮನಿ ಮೇಕಿಂಗ್ ದಂಧೆಗೆ ದುರ್ಬಳಕೆ ಮಾಡಿಕೊಂಡಿದ್ದಾನೆ.

    ಓದಿದ್ದು ಅಲ್ಪಸ್ವಲ್ಪವಾದ್ರು ಮಾತು ಮಾತ್ರ ಸತ್ಯ ತಲೆ ಮೇಲೆ ಹೊಡೆದ ರೀತಿ ಮಾತನಾಡಿ ನಂಬಿಸ್ತಾ ಇದ್ದ. ರಾಜಕಾರಣಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳಿಗೆ ಈ ಉಂಡೆನಾಮ ಹಾಕಿಬಿಟ್ಟಿದ್ದಾನೆ. ಹಣವಂತರು ಅಂತ ಗೊತ್ತಾದರೆ ಸಾಕು ನಿಮ್ಮನ್ನೇ ಟಾರ್ಗೆಟ್ ಮಾಡಿ, ಮಕ್ಮಲ್ ಟೋಪಿ ಹಾಕೇ ಬಿಡ್ತಾನೆ.

    ಸಿಸಿಬಿ ಪೊಲೀಸರು ಆರೋಪಿ ಯುವರಾಜ್ ಸ್ವಾಮಿ ಪೂರ್ವ ಪರ ತಿಳಿದಾಗ ಬಿಜೆಪಿ ಮುಖಂಡರ ಫೋಟೊಗಳನ್ನ ತೋರಿಸಿ ನಿಗಮ ಮಂಡಳಿ, ಕೇಂದ್ರ ಸಚಿವ, ರಾಜ್ಯ ಸಭೆ ಸದಸ್ಯ ಮಾಡಿಸಿಕೊಡುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಯುವರಾಜ್ ಸ್ವಾಮಿಯ ವಂಚನೆ ಜಾಲ ರೋಚಕವಾಗಿದೆ. ವಿಮಾನಗಳಲ್ಲೇ ಡೀಲ್ ಮಾಡ್ತಿದ್ದ ಯುವರಾಜ ಸ್ವಾಮಿ, ದೆಹಲಿ-ಬೆಂಗಳೂರಿಗೆ ಪ್ಲೈಟ್‍ನಲ್ಲಿ ಸದಾ ಓಡಾಟ ಮಾಡ್ತಿದ್ದ. ರಾಜಕಾರಣಿಗಳ ಪಕ್ಕದಲ್ಲಿ ಸೀಟ್ ಪಡೆದು, ವಿವಿಧ ಆಸೆ ಹುಟ್ಟಿಸ್ತಿದ್ದ. 4 ಕೋಟಿ ಡೀಲ್ ಮಾಡಿದ್ರೆ 2 ಕೋಟಿ ಅಕೌಂಟ್‍ಗೆ, ಇನ್ನುಳಿದ 2 ಕೋಟಿ ಬ್ಲಾಕ್‍ನಲ್ಲಿ ತೆಗೆದುಕೊಳ್ತಿದ್ದ. ಇದೇ ರೀತಿಯಾಗಿ ಈತ ಹಲವು ಮಂದಿಗೆ ಟೋಪಿ ಹಾಕ್ತಿದ್ದ.

    ದೊಡ್ಡವರಿಗೆ ‘ಟೋಪಿ’
    ಕೇಸ್ 1: ಹಾಲಿ ಪ್ರಭಾವಿ ಸಚಿವರಿಗೆ ಫೇವರ್ ಹೆಸರಲ್ಲಿ ವಂಚನೆ
    ಕೇಸ್ 2: ಬೆಂಗಳೂರು ಮೂಲದ ಸಚಿವರಿಗೂ ವಂಚನೆ
    ಕೇಸ್ 3: ಮಾಜಿ ರಾಜ್ಯಸಭಾ ಸದಸ್ಯರಿಗೆ ಪುನಾರಾಯ್ಕೆ ಹೆಸರಲ್ಲಿ ದೋಖಾ
    ಕೇಸ್ 4: ಸಚಿವರ ಮೂವರು ಆಪ್ತರಿಗೆ ಕೋಟಿಗಟ್ಟಲೆ ವಂಚನೆ
    ಕೇಸ್ 5: ರಾಜ್ಯಪಾಲ ಹುದ್ದೆ ಕೊಡಿಸುವ ಅಮಿಷ
    ಕೇಸ್ 6: ಐಎಎಸ್ ಅಧಿಕಾರಿಗಳಿಗೂ ಫೇವರ್ ಹೆಸರಲ್ಲಿ ವಂಚನೆ
    ಕೇಸ್ 7: ನಿಗಮ-ಮಂಡಳಿ ಹೆಸರಲ್ಲಿ ನಾಮ
    ಕೇಸ್ 8: ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಹೆಸರಲ್ಲಿ ವಂಚನೆ

