ಚಿಕ್ಕಬಳ್ಳಾಪುರ/ ಬೆಂಗಳೂರು: ದೊಡ್ಡಬಳ್ಳಾಪುರದ (Doddaballapur) ತೂಬಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಗಣೇಶನನ್ನು ಆನೆಯ ಮೇಲೆ ಅಂಬಾರಿಯ (Ambari Ganesha) ಅಲಂಕಾರ ಮಾಡಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಿದ್ದಾರೆ. ನಾಡಹಬ್ಬ ದಸರಾ ಮಾದರಿಯಲ್ಲಿಯೇ ಗಣೇಶನ ಮೆರವಣಿಗೆ ಮಾಡಲಾಗಿದೆ.
ಗ್ರಾಮದ ಚಾವಡಿ ಗಣೇಶೋತ್ಸವ ಸಮಿತಿಯವರು ಇದೇ ಮೊದಲ ಬಾರಿಗೆ ಅಂಬಾರಿ ಗಣೇಶನ ಮೆರವಣಿಗೆ ಆಯೋಜನೆ ಮಾಡಿದ್ದು, ಜನರ ಗಮನ ಸೆಳೆಯಿತು. ದಸರಾ ಆನೆಯಂತೆ ಅಲಂಕೃತಗೊಂಡು ಸಿಂಗಾರಗೊಂಡಿದ್ದ ಲಕ್ಷ್ಮೀ ಹೆಸರಿನ ಆನೆಯ ಮೇಲೆ ಅಂಬಾರಿಯಲ್ಲಿ ಗಣೇಶನನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆನೆಯ ಮೆರವಣಿಗೆಯೊಂದಿಗೆ, ನಾದಸ್ವರದ ಮೇಳ, ಡೊಳ್ಳು-ಕುಣಿತ, ಜಾನಪದ ತಂಡಗಳ ಸೊಗಸು ಎಲ್ಲವೂ ಸೇರಿ ದಸರಾ ವೈಭವವದ ಕಳೆಯನ್ನು ತಂದಿತ್ತು. ಇದನ್ನೂ ಓದಿ: ಸೊರಬದ ಅತಿ ಎತ್ತರದ ಗಣೇಶ ʻಕುಬಟೂರು ಮಹಾರಾಜʼನಿಗೆ ವಿಶೇಷ ಪೂಜೆ ಸಲ್ಲಿಸಿದ ಮಧು ಬಂಗಾರಪ್ಪ
ಮೈಸೂರು: ಐತಿಹಾಸಿಕ ಮೈಸೂರು ಜಂಬೂಸವಾರಿ (Jamboo Savari) ಯಶಸ್ವಿಯಾಗಿ ನೆರವೇರಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ (Ambari) ನಾಡಿನ ಅಧಿದೇವತೆ ಚಾಮುಂಡೇಶ್ವರಿ ಲಕ್ಷ ಲಕ್ಷ ಮಂದಿಗೆ ದರ್ಶನ ಭಾಗ್ಯ ಕರುಣಿಸಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ನಾಡದೇವತೆ ಕಂಡು ಲಕ್ಷಾಂತರ ಜನ ಪುನೀತರಾದರು. ನೀಲಿ ರೇಷ್ಮೆ ಸೀರೆ, ಹೂ ಅಲಂಕಾರದಲ್ಲಿ ಚಾಮುಂಡಿ ತಾಯಿ ನೋಡಲು ಎರಡು ಕಣ್ಣು ಸಾಲದಾಗಿತ್ತು.
ಶುಭ ಕುಂಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಐದನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಮೈಸೂರು ಅರಮನೆ (Mysuru Palace) ಆವರಣದಿಂದ ಬನ್ನಿಮಂಟಪದವರೆಗೂ ಉತ್ಸವ ಮೂರ್ತಿ ಹೊತ್ತು ಗಜಪಡೆ ಹೆಜ್ಜೆ ಹಾಕಿತು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಕುಮ್ಕಿ ಆನೆಗಳಾಗಿ ಲಕ್ಷ್ಮಿ, ಹಿರಣ್ಯ ಆನೆಗಳು ಕ್ಯಾಪ್ಟನ್ ಅಭಿಮನ್ಯುಗೆ ಸಾಥ್ ನೀಡಿದವು.
ಅರಮನೆಯ ಉತ್ತರ ದಿಕ್ಕಿನಲ್ಲಿರುವ ಬಲರಾಮ ದ್ವಾರದ ಮೂಲಕ ರಾಜಬೀದಿಗೆ ಜಂಬೂಸವಾರಿ ಸಾಗಿತು. ಕೆಆರ್ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಬನ್ನಿ ಮಂಟಪ ತಲುಪಿತು. ಆಗಾಗ ಸುರಿಯುತ್ತಿದ್ದ ಮಳೆ ನಡುವೆಯೂ ದೇಶ ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಜಂಬೂಸವಾರಿ ನೋಡಲು ಕಿಕ್ಕಿರಿದು ಸೇರಿದ್ದರು.
