Tag: Amit sha

  • ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು

    ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು

    ನವದೆಹಲಿ: ಚನ್ನಪಟ್ಟಣ (Channapatna) ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ (New Delhi) ಮಹತ್ವದ ಚರ್ಚೆ ನಡೆದಿದೆ. ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ದೆಹಲಿಯಲ್ಲೇ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಜೊತೆಗೂ ಮಾತುಕತೆ ನಡೆಸಿದ್ದಾರೆ.

    ಈ ನಡುವೆ ಟಿಕೆಟ್ ಆಕಾಂಕ್ಷಿ, ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ (CP Yogeshwar) ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಬಿಜೆಪಿ ಹಿರಿಯ ನಾಯಕರನ್ನು ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅವರು ಲಾಬಿ ನಡೆಸುತ್ತಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

    ಕೇಂದ್ರ ನಾಯಕರ ಭೇಟಿ ಬಳಿಕ ಮಾತನಾಡಿದ ಬಿ.ವೈ ವಿಜಯೇಂದ್ರ, ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಲ್ಲುವ ಧೈರ್ಯ ಡಿ.ಕೆ ಶಿವಕುಮಾರ್ ಮಾಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲೂ ಚನ್ನಪಟ್ಟಣದಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಅವರದೇ ಪಕ್ಷದಲ್ಲಿ ಅವರನ್ನು ಸದೆಬಡಿಯುವ ಪ್ರಯತ್ನ ನಡೆಯುತ್ತಿದೆ. ಈ ಹಂತದಲ್ಲಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಅಮಿತ್ ಶಾ ಮತ್ತು ಕುಮಾರಸ್ವಾಮಿ ಜೊತೆಗೆ ಚರ್ಚಿಸಿದ್ದೇನೆ. ಒಮ್ಮತದ ಅಭ್ಯರ್ಥಿಯನ್ನು ಹಾಕಲಿದ್ದೇವೆ ಎಂದರು. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ ನಾನು ಗಂಭೀರವಾಗಿ ಪರಿಗಣಿಸಲ್ಲ: ಹೆಚ್‌ಡಿಕೆ

    ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಯಾರು ಸ್ಪರ್ಧಿಸಬೇಕು ಎನ್ನುವುದು ನಿರ್ಧಾರ ಮಾಡುತ್ತೇವೆ. ಬಿಜೆಪಿ -ಜೆಡಿಎಸ್ ಅನ್ನೋ ವಿಚಾರ ಅಲ್ಲಿ ಬರುವುದಿಲ್ಲ. ಮೈತ್ರಿ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮೊದಲ ಕೇಸ್‌ನಲ್ಲೇ ಪ್ರಜ್ವಲ್ ರೇವಣ್ಣಗೆ ಶಾಕ್ – ಹೊಳೆನರಸೀಪುರ ಪ್ರಕರಣದ ಜಾಮೀನು ಅರ್ಜಿ ವಜಾ

    ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದೇನೆ. ಕೇಂದ್ರ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡಲು ಇನ್ನು ಕಾಲಾವಕಾಶ ಬೇಕು. ಅಲ್ಲಿವರೆಗೂ ಗೆಲುವಿಗೆ ನಾವು ತಯಾರಿ ಮಾಡಿಕೊಳ್ಳುತ್ತೇವೆ. ಸ್ಪರ್ಧೆ ಬಗ್ಗೆ ಬಹುಪಾಲು ನಿರ್ಣಯ ಕುಮಾರಸ್ವಾಮಿ ಮಾಡುತ್ತಾರೆ. ಅವರ ಆಶೀರ್ವಾದ ಇಲ್ಲದೆ ಏನು ಆಗಲ್ಲ ಎಂದರು. ಇದನ್ನೂ ಓದಿ: ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ: ಸಂತೋಷ್ ಲಾಡ್