    ಆರೋಪಿ ಯುವರಾಜ್ ವಂಚನೆ ಬಗ್ಗೆ ಸಿಸಿಬಿಗೆ ಉದ್ಯಮಿ ಸುದೀಂದ್ರ ರೆಡ್ಡಿ ದೂರು ಕೊಟ್ಟಿದ್ರು. ಕೆಎಸ್‍ಆರ್‍ಟಿಸಿಯಲ್ಲಿ ಅಧ್ಯಕ್ಷ ಪಟ್ಟ ಕೊಡಿಸೋದಾಗಿ ರೆಡ್ಡಿಯಿಂದ ಒಂದು ಕೋಟಿ ಹಣ ಪಡೆದು ಮೊಸ ಮಾಡಿದ್ದ. ಸತತ 10 ಗಂಟೆ ಶೋಧಿಸಿದ ಸಿಸಿಬಿ, 90 ಕೋಟಿ ರೂ ಮೌಲ್ಯದ ಚೆಕ್ ಜೊತೆ 16 ಲಕ್ಷ ರೂಪಾಯಿ ನಗದು ಸೀಜ್ ಮಾಡಿದೆ. ಅಲ್ಲದೆ, ಆರ್‍ಎಸ್‍ಎಸ್, ಬಿಜೆಪಿ ನಾಯಕರ ಲೆಟರ್ ಹೆಡ್‍ಗಳು, ನಕಲಿ ಸೀಲ್‍ಗಳು ಸೇರಿ ಅಪಾರ ಪ್ರಮಾಣದ ದಾಖಲೆ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಆದರೆ ನಾನು ಯಾವುದೇ ಅಪರಾಧ ಮಾಡಿಲ್ಲ. ರಾಜಕೀಯ ಪ್ರೇರಿತ ಉದ್ದೇಶಪೂರ್ವಕವಾಗಿ ತೊಂದರೆ ಕೊಡಲಾಗುತ್ತಿದೆ. ಎಲ್ಲವನ್ನು ನ್ಯಾಯಾಲಯ ನೋಡಿಕೊಳ್ಳುತ್ತೆ. ಅಂತ ಸಿಸಿಬಿ ವಶದಲ್ಲಿರುವಾಗಲೇ ಯುವರಾಜ್ ಸ್ವಾಮಿ ಅಬ್ಬರಿಸಿದ್ದಾನೆ.

    ಅಂದಹಾಗೆ ರಾಜ್ಯದ ಪ್ರಭಾವಿ ರಾಜಕಾರಣಿಗೆ ರಾಜ್ಯಸಭಾ ಟಿಕೆಟ್ ಕೊಡಿಸೋದಾಗಿ ಈತ ವಂಚಿಸಿದ್ದ, 10 ಕೋಟಿ ಹಣ ಪಡೆದು ಟಿಕೆಟ್ ಕೊಡೋದಾಗಿ ಹೇಳಿದ್ದ, ಆದರೆ ಟಿಕೆಟೂ ಇಲ್ಲ. 10 ಕೋಟಿ ಹಣವೂ ವಾಪಸ್ ಬಂದಿಲ್ಲ. ಇದರಿಂದ ಸಿಟ್ಟಿಗೆದ್ದ ಆ ರಾಜಕಾರಣಿಯೇ ಬಿಜೆಪಿ ಹೈಕಮಾಂಡ್‍ಗೆ ದೂರು ಕೊಟ್ಟಿದ್ದರು. ಸಿಸಿಬಿಗೂ ಮಾಹಿತಿ ಕೊಟ್ಟಿದ್ದರು. ಕೊನೆಗೆ, ಅಮಿತ್ ಶಾ ಸೂಚನೆ ಮೇರೆಗೆ ಈ ಸಿಸಿಬಿ ಪೊಲೀಸರು ಕಾರ್ಯೋನ್ಮುಖರಾದರು ಅಂತಲೂ ತಿಳಿದು ಬಂದಿದೆ.