ದಸರಾ ಉತ್ಸವಕ್ಕೆ ಕಲಾತಂಡಗಳ ಮೆರುಗು:
ಮೈಸೂರು ಅರಮನೆ ಆವರಣದಲ್ಲಿ ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳ ಮೆರವಣಿಗೆ ಸಾಗಿತ್ತು. ಮೆರವಣಿಗೆ ವೇಳೆ ಜೋರು ಮಳೆ ಬಂದರೂ ಜನರು ಕಲಾ ಸಂಸ್ಕೃತಿಯನ್ನು ಆಸ್ವಾದಿಸಿದರು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೊಡವರ ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ, ನಂದಿ ಕೋಲು, ನವಿಲು ನೃತ್ಯ, ಬೀಸು ಕಂಸಾಳೆ, ಗಾರುಡಿ ಗೊಂಬೆ ಹೀಗೆ ಹತ್ತು ಹಲವು ಕಲಾತಂಡಗಳು ರಾಜ್ಯ ಕಲಾ ಸಂಸ್ಕೃತಿಯನ್ನು ಸಾರಿದವು. ಕೀಲು ಕುದುರೆ, ಹುಲಿ ವೇಷ, ಚಂಡೇ ವಾದನ, ಹಕ್ಕಿಪಿಕ್ಕಿ ನೃತ್ಯ, ದೊಣ್ಣೆ ವರಸೆಯಂತೂ ಕನ್ನಡ ನಾಡಿನ ವೈಭವವನ್ನು ಮತ್ತೆ ನೆನಪಿಸಿತು.
ಇನ್ನು ಸ್ತಬ್ಧಚಿತ್ರಗಳಲ್ಲಿ ಪ್ರಮುಖವಾಗಿ ಕೆಎಂಎಫ್‌ನ ಕ್ಷೀರೋತ್ಸವ, ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಟ್ಯಾಬ್ಲೋ, ಮುರುಡೇಶ್ವರದ ಶಿವನ ಮೂರ್ತಿ, ಬೆಂಗಳೂರು ಗ್ರಾಮಾಂತರದ ಟ್ಯಾಬ್ಲೋ, ಬಾಗಲಕೋಟೆಯಿಂದ ರನ್ನನ ಕಾವ್ಯ ಗದಾಯುದ್ಧ ಟ್ಯಾಬ್ಲೋ ಸೇರಿದಂತೆ ಹಲವು ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯಿತು.
ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ:
ಮೈಸೂರು ಜಂಬೂ ಸವಾರಿಗೆ ಚಾಲನೆ ನೀಡುವ ಮೊದಲು ಸಿಎಂ ಸಿದ್ದರಾಮಯ್ಯ (Siddaramaiah) ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಈಡುಗಾಯಿ ಹೊಡೆದರು.
ನಂದಿಧ್ವಜ ಪೂಜೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು. ವಿಶೇಷವಾಗಿ ದುಷ್ಟಶಕ್ತಿಗಳ ಸಂಹಾರವಾಗಲಿ, ದುಷ್ಟಶಕ್ತಿಗಳ ವಿನಾಶವಾಗಲಿ ಎಂದರು. ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಯಶಸ್ವಿಯಾಗಿ ನೆರವೇರಿತು. ಮೈಸೂರಿನಲ್ಲಿ ದೀಪಾಲಂಕಾರ 10 ದಿನಗಳ ಕಾಲ ಮುಂದುವರಿಯಲಿದೆ.
ಬೆಂಗಳೂರು: ದಸರಾ ಆನೆ ಅರ್ಜುನ (Dasara Elephant Arjuna) ಪ್ರಾಣ ಕಳೆದುಕೊಂಡ ಜಾಗ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಅಂಬಾರಿ ಹೊತ್ತ ಅರ್ಜುನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅರ್ಜುನನ ಸಾವಿನ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿದ್ನೋ ಅಲ್ಲಿಯೇ ಸ್ಮಾರಕ ಮಾಡುತ್ತೇವೆ. ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕ ಮಾಡಲು ತಿಳಿಸಿದ್ದೇವೆ ಎಂದರು.
ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದವನ ಅಚಾನಕ್ ಸಾವಾಗಿದೆ. ಆತ ಇನ್ನೂ ಹೆಚ್ಚು ಕಾಲ ಬದುಕಬೇಕಿತ್ತು, ಇನ್ನೊಂದು ಆನೆ ಕಾರ್ಯಾಚರಣೆಗೆ ಅರ್ಜುನ ನನ್ನ ಉಪಯೋಗಿಸಿದ ಕಾರಣ ಸಾವನಪ್ಪಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ
ಇತ್ತ ಹಾಸನದಲ್ಲಿ ಮಾವುತ ವಿನು ಮಾತನಾಡುತ್ತಾ, ಅರ್ಜುನನ್ನು ನೆನೆದು ಕಣ್ಣೀರು ಹಾಕಿದರು. ಕಾದಾಟದ ವೇಳೆ ಕಾಲಿನಲ್ಲಿ ರಕ್ತ ಬಂತು. ಆದರೂ ಮದಗಜದ ಜೊತೆಗೆ ಹೋರಾಡಿದ. ನಂತರ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ಬಿತ್ತು. ಪ್ರಶಾಂತ ಇಲ್ಲದಿದ್ದರೂ ಅರ್ಜುನ ಹೋರಾಡಿ ಗೆಲ್ಲುತ್ತಿದ್ದನು. ಆದರೆ ಕಾಲಿಗೆ ಬಿದ್ದ ಗಾಯದಿಂದ ಆಗಲಿಲ್ಲ. ಕಾಡಾನೆ ತಿವಿದು ಸಾಯಿಸಿತು. ಅರ್ಜುನ ಹತ್ತು ಜನರ ಪ್ರಾಣ ಉಳಿಸಿ ಸಾವನ್ನಪ್ಪಿದ್ದಾನೆ. ಹೀಗಾಗಿ ಮೈಸೂರಿನಲ್ಲೇ ಆತನ ಸ್ಮಾರಕ ಮಾಡಬೇಕು ಎಂದು ಕಣ್ಣೀರಿಡುತ್ತಲೇ ಸರ್ಕಾರಕ್ಕೆ ಒತ್ತಾಯಿಸಿದರು.
ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದವೊಂದು ನಡೆದಿರುವ ಬಗ್ಗೆ ಸಂಶಯ ಮೂಡಿದೆ. ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಅರ್ಜುನ (Arjuna) ಬಲ ಕಳೆದುಕೊಂಡು ಕಾದಾಡಲಾಗದೆ ಸೋಲೊಪ್ಪಿದನಾ ಎಂಬ ಪ್ರಶ್ನೆ ಮೂಡಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರುವ ಯಡವಟ್ಟಿನ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಮದದಲ್ಲಿದ್ದ ಕಾಡಾನೆ (Elephant) ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಮದದಲ್ಲಿರುವ ಕಾಡಾನೆ ಹುಚ್ಚಾನೆಯಂತೆ ವರ್ತಿಸುತ್ತದೆ ಎಂಬ ಜ್ಞಾನ ಇದ್ದರೂ ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ತಜ್ಞರು ಟೀಕಿಸುತ್ತಿದ್ದಾರೆ. ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಒಂಟಿಸಲಗ ಏಕಾಏಕಿ ದಾಳಿ ಮಾಡಿತ್ತು. ಸಲಗ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಗುಂಡು ಹಾರಿಸಿದಾಗ ಗುರಿ ತಪ್ಪಿ ಅದು ಅರ್ಜುನನ ಕಾಲಿಗೆ ತಗುಲಿರುವ ಬಗ್ಗೆ ಅನುಮಾನ ಮೂಡಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಬರು ನೀಡಿರುವ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಅರ್ಜುನನ ಕಾಲಿಗೆ ಗುಂಡು ತಗುಲುತ್ತಲೇ ಅದು ಬಲ ಕಳೆದುಕೊಂಡಿತ್ತು. ಈ ವೇಳೆ ಹಂತಕ ಆನೆ ಹಠಾತ್ ದಾಳಿ ಮಾಡಿತ್ತು ಎನ್ನಲಾಗಿದೆ.
ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಮತ್ತೊಂದು ಯಡವಟ್ಟಾಗಿರುವ ಬಗ್ಗೆ ಅನುಮಾನ ಮೂಡಿದೆ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆ ಎದುರಿಸಿದೆ. ಮದವೇರಿದ ಆನೆಗೆ ಅರವಳಿಕೆ ಚುಚ್ಚದೇ ಹೋಗಿದ್ದರಿಂದ ಅರ್ಜುನ ಬಲ ಕಳೆದುಕೊಂಡು ಬಲಿಯಾದ ಎನ್ನಲಾಗಿದೆ. ಈ ಎಲ್ಲಾ ಸಂಶಯಗಳನ್ನು ಬಗೆಹರಿಸಲು ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಹಿಸಲಾಗುತ್ತಿದೆ.
ಮಾವುತ ಬಿಚ್ಚಿಟ್ಟ ಸತ್ಯ:
ಕಾರ್ಯಾಚರಣೆ ವೇಳೆ ಅರವಳಿಕೆ ಇಂಜೆಕ್ಷನ್ ನೀಡಲಾಯಿತು. ಅದು ಗುರಿ ತಪ್ಪಿ ಪ್ರಶಾಂತ ಹೆಸರಿನ ಸಾಕಾನೆಗೆ ಬಿತ್ತು. ನಂತರ ಇನ್ನೊಂದು ಇಂಜೆಕ್ಷನ್ ನೀಡಿ ಪ್ರಶಾಂತನನ್ನು ಸುಧಾರಿಸಲಾಯಿತು. ಆಮೇಲೆ ಅರ್ಜುನನ ಮೇಲೆ ಮೊದಲಬಾರಿಗೆ ಕಾಡಾನೆ ದಾಳಿ ಮಾಡಿತು. ಕಾಡಾನೆ, ಸಾಕಾನೆ ಕಾಳಗದ ವೇಳೆ ಕೋವಿಯಿಂದ ಗುಂಡು ಹಾರಿಸಲಾಯಿತು. ಆಗ ಅರ್ಜುನನ ಕಾಲಿಗೆ ಗುಂಡು ತಗುಲಿತ್ತು. ದೊಡ್ಡ ಆನೆ ಅದು ಮರಗಳನ್ನು ಬೀಳಿಸಿತು. ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ವೀಡಿಯೋ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?
