ಬೆಂಗಳೂರು: ಭಾರೀ ಸುದ್ದಿಯಾಗಿದ್ದ ಆಂಬಿಡೆಂಟ್ ಪ್ರಕರಣದ ಅಸಲಿಯತ್ತು ಗೊತ್ತಿದ್ದರೂ ಸಿಸಿಬಿ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯವರ ತಲೆಗೆ ಕಟ್ಟಿದ್ಯಾಕೆ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿದೆ.
ಇಡೀ ಪ್ರಕರಣದ ವಿವರಣೆಯನ್ನು ಆರೋಪಿ ಶಾರೀಖ್ ಸಿಸಿಬಿ ಮುಂದೆ ಹೇಳಿದ್ದಾನೆ. ಹೀಗಾಗಿ ಆಂಬಿಡೆಂಟ್ ಪ್ರಕರಣದಲ್ಲಿ ಇಡಿ ಅಧಿಕಾರಿಗೆ ಡೀಲ್ ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ.
ಶಾರೀಖ್ ಹೇಳಿದ್ದೇನು..?
ಜನಾರ್ದನ ರೆಡ್ಡಿ ಡೀಲ್ ಮಾಡ್ತೀನಿ ಅಂತ ಹೋಟೆಲ್ ಅಲ್ಲಿ ಹಣ ಪಡೆದು ಕೈಕಟ್ಟಿ ಕುಳಿತು ಬಿಟ್ಟರು. ಆದ್ರೆ, ಆಂಬಿಡೆಂಟ್ ಮಾಲೀಕ ಫರೀದ್, ಜನಾರ್ದನ ರೆಡ್ಡಿಯನ್ನು ಬೆದರಿಸಿ ಕೇಳೋಕೆ ಆಗ್ತಾ ಇರ್ಲಿಲ್ಲ. ಆದ್ದರಿಂದ ಡೀಲ್‍ನ ಮತ್ತೊಂದು ಸುಪಾರಿಯನ್ನು ಅಶ್ರಫ್ ಆಲಿ ಪಡೆದಿದ್ದನು ಎಂದಿದ್ದಾನೆ.
ಬೆಂಗಳೂರಿನ ಅಶ್ರಫ್ ಆಲಿ ಡೀಲ್ ಪಡೆದು ಇಡಿ ಅಧಿಕಾರಿಗಳೊಂದಿಗೆ ವ್ಯವಹಾರ ಕುದುರಿಸಿದ್ದರು. ವುಡ್ ಲ್ಯಾಂಡ್ಸ್ ಹೋಟೆಲ್‍ನಲ್ಲಿ ಅಶ್ರಫ್ ಅಲಿ ಮತ್ತು ಶಾರೀಖ್, ನಿವೃತ್ತ ಇಡಿ ಅಧಿಕಾರಿ ಗಂಗಾಧರಯ್ಯ ಅವರನ್ನು ಭೇಟಿ ಮಾಡಿ ಡೀಲ್ ಮಾಡಿದ್ದರು. ಹೀಗಾಗಿ ನಿವೃತ್ತ ಅಧಿಕಾರಿಯು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಇಡಿ ಅಧಿಕಾರಿ ನೀರಜ್ ಜೊತೆ ಸಂಪರ್ಕ ಹೊಂದಿದ್ದರು. ಹಾಗೆಯೇ ನೀರಜ್ ನ ಭೇಟಿ ಮಾಡಿ ಫರೀದ್ ಕೇಸ್ ನಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡು ಒಂದೂವರೆ ಕೋಟಿ ಬೇಡಿಕೆಯಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಅಶ್ರಫ್ ಅಲಿ ಮತ್ತು ಶಾರೀಖ್ 75 ಲಕ್ಷ ಹಣದೊಂದಿಗೆ ನೀರಜ್ ನ ಭೇಟಿ ಮಾಡಿದ್ದರು. ಈ ವೇಳೆ ಒಂದೂವರೆ ಕೋಟಿ ಡೀಲ್ ಅಲ್ಲಿ 75 ಲಕ್ಷ ಮಾತ್ರ ತಂದಿದ್ದಕ್ಕೆ ನೀರಜ್ ಕುಮಾರ್ ಗರಂ ಆಗಿದ್ದರು. ಹಣ ಪೂರ್ತಿ ಕೊಡದೆ ಯಾವುದೇ ಕೆಲಸ ಮಾಡಿ ಕೊಡೋದಿಲ್ಲ ಎಂದು ಬೆದರಿಕೆ ಹಾಕಿದ್ದರು. ಇಡಿ ಅಧಿಕಾರಿ ಮಾತಿಗೆ ಬೆದರಿದ ಅಶ್ರಫ್ ಅಲಿ ಮತ್ತು ಶಾರೀಖ್ ಮತ್ತೆ ಮಲ್ಲೇಶ್ವರಂನ ನಟರಾಜ್ ಎಂಬವರಿಂದ 75 ಲಕ್ಷ ಹಣ ಪಡೆದಿದ್ದರು.
