Tag: Amethi

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ

    ನವದೆಹಲಿ: ಇಂದು ಲೋಕಸಮರದ ಮಹಾತೀರ್ಪಿನ ಹಿನ್ನೆಲೆ ಮತ ಏಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರಧಾನಿ ಅಭ್ಯರ್ಥಿಯಾಗಿರುವ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಭಾರಿ ಹಿನ್ನಡೆಯಾಗಿದೆ.

    ರಾಹುಲ್ ಗಾಂಧಿಯವರು ಅಮೆಥಿ ಹಾಗೂ ವಯನಾಡು ಎರಡು ಕ್ಷೇತ್ರದಿಂದ ಲೋಕಸಭಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ನಿಂತಿದ್ದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಆರಂಭಿಕ ಸುತ್ತುಗಳಲ್ಲಿ 5 ಸಾವಿರ ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

    ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆಯಲ್ಲಿದ್ದಾರೆ. ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ಕಣಕ್ಕೆ ಇಳಿದಿರುವ ಸೋನಿಯಾ ಗಾಂಧಿ ಮುನ್ನಡೆಯಲಿದ್ದಾರೆ.

  • ರಾಹುಲ್ ಪೌರತ್ವ ವಿವಾದ – ‘ಬಕ್ವಾಸ್’ ಎಂದ ಪ್ರಿಯಾಂಕ ಗಾಂಧಿ

    ರಾಹುಲ್ ಪೌರತ್ವ ವಿವಾದ – ‘ಬಕ್ವಾಸ್’ ಎಂದ ಪ್ರಿಯಾಂಕ ಗಾಂಧಿ

    ಅಮೇಥಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪೌರತ್ವದ ವಿವಾದ ಕುರಿತು ಕೇಂದ್ರ ಗೃಹ ಇಲಾಖೆ ನೀಡಿರುವ ನೋಟಿಸ್ ಬಗ್ಗೆ ಪ್ರಿಯಾಂಕ ಗಾಂಧಿ ಕಿಡಿಕಾರಿದ್ದಾರೆ.

    ಸಹೋದರ ರಾಹುಲ್ ಪರ ಅಮೇಥಿಯಲ್ಲಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕ ಗಾಂಧಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇಡೀ ದೇಶಕ್ಕೆ ರಾಹುಲ್ ಗಾಂಧಿ ಹಿಂದೂಸ್ತಾನಿ ಎಂಬುವುದು ಗೊತ್ತಿದೆ. ರಾಹುಲ್ ಭಾರತದಲ್ಲಿ ಹುಟ್ಟಿ ಬೆಳೆದಿದ್ದಾರೆ ಎಂಬುವುದು ತಿಳಿದಿದೆ. ಇಂತಹ ನಡೆ ಎಲ್ಲವೂ ‘ಬಕ್ವಾಸ್’ ಎಂದು ದೂರಿದರು.

    ರಾಹುಲ್ ಪೌರತ್ವ ವಿವಾದ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ನೀಡಿರುವ ದೂರನ್ನು ಸ್ವೀಕರಿಸಿ ಕೇಂದ್ರ ಗೃಹ ಇಲಾಖೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‍ಗೆ 15 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿದ್ದರು. ಇದನ್ನು ಓದಿ: ರಾಹುಲ್ ಗಾಂಧಿ ‘ಪೌರತ್ವ ವಿವಾದ’ – ವಿವರಣೆ ಕೇಳಿ ಗೃಹ ಇಲಾಖೆಯಿಂದ ನೋಟಿಸ್

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ರಾಷ್ಟ್ರೀಯತೆಯ ಪಾಠವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

    70 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬಿಜೆಪಿ ಪದೇ ಪದೇ ಹೇಳಿಕೆ ನೀಡುತ್ತಿರುವುದರ ವಿರುದ್ಧ ಸಿಂಗ್ ಹರಿಹಾಯ್ದರು. ಅಲ್ಲದೆ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ವಿಮಾನದವರೆಗಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಮಾಡಲಾಗಿತ್ತು ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್ಸನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ 10 ವರ್ಷ (2004-2014) ರವರೆಗೆ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.