    ನನಗೆ ಜೆಡಿಎಸ್ ಸಿಂಬಲ್ ಸ್ಪರ್ಧೆ ಮಾಡಿ ಎಂದು ಯಾರೂ ಕೇಳಿಲ್ಲ. ಎರಡೂ ಪಕ್ಷದ ನಾಯಕರು ಚರ್ಚೆ ಮಾಡಬೇಕು. ಪಕ್ಷದಿಂದ ಟಿಕೆಟ್ ಸಿಗದೆ ಇದ್ದರೂ ಎನ್‌ಡಿಎಗೆ ನನ್ನ ಬೆಂಬಲವಿದೆ. ವರಿಷ್ಠರು ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ. ನಿಖಿಲ್ ಸ್ಪರ್ಧೆ ಮಾಡೋದಾದರೆ ನನ್ನ ಸಂಪೂರ್ಣ ಬೆಂಬಲ ಇದೆ. ನಾನು ಯಾವುದೇ ಒಳಸಂಚು ಮಾಡುವುದಿಲ್ಲ. ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಹನಿಟ್ರ್ಯಾಪ್ ನಡೆದಿಲ್ಲ: ಶಾಸಕ ಹರೀಶ್ ಗೌಡ ಸ್ಪಷ್ಟನೆ

    ಕಾಂಗ್ರೆಸ್‌ನಿಂದ ಡಿಕೆ ಶಿವಕುಮಾರ್ ಕುಟುಂಬದವರೇ ನಿಲ್ಲುತ್ತಾರೆ ಎಂಬುದು ನಮ್ಮ ಅಭಿಪ್ರಾಯ. ಅವರ ಕುಟುಂಬ ಸ್ಪರ್ಧಿಸಿದರೆ ದೊಡ್ಡ ಹೋರಾಟ ನಡೆಯಲಿದೆ. ಈ ನಡುವೆ ವಾರದಲ್ಲಿ ಎರಡು ದಿನ ಚನ್ನಪಟ್ಟಣದಲ್ಲಿ ಶಿವಕುಮಾರ್ ಠಿಕಾಣಿ ಹೂಡುತ್ತಿದ್ದಾರೆ. ಹಿಂದೆ ಚನ್ನಪಟ್ಟಣಕ್ಕೆ ತಿರುಗಿ ನೋಡದವರು ಮತ್ತೆ ಬಂದಿದ್ದಾರೆ. ಚನ್ನಪಟ್ಟಣದ ಮತದಾರರು, ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಇದೆ. ಅದನ್ನು ಬಿಟ್ಟು ಚನ್ನಪಟ್ಟಣಕ್ಕೆ ಬಂದು ಉಪಚುನಾವಣೆ ಗೆದ್ದು ರಾಜ್ಯ ಗೆಲ್ಲಬೇಕು ಎಂದುಕೊಂಡಿದ್ದಾರೆ. ಅದು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಉಸಿರಾಡುವ ಗಾಳಿಗೊಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ: ಸಿ.ಟಿ ರವಿ ಕಿಡಿ

  • ಉಗ್ರರ ದಾಳಿಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಸ್ಥಿತಿಗೆ ಮೋದಿ ಸರ್ಕಾರ ಬಂದಿದೆ: ವೀರಪ್ಪ ಮೊಯ್ಲಿ

    ಉಗ್ರರ ದಾಳಿಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಸ್ಥಿತಿಗೆ ಮೋದಿ ಸರ್ಕಾರ ಬಂದಿದೆ: ವೀರಪ್ಪ ಮೊಯ್ಲಿ

    -ಮತೀಯ ಧೋರಣೆಗಳಲ್ಲಿ ರಾಜಕೀಯ ಮಾಡುವುದೇ ಬಿಜೆಪಿಯ ಕೆಲಸ

    ಚಿಕ್ಕಬಳ್ಳಾಪುರ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅದನ್ನೂ ಕೂಡ ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಸ್ಥಿತಿಗೆ ಈಗಿನ ಮೋದಿ ಸರ್ಕಾರ ಬಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಾ. ಎಂ.ವೀರಪ್ಪ ಮೊಯ್ಲಿ ಅವರು ಕಿಡಿಕಾರಿದ್ದಾರೆ.

    ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ದಿಶಾ ಕಮಿಟಿ ಸಭೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನೋಡಿದರೆ ಮೋದಿಗೆ ಭಯ ಆತಂಕ ಶುರುವಾಗಿದೆ. ವಿಪಕ್ಷಗಳು ಒಗ್ಗಟ್ಟಿನಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ. ಈ ಬಾರಿ ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ. ಇದರಿಂದ ಹತಾಶಗೊಂಡ ಮೋದಿ ಹಾಗೂ ಅಮಿತ್ ಶಾ ಅವರು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಸಮ್ಮಿಶ್ರ ಸರ್ಕಾರ ಹಾಗೂ ಉಭಯ ಪಕ್ಷಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ಯಾವುದೇ ಭಿನ್ನಮತ ಇಲ್ಲ. ಜೆಡಿಎಸ್, ಕಾಂಗ್ರೆಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ 20ಕ್ಕೂ ಹೆಚ್ಚು ಎಂ.ಪಿ. ಸೀಟುಗಳನ್ನು ಗೆಲ್ಲುತ್ತೇವೆ ಇದರಿಂದ ಅಮಿತ್ ಶಾ ಹತಾಶರಾಗಿದ್ದಾರೆ. ಆದರಿಂದ ರಾಜ್ಯದಲ್ಲಿ 23 ಸೀಟು ಗೆದ್ದರೆ ರಾಜ್ಯ ಸರ್ಕಾರ ಬದಲಾಗುತ್ತೆ ಎಂದು ಹೇಳಿ, ಜನರಿಗೆ ಆಮಿಷ ಒಡ್ಡಿ ಮೋಸ ಮಾಡ್ತಿದ್ದಾರೆ ಅಂತ ಬಿಜೆಪಿ ವಿರುದ್ಧ ವೀರಪ್ಪ ಮೊಯ್ಲಿ ಹರಿಹಾಯ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧ ಗುರು ಪತ್ನಿಗೆ ಉದ್ಯೋಗ: ಸಿಎಂ ಎಚ್‍ಡಿಕೆ ಭರವಸೆ

    ಹುತಾತ್ಮ ಯೋಧ ಗುರು ಪತ್ನಿಗೆ ಉದ್ಯೋಗ: ಸಿಎಂ ಎಚ್‍ಡಿಕೆ ಭರವಸೆ

    ಹಾಸನ: ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ, ಗುರು ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ.

    ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೀರೂರಿನಲ್ಲಿ ಮಾತನಾಡಿದ ಅವರು, ಪುಲ್ವಾಮದಲ್ಲಿ ಉಗ್ರರ ದಾಳಿ ಆಗಬಾರದಿತ್ತು, ಇದು ಅತ್ಯಂತ ದುರಂತ ಮತ್ತು ಭಯಾನಕ ಕೃತ್ಯ. ಇಂದು ಪಾಕಿಸ್ತಾನದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು. ಒಟ್ಟಾಗಿ ಹೋರಾಡಬೇಕು. ದಾಳಿಯಲ್ಲಿ ಮೃತಪಟ್ಟ ಯೋಧರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ವೀರ ಮರಣ ಹೊಂದಿರುವ ಯೋಧ ಗುರು ಅವರ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಈ ಕುರಿತು ನಮ್ಮ ಜಿಲ್ಲಾ ಮಂತ್ರಿಗಳ ಹತ್ತಿರ ಚರ್ಚೆ ನಡೆಸಿದ್ದೇನೆ. ಗುರು ಅವರ ಪತ್ನಿ ಅವರ ವಿದ್ಯಾಭ್ಯಾಸದ ಕುರಿತು ಮಾಹಿತಿ ಪಡೆಯಲು ಮಂತ್ರಿಗಳಿಗೆ ಸೂಚಿಸಿದ್ದೇನೆ. ಅವರ ವಿದ್ಯಾರ್ಹತೆ ಮೇಲೆ ಉದ್ಯೋಗವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

    ಪದೇ ಪದೇ ಬಿಜೆಪಿಯವರು ಕ್ಲರ್ಕ್ ಎಂಬ ಮಾತು ಹೇಳ್ತಿದ್ದಾರೆ. ನಾನು ಕಾಂಗ್ರೆಸ್ಸಿನ ಕ್ಲರ್ಕ್ ಅಲ್ಲ, ರಾಜ್ಯದ ಜನರ ಕ್ಲರ್ಕ್. ಜನರ ಸಮಸ್ಯೆ ಬಗೆಹರಿಸಲು ಕ್ಲರ್ಕ್ ಆಗಿದ್ದೇನೆ ಎಂದು ಅಮಿತ್ ಶಾ ಅವರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.