ಬಳಿಕ ಸನ್ಮಾನ್ ಹೋಟೆಲ್ ಬಳಿ ನೀರಜ್ ಕುಮಾರ್ ಅವರಿಗೆ ಒಂದೂವರೆ ಕೋಟಿ ಹಣ ಸಂದಾಯ ಮಾಡಿದ್ದರು ಅಂತ ಶಾರೀಖ್ ಸಿಸಿಬಿ ಪೊಲೀಸರ ಮುಂದೆ ಇಡಿ ಡೀಲ್ ಬಾಯಿಬಿಟ್ಟಿದ್ದಾನೆ. ಹಣ ಪಡೆದ ನೀರಜ್ ಕುಮಾರ್ ಪ್ರಸ್ತುತ ಗೌಹಾಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಶಾರೀಖ್ ತಿಳಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಬೀದರ್: ಆಂಬಿಡೆಂಟ್ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಬೀದರ್‍ನಲ್ಲಿ ಕಮಿಷನ್ ಆಸೆಗೆ 200 ಕೋಟಿ ಜಮೆ ಮಾಡಿಸಿ ಏಜೆಂಟರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರು ಯಾವಾಗ ಬಂದು ಹಲ್ಲೆ ಮಾಡ್ತಾರೆ ಎಂಬ ಭಯಕ್ಕೆ ಈಗಾಗಲೇ 4 ಜನ ಎಜೆಂಟರ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು. ಪಿಎಸಿಎಲ್ ಇಂಡಿಯನ್ ಲಿಮಿಟೆಡ್ ಅನ್ನೋ ಕಂಪನಿ ಕೋಟ್ಯಂತರ ಜನಕ್ಕೆ ಮೋಸ ಮಾಡಿದೆ. ರಿಯಲ್ ಎಸ್ಟೇಟ್ ಇನ್ಸುರೆನ್ಸ್ ಪಾಲಿಸಿ ಮಾಡಿಸಿದ್ರೆ ನಿಮ್ಮ ಹಣ ಡಬಲ್ ಮಾಡಿಕೊಡ್ತೀವಿ. ಕಡಿಮೆ ರೇಟ್‍ಗೆ ಸೈಟ್ ಪಡೆಯಬಹುದು ಹಂಗೆ ಹಿಂಗೆ ಅಂತ ರೀಲ್ ಬಿಟ್ಟು ಜನರಿಗೆ ವಂಚಿಸಿದೆ.
ಬೀದರ್‍ನಲ್ಲಿ ಕೂಡ 10 ಸಾವಿರ ಏಜೆಂಟರುಗಳು ಜನರಿಂದ ಕೋಟ್ಯಂತರ ರೂ. ಹಣ ಜಮೆ ಮಾಡಿಸಿದ್ದಾರೆ. ಆದ್ರೆ ಕಂಪನಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿಕೊಂಡು ಹೋಗಿದ್ರಿಂದ ಈಗ ಜನ ನಮ್ ಕಾಸು ವಾಪಸ್ ಕೊಡಿ ಅಂತ ಏಜೆಂಟರುಗಳ ಬೆನ್ನು ಬಿದ್ದಿದ್ದಾರೆ. ಇದ್ರಿಂದ ಭಯಗೊಂಡಿರೋ 4 ಮಂದಿ ಏಜೆಂಟರುಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ ಏಜೆಂಟರುಗಳಿಗೂ ಜೀವಭಯ ಶುರುವಾಗಿದೆ ಅಂತ ಏಜೆಂಟ್ ರಮೇಶ್ ಬಚಾರೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಸರ್ಕಾರದಿಂದ ಪರವಾನಗಿ ಪಡೆದು ಕಮಿಷನ್ ಆಸೆಗೆ ಕಂಪನಿಗೆ ಸೇರಿಕೊಂಡು ಸರಿಯಾಗಿ ಕೆಲಸ ಮಾಡಿದ್ರೂ ಏಜೆಂಟರುಗಳಿಗೆ ಇದೀಗ ಈ ಗತಿ ಬಂದಿದೆ. ಈಗಾಗಲೇ ಸುಪ್ರೀಂಕೋರ್ಟ್ ಲೋಧಾ ಕಮಿಟಿ ಪಿಎಸಿಎಲ್ ಕಂಪನಿ ಮಾಲೀಕ ನಿರ್ಮಲ್ ಸಿಂಗ್ ಭಂಗು ಆಸ್ತಿಯನ್ನು ಮಾರಾಟ ಮಾಡಿ ಫಲಾನುಭವಿಗಳಿಗೆ ಹಣ ಹಂಚಿಕೆಯಾಗ್ಬೇಕು ಅಂತ ಆದೇಶಿಸಿದೆ. ಆದ್ರೂ ಫಲಾನುಭವಿಗಳಿಗೆ ಹಣ ಕೊಟ್ಟಿಲ್ಲ. ಹಾಗಾಗಿ ಜನರು ಏಜೆಂಟರ ಮನೆ ಬಾಗಿಲಿಗೆ ಬಂದಿದ್ದಾರೆ ಅಂತ ಮತ್ತೊಬ್ಬ ಏಜೆಂಟ್ ಸುನೀಲ್ ಪೂಜಾರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿ ಏಜೆಂಟರ್‍ಗಳ ಸಂಕಷ್ಟಕ್ಕೆ ಕಾರಣವಾದ ಕಂಪನಿಯಿಂದ ಆದಷ್ಟು ಬೇಗ ಪರಿಹಾರ ಕೊಡಿಸಿ ಏಜೆಂಟರ್‍ಗಳಿಗೆ ಮುಕ್ತಿ ನೀಡಬೇಕಿದೆ.
ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಕೇಸಲ್ಲಿ ಜೈಲಿಗೆ ಹೋಗಿದ್ದ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯಿಂದ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾಗುತ್ತಾ ಅನ್ನೋ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.
ಜನಾರ್ದನ ರೆಡ್ಡಿ ಬಂಧನ ತಪ್ಪಿಸಲು ಕಾಂಗ್ರೆಸ್ ನ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಯತ್ನಿಸಿದ್ದಾರೆ ಅನ್ನೋ ಮಾಹಿತಿಯೊಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
ರೆಡ್ಡಿ ಬಂಧನಕ್ಕೆ ಬಲೆ ಬೀಸುತ್ತಲೇ ರಮೇಶ್ ಜಾರಕಿಹೊಳಿ ಮೂಲಕ ಸಿಎಂ ಮೇಲೆ ರಾಮುಲು ಒತ್ತಡ ಹೇರಿದ್ದಾರಂತೆ. ಸಿಎಂ ಕುಮಾರಸ್ವಾಮಿ ಜೊತೆ ಆತ್ಮಿಯ ಒಡನಾಟ ಹೊಂದಿರುವ ರಮೇಶ್ ಜಾರಕಿಹೊಳಿಯಿಂದ ಈ ಒತ್ತಡ ತಂತ್ರ ಹೂಡಲಾಗಿದೆ. ಆದರೆ ರೆಡ್ಡಿ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ನೀವು ಸುಮ್ಮನಿರಿ ಅಂತ ಕುಮಾರಸ್ವಾಮಿ ಹೇಳಿದ್ದು, ಕೊನೆಗೆ ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಒತ್ತಡ ಹೇರಲು ಪ್ರಯತ್ನ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.
ರೆಡ್ಡಿ ಅರೆಸ್ಟ್ ಆದ್ರೆ ರಾಮುಲು ಅವರ ವಾಲ್ಮೀಕಿ ಸಮುದಾಯ ಮುನಿಸಿಕೊಳ್ಳಬಹುದು ಎಂದು ಪರೋಕ್ಷ ಬೆದರಿಕೆ ಹಾಕಲಾಗಿತ್ತು. ನಮಗೂ ಕಷ್ಟ ಆಗುತ್ತೆ. ಮುಂದಿನ ದಿನಗಳಲ್ಲಿ ಇದು ಬೇರೆ ಬೆಳವಣಿಗೆಗಳಿಗೂ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಮುಖ್ಯಮಂತ್ರಿಯವರು ಸೊಪ್ಪು ಹಾಕಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿಲ್ಲ. ಈ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ದೊಸ್ತಿ ಸರ್ಕಾರಕ್ಕೆ ಕಂಟಕ ಎದುರಾಗುತ್ತಾ ಅನ್ನೋ ಚರ್ಚೆಗಳು ಆರಂಭವಾಗಿದೆ.
