Tag: ambarish

  • ಪದೇ ಪದೇ ಫೋನ್ ಮಾಡಿದ್ದಕ್ಕೆ ಸ್ನಾನ ಮಾಡಿ ಬರ್ತೀನಿ ಇರ್ಲಾ ಎಂದ ಅಂಬಿ!

    ಪದೇ ಪದೇ ಫೋನ್ ಮಾಡಿದ್ದಕ್ಕೆ ಸ್ನಾನ ಮಾಡಿ ಬರ್ತೀನಿ ಇರ್ಲಾ ಎಂದ ಅಂಬಿ!

    ಬೆಂಗಳೂರು: ರಾಜ್ಯಸಭೆ ಚುನಾವಣೆ ಇಂದು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಿಬ್ಬಂದಿಯೊಬ್ಬರು ಮತ ಹಾಕುಲು ಬರುವಂತೆ ಶಾಸಕ ಅಂಬರಿಶ್ ಗೆ ಕರೆ ಮಾಡಿದ್ದಾರೆ.

    ಮೂರ್ನಾಲ್ಕು ಬಾರಿ ಫೋನ್ ಮಾಡಿದ್ರೂ ಅಂಬರೀಶ್ ಕರೆ ಸ್ವೀಕರಿಸಲಿಲ್ಲ. ಅದ್ರೂ ಬಿಡದೆ ನಿರಂತರವಾಗಿ ಸಿಬ್ಬಂದಿ ಕರೆ ಮಾಡಿದ್ರು. ಹೀಗಾಗಿ ಐದನೇ ಬಾರಿ ಕರೆ ಸ್ವೀಕರಿಸಿದ ಅಂಬಿ, ತನ್ನ ಸ್ಟೈಲ್ ನಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ಈಗ ಸ್ನಾನಕ್ಕೆ ಹೊರಟಿದ್ದೇನೆ ಇರ್ಲಾ ಅಂತ ಹೇಳಿದ್ದಾರೆ.


    ಸಂಜೆ 4 ಗಂಟೆಯವರೆಗೆ ಟೈಮ್ ಅಯ್ತೆ ಅಂತ ಹೇಳುವ ಮೂಲಕ ಕರೆ ಮಾಡಿದ ಕೆಪಿಸಿಸಿ ಸಿಬ್ಬಂದಿಯನ್ನು ನಯವಾಗೇ ಗದರಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ವಿಧಾನಸೌಧದ ಮೊದಲನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಸಂಜೆ ನಾಲ್ಕರ ನಂತರ ಮತ ಎಣಿಕೆ ನಡೆಯಲಿದ್ದು, ಸಂಜೆ 6 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಮೂರು ಪಕ್ಷಗಳಿಂದ ಐವರು ಅಖಾಡದಲ್ಲಿದ್ದಾರೆ. ಕಾಂಗ್ರೆಸ್‍ನಿಂದ ಹನುಮಂತಯ್ಯ, ನಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್‍ನಿಂದ ಬಿ.ಎಂ. ಫಾರೂಕ್ ಕಣದಲ್ಲಿದ್ದಾರೆ.

  • ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    – ಅಂಬರೀಶ್ ವಿರುದ್ಧ ರಂಜಿತಾ ಸ್ಪರ್ಧೆ

    ಮಂಡ್ಯ: 2018 ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದೆ ರಮ್ಯಾ ಅವರ ತಾಯಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ಇನ್ನೊಂದು ವಾರದಲ್ಲಿ ಮಂಡ್ಯಕ್ಕೆ ಬಂದು ಬೆಂಬಲಿಗರ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿರುವ ರಮ್ಯಾ ತಾಯಿ ರಂಜಿತಾ, ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. 1980ರ ದಶಕದಲ್ಲಿ 2 ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದೇವೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ಮನೆ ಮನೆ ಬಾಗಿಲಿಗೆ ಹೋಗಿ ಕ್ಯಾಂಪೇನ್ ಮಾಡಿದ್ದೇವೆ. ಆದ್ರೆ ಕಾಂಗ್ರೆಸ್ ಪಕ್ಷದವರು ಪಕ್ಷಕ್ಕಾಗಿ ದುಡಿದ ನಮ್ಮನ್ನು ಕಡೆಗಣಿಸಿದ್ದಾರೆ ಅಂತ ತನ್ನ ಅಳಲುತೋಡಿಕೊಂಡಿದ್ದಾರೆ.

    ರಮ್ಯಾ ಅವರು ಸೋತ ನಂತರ ಅವರಿಗೂ ಯಾವುದೇ ಸ್ಥಾನಮಾನ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಒಳಗಿದ್ದುಕೊಂಡೇ ರಮ್ಯಾರನ್ನು ಸೋಲಿಸಿದ್ರು. ರಾಜ್ಯ ರಾಜಕಾರಣದಲ್ಲಿ ರಮ್ಯಾರನ್ನು ಕಡೆಗಣಿಸಲಾಗಿದೆ. ಇದೆಲ್ಲ ಮನಸ್ಸಿಗೆ ನೋವುಂಟು ಮಾಡಿದೆ. ಈ ನೋವು ರಮ್ಯಾಗೂ ಇದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತೇನೆ ಅಂತ ಅಸಮಾಧಾನ ಹೊರಹಾಕಿದ್ದಾರೆ.

    ಜನ ಆಶೀರ್ವಾದ ಮಾಡಿದ್ರೆ ಅವರ ಸೇವೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಕೇಳುತ್ತಿದ್ದೆ. ಆದ್ರೆ ಅಂಬರೀಶ್ ಅಣ್ಣ ಕಾಂಗ್ರೆಸ್ ಪಕ್ಷದಿಂದ ಎಲೆಕ್ಷನ್‍ಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಪಕ್ಷದಿಂದ ಟಿಕೆಟ್ ಕೇಳಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ರಮ್ಯಾ ಜೊತೆ ಮಾತನಾಡಿಲ್ಲ. ರಮ್ಯಾರನ್ನು ನಂಬಿ ಓಟ್ ಮಾಡಿದ ಮತದಾರರಿಗಾಗಿ ದುಡಿಯಬೇಕಿದೆ. ಹಾಗಾಗಿ ಚುನಾವಣೆಗೆ ನಿಲ್ಲುತ್ತೇನೆ ಅಂತ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

  • ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

    ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

    ಬೆಂಗಳೂರು: ಚಂದನವನದಲ್ಲಿ ಕೃಷ್ಣ ಎಂಬ ಹೆಸರಿನಿಂದಲೇ ಪರಿಚಿತವಾಗಿರುವ ನಟ ಅಜಯ್ ರಾವ್ ತಮ್ಮ ಕೈ ಮೇಲೆ ನಟಿ ಸುಮಲತಾ ಅಂಬರೀಶ್ ಅವರ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

    ಇತ್ತೀಚೆಗೆ ಅಜಯ್ ರಾವ್ ನಟನೆಯ 25ನೇ ಸಿನಿಮಾ ‘ತಾಯಿಗೆ ತಕ್ಕ ಮಗ’ ಸೆಟ್ಟೇರಿದೆ. ಚಿತ್ರದಲ್ಲಿ ಅಜಯ್‍ರಾವ್ ಗೆ ತಾಯಿಯಾಗಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅಜಯ್ ತಮ್ಮ ಬಲಗೈ ಮೇಲೆ ಸುಮಲತಾರ ಚಿತ್ರವುಳ್ಳ ಸುಂದರವಾದ ಟ್ಯಾಟೋ ಹಾಕಿಸಿಕೊಂಡಿದ್ದು, ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    2003ರಲ್ಲಿ ತೆರೆಕಂಡಿದ್ದ ಕನ್ನಡದ ಸೂಪರ್ ಹಿಟ್ ‘ಎಕ್ಸ್ ಕ್ಯೂಸ್ ಮಿ’ ಸಿನಿಮಾದ ಬಳಿಕ ಸುಮಲತಾ ಮತ್ತು ಅಜಯ್ ತಾಯಿ ಮಗನಾಗಿ ನಟಿಸುತ್ತಿದ್ದಾರೆ. ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ವೇದಗುರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದಿನ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ಸಿನಿಮಾಗಳೆರೆಡು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜಯ್‍ರಾವ್ ಗೆ ಜೊತೆಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ.

    2006ರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ‘ತಂದೆಗೆ ತಕ್ಕ ಮಗ’ ಚಿತ್ರದಲ್ಲಿ ಉಪೇಂದ್ರರಿಗೆ ತಂದೆಯಾಗಿ ನಟಿಸಿದ್ದರು. ಇಂದು ಅದೇ ಮಾದರಿಯ ಶೀರ್ಷಿಕೆಯಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಖುಷಿಯನ್ನು ತಂದಿದೆ. ಈ ಹಿಂದೆಯೇ 1978ರಲ್ಲಿ ಡಾ.ರಾಜ್‍ಕುಮಾರ್ ‘ತಾಯಿಗೆ ತಕ್ಕ ಮಗ’ ಎಂಬ ಶೀರ್ಷಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾಜ್‍ಕುಮಾರ್, ಪದ್ಮಪ್ರಿಯಾ, ಸಾಹುಕಾರ ಜಾನಕಿ, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಉಮಾ ಶಿವಶಂಕರ್, ಟೈಗರ್ ಪ್ರಭಾಕರ್ ಸೇರಿದಂತೆ ದೊಡ್ಡ ನಟರೆಲ್ಲ ನಟಿಸಿದ್ದರು. ಇಂದಿನ ಪೀಳಿಗೆಯ ಜನರು ಸಹ ಸಿನಿಮಾ ನೋಡಲು ಇಷ್ಟ ಪಡುತ್ತಾರೆ. ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ರಾಜ್‍ಕುಮಾರ್ ಬಾಕ್ಸರ್ ಆಗಿ ನಟಿಸುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡಿದ್ದರು.