  • ಸಂಪುಟ ಸರ್ಜರಿಗೆ ಸೋಮವಾರ ಡೆಡ್‍ಲೈನ್ – ಇಲ್ಲವಾದಲ್ಲಿ ಡಿಸೆಂಬರ್‌ವರೆಗೆ ನೋ ಚಾನ್ಸ್..!

    ಸಂಪುಟ ಸರ್ಜರಿಗೆ ಸೋಮವಾರ ಡೆಡ್‍ಲೈನ್ – ಇಲ್ಲವಾದಲ್ಲಿ ಡಿಸೆಂಬರ್‌ವರೆಗೆ ನೋ ಚಾನ್ಸ್..!

    ಬೆಂಗಳೂರು: ಸಂಪುಟ ವಿಸ್ತರಣೆ ಇವತ್ತಾಗುತ್ತೆ, ನಾಳೆಯಾಗುತ್ತೆ ಅಂತ ಕಾಯ್ತಿರೋರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಸಂಪುಟ ಸರ್ಜರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಸಿಎಂ ದೆಹಲಿಯಿಂದ ವಾಪಸ್ಸಾಗಿ ಮೂರು ದಿನಗಳಾದರೂ ಸಿಎಂಗೆ ಇನ್ನೂ ವರಿಷ್ಠರಿಂದ ಕರೆ ಬಂದಿಲ್ಲ. ಸಿಎಂ ಮತ್ತು ಆಕಾಂಕ್ಷಿಗಳು ವರಿಷ್ಠರ ಕರೆಗಾಗಿ ಕಾಯುತ್ತಿದ್ದಾರೆ. ಇಂದು ಅಥವಾ ನಾಳೆ ಕರೆ ಬಂದ್ರೆ ಮಾತ್ರ ಸೋಮವಾರ ಸಂಪಟ ಸರ್ಜರಿ ಸಾಧ್ಯತೆಯಿದೆ.

    ಕರೆ ಬರದಿದ್ರೆ ಮತ್ತೆ ಸಂಪುಟ ಸರ್ಜರಿ ಮುಂದೂಡಿಕೆಯಾಗುವುದು ಫಿಕ್ಸ್. ಇಂದು, ನಾಳೆ ಕರೆ ಬರದಿದ್ರೆ ಸಂಪುಟಕ್ಕೆ ಸರ್ಜರಿ ಯಾವಾಗ ನಡೆಯುತ್ತೆ?, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರೋವರೆಗೂ ನಡೆಯಲ್ವಾ ವಿಸ್ತರಣೆ ಎಂಬ ಪ್ರಶ್ನೆಯೂ ಮೂಡಿದೆ.

    ಅಮಿತ್ ಶಾ ಅವರು ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿವರೆಗೂ ಸಂಪುಟ ಸರ್ಜರಿ ಅನುಮಾನ ಎಂಬಂತಾಗಿದೆ. ಈಗಾಗಲೇ ಕಮಲ ಪಾಳಯದಲ್ಲಿ ಕೂಡ ಅಮಿತ್ ಶಾ ಬರೋವರೆಗೂ ವಿಸ್ತರಣೆ ಡೌಟ್ ಅನ್ನೋ ಚರ್ಚೆ ನಡೀತಿದೆ.

    ಈ ಮಧ್ಯೆ ಅಮಿತ್ ಶಾ ಇಂದು ತಮಿಳುನಾಡಿಗೆ ಆಗಮಿಸಲಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ, ಸರ್ಕಾರದ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವ್ರಿಂದ ಮಾಹಿತಿ ಪಡೆಯುವ ಸಾಧ್ಯೆತೆಗಳಿವೆ. ಆದರೆ ಅಮಿತ್ ಶಾ, ರಾಜ್ಯ ಭೇಟಿವರೆಗೂ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡದಿರುವ ಸಾಧ್ಯತೆಯೇ ಹೆಚ್ಚಿದೆ. ಈ ಹೊಸ ಬೆಳವಣಿಗೆ ಸಚಿವಾಕಾಂಕ್ಷಿಗಳ ಟೆನ್ಷನ್ ಇನ್ನಷ್ಟು ಹೆಚ್ಚಿಸಿದೆ.