ಅರ್ಜುನ ಅಂತ್ಯಕ್ರಿಯೆ:
ಮದಗಜದ ಜೊತೆ ಹೋರಾಡುವಾಗ ವೀರಮರಣವನ್ನಪ್ಪಿದ ಅರ್ಜುನನ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ವೇಳೆ ಮೈಸೂರು ಅರಮನೆಯ ರಾಜಮನೆತನದ ಪುರೋಹಿತ ಪ್ರಹ್ಲಾದ್ ಸ್ಥಳಕ್ಕೆ ಆಗಮಿಸಲಿದ್ದಾರೆ. ಸಕಲೇಶಪುರ ತಾಲೂಕಿನ, ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಕಲ ವಿಧಿವಿಧಾನ ಹಾಗೂ ಸರ್ಕಾರಿ ಗೌರವಗಳೊಂದಿಗೆ ಅರ್ಜುನನ ಅಂತ್ಯಕ್ರಿಯೆ ನಡೆಯಲಿದೆ. ಸಕಲ ವಿಧಿವಿಧಾನಗಳನ್ನು ರಾಜಮನೆತನದ ಪುರೋಹಿತ ಪ್ರಹ್ಲಾದ್ ನೆರವೇರಿಸಲಿದ್ದಾರೆ. ಜೊತೆಗೆ ಜಿಲ್ಲಾಡಳಿತ ಸರ್ಕಾರಿ ಗೌರವ ಸಲ್ಲಿಸಲಿದೆ. ಸದ್ಯ ಮಂಗಳವಾರ 12 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅರಣ್ಯ ಇಲಾಖೆ ಅವಕಾಶ ನೀಡಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ
ಹಾಸನ: 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ (Captain Arjuna) ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ಸೇರಿ 4 ಪಳಗಿದ ಆನೆಗಳೊಂದಿಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯೊಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ಸಂದರ್ಭ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ 3 ಸಾಕಾನೆಗಳು ಹಿಮ್ಮೆಟ್ಟಿವೆ. ಆನೆಗಳು ಕಾದಾಡಲು ಪ್ರಾರಂಭಿಸುತ್ತಿದ್ದಂತೆ ಮಾವುತ ಕೂಡಾ ಇಳಿದು ದೂರ ಓಡಿದ್ದಾರೆ.
ಮದವೇರಿದ ಕಾಡಾನೆ ದಾಳಿ ಮಾಡುತ್ತಿದ್ದಂತೆ ಅರ್ಜುನ ಪ್ರತಿರೋಧ ತೋರದೇ ಹೋಗಿದ್ದರೆ ಇತರ ಆನೆಗಳು ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ಜೀವಕ್ಕೆ ಕುತ್ತಾಗುತ್ತಿತ್ತು. ಕೊಂಚ ಯಡವಟ್ಟಾಗಿದ್ದರೂ ಕೂಡ ಹಲವು ಸಿಬ್ಬಂದಿಯ ಪ್ರಾಣಕ್ಕೆ ಅಪಾಯವಿರುತ್ತಿತ್ತು. ಅದೃಷ್ಟವಶಾತ್ ಅರ್ಜುನ ಕಾಡಾನೆ ಜೊತೆ ಕಾಳಗಕ್ಕೆ ನಿಂತಿದ್ದರಿಂದ ದುರಂತ ತಪ್ಪಿದೆ. ತನ್ನ ಪ್ರಾಣ ತ್ಯಾಗ ಮಾಡಿ ಅರ್ಜುನ ಹಲವರ ಜೀವ ಉಳಿಸಿದ್ದಾನೆ. ಮದಗಜಗಳ ಕಾಳಗದಲ್ಲಿ ಅರ್ಜುನ ವೀರಮರಣ ಹೊಂದಿದ್ದಾನೆ.
ಕಾರ್ಯಾಚರಣೆ ಸ್ಥಗಿತ:
ಕಾಡಾನೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅರ್ಜುನನಿಗೆ ತಿವಿದು ಪ್ರಾಣ ಬಿಟ್ಟರೂ ಕೂಡಾ ಹಂತಕ ಆನೆ ಮಾತ್ರ ಬಹಳ ಹೊತ್ತಿನವರೆಗೂ ಅಲ್ಲೇ ಇತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಇವೆಲ್ಲವನ್ನೂ ದೂರದಲ್ಲೇ ನಿಂತು ನೋಡಬೇಕಾಯಿತು. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ
ಕುಸಿದು ಬಿದ್ದ ಮಾವುತ:
ಕಾಡಾನೆ ದಾಳಿಯಿಂದ ಅರ್ಜುನ ಕಣ್ಮುಚ್ಚಿದ ಸುದ್ದಿ ಕೇಳಿ ಅಕ್ಕರೆಯಿಂದ ನೋಡಿಕೊಂಡಿದ್ದ ಮಾವುತ ವಿನು ನೋವಿನಿಂದ ಕುಸಿದು ಬಿದ್ದಿದ್ದರು. ಮದಗಜದ ಜೊತೆ ಅರ್ಜುನ ಕಾದಾಡುವಾಗ ಮಾವುತ ವಿನು ಆನೆ ಮೇಲಿಂದ ಇಳಿದು ಬಂದಿದ್ದರು. ವಿನುವಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನನ ಸಾವಿನ ಸುದ್ದಿಯನ್ನು ಇಲಾಖೆ ಸಿಬ್ಬಂದಿ ಮೊದಲಿಗೆ ತಿಳಿಸಿರಲಿಲ್ಲ. ಆನಂತರ ಮಾವುತ ವಿನುಗೆ ತನ್ನ ಪ್ರೀತಿಯ ಅರ್ಜುನನ ಸಾವಿನ ವಿಚಾರವನ್ನು ತಿಳಿಸಲಾಗಿತ್ತು. ಈ ವೇಳೆ ವಿನು ಕಣ್ಣೀರಿಡುತ್ತಲೇ ಉಳಿದ ಸಾಕಾನೆಗಳೊಂದಿಗೆ ಬಂದಿದ್ದರು. ದಾರಿ ಮಧ್ಯೆ ವಿನು ಅರ್ಜುನನ ಸಾವಿನ ನೋವು ತಡೆಯಲಾರದೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ 108 ಅಂಬುಲೆನ್ಸ್ ಮೂಲಕ ಮಾವುತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – 1 ತಿಂಗಳು ಪರೀಕ್ಷೆ ಮುಂದೂಡಿಕೆ
ಮೈಸೂರು: ಅಂಬಾರಿ ದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನ್‍ವೆಜ್ ತಿಂದಿದ್ದ ವೀಡಿಯೋ ತಾಕತ್ ಇದ್ದೆ ರಿಲೀಸ್ ಮಾಡು ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕಾಂಗ್ರೆಸ್‍ನ ಸೀತಾರಾಂ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯ 2017 ರಲ್ಲಿ ನಾನ್ ವೆಜ್ ತಿಂದು ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ವಿಚಾರದ ಬಗ್ಗೆ ಅಂದಿನ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮುಖಂಡ ಸೀತರಾಂ ಕಿಡಿಕಾರಿದ್ದಾರೆ. 2017ರ ಘಟನೆಯ ವೀಡಿಯೋ ಇದ್ದರೆ ತೋರಿಸು. ನಿನಗೆ ತಾಕತ್ತಿದ್ದರೆ ಆ ವೀಡಿಯೋ ಬಿಡುಗಡೆ ಮಾಡು ಎಂದು ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್ ಸಿಂಹ ಕಿಡಿ
ಚಾಮುಂಡಿ ಅಮ್ಮನ ಸನ್ನಿಧಾನಕ್ಕೆ ಹೋಗೋಣ ಅಲ್ಲೇ ಪ್ರಮಾಣ ಮಾಡೋಣ. ನಾನು ಅಂದು ಅವರ ಜೊತೆಯಲ್ಲೇ ಇದ್ದೆ. ಚಪಾತಿ, ಅನ್ನ ಸಾರು ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆ ಮಾಡಿದ್ರು. ಆದರೆ ಇಲ್ಲದ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸಬೇಡಿ. ಆಗೊಮ್ಮೆ ನೀವೂ ಹೇಳಿದ್ದು ನಿಜವಾದ್ರೆ ಬನ್ನಿ ಚಾಮುಂಡಿ ಬೆಟ್ಟಕ್ಕೆ ಪ್ರಮಾಣ ಮಾಡಿ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಈ ಬಾರಿಯ ಸರಳ ದಸರಾಕ್ಕೆ ಬರಲು ಅರ್ಜುನ ನೇತೃತ್ವದ ಗಜಪಡೆ ಸಿದ್ಧವಾಗಿದೆ. ಇದರೊಂದಿಗೆ ಅಭಿಮನ್ಯು ಟೀಂಗೆ ಹೊಸ ಆನೆ ಸೇರ್ಪಡೆಯಾಗಿದೆ. ಅದರ ಹೆಸರು ಅಶ್ವತ್ಥಾಮ. ಮಹಾಭಾರತದ ದ್ರೋಣಾಚಾರ್ಯರ ಮಗನ ಹೆಸರಿನ ಈ ಆನೆ ಈ ಬಾರಿಯ ದಸರೆಯ ಪ್ರಮುಖ ಆಕರ್ಷಣೆಯಾಗಲಿದೆ.
ಪುಂಡ ಹಾಗೂ ಜಗಮೊಂಡನಾಗಿದ್ದ ಈ ಆನೆ ಈಗ ದಸರಾ ಆನೆಗಳ ತಂಡ ಸೇರಿದೆ. ಅಶ್ವತ್ಥಾಮ ನಾಲ್ಕು ವರ್ಷದ ಹಿಂದೆ ಕಾಡಿನಿಂದ ನಾಡಿಗೆ ಬಂದು ಸಿಕ್ಕಾಪಟ್ಟೆ ಕಿರಿಕ್ ಮಾಡಿತ್ತು. ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತ ಕಾಡಿನಿಂದ ನಾಡಿಗೆ ಬರುತ್ತಿದ್ದ ಈ ಆನೆ ಬೆಳೆದ ಬೆಳೆಯನ್ನು ತಿಂದು ಮತ್ತೆ ಕಾಡು ಸೇರುತ್ತಿತ್ತು. ಇದರಿಂದ ಆತಂಕಗೊಂಡ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಆಪರೇಷನ್ ಗಜರಾಜ ಶುರುವಾಗಿತ್ತು. ಗ್ರಾಮಸ್ಥರು ಹೇಳಿದ ಪ್ರಕಾರ ಆನೆ ಭಾರಿ ಗಾತ್ರದ್ದಾಗಿತ್ತು. ಉದ್ದನೆಯ ದಂತ, ಆಕರ್ಷಕ ಮೈ ಕಟ್ಟಿನ ಒಂಟಿ ಸಲಗ ಅಂತಾ ಗೊತ್ತಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಅಶ್ವತ್ಥಾಮನ ಸೆರೆಗೆ ಬಂದಿದ್ದು, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಆನೆ ನೇತೃತ್ವದಲ್ಲಿ ಅರ್ಜುನ ಸೇರಿ ಹಲವು ಆನೆಗಳ ಕಾರ್ಯಾಚರಣೆಯಲ್ಲಿ ಅಶ್ವತ್ಥಾಮ ಸೆರೆಯಾಗಿತ್ತು. ಇದನ್ನೂ ಓದಿ: ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ಆಚರಣೆ
ಅಂದು 30 ವರ್ಷದ ಗಂಡಾನೆಯಾಗಿದ್ದ, ಅಶ್ವತ್ಥಾಮನನ್ನು ಕಂಡ ಅಧಿಕಾರಿಗಳು ಇದಕ್ಕೆ ತರಬೇತಿ ನೀಡಿ ಪಳಗಿಸಿದರೆ ಅತ್ಯುತ್ತಮ ಆನೆಯಾಗಲಿದೆ ಅನಿಸಿತು. ತಕ್ಷಣ ಮೇಲಧಿಕಾರಿಗಳಿಂದ ಅನುಮತಿ ಪಡೆದು, ಹರವೆ ಆನೆ ಕ್ಯಾಂಪ್‍ಗೆ ಕರೆತಂದು ತರಬೇತಿ ನೀಡಿದ್ದರು. ಶಿಬಿರಕ್ಕೆ ಬಂದ ಆನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯಿತು. ಬರೋಬ್ಬರಿ 3,500ಕೆಜಿ ತೂಕವಿದ್ದ ಅಶ್ವತ್ಥಾಮ, 2.85 ಮೀಟರ್ ಎತ್ತರ, 3.46 ಮೀಟರ್ ಉದ್ದವಿತ್ತು. ದಂತಗಳು ಆಕರ್ಷಕವಾಗಿ ಉದ್ದವಾಗಿದ್ದು, ಉಗ್ರ ಸ್ವರೂಪಿಯಾಗಿದ್ದ ಅಶ್ವತ್ಥಾಮ ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು. ತರಬೇತಿಯಿಂದ ಉಗ್ರನಾಗಿದ್ದ ಆನೆ ಸೌಮ್ಯವಾಗಿದೆ. ಸಮತಟ್ಟಾದ ಬೆನ್ನು ಇರುವ ಕಾರಣ ದಸರೆಗೆ ಆಯ್ಕೆ ಮಾಡಲಾಗಿದೆ. ಅಶ್ವತ್ಥಾಮನಿಗೆ ಕೇವಲ 34 ವರ್ಷ ಜೊತೆಗೆ ಸಮತಟ್ಟಾದ ಬೆನ್ನು ಇದೆ. ಚಿನ್ನದ ಅಂಬಾರಿ ಕಟ್ಟಲು ಹೇಳಿ ಮಾಡಿಸಿದ ಮೈ ಕಟ್ಟು. ಹೀಗಾಗಿಯೇ ಅಶ್ವತ್ಥಾಮ ಭವಿಷ್ಯದ ಅಂಬಾರಿ ಹೊರುವ ಆನೆ ಎಂದೇ ಬಿಂಬಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ
ಇದೇ ಮೊದಲ ಬಾರಿಗೆ ಅಶ್ವತ್ಥಾಮ ಮೈಸೂರು ದಸರೆಗೆ ಪ್ರವೇಶ ಮಾಡಲಿದ್ದು, ಅಶ್ವತ್ಥಾಮನಿಗೆ ಮಾವುತ ಶಿವು ಹಾಗೂ ಕಾವಾಡಿ ಗಣೇಶ್ ಜೊತೆಯಾಗಿದ್ದಾರೆ. ಕೇವಲ ನಾಲ್ಕು ವರ್ಷದಲ್ಲಿ ಇವರ ನಡುವೆ ಅವಿನಾಭಾವ ಸಂಬಂಧ ಬೆಳೆದಿದ್ದು, ಇವರು ಹೇಳಿದ ಎಲ್ಲಾ ಮಾತುಗಳನ್ನು ಚಾಚು ತಪ್ಪದೆ ಪಾಲಿಸುವ ಅಶ್ವತ್ಥಾಮ ಇದೀಗ ಎಲ್ಲರ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂಸವಾರಿ ನಡೆಯುತ್ತಿದ್ದ ವೇಳೆ ಅಂಬಾರಿ ವಾಲಿದ್ದು, ಅದನ್ನು ಸರಿ ಮಾಡಲು ರಾಜಮಾತೆ ಪ್ರಮೋದಾದೇವಿ ಕೈಸನ್ನೆ ಮಾಡಿದ್ದರು.