  • ಕಲಾವಿದರ ಸಂಘದ ಗೃಹಪ್ರವೇಶದಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಅಂಬರೀಷ್

    ಕಲಾವಿದರ ಸಂಘದ ಗೃಹಪ್ರವೇಶದಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಅಂಬರೀಷ್

    ಬೆಂಗಳೂರು: ಕನ್ನಡ ಚಲನಚಿತ್ರ ಕಲಾವಿದರ ಸಂಘದ ನೂತನ ಕಟ್ಟಡದ ಗೃಹಪ್ರವೇಶ ಕಾರ್ಯಕ್ರಮ ಇಂದು ಶಾಸ್ತ್ರೋಕ್ತವಾಗಿ ನಡೆಯಿತು. ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅಧ್ಯಕ್ಷತೆಯಲ್ಲಿ ಕನ್ನಡ ಕಲಾವಿದರ ಸಂಘ ನಿರ್ಮಿತವಾಗಿದ್ದು ಸ್ವತಃ ಅಂಬಿ ದಂಪತಿ ಶಾಸ್ತ್ರಬದ್ಧವಾಗಿ ಗೃಹಪ್ರವೇಶ ಪೂಜೆ ನೆರವೇರಿಸಿದ್ರು. ಈ ವೇಳೆ ಗಣಹೋಮ, ಸುದರ್ಶನ ಹೋಮಗಳನ್ನ ಮಾಡಲಾಯಿತು.

    ಸಂಘದ ಖಜಾಂಚಿ ದೊಡ್ಡಣ್ಣ, ಕಾರ್ಯದರ್ಶಿ ರಾಕ್‍ಲೈನ್ ವೆಂಕಟೇಶ್, ಹಿರಿಯನಟ ಲೋಕನಾಥ್, ಹೇಮಾ ಚೌಧರಿ ಮುಂತಾದವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಚಾಮರಾಜ ಪೇಟೆಯಲ್ಲಿ ನಿರ್ಮಿತವಾದ ಕಲಾವಿದರ ಸಂಘದ ಕಟ್ಟಡವನ್ನು ಫೆಬ್ರವರಿ 8ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಸದಾ ರೆಬೆಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಸಾಂಪ್ರದಾಯಿಕ ಪಂಚೆ ಉಟ್ಟು ಕಂಗೊಳಿಸಿದ್ರು. ಅಂಬರೀಶ್ ಜೊತೆ ಪತ್ನಿ ಸುಮಲತಾ ಜರತಾರಿ ಸೀರೆಯುಟ್ಟು ಮಿಂಚಿದರು.

    ನಿನ್ನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಬಿ.ಸರೋಜಾದೇವಿ, ಕಲಾವಿದರ ಸಂಘದ ಕಟ್ಟಡದ ಬಗ್ಗೆ ಅನೇಕ ಬಾರಿ ಮಾತನಾಡಿದ್ದೇವೆ. ನಮ್ಮ ಎಲ್ಲಾ ಕಲಾವಿದರ ಕನಸು ಇಂದು ನನಸಾಗಿದೆ. ಇಲ್ಲಿ ಸಿನೆಮಾಗೆ ಸಂಬಂಧಿತ ಹಲವಾರು ಚಟುವಟಿಕೆಗಳು ನಡೆಯಲಿವೆ ಎಂದರು.

    ಇದೇ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ್, ನಾವೆಲ್ಲರೂ ಒಂದೇ ಸೂರಿನಡಿ ಸೇರುತ್ತಿದ್ದೇವೆ. ಇದು ಕಟ್ಟಡವಲ್ಲ, ಒಗ್ಗಟ್ಟಿನ ಸಂಕೇತ ಎಂದರು. ಉದ್ಘಾಟನಾ ಸಮಾರಂಭದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ತಾರಾ, ದುನಿಯಾ ವಿಜಯ್, ವಿಜಯಲಕ್ಷ್ಮಿ ಸಿಂಗ್, ಸಚಿವ ತನ್ವೀರ್ ಸೇಠ್, ಶಾಸಕ ಜಮೀರ್ ಅಹಮದ್ ಭಾಗವಹಿಸಿದ್ದರು.

  • ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ಬೆಂಗಳೂರು: ಅದೊಂದು ಕಾಲವಿತ್ತು. ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್.

    ಹೌದು. ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶಿಟ್ ಗಾಗಿ ಕಾದು ಕುಳಿತ್ತಿದ್ದಾರೆ.