    ರಫೇಲ್ ಯುದ್ಧ ವಿಮಾನ ವಿವಾದವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ನವಜೋತ್ ಸಿಂಗ್ ಅವರು ಮೊದಲು ಬಿಜೆಪಿಯಲ್ಲಿದ್ದು, ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದೀಗ ಅವರು ಪಂಜಾಬ್ ಸಚಿವರಾಗಿದ್ದಾರೆ.

  • ಸ್ಮೃತಿ ಇರಾನಿ ಮತದಾರರಿಗೆ ಸೀರೆ, ಶೂ ನೀಡುತ್ತಿದ್ದಾರೆ: ಪ್ರಿಯಾಂಕ ಆರೋಪ

    ಸ್ಮೃತಿ ಇರಾನಿ ಮತದಾರರಿಗೆ ಸೀರೆ, ಶೂ ನೀಡುತ್ತಿದ್ದಾರೆ: ಪ್ರಿಯಾಂಕ ಆರೋಪ

    ಲಕ್ನೋ: ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಮತರಾರಿಗೆ ಹಣ, ಸೀರೆ ಹಾಗೂ ಶೂ ಹಂಚುತ್ತಿದ್ದಾರೆ ಎಂದು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ದೂರಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ಮೃತಿ ಇರಾನಿಯವರು ತಮ್ಮ ಕ್ಷೇತ್ರದಲ್ಲಿ ಮಾಧ್ಯಮಗಳ ಮುಂದೆಯೇ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ, ಇದು ತಪ್ಪು. ಅಮೇಥಿಯ ಜನರು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ರಾಯ್‍ಬರೇಲಿ ಹಾಗೂ ಅಮೇಥಿಗೆ ನಾನು ಸಾಕಷ್ಟು ಬಾರಿ ಬಂದಿದ್ದೇನೆ. ಇಲ್ಲಿನ ಜನರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ : ಅಣ್ಣ ತಂಗಿಯರ ಅನುಬಂಧಕ್ಕೆ ತಾಜಾ ಉದಾಹರಣೆಯಾದ್ರು ರಾಹುಲ್-ಪ್ರಿಯಾಂಕ ಗಾಂಧಿ

    ಬಿಜೆಪಿಯವರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಜನರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ಇಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸಮಸ್ಯೆಗಳು ಸ್ಪಷ್ಟವಾಗಿ ಕಾಣುತ್ತವೆ. ಈ ಬಗ್ಗೆ ಕಾಳಜಿವಹಿಸಿ ಪರಿಹಾರ ಕಂಡುಕೊಳ್ಳುವುದು ಸರ್ಕಾರ ಜವಾಬ್ದಾರಿ. ಆದರೆ ಬಿಜೆಪಿ ನಾಯಕರು ಜನರ ಸಮಸ್ಯೆಗಳನ್ನ ಆಲಿಸುತ್ತಿಲ್ಲ ಎಂದು ದೂರಿದರು.

    ಅಮೇಥಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. 1967ರಿಂದ 2014ರ ವರೆಗೆ ನಡೆದ ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳ ಪೈಕಿ ಎರಡು ಬಾರಿ ಮಾತ್ರ ಕಾಂಗ್ರೆಸ್ ಪರಾಜಯಗೊಂಡಿದೆ. ಅಷ್ಟೇ ಅಲ್ಲದೆ ಈ ಕ್ಷೇತ್ರದಿಂದ 2009 ಹಾಗೂ 2014 ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಜಯಗಳಿಸಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಭದ್ರಕೋಟೆ ಒಡೆಯಲು ಬಿಜೆಪಿ ಮುಂದಾಗಿದೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