ಮಂಗಳವಾರ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಜಂಬೂಸವಾರಿ ಆರಂಭಿಸಿದ ವೇಳೆ ಅಂಬಾರಿ ಕೊಂಚ ವಾಲಿತ್ತು. ಈ ವೇಳೆ ಅರಮನೆಯಿಂದ ಜಂಬೂಸವಾರಿ ವೀಕ್ಷಿಸಲು ನಿಂತಿದ್ದ ರಾಜಮಾತೆ ಪ್ರಮೋದಾದೇವಿ ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ಅದನ್ನು ಸರಿ ಮಾಡುವಂತೆ ಕೈಸನ್ನೆ ಮಾಡಿದ್ದರು. ಈ ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ನಂತರ ಹಗ್ಗದ ಸಹಾಯದಿಂದ ಆರಂಭದಿಂದ ಕೊನೆಯವರೆಗೂ ಜಂಬೂಸವಾರಿ ನಡೆದು ಯಶಸ್ವಿಯಾಗಿ ಪೂರ್ಣಗೊಂಡಿತು. ಸಿಎಂ ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡುತ್ತಿದ್ದ ವೇಳೆಯೂ ಅಂಬಾರಿಗೆ ಹಗ್ಗದ ಸಪೋರ್ಟ್ ನೀಡಲಾಗಿತ್ತು. ನಾಡಹಬ್ಬ ದಸರಾದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಂಬಾರಿ ವಾಲಿದರೆ ನಾಡಿಗೆ ಕೆಡಕಾಗುತ್ತಾ ಎಂಬ ಆತಂಕ ಇದೀಗ ಶುರುವಾಗಿದೆ.
750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾವನ್ನು ಯಶಸ್ವಿಯಾಗಿದ್ದಾನೆ. ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು.
ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ್ದನು. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದವು.
ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿ, ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾ ಯಶಸ್ವಿ ತೆರೆಕಂಡಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. 9ನೇ ಬಾರಿ ಅಂಬಾರಿ ಹೊರಲು ಅರ್ಜುನ ಸಿದ್ಧನಾಗಿದ್ದಾನೆ. ಅಂಬಾರಿ ಹೊರೋಕೆ ಅರ್ಜುನ ಹೇಗೆ ಸಿದ್ಧವಾಗಿದ್ದಾನೆ ಎಂಬುದರ ಬಗ್ಗೆ ಮಾವುತ ವಿನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ಅರ್ಜುನ ಈ ಬಾರಿ ಲಾಸ್ಟ್ ಅಂಬಾರಿ ಹೋರೋದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ಶಕ್ತಿ ಇದೆ. ಅರ್ಜುನ ಸ್ವಲ್ಪ ತುಂಟ. ಆದರೆ ಇಲ್ಲಿಗೆ ಬಂದರೆ ತಾಯಿ ಆಶೀರ್ವಾದದಿಂದ ಆ ತುಂಟತನ ಇರಲ್ಲ ಎಂದು ಹೇಳಿದ್ದಾರೆ.
ಅರ್ಜುನ ಗಾಂಭೀರ್ಯದಿಂದ ಅಂಬಾರಿ ಹೊರುತ್ತಾನೆ. ಆತ ಈ ಬಾರಿಯೂ ಅರಾಮವಾಗಿ ಅಂಬಾರಿ ಹೊರುತ್ತಾನೆ. ಅರ್ಜುನನ ಜೊತೆ ನಾನು ಕನ್ನಡದಲ್ಲಿ ಮಾತಾಡುವುದಾಗಿ ವಿನು ತಿಳಿಸಿದ್ದಾರೆ.
ಅಂಬಾರಿ ಹೊರುವ ಅರ್ಜುನನಿಗೆ ಗಂಡುಭೇರುಂಡಾ, ಶಂಕ ಚಕ್ರ, ವಿವಿಧ ಚಿತ್ತಾರಗಳ ಕಲಾಕೃತಿ ಅರ್ಜುನನಿಗೆ ಬಿಡಿಸಲಾಗುತ್ತಿದೆ. ಒಟ್ಟಿನಲ್ಲಿ ಬಣ್ಣ ಬಣ್ಣದ ಚಿತ್ತಾರದಲ್ಲಿ ಅಂಬಾರಿ ಹೊರಲು ಅರ್ಜುನ ರೆಡಿಯಾಗಿದ್ದಾನೆ.
ಜಂಬೂ ಸವಾರಿ ವೀಕ್ಷಿಸಲು ಈಗಾಗಲೇ ಅಂಬಾವಿಲಾಸ ಅರಮನೆ ಮುಂಭಾಗ 26 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ರಸ್ತೆಯ ಬದಿಲ್ಲೂ ಸಹ ಆಸನಗಳ ವ್ಯವಸ್ಥೆ ಇದೆ. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಭಾರೀ ಜನಸ್ತೋಮ ಅರಮನೆ ನಗರಿಯಲ್ಲಿದೆ.
