Tag: Ambewadi

  • 100 ವರ್ಷಗಳ ಇತಿಹಾಸದ ರೈಲು ಮಾರ್ಗಕ್ಕೆ ಚಾಲನೆ

    100 ವರ್ಷಗಳ ಇತಿಹಾಸದ ರೈಲು ಮಾರ್ಗಕ್ಕೆ ಚಾಲನೆ

    – ಧಾರವಾಡ-ದಾಂಡೇಲಿ ಭಾಗಕ್ಕೆ ಮೊದಲ ಪ್ಯಾಸೆಂಜರ್ ರೈಲು

    ಕಾರವಾರ: ನೂರು ವರ್ಷಗಳ ಇತಿಹಾಸ ಹೊಂದಿರುವ, ಎರಡು ದಶಕಗಳಿಂದ ನಿಂತು ಹೋಗಿದ್ದ ದಾಂಡೇಲಿ-ಅಳ್ನಾವರ-ಧಾರವಾಡ ಪ್ರಯಾಣಿಕರ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದ್ದಾರೆ.

    ದಾಂಡೇಲಿಯ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಪ್ಯಾಸೆಂಜರ್ ರೈಲು ಉದ್ಘಾಟನೆ ನೆರವೇರಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕಾ, ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    ವಿಶೇಷ ವೇನು?
    ಅಂಬೇವಾಡಿ-ಅಳ್ನಾವರ ರೈಲ್ವೆ ಮಾರ್ಗವು 100 ವರ್ಷ ಹಳೆಯದಾದ ಇತಿಹಾಸ ಹೊಂದಿದೆ. 1918ರಲ್ಲಿ ಮದ್ರಾಸ್ ಮತ್ತು ಸರ್ದನ್ ಮರಾಠ (ಮಹಾರಾಷ್ಟ್ರ) ರೈಲ್ವೆಯಿಂದ ರೈಲು ಸಂಚಾರ ನಡೆಯುತ್ತಿತ್ತು. ಈ ಮಾರ್ಗವು ಬೆಳಗಾವಿ-ಹುಬ್ಬಳ್ಳಿ ಮುಖ್ಯ ಮಾರ್ಗವನ್ನು ಸಂಪರ್ಕಿಸುತಿತ್ತು. ಅರಣ್ಯ ಉತ್ಪನ್ನಗಳನ್ನು ವಿಶೇಷವಾಗಿ ಮೊದಲ ಮಹಾ ಯುದ್ಧದ ಸಮಯದಲ್ಲಿ ಮರಮುಟ್ಟುಗಳನ್ನು ಸಾಗಿಸಲು ರೈಲು ಮಾರ್ಗವನ್ನು ಬಳಕೆಯಾಗುತಿತ್ತು.

    1994ರಲ್ಲಿ ಅಂಬೇವಾಡಿ-ಅಳ್ನಾವರ ರೈಲ್ವೆ ಮಾರ್ಗವನ್ನು ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತಿಸಿ ರೈಲ್ವೆ ಸೇವೆಯನ್ನು ನಿಲ್ಲಿಸಲಾಗಿತ್ತು. 1995ರಲ್ಲಿ ಅಳ್ನಾವರದಿಂದ ಅಂಬೆವಾಡಿಗೆ ಏಕಮುಖ ಸಂಚಾರವನ್ನು ಪ್ರಾರಂಭಿಸಲಾಗಿತ್ತು. ಆದರೆ ದಾಂಡೇಲಿವರೆಗೆ ರೈಲು ಸಂಚಾರ ಪ್ರಾರಂಭಿಸಬೇಕು. ನಮ್ಮ ಭಾಗಕ್ಕೂ ಪ್ಯಾಸೆಂಜರ್ ರೈಲು ಬೇಕು ಎಂದು ದಾಂಡೇಲಿ ಭಾಗದ ಜನರು ಒಂದು ದಶಕದಿಂದ ಹೋರಾಟ ನಡೆಸಿದ್ದರು. ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರು ಕೂಡ ಈ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಜೊತೆಗೆ ಮಾತನಾಡಿ, ಮನವಿ ಸಲ್ಲಿಸಿದ್ದರು. ಆಗ ಸಚಿವರು ಅನುಮತಿ ನೀಡಿದ್ದರಿಂದ ಒಂದು ವರ್ಷದಲ್ಲಿ ಸಂವಹನ ಸಂಕೇತಗಳನ್ನು ಅಳವಡಿಸಿದ ನೈರುತ್ಯ ರೈಲ್ವೆ ವಿಭಾಗವು ಇಂದು ರೈಲಿಗೆ ಚಾಲನೆ ನೀಡಿದೆ.

    ಈ ಭಾಗದಲ್ಲಿ ರೈಲು ಮಾರ್ಗ ಪ್ರಾರಂಭವಾಗಿದ್ದರಿಂದ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಅತಿ ಕಡಿಮೆ ದರದಲ್ಲಿ ಪ್ರವಾಸಿಗರು ದಾಂಡೇಲಿ ಭಾಗಕ್ಕೆ ಬರಬಹುದಾಗಿದೆ.

    ವೇಳಾಪಟ್ಟಿ:
    ಧಾರವಾಡ-ದಾಂಡೇಲಿ ರೈಲು ಸೋಮವಾರದಿಂದ ಆರಂಭವಾಗಲಿದೆ. ಈ ಮೂಲಕ ಪ್ರತಿದಿನ 11.30ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 1.00 ಗಂಟೆಗೆ ದಾಂಡೇಲಿ ತಲುಪಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ದಾಂಡೇಲಿಯಿಂದ ಮರಳಿ ಮಧ್ಯಾಹ್ನ 4.40ಕ್ಕೆ ಧಾರವಾಡ ತಲುಪಲಿದೆ. ಅಳ್ನಾವರ, ಕುಂಬಾರಗಣವಿ, ಮುಗದ, ಕ್ಯಾರಕೊಪ್ಪ ನಿಲ್ದಾಣದಲ್ಲಿ ರೈಲು ನಿಲುಗಡೆ ಆಗಲಿದೆ.