    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ ಪ್ರೀತಿಯ ಪುತ್ರನಾದ ಅಭಿ, ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಮ್ಮಿ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಪೋಸ್ ಕೊಟ್ಟಿದ್ದು ಬಿಟ್ಟರೆ ಗಾಂಧಿನಗರದಿಂದ ಈ ಹುಡುಗ ಬಲು ದೂರ ದೂರ. ಅಂಬಿ ಮಗನೂ ಹೀರೋ ಆಗುತ್ತಾನಾ ಎನ್ನುವ ಪ್ರಶ್ನೆ ಅಗಾಗ ಕೇಳುತ್ತಿದ್ದವು. ಈಗ ಆ ಪ್ರೆಶ್ನೆಗೆ ಸರಿಯಾದ ಉತ್ತರ ಸಿಗುವ ಕಾಲ ಸನಿಹವಾಗಿದೆ.

    ಕಥೆ-ಚಿತ್ರಕಥೆ ರೆಡಿ ಮಾಡಿಕೊಳ್ಳದೆಯೇ, ನಿರ್ದೇಶಕ ಯಾರೆಂಬುದನ್ನು ಕನ್ಫರ್ಮ್ ಮಾಡಿಕೊಳ್ಳದೆಯೇ ಪ್ರೋಡ್ಯೂಸರ್ ಗಳು ಅಂಬಿ ಪುತ್ರ ಅಭಿಷೇಕ್ ಗಾಗಿ ಬಲೆ ಬೀಸಿದ್ದಾರೆ. ಸರ್ ನಿಮ್ಮ ಮಗನ್ನ ನಮ್ಮ ಬ್ಯಾನರ್‍ನಲ್ಲಿ ಇಂಟ್ರೊಡ್ಯೂಸ್ ಮಾಡಿ. ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರಂತೆ. ಗಾಂಧಿನಗರ ಆಫ್ ದಿ ರೆರ್ಕಾಡ್ ಸಮಾಚಾರವೇನಂದ್ರೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಾರೆ ಅನ್ನೊ ಸುದ್ದಿ.

    ಪ್ರಿನ್ಸ್, ಐರಾವತ ಸೇರಿದಂತೆ ಅನೇಕ ಅದ್ಧೂರಿ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸಂದೇಶ್ ನಾಗರಾಜ್, ಅಭಿಷೇಕ್‍ಗಾಗಿ ಸಿನಿಮಾ ಮಾಡಲಿದ್ದಾರಂತೆ. ಅಂಬರೀಶ್ ಜೊತೆ ಒಂದು ಸುತ್ತಿನ ಮಾತುತೆಯನ್ನೂ ಕೂಡ ಸಂದೇಶ್ ನಾಗರಾಜ್ ಮಾಡಿದ್ದಾರಂತೆ. ಇಂತದೊಂದು ಸಮಾಚಾರ ಸದ್ಯ ಗಾಂಧಿನಗರದ ತುಂಬಾ ಸದ್ದು ಮಾಡುತ್ತಿದೆ. ಅಭಿಷೇಕ್ ಅವರ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ಬರುವ ಜನವರಿ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

    ಇಂತಹ ಸುದ್ದಿ ಹಬ್ಬಿರುವಾಗಲೇ ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ನೋಡಿದ ಮಂದಿ ಓಹೋ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಾರೆಯಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಅಂಬಿ ಸ್ನೇಹದ ಕಡಲಲ್ಲಿ ತೇಲಾಡುತ್ತಿರುವ ಸ್ನೇಹಿತರಿಗೆ ಅಭಿಷೇಕ್ ಸಿನಿಮಾ ರಂಗಕ್ಕೆ ಬರುತ್ತಿರುವ ಸಮಾಚಾರ ಮಂಡ್ಯದ ಸಿಹಿ ಬೆಲ್ಲ ಸವಿದಂತಾಗುತ್ತಿದೆ. ಆದಷ್ಟು ಬೇಗ ಅಭಿಷೇಕ್ ಚಿತ್ರರಂಗಕ್ಕೆ ಬರಲಿ, ಅಂಬಿಯಂತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅನ್ನೊದೆ ಕೋಟಿ ಕೋಟಿ ಅಭಿಮಾನಿಗಳ ಆಶಯ.

  • “ವಯಸ್ಸಾಯ್ತು ಅಂತ ಅಂದ್ಕೋಬೇಡಿ”- ಸಮಸ್ತ ಕನ್ನಡ ಅಭಿಮಾನಿಗಳಿಗೆ ಅಂಬಿ ಪತ್ರ

    “ವಯಸ್ಸಾಯ್ತು ಅಂತ ಅಂದ್ಕೋಬೇಡಿ”- ಸಮಸ್ತ ಕನ್ನಡ ಅಭಿಮಾನಿಗಳಿಗೆ ಅಂಬಿ ಪತ್ರ

    ಬೆಂಗಳೂರು: ಕೆಲದಿನಗಳ ಹಿಂದೆ ಮುಹೂರ್ತ ಆಚರಿಸಿಕೊಂಡ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’..! ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ.