ಬೆಂಗಳೂರು: ಒಂದು ವಾರ ಸಿಗದೆ ಕಾಡಿದ ಮಾಜಿ ಸಚಿವ ಗಣಿದಣಿ ಜನಾರ್ದನ ರೆಡ್ಡಿಗೆ ಸಿಸಿಬಿ ತಡರಾತ್ರಿವರೆಗೂ ಪ್ರಶ್ನೆಗಳ ಸುರಿಮಳೆ ಸುರಿಸಿದೆ. ತಡರಾತ್ರಿ 2 ವರೆಗೂ ರೆಡ್ಡಿಗೆ ಸಿಸಿಬಿ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆದಿದೆ.
ಪ್ರಕರಣದ ಕುರಿತಂತೆ ಸಿಸಿಬಿಗೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ರೆಡ್ಡಿ ಬಂಧನಕ್ಕೆ ಬೇಕಾಗಿರುವ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಶನಿವಾರ ಸಂಜೆ 4 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೂ ಸಿಸಿಬಿ ರೆಡ್ಡಿ ಹೇಳಿಕೆಯನ್ನು ಪಡೆದಿದೆ. ಸತತ 10 ಗಂಟೆಗಳ ಕಾಲ ರೆಡ್ಡಿಯನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ರೆಡ್ಡಿ, ಅಲಿಖಾನ್, ಫರೀದ್ ಹೇಳಿಕೆಯಲ್ಲಿ ವ್ಯತ್ಯಾಸ ಬರುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಮತ್ತೊರ್ವ ವ್ಯಕ್ತಿಯನ್ನು ಕರೆ ತಂದಿದ್ದು, ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡದಿಂದ ಮತ್ತೊಬ್ಬ ವ್ಯಕ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಹೊರಬೀಳುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದ್ದು, ಶನಿವಾರ ಮಧ್ಯಾಹ್ನ ತಮ್ಮ ವಕೀಲ ಚಂದ್ರಶೇಖರ್ ಜೊತೆ ಸಿಸಿಬಿಗೆ ಹಾಜರಾಗಿದ್ದರು. ಇದಕ್ಕೂ ಮೊದಲು ವಿಡಿಯೋ ಮಾಡಿ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದರು. ವಿಡಿಯೋದಲ್ಲಿ ಕಳೆದ ನಾಲ್ಕು ದಿನಗಳಿಂದ ನನ್ನ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿದ್ದವು. ಈ ಸಂಬಂಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ವಕೀಲರ ಸಲಹೆಯ ಮೇರೆಗೆ ಈ ವಿಡಿಯೋವನ್ನು ಮಾಡಿದ್ದೇನೆ. ಪೊಲೀಸರು ಕೆಟ್ಟ ಉದ್ದೇಶದಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಿಸಿಬಿ ಕಚೇರಿಗೆ ಹೋಗಿ ಸ್ಪಷ್ಟನೆ ನೀಡಲು ತೀರ್ಮಾನಿಸಿದಾಗ, ವಕೀಲರು ನಮಗೆ ಯಾವುದೇ ನೋಟಿಸ್ ನೀಡಿಲ್ಲ ಮತ್ತು ಎಫ್‍ಐಆರ್ ನಲ್ಲಿ ನಿಮ್ಮ ಹೆಸರಿಲ್ಲ. ಯಾವ ಕಾರಣಕ್ಕಾಗಿ ಸಿಸಿಬಿಗೆ ಹೋಗಬೇಕೆಂದು ತಿಳಿಸಿದ್ದರು ಅಂತ ಹೇಳಿದ್ದರು.
