ಬೆಂಗಳೂರು: ಟಾಲಿವುಡ್ ನಟ ಜಗಪತಿ ಬಾಬು ಅವರು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ.
ಈ ವೇಳೆ ಜಗಪತಿ ಬಾಬು ಅವರು ಡಾ. ರಾಜ್ ಕುಮಾರ್, ಅಂಬರೀಶ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಶೂಟಿಂಗ್‍ಗೆ ಬೆಂಗಳೂರಿಗೆ ಆಗಮಿಸಿರೋ ಜಗಪತಿ ಬಾಬು, ಮೊದಲ ಬಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ್ದಾರೆ.
ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಟಾಲಿವುಡ್‍ನ ಕಲಾವಿದನಿಗೆ ಜೊತೆಯಾಗಿದ್ದಾರೆ. ನಾಲ್ಕು ದಿನ ಕಂಠೀರವದಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಜಗಪತಿ ಬಾಬು ಭಾಗಿಯಾಗಲಿದ್ದಾರೆ.
ಮಂಡ್ಯ: ಈ ಬಾರಿಯ ಚುನಾವಣೆಯಲ್ಲಿ ಅಂಬರೀಶ್ ಸಾವಿನ ಅನುಕಂಪ, ಮೋದಿ ಸರ್ಕಾರದ ಬೆಂಬಲದಿಂದ ಸುಮಲತಾ ಗೆದ್ದಿದ್ದಾರೆ. ಅದನ್ನು ಬಿಟ್ಟರೆ ಕಾಂಗ್ರೆಸ್ಸಿಗರ ಬೆಂಬಲದಿಂದ ಸುಮಲತಾ ಗೆದ್ದಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ನಮಗೂ ಮಂಡ್ಯದಲ್ಲಿ ರಕ್ಷಣೆ ಇಲ್ಲ ಎಂದು ಹೇಳಿಕೆ ನೀಡಿದ್ದ ಶ್ರೀರಂಗಪಟ್ಟಣ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಟಾಂಗ್ ನೀಡಿದ ರವೀಂದ್ರ ಅವರು, ಹಾಗೆ ಯಾರಾದರೂ ಹೊಡೆಯಲು ಬಂದರೆ ನನಗೆ ತಿಳಿಸಲಿ ನಾನು ಭದ್ರತೆ ಕೊಡಿಸುತ್ತೇನೆ. ಅಗಲೇ ಮೂರು ಗನ್ ಮ್ಯಾನ್‍ಗಳು ಅವರ ಜೊತೆ ಇದ್ದಾರೆ ಬೇಕಾದರೆ ಇನ್ನೂ ಇಬ್ಬರನ್ನು ಕಳಿಸುತ್ತೇನೆ ಎಂದು ಹೇಳಿದರು.
ಕೇಂದ್ರಕ್ಕೆ ಸಂಬಂಧಿಸಿದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ರಾಜ್ಯ ಚುನಾವಣೆಯಲ್ಲಿ ಮತದಾರರು ಮೈತ್ರಿ ಸರ್ಕಾರದ ಪರ ಇದ್ದಾರೆ ಎನ್ನುವುದು ಸಾಬೀತಾಗಿದೆ. ಮೋದಿ ಪ್ರಭಾವಿ ವ್ಯಕ್ತಿ ಅವರ ನೇತೃತ್ವದಲ್ಲಿ ಬಿಜೆಪಿ ಅವರು ಆಪರೇಷನ್ ಕಮಲಕ್ಕೆ ಕೈ ಹಾಕಲ್ಲ ಎಂದುಕೊಂಡಿದ್ದೇನೆ. ಆಪರೇಷನ್ ಕಮಲ ಸತ್ಯಕ್ಕೆ ದೂರವಾದ ವಿಚಾರ ಆಪರೇಷನ್ ಕಮಲದ ಟೇಬಲ್ ತೆಗೆಯಲಾಗಿದೆ, ಲೈಟ್ ಆಫ್ ಆಗಿದೆ ಎಂದು ಟೀಕೆ ಮಾಡಿದರು.