  • ಶಿರಾ, ಆರ್‍ಆರ್ ನಗರದಲ್ಲಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷ: ಮೋದಿ

    ಶಿರಾ, ಆರ್‍ಆರ್ ನಗರದಲ್ಲಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷ: ಮೋದಿ

    – ಕನ್ನಡದಲ್ಲಿಯೇ ಜನತೆಗೆ ಧನ್ಯವಾದ ಅರ್ಪಣೆ

    ನವದೆಹಲಿ: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರಧಾನಿ ಮೋದಿ ಕೂಡ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಜನತೆಗೆ ಧನ್ಯವಾದವನ್ನು ಸಮರ್ಪಿಸಿದ್ದಾರೆ.

    ಟ್ವಿಟ್‍ನಲ್ಲಿ ಪ್ರಧಾನಿ ಹೇಳಿದ್ದೇನು..?
    ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಬಿಎಸ್‍ವೈ ಜೀ ಅವರ ನೇತೃತ್ವದ ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನ:ದೃಢೀಕರಿಸುತ್ತದೆ. ಅಲ್ಲದೆ ನಮ್ಮ ಕಾರ್ಯಕರ್ತರ ಶ್ರಮ ಹಾಗೂ ಜನರ ಬೆಂಬಲಕ್ಕೆ ನನ್ನ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಗೃಹ ಸಚಿವ ಅಮಿತ್ ಶಾ ಕೂಡ ಕನ್ನಡದಲ್ಲಿಯೇ ಧನ್ಯವಾದ ತಿಳಿಸಿದ್ದರು. ಬಿಜೆಪಿಗೆ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕಕ್ಕೆ ಧನ್ಯವಾದಗಳು. ಉಪಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಡಿ ರಾಜ್ಯವು ಅಭಿವೃದ್ಧಿ ಸಾಧಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜರಾಜೇಶ್ವರಿ ನಗರದಲ್ಲಿ ಕುಸುಮಾಗೆ ಸೋಲು – ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು? 

    ಆರ್‍ಆರ್ ನಗರದಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿ ಸೇರ್ಪಡೆಯಾಗಿ ಚುನಾವಣಾ ಕಣದಲ್ಲಿದ್ದ ಮುನಿರತ್ನ 1,25,990 ಮತ ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್. 67,877 ಮತ ಪಡೆದಿದ್ದಾರೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಗೌಡ 76,564 ಮತ ಪಡೆದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಆರ್‌ಆರ್‌ನಗರ ಕುರುಕ್ಷೇತ್ರ ಗೆದ್ದ ಮುನಿರತ್ನ – ಗೆಲುವಿಗೆ ಕಾರಣವಾಗಿದ್ದು ಏನು?

  • ಬಿಎಸ್‍ವೈಗೆ ಸೋಂಕು ತಗುಲಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಗಿದೆ: ಹೆಚ್‍ಡಿಕೆ

    ಬಿಎಸ್‍ವೈಗೆ ಸೋಂಕು ತಗುಲಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಗಿದೆ: ಹೆಚ್‍ಡಿಕೆ

    – ಸಿಎಂ, ಗೃಹ ಸಚಿವರು ಬೇಗ ಗುಣಮುಖರಾಗಲಿ

    ಬೆಂಗಳೂರು: ಮುಖ್ಯಮಂತ್ರಿ ಎಸ್ ಯಡಿಯೂಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ವಿಚಾರ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಗಿದೆ. ಬಿಎಸ್ ಹಾಗೂ ಅಮಿತ್ ಶಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾರೈಸಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ, ಮುಖ್ಯಮಂತ್ರಿ ಬಿಎಸ್‍ವೈ ಅವರಿಗೆ ಕೊರೊನಾ ಸೋಂಕು ತಗುಲಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಕೊರೊನಾ ಸೋಂಕಿನಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಜನ ಸೇವೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳು ಅತ್ಯಂತ ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಈ ಮೂಲಕ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