ಈ ಮೊದಲು ವಕೀಲ ಚಂದ್ರಶೇಖರ್ ಮಾತನಾಡಿ, ಅಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಜನಾರ್ದನ ರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ಅಲ್ಲದೇ ಅದೇ ಪೊಲೀಸ್ ಪ್ರಕರಟಣೆಯಲ್ಲಿ ರೆಡ್ಡಿ ವಿರುದ್ಧ ಕೆಲವೊಂದು ಆರೋಪಗಳನ್ನು ಕೂಡ ಮಾಡಿದ್ದರು. ಆದ್ರೆ ಅವೆಲ್ಲವೂ ಸತ್ಯಕ್ಕೆ ದೂರವಾದದ್ದಾಗಿದೆ. ವಿನಾಕಾರಣ ಸಿಸಿಬಿಯವರು ಜನಾರ್ದನ ರೆಡ್ಡಿ ಮೇಲೆ ಆರೋಪ ಮಾಡಿದ್ದಾರೆ. ಆದ್ರೆ ಸಿಸಿಬಿ ನೋಟಿಸ್ ಜಾರಿ ಮಾಡಲಿಲ್ಲ. ಹೀಗಾಗಿ ನೀವು ನೋಟಿಸ್ ಜಾರಿ ಮಾಡಿ ಅಂತ ಕೇಳಿಕೊಂಡಿದ್ದೆವು. ನೋಟಿಸ್ ಜಾರಿ ಮಾಡದೇ ನಾವು ವಿಚಾರಣೆಗೆ ಹಾಜರಾಗುವುದ ಹೇಗೆ ಅಂತ ಪ್ರಶ್ನಿಸಿದ್ದೆವು. ಹೀಗಾಗಿ ಇದೀಗ ಸಿಸಿಬಿ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸದ್ಯ ನಾವು ಸಿಸಿಬಿಗೆ ಹಾಜರಾಗುತ್ತೇವೆ. ಈ ಕೇಸ್ ನಲ್ಲಿ ಪ್ರತಿ ಹಂತದಲ್ಲಿಯೂ ವಿಚಾರಣೆಗೆ ಸಂಪೂರ್ಣವಾಗಿ ಸಿದ್ಧರಿದ್ದೇವೆ. ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಅಂತ ಹೇಳಿದ್ದರು.
ಬೆಂಗಳೂರು: ಆಂಬಿಡೆಂಟ್ ಹಗರಣದ ಡೀಲ್ ಮಾಸ್ಟರ್, ಗಣಧಣಿ-ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಿಸಿಬಿ ಪೊಲೀಸರಿಗೆ ಇನ್ನೂ ಚಳ್ಳೆಹಣ್ಣು ತಿನ್ನಿಸ್ತಲೇ ಇದ್ದಾರೆ. ರೆಡ್ಡಿ ಬೇಟೆಗೆ ಸಿಸಿಬಿ ತಂಡಗಳಾಗಿ ಬೆಂಗಳೂರು, ಬಳ್ಳಾರಿ, ಚಿತ್ರದುರ್ಗದ ಮೊಳಕಾಲ್ಮೂರು, ದೂರದ ಹೈದ್ರಾಬಾದ್‍ಗೆ ತೆರಳಿದ್ದರೂ ಸಣ್ಣ ಸುಳಿವೂ ಸಿಕ್ಕಿಲ್ಲ. ಹಾಗಾಗಿ, ರೆಡ್ಡಿ ತಲಾಶ್‍ಗೆ ಹೈದರಾಬಾದ್ ಪೊಲೀಸರ ಮೊರೆ ಹೋಗಿದ್ದಾರೆ.
ಮೊಬೈಲ್ ಟ್ರಾಪ್ ಪ್ಲಾನ್ ಮಾಡಿದರೂ ಸಿಸಿಬಿ ಸೋತಿದೆ. ಮೊಳಕಾಲ್ಮೂರಿನಲ್ಲೇ ರೆಡ್ಡಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಜ್ಞಾತ ಸ್ಥಳದಿಂದಲೇ ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ನಲ್ಲಿ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಈ ಮಧ್ಯೆ, ಜಾರಿ ನಿರ್ದೇಶನಾಲಯ ಎಂಟ್ರಿ ಸಾಧ್ಯತೆ ದಟ್ಟವಾಗಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಕೋರಿದೆ. ಜನವರಿಯಲ್ಲಿ ಫರೀದ್ ಅಹ್ಮದ್, ಮಗ ಅಫಾಕ್ ಅಹ್ಮದ್ ವಿಚಾರಣೆಗೆ ಒಳಪಡಿಸಿದ್ದಾಗ 1.97 ಕೋಟಿ ರೂ. ನಗದು ಸಿಕ್ಕಿತ್ತು. ಸಾರ್ವಜನಿಕರಿಗೆ ಶೇ.12ರಷ್ಟು ಬಡ್ಡಿ ಸಮೇತ ಕೊಡೋದಾಗಿ ಆಮಿಷವೊಡ್ಡಿ 954 ಕೋಟಿ ಸಂಗ್ರಹಿಸಿದ್ದಾರೆ. ಇದು ನಕಲಿ ಕಂಪನಿ ಅಂತ ಆರ್‌ಬಿಐಗೂ ಪತ್ರ ಬರೆದಿದ್ದೇವೆ ಅಂತ ಪತ್ರಿಕಾ ಪ್ರಕಟಣೆಯಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆ.