    ಅಂಬರೀಶ್‍ರವರ ಕಂಚಿನ ಕಂಠದಲ್ಲಿ ಈ ಟೈಟಲ್ ಟೀಸರ್ ಹೊರ ಬಂದಿದೆ. ಅಂಬಿ ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ಈ ಚಿತ್ರದ ಕಿರುನೋಟವನ್ನ ಹೇಳಲಾಗಿದೆ.

    ಎಲ್ಲರಿಗೂ ನಮಸ್ಕಾರ, ಇದೇನಪ್ಪಾ ಅಂಬರೀಷ್ ನಮಸ್ಕಾರ ಹೇಳ್ತಿದ್ದಾರೆ, ಅವರಿಗೆ ವಯಸ್ಸಾಯ್ತು ಅಂದ್ಕೋಬೇಡಿ ಅಂತ ಟೀಸರ್ ಶುರುವಾಗಿ, ಅಂಬಿ ಅವರ ಸಿನಿಮಾ ಎಂಟ್ರಿ, ಮದುವೆ, ಮಗ, ರೆಬೆಲ್ ಸ್ಟಾರ್ ಬಿರುದು, ನಂತರ ರಾಜಕೀಯ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಹೇಳ್ತಾ ಹೋಗ್ತಾರೆ.

    ಕೊನೆಗೆ ಇಷ್ಟೊತ್ತು ಅಮರನಾಥನಾಗಿ ಮಾತನಾಡಿದೆ, ಈಗ ನಿಮ್ಮ ಪ್ರೀತಿಯ ಅಂಬಿಯಾಗಿ ಹೇಳ್ತಿದ್ದೀನಿ, ಕೇಳಿ. ಥಿಯೇಟರ್‍ಗೆ ಬಂದು ಆಶೀರ್ವಾದ ಮಾಡಿ ಅಂತ ತಮ್ಮದೇ ಖಡಕ್ ಸ್ಟೈಲ್‍ನಲ್ಲಿ ಹೇಳ್ತಾರೆ.

    ಇದನ್ನೂ ಓದಿ: ಅಂಬಿಗಾಗಿ ಸುದೀಪ್ ಕಾಲುಗಳಿಗೆ ಕತ್ತರಿ!

    ಟೀಸರ್‍ನ ಝಲಕ್ ಇಲ್ಲಿದೆ ನೋಡಿ:

  • ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಬೆಂಗಳೂರು: ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ವಿಶೇಷ ಅಧಿವೇಶನಕ್ಕೆ ಚಕ್ಕರ್ ಹಾಕಿ ಉಪ್ಪು ಹುಳಿ ಖಾರ ಸಿನಿಮಾದ ಕಾರ್ಯಕ್ರಮಕ್ಕೆ ಮಾಜಿ ವಸತಿ ಸಚಿವ ಅಂಬರೀಶ್ ಹಾಜರಾಗಿದ್ದು ಟೀಕೆಗೆ ಗುರಿಯಾಗಿದೆ.

    ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ನಟ ಅಂಬರೀಶ್ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಮಾಡಲು ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ  ಟೀಸರ್ ಲಾಂಚ್ ಮಾಡಿದ ಅಂಬರೀಶ್ ಉಪ್ಪು ಹುಳಿ ಖಾರ ಚಿತ್ರದ ರೋಮಿಯೋ ಹಾಡಿಗೆ ಸ್ಜೇಜ್ ಮೇಲೆ ಸ್ಟೆಪ್ ಹಾಕಿದರು. ಮಾಲಾಶ್ರೀ ಅಂಬರೀಶ್‍ಗೆ ಲವ್ ಯು ಅಂದ್ರು ಅದಕ್ಕೆ ಅಂಬರೀಶ್ ಮೀಟು ಲವ್ ಎಂದು ಹೇಳಿ ಸ್ಜೇಜ್ ಮೇಲೆ ಮನೋರಂಜನೆ ನೀಡಿದರು.

    ವಿಧಾನಸಭಾ ಸಚಿವಾಲಯದಿಂದ ಸಿಕ್ಕಿದ ಮಾಹಿತಿ ಪ್ರಕಾರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಕೇವಲ ನಾಲ್ಕು ದಿನ ಮಾತ್ರ ಕಲಾಪಕ್ಕೆ ಅಂಬರೀಶ್ ಹಾಜರಾಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಮೇ 2013ರಿಂದ 2016ರ ಜೂನ್ ವರೆಗೆ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ರಾಜೀನಾಮೆ ನೀಡಿದ್ದರು.

    ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗಿದೆ. ಒಟ್ಟು 225 ಶಾಸಕರ ಪೈಕಿ ಮೊದಲ ದಿನ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಕೇವಲ 20 ಮಂದಿ ಮಾತ್ರ.