    ಪ್ರೀತಂ ಗೌಡ ಮನೆಯ ಮೇಲೆ ನಡೆದ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆಯಲ್ಲಿ ಶಾಮೀಲಾದವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಬಿಜೆಪಿಯವರಿಗೆ ನೈತಿಕತೆ ಇಲ್ಲ. ಯಡಿಯೂರಪ್ಪರ ಆಡಿಯೋ ಕೇಳಿದರೆ ಎಲ್ಲರಿಗೂ ಗೊತ್ತಾಗುತ್ತದೆ ಅದು ಯಾರದ್ದು ಅಂತ. ಸ್ಪೀಕರ್‍ಗೆ ಹಣ ಕೊಟ್ಟಿದ್ದೀವಿ ಅಂತಾರೆ ಕಪ್ಪುಹಣ ಬಿಜೆಪಿಗೆ ಎಲ್ಲಿಂದ ಬಂತು? ಯಡಿಯೂರಪ್ಪರ ಆಡಿಯೋ ವಿಚಾರದ ಬಗ್ಗೆ ಅಮಿತ್ ಶಾ ಚರ್ಚಿಸಬೇಕಾಗಿತ್ತು. ಬಿಜೆಪಿಗೆ ಜನರ ಸಮಸ್ಯೆ ಬಗ್ಗೆ ಕಮಿಟ್‍ಮೆಂಟ್ ಇಲ್ಲ ಟೀಕಿಸಿದ್ದಾರೆ.

    ಬಿಜೆಪಿಯವರಿಗೆ ನನ್ನನ್ನು ಕೆಳಗಿಳಿಸಬೇಕು ಎಂಬ ಯೋಚನೆ ಇದೆ. ಆ ದೇವರು ನನಗೆ ಎಷ್ಟು ದಿನ ಅಧಿಕಾರದಲ್ಲಿ ಇರಬೇಕು ಅಂತಾ ಬರೆದಿದ್ದಾನೆ ನೋಡೋಣ. ಅಷ್ಟು ದಿನ ನಾನು ಸಿಎಂ ಆಗಿರುತ್ತೇನೆ. ಸರ್ಕಾರ ಸುಭದ್ರವಾಗಿದೆ ಅಸ್ಥಿರವಾಗಲ್ಲ. ನಾನು ಒಳ್ಳೆಯ ಸರ್ಕಾರ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸೋಲಿನ ಭೀತಿಯಿಂದ ಶಾ, ಮೋದಿ ನಿದ್ದೆ ಮಾಡ್ತಿಲ್ಲ: ಪಿ.ಟಿ ಪರಮೇಶ್ವರ್ ನಾಯ್ಕ್

    ಸೋಲಿನ ಭೀತಿಯಿಂದ ಶಾ, ಮೋದಿ ನಿದ್ದೆ ಮಾಡ್ತಿಲ್ಲ: ಪಿ.ಟಿ ಪರಮೇಶ್ವರ್ ನಾಯ್ಕ್

    ದಾವಣಗೆರೆ: ಪಂಚ ರಾಜ್ಯಗಳ ಫಲಿತಾಂಶ ಬಂದಾಗಿನಿಂದ ಮೋದಿ, ಅಮಿತ್ ಶಾ ನಿದ್ದೆ ಮಾಡುತ್ತಿಲ್ಲ. ವಾಮಮಾರ್ಗದ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಜರಾಯಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ ಕಿಡಿಕಾರಿದ್ದಾರೆ.

    ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿತ್ತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಬಿಜೆಪಿಯವರ ಆಪರೇಷನ್ ಕಮಲ ನಡೆಯೋದಿಲ್ಲ. ರಾಜ್ಯದ ಜನ ಕಾಂಗ್ರೆಸ್-ಜೆಡಿಎಸ್ ಪಕ್ಷದ ಪರವಾಗಿದ್ದಾರೆ. ಮೋದಿ ಹಾಗೂ ಅಮಿತ್ ಶಾಗೆ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿ ಇದೆ. ಆದರಿಂದ ಈ ರೀತಿ ಆಪರೇಷನ್ ಕಮಲ ಅಂತ ತಂತ್ರ ಮಾಡುತ್ತಿದ್ದಾರೆ. ಯಾವ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದಿದ್ದಾರೆ.