  • ನಾಮಪತ್ರ ವಿವಾದ – ರಾಹುಲ್ ಗಾಂಧಿಗೆ ಬಿಗ್ ರಿಲೀಫ್

    ನಾಮಪತ್ರ ವಿವಾದ – ರಾಹುಲ್ ಗಾಂಧಿಗೆ ಬಿಗ್ ರಿಲೀಫ್

    ನವದೆಹಲಿ: ಉತ್ತರ ಪ್ರದೇಶದ ಅಮೇಥಿಯ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಲ್ಲಿಕೆ ಮಾಡಿದ್ದ ನಾಮಪತ್ರ ಅಂಗಿಕೃತವಾಗಿದ್ದು, ಈ ಕುರಿತು ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

    ರಾಹುಲ್ ನಾಮಪತ್ರ ಸಲ್ಲಿಕೆ ಬಳಿಕ ಪಕ್ಷೇತರ ಅಭ್ಯರ್ಥಿ ದ್ರುವಲಾಲ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ಶಿಕ್ಷಣ, ದಾಖಲೆಗಳು, ರಾಷ್ಟ್ರೀಯತೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ದೇಶದ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ದ್ರುವಲಾಲ್ ಮನವಿ ಮಾಡಿದ್ದರು.

    ರಾಹುಲ್ ಗಾಂಧಿ ಅವರ ವಿರುದ್ಧ ಆರೋಪಗಳು ಕೇಳಿ ಬರುತ್ತಿದಂತೆ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ನಾಮಪತ್ರ ಪರಿಶೀಲನೆ ದಿನಾಂಕವನ್ನು ಏ.22ಕ್ಕೆ ಮುಂದೂಡಿದ್ದರು.

    ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರು ಕೂಡ ರಾಹುಲ್ ಹೆಸರು ಪ್ರಸ್ತಾಪ ಮಾಡಿ ಕಾಲೆಳೆದಿದ್ದರು. ರಾಹುಲ್ ಗಾಂಧಿ ಅವರ ಮೂಲ ಹೆಸರು ರಾಹುಲ್ ವಿಂಚಿ ಎಂಬುವುದು ಎಲ್ಲರ ಕಾಂಗ್ರೆಸ್ ನಾಯಕರಿಗೂ ತಿಳಿದಿದೆ. ಅದ್ದರಿಂದ ಜನರ ಮುಂದೇ ಬರುವ ಮೊದಲು ರಾಹುಲ್, ಪ್ರಿಯಾಂಕ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಿಡಿಕಾರಿದ್ದರು.

    ಸದ್ಯ ರಾಹುಲ್ ಗಾಂಧಿ ಅವರ ನಾಮಪತ್ರ ಅಮೇಥಿಯಲ್ಲಿ ಸಿಂಧು ಆಗಿರುವ ಪರಿಣಾಮ ವಯನಾಡಿನಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗಿದೆ. ರಾಹುಲ್ ನಾಮಪತ್ರಕ್ಕೂ ಮುನ್ನ ಅಮೇಥಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸಲ್ಲಿಸಿದ್ದ ಶೈಕ್ಷಣಿಕ ದಾಖಲೆ ಬಗ್ಗೆಯೂ ದೂರು ಬಂದಿತ್ತು. ಆದರೆ ಶಿಕ್ಷಣದ ಕುರಿತು ಸಲ್ಲಿಕೆ ಮಾಡಿರುವ ದಾಖಲೆಗಳ ಅಡಿ ಅವರ ನಾಮಪತ್ರ ತಿರಸ್ಕರಗೊಳಿಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿತ್ತು. ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಾಗಿದ್ದು, ಮೇ 6 ರಂದು ಮತದಾನ ನಡೆಯಲಿದೆ. ಮೇ 23ಕ್ಕೆ ಲೋಕಸಭಾ ಫಲಿತಾಂಶ ಪ್ರಕಟವಾಗಲಿದೆ.

  • ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

    ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

    ನವದೆಹಲಿ: ಅಮೇಥಿ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರ ಪರಿಶೀಲನೆ ದಿನಾಂಕವನ್ನು ಏಪ್ರಿಲ್ 22ಕ್ಕೆ ಮುಂದೂಡಿದ್ದಾರೆ.