    ಕೊನೇ ಪಕ್ಷದ ಇದು ವರ್ಷದ ಕೊನೇ ಅಧಿವೇಶನ. ಚುನಾವಣೆ ಹತ್ತಿರ ಇದೆ. ಜನ ನಮ್ಮ ನೋಡುತ್ತಿರುತ್ತಾರೆ. ಈ ಬಾರಿಯಾದ್ರೂ ನಾವು ಸದನದಲ್ಲಿ ಕಾಣಿಸಿಕೊಳ್ಳೋಣ ಎನ್ನುವ ಭಯವೂ ಶಾಸಕರಿಗೆ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲದಂತೆ ವರ್ತಿಸಿದ್ದಾರೆ. ಶಾಸಕರ ಹಾಜರಾತಿ ಕಡಿಮೆ ಇದ್ದ ಕಾರಣ ಒಂದೇ ನಿಮಿಷಕ್ಕೆ ಸ್ಪೀಕರ್ ಕೋಳಿವಾಡ ಕಲಾಪವನ್ನು ಮುಂದೂಡಿದ್ದರು.

    10 ದಿನಗಳ ಅಧಿವೇಶನಕ್ಕೆ ಬರೋಬ್ಬರಿ 28 ರಿಂದ 30 ಕೋಟಿ ರೂ. ಖರ್ಚು ಆದರೆ ದಿನಕ್ಕೆ ಎರಡೂವರೆಯಿಂದ ಮೂರು ಕೋಟಿ ರೂ. ವೆಚ್ಚವಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 2,500 ರೂ. ಸಾರಿಗೆ ಭತ್ಯೆ ನೀಡಿದರೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 5 ಸಾವಿರ ರೂ.ಸಾರಿಗೆ ಭತ್ಯೆ ನೀಡಲಾಗುತ್ತದೆ.

  • ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ

    ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ

    ಮಂಡ್ಯ: ಮಾಜಿ ಸಂಸದೆ ರಮ್ಯಾ ಮತ್ತೆ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ವಿಚಾರವೊಂದು ಮೂಲಗಳಿಂದ ತಿಳಿದುಬಂದಿದೆ.

    ಈ ಮೂಲಕ ಮಂಡ್ಯ ಬಿಟ್ಟು ಹೋಗಲ್ಲ ಎಂದ ರಮ್ಯಾ ಮತ್ತೆ ಶೀಘ್ರದಲ್ಲೇ ವಾಪಸ್ಸಾಗಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಮ್ಯಾ ವಾಸವಿದ್ದ ಮನೆ ಕ್ಲೀನಿಂಗ್ ಕೆಲಸ ಶುರುವಾಗಿದೆ. ನವೆಂಬರ್ 29 ಹುಟ್ಟುಹಬ್ಬದಂದೇ ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ ಆರಂಭವಾಗಲಿದೆಸ. ರಮ್ಯಾಗೆ ಮಂಡ್ಯದಲ್ಲೇ ಟಿಕೆಟ್ ನೀಡಿ ಜಿಲ್ಲೆಯ ನಾಯಕತ್ವ ನೀಡಲು ನಡೆದಿದೆ ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

    ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ರಾಜಕಾರಣ ಗರಿಗೆದರಿದ್ದು, ಇಂದು ಶಾಸಕ ಅಂಬರಿಶ್ ಕಾಂಗ್ರೆಸ್ ಹಿರಿಯ ನಾಯಕ ಜಿ.ಮಾದೇಗೌಡ ಜೊತೆ ಒಂದು ಗಂಟೆಗಳ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ.

    ಮಂಡ್ಯದಲ್ಲಿ ನಡೆದ ಟಿಪ್ಪು ಜಯಂತಿಗೆ ಗೈರಾಗಿದ್ದ ಅಂಬಿ ರಾತ್ರಿ ಮಂಡ್ಯದ ಹೊರವಲಯದಲ್ಲಿರುವ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ನಿವಾಸಕ್ಕೆ ಜಿ.ಮಾದೇಗೌಡರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ದರು. ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಸ್ವಂತ ಮನೆ ಮಾಡಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕಿವಿಗೆ ಬೀಳುತ್ತಲೇ ಕ್ಷೇತ್ರಕ್ಕೆ ಆಗಮಿಸಿದ ಅಂಬಿ ಮಾದೇಗೌಡರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಮಾದೇಗೌಡರು ನನ್ನ ತುಂಬಾ ಇಷ್ಟಪಡ್ತಾರೆ. ಅವರೊಂದಿಗೆ ಮಾತನಾಡಬೇಕೆನಿಸಿತು ಮಾತನಾಡಿದ್ದೇನೆ. ರಾಜಕೀಯ ಚರ್ಚೆ ನಡೆದಿಲ್ಲ ಎಂದ ಅವರು ನನಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಅಂತ ಹೇಳಿದ್ರು.