ಬಳ್ಳಾರಿಯ ಅಹಂಬಾವಿಯಲ್ಲಿರುವ ರೆಡ್ಡಿ ನಿವಾಸ ಕುಟೀರಾ ದೇಶದ ಎಲ್ಲಾ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾದ ಏಕೈಕ ನಿವಾಸ ಎಂಬ ಕುಖ್ಯಾತಿಯನ್ನು ಈಗ ಪಡೆದುಕೊಂಡಿದೆ. ಸಿಸಿಬಿ ಪೊಲೀಸರು ರೆಡ್ಡಿ ಕೇಸನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಈಗಾಗಲೇ ಅಲಿಖಾನ್ ಜಾಮೀನು ಪಡೆದುಕೊಂಡಿರುವುದರಿಂದ ಜನಾರ್ದನ ರೆಡ್ಡಿಗೆ ನಾಳೆ ನಿರೀಕ್ಷಣಾ ಜಾಮೀನು ಸಿಗುವ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಸಿಸಿಬಿ ಪೊಲೀಸರು ಹಲವು ಕಡೆ ಮಹಜರು ಮಾಡಿದ್ದರು. ಡೀಲ್ ನಡೆದ ಬೆಂಗಳೂರಿನ ತಾಜ್‍ವೆಸ್ಟ್ ಎಂಡ್‍ನಲ್ಲಿ ಆರೋಪಿ ಫರೀದ್‍ರನ್ನ ನಿನ್ನೆ ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು ಇವತ್ತು, ಬಳ್ಳಾರಿಯ ರೆಡ್ಡಿ ನಿವಾಸ ಕುಟೀರ, ಒಎಂಸಿ ಕಂಪನಿಯನ್ನು ಮಹಜರು ನಡೆಸಿದರು. ರೆಡ್ಡಿ ಸಿಗದ ಕಾರಣ ಮಾವ ಪರಮೇಶ್ವರ್ ರೆಡ್ಡಿ, ಅತ್ತೆ ನಾಗಲಕ್ಷ್ಮಮ್ಮ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತು.
ರೆಡ್ಡಿ ಆಪ್ತರ ಮನೆ ಮೇಲೆ ರೇಡ್ ಮಾಡಿದ ಸಿಸಿಬಿ ಅಧಿಕಾರಿಗಳ ತಂಡಕ್ಕೆ ನಾಗಲಕ್ಷ್ಮಮ್ಮ ಅವರು ಆವಾಜ್ ಹಾಕಿದ್ದರು. ನೀವ್ಯಾರು? ಅಳಿಯ, ಮಗಳು ಇಲ್ಲದ ವೇಳೆ ಏಕೆ ಬಂದಿದ್ದೀರಿ ಎಂದು ಕಿರುಚಾಡಿದರು. ಇದರಿಂದ ಬೇಸತ್ತ ಅಧಿಕಾರಿಗಳು ಕೊನೆಗೆ ಮಹಿಳಾ ಅಧಿಕಾರಿಯನ್ನು ಕರೆಸಿ ನಾಗಲಕ್ಷ್ಮಮ್ಮರನ್ನ ಸಿಸಿಬಿ ವಶಕ್ಕೆ ಪಡೆದುಕೊಂಡರು. ಬಳಿಕ ಬೆಡ್ ರೂಂ, ಬಾತ್‍ರೂಮ್, ಗೋಡೆ, ಸಿಂಟೆಕ್ಸ್, ಸಂಪ್ ಎಲ್ಲಾ ಕಡೆ ಚಿನ್ನಕ್ಕಾಗಿ 8 ಗಂಟೆಗಳ ನಿರಂತರ ಶೋಧ ನಡೆಸಿದರು. ಇದರ ಜೊತೆಗೆ ಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ಕೊಂಡೊಯ್ದರು.