    ಪಕ್ಷೇತರ ಅಭ್ಯರ್ಥಿ ದ್ರುವ ಲಾಲ್ ಎಂಬವರು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ದಾಖಲೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ್ರುವ್ ಲಾಲ್ ಪರ ವಕೀಲ ರವಿ ಪ್ರಕಾಶ್ ಅವರು, ರಾಹುಲ್ ನಾಮಪತ್ರದ ದಾಖಲೆಗಳಲ್ಲಿ ಕೆಲ ಮೂಲಭೂತ ಪ್ರಶ್ನೆಗಳು ಉದ್ಭವವಾಗಿದೆ ಎಂದಿದ್ದಾರೆ.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣಾಯಲ್ಲಿ ಸ್ಪರ್ಧೆಗೆ ಅವಕಾವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

    ರಾಹುಲ್ ಗಾಂಧಿ ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ಪ್ರಜೆ ಆಗಿದ್ದಾರೆ? ಈಗ ಭಾರತೀಯ ಪೌರತ್ವ ಹೇಗೆ ಪಡೆಕೊಂಡಿದ್ದಾರೆ? ಈ ಬಗ್ಗೆ ಸ್ಪಷ್ಟತೆ ಬೇಕು ಎಂಬುವುದು ರವಿ ಪ್ರಕಾಶ್ ಅವರ ಮನವಿ ಆಗಿದೆ. ಅಲ್ಲದೇ 2003-09 ವರೆಗಿನ ಅವಧಿಯಲ್ಲಿ ಯುಕೆ ಕಂಪನಿ ಬಗೆಗಿನ ಆದಾಯದ ಬಗ್ಗೆ ಚುನಾವಣಾ ನಾಮಪತ್ರದಲ್ಲಿ ಮಾಹಿತಿ ನೀಡಿಲ್ಲ ಎಂದು ದೂರಿದ್ದಾರೆ.

    ಇದೇ ವೇಳೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆಯೂ ಸಂದೇಹವನ್ನು ವ್ಯಕ್ತಪಡಿಸಿದ್ದು, ಪ್ರಮಾಣ ಪತ್ರದಲ್ಲಿ ರಾಹುಲ್ ವಿಂಚಿ ಎಂಬ ಹೆಸರಿದ್ದು, ರಾಹುಲ್ ಗಾಂಧಿ ಎಂದು ನಮೂದಿಸಿಲ್ಲ. ರಾಹುಲ್ ವಿಂಚಿ, ಗಾಂಧಿ ಇಬ್ಬರು ಒಬ್ಬರೇ ಎಂಬುವುದು ಸ್ಪಷ್ಟವಾಗಬೇಕು ಎಂದಿದ್ದಾರೆ. ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಾಗಿದ್ದು, ಮೇ 6 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 23ಕ್ಕೆ ಫಲಿತಾಂಶ ಲಭ್ಯವಾಗಲಿದೆ.

  • ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

    ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

    – ಅಮೇಥಿ ರ್ಯಾಲಿ ಮೇಲೆ ಭದ್ರತಾ ಲೋಪ – ಕಾಂಗ್ರೆಸ್ ಆರೋಪ
    – ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ
    – ಮಾಧ್ಯಮಗಳ ವರದಿ ಆಧಾರಿಸಿ ಗೃಹ ಸಚಿವಾಲಯದಿಂದ ಸ್ಪಷ್ಟನೆ

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಬರೆದ ಪತ್ರಕ್ಕೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

    ರಾಹುಲ್ ಗಾಂಧಿಗೆ ನೀಡಲಾದ ಭದ್ರತೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನಮಗೆ ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ. ಆದರೂ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ವರದಿಯಾಗಿದೆ. ಆದರೆ ಈ ಲೇಸರ್ ಲೈಟ್ ಎಐಸಿಸಿಯ ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಕ್ಯಾಮೆರಾದ ಬೆಳಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