ನಾನು ಜೆಡಿಎಸ್ ಶಾಸಕ ನನ್ನ ನಿಲುವು ಪಕ್ಷದ ಪರ ಹಾಗೂ ದೇವೇಗೌಡ ಮತ್ತು ಕುಮಾರಸ್ವಾಮಿ ಪರ ಇರುತ್ತದೆ. ಶ್ರೀರಂಗಪಟ್ಟಣ ಪುರಸಭೆ ಫಲಿತಾಂಶ ಜೆಡಿಎಸ್ ಪರ ಬಂದಿರೋದು ಸಂತಸ ತಂದಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಕೈ ಬಲಪಡಿಸಲು ಸ್ಥಳೀಯ ಸಂಸ್ಥೆ ಜೆಡಿಎಸ್ ಪರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಂಡ್ಯ: ನಾಲ್ಕು ವಾರಗಳ ಹಿಂದೆ ಇಲ್ಲಿಯೇ ಬಂದು ನಿಂತಿದ್ದೆ. ಈಗ ನಾಲ್ಕು ವಾರಗಳಲ್ಲಿ ಏನೇನು ಕಂಡಿದ್ದೇನೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಮತ್ತೆ ಬಂದಿದ್ದೇನೆ. ಪಕ್ಷದಿಂದ ಉಚ್ಛಾಟನೆಗೊಂಡು ನನ್ನ ಪರ ಪ್ರಚಾರ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ. ಮಂಡ್ಯದ ಕ್ಷೇತ್ರದ ಜನರ ಪ್ರೀತಿಯನ್ನು ಈ ನಾಲ್ಕು ವಾರಗಳಲ್ಲಿ ಕಂಡಿದ್ದೇನೆ. ನಾನು ಮೊದಲು ಹೆಜ್ಜೆ ಇಟ್ಟಾಗ ಒಂಟಿ ಹೋರಾಟವಿತ್ತು. ಇದೀಗ ನೀವೆಲ್ಲರೂ ನನ್ನೊಂದಿಗೆ ಇದ್ದೀರಿ ಎಂದು ಹೇಳುವ ಮೂಲಕ ಮಂಡ್ಯ ಜನರನ್ನು ವಂದಿಸಿದರು.
ಯಾರಿಗೂ ಗೌರವ ನೀಡದ ಸಿಎಂ: ಅಭಿವೃದ್ಧಿ ಪರ ಮಾತಾಡೋದನ್ನು ಬಿಟ್ಟು ಮಹಿಳೆಯರನ್ನು ತೇಜೋವಧೆ ಮಾಡಿ ನನ್ನನ್ನು ಕುಗ್ಗಿಸುವ ಪ್ರಯತ್ನ ಮಾಡಲಾಯಿತು. ರಾಜ್ಯದ ಮುಖ್ಯಮಂತ್ರಿಗಳಿಗೆ ಮಹಿಳೆಯರು, ದೇಶದ ಸೈನಿಕರ ಬಗ್ಗೆ ಗೌರವ ಇಲ್ಲ. ಮಂಡ್ಯದಲ್ಲಿ ನನ್ನ ಪತಿ ಅಂಬರೀಶ್ ಸೇವೆ ಸಲ್ಲಿಸಿದ ಕ್ಷೇತ್ರ. ನಾನು ಹುಚ್ಚೇಗೌಡರ ಸೊಸೆ ನೀವು ಒಪ್ಪಿಕೊಳ್ಳಿ ಬಿಡಿ. ಈಗಾಗಲೇ ಮಂಡ್ಯದ ಜನತೆ ನನಗೆ ಸರ್ಟಿಫಿಕೇಟ್ ನೀಡಿದ್ದಾರೆ. ರಾಜಕಾರಣದಲ್ಲಿ ಎಲ್ಲವನ್ನು ಬಿಟ್ಟು ನಡೆದುಕೊಳ್ಳಬೇಕೆಂದು ಎಲ್ಲಿಯೂ ಬರೆದಿಲ್ಲ.
ಜನರ ಕಣ್ಣೀರು ಒರೆಸಲು ನಾನು ರಾಜಕಾರಣಕ್ಕೆ ಬಂದಿರೋದು. ನಮ್ಮ ಕಣ್ಣೀರು ಒರೆಸಲು ಅವರಿಲ್ಲ ಎಂದು ಹೇಳುವ ಮೂಲಕ ಸಿಎಂ ಕಣ್ಣೀರಿಗೆ ವ್ಯಂಗ್ಯ ಮಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಕರೆಂಟ್, ಕೇಬಲ್ ಕಟ್ ಮಾಡಿಸಿದ್ದರು. ಅಂದು ಏನಾಗಿತ್ತು ಇಂದು ಸಹ ಅದೇ ಮಾಡುತ್ತಿದ್ದಾರೆ. ಒಬ್ಬ ಸುಮಲತಾರನ್ನು ಎದುರಿಸಲು ಕಾಂಗ್ರೆಸ್ ಅಧ್ಯಕ್ಷ, ಆಂಧ್ರ ಸಿಎಂ, ಮೈತ್ರಿ ಸರ್ಕಾರದ ನಾಯಕರು ಬರುತ್ತಾರೆ. ಎಲ್ಲರೂ ಅಭಿವೃದ್ಧಿ ವಿಚಾರ ಬಿಟ್ಟು ಸುಮಲತಾರ ಬಗ್ಗೆ ಮಾತನಾಡುತ್ತಾರೆ ಎಂದರು.