ಜಂಬೂ ಸವಾರಿಗೆ ಸಿದ್ಧತೆ ಆರಂಭವಾಗುವುದು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮಧ್ಯಾಹ್ನ 2.25ರಿಂದ 3 ಗಂಟೆಯ ನಡುವೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಮೆರವಣಿಗೆ ಆರಂಭವಾಗುತ್ತದೆ. ಸಂಜೆ 4.30ರಿಂದ 5 ಗಂಟೆ ನಡುವೆ ಕುಂಭ ಲಗ್ನದಲ್ಲಿ ಅಂಬಾರಿಗೆ ಸಿಎಂ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ 7 ಗಂಟೆಗೆ ಅಂಬಾರಿ ಬನ್ನಿ ಮಂಟಪ ತಲುಪತ್ತದೆ. ರಾತ್ರಿ 7.30ಕ್ಕೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ಆರಂಭವಾಗುತ್ತದೆ. ಇದಕ್ಕೆ ರಾಜ್ಯಪಾಲ ವಜೂಭಾಯ್ ವಾಲಾ ಚಾಲನೆ ನೀಡಲಿದ್ದಾರೆ. ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸಿ ದಸರಕ್ಕೆ ಅಧಿಕೃತ ತೆರೆಬೀಳುತ್ತದೆ.
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ನಾನು ನೋಡಿದ ಆ ಕಾಲದ ದಸರಾದ ರಾಜ ವೈಭವವನ್ನ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.
ದಸರಾ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ತಾತ ಪಿಟೀಲು ಚೌಡಯ್ಯ ಅವರೊಂದಿಗೆ ದಸರಾ ದರ್ಬಾರಿಗೆ ಹೋಗುತ್ತಿದ್ದೆ. ಅಲ್ಲಿ ಅವರು ಪಿಟೀಲು ಬಾರಿಸುತ್ತಿದ್ದರು. ಚಿಕ್ಕವನಾಗಿದ್ದ ನಾನು ತಾತನ ಜೊತೆ ಮೈಸೂರು ಪೇಟಾ, ಶಲ್ಯ, ಕೋಟು ತೊಟ್ಟು ಅರಮನೆಗೆ ಹೋಗುತ್ತಿದ್ದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
ಮಹರಾಜರು ಅಂಬಾರಿ ಮೇಲೆ ಸವಾರಿ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಅಂತಹ ದೃಶ್ಯ ಇನ್ನೆಲ್ಲೂ ಸಿಗುವುದಿಲ್ಲ. ನಾನು ಸ್ವಲ್ಪ ದೊಡ್ಡವನಾದ ಮೇಲೆ ತಂದೆ ನನ್ನನ್ನ ಜಂಬೂ ಸವಾರಿ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಆಗ ನಾವು ಕೆಆರ್‌ಎಸ್ ಆಸ್ಪತ್ರೆ ಮೇಲೆ, ದೇವರಾಜ ಮಾರ್ಕೆಟ್ ಮೇಲೆ ನಿಲ್ಲುತ್ತಿದ್ದೆವು. ಆ ಸಮಯದಲ್ಲಿ ಮಹಾರಾಜರು ಅಪ್ಪಿ-ತಪ್ಪಿ ನಿಂತಿದ್ದ ನಮ್ಮನ್ನು ನೋಡಿದರೆ ಅಯ್ಯೋ ಮಹಾರಾಜರು ನಮ್ಮನ್ನ ನೋಡಿಬಿಟ್ಟರು, ಅವರ ಆಶೀರ್ವಾದ ನಮ್ಮ ಮೇಲೆ ಎಷ್ಟೋ ಇದೆ ಎಂದು ಸಂತಸ ಪಡುತ್ತಿದ್ದೆವು. ಇದು ಒರಿಜಿನಲ್ ದಸರಾ ಎಂದು ಹೇಳಿದರು.
ಮಹಾರಾಜರು ಆನೆ ಮೇಲೆ ಸವಾರಿ ಮಾಡಿದರೆ, ಇವತ್ತು ಎಷ್ಟು ಜನ ದಸರಾ ನೋಡಲು ಸೇರುತ್ತಾರೋ ಅದಕ್ಕಿಂತ 60 ಪಟ್ಟು ಜನ ಸೇರುತ್ತಾರೆ. ಈ ವರ್ಷದ ದಸರಾದಲ್ಲಿ ಅರಮನೆಯ ದೀಪಾಲಂಕಾರ ಮತ್ತು ಮೈಸೂರು ನಗರಿಯನ್ನ ಬಹಳ ಸೊಗಸಾಗಿ ಅಲಂಕರಿಸಿದ್ದಾರೆ. ನವರಾತ್ರಿಯ ಸಮಯದಲ್ಲಿ ಯುವ ದಸರಾ, ಕ್ರೀಡೆ ಮುಂತಾದವುಗಳು ಎಲ್ಲರಿಗೂ ಮನೋರಂಜನೆ ನೀಡಿದೆ ಎಂದು ಅಂಬಿ ಯವರು “ನಾನು ಕಂಡ ದಸರಾದ” ಅನುಭವವನ್ನ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.