    ಕಾಂಗ್ರೆಸ್ ಮಾಡಿದ ಆರೋಪದಂತೆ ರಕ್ಷಣೆ ನೀಡುವಲ್ಲಿ ಯಾವುದೇ ರೀತಿಯ ಲೋಪ ಆಗಿಲ್ಲ. ಸೂಕ್ತ ವ್ಯವಸ್ಥೆಗಳನ್ನೇ ಸಿದ್ಧಪಡಿಸಿಕೊಂಡೇ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿತ್ತು. ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ವೇಳೆ ಅದು ಮೊಬೈಲ್ ಕ್ಯಾಮೆರಾ ಬೆಳಕು ಎಂಬುವುದು ತಿಳಿದು ಬಂದಿದೆ. ಎಐಸಿಸಿ ಛಾಯಾಗ್ರಾಹಕ ಮೊಬೈಲ್ ಫೋನ್ ಬಳಿಸಿ ಶೂಟ್ ನಡೆಸುತ್ತಿದ್ದದ್ದು ಖಚಿತವಾಗಿದ್ದು ವಿಶೇಷ ರಕ್ಷಣಾ ಪಡೆಯ ನಿರ್ದೇಶಕರು ಕೂಡ ಈ ವಿಚಾರವನ್ನು ತಿಳಿಸಿದ್ದಾರೆ ಸಚಿವಾಲಯ ಸ್ಪಷ್ಟನೆ ನೀಡಿದೆ.

    ಕಾಂಗ್ರೆಸ್ ಪತ್ರದಲ್ಲಿ ಏನಿತ್ತು?
    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿತ್ತು.

    ಕಾಂಗ್ರೆಸ್ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ಉಲ್ಲೇಖಿಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಾಹುಲ್ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಿಳಿಸಿತ್ತು.

    ಲೇಸರ್ ಗ್ರೀನ್ ಲೈಟ್ ರಾಹುಲ್ ಗಾಂಧಿ ಅವರ ತಲೆ ಮೇಲೆ ಸುಮಾರು 7 ಬಾರಿ ಅತಿ ಕಡಿಮೆ ಅವಧಿಯಲ್ಲಿ ಬಿದ್ದಿರುವುದು ದೃಢವಾಗಿದೆ. ಅಲ್ಲದೇ ದೇವಾಲಯದ ಭೇಟಿ ಸಂದರ್ಭದಲ್ಲಿ ಅವರ ಎಡಭಾಗದ ತಲೆ ಮೇಲೆ 2 ಬಾರಿ ಲೇಸರ್ ಬೆಳಕು ಕಾಣಿಸಿತ್ತು ಎಂದು ವಿವರಿಸಲಾಗಿದೆ. ಈ ಪತ್ರದಲ್ಲಿ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಹಿ ಇತ್ತು.

  • ವಿಶೇಷ ಪೂಜೆ ಬಳಿಕ ನಾಮಪತ್ರ ಸಲ್ಲಿಸಿದ ಸ್ಮೃತಿ  ಇರಾನಿ

    ವಿಶೇಷ ಪೂಜೆ ಬಳಿಕ ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ

    ಲಕ್ನೋ: ಸಚಿವೆ, ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಸ್ಮೃತಿ ಇರಾನಿ ಅವರು ಪತಿ ಜುಬಿನ್ ಇರಾನಿ ಜೊತೆಗೆ ಪೂಜೆ ಸಲ್ಲಿಸಿದರು. ಬಳಿಕ ಅಮೇಥಿ ನಗರದಲ್ಲಿ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ಥಳೀಯ ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಸಾವಿರಾರು ಜನರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಮೃತಿ ಇರಾನಿ ಪರ ಘೋಷಣೆ ಕೂಗಿದರು.

    ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ಮೃತಿ ಇರಾನಿ ಅವರು, ಈ ಭಾಗದ ಜನರ ಸೇವೆ ಮಾಡಲು ಹೆಚ್ಚಿನ ಆಕಾಂಕ್ಷೆ ಹೊಂದಿದ್ದೇನೆ. ಹೀಗಾಗಿ ಮತದಾರರು ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ದೇಶದ ಜನರ ಆಶೀರ್ವಾದದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮತ್ತೆ ಸ್ಪರ್ಧೆಗೆ ಇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಪಕ್ಷದ ನಿರ್ಧಾರವಾಗಿದೆ. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಭಾರೀ ಪೈಪೋಟಿ ನಡೆಯಲಿದೆ ಎಂದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದ ಮೂರು ಬಾರಿ ಜಯಗಳಿಸಿದ್ದಾರೆ. ಅವರು ಕೂಡ ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರಿಗೆ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕ ಗಾಂಧಿ ಸಾಥ್ ನೀಡಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.

  • ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.

    ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ, ಉತ್ತರ ಪ್ರದೇಶದ ಅಮೇಥಿ ಜೊತೆ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

    ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಕಾಂಗ್ರೆಸ್ ನಾಯಕರಾದ ರಣ್‍ದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಲು ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.

    ರಾಹುಲ್ ಗಾಂಧಿಯವರ ಸ್ಪರ್ಧೆ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯ ಜನರು ನಿಮ್ಮನ್ನು ತಿರಸ್ಕರಿಸಿದ್ದು, ಇಲ್ಲಿಯ ಸಿಂಹಾಸನ ಖಾಲಿ ಮಾಡಿ ಎಂದು ಭಾಗ್ ರಾಹುಲ್ ಭಾಗ್ ಎಂದು ವ್ಯಂಗ್ಯ ಮಾಡಿದ್ದರು. ಸ್ಮೃತಿ ಇರಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎ.ಕೆ.ಆಂಟನಿ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮತ್ತು ವಾರಣಾಸಿ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಹಾಗಾದ್ರೆ ಅಂದು ಮೋದಿ ಅವರಿಗೆ ಗುಜರಾತಿನಲ್ಲಿ ಸೋಲಿನ ಭೀತಿ ಕಾಣಿಸಿತ್ತಾ? ಎರಡು ಕ್ಷೇತ್ರಗಳಲ್ಲಿ ಗೆಲುವಿನ ಬಳಿಕ ಗುಜರಾತ್ ಕ್ಷೇತ್ರವನ್ನು ತೊರೆದರು. ಸ್ಮೃತಿ  ಇರಾನಿ ಅವರನ್ನು ದೆಹಲಿಯ ಚಾಂದಿನಿ ಚೌಕ್ ಮತ್ತು ಅಮೇಥಿಯ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಇದೀಗ ಮತ್ತೊಮ್ಮೆ ಸ್ಮೃತಿ  ಇರಾನಿ ಸೋಲು ಕಾಣಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಗೆಲವು ಕಾಣುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದರು ಎಂದು ಕೇರಳದ ಕಾಂಗ್ರೆಸ್ ಮುಖಂಡ ಚೆನ್ನಿತಾಲಾ ಹೇಳಿದ್ದರು.

    ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದರು.

    ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದರು.

  • ಅಮೇಥಿ ಜೊತೆಗೆ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ?

    ಅಮೇಥಿ ಜೊತೆಗೆ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ?

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಜೊತೆಗೆ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಕಾಂಗ್ರೆಸ್ ಇಂದು ತಿಳಿಸಿದೆ.

    ಕರ್ನಾಟಕ ಅಥವಾ ತಮಿಳುನಾಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದಾರೆ. ಈ ಬೆನ್ನಲ್ಲೇ ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿಯ ಜೊತೆಗೆ ವಯನಾಡು ಕ್ಷೇತ್ರದಿಂದ ಕೂಡ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚೆನ್ನಿಥಾಲಾ ಅವರು, ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಈ ಕುರಿತು ಇಂದು ಮತ್ತೆ ಮನವಿಯನ್ನು ಸಲ್ಲಿಸಿದ್ದೇವೆ. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದರು.

    ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತನಾಡಿ, ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

    ಈ ಬಾರಿಯೂ ಬಿಜೆಪಿಯು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಮತ್ತೆ ಕಣಕ್ಕೆ ಇಳಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.