ಹಿತ ಶತ್ರು: ಡಿಕೆ ಶಿವಕುಮಾರ್ ಅವರು ನಿಖಿಲ್ ಕುಮಾರಸ್ವಾಮಿಗೆ ಮತ ಹಾಕಿದ್ರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೇಳುತ್ತಾರೆ. ಅಂಬರೀಶ್ ರಾಜಕೀಯದಲ್ಲಿ ಯಾರ ಬಗ್ಗೆಯೂ ಮಾತನಾಡಿಲ್ಲ. ಆದ್ರೆ ಅದೇ ಅಂಬರೀಶ್ ಅವರನ್ನು ರಾಜಕೀಯದಲ್ಲಿ ದ್ವೇಷ ಮಾಡುತ್ತಿದ್ದ ಓರ್ವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂಬ ಗಂಭೀರ ಆರೋಪ ಮಾಡಿದರು. ರಾಜಕೀಯದಲ್ಲಿ ಇದು ನನ್ನ ಮೊದಲ ಹೆಜ್ಜೆ. ಆದರೆ ಅಂಬರೀಶ್ ಜೊತೆಯಲ್ಲಿದ್ದರಿಂದ ರಾಜಕಾರಣದ ವಿಷಯಗಳು ಗೊತ್ತಿದೆ.
ಮಂಡ್ಯ ದುರಂತ: ನನ್ನ ನೋವನ್ನು ಮರೆತು ನಿಮ್ಮೊಂದಿಗೆ ಇರಲು ಬಂದೆ. ಆದರೆ ಪದೇ ಪದೇ ಅದನ್ನು ನೆನಪು ಮಾಡಿ ನೋವುಂಟು ಮಾಡುತ್ತಿದ್ದಾರೆ. ಈ ಕಣ್ಣೀರಿನ ಹಿಂದೆ ಈಗ ನೀವು ನೀಡಿದ ಧೈರ್ಯವಿದೆ. ಅಂದು ಮಂಡ್ಯ ದುರಂತ ಕಂಡ ಅಂಬರೀಶ್ ನಾನು ಅಲ್ಲಿಗೆ ಹೋಗಲು ಆಗುತ್ತಿಲ್ಲ ಎಂದು ನೊಂದು ಮಾತನಾಡಿದ್ರು. ಆಗ ಟಿವಿ ನೋಡದಂತೆ ಮನವಿ ಮಾಡಿದೆ. ಅಂದೇ ರಾತ್ರಿ 9 ಗಂಟೆ ವೇಳೆಗೆ ಅವರಿಗೆ ಹೃದಯಘಾತವಾಗಿತ್ತು. ನನಗೆ ಮಾತನಾಡಲು ಆಗದ ಶಾಕ್ ನಲ್ಲಿದೆ. ಮಂಡ್ಯಗೆ ಅವರು ಮಾಡಿದ ಸೇವೆ ಹಾಗೂ ಅರ್ಹತೆ ಕಾರಣದಿಂದ ನೀವು ಇಂದು ಮುಖ್ಯಮಂತ್ರಿಯಾಗಿ ನಿಮ್ಮ ಕರ್ತವ್ಯ ಮಾಡಿದ್ದೀರಿ. ಆದರೆ ನಿಮ್ಮ ಕಾರ್ಯದ ಬಗ್ಗೆ ಕೃತಜ್ಞತೆ ಇದೆ. ನಿಮ್ಮ ಒತ್ತಡದಿಂದಲೇ ಇದನ್ನೆಲ್ಲಾ ಹೇಳಿದ್ದೇನೆ. ವಿನಃ ಸಾರ್ವಜನಿಕರವಾಗಿ ಇಂತಹ ಅಂಶಗಳನ್ನು ಮಾತನಾಡಲು ನನಗೆ ಇಷ್ಟವಿಲ್ಲ ಎಂದರು.
ಮಂಡ್ಯದಲ್ಲಿ ಅಂತರಾಷ್ಟ್ರಿಯ ಮಟ್ಟದ ಕ್ರೀಡಾಂಗಣ ಮಾಡುವ ಉದ್ದೇಶ ಅಂಬರೀಶ್ ಅವರಿಗೆ ಇತ್ತು. ಮಂಡ್ಯ ರಸ್ತೆಗಳನ್ನ ಸಿಂಗಾಪುರದಂತೆ ಮಾಡುವ ಆಸೆ ಹೊಂದಿದ್ದರು. ಅಂಬಿ ಕನಸಿನ ಅಭಿವೃದ್ಧಿಯನ್ನು ಮುಂದಿವರಿಸಲು ನಾನು ಬಂದಿದ್ದು, ಆದರೆ ಎಲ್ಲವನ್ನು 1 ದಿನದಲ್ಲಿ ಮಾಡುತ್ತೇನೆ ಎಂಬ ಸುಳ್ಳು ಆಶ್ವಾಸನೆ ನೀಡಿಲ್ಲ. ನನಗೆ ಒಂದು ಅವಕಾಶ ಕೊಟ್ಟು ನೋಡಿ ನಾನು ಅಂಬರೀಶ್ ಅವರ ಪತ್ನಿ ಎಂಬುವುದನ್ನು ತೋರಿಸುತ್ತೇನೆ. ಇಷ್ಟು ವರ್ಷ ಅವರಿಗೆ ನೀಡಿದ ಪ್ರೀತಿಯನ್ನು ನೀವು ಬಿಟ್ಟುಕೊಟ್ಟಿಲ್ಲ. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ನನ್ನ ಮೇಲೆ ಭರವಸೆ ಇಡಿ, ಅಂಬರೀಶ್ ಎಂದು ನಿಮಗೆ ಮೋಸ ಮಾಡಿಲ್ಲ. ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಸಮಾನರಾಗಿ ಕಾಣುತ್ತಿದ್ದರು. ನಾನು ಆದೇ ದಾರಿಯಲ್ಲಿ ನಡೆಯುತ್ತೇನೆ ಎಂದರು.
ಇಂದು ನಾನು ನಿಮ್ಮಲ್ಲಿ ಕೇವಲ ಮತಗಳನ್ನು ಮಾತ್ರ ಕೇಳುತ್ತಿಲ್ಲ. ಮಂಡ್ಯ ಜನರ ಸ್ವಾಭಿಮಾನವನ್ನು ಭಿಕ್ಷೆಯಾಗಿ ಕೇಳುತ್ತಿದ್ದೇನೆ. ಮಂಡ್ಯದ ಸೊಸೆಯಾಗಿ ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತಿದ್ದು, ಸೆರಗು ಹಿಡಿದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಕೈ ಬಿಡಬೇಡಿ. ಇಂದು ನಾನು ಈ ಹೆಜ್ಜೆ ಹಾಕದಿದ್ದರೆ ಅದು ಅಂಬಿ ಅವರ ನೆನಪುಗಳಿಗೆ ಮಾಡಿದ ಮೋಸ ಆಗುತ್ತದೆ. ನನ್ನ ಮೊದಲ ಹೆಜ್ಜೆ ಕೇವಲ ಭಾವನಾತ್ಮಕ ಹೆಜ್ಜೆ ಆಗಿತ್ತು. ಆದರೆ ಈ 4 ವಾರಗಳ ಅವಧಿಯಲ್ಲಿ ನಾನು ಹಲವು ಸಂಗತಿಗಳನ್ನು ನೋಡಿದ್ದು, ಅಂದು ಅಂಬಿ ಅಣ್ಣನನ್ನು ನೋಡಲು ನಿಮ್ಮ ಹಣ ಏಕೆ ಎಂದು ಪ್ರಶ್ನೆ ಮಾಡಿದ್ದ ಸ್ವಾಭಿಮಾನವನ್ನು ಮತ್ತೆ ನನಗೆ ಕೊಡಿ ಎಂದು ಮನವಿ ಮಾಡಿದರು.
ಬೆಂಗಳೂರು: ಇಂದು ಕೆಜಿಎಫ್ ಚಿತ್ರ ಬಿಡುಗಡೆಯಾಗಿದ್ದು, ಇಡೀ ಚಿತ್ರತಂಡ ಮತ್ತು ಕರುನಾಡಿನ ಜನತೆ ಖುಷಿಯಲ್ಲಿದ್ದಾರೆ. ಇಂದು ಕರುನಾಡಿನ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂಭ್ರಮದ ದಿನದಂದು ರಾಕಿಂಗ್ ಸ್ಟಾರ್ ಯಶ್ ಭಾವುಕರಾಗಿದ್ದಾರೆ.
ಇಂದು ಟ್ವಿಟ್ಟರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಫೋಟೋ ಹಾಕಿಕೊಂಡು ಮಿಸ್ ಯು ಅಣ್ಣಾ ಎಂದು ಬರೆದುಕೊಂಡಿದ್ದಾರೆ. ಅಂಬರೀಶ್ ಫೋಟೋಗೆ ಸುಮಲತಾ, ಅಭಿಷೇಕ್ ಜೊತೆಗೆ ಯಶ್ ಕೈಮುಗಿಯುತ್ತಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.
ಅಂಬರೀಶ್ ಈ ಹಿಂದೆ ಹಲವು ಬಾರಿ ಕೆಜಿಎಫ್ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಯಶ್ ಸಹ ಕೆಲ ಸುದ್ದಿಗೋಷ್ಠಿಗಳಲ್ಲಿ ಹೇಳಿದ್ದರು. ನಾನು ನಿನ್ನ ಜೊತೆ ಕೆಜಿಎಫ್ ಸಿನಿಮಾ ನೋಡ್ತಿನಿ ಅಂತಾ ಅಂಬರೀಶ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಯಶ್ ಅವರು ಟ್ವಿಟ್ಟರ್ ನಲ್ಲಿ ಫೋಟೋ ಹಾಕಿಕೊಂಡು ಅಣ್ಣನನ್ನು ನೆನಪು ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ತಾಲೂಕಿನ ತಾಳಹಳ್ಳಿ ಗ್ರಾಮದ ಗ್ರಾಮಸ್ಥರು ತಮ್ಮ ಊರಿನ ಪ್ರಮುಖ ರಸ್ತೆಗೆ ‘ಕಲಿಯುಗ ಕರ್ಣ ಅಂಬರೀಶ್’ ಎಂದು ನಾಮಕರಣ ಮಾಡುವ ಮೂಲಕ ಮಂಡ್ಯದ ಗಂಡು ದಿವಂಗತ ಅಂಬರೀಶ್ ರವರ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ನೇರವೇರಿಸಿದ್ದಾರೆ.
ತಾಳಹಳ್ಳಿ ಗ್ರಾಮಸ್ಥರು ಇಂದೂ ಅದ್ಧೂರಿಯಾಗಿ ಅಂಬರೀಷ್‍ರವರ ಪುಣ್ಯಸ್ಮರಣೆಯನ್ನು ಮಾಡಿದ್ದಾರೆ. ಅಲ್ಲದೇ ವಿಶೇಷವಾಗಿ ಅಂಬರೀಶ್ ಭಾವಚಿತ್ರಕ್ಕೆ ಕಬ್ಬಿನ ಜಲ್ಲೆ ಹಾಗೂ ಹೂವಿನ ಅಲಂಕಾರ ಮಾಡಿ, ಪೂಜೆ-ಪುನಸ್ಕಾರ ನೇರವೇರಿಸಿದರು. ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೊಸ ಬಟ್ಟೆ, ಮದ್ಯದ ಬಾಟಲಿ, ಸಿಗರೇಟ್ ಸೇರಿದಂತೆ ಹೂ, ಹಣ್ಣು-ಕಾಯಿ ಸೇರಿದಂತೆ ಭರ್ಜರಿ ಬಾಡೂಟವನ್ನ ನೈವೈದ್ಯವಾಗಿ ಅರ್ಪಿಸಿದ್ದಾರೆ.
ಬಾಡೂಟದಲ್ಲಿ ಅಂಬಿ ಅವರಿಗೆ ಪ್ರಿಯವಾಗಿದ್ದ ಮುದ್ದೆ, ನಾಟಿಕೋಳಿ ಸೇರಿದಂತೆ ಬಾಡೂಟವನ್ನು ನೂರಾರು ಮಂದಿಗೆ ಉಣಬಡಿಸಿದ್ದಾರೆ. ಗ್ರಾಮಸ್ಥರು ತಮ್ಮೂರಿನ ರಸ್ತೆಗೆ ಅಂಬಿ ಹೆಸರು ನಾಮಕರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ದಿವಂಗತ ಅಂಬರೀಶ್ ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬೆಂಗಳೂರು: ವಿಷ್ಣು ಸ್ಮಾರಕ ಸ್ಥಾಪನೆಯಲ್ಲಿ ಉಂಟಾಗಿರುವ ಗೊಂದಲ ಬೆನ್ನಲ್ಲೇ ನಟ ಜಗ್ಗೇಶ್ ಮುಂದಿನ ತಲೆಮಾರಿನ ಯಾವುದೇ ನಟರಿಗೆ ಸರ್ಕಾರ ವತಿಯಿಂದ ಸ್ಮಾರಕ ನಿರ್ಮಾಣ ಕಾರ್ಯ ಬೇಡ ಎಂದು ಹೇಳಿದ್ದು, ಈ ಹೇಳಿಕೆ ನಟ ಉಪೇಂದ್ರ ಸಹಮತ ನೀಡಿ ಚಪ್ಪಾಳೆ ತಟ್ಟಿದ್ದಾರೆ.
ಈ ಕುರಿತು ಉಪೇಂದ್ರ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್ ಅವರಿಗೆ ಸ್ಮಾರಕ ಸಾಕು. ಮುಂದಿನ ಪೀಳಿಗೆಯವರಿಗೆ ಸ್ಮಾರಕ ಬೇಂಕು ಅಂದರೆ ನಮ್ಮ ಜಾಗದಲ್ಲೇ ಅಥವಾ ಅದಕ್ಕಾಗಿಯೇ ಒಂದು ಎಕರೆ ಜಾಗ ತಗೊಂಡು ಅಲ್ಲಿ ಸ್ಮಾರಕ ಮಾಡಿಕೊಳ್ಳಿ ಹಾಗೂ ನಮಗೇ ಸ್ಮಾರಕ ಮಾಡಿಕೊಡಿ ಎಂದು ಯಾವ ಕಲಾವಿದನೂ ಸರ್ಕಾರದ ಮುಂದೆ ಹೋಗಿ ಭಿಕ್ಷೆ ಬೇಡಬೇಡಿ ಬರೆಯಲಾಗಿದೆ.
ಈ ಫೋಟೋ ಪೋಸ್ಟ್ ಮಾಡಿರುವ ಉಪೇಂದ್ರ ಅವರು, ಚಪ್ಪಾಳೆ ತಟ್ಟುವ ಇಮೋಜಿ ಹಾಕಿ ಬೆಂಬಲ ಸೂಚಿಸಿದ್ದಾರೆ. ಉಪೇಂದ್ರ ಅವರ ಈ ಟ್ವೀಟ್‍ಗೆ ನಟ ಜಗ್ಗೇಶ್ ಕೂಡ ಧನ್ಯವಾದ ತಿಳಿಸಿ, ಲವ್ ಯೂ ಎಂದು ಹೇಳಿದ್ದಾರೆ.
ಇತ್ತ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್, ಅಪ್ಪಾಜಿ ಶಾರೀರಕವಾಗಿ ದೂರವಾಗಿ ಒಂಭತ್ತು ವರ್ಷಗಳು ಕಳೆದಿವೆ. ಇದೂವರೆಗೆ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬೆಂಗಳೂರಲ್ಲಿ ಪುಣೆ ಫಿಲ್ಮ್ ಇನ್‍ಸ್ಟಿಟ್ಯೂಷನ್ ರೀತಿ ಸಿನಿಮಾ ಮತ್ತು ಟಿಲಿವಿಷನ್ ಸಂಸ್ಥೆಯ ಶಾಖೆ ತೆರೆಯಬೇಕು. ಶುಕ್ರವಾರ ನಡೆದ ಸಭೆಯಲ್ಲಿ ಮೈಸೂರಿನಲ್ಲಿ ಅಂಬರೀಶ್ ಅವರ ಹೆಸರಲ್ಲಿ ಫಿಲ್ಮ್ ಸಿಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಅಪ್ಪಾಜಿ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕೇವಲ ಬೇರೆ ಇಬ್ಬರ ನಾಯಕರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಹಾಗಾದ್ರೆ ಅಪ್ಪಾಜಿ ಕನ್ನಡ ಚಲನಚಿತ್ರಕ್ಕೆ ಸೇವೆ ಸಲ್ಲಿಸಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಸಹೋದರ ಡಾ. ಹರೀಶ್ ಅವರು ಮೃತಪಟ್ಟ ಒಂದು ವರ್ಷದಲ್ಲಿ ಅಂಬರೀಶ್ ಅವರು ನಿಧನರಾಗಿದ್ದಾರೆ. ಹರೀಶ್ 2017ರ ನವೆಂಬರ್ 24 ರಂದು ನಿಧನರಾಗಿದ್ದರು. ಕಾಕತಾಳೀಯ ಎಂಬಂತೆ ಇದೇ ದಿನದಂದು ಅಂಬರೀಶ್ ಅವರು ಕೂಡ ನಿಧನಾಗಿದ್ದಾರೆ.
ಡಾ. ಹರೀಶ್ ಅವರು 35 ವರ್ಷಗಳಿಂದ ದೊಡ್ಡರಸಿಕೆರೆ ಸಮೀಪದ ಕೆ.ಎಂ ದೊಡ್ಡಿಯಲ್ಲಿ ತಮ್ಮದೇ ಆದ ಕ್ಲೀನಿಕ್ ಹೊಂದಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವೆಂಬರ್ 24 ಮೈಸೂರಿನ ನಿವಾಸದಲ್ಲಿ ಮೃತಪಟ್ಟಿದ್ದರು. ಸಾಕಷ್ಟು ದಿನಗಳಿಂದ ಅಂಬರೀಶ್ ಅವರು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ವಿಪರ್ಯಾಸವೆಂದರೆ ಅಣ್ಣ ನಿಧನರಾದ ದಿನದಂದೇ ಅಂಬರೀಶ್ ಅವರು ಕೂಡ ಇಹಲೋಕವನ್ನು ತ್ಯಜಿಸಿದ್ದಾರೆ.
ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಎಂದೇ ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಹೆಸರು ಮಾಡಿದವರು. ಅಂಬರೀಶ್ ಅವರನ್ನು ಮಂಡ್ಯದ ಮಗ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು. ಅವರ ನಿಧನದಿಂದ ಅಭಿಮಾನಿಗಳಿಗೆ ಬಹಳ ಬೇಸರವಾಗಿದ್ದು, ತಮ್ಮ ಪ್ರೀತಿಯ ನಟನನ್ನು ಮಂಡ್ಯದ ಮಣ್ಣಿನಲ್ಲೇ ಮಣ್ಣು ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ರಾತ್ರಿಯಿಂದಲೇ ಅಭಿಮಾನಿಗಳು ಸಂದೇಶಗಳನ್ನು ರವಾನಿಸುತ್ತ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅಂಬರೀಶ್ ಅವರು ದೊಡ್ಡ ಅರಸಿಕೆರೆಗೆ ಒಂದು ಕಳಸವಿದ್ದಂತೆ. ಅವರು ಇಡೀ ಊರೇ ಹೆಮ್ಮ ಪಡುವಂತಹ ವ್ಯಕ್ತಿ. ಚಿತ್ರರಂಗ ಹಾಗೂ ರಾಜಕೀಯದಲ್ಲಿ ಅಪಾರ ಕೀರ್ತಿಯನ್ನು ಗಳಿಸಿದ್ದಾರೆ. ಅವರ ನಿಧನದಿಂದ ಇಡೀ ಊರೇ ಅನಾತವಾಗಿದೆ ಎಂದು ದೊಡ್ಡರಸಿಕೆರೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗ ಯಾವುದೇ ಸಂಕಷ್ಟದಲ್ಲಿದ್ದರೂ ರೆಬಲ್ ಸ್ಟಾರ್ ಅಂಬರೀಶ್ ಚಿತ್ರೋದ್ಯಮಕ್ಕೆ ಹಿರಿಯರಾಗಿ ಬಂದ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಡಾ. ರಾಜ್‍ಕುಮಾರ್ ನಿಧನರಾದ ನಂತರ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಸಲಹೆ ಸೂಚನೆ ನೀಡುತ್ತ ಹಿರಿಯಣ್ಣನಾಗಿ, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು.
ಕನ್ನಡ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದರೂ ಇಡೀ ಚಿತ್ರೋದ್ಯಮ ಅಂಬರೀಶ್ ಬಳಿ ಹೋಗುವುದು ಮಾಮೂಲು ಆಗಿತ್ತು. ಹೀಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿದ್ದರು.
ಡಾ. ರಾಜ್‍ಕುಮಾರ್ ಅವರನ್ನು ಚಿತ್ರರಂಗ ಕಳೆದುಕೊಂಡ ನಂತರವೂ ಕನ್ನಡ ಚಿತ್ರೋದ್ಯಮ ಹಲವಾರು ಸಮಸ್ಯೆಗಳನ್ನು, ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸಿತ್ತು. ಚಿತ್ರರಂಗಕ್ಕೆ ಹಿರಿಯರಾಗಿದ್ದಾರೆ ಎನ್ನುವ ಕಾರಣಕ್ಕೆ ಅಂಬರೀಶ್ ಅವರ ಮಾತಿಗೆ ಗೌರವ ನೀಡುವುದಕ್ಕಿಂತ ಅವರ ರೆಬೆಲ್ ಸ್ವಭಾವಕ್ಕೆ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮರುಮಾತನಾಡದೆ ಅವರ ತೀರ್ಮಾನಕ್ಕೆ ಓಕೆ ಎನ್ನುತ್ತಿದ್ದರು. ಈ ಕಾರಣಕ್ಕಾಗಿಯೇ ಅಂಬರೀಶ್ ಇದ್ದಲ್ಲಿ ಜಗಳವಿಲ್ಲ, ವಿವಾದವಿಲ್ಲ ಎಂದು ಚಿತ್ರರಂಗದಲ್ಲಿ ಮಾತು ಕೇಳಿ ಬಂದಿತ್ತು.
ನಟ ಅರ್ಜುನ್ ಸರ್ಜಾ ಮೇಲೆ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿರಲಿಲ್ಲ. ಸಂಧಾನ ಮಾತುಕಥೆಯಿಂದ ಇಬ್ಬರ ವಿವಾದ ಇತ್ಯರ್ಥವಾಗದೇ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದಾಗ, `ನಾನೇನು ಸುಪ್ರೀಂ ಅಲ್ಲ. ನನಗೂ ವಯಸ್ಸಾಯ್ತು’ ಎಂದು ನಗುಮುಖದಿಂದಲೇ ಉತ್ತರಿಸಿ ಅಸಹಾಯಕತೆಯನ್ನು ತಿಳಿಸಿದ್ದರು.
ಮಂಡ್ಯ: ರೆಬಲ್ ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್ ರಾಜಕೀಯದಿಂದ ದೂರ ಉಳಿದ ಬೆನ್ನಲ್ಲೇ ಅವರ ಆಪ್ತರಿಗೆ ಕೆಪಿಸಿಸಿ ಶಾಕ್ ನೀಡಿದೆ.
ಹೌದು, ಅಂಬರೀಶ್ ಆಪ್ತ ಲಿಂಗರಾಜು ಅವರನ್ನು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟು ಕೆಪಿಸಿಸಿ ಆದೇಶ ಹೊರಡಿಸಿದೆ. ಈ ಮೂಲಕ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಅವರನ್ನು ನೇಮಿಸಿದೆ.
ಕೆಪಿಸಿಸಿಯ ಈ ನಿರ್ಧಾರಕ್ಕೆ ಶ್ರೀರಂಗಪಟ್ಟಣ ಕೈ ಕಾರ್ಯಕರ್ತರು ಅಸಮಧಾನ ಹೊರ ಹಾಕಿದ್ದಾರೆ. ಅಂಬರೀಶ್ ಅವರು ರಾಜಕೀಯ ತೆರೆಗೆ ಸರಿದ ಹಿನ್ನೆಲೆಯಲ್ಲಿ ಆಪ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ನಾಯಕರು ಮಂಡ್ಯದಲ್ಲಿ ಮಾಜಿ ಸಚಿವ ಅಂಬರೀಶ್ ಬೆಂಬಲಿಗರ ಟಾರ್ಗೆಟ್‍ಗೆ ಮುಂದಾದರಾ? ಅಂಬರೀಶ್ ಆಪ್ತರಿಗೆ ನೀಡಿರುವ ಅಧಿಕಾರ ಬದಲಾವಣೆಗೆ ಕೆಪಿಸಿಸಿಯಲ್ಲಿ ಸಿದ್ಧತೆ ನಡೆದಿದೆಯಾ? ಅಂಬರೀಶ್ ಆಪ್ತರಾಗಿದ್ದಕ್ಕೆ ಲಿಂಗರಾಜು ಅವರನ್ನು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತಾ ಎನ್ನುವುದು ಪಕ್ಷದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.
ಉದ್ದೇಶ ಪೂರ್ವಕವಾಗಿ ಅಂಬರೀಶ್ ರಾಜಕೀಯ ಶಕ್ತಿ ಕುಂದಿಸಲು ಕೆಲವು ನಾಯಕರು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಅಂಬಿ ಆಪ್ತರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರ ಸ್ಥಾನವನ್ನು ಬಲಾಯಿಸಲು ಕೆಲ ಕೆಪಿಸಿಸಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಮಂಡ್ಯ: ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಅವರು ಮೊಬೈಲ್ ಟಾರ್ಚ್ ಲೈಟ್ ಸಹಾಯದಿಂದ ಮತದಾನ ಮಾಡಿದ್ದಾರೆ.
ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಅಂಬರೀಶ್ ಹಾಗೂ ಡಿ.ಸಿ.ತಮ್ಮಣ್ಣ ಸ್ವಗ್ರಾಮಕ್ಕೆ ಭೇಟಿ ನೀಡಿ ಮತದಾನವನ್ನು ಮಾಡಿದರು. ಈ ವೇಳೆ ವಿವಿ ಪ್ಯಾಟ್ ಬಳಿ ನಿಂತು ಏನೋ ಇಲ್ಲಿ ಕತ್ತಲೆ ಎಂದು ಬೆಂಬಲಿಗರಿಗೆ ಹೇಳಿದರು. ಬಳಿಕ ಬೆಂಬಲಿಗರು ಮೊಬೈಲ್ ಟಾರ್ಚ್ ವ್ಯವಸ್ಥೆ ಮಾಡಿದರು. ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಅಂಬರೀಶ್ ವೋಟ್ ಮಾಡಿದರು.
ಮತಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಿ ಉಪಚುನಾವಣೆಯ ಫಲಿತಾಂಶ ಕುರಿತು ಈ ಚುನಾವಣೆ ಸರಿಯಿಲ್ಲ. ಮೂರು ಮೂರು ದಿನಕ್ಕೆ ಚುನಾವಣೆ 13 ದಿನಕ್ಕೆ ಕಳೆದುಹೋಗುತ್ತದೆ. ಮತ್ತೆ ಓಡಾಡಬೇಕು. 5 ಕ್ಷೇತ್ರದಲ್ಲಿ ಐದು ಕ್ಷೇತ್ರ ಗೆಲ್ಲುತ್ತೇವೆ ಎಂದರು. ಈ ವೇಳೆ ರಾಮನಗರದಲ್ಲಾದ ಬೆಳವಣಿಗೆಗಳಿಗೆ ಅದು ಸರಿಯಾದುದ್ದಲ್ಲ. ಆದರೆ ಒಳಗಡೆ ಏನೇನೂ ಮಾತುಕತೆಗಳು ನಡೆದಿದೆಯೋ ಯಾರಿಗೂ ಗೊತ್ತಿಲ್ಲ. ಮನಸ್ತಾಪ ಇರಬಹುದು ಅಥವಾ ಬೇರೆ ರೀತಿಯ ವ್ಯವಹಾರ ಇರಬಹುದು ಅಷ್ಟೇ ಎಂದರು.
ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಆಳ್ವಿಕೆ ಮಾಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಜ್ಯದಲ್ಲೇ ಜೆಡಿಎಸ್, ಕಾಂಗ್ರೆಸ್ ಆಳ್ವಿಕೆಯಲ್ಲಿದೆ ಇನ್ನೂ ಮಂಡ್ಯದಲ್ಲಿ ಆಗೋದಿಲ್ಲವೇ ಈ ಬಾರಿ ದಾಖಲೆಯ ಅಂತರದಲ್ಲಿ ಶಿವರಾಮೇಗೌಡರು ಗೆಲ್ಲಲೇಬೇಕು ಎಂದು ತಿಳಿಸಿದರು.