    ಮುಖ್ಯಮಂತ್ರಿ, ಸಚಿವರು ಹಾಗೂ ಈ ಮಾರಕ ಸೋಂಕು ತಗುಲಿರುವ ಜನತೆ ಶೀಘ್ರ ಚೇತರಿಸಿಕೊಂಡು, ಈ ಸೋಂಕು ಮೆಟ್ಟಿನಿಲ್ಲುವ ಶಕ್ತಿ ದಯಪಾಲಿಸುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎಲ್ಲರ ಪ್ರಾರ್ಥನೆ, ಆಶೀರ್ವಾದ, ಸದಾಶಯ ನಿಮ್ಮೊಂದಿಗೆ ಇದೆ ಎಂದು ಹೆಚ್‍ಡಿಕೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

  • ದೆಹಲಿ ಚುನಾವಣೆ- ಆಮ್ ಅದ್ಮಿ, ಬಿಜೆಪಿಗಷ್ಟೆಯಲ್ಲ ಪ್ರಶಾಂತ್ ಕಿಶೋರ್‌ಗೂ ನಿರ್ಣಾಯಕ

    ದೆಹಲಿ ಚುನಾವಣೆ- ಆಮ್ ಅದ್ಮಿ, ಬಿಜೆಪಿಗಷ್ಟೆಯಲ್ಲ ಪ್ರಶಾಂತ್ ಕಿಶೋರ್‌ಗೂ ನಿರ್ಣಾಯಕ

    ನವದೆಹಲಿ: ದೇಶದ ಚುನಾವಣಾ ರಾಜಕಾರಣದಲ್ಲಿ ಮಹತ್ವದ ಹೆಸರು ಪ್ರಶಾಂತ್ ಕಿಶೋರ್. 2014ರ ಲೋಕಸಭೆ ಚುನಾವಣೆಯಲ್ಲಿ ಪರಿಚಯವಾದ ಈ ಹೆಸರು ಚುನಾವಣಾ ತಂತ್ರಗಾರಿಕೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು. ಈ ಚುನಾವಣಾ ಚಾಣಕ್ಯನಿಗೆ ದೆಹಲಿಯ ಚುನಾವಣೆ ಅತಿ ಮುಖ್ಯವಾಗಿದೆ.

    ದೆಹಲಿಯಲ್ಲಿ ಪ್ರಚಾರ ಅಂತ್ಯವಾಗಿದ್ದು, ಫೆಬ್ರವರಿ 8ಕ್ಕೆ ಮತದಾನ ನಡೆಯಲಿದೆ. ಫೆ.11ಕ್ಕೆ ಫಲಿತಾಂಶ ಹೊರ ಬರಲಿದ್ದು ಈ ಆಮ್ ಅದ್ಮಿ ಬಿಜೆಪಿ ನೇರ ಪೈಪೋಟಿ ನಡೆಸಿದೆ. ದಿಲ್ಲಿ ಗದ್ದುಗೆ ಕೇವಲ ಬಿಜೆಪಿ, ಆಪ್‍ಗೆ ಮಾತ್ರವಲ್ಲದೆ ಈ ಫಲಿತಾಂಶ ಚುನಾವಣೆಗಳ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ ಗೆ ಕೂಡ ನಿರ್ಣಾಯಕವಾಗಿದೆ.

    2014ರಲ್ಲಿ ರಾಜಕೀಯ ಉತ್ತುಂಗದಲ್ಲಿದ್ದ ಪ್ರಶಾಂತ್ ಕಿಶೋರ್ ಹೆಸರು ಸದ್ಯ ತೆರೆಮರೆಗೆ ಸರಿಯುತ್ತಿದೆ. ಮೋದಿ ಮೊದಲ ಸರ್ಕಾರದ ರಚನೆ ಅವಧಿಯಲ್ಲಿ ಗುಜರಾತ್ ಮಾಡೆಲ್, ಚಾಯ್ ಪೇ ಚರ್ಚಾ, ಹರ್ ಹರ್ ಮೋದಿ ಘರ್ ಘರ್ ಮೋದಿ, ಚಾಯ್ ವಾಲಾ ಹೀಗೆ ನಾನಾ ಕಸರತ್ತುಗಳ ಮೂಲಕ ಮೋದಿ ಜನಪ್ರಿಯತೆ ಹೆಚ್ಚಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದ್ದ ಈ ಚಾಣಕ್ಯ, ಸದ್ಯ ಬಿಜೆಪಿಯನ್ನು ತೊರೆದಿದ್ದಾರೆ.

    2015ರಲ್ಲಿ ಜೆಡಿಯು ಸೇರ್ಪಡೆಗೊಂಡಿದ್ದ ಅವರು ಬಿಹಾರದಲ್ಲಿ ನಿತೀಶ್ ಕುಮಾರ್ ಸಿಎಂ ಆಗಲು ತಂತ್ರಗಳನ್ನು ರೂಪಿಸಿದ್ದರು. ಬಳಿಕ ಪ್ರಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಅಮರಿಂದರ್ ಸಿಂಗ್‍ಗೆ ನೆರವು ನೀಡಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಾಧ್ಯವಾಗದಿದ್ದರೂ ಉತ್ತಮ ಪೈಪೋಟಿ ನೀಡುವತ್ತಾ ಪ್ರಯತ್ನ ಮಾಡಿದ್ದರು. ಇತ್ತಿಚೆಗೆ ನಡೆದ ಆಂಧ್ರಪ್ರದೇಶದ ಚುನಾವಣೆಯಲ್ಲೂ ಜಗನ್ ಮೋಹನ್ ರೆಡ್ಡಿಗೆ ರಾಜಕೀಯ ಸಲಹೆಗಳನ್ನು ಕಿಶೋರ್ ನೀಡಿದ್ದರು. ಇದನ್ನೂ ಓದಿ: ‘ಗೆಲ್ಲುವ ಕುದುರೆ’ಯ ಅಗತ್ಯ ನಮಗಿಲ್ಲ, ಚುನಾವಣೆಯ ತಂತ್ರಗಾರಿಕೆ ನಮಗೂ ಗೊತ್ತು

    ಸದ್ಯ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಡಿಎಂಕೆ ಹಾಗೂ ದೆಹಲಿಯಲ್ಲಿ ಆಮ್ ಅದ್ಮಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಒಂದು ಸಮಯದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಕಿಶೋರ್, ಸದ್ಯ ಬಿಜೆಪಿ ವಿರುದ್ಧದ ಪಕ್ಷಗಳ ಜೊತೆಗೆ ಸಕ್ರಿಯಗೊಂಡಿದ್ದಾರೆ. ಹೀಗಾಗಿ ದೆಹಲಿಯ ಫಲಿತಾಂಶ ಹೆಚ್ಚು ಪ್ರಶಾಂತ್ ಕಿಶೋರ್ ಗೆ ಮುಖ್ಯವಾಗಿದೆ.

    ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್‍ಗೆ ಚುನಾವಣಾ ಸಲಹೆಗಳನ್ನು ಪ್ರಶಾಂತ್ ಕಿಶೋರ್ ನೀಡುತ್ತಿದ್ದಾರೆ. ಚುನಾವಣೆ ತಿಂಗಳು ಮೊದಲೇ ಸಿದ್ಧತೆ ಮಾಡಿಕೊಂಡು ಪ್ರತಿ ಮನೆಗೂ ಕೇಜ್ರಿವಾಲ್ ಸರ್ಕಾರದ ಸಾಧನೆಗಳನ್ನು ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಮೋದಿ, ಅಮಿತ್ ಶಾ ಜನಪ್ರಿಯತೆ ಬಿಜೆಪಿ ಚುನಾವಣಾ ಗೆಲುವಿಗೆ ಕಾರಣ ಎಂದವರಿಗೆ ಬಿಜೆಪಿ ವಿರೋಧಿ ಪಕ್ಷಗಳನ್ನು ಗೆಲ್ಲಿಸುವ ಮೂಲಕ ಸವಾಲು ಹಾಕಲು ಪ್ರಶಾಂತ್ ಕಿಶೋರ್ ಗೆ ದೆಹಲಿ ಫಲಿತಾಂಶ ನಿರ್ಣಾಯಕ ಎನಿಸಿದೆ.