    ಸುಮ್ಮನೆ ಬಿಜೆಪಿಯವರು ಕಳೆದ 6 ತಿಂಗಳಿಂದ ಇದೇ ರೀತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕುಡಿಯಲು ನೀರು ಸಹ ಇಲ್ಲದೆ ಜನರು ಒದ್ದಾಡುತ್ತಿದ್ದಾರೆ. ಆದ್ರೆ ಬಿಜೆಪಿ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

    ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿ, ನನಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಯಾರು ಸಹ ಅಸಮಾಧಾನಗೊಂಡಿಲ್ಲ. ಅದರಲ್ಲೂ ಬಳ್ಳಾರಿಯಲ್ಲಿ ಯಾವ ಶಾಸಕರು ಸಹ ಬೇಸರಗೊಂಡಿಲ್ಲ. ಅಲ್ಲದೇ ಪಕ್ಷದಿಂದ ನಮಗೆ ಬುಲಾವ್ ಬಂದಿಲ್ಲ. ಆರಾಮಾಗಿ ಇಲ್ಲೇ ಇದ್ದೇನೆ ನೋಡಿ ಎಂದು ಪಿ.ಟಿ ಪರಮೇಶ್ವರ್ ನಾಯ್ಕ್ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

    ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

    ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಯಶ್‍ವಂತ ಸಿನ್ಹಾ ಅವರು ರಫೇಲ್ ಒಪ್ಪಂದ, ಮೇಕ್ ಇನ್ ಇಂಡಿಯಾ ವಿಚಾರವನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೋದಿ ವಿರೋಧಿ ಅಲ್ಲ. 2014ರಲ್ಲಿ ಸಕ್ರಿಯ ರಾಜಕಾರಣಕ್ಕೆ ನಾನು ಗುಡ್ ಬೈ ಹೇಳಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಉದ್ಯೋಗ ಇಲ್ಲದವರು ಮೋದಿ ಅವರನ್ನು ಟೀಕೆ ಮಾಡುವುದನ್ನು ಉದ್ಯೋಗ ಮಾಡಿಕೊಂಡಿದ್ದಾರೆಂದು ಹೇಳಿ ಅಮಿತ್ ಶಾ ವ್ಯಂಗ್ಯವಾಡಿದ್ದರು. ಹೀಗಾಗಿ ನನ್ನ ಧ್ವನಿ ಜೋರಾಯಿತು ಎಂದು ತಿಳಿಸಿದರು.

    ರಫೇಲ್ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಎಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದವನ್ನು ರದ್ದು ಮಾಡಿದ್ದು ಯಾಕೆ? ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ರದ್ದಾಗಿದ್ದು ಏಕೆ? ಕ್ಯಾಬಿನೆಟ್ ಗಮನಕ್ಕೂ ತಂದು ಈ ಡೀಲ್ ನಡೆದಿಲ್ಲ ಯಾಕೆ ಎಂದು ಸಿನ್ಹಾ ಪ್ರಶ್ನಿಸಿದರು.

    ಮೇಕ್ ಇನ್ ಇಂಡಿಯಾ ಅಂತಾ ಹೇಳುವವರು ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಯಾಕೆ? ಆ ಕಂಪೆನಿ ವಿರುದ್ಧ ನಾನು ಮಾತನಾಡಲಾರೆ ಯಾಕೆಂದರೆ 500 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲು ಮಾಡಬಹುದು. ರಫೇಲ್ ಒಪ್ಪಂದದಿಂದಾಗಿ ಎಚ್‍ಎಎಲ್ ಕಂಪೆನಿಗೆ ತುಂಬಾ ನಷ್ಟವಾಗಿದೆ. ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪೆನಿಗೆ ಅಹ್ವಾನ ಕೊಟ್ಟಿದ್ದು ಯಾಕೆ? ಈ ಆರೋಪದಲ್ಲಿ ಪ್ರಧಾನಿ ಮೋದಿ ಒಬ್ಬರೇ ಭಾಗಿಯಾಗಿದ್ದಾರೆ. ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ನಡುವೆ ಈ ಡೀಲ್ ನಡೆದಿದೆ ಅಂತಾ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು. ಈ ಎಲ್ಲ ಕಾರಣಗಳಿಗಾಗಿ ಪಿಎಂ ಮೋದಿ ವೈಯುಕ್ತಿಕವಾಗಿ ಇದಕ್ಕೆ ಜವಾಬ್ದಾರಿ ಆಗುತ್ತಾರೆ ಎಂದು ದೂರಿದರು.

