Tag: amazon

  • ಜಾಗತಿಕವಾಗಿ ಅಮೆಜಾನ್ ಕ್ಷಮೆ ಕೋರಬೇಕು, ಕನ್ನಡ ಮನಸ್ಸುಗಳಿಗೆ ಅಭಿನಂದನೆ – ಎಚ್‍ಡಿಕೆ

    ಜಾಗತಿಕವಾಗಿ ಅಮೆಜಾನ್ ಕ್ಷಮೆ ಕೋರಬೇಕು, ಕನ್ನಡ ಮನಸ್ಸುಗಳಿಗೆ ಅಭಿನಂದನೆ – ಎಚ್‍ಡಿಕೆ

    ಬೆಂಗಳೂರು: ಕನ್ನಡದ ಧ್ವಜವನ್ನು ಅಪಮಾನಿಸಿದ ಕೆನಡಾದ ಅಮೆಜಾನ್‍ಗೆ ಕನ್ನಡಿಗರು ಬಿಸಿಮುಟ್ಟಿಸಿದ್ದಾರೆ. ಅಮೆಜಾನ್ ತನ್ನ ತಪ್ಪು ಸರಿಪಡಿಸಿಕೊಂಡಿದೆ. ಕನ್ನಡವನ್ನು ಅವಮಾನಿಸಿದ ಗೂಗಲ್‍ಗೆ ಪಾಠ ಕಲಿಸಿದ್ದು, ಈಗ ಅಮೆಜಾನ್‍ಗೆ ಬುದ್ಧಿ ಕಲಿಸಿದ್ದರಲ್ಲಿ ಎದ್ದು ಕಾಣುವಂಥದ್ದು ಕನ್ನಡಿಗರ ‘ಅಭಿಮಾನ’. ಅದಕ್ಕಾಗಿ ಕನ್ನಡದ ಮನಸ್ಸುಗಳನ್ನು ಅಭಿನಂದಿಸುತ್ತೇನೆ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಸರಣಿ ಟ್ವೀಟ್ ಮಾಡಿ ಕುಮಾರಸ್ವಾಮಿ ಅಮೆಜಾನ್ ವಿರುದ್ಧ ಕಿಡಿ ಕಾರಿದ್ದು ಅಮೆಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಅಮೆಜಾನ್ ಈಗ ಆ ಪುಟದಲ್ಲಿ ಕಾಣುತ್ತಿದ್ದ ಬಿಕಿನಿ ಚಿತ್ರವನ್ನು ತೆಗೆದು ಹಾಕಿದೆ. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಟ್ವೀಟ್‍ನಲ್ಲಿ ಏನಿದೆ?
    ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. ಗೂಗಲ್ ನಂತರ ಈಗ ಅಮೆಜಾನ್ ಕೆನಡಾ ವಿಭಾಗ ನಿರ್ಲಕ್ಷ್ಯ ಮೆರೆದಿದೆ. ಈ ಸಂಸ್ಥೆಗಳು ಭಾಷೆ ಮತ್ತು ಭಾವನೆಗಳ ವಿಚಾರದಲ್ಲಿ ಯಾಕಿಂಥ ನಿರ್ಲಕ್ಷ್ಯವಹಿಸುತ್ತಿವೆ? ಈ ಬಗ್ಗೆ ಅಮೆಜಾನ್ ಪ್ರತಿಕ್ರಿಯೆ ನೀಡಬೇಕು.

    ಬಾವುಟದ ಜೊತೆಗೇ, ಕರ್ನಾಟಕದ ರಾಜಲಾಂಛನವನ್ನೂ ಅಮೆಜಾನ್ ಅಮಾನಿಸಿದೆ. ಇದು ಸರ್ಕಾರಕ್ಕೆ ಮಾಡಲಾದ ಅಪಮಾನ. ಸರ್ಕಾರ ಸಂವಿಧಾನದ ಅಂಗ. ಹೀಗಾಗಿ ಅಮೆಜಾನ್‍ನಿಂದ ಬಹುದೊಡ್ಡ ಅಪಚಾರವಾಗಿದೆ. ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದರತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಂದೆ ಇಂಥ ಮುಜುಗರ ತಪ್ಪಿಸಲು ಇದು ಅಗತ್ಯ. ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

    ‘ಕನ್ನಡ ಕೆಟ್ಟ ಭಾಷೆ‘ ಎಂಬ ವಿಚಾರ ಗೂಗಲ್‍ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ಘಟನೆಯೂ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನಸಮುದಾಯವೊಂದರ ಭಾವನೆಗಳ ಜೊತೆಗೆ ಆಟವಾಡುತ್ತಿರುವವರನ್ನು ಪತ್ತೆ ಹಚ್ಚುವ ಸಂದರ್ಭ ಈಗ ಸೃಷ್ಟಿಯಾಗಿದೆ.

    ಇಂಥ ಅಪಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸ ಇಂಥ ಸಂಸ್ಥೆಗಳಿಂದ ಆಗುತ್ತಲೇ ಇವೆ. ಕನ್ನಡಿಗರ ಕೋಪದಿಂದ ಸಿಡಿಯುವ ಕಿಡಿಯಿಂದ ಅನಾಹುತಗಳು ಸಂಭವಿಸಿದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಈ ಸಂಸ್ಥೆಗಳಿಗೆ ಉಳಿಯಲಾರದು. ಪರಿಸ್ಥಿತಿ ಅಲ್ಲಿಗೆ ಹೋಗುವ ಮೊದಲು ಅಮೆಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು.

  • ಅಮೇಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

    ಅಮೇಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

    ಬೆಂಗಳೂರು: ಹೆಣ್ಣು ಮಕ್ಕಳ ಒಳ ಉಡುಪಿನ ಮೇಲೆ ಕನ್ನಡದ ಬಾವುಟದ ಬಣ್ಣಗಳನ್ನು ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಬಳಸಿರುವ ಅಮೇಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಕನ್ನಡ ನೆಲದ ಭಾವನೆಗೆ ಧಕ್ಕೆ ಮಾಡುವಂತಹ ಯಾವುದೇ ಕ್ರಮಕ್ಕೆ ನನ್ನ ತೀವ್ರ ವಿರೋಧವಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನಾನು ಇಂತಹ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯವೆಂದು ಭಾವಿಸಿ ಅಮೇಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.  ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

     

  • ಬಾಟಲ್‍ಗಳಲ್ಲಿ ಮೂತ್ರ ವಿಸರ್ಜನೆ – ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ ಅಮೆಜಾನ್

    ಬಾಟಲ್‍ಗಳಲ್ಲಿ ಮೂತ್ರ ವಿಸರ್ಜನೆ – ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ ಅಮೆಜಾನ್

    ವಾಷಿಂಗ್ಟನ್: ಬಾಟಲಿಯಲ್ಲಿ ತಮ್ಮ ಸಿಬ್ಬಂದಿ ಮೂತ್ರ ವಿಸರ್ಜನೆ ಮಾಡಿರುವುದನ್ನು ಅಮೆಜಾನ್ ತಪ್ಪೋಪ್ಪಿಕೊಂಡು ಕ್ಷಮೆ ಕೇಳಿದೆ.

    ವಿಸ್ಕಾನ್ಸಿನ್‍ನ ಡೆಮಾಕ್ರಟ್ ಪಕ್ಷದ ಮಾರ್ಕ್ ಪೋಕನ್ ಎಂಬವರು ಟ್ವೀಟ್‍ನಲ್ಲಿ ಅಮೆಜಾನ್ ಕಂಪನಿಯ ಚಾಲಕರು ಮತ್ತು ಪ್ರೊಸೆಸಿಂಗ್ ಘಟಕದ ಉದ್ಯೋಗಿಗಳು ಕೆಲಸದ ಒತ್ತಡದಿಂದಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಮೂತ್ರ ಮಾಡುತ್ತಾರೆ ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಅಮೆಜಾನ್ ಅಂತಹ ಕೆಲಸವನ್ನು ನಮ್ಮ ಸಿಬ್ಬಂದಿ ಮಾಡುವುದಿಲ್ಲ ಎಂದು ಹೇಳಿತ್ತು.

    ಅಮೆಜಾನ್ ಉದ್ಯೋಗಿಗಳ ಹೇಳಿಕೆಯನ್ನು ಆಧರಿಸಿ ಅವರ ಬಾಟಲಿಯಲ್ಲಿ ಮೂತ್ರ ಮಾಡುತ್ತಿರುವುದು ಸತ್ಯ ಎಂಬುದನ್ನ ಹಲವು ಮಾಧ್ಯನಮಗಳು ವರದಿ ಪ್ರಸಾರ ಮಾಡಿದ್ದವು. ನಂತರ ಕೆಲ ಅಮೆಜಾನ್ ವಾಹನ ಚಾಲಕರು ಬಾಟಲಿಯಲ್ಲಿ ಮೂತ್ರ ಮಾಡುವುದನ್ನು ಒಪ್ಪಿಕೊಂಡಿದ್ದಾರೆ.

    ಅಮೆಜಾನ್ ಘಟಕದಲ್ಲಿ ಶೌಚಗೃಹಗಳಿವೆ ಅವುಗಳನ್ನು ಯಾವಾಗ ಬೇಕಾದರೂ ಬಳಸಬಹುದಾಗಿದೆ. ಆದರೆ ಕೆಲವೊಮ್ಮೆ ಟ್ರಾಫಿಕ್ ಇದ್ದರೆ, ಸಾರ್ವಜನಿಕ ಶೌಚಗೃಹಗಳನ್ನು ಮುಚ್ಚಿದ್ದರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೌಚಗೃಹ ಇಲ್ಲದಿದ್ದರೆ, ಚಾಲಕರಿಗೆ ಬೇರೆ ಯಾವು ಆಯ್ಕೆ ಇರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುಲು ನಾವು ಪ್ರಯತ್ನಿಸುತ್ತೇವೆ ಎಂದು ಅಮೆಜಾನ್ ಅಧಿಕಾರಿಗಳು ಹೇಳಿದ್ದಾರೆ.

  • ಲಾಕ್‍ಡೌನ್ ನಡುವೆಯೂ ಅಮೇಜಾನ್ ಪ್ರೈಮ್‍ನಲ್ಲಿ ‘ವೀಕೆಂಡ್’ ಸಂಭ್ರಮ!

    ಲಾಕ್‍ಡೌನ್ ನಡುವೆಯೂ ಅಮೇಜಾನ್ ಪ್ರೈಮ್‍ನಲ್ಲಿ ‘ವೀಕೆಂಡ್’ ಸಂಭ್ರಮ!

    ಇದು ಅನಂತ್ ನಾಗ್ ಮೆಚ್ಚಿ ನಟಿಸಿದ ಚಿತ್ರ!

    ಕಳೆದ ವರ್ಷ ಬಿಡುಗಡೆಯಾಗಿ ಪ್ರೇಕ್ಷಕರ ಪ್ರೀತಿ ಪಡೆದುಕೊಂಡ ಸಿನಿಮಾಗಳ ಲಿಸ್ಟಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿರೋ ಚಿತ್ರ `ವೀಕೆಂಡ್’. ಆಧುನಿಕ ಜಗತ್ತಿನ ಪಾಲಿಗೆ ನಿರಾಳ ಭಾವ ಮೂಡಿಸೋ ಶೀರ್ಷಿಕೆಯ ಈ ಸಿನಿಮಾ ಶೃಂಗೇರಿ ಸುರೇಶ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಕನ್ನಡ ಚಿತ್ರರಂಗದ ವಿವಿಧ ಆಯಾಮಗಳ ಭಾಗವಾಗುತ್ತಾ, ಕಾಲ ಕಾಲಕ್ಕೆ ಅಪ್‍ಡೇಟ್ ಆಗುತ್ತಾ ಬಂದಿರೋ ಸುರೇಶ್ ಅವರು ಈಗಿನ ಯುವ ಸಮುದಾಯದ ತಲ್ಲಣಗಳಿಗೆ ಕಣ್ಣಾಗುವಂಥಾ ಕಥಾನಕದ ದೃಷ್ಯಕಾವ್ಯವನ್ನು ಕಟ್ಟಿ ಕೊಟ್ಟಿದ್ದರು. ಅದು ಎಲ್ಲ ವರ್ಗದ ಪ್ರೇಕ್ಷಕರ ಪಾಲಿಗೂ ತುಂಬಾನೇ ಇಷ್ಟವಾಗಿತ್ತು. ಹೀಗೆ ಗೆಲುವು ಕಂಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‍ಗೆ ಲಗ್ಗೆಯಿಟ್ಟಿದೆ.

    ಕೊರೋನಾ ಕಾರಣದ ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಬಹುತೇಕರು ಮನೆಯೊಳಗೇ ಬಂಧಿಯಾಗಿದ್ದಾರೆ. ಇದೀಗ ಕೊಂಚ ಸಡಿಲಿಕೆಯಾಗಿದ್ದರೂ ಕೂಡಾ ಮನೆಯಲ್ಲಿಯೇ ಹೆಚ್ಚಿನ ಕಾಲ ಕಳೆಯದೆ ವಿಧಿಯಿಲ್ಲ. ಇಂಥಾ ಹೊತ್ತಿನಲ್ಲಿ ಜನರ ಪಾಲಿಗೆ ಕೊಂಚ ರಿಲೀಫು ನೀಡಿರೋದು ಸಿನಿಮಾ ಮ್ಯಾಜಿಕ್. ಅಮೇಜಾನ್‍ಪ್ರೈಮ್‍ನಂಥಾ ಆನ್‍ಲೈನ್ ತಾಣಗಳಲ್ಲಿ ಸಿನಿಮಾ ನೋಡಿ ಖುಷಿಗೊಳ್ಳೋ ಪ್ರೇಕ್ಷಕರ ಸಂಖ್ಯೆಯೀಗ ಹೆಚ್ಚಾಗಿದೆ. ಈ ಕಾರಣದಿಂದಲೇ ಅನೇಕ ಕನ್ನಡ ಸಿನಿಮಾಗಳ ಆನ್‍ಲೈನಿನಲ್ಲಿಯೇ ಹಿಟ್ ಆಗಿವೆ. ಇದೀಗ ಆ ಸಾಲಿಗೆ ಸೇರ್ಪಡೆಯಾಗಲು ವೀಕೆಂಡ್ ಚಿತ್ರ ಆಗಮಿಸಿದೆ.

    ಹೊರಗಿನಿಂದ ನಿಂತು ದಿಟ್ಟಿಸುವವರಿಗೆ ಹೊಟ್ಟೆಕಿಚ್ಚಾಗುವಂಥ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ಚೆಂದದ ಕಥೆ ವೀಕೆಂಡ್ ಚಿತ್ರದ್ದು.

    ಬದುಕಿಗೆ ಹತ್ತಿರಾದ ಕಥೆಯೊಂದಿಗೆ ನಿರ್ದೇಶಕರು ವೀಕೆಂಡ್ ಅನ್ನು ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೋರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

    ನಿಖರವಾಗಿ ಹೇಳಬೇಕೆಂದರೆ, ಈ ಸಿನಿಮಾ ಲಾಕ್‍ಡೌನ್ ಕಾಲಮಾನದಲ್ಲಿ ನೋಡುಗರೆಲ್ಲರಿಗೂ ಹೊಸಾ ಅನುಭೂತಿ ನೀಡುವಷ್ಟು ಚೆಂದಗೆ ಮೂಡಿ ಬಂದಿದೆ. ಅನಂತ್ ನಾಗ್ ಅವರೇ ತುಂಬಾ ಇಷ್ಟಪಟ್ಟು ನಟಿಸಿರೋ ಸಿನಿಮಾವಿದು. ಅನಂತ್ ನಾಗ್ ಅವರ ಕಟ್ಟುನಿಟ್ಟು ಅದೆಂಥಾದ್ದೆಂಬುದು ಪ್ರೇಕ್ಷಕರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಯಾವುದೇ ಕಥೆ ಒಪ್ಪಿತವಾಗದೆ ಅವರು ಒಪ್ಪಿಗೆ ಸೂಚಿಸೋ ಜಾಯಮಾನದವರಲ್ಲ. ಅವರೇನಾದರೂ ಇಷ್ಟಪಟ್ಟರೆಂದರೆ, ಅದೊಂದು ಪ್ರಶಸ್ತಿ ಇದ್ದಂತೆಯೇ. ಅಂಥಾ ಅನಂತ್ ನಾಗ್ ಅವರಿಂದಲೇ ಮೆಚ್ಚುಗೆ ಪಡೆದ ಚಿತ್ರವೆಂದ ಮೇಲೆ ವೀಕೆಂಡ್ ಬಗ್ಗೆ ಮತ್ತೇನನ್ನೂ ಹೇಳುವ ಅವಶ್ಯಕತೆಯಿಲ್ಲ. ಲಾಕ್‍ಡೌನ್ ಕಾಲದ ನಿಮ್ಮೆಲ್ಲದ ಏಕತಾನತೆ ವೀಕೆಂಡ್‍ನೊಂದಿಗೆ ನೀಗುವಂತಾಗಲಿ…

  • ದಚ್ಚು ಫ್ಯಾನ್ಸ್ ಕೈಬಿಡಲ್ಲ – ಕೋಟಿ ಕೋಟಿ ಆಫರ್ ತಿರಸ್ಕರಿಸಿದ ‘ರಾಬರ್ಟ್’ ನಿರ್ಮಾಪಕ

    ದಚ್ಚು ಫ್ಯಾನ್ಸ್ ಕೈಬಿಡಲ್ಲ – ಕೋಟಿ ಕೋಟಿ ಆಫರ್ ತಿರಸ್ಕರಿಸಿದ ‘ರಾಬರ್ಟ್’ ನಿರ್ಮಾಪಕ

    ಬೆಂಗಳೂರು: ದರ್ಶನ್ ಫ್ಯಾನ್ಸ್ ರಾಬರ್ಟ್ ಚಿತ್ರವನ್ನು ಕೈಬಿಡಲ್ಲ ಥೀಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎಂದು ಚಿತ್ರದ ನಿರ್ದೇಶಕ ಉಮಾಪತಿ ಅವರು ಅಮೆಜಾನ್ ಕಂಪನಿ ನೀಡಿದ ಭಾರೀ ಆಫರ್ ತಿರಸ್ಕರಿಸಿದ್ದಾರೆ.

    ಹೌದು ಇನ್ನೇನು ಬಂದೇ ಬಿಟ್ಟಿತು ರಾಬರ್ಟ್ ಎಂದು ದಚ್ಚು ಅಭಿಮಾನಿಗಳು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದರು. ಆದರೆ ಕೊರೊನಾ ಮಾರಿ ಅದಕ್ಕೆ ಅಡ್ಡಗಾಲು ಹಾಕಿತ್ತು. ಇಂದು ನಾಳೆ ಎನ್ನುತ್ತಾ ಈಗ ಮುಂದ್ಯಾವಾಗ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಈ ನಡುವೆಯೇ ರಾಬರ್ಟ್ ಸಿನಿಮಾವನ್ನೂ ಆನ್‍ಲೈನ್‍ನಲ್ಲೇ ರಿಲೀಸ್ ಮಾಡಿ ಎನ್ನುವ ಬೇಡಿಕೆ ಬಂದಿತ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೋಟಿ ಕೋಟಿ ಕೊಡುತ್ತೇವೆ ನಮಗೆ ರಾಬರ್ಟ್ ಕೊಡಿ ಎಂದು ಅಮೆಜಾನ್ ಫ್ರೈಮ್ ಅವರು ಬೇಡಿಕೆ ಇಟ್ಟಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿ, ಐವತ್ತು ದಿನ ಮುಗಿಸಿ, ನೂರನೇ ದಿನದತ್ತ ಭರ್ಜರಿಯಾಗಿ ಓಡುತ್ತಿರಬೇಕಿತ್ತು. ಆದರೆ ಕೊರೊನಾ ಕ್ರಿಮಿಯಿಂದ ಎಲ್ಲವೂ ಉಲ್ಟಾ ಪಲ್ಟಾ ಆಯಿತು. ಈ ಮೂಲಕ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಗಳಿಗೆ ನಿರಾಸೆಯಾಗಿತ್ತು. ಈ ನಡುವೆಯೇ ರಾಬರ್ಟ್ ಸಿನಿಮಾವನ್ನು ಆನ್‍ಲೈನ್ ಅಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಉಮಾಪತಿ ಸುಳ್ಳು ಎಂದು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ಮಾಪಕ ಉಮಾಪತಿ ಅವರು, ಅಮೆಜಾನ್ ಚಾನೆಲ್‍ನಿಂದ ನಮ್ಮ ರಾಬರ್ಟ್ ಸಿನಿಮಾಕ್ಕೆ ಆಫರ್ ಬಂದಿದ್ದು ನಿಜ. 70 ಕೋಟಿಗೆ ಅವರು ಬೇಡಿಕೆ ಇಟ್ಟಿದ್ದೂ ಸತ್ಯ. ಆದರೆ ನಾವು ಒಪ್ಪಲಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೂ ಓಟಿಟಿ ಫ್ಲಾಟ್‍ಫಾರ್ಮ್‍ಗಳಲ್ಲಿ ರಾಬರ್ಟ್ ರಿಲೀಸ್ ಮಾಡಲ್ಲ. ಲೇಟಾದರೂ ಪರವಾಗಿಲ್ಲ. ಥೀಯೇಟರ್ ನಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ರಾಜಾರೋಷವಾಗಿ ಹೇಳಿದ್ದಾರೆ.

    ಕೊರೊನಾ ಮುಗಿದ ಮೇಲೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎನ್ನುವ ಬಲವಾದ ನಂಬಿಕೆ ಇದೆ. ದರ್ಶನ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸಿನಿಮಾ ಕೈ ಬಿಡುವುದಿಲ್ಲ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದಕ್ಕೆ ಮುಗಿಬೀಳುತ್ತಾರೆ. ಅಂದಹಾಗೆ ಈಗಾಗಲೇ ನಮ್ಮ ಚಿತ್ರಕ್ಕೆ ಹಾಕಿದ ಬಂಡವಾಳ ಹಲವು ಮೂಲಗಳಿಂದ ವಾಪಸ್ ಬಂದಿದೆ. ಇನ್ನು ಮುಂದೆ ಬರುವುದೆಲ್ಲವೂ ಲಾಭವೇ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರಿಲೀಸ್‍ಗೂ ಮೊದಲೇ ದಾಖಲೆ ಲೆಕ್ಕದಲ್ಲಿ ಲಾಭದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಿನಿಮಾ ರಿಲೀಸ್‍ಗೆ ರೆಡಿಯಾಗಿ ತಿಂಗಳುಗಳೇ ಕಳೆದಿವೆ. ಹಲವು ಬಾರಿ ರಿಲೀಸ್ ಡೇಟ್ ಕೂಡ ಹೊರಬಿದ್ದಿತ್ತು. ಅಷ್ಟರಲ್ಲಿ ಕೊರೊನಾದಿಂದ ಥೀಯೇಟರ್ ಗಳು ಬಂದ್ ಅದವು. ಈಗ ರಾಬರ್ಟ್ ಸಿನಿಮಾವನ್ನು ಕೊಳ್ಳಲು ಅಮೆಜಾನ್ ಮುಂದಾಗಿದೆ. ಭರ್ತಿ 70 ಕೋಟಿ ಅಫರ್ ನೀಡಿದೆ. ಇದು ಹಾಕಿದ ಬಂಡವಾಳಕ್ಕೆ ಹೆಚ್ಚು ಕಮ್ಮಿ ಡಬಲ್ ದುಡ್ಡು. ಜೊತೆಗೆ ಎಷ್ಟೆಷ್ಟು ಜನರು ನೋಡುತ್ತಾರೊ, ಅಷ್ಟಷ್ಟು ಹಣ ನಿರ್ಮಾಪಕರು ಮತ್ತು ಚಾನೆಲ್ ನಡುವೆ ಹಂಚಿಕೆಯಾಗುತ್ತದೆ. ಆದರೆ ರಾಬರ್ಟ್‍ನ ಖಡಕ್ ನಿರ್ಮಾಪಕ ಉಮಾಪತಿ ಈ ವ್ಯವಹಾರಕ್ಕೆ ಬಿಲ್‍ಕುಲ್ ಒಪ್ಪಿಗೆ ಸೂಚಿಸಿಲ್ಲ.

  • ಚಿತ್ರಮಂದಿರ ಬದಲು ಅಮೆಜಾನ್‍ನಲ್ಲಿ ಕನ್ನಡ ಸಿನಿಮಾ ರಿಲೀಸ್ – ವಿರೋಧ ವ್ಯಕ್ತ

    ಚಿತ್ರಮಂದಿರ ಬದಲು ಅಮೆಜಾನ್‍ನಲ್ಲಿ ಕನ್ನಡ ಸಿನಿಮಾ ರಿಲೀಸ್ – ವಿರೋಧ ವ್ಯಕ್ತ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇತ್ತ ಈ ಲಾಕ್‍ಡೌನ್ ಯಾವಾಗ ಮುಗಿಯುತ್ತದೆ ಎಂಬುದು ಸಹ ತಿಳಿಯುತ್ತಿಲ್ಲ. ಹೀಗಾಗಿ ಚಿತ್ರಮಂದಿರಗಳು ಸದ್ಯಕ್ಕೆ ತೆರೆಯುದಿಲ್ಲ ಎಂದು ಅನೇಕ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳು ನೇರವಾಗಿ ಅಮೆಜಾನ್ ಪ್ರೈಮ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

    ಅನೇಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರರಂಗದಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಲು ಅನೇಕ ನಿರ್ಮಾಪಕರಿಗೆ ಒಟಿಟಿ ಬಿಡುಗಡೆ ಅನಿವಾರ್ಯವಾಗಿವೆ. ಮುಂದಿನ ತಿಂಗಳಿನಿಂದ ವಿವಿಧ ಭಾಷೆಗಳ, ಪ್ರಮುಖ ನಟರು ನಟಿಸಿರುವ ಸಿನಿಮಾಗಳು ಅಮೆಜಾನ್ ಪ್ರೈಮ್‍ನಲ್ಲಿ ತೆರೆಕಾಣುತ್ತಿವೆ. ಈ ಕುರಿತು ಅಮೆಜಾನ್ ಪ್ರೈಮ್ ಹಾಗೂ ನಿರ್ಮಾಣ ಸಂಸ್ಥೆಗಳು ಅಧಿಕೃತವಾಗಿ ತಿಳಿಸಿವೆ.

    ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ಒಟಿಟಿ ಪ್ಲಾಟ್ ಫಾರ್ಮ್ ನ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡುವುದಾಗಿ ಪುನೀತ್ ರಾಜ್‍ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಕನ್ನಡ ನಿರ್ಮಾಕಪರು ಕೂಡ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.

    ರಘು ಸಮರ್ಥ ಚಿತ್ರಕಥೆ ಬರೆದು ನಿರ್ದೇಶಿಸಿದ ‘ಲಾ’ ಸಿನಿಮಾ ಜೂನ್ 26ರಂದು ಅಮೆಜಾನ್ ಪ್ರೈಮ್ ಮೂಲಕ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಪನ್ನಗಾಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಚಿತ್ರವು ಅಮೆಜಾನ್ ಪ್ರೈಮ್‍ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ ಎಂದು ಪಿಆರ್‌ಕೆ ಪ್ರೊಡಕ್ಷನ್ಸ್ ಅಧಿಕೃತವಾಗಿ ಮಾಹಿತಿ ತಿಳಿಸಿದೆ.

    https://www.facebook.com/139294346715675/posts/579010662744039/

    ಅಮೆಜಾನ್ ಫ್ರೈಂನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಪಿವಿಆರ್ ಮತ್ತು ಐನಾಕ್ಸ್ ಮಲ್ಟಿಪ್ಲೆಕ್ಸ್ ಪ್ರದರ್ಶಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆಯೊಂದು ತನ್ನ ಸಿನಿಮಾಗಳನ್ನು ಒಟಿಟಿ ಪ್ಲಾಟ್‍ಫ್ಲಾಮಂ ಮೂಲಕ ರಿಲೀಸ್ ಮಾಡಲು ಮುಂದಾಗಿದೆ. ಈ ಮೂಲಕ ಥಿಯೇಟರ್‌ನಲ್ಲಿ ಸಿನಿಮಾ ತೆರೆಕಾಣುವ ಸಂಪ್ರದಾಯವನ್ನು ಬ್ರೇಕ್ ಮಾಡಿದೆ. ಸಂಸ್ಥೆಯ ನಿರ್ಧಾರದಿಂದ ನಮಗೆ ಬೇಸರವಾಗಿದೆ ಎಂದು ಐನಾಕ್ಸ್ ಪತ್ರದ ಮೂಲಕ ತಿಳಿಸಿದೆ.

    https://www.facebook.com/prkproductionsofficial/photos/a.170301270281649/578996506078788/?type=3&theater

    ಈ ಹಿಂದೆ ಅಂದರೆ 2013ರಲ್ಲಿ ನಟ ಕಮಲ್‍ಹಾಸನ್ ತಮ್ಮ ಸಂಸ್ಥೆಯ ‘ವಿಶ್ವರೂಪಂ’ ಸಿನಿಮಾವನ್ನು ಡೈರೆಕ್ಟ್ ಟು ಹೋಮ್ (ಡಿಟಿಎಚ್) ಮೂಲಕ ವಿತರಣೆ ಮಾಡಲು ಮುಂದಾಗಿದ್ದರು. ಈ ವೇಳೆ ಚಿತ್ರ ಪ್ರದರ್ಶಕರು ಹಾಗೂ ಚಿತ್ರೋದ್ಯಮ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಸಂಪ್ರದಾಯವಾಗಿ ಸಿನಿಮಾವನ್ನು ಬಿಡುಗಡೆ ಮಾಡಬೇಕಾಯಿತು.

    ಕಳೆದ ತಿಂಗಳು ತಮಿಳು ನಟ ಸೂರ್ಯ ತಮ್ಮ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ ‘ಪೂಣ್‍ಮಗಳ್ ವಂದಾಳ್’ ಸಿನಿಮಾವನ್ನು ಒಟಿಟಿ ಪ್ಲಾಟ್‍ಫ್ಲಾರ್ಮ್ ನಲ್ಲಿ ರಿಲೀಸ್ ಮಾಡಲು ಮುಂದಾಗಿದ್ದರು. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದರೆ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ನಂತರ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿತ್ತು.

    ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮನ್ ಖುರಾನಾ ಅಭಿನಯದ ‘ಗುಲಾಬೋ ಸಿತಾಬೋ’ ಸಿನಿಮಾವವನ್ನು ಜೂನ್ 12ಕ್ಕೆ ಜಗತ್ತಿನಾದ್ಯಂತ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

  • ಅಮೆಜಾನ್‍ಗೂ ತಟ್ಟಿದ ಕೊರೊನಾ – 6 ನೌಕರರಿಗೆ ಸೋಂಕು

    ಅಮೆಜಾನ್‍ಗೂ ತಟ್ಟಿದ ಕೊರೊನಾ – 6 ನೌಕರರಿಗೆ ಸೋಂಕು

    – ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ ಫ್ಲಿಪ್‍ಕಾರ್ಟ್

    ವಾಷಿಂಗ್ಟನ್/ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಬಹುತೇಕ ಮಂದಿ ಆನ್‍ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಆದರೆ ಈಗ ಮಹಾಮಾರಿ ಕೊರೊನಾ ಆನ್‍ಲೈನ್ ವ್ಯವಹಾರಕ್ಕೂ ಅಡ್ಡಿಮಾಡುತ್ತಿದೆ.