ಡೀಲ್ ನಡೆದ ತಾಜ್ ವೆಸ್ಟ್ ಎಂಡ್‍ನಲ್ಲಿ ಆಂಬಿಡೆಂಟ್ ಮಾಲೀಕ ಫರೀದ್ ಅವರನ್ನ ಸಿಸಿಬಿ ಪೊಲೀಸರು ಮಹಜರು ಮಾಡಿದಾಗ, ಅಲ್ಲಿ ನಡೆದ ಸಂಭಾಷಣೆ ಮಾಧ್ಯಮಗಳಿಗೆ ಲಭ್ಯವಾಗಿದೆ. ಫರೀದ್ ಮಹಜರು ವೀಡಿಯೋ ಮಾಧ್ಯಮಗಳಿಗೆ ಲೀಕ್ ಆಗಿರುವುದಕ್ಕೆ ಸಿಸಿಬಿ ಚೀಫ್ ಅಲೋಕ್ ಕುಮಾರ್ ಅಧಿಕಾರಿಗಳ ಮೇಲೆ ಗರಂ ಆದರು. ಅಲ್ಲದೇ ಅಲಿಖಾನ್ ನಿವಾಸಕ್ಕೆ ತೆರಳಿದ್ದ ತಂಡದ ಜೊತೆ ತುರ್ತು ಸಭೆ ನಡೆಸಿ, ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಅಧಿಕಾರಿಗಳಿಗೆ ಕೋರ್ಟ್‍ಗೆ ಹಾಜರು ಪಡಿಸುವ ಮುನ್ನ, ಯಾವುದೇ ದಾಖಲೆ ಸೋರಿಕೆ ಮಾಡುವಂತಿಲ್ಲ. ಆದರೂ ಸಹ ಇದು ಹೇಗೆ ಲೀಕ್ ಆಯ್ತು? ಕಣ್ಣಾ ಮುಚ್ಚಾಲೆ ನನ್ನ ಹತ್ತಿರ ನಡೆಯಲ್ಲ. ಹಗಲು-ರಾತ್ರಿ ಒದ್ದಾಡಿ ಮಾಡುತ್ತಿರುವ ಕೆಲಸವನ್ನು ಮುಗಿಸುವ ಯತ್ನ ಮಾಡುತ್ತಿದ್ದೀರಾ? ನಮ್ಮವರಲ್ಲದೇ ಬೇರೆ ಯಾರು ಮಾಧ್ಯಮಕ್ಕೆ ವಿಡಿಯೋ ಕೊಟ್ಟವರು? ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರ ಬೆನ್ನಲ್ಲೆ, ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಮಾಹಿತಿ ಪಡೆದಿದ್ದು, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರೂ ಹೇಳಿಕೆ ಕೊಡಬಾರದೆಂದು ವಾರ್ನಿಂಗ್ ಕೊಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಹೀಗಾಗಿ ರೆಡ್ಡಿ ಆಪ್ತ ರಾಮುಲುಗೆ ಧರ್ಮಸಂಕಟ ಎದುರಾಗಿದೆ.
ಈ ಬಗ್ಗೆ ಕಾನೂಕು ಕ್ರಮ ತೆಗೆದುಕೊಳ್ಳುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದರ ಜೊತೆ ಬಿಜೆಪಿ ಎಂಎಲ್‍ಸಿ ರವಿಕುಮಾರ್ ಚಿತ್ರದುರ್ಗದಲ್ಲಿ ಮಾತನಾಡಿ, ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದರೆ, ಮೊಳಕಾಲ್ಮೂರು ಪರಾಜಿತ ಅಭ್ಯರ್ಥಿ ತಿಪ್ಪೇಸ್ವಾಮಿ ನನಗೆ ಟಿಕೆಟ್ ತಪ್ಪಿಸಿದ್ದೇ ರೆಡ್ಡಿ ಅಂತ ಕಿಡಿಕಾರಿದರು. ಇದು ರಾಜ್ಯ ಸರ್ಕಾರದ ಪಿತೂರಿ ಅಲ್ಲ. ಜನರ ದುಡ್ಡು ತಿಂದೋವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದೆ ಎಂದು ಸಂಸದ ಉಗ್ರಪ್ಪ ಸ್ಪಷ್ಟಪಡಿಸಿದರು.