    ಈ ವ್ಯವಹಾರ ಹೇಗೆ ನಡೆದಿದೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕು. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಬೇಕು. 20 ದಿನಗಳ ಹಿಂದೆ ನೋಂದಣಿ ಆದ ಕಂಪೆನಿಗೆ ಕೊಟ್ಟಿದ್ದು ಹೇಗೆ? ಆ ಕಂಪೆನಿಗೆ ಯುದ್ದ ವಿಮಾನ ತಯಾರಿಕೆಯ ಅನುಭವವೇ ಇಲ್ಲ. ಇಂತಹ ಕಂಪನಿಗೆ ಡೀಲ್ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.

    ಜಂಟೀ ಸಂಸದೀಯ ಸಮಿತಿಯಲ್ಲಿ ಇದರ ರಫೇಲ್ ಡೀಲ್ ಬಗ್ಗೆ ಚರ್ಚೆಯಾಗಬೇಕು. ಅಲ್ಲಿ ನಿರ್ಧಾರ ಮಾಡಿ ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಆಡಳಿತ ಪಕ್ಷದವರೇ ಸಮಿತಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಅನುಕೂಲ ಆಗುವುದಿಲ್ಲ. ಆದರೆ ಫಲಿತಾಂಶ ಏನು ಬರುತ್ತೆ ಎನ್ನುವುದನ್ನು ತಿಳಿದುಕೊಳ್ಳಬಹುದು. ನಾನು ಕೂಡ 2ಜಿ ಹಗರಣದ ಸಮಿತಿಯಲ್ಲಿ ಇದ್ದು, ಏನಾಯಿತು ಎನುವುದನ್ನು ತಿಳಿದಿಕೊಂಡೆ ಎಂದರು.

    ದೇಶವನ್ನು ಅಭಿವೃದ್ಧಿ ಮಾದರಿಯಲ್ಲಿ ನಡೆಸಿದರೆ ತನ್ನಷ್ಟಕ್ಕೆ ತಾನೇ ಮೇಕ್ ಇನ್ ಇಂಡಿಯಾ ಆಗುತ್ತದೆ. ಅದನ್ನು ಬಿಟ್ಟು ಭಾಷಣದಿಂದ ಮೇಕ್ ಇನ್ ಇಂಡಿಯಾ ಆಗಲ್ಲ ಎಂದು ಪ್ರಧಾನಿಗೆ ಟಾಂಗ್ ಕೊಟ್ಟ ಅವರು, ಪ್ರಜಾತಂತ್ರದ ಮೇಲೆ, ಪ್ರಜಾತಂತ್ರದ ಸಂಸ್ಥೆಗಳ ಮೇಲೆ ದಾಳಿ ಆದ ಕಾರಣ ನಾನು ಬಿಜೆಪಿ ತೊರೆದೆ. ನಾನು 2 ವರ್ಷ ವಿದೇಶಾಂಗ ಸಚಿವನಾಗಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ನನಗೆ ಸಂಪೂರ್ಣ ಸ್ವತಂತ್ರ ನೀಡಿದ್ದರು. ಆದರೆ ಪ್ರಧಾನಿ ಮೋದಿ ಕಳೆದ ನಾಲ್ಕು ವರ್ಷದಲ್ಲಿ ಯಾವತ್ತಾದರೂ ವಿದೇಶಾಂಗ ಸಚಿವೆಯನ್ನು ವಿದೇಶಕ್ಕೆ ಕರೆದೊಯ್ದೊದ್ದಿರಾ? ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಹಾಗೂ ಖಾತೆಯ ಹೆಸರಿಗೆ ಸೀಮಿತ ಎಂದು ಕಾಲೆಳೆದರು.

    ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ಒಂದೇ ಕಡೆ ಇವೆ. ಹಿಂದೆಂದೂ ಪ್ರಜಾಪ್ರಭುತ್ವದ ಅಂಗಗಳು ಇಷ್ಟು ದುರ್ಬಲವಾಗಿರುವುದನ್ನು ನಾನು ಕಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಯಶ್‍ವಂತ್ ಸಿನ್ಹಾ ವಾಗ್ದಾಳಿ ನಡೆಸಿದರು.

    ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು. ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದರು. ಈ ವರ್ಷದ ಏಪ್ರಿಲ್ ನಲ್ಲಿ ಬಿಜೆಪಿಯನ್ನು ಯಶ್‍ವಂತ್ ಸಿನ್ಹಾ ತೊರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv