Tag: ambarish

  • ಹೆಚ್‍ಡಿಕೆ, ಸುಮಲತಾ ವಾಕ್ಸಮರ- ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

    ಹೆಚ್‍ಡಿಕೆ, ಸುಮಲತಾ ವಾಕ್ಸಮರ- ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅವರ ಪರ ನಾವಿದ್ದೇವೆ ಎಂದು ಅಂಬಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ರವರು ಹೇಳಿದ್ದಾರೆ.

    ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಾಕ್ ಸಮರ ಹಿನ್ನೆಲೆ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಬೆಂಗಳೂರು ಘಟಕದ ವತಿಯಿಂದ ಪ್ರತಿಭಟನೆ ಪ್ರಾರಂಭವಾಗಿದೆ. ಬೆಂಗಳೂರಿನ ಕಂಠೀರವ ಸ್ಟೋಡಿಯೋದ ಬಳಿ ಸುಮಾರು 50ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದು, ಅಂಬರೀಷ್ ಫೋಟೋ ಹಿಡಿದು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಅಂಬರೀಶ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ರವರು ಮಾತನಾಡಿ, ಮಂಡ್ಯ ಸಂಸದೆ ಸುಮಲತಾ ಅವರ ಪರ ನಾವಿದ್ದೇವೆ. ಕುಮಾರಸ್ವಾಮಿ ಮನೆ ಮುಂದೆ ನಮಗೆ ಪ್ರೊಟೆಸ್ಟ್ ಮಾಡುವುದಕ್ಕೆ ಕೆಪಾಸಿಟಿ ಇಲ್ವಾ. ಪುಷ್ಪಾ ಅಮರನಾಥ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮಹಿಳಾ ಮಣಿಗಳಿದ್ದಾರೆ. ಯಾರೂ ಮಾತಾನಾಡುವುದಕ್ಕೆ ಮುಂದೆ ಬರುತ್ತಿಲ್ಲ. ಅಂಬರೀಶ್ ಅಣ್ಣ ಇದ್ದಾಗ ಯಾವ ನಾಯಿಗಳು ಬೊಗಳುತ್ತಿರಲಿಲ್ಲ. ಅಂಬರೀಶ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

  • ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ

    ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ

    – ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ

    ಮಂಡ್ಯ: ಸಿನಿಮಾ ರೀತಿಯಲ್ಲಿಯೇ ಸಂಸದೆಯಾಗಿ ಸುಮಲತಾ ಅಂಬರೀಶ್ ನಟನೆ ಮಾಡುತ್ತಿದ್ದಾರೆ. ಕರ್ಣ ಎಂದು ಹೆಸರು ಪಡೆದಿರುವ ಅಂಬರೀಶ್‍ರವರ ಕೊಡುಗೆಯೂ ಮಂಡ್ಯಕ್ಕೆ ಶೂನ್ಯ. ಸಂಸದೆ ಸುಮಲತಾ ಕೊರೊನಾ ಕಾಲದಲ್ಲಿ ಏನು ಮಾಡಿದ್ದಾರೆ ಎಂದು ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನೆ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ವಾಭಿಮಾನದ ಅಭ್ಯರ್ಥಿಗಳನ್ನು ಸುಮಲತಾರವರು ಹಾಕಲಿ ಇದು ಚಾಲೆಂಜ್ ಎಂದು ಸವಾಲೊಡ್ಡಿದ್ದಾರೆ. ಜೊತೆಗೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ, ಕಾಂಗ್ರೆಸ್ ಯಾವುದಾದರೂ ಸೇರಲಿ ಯಾವ ಪಕ್ಷವನ್ನು ಸೇರದಿದ್ದರೆ ವಾಟ್ ನೆಕ್ಟ್? ಮಂಡ್ಯ ಜನರು ದಡ್ಡರಲ್ಲ, ಒಂದು ಸಲ ಯಾಮಾರಿಸಿದ್ದೀರಾ, ಜನ ಮತ್ತೆ ಯಾಮಾರಲ್ಲ. ಯಾವುದಾದರೂ ಒಂದು ಪಕ್ಷ ಸೇರಿ ಆಗ ಅಲ್ಲಿನ ಮುಖಂಡರಾದರು ನಿಮ್ಮ ಜೊತೆ ಬರುತ್ತಾರೆ ಎಂದು ಸುಮಲತಾರವರಿಗೆ ರಾಜಕೀಯ ಕಿವಿಮಾತು ಹೇಳಿದ್ದಾರೆ.

    ಸುಮಲತಾ ಮಂಡ್ಯ ಪಾಲಿಟಿಕ್ಸ್ ನಲ್ಲಿ ಬಿಗ್ ಜೀರೋ. ಆಕೆ ಬಗ್ಗೆ ಮಾತನಾಡದಂತೆ ನಮ್ಮ ನಾಯಕರಲ್ಲಿ ಮನವಿ ಮಾಡುತ್ತೇನೆ. ದೊಡ್ಡ ಸೊನ್ನೆಯಾಗಿರುವಾಗ ಅಂಬರೀಶ್ ಹೆಸರು ಹೇಳಿಕೊಂಡು ಹೋದವರು ಯಾರು? ಅಂಬರೀಶ್ ಗುಣಾನೇ ಬೇರೆ ಸುಮಲತಾ ಗುಣಾನೇ ಬೇರೆ. ಅಂಬರೀಶ್ ಪತ್ನಿ ಎಂದು ಹೈಜಾಕ್ ಮಾಡಿ ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ ಅಷ್ಟೇ. ಅಂಬರೀಶ್ ಕಾಲದಲ್ಲೂ ಗಣಿ ನಡೆಯುತ್ತಿತ್ತು ಅಲ್ವಾ? ಆಗ ಯಾಕೆ ಇಯಮ್ಮ ನಿಲ್ಲಿಸಲಿಲ್ಲ. ಮಂಡ್ಯ ಜಿಲ್ಲೆಯಿಂದ ಹೋದವರಿಗೆ ಕಾಫಿ ಬೇಡ, ನೀವು ಒಂದು ಲೋಟ ನೀರು ಕೊಟ್ಟಿದ್ದರೆ ಸಾಕಾಗಿತ್ತು. ಮಂಡ್ಯ ಜನಕ್ಕೆ ಎಲ್ಲವೂ ಗೊತ್ತಿದೆ, ಹಾಗಾಗಿ ಇದನ್ನು ಇಲ್ಲಿಗೆ ಬಿಡಿ. ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಸುಮಲತಾರನ್ನು ಜನ ಆಗಲೇ ಮರೆತಿದ್ದರು, ಆದರೆ ನಮ್ಮ ನಾಯಕರೇ ಮಾತನಾಡಿ ಮತ್ತೆ ನೆನಪಿಸಿದರು ಎಂದಿದ್ದಾರೆ.

    ಅಂಬರೀಶ್ ಸತ್ತಾಗ ಮಂಡ್ಯಕ್ಕೆ ಶವ ತೆಗೆದುಕೊಂಡು ಹೋಗುವುದು ಬೇಡ ಅಂತ ಈಯಮ್ಮ ಹೇಳಿದರು. ಆದರೆ ಕುಮಾರಸ್ವಾಮಿ ಮಂಡ್ಯಕ್ಕೆ ತಂದರು. ರಾಜ್‍ಕುಮಾರ್ ಪಕ್ಕದಲ್ಲೇ ಅಂಬಿ ಇರಬೇಕು ಅಂತ ಸಮಾಧಿಗೆ ಜಾಗ ಕೊಟ್ಟರು. ಸುಮಲತಾ ಆಂಧ್ರಕ್ಕೂ ಮಂಚವಾಡು ಅನಂತುಡು ಅಂದಂಗೆ ಅವರು ಅನಂತಪುರದವರು. ಅಂಬರೀಶ್ ಮದುವೆ ಆಗಿ ಬಂದ ಮೇಲೆ ಅವರ ಧರ್ಮಪತ್ನಿ ಅಂತ ಸ್ವೀಕಾರ ಮಾಡಿದ್ದೇವೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲಾ ಎನ್ನುವುದರ ಮೂಲಕ ಮತ್ತೆ ಸುಮಲತಾ ಮೂಲ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

  • ರಾಕ್‍ಲೈನ್ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ ಯತ್ನ

    ರಾಕ್‍ಲೈನ್ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ ಯತ್ನ

    ಬೆಂಗಳೂರು: ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗಿದ್ದು, ಆಕ್ರೋಶ ಹೊರ ಹಾಕುತ್ತಿದ್ದಾರೆ. ಶುಕ್ರವಾರ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆ ಇಂದು ರಾಕ್‍ಲೈನ್ ವೆಂಕಟೇಶ್ ನಿವಾಸದ ಮುಂದೆ ಅಪಾರ ಪ್ರಮಾಣದ ಕಾರ್ಯಕರ್ತರು ಸೇರ್ಪಡೆಯಾಗಿದ್ದಾರೆ.

    ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ರಾಕ್‍ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೆಎಸ್‍ಆರ್ ಪಿ ಪೊಲೀಸರು, ಸ್ಥಳೀಯ ಠಾಣೆಯ ಪೊಲೀಸರ ನಿಯೋಜನೆ ಮಾಡಲಾಗಿದ್ದು, ರಾಕ್‍ಲೈನ್ ಮನೆ ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದೆ.

    ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಮಗೂ ಅಭಿಮಾನವಿದೆ. ಕುಮಾರಸ್ವಾಮಿ ಬಗ್ಗೆ ಮಾತಾಡೋಕೆ ನೀವು ಯಾರು? ನೀವು ಚಿತ್ರರಂಗದ ಬಗ್ಗೆ ಮಾತ್ರ ಮಾತನಾಡಿ. ಕುಮಾರಸ್ವಾಮಿ ಅವರ ಬಳಿ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು. ಸದ್ಯ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?:
    ಅಂಬರೀಶ್ ಮುಂದೆ ಕೈ ಕಟ್ಟಿ ಮಾತಾಡುತ್ತಿದ್ರು. ಅವತ್ತು ಅಂಬಿ ಮುಂದೆ 000.5 ವಾಲ್ಯೂಮ್‍ನಲ್ಲಿ ಅಂದು ಮಾತಾಡ್ತಿದ್ದರು. ಇವತ್ತು ಯಾವ್ ಟೋನ್‍ನಲ್ಲಿ ಮಾತಾಡ್ತಿದ್ದೀರಾ. ಇದೆಲ್ಲ ಬೇಡ. ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಅಂತ ಹೇಳುತ್ತಿರಾ? ನಿಮ್ಮ ವಕ್ತಾರರ ಕೈಯಲ್ಲಿ ಅಂಬರೀಶ್ ಬಗ್ಗೆ ಮಾತಾಡ್ತೀರಾ? ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆ ಕುಮಾರಸ್ವಾಮಿ ಕಾಯಿಸಿದ್ದರು. ದೊಡ್ಡಣ್ಣನ ಕೊಟ್ಟ ಮನವಿ ಪತ್ರವನ್ನ ಮುಖದ ಮೇಲೆ ಬಿಸಾಕಿದ್ರಿ. ಇವನು ಏನ್ ಮಾಡಿದ್ದಾನೇ..ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅವಮಾನ ಮಾಡಿದ್ರಿ. ಅಂಬರೀಶ್ ರಿಂದ ಏನೇನು ಲಾಭ ಪಡೆದಿದ್ದೀರಾ ನೆನಪು ಮಾಡಿಕೊಳ್ಳಿ. ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ? ಅಂದು ನಿಖಿಲ್ ನಿಲ್ತಾರೆ ಅಂತ ನೀವು ಬಂದು ಕೇಳಿದ್ರೆ ಸುಮಲತಾ ಅವರೇ ನಿಂತು ನಿಖಿಲ್ ಪರ ಕೆಲಸ ಮಾಡೋರು. ಸುಮಲತಾಗೆ ಚುನಾವಣೆಗೆ ನಿಲ್ಲಲು ಇಷ್ಟ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್

    ಸುಮಲತಾ ಅಡ್ಡ ಮಲಗಿಸಿದ್ರೆ ಅಂತ ಕುಮಾರಸ್ವಾಮಿ ಮಾತಾಡಿದ್ರು. ಅಮೇಲೆ ಕಾವಲು ಕಾಯಬೇಕು ಅಂದೆ ಅಂತ ಹೇಳಿದ್ರಿ. ಚುನಾವಣೆ ಸಮಯದಲ್ಲಿ ಫೈಸ್ಟಾರ್ ಹೋಟೇಲ್ ನಲ್ಲಿ ಕುಳಿತು ನೀವು ಏನ್ ಮಾಡಿದ್ರಿ ಎಲ್ಲರಿಗೂ ಗೊತ್ತು. ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ

  • ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    – ಸುಮಲತಾ ಹೇಳಿಕೆ ಬೆನ್ನಲ್ಲೇ ಫೋಟೋ ಹರಿಬಿಟ್ಟ ಫ್ಯಾನ್ಸ್

    ಮಂಡ್ಯ: ನಟ ಅಂಬರೀಶ್ ಮುಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಂಸದೆ ಸುಮಲತಾ ಮತ್ತು ಅಂಬರೀಶ್ ಬೆಂಬಲಿಗರು ಪೇಜ್ ಗಳಲ್ಲಿ ವಿವಿಧ ಬರಹಗಳಡಿ ಈ ಫೋಟೋ ಶೇರ್ ಮಾಡಲಾಗಿದೆ.

    ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಹೇಳಿದ್ದರು.

    ಈ ಹೇಳಿಕೆ ಬೆನ್ನಲ್ಲೇ ಫೋಟೋ ವೈರಲ್ ಮಾಡುವ ಮೂಲಕ ಸುಮಲತಾ ಬೆಂಬಲಿಗರು ದಳಪತಿಗಳಿಗೆ ಟಕ್ಕರ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಅಂಬರೀಶ್ ಎದುರು ಕೈಕಟ್ಟಿ ನಿಲ್ಲುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

    ಚೈಲ್ಡಿಶ್ ಹೇಳಿಕೆ:
    ಸ್ಥಳೀಯ ಜೆಡಿಎಸ್ ಶಾಸಕರುಗಳು ಕಳೆದ ಎರಡು ವರ್ಷದಿಂದ ನಾನು ಏನು ಮಾಡಿದರೂ ಅದನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ. ಅವರಿಂದ ಸಹಕಾರವನ್ನ ಬಯಸುವುದು ಕನಸಿನ ಮಾತು. ಯಾರಾದರೂ ಒಳ್ಳೆ ಕೆಲಸ ಮಾಡಿದರೆ ಅದನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ. ಕೊರೊನದ ಸಂದರ್ಭದಲ್ಲಿ ಆಕ್ಸಿಜನ್ ಹಾಗೂ ಐಸಿಯು ಅಂಬ್ಯುಲೆನ್ಸ್ ನಾನು ಪರ್ಸನಲ್ ಆಗಿ ಕೊಡಿಸಿದ್ದೇನೆ. ಒಂದೊಂದು ಜೀವಕ್ಕೂ ಬೆಲೆ ಇಲ್ವಾ? ಅವರು ಎಲ್ಲವನ್ನು ತಿರುಚಿ ತಿರುಗಿಸಿ ಹೇಳ್ತಾರೆ. ಕಳೆದ ಲೋಕ ಸಭೆ ಚುನಾವಣೆ ಸೋಲು ಇದುವರೆಗೆ ಡೈಜೆಸ್ಟ್ ಮಾಡಿಕೊಳ್ಳೋಕೆ ಅವರಿಗೆ ಆಗಿಲ್ಲ. ಈ ಬೆಳವಣಿಗೆಯೆ ಅದಕ್ಕೆಲ್ಲಾ ದೊಡ್ಡ ಕಾರಣ. ಅವರು ಮಂಡ್ಯಕ್ಕೆ ಬಂದಾಗಲೆಲ್ಲಾ ಆ ನೋವನ್ನು ಹೊರ ಹಾಕ್ತಿದಾರೆ. ಆದರೆ ಜನ ಒಂದು ಸರಿ ತೀರ್ಪು ಕೊಟ್ಟ ನಂತರ ಅದನ್ನ ಒಪ್ಪಿಕೊಳ್ಳಬೇಕು. ಮುಂದಿನ ಬಾರಿ ಪ್ರಯತ್ನ ಪಡೋಣ ಅನ್ನಬೇಕು ಎರೆಡು ಬಾರಿ ಸಿಎಂ ಆದವರು ಅದನ್ನ ಸ್ವೀಕರಿಸಬೇಕು ಹೊರತು ಈ ರೀತಿಯ ಚೈಲ್ಡಿಶ್ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

    ಡೀಲ್ ಗಳಲ್ಲಿ ಮಾಸ್ಟರ್ ಯಾರು ಅಂತ ಕರ್ನಾಟಕದ ಜನರಿಗೆ ಗೊತ್ತು. ನಾನು ಜಾಸ್ತಿ ಮಾತನಾಡಿದರೆ ಅವರಿಗೆ ಹೇಸಿಗೆ ಆಗುತ್ತೆ. ಡೀಲ್ ಅವರಿಗೆ ಪ್ರಧಾನ ಅಜೆಂಡ ರೀತಿ ಆಗಿದೆ. ಪ್ರತಿ ಒಂದು ಕೆಲಸದಲ್ಲೂ ಡೀಲ್ ಮಾಡ್ತಾರೆ. ಆಡಿಯೋ, ವೀಡಿಯೋ ಏನೇ ಇದ್ರೂ ರಿಲೀಸ್ ಮಾಡಲಿ ಅದನ್ನ ಫೇಸ್ ಮಾಡ್ತೀನಿ ಅವರಿಗೆ ಚಾಲೆಂಜ್ ಮಾಡ್ತೀನಿ. ಅಂಬರೀಶ್ ಮನೆಯಲ್ಲಿ ನಾನೇ ಆಗಲಿ, ನನ್ನ ಮಗನಾಗಲಿ ಭ್ರಷ್ಟಾಚಾರದ ದಾರಿಯಲ್ಲಿ ಹೋಗುವ ಕರ್ಮ ನಮಗೆ ಇಲ್ಲ ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಆಗಬೇಕು – ಮಂಡ್ಯ ಸಂಸದೆ ಸುಮಲತಾ ಆಗ್ರಹ

  • ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ: ಸುದೀಪ್

    ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ: ಸುದೀಪ್

    – ಸುಮಲತಾ, ಅಭಿಷೇಕ್ ಹೇಳಿದ್ದೇನು..?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ 69ನೇ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್, ರಮೇಶ್ ಅರವಿಂದ್, ದರ್ಶನ್ ಸೇರಿದಂತೆ ಇತರೆ ಸ್ಯಾಂಡಲ್‍ವುಡ್ ಮಂದಿ ಶುಭ ಕೋರಿದ್ದಾರೆ. ಅಂಬಿ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತದ್ದೇವೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.

    ನಿಜಕ್ಕೂ ಮಿಸ್ ಯೂ ಮಾಮ ಎಂದು ಬರೆದುಕೊಂಡು ಅಂಬರೀಶ್ ಅವರ ಕೆಲವು ಫೊಟೋಗಳನ್ನು ಟ್ವೀಟ್ ಮಾಡುವಮೂಲಕವಾಗಿ ತಾವು ಎಷ್ಟು ಅಂಬಿ ಅವರುನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಕೆಲವು ಪದಗಳ ಮೂಲಕವಾಗಿ ಸುದೀಪ್ ಹೇಳಿದ್ದಾರೆ.

    ಅಜರಾಮರ ನೆನಪುಗಳು, ಚಿರಂತನ ಚೈತನ್ಯ, ಅಪಾರ ಅಕ್ಕರೆ, ಸಂಜೀವಿನಿ ಸ್ನೇಹ, ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸಿ ಹೃದಯವಂತಿಕೆ ಶಾಶ್ವತ ನಲ್ಮೆ, ಧನ್ಯ ಬದುಕು ಎಂದು ಸುಮಲತಾ ಅಂಬರೀಶ್ ಟ್ವೀಟ್ ಮೂಲಕ ಪತಿಯನ್ನು ಸ್ಮರಿಸಿದ್ದಾರೆ. ಅಪ್ಪನ ಹುಟ್ಟುಹಬ್ಬಕ್ಕೆ ಇನ್‍ಸ್ಟಾಗ್ರಾಮ್‍ನಲ್ಲಿ ಶುಭಕೋರಿರುವ ಅಭಿಷೇಕ್, ಹ್ಯಾಪಿ ಬರ್ತ್ ಡೇ ಲೆಜೆಂಡ್ ಎಂದು ಅಪ್ಪನ ಜೊತೆಗಿರುವ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

    ಅಂಬರೀಶಣ್ಣ ಅಮರ, ಅಜರಾಮರ ಎಂದು ನಿರ್ದೇಶಕ ಪವನ್ ಒಡೆಯರ್ ಶುಭಕೋರಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಹ ಅಂಬಿಗೆ ವಿಶ್ ಮಾಡಿದ್ದು, ಇಂದು “ರೆಬೆಲ್ ಸ್ಟಾರ್” ಅಂಬರೀಷ್ ರವರ ಜನ್ಮ ದಿನ… ಅವರ ನಟನೆ..ಕೆಲಸ.,ಮಾತು ..ನೆನಪು ಎಂದಿಗು ಮರೆಯೋಕೆ ಚಾನ್ಸೆ ಇಲ್ಲ… No way ಎಂದಿದ್ದಾರೆ. ಇದನ್ನೂ ಓದಿ: ಅಪ್ಪಾಜಿಯ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿ: ದರ್ಶನ್

     

    View this post on Instagram

     

    A post shared by Abishek Ambareesh (@abishekambareesh)

    ಅಂಬರೀಶ್ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋವನ್ನು ದರ್ಶನ್ ಹಂಚಿಕೊಂಡಿದ್ದಾರೆ. ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಕುರುಕ್ಷೇತ್ರ, ಅಂಬರೀಶ್ ಬುಲ್‍ಬುಲ್ ಮುಂತಾದ ಸಿನಿಮಾಗಳಲ್ಲಿ ದರ್ಶನ್ ಮತ್ತು ಅಂಬರೀಶ್ ಜೊತೆಯಾಗಿ ನಟಿಸಿದ್ದರು.

    ಅಂಬರೀಶ್ ಜನ್ಮದಿನದ ಪ್ರಯುಕ್ತ ಇಂದು ಸಂಸದೆ ಸುಮಲತಾ ಅಂಬರೀಶ್ ಅವರು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಸಮಾಧಿಗೆ ಅವರು ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಸಿದ್ದಾರೆ. ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಕೊವಿರೊನಾ ಇರುವುದರಿಂದ ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಹೇಳಿದ್ದಾರೆ. ಇದನ್ನೂ ಓದಿ: ಇಂದು ಅಂಬರೀಶ್ ಜನ್ಮದಿನ, ಯಾವುದೇ ಸಂಭ್ರಮಾಚರಣೆ ಬೇಡ: ಸುಮಲತಾ

    ನಮ್ಮೆಲ್ಲರ ಪ್ರೀತಿಯ ಅಂಬರೀಶ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕೊರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನೆ-ಮನಗಳಲ್ಲೇ ಆಚರಿಸೋಣ ಎಂದು ಸುಮಲತಾ ಮೊದಲೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಅಭಿಮಾನಿಗಳಲ್ಲಿ ಮನವಿಮಾಡಿದ್ದರು.

  • ರೆಬಲ್ ಸ್ಟಾರ್ ಅಂಬರೀಷ್ ಮುದ್ದಿನ ಕನ್ವರ್ ಇನ್ನಿಲ್ಲ

    ರೆಬಲ್ ಸ್ಟಾರ್ ಅಂಬರೀಷ್ ಮುದ್ದಿನ ಕನ್ವರ್ ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ ಕನ್ವರ್ ಲಾಲ್ ಇಂದು ಬೆಳಗ್ಗೆ ನಿಧನವಾಗಿದೆ.

    ಮೊದಲಿನಿಂದಲೂ ಪ್ರಾಣಿಪ್ರಿಯರಾಗಿದ್ದ ಅಂಬರೀಶ್‍ರವರಿಗೆ ಶ್ವಾನಗಳೆಂದರೆ ಬಹಳ ಪ್ರೀತಿ. ಹೀಗಾಗಿ ತಮ್ಮ ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಆ ಶ್ವಾನಗಳಿಗೆ ಕನ್ವರ್ ಲಾಲ್ ಹಾಗೂ ಬುಲ್‍ಬುಲ್ ಎಂದು ಹೆಸರಿಟ್ಟಿದ್ದರು.

    ಅಂಬರೀಶ್‍ರವರ ವೃತ್ತಿ ಜೀವನದಲ್ಲಿ ನಾಗರ ಹಾವು ಸಿನಿಮಾದ ಬುಲ್ ಬುಲ್ ಮಾತಾಡಕ್ಕಿಲ್ವಾ.. ಹಾಗೂ ಅಂತ ಚಿತ್ರದ ಕುತ್ತೇ..ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ಡೈಲಾಗ್‍ಗಳು ಬಹಳ ಖ್ಯಾತಿ ತಂದುಕೊಟ್ಟಿತ್ತು. ಇದರ ನೆನಪಿಗಾಗಿ ಅಂಬರೀಶ್‍ರವರು ತಮ್ಮ ಎರಡು ಶ್ವಾನಗಳಿಗೆ ಬುಲ್‍ಬುಲ್ ಹಾಗಾ ಕನ್ವರ್ ಎಂದು ನಾಮಕರಣ ಮಾಡಿದ್ದರು.

    ಸೇಂಟ್ ಬರ್ನಾಡ್ ತಳಿಯ ಶ್ವಾನಕ್ಕೆ ಕನ್ವರ್ ಲಾಲ್ ಕರೆಯುತ್ತಿದ್ದರು. ಅದು ಒಂಟಿಯಾಗಿರಬಾರದು ಎಂದು ಕನ್ವರ್ ಲಾಲ್ ಜೊತೆಗೆ ಬುಲ್‍ಬುಲ್ ನಾಯಿಯನ್ನು ತಂದು ಜೋಡಿ ಮಾಡಿದ್ದರು. ಪ್ರತಿ ನಿತ್ಯ ತಮಗೆ ಬಿಡುವು ಸಿಕ್ಕಾಗಲೆಲ್ಲಾ ಅಂಬರೀಶ್‍ರವರು ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಜೊತೆಗೆ ಕಾಲ ಕಳೆಯುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗುವಾಗ ಕೂಡ ಜೊತೆಯಲ್ಲಿ ಕನ್ವರ್‍ನನ್ನು ಕರೆದುಕೊಂಡು ಹೋಗುತ್ತಿದ್ದರು.

    ಕುಟುಂಬದ ಸದಸ್ಯನಂತಿದ್ದ ಕನ್ವರ್ ಅಂಬರೀಶ್- ನಿಧನರಾದ ಬಳಿಕ ಮಾನಸಿಕವಾಗಿ ನೊಂದಿತ್ತು. ಸರಿಯಾಗಿ ಊಟಮಾಡುತ್ತಿರಲಿಲ್ಲ ಹಾಗೂ ಒಬ್ಬಂಟಿಯಾಗಿ ಇರುತ್ತಿತ್ತು. ಇದೀಗ ಅಂಬಿ ನಿಧನರಾದ ಎರಡು ವರ್ಷದ ಬಳಿಕ ಕನ್ವರ್ ಲಾಲ್ ಕೊನೆಯುಸಿರೆಳೆದಿದ್ದಾನೆ. ಅದರಲ್ಲಿಯೂ ಅಂಬರೀಶ್‍ರವರ 69ನೇ ಜನ್ಮದಿನೋತ್ಸವಕ್ಕೆ ಇನ್ನೂ ಐದು ದಿನಗಳು ಬಾಕಿ ಇರುವಾಗಲೇ ಕನ್ವರ್ ಬಾರದ ಲೋಕಕ್ಕೆ ತೆರಳಿದ್ದಾನೆ. ಇದೀಗ ಬೆಂಗಳೂರಿನಲ್ಲಿ ಕನ್ವರ್ ಲಾಲ್‍ನನ್ನು ಮಣ್ಣು ಮಾಡಲಾಗಿದೆ.

    ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ತಮ್ಮ ಮುದ್ದಿನ ಶ್ವಾನ ಅಸುನೀಗಿದ್ದರಿಂದ ದುಃಖದಲ್ಲಿದ್ದಾರೆ.

  • ಚಂದನವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭಾವಂತ ನಿರ್ದೇಶಕ ಅಂಬರೀಶ್

    ಚಂದನವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭಾವಂತ ನಿರ್ದೇಶಕ ಅಂಬರೀಶ್

    ಬೆಂಗಳೂರು: ಸಿನಿಮಾ ನಿರ್ದೇಶಕನಾಗಬೇಕು ಎಂಬ ಕನಸ್ಸನ್ನು ಹೊತ್ತು ರೈತ ಕುಟುಂಬದಿಂದ ಗಾಂಧಿನಗರಕ್ಕೆ ಬಂದ ಪ್ರತಿಭಾವಂತ ಹುಡುಗ ಇಂದು ತನ್ನ ಕನಸಿನಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಪ್ರತಿಭಾವಂತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

    ಸ್ವಂತಿಕೆ, ಸ್ವಾಭಿಮಾನ, ಸತತ ಪರಿಶ್ರಮದಿಂದ ನಿರ್ದೇಶಕನಾಗಿ ಬೆಳೆಯುತ್ತಿರುವ ಈ ಹುಡುಗನ ಹೆಸರು ಅಂಬರೀಶ್. ಚಿತ್ರರಂಗದಲ್ಲಿ ಯಾರ ನೆರವೂ, ಬೆಂಬಲ ಇಲ್ಲದೆ ಕೇವಲ ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಅಂಬರೀಶ್ ಚಿತ್ರರಂಗದಲ್ಲಿ ಹಂತ ಹಂತವಾಗಿ ಹೆಸರು ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ತಾನೊಬ್ಬ ನಿರ್ದೇಶಕನಾಗಬೇಕು ದೇಸಿ ಸೊಬಗು ಒಳಗೊಂಡಿರುವ ಒಳ್ಳೆಯ ಕಥೆ, ಕಂಟೆಟ್ ಇರುವ ಸಿನಿಮಾ ನಿರ್ದೇಶನ ಮಾಡಿ ಮನರಂಜನೆ ನೀಡಬೇಕು ಎಂಬುದು ಅಂಬರೀಶ್ ಅವರ ಕನಸು. ಕಾಲೇಜು ದಿನಗಳಲ್ಲೇ ನಾಟಕಗಳಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದ ಅಂಬರೀಶ್, ರಂಗಭೂಮಿ ಕಲಾವಿದನಾಗಿ ರಂಗಭೂಮಿ ನಾಟಕಗಳನ್ನೂ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು.

    ನಿರ್ದೇಶನದ ಜೊತೆ ರಂಗಭೂಮಿ ನಾಟಕ ಹಾಗೂ ಬೀದಿ ನಾಟಕಗಳಲ್ಲಿಯೂ ಅಭಿನಯಿಸಿರುವ ಅಂಬರೀಶ್, ವಿದ್ಯಾಭ್ಯಾಸದ ಬಳಿಕ ಜಾಹೀರಾತುಗಳಲ್ಲಿ ಸ್ಕ್ರಿಪ್ಟ್ ಹಾಗೂ ಕಂಟೆಂಟ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಿಗೆ ಬರಹಗಾರನಾಗಿ ಅಂಬರೀಶ್ ಅನುಭವ ಪಡೆದಿದ್ದಾರೆ. ಆ ಅನುಭವದ ಶಕ್ತಿಯಿಂದಲೇ `ಜ್ವಲಂತ’, `ಕಾಲಂತಕ’ ಹಾಗೂ `ಹೋಪ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದಲ್ಲಿ ಯಾರ ಸಪೋರ್ಟ್ ಇಲ್ಲದೆ ಸ್ವಂತ ಪ್ರತಿಭೆ, ಸ್ವಾಭಿಮಾನದಿಂದ ಇಂದು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ ಅಂಬರೀಶ್.

    2016ರಲ್ಲಿ ತೆರೆಕಂಡ `ಜ್ವಲಂತ’ ಸಿನಿಮಾ ಮೂಲಕ ಚಂದನವನದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟ ಅಂಬರೀಶ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ `ಜ್ವಲಂತ’ ನಂತರ `ಕಾಲಂತಕ’ ಎಂಬ ಥ್ರಿಲ್ಲರ್ ಸಿನಿಮಾ ಕೂಡ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ, ಅರ್ಚನಾ ಜೋಯಿಸ್ ಅಭಿನಯದ ಈ ಚಿತ್ರ ಬಿಡುಗಡೆಯ ಹಂತದಲ್ಲಿದೆ.

    ಇದೀಗ `ಹೋಪ್’ ಎನ್ನುವ ಹೊಸ ಪ್ರಾಜೆಕ್ಟ್ ಚಿತ್ರೀಕರಣ ಕಂಪ್ಲೀಟ್ ಮಾಡಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಅಂಬರೀಶ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹೊಸ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದು ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳುವ ಆಲೋಚನೆಯಲ್ಲಿರುವ ಅಂಬರೀಶ್ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ. ಕನಸುಗಳನ್ನು ಕಾಣೋದಲ್ಲ ಅವುಗಳನ್ನು ನಿರಂತರ ಪರಿಶ್ರಮದಿಂದ ಸಾಕಾರಗೊಳಿಸಬೇಕು ಎನ್ನುವ ಅಂಬರೀಶ್, ಪ್ರತಿ ಕೆಲಸದಲ್ಲೂ ಸ್ವಂತಿಕೆ ಎನ್ನುವುದು ತುಂಬಾ ಮುಖ್ಯ ಅದುವೇ ನನ್ನ ಮೂಲಮಂತ್ರ ಎನ್ನುತ್ತಾರೆ.

    ನಿರ್ದೇಶಕನಾಗಿ ಉತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಬೇಕು, ಸಿನಿಮಾಗಳ ಮೂಲಕವೇ ಗುರುತಿಸಿಕೊಳ್ಳಬೇಕು ಎಂಬುದು ಅಂಬರೀಶ್ ಅವರ ಆಸೆ. ನಿರ್ದೇಶಕನಾಗಿ ಅಂಬರೀಶ್ ಇನ್ನೂ ಹೆಚ್ಚು ಹೆಸರು ಮಾಡಲಿ, ಉತ್ತಮ ಸಿನಿಮಾಗಳನ್ನು ಚಂದನವನಕ್ಕೆ ನೀಡಲಿ ಎಂಬುದೇ ನಮ್ಮ ಆಶಯ.

  • 40 ವರ್ಷದ ಸಿನಿಮಾ ಜರ್ನಿಯನ್ನು ನೆನೆದು ಕಣ್ಣೀರಾಕಿದ ನವರಸ ನಾಯಕ ಜಗ್ಗೇಶ್

    40 ವರ್ಷದ ಸಿನಿಮಾ ಜರ್ನಿಯನ್ನು ನೆನೆದು ಕಣ್ಣೀರಾಕಿದ ನವರಸ ನಾಯಕ ಜಗ್ಗೇಶ್

    – ರಾಜ್‍ಕುಮಾರ್, ಅಂಬರೀಶ್, ಶಿವಣ್ಣನನ್ನು ನೆನಪಿಸಿಕೊಂಡ ಜಗ್ಗೇಶ್

    ಬೆಂಗಳೂರು: 40 ವರ್ಷದ ಸಿನಿಮಾ ಪಯಣವನ್ನು ನೆನಪು ಮಾಡಿಕೊಂಡು ನವರಸ ನಾಯಕ ಜಗ್ಗೇಶ್ ಅವರು ಕಣ್ಣೀರು ಹಾಕಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ 40 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದೇ ವೇಳೆ ತಮ್ಮ ಆರಂಭ ದಿನಗಳ ಮತ್ತು ತಾವು ಪಟ್ಟ ಕಷ್ಟಗಳನ್ನು ನೆನೆದರು. ಜೊತೆಗೆ ತಮ್ಮ ಮಕ್ಕಳ ಬಗ್ಗೆ ಹಾಗೂ ರಾಯರ ಬಗ್ಗೆ ಮಾತನಾಡಿದರು. ಕಷ್ಟ ಕಾಲದಲ್ಲಿ ತಮ್ಮ ಜೊತೆಗೆ ನಿಂತ ಚಿತ್ರರಂಗದ ಹಲವಾರು ಮಂದಿಗೆ ಧನ್ಯವಾದ ಹೇಳಿದರು.

    ಚಿತ್ರರಂಗಕ್ಕೆ ಬಂದ ಪ್ರಾರಂಭದ ದಿನಗಳನ್ನು ನೆನಪು ಮಾಡಿಕೊಂಡ ಜಗ್ಗೇಶ್, ಎರಡು ಚಿತ್ರಗಳು ನನ್ನ ಬದುಕಿಗೆ ದೊಡ್ಡ ಓಪನಿಂಗ್ ಕೊಟ್ಟಿವೆ. ಅದರಲ್ಲಿ ಶಿವಣ್ಣ ಅಭಿನಯದ ‘ರಣರಂಗ’ ಸಿನಿಮಾ ಕೂಡ ಒಂದು. ಗಣೇಶನ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಶಿವಣ್ಣನ ಮನೆಗೆ ಹೋಗಿದ್ದೆ. ಅಂದು ಶಿವಣ್ಣ ಅವರೇ ನನಗೆ ‘ರಣರಂಗ’ ಸಿನಿಮಾದಲ್ಲಿ ಅವಕಾಶ ಕೊಡಿಸಿದರು. ಬೇರೆಯವರಿಗೆ ಫಿಕ್ಸ್ ಆಗಿದ್ದ ರೋಲ್ ಅನ್ನು ಬದಲಿಸಿ ನನಗೆ ಕೊಡಿಸಿದರು ಎಂದು ಶಿವಣ್ಣನನ್ನು ನೆನಪು ಮಾಡಿಕೊಂಡರು.

    ಜೊತೆಗೆ ತಾವು ಮೊದಲ ದಿನ ಕ್ಯಾಮೆರಾ ಫೇಸ್ ಮಾಡಿದ್ದ ದಿನಗಳನ್ನು ನೆನೆದು, ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಭಾವುಕರಾದರು. ನನ್ನ ಅಭಿನಯ ನೋಡಿ ಡಾ. ರಾಜಕುಮಾರ್ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಅವರ ಜೊತೆ ದಿನಪೂರ್ತಿ ಕಳೆಯುವ ಅವಕಾಶ ಸಿಕ್ಕಿತ್ತು. ರಾಜ್‍ಕುಮಾರ್ ಅವರನ್ನು ಎಲ್ಲರೂ ಒಬ್ಬ ಕಲಾವಿದ ಎಂದು ನೋಡುತ್ತಾರೆ. ಆದರೆ ನಾನು ಅವರಲ್ಲಿ ಒಬ್ಬ ಸಂತನನ್ನು ನೋಡಿದ್ದೆ ಎಂದ ಜಗ್ಗೇಶ್ ರಾಜ್‍ಕುಮಾರ್ ಅವರನ್ನು ಹಾಡಿಹೊಗಳಿದರು.

    ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅವರನ್ನು ಸ್ಮರಿಸಿದ ಜಗ್ಗೇಶ್, ‘ರೌಡಿ ಎಂಎಲ್‍ಎ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಅಂಬರೀಶ್ ಲೇ ಕರಿಯಾ ಹೀರೋ ಆಗು ಅಂದಿದ್ದರು. ನಾನು ನಾಯಕ ಆದೆ. ಆ ಸಿನಿಮಾದಲ್ಲಿ ಅಂಬರೀಶ್‍ಗೆ ಗೆಸ್ಟ್ ರೋಲ್ ಮಾಡಿಸಿದ್ದೆ. ಜೊತೆಗೆ ಆ ಸಿನಿಮಾವನ್ನು ನಾನೇ ನಿರ್ಮಿಸಿದ್ದೆ. ಆ ವೇಳೆ ಮಗನ ಸ್ಕೂಲ್ ಫೀಸ್ ಕಟ್ಟೋಕೆ ಆಗಿರಲಿಲ್ಲ. ಮಧ್ಯರಾತ್ರಿ 2 ಗಂಟೆಗೆ ಅಂಬರೀಶ್ ಅವರ ಮನೆಗೆ ಹೋಗಿದ್ದೆ ಸರಿಯಾಗಿ ಬೈದು ಕಳಿಸಿದರು. ನಂತರ ಮಾಣಿಕ್ ಚಂದ್ ಎಂಬವರು ಕರೆ ಮಾಡಿದರು. ಅಂಬರೀಶ್ ಹೇಳಿದ್ರು ಸಿನಿಮಾ ಮಾಡಿದಿರಂತೆ ಎಂದರು. ಅವರೇ ಕೈಯಿಂದ 5 ಲಕ್ಷ ಹಾಕಿ ಸಿನಿಮಾ ರಿಲೀಸ್ ಮಾಡಿದರು. ಆ ಸಿನಿಮಾ ಇತಿಹಾಸ ಬರೆಯಿತು. ಅಂದಿನ ಕಾಲದಲ್ಲೇ 1 ಕೋಟಿ ಕಲೆಕ್ಷನ್ ಮಾಡಿತ್ತು ಎಂದು ಕಷ್ಟದಲ್ಲಿ ನೆರವಾಗಿದ್ದ ಅಂಬಿಯವರನ್ನು ಸ್ಮರಿಸಿದರು.

  • ಅಭಿಮಾನಿಗಳಿಂದ ಅಂಬರೀಶ್‌ಗೆ ಗುಡಿ ನಿರ್ಮಾಣ

    ಅಭಿಮಾನಿಗಳಿಂದ ಅಂಬರೀಶ್‌ಗೆ ಗುಡಿ ನಿರ್ಮಾಣ

    ಮಂಡ್ಯ; ಅಂಬರೀಶ್ ಅಂದರೆ ಅಭಿಮಾನಿಗಳ ಆರಾಧ್ಯದೈವ. ಅಂಬಿಯ ಮಗ್ದ ಮನಸಿನ ಒರಟು ಮಾತಿಗೆ ತಲೆಬಾಗದವರೆ ಇಲ್ಲ. ಆದರೆ ರೆಬೆಲ್ ಸ್ಟಾರ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ತುಂಬುತ್ತಿದೆ. ವ್ಯಕ್ತಿ ಸತ್ತರು ಪ್ರೀತಿ ಸಾಯಲ್ಲ ಅನ್ನೋ ಹಾಗೇ ಅಭಿಮಾನಿಗಳು ಅಂಬಿ ಮೇಲಿನ ಪ್ರೀತಿ ಕಡಿಮೆ ಮಾಡಿಲ್ಲ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗದ ಕರ್ಣನಿಗೆ ಗುಡಿ ಕಟ್ಟಿದ್ದಾರೆ. ಅಂಬರೀಶ್‍ರವರ ವ್ಯಕ್ತಿತ್ವದ ನೆನಪನ್ನು ಮುಂದಿನ ಪೀಳಿಗೆಯೂ ತಿಳಿಯುವಂತೆ ಮಾಡುತ್ತಿದ್ದಾರೆ.

    ನವೆಂಬರ್ 24, 2018 ರೆಬೆಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿದರು. ನೆಚ್ಚಿನ ನಟನ ಕಳೆದುಕೊಂಡ ಕೋಟ್ಯಂತರ ಅಭಿಮಾನಿಗಳು ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದ್ದರು. ಅಭಿಮಾನಿಗಳಿಗೆ ಮಂಡ್ಯದ ಗಂಡಿನ ಮೇಲೆ ಪ್ರೀತಿ ಎಷ್ಟಿದೆ ಅನ್ನೋದನ್ನು ಅಂಬಿಯ ಅಂತಿಮ ದರ್ಶನಕ್ಕೆ ಬಂದಿದ್ದ ಜನಸಾಗರ ಸಾರಿ ಸಾರಿ ಹೇಳುತ್ತಿತ್ತು. ಹೀಗೆ ಅಂಬರೀಶ್ ಸಾವಿನ ಕಹಿನೆನಪಿಗೆ 2 ವರ್ಷ ತುಂಬುತ್ತಿದೆ. ಆದರೆ ಅಭಿಮಾನಿಗಳು ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿಯನ್ನೇ ಅವರ ಸಾವಿನ ನಂತರವೂ ಮುಂದುವರೆಸಿದ್ದಾರೆ. ನಲ್ಮೆಯ ನಟನಿಗೆ ಗುಡಿಕಟ್ಟಿ ಪೂಜಿಸಲು ನಿರ್ಧರಿಸಿದ್ದಾರೆ.

    ಅಂಬಿಯ ಗುಡಿ ನಿರ್ಮಾಣವಾಗಿರೋದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ. ಹೊಟ್ಟೆಗೌಡನ ದೊಡ್ಡಿ ಗ್ರಾಮದ ಜನರಿಗೆ ಅಂಬರೀಶ್ ಒಬ್ಬ ನಾಯಕ ನಟ ಅಲ್ಲ ಆರಾಧ್ಯದೈವ. ಹಾಗಾಗಿ ಈ ಜನರು ಅಂಬಿಯನ್ನ ದೇವರೆಂದೆ ಭಾವಿಸಿದ್ದಾರೆ. ಸುಮಾರು 100 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರು ಅಂಬಿ ಅಭಿಮಾನಿಗಳಿದ್ದಾರೆ. ಪ್ರತಿವರ್ಷ ಅಂಬರೀಶ್ ಹುಟ್ಟಿದ ದಿನ ಮೇ.29ರಂದು ಈ ಊರಲ್ಲಿ ಸಂಭ್ರಮ ಮನೆಮಾಡುತ್ತದೆ. ಮನೆ ಮನೆಗಳಲ್ಲೂ ಹಸಿರು ತೋರಣ ಕಟ್ಟಿ ಅಂಬಿ ಬರ್ತಡೇಯನ್ನ ಊರ ಹಬ್ಬದ ರೀತಿಯಲ್ಲಿ ಆಚರಿಸುವ ಇವರು, ಈಗ ಅಂಬಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.

    ಅಂಬರೀಶ್‍ರವರ ಚಿತಾಭಸ್ಮ ತಂದು ತಮ್ಮ ಕಚೇರಿಯಲ್ಲಿಟ್ಟು ಪೂಜಿಸಿದ್ದ ಅಭಿಮಾನಿಗಳು. ಅಭಿಮಾನಿಗಳಿಂದಲೇ ಹಣ ಸಂಗ್ರಹಿಸಿ ಗುಡಿ ಕಟ್ಟಿದ್ದಾರೆ. ಗುಡಿಯ ಒಳಭಾಗದಲ್ಲಿ ಅಂಬರೀಶ್‍ರವರ ಕಂಚಿನ ಪುತ್ಥಳಿ ಇಡಲಾಗಿದೆ. ಈ ಗುಡಿಗಾಗಿ 7-8 ಲಕ್ಷ ಖರ್ಚು ಮಾಡಿರುವ ಗ್ರಾಮಸ್ಥರು, ಅಂಬಿಯ ನೆನಪು ಎಂದಿಗೂ ಅಮರ ಅವರು ಬದುಕಿದ್ದ ರೀತಿ ಅವರ ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೂ ತಿಳಿಯಲಿ ಎಂದು ಈ ಪುತ್ಥಳಿ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.

  • ಅಭಿಷೇಕ್ ಮುಂದಿನ ಸಿನಿಮಾಗೆ ಸೂರಿ ಆ್ಯಕ್ಷನ್ ಕಟ್?

    ಅಭಿಷೇಕ್ ಮುಂದಿನ ಸಿನಿಮಾಗೆ ಸೂರಿ ಆ್ಯಕ್ಷನ್ ಕಟ್?

    ಬೆಂಗಳೂರು: ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಒಂದೊಳ್ಳೆ ಬ್ರೇಕ್‍ಗಾಗಿ ಎದುರು ನೋಡುತ್ತಿದ್ದು, ಉತ್ತಮ ಕಥೆಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಇದೀಗ ಚಂದನವನದ ಖ್ಯಾತ ನಿರ್ದೇಶಕರೊಬ್ಬರು ಅಭಿಷೇಕ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಮೂಲಕ ಒಂದೊಳ್ಳೆ ಸಿನಿಮಾ ಮಾಡಲು ಅಭಿ ಕಾಯುತ್ತಿದ್ದಾರೆ ಎನ್ನಲಾಗಿದೆ.

    ಅಭಿಷೇಕ್ ಸ್ಯಾಂಡಲ್‍ವುಡ್‍ನಲ್ಲಿ ಬೆಳೆಯಬೇಕು ಎಂಬುದು ಅಂಬರೀಶ್ ಅವರ ಮಹದಾಸೆಯಾಗಿತ್ತು. ಹೀಗಾಗಿಯೇ ಅಮರ್ ಸಿನಿಮಾಕ್ಕೆ ಸ್ವತಃ ಅವರೇ ಮಹೂರ್ತ ಮಾಡಿದ್ದರು. ನಾಯಕ ನಟನಾಗಿ ತಮ್ಮ ಮಗನನ್ನು ಅಂಬರೀಶ್ ಸ್ಯಾಂಡಲ್‍ವುಡ್‍ಗೆ ಪರಿಚಯಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ನಂತರ ಸಿನಿಮಾ ಬಿಡುಗಡೆಯಾದರೂ ಇಷ್ಟೇನು ಯಶಸ್ಸು ಕಾಣಲಿಲ್ಲ. ಹೀಗಾಗಿ ಒಂದೊಳ್ಳೆ ಬ್ರೇಕ್‍ಗೆ ಅಭಿಷೇಕ್ ಕಾಯುತ್ತಿದ್ದಾರೆ.

    ಇದೀಗ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕರೊಂದಿಗೆ ಅಭಿ ಕೆಲಸ ಮಾಡಲಿದ್ದಾರಂತೆ. ಈ ಕುರಿತು ಸ್ಯಾಂಡಲ್‍ವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದ್ದು, ತಮ್ಮ ರಾ ಸಿನಿಮಾಗಳ ಮೂಲಕ ಸುಕ್ಕಾ ಸೂರಿ, ದುನಿಯಾ ಸೂರಿ ಎಂದೇ ಪ್ರಸಿದ್ಧಿ ಪಡೆದಿರುವ ಸೂರಿ ಅಭಿಷೇಕ್‍ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಈ ಕುರಿತು ಚಂದನವನದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಮಾತುಕತೆ ಮುಗಿದಿದೆಯಂತೆ. ಸೂರಿ ಸ್ಕ್ರಿಪ್ಟ್ ರಚನೆಯಲ್ಲಿ ತೊಡಗಿದ್ದಾರಂತೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ಚಿತ್ರದ ಕೆಲಸಗಳು ಪ್ರಾರಂಭವಾಗಲಿವೆ ಎಂದು ಹೇಳಲಾಗುತ್ತಿದೆ.

    ಬ್ರೇಕ್‍ಗಾಗಿ ಕಾಯುತ್ತಿರುವ ಅಭಿಷೇಕ್, ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಸೂರಿ ಸಹ ಹಿಟ್ ಸಿನಿಮಾಗಳನ್ನು ನೀಡಿದ್ದು, ಕೇವಲ ಸ್ಟಾರ್ ನಟರು ಮಾತ್ರವಲ್ಲದೆ ಹೊಸಬರ ಸಿನಿಮಾಗಳಿಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಹೊಸಬರನ್ನೂ ಬೆಳೆಸಿದ್ದಾರೆ. ಇದಕ್ಕೆ ಉದಾಹರಣೆಯೇ ದುನಿಯಾ ಚಿತ್ರ. ವಿಜಯ್ ಆಗಿನ್ನೂ ಹೊಸಬರು, ಈ ಸಿನಿಮಾ ಮೂಲಕ ಸೂರಿ ದುನಿಯಾ ವಿಜಯ್‍ಗೆ ಬಿಗ್ ಬ್ರೇಕ್ ನೀಡಿದರು. ಅಲ್ಲದೆ ಕೆಂಡಸಂಪಿಗೆ ಚಿತ್ರದ ಮೂಲಕ ಸಹ ಹೊಸ ನಟರಿಗೆ ಅವಕಾಶ ಕಲ್ಪಿಸಿದ್ದರು. ಇದೀಗ ಅಭಿಷೇಕ್ ಜೊತೆ ಒಂದಾಗುತ್ತಿದ್ದು, ಯಾವ ಮಟ್ಟಕ್ಕೆ ಸಿನಿಮಾ ತಯಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಸದ್ಯ ಎಲ್ಲವೂ ಮಾತುಕತೆ ಹಂತದಲ್ಲಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಮೇ 29ರಂದು ಅಂಬರೀಷ್ ಜನ್ಮದಿನ. ಈ ವೇಳೆ ಚಿತ್ರದ ಕುರಿತು ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಪಾಪ್‍ಕಾರ್ನ್ ಮಂಕಿ ಟೈಗರ್ ರಿಲೀಸ್ ನಂತರ ಸೂರಿ ಕಾಗೆ ಬಂಗಾರ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇದೀಗ ಅಭಿಷೇಕ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದು, ಯಾವ ಸಿನಿಮಾದ ಚಿತ್ರೀಕರಣವನ್ನು ಮೊದಲು ಆರಂಭಿಸುತ್ತಾರೆ ಕಾದು ನೋಡಬೇಕಿದೆ.