    ಹೌದು. ಅಮೆರಿಕದಲ್ಲಿ ಅಮೆಜಾನ್ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ನೌಕರರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ.

    ಅಮೆರಿಕದ ನ್ಯೂ ಯಾರ್ಕ್ ಸಿಟಿ, ಜಾಕ್ಸನ್ ವಿಲ್ಲೆ, ಫ್ಲೋರಿಡಾ, ಶೆಪೆರ್ಡ್ಸ್ ವಿಲ್ಲೆ, ಕೆಂಟುಕಿ, ಕಾಟಿ, ಟೆಕ್ಸಾಸ್, ಬ್ರೌನ್ ಸ್ಟೌನ್, ಮಿಚಿಗನ್ ಮತ್ತು ಒಕ್ಲಹೊಮಾ ನಗರಗಳಲ್ಲಿ ಅಮೆಜಾನ್ ಕಂಪನಿಯ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಇತರೆ ನೌಕಕರು ಸ್ವತಃ ತಮ್ಮನ್ನು ತಾವೇ ಗೃಹಬಂಧನದಲ್ಲಿಟ್ಟುಕೊಂಡಿದ್ದಾರೆ.

    ಇತ್ತ ಕೊರೊನಾ ಮರಣಮೃದಂಗ ಬಾರಿಸುತ್ತಿರುವ ಇಟಲಿ, ಸ್ಪೈನ್‍ಗಳಲ್ಲಿ ಅಮೆಜಾನ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರಲ್ಲಿ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಹಿನ್ನೆಲೆ ತಮ್ಮ ಆರೋಗ್ಯಕ್ಕೆ ರಕ್ಷಣೆ ನೀಡಬೇಕೆಂದು ಅಮೆಜಾನ್ ಕಂಪನಿಯ ಸುಮಾರು 1,500 ಕಾರ್ಮಿಕರು ಸಹಿ ಹಾಕಿ ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

    ಅಷ್ಟೇ ಅಲ್ಲದೇ ಫ್ಲಿಪ್‍ಕಾರ್ಟ್ ಕೂಡ ಇಂದಿನಿಂದ ತನ್ನ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಆನ್‍ಲೈನ್ ಮೂಲಕ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಜನರು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ಕೊರೊನಾ ಭೀತಿಗೆ ಇಂದಿನಿಂದ ದಿನಸಿ, ದೊಡ್ಡ ಮತ್ತು ಸಣ್ಣ ಮಟ್ಟದ ಸಾಮಗ್ರಿಗಳ ಪೂರೈಕೆಯನ್ನು ಫ್ಲಿಪ್‍ಕಾರ್ಟ್ ಸ್ಥಗಿತಗೊಳಿಸಿದೆ.

  • ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಯಂ ಮಾಲ್ ಹೆಸರಲ್ಲಿ ಫೇಕ್ ವೆಬ್ ಸೈಟ್!

    ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಯಂ ಮಾಲ್ ಹೆಸರಲ್ಲಿ ಫೇಕ್ ವೆಬ್ ಸೈಟ್!

    – ಆಫರ್ ಅಂತ ಕ್ಲಿಕ್ ಮಾಡಿದ್ರೆ ನಿಮ್ಮ ಅಕೌಂಟ್ ಆಗುತ್ತೆ ಖಾಲಿ

    ಬೆಂಗಳೂರು: ಸ್ವಲ್ಪ ಯಾಮಾರಿದ್ರೇ ಏನ್ ಆಗುತ್ತೆ ಅನ್ನೊಕೆ ಇದು ಉದಾಹರಣೆ. ರವೀಶ್ ಅನ್ನೊ ಸಾಫ್ಟ್ ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡೋ ವ್ಯಕ್ತಿ ಫೇಕ್ ವೆಬ್‍ಸೈಟ್ ಇಂದು ಮೋಸ ಹೋಗಿದ್ದಾರೆ. ಕಳೆದ ಡಿಸೆಂಬರ್ 27 ರ ನೈಟ್ ಆನ್‍ಲೈನ್ ಅಲ್ಲಿ ಬ್ರೌಸ್ ಮಾಡಿದ್ದಾರೆ.

    ಫ್ಲಿಪ್ ಕಾರ್ಟ್, ಅಮೇಜನ್ ಅಲ್ಲಿ ಬ್ರೌಸ್ ಮಾಡೋವಾಗ ಸಡನ್ ಆಗಿ ಒಂದು ನೋಟಿಫಿಕೇಷನ್ ಬಂದಿದೆ. ಅದೂ ಸಾವಿರಾರು ರೂಪಾಯಿಗಳ ಬೆಲೆಯ ವಸ್ತುಗಳನ್ನ ಎರಡು ಮೂರು ಸಾವಿರಕ್ಕೆ ಆಫರ್ ಅಂತ ಬಂದಿದೆ. ಇದೇನೋ ಫೆಸ್ಟಿವಲ್ ಅಥವಾ ನ್ಯೂ ಇಯರ್ ಸೇಲ್ ಅಂತ ಸುಮಾರು 21 ಸಾವಿರ ಬೆಲೆಯ ವಸ್ತುಗಳನ್ನ ಓಕೆ ಮಾಡಿದ್ದಾರೆ. ಯಾವಾಗ ಕ್ಲಿಕ್ ಮಾಡಿದ್ರೋ ಇವರ ಅಕೌಂಟಿನಲ್ಲಿದ್ದ ಹಣ ಗಾಯಾಬ್ ಆಗಿದೆ.