    ಇದನ್ನೂ ಓದಿ:  ರಾಹುಲ್ ಗಾಂಧಿಯನ್ನ ಧೋನಿಗೆ ಹೋಲಿಸಿದ ರಮ್ಯಾ

    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಇತ್ತೀಚೆಗೆ ನನಗೆ ಟಿಕೆಟ್ ಕೊಡುವುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿದ್ದಾರೆ. ಅಧ್ಯಕ್ಷರೇ ಹಾಗೆ ಹೇಳಿದ ಮೇಲೆ ನಮಗೆ ಟಿಕೆಟ್ ಕೊಡುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಗೊತ್ತಿಲ್ಲ. ಬಂದರೆ ಸಂತೋಷ. ನಾನು ಎಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿಲ್ಲ ಅಂತ ಅಂಬರಿಶ್ ತಿಳಿಸಿದ್ರು.

    ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ ರಮ್ಯಾ

  • ರಾಜಕೀಯ ಏನಿಲ್ಲ ನಾವು ಫ್ರೆಂಡ್ಸ್ ಅಂತಾರೆ ಸಿಎಂ- ಮತ್ತೆ ಸಂಪುಟ ಸೇರ್ತಾರಾ ಅಂಬರೀಷ್?

    ರಾಜಕೀಯ ಏನಿಲ್ಲ ನಾವು ಫ್ರೆಂಡ್ಸ್ ಅಂತಾರೆ ಸಿಎಂ- ಮತ್ತೆ ಸಂಪುಟ ಸೇರ್ತಾರಾ ಅಂಬರೀಷ್?

    ಬೆಂಗಳೂರು: ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಂಬರೀಷ್ ರೆಬೆಲ್ ಆಗಿದ್ರು. ನಂಜನಗೂಡು, ಗುಂಡ್ಲುಪೇಟೆ ಚುನಾವಣೆ ವೇಳೆಯೂ ಪ್ರಚಾರಕ್ಕೆ ಹೋಗಿರಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಂಬರೀಷ್ ಹೆಸರು ಇರಲಿಲ್ಲ. ಆದ್ರೆ ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ, ಏಕಾಏಕಿ ಅಂಬರೀಷ್ ಅವರ ಗಾಲ್ಫ್ ಕೋರ್ಟ್ ರಸ್ತೆಯಲ್ಲಿರೋ  ನಿವಾಸಕ್ಕೆ ತೆರಳಿ ಔತಣಕೂಟದಲ್ಲಿ ಭಾಗಿಯಾಗಿದ್ರು.

    ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಡಿನ್ನರ್ ನೆಪದಲ್ಲಿ ಚರ್ಚಿಸಿದ ನಾಯಕರು, ಆ ಬಳಿಕ ಹೊರಬಂದು ಹಿಂದೆ ಜೆ ಪಿ ನಗರದಲ್ಲಿದ್ದ ಅಂಬರೀಷ್ ಮನೆಗೂ ಹೋಗಿದ್ದೆ. ಆದ್ರೆ ಇಲ್ಲಿ ಊಟಕ್ಕೆ ಬಂದಿರಲಿಲ್ಲ. ಊಟಕ್ಕೆ ಕರೆದ್ರ ಹಂಗೆ ಬಂದೆ. ರಾಜಕಾರಣದವರಾಗಿದ್ದರಿಂದ ರಾಜಕೀಯ ಬಗ್ಗೆ ಚರ್ಚೆ ಮಾಡದೇ ಇರ್ತೀವಾ?. ಅಸಮಾಧಾನ, ಕೋಪ ಇದ್ರೆ ಸಮಾಧಾನ ಮಾಡ್ಬೇಕು. ಇವತ್ತಿಂದ ಅಲ್ಲ ಸುಮಾರು 40-45 ವರ್ಷದಿಂದಲೇ ನಾನು ಅಂಬರೀಷ್ ಫ್ರೆಂಡ್ಸ್. ರಾಜಕೀಯದಲ್ಲಿ ಎಳುಬೀಳುಗಳು ಇದ್ದೇ ಇರ್ತವೆ. ಆದ್ರೆ ಗೆಳತನಕ್ಕೆ ಧಕ್ಕೆ ಇಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು.

    ಇತ್ತ ಅಂಬರೀಷ್ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಗಳು ಆಗಬೇಕೆಂದು ಆಸೆ ಪಟ್ಟೋನು ನಾನು. ನನ್ನ ಸಚಿವರನ್ನಾಗಿ ಮಾಡಿ ಅಂತಾ ಸಿಎಂ ಅವರನ್ನು ನಾನು ಕೇಳಿಲ್ಲ. ಮಿನಿಸ್ಟರ್ ಮಾಡಿದ್ದಾರೆ ಸಂತೋಷ. ಶಾಸಕರಾದ ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇದ್ದೇ ಇರತ್ತೆ. ಅವರಿಗೆ ಬಿಟ್ಟುಕೊಟ್ಟಿದ್ದೀವಿ ತೊಂದ್ರೆಯಿಲ್ಲ. ನನ್ನಷ್ಟದಂತೆ ನಾನು ಇಲ್ಲಿ ಇದ್ದೀನಿ ಅಂತಾ ಹೇಳಿದ್ರು.

    ಒಟ್ಟಿನಲ್ಲಿ ಅಂಬಿಯನ್ನ ಸಂಪುಟದಿಂದ ಕೈ ಬಿಟ್ಟ ಬಳಿಕ ಸಿಎಂ ಮೊದಲ ಬಾರಿಗೆ ಅಂಬರೀಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಕುತೂಹಲ ಮೂಡಿಸಿದೆ. ಸಿಎಂ ವಿರುದ್ಧ ಸ್ವತಃ ಅಂಬರೀಷ್ ಬಹಿರಂಗವಾಗಿ ಕಿಡಿಕಾರಿದ್ರು. ಆದ್ರೀಗ ಮತ್ತೆ ದೋಸ್ತಿ ಕುದುರಿದ್ದು, ಅಂಬಿಯನ್ನ ಸಿದ್ದರಾಮಯ್ಯ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸಿಎಂಗಾಗಿ ನಾಟಿ ಕೋಳಿ ಸಾರು, ಮುದ್ದೆ ಸಿದ್ದಮಾಡಿಸಿದ್ರು. ಒಟ್ಟಿನಲ್ಲಿ ಮಾಜಿ ಸಚಿವ ಅಂಬರೀಷ್ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿರುವ ಹಿಂದೆ ಭಾರೀ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗ್ತಿದೆ.

    ಔತಣಕೂಟದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಎ.ಬಿ.ಪಾಟೀಲ್, 1 ಸಾವಿರ ಕೋಟಿ ವೆಚ್ಚದಲ್ಲಿ `ಮಹಾಭಾರತ’ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವ ಕರಾವಳಿ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಉಪಸ್ಥಿತರಿದ್ರು.

  • ಸಿಎಂ ಮೇಲೆ ಮುನಿಸಿಲ್ಲ, ಕಾಂಗ್ರೆಸ್ ಬಿಡಲ್ಲ: ಅಂಬರೀಷ್ ಸ್ಪಷ್ಟನೆ

    ಸಿಎಂ ಮೇಲೆ ಮುನಿಸಿಲ್ಲ, ಕಾಂಗ್ರೆಸ್ ಬಿಡಲ್ಲ: ಅಂಬರೀಷ್ ಸ್ಪಷ್ಟನೆ

    ಮಂಡ್ಯ: ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ನನಗೆ ಮುಖ್ಯಮಂತ್ರಿಗಳ ಮೇಲೆ ಯಾವುದೇ ಮುನಿಸಿಲ್ಲ. ನನಗೆ ಎಲ್ಲವನ್ನೂ ಕೊಟ್ಟ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ಮಂಡ್ಯ ಶಾಸಕ ಅಂಬರೀಷ್ ಹೇಳಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರುವುದು ಸಂತಸ ತಂದಿದೆ. ಒಂದು ವರ್ಷ ಆಡಳಿತ ಬಾಕಿ ಇದೆ. ಹಾಗಾಗಿ ಚೆನ್ನಾಗಿ ಕೆಲಸ ಆಗುತ್ತೆ ಎಂದು ಜನ ವಿಶ್ವಾಸ ಇಟ್ಟಿದ್ದಾರೆ. ಜನರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ರು.

    ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾನು ಮುಖ್ಯಮಂತ್ರಿ ಆಗಬೇಕು ಅಂತೇನೂ ಆಸೆ ಇಟ್ಟುಕೊಂಡಿಲ್ಲ. ಜನ ನನ್ನನ್ನು ಮುಖ್ಯಮಂತ್ರಿಗಿಂತ ಚೆನ್ನಾಗಿ ನೋಡಿಕೊಂಡಿದ್ದಾರೆ. ಗೌರವ ಕೊಟ್ಟಿದ್ದಾರೆ. ನನ್ನಂತೆ ಹಲವರು ಮಂತ್ರಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ನಾನು ಮೂರೂವರೆ ವರ್ಷ ಸಚಿವನಾಗಿದ್ದೇನೆ. ಬೇರೆಯವರಿಗೂ ಒಂದೂವರೆ ವರ್ಷ ಸಿಗಲಿ ಬಿಡಿ ಅಂದ್ರು.

    ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಲೇ ಏನೂ ಹೇಳಲ್ಲ. ಇನ್ನು ಒಂದು ವರ್ಷ ಬಾಕಿ ಇದೆ. ಭವಿಷ್ಯವನ್ನು ಯಾರು ಬಲ್ಲವರು ಅಂತಾ ಹೇಳಿದ ಅಂಬರೀಷ್ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಗುಟ್ಟು ಬಿಟ್ಟು ಕೊಡಲಿಲ್ಲ.