    20 ಸಾವಿರ ಬೆಲೆಯ ವಸ್ತು 3-4 ಸಾವಿರಕ್ಕೆ, ಅದೂ 5 ನಿಮಿಷದ ಆಫರ್ ಅಂದಾಗ ನಾನು ಯಾಮಾರಿದೆ. ಸಾಫ್ಟ್‍ವೇರ್ ಕನ್ಸಲ್ಟೆಂಟ್ ಆದ ನಾನು ಈ ರೀತಿ ಮೋಸಕ್ಕೆ ಒಳಗಾಗಿದ್ದೇನೆ. ಆನ್‍ಲೈನ್ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿರುವ ನಾನೇ ಈ ರೀತಿ ಮೋಸ ಹೋಗಿದ್ದೇನೆ. ಸಾಮಾನ್ಯ ಜನ ಇನ್ನೆಷ್ಟು ಮೋಸ ಹೋಗಬಹುದು ಎಂದು ಸೈಬರ್ ಕ್ರೈಮ್ ಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.

    ಉತ್ತರ ಭಾರತದಿಂದ ಈ ರೀತಿ ಅಮೇಜಾನ್, ಫ್ಲೀಪ್ ಕಾರ್ಟ್ ಅನ್ನೊ ಫೇಕ್ ವೆಬ್ ಸೈಟ್ ಗಳ ಮೂಲಕ ಇವರ ಹಣವನ್ನ ಲಪಟಾಯಿಸಿದ್ದಾರೆ. ನನಗಾದ ಪರಿಸ್ಥಿತಿಯಂತೆ ಯಾರೂ ಹಣ ಕಳೆದುಕೊಳ್ಳಬೇಡಿ ಅಂತ ಪಬ್ಲಿಕ್ ಟಿವಿ ಜೊತೆಗೆ ಮೋಸ ಆಗಿದ್ದನ್ನು ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಈ ರೀತಿಯ ಮೋಸದ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದನ್ನು ಸೈಬರ್ ಕ್ರೈಮ್ ಪೊಲೀಸರು ಬೇಧಿಸಿ ಆನ್‍ಲೈನ್ ಕಳ್ಳರ ವಿರುದ್ಧ ಕ್ರಮ ಜರುಗಿಸದ ಹೊರತು ಹೊಸ ಹೊಸ ದಾರಿಗಳನ್ನು ಹುಡುಕಿ ಅಮಾಯಕರ ಹಣವನ್ನು ಲಪಟಾಯಿಸುತ್ತಾರೆ. ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಅಮೇಜಾನ್, ಫ್ಲಿಪ್‍ಕಾರ್ಟ್‍ಗೆ ಸ್ಪರ್ಧೆ – ಶೀಘ್ರವೇ ಜಿಯೋ ಮಾರ್ಟ್ ಆರಂಭ, ಉಚಿತ ಡೆಲಿವರಿ

    ಅಮೇಜಾನ್, ಫ್ಲಿಪ್‍ಕಾರ್ಟ್‍ಗೆ ಸ್ಪರ್ಧೆ – ಶೀಘ್ರವೇ ಜಿಯೋ ಮಾರ್ಟ್ ಆರಂಭ, ಉಚಿತ ಡೆಲಿವರಿ

    ಮುಂಬೈ : ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋ ಶೀಘ್ರದಲ್ಲೇ ‘ಜಿಯೋ ಮಾರ್ಟ್’ ಆರಂಭಿಸುವ ಮೂಲಕ ಇ ಕಾಮರ್ಸ್ ಉದ್ಯಮಕ್ಕೆ ಕಾಲಿಡಲಿದೆ. ಮುಂಬೈನಲ್ಲಿ ಇ ಕಾಮರ್ಸ್ ಸಂಸ್ಥೆ ಆರಂಭಿಸಿ ಫ್ಲಿಪ್‍ಕಾರ್ಟ್ ಮತ್ತು ಅಮೇಜಾನ್ ಕಂಪನಿಗಳಿಗೆ ಸವಾಲೊಡ್ಡಲು ಜಿಯೋ ಸಿದ್ಧವಾಗಿದೆ.

    ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಇಷ್ಟು ದಿನ ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ಕಂಪನಿ ಈಗ ಇ ಕಾಮರ್ಸ್ ವಲಯದಲ್ಲೂ ಆಫರ್ ಗಳನ್ನು ಬಿಡುವ ಮೂಲಕ ಹೊಸ ಇತಿಹಾಸ ಬರೆಯಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

    ಪ್ರಾಯೋಗಿಕವಾಗಿ ಹೊಸ ಮುಂಬೈ, ಥಾಣೆ ಮತ್ತು ಕಲ್ಯಾಣ್‍ನಲ್ಲಿ ಜಿಯೋಮಾರ್ಟ್ ಆರಂಭವಾಗಲಿದೆ. ಈಗಾಗಲೇ ಪ್ರಚಾರ ಆರಂಭಗೊಂಡಿದ್ದು ಮುಂಬೈನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್ ಆರಂಭಿಸುವ ಜಾಹೀರಾತು ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ರಮೇಣ ಭಾರತಾದ್ಯಂತ ವಿಸ್ತರಿಸಲು ಜಿಯೋ ಮುಂದಾಗುತ್ತಿದೆ.

    ರಿಲಯನ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷದ ಅಗಸ್ಟ್ ನಲ್ಲಿ ನಡೆದ 42ನೇ ವಾರ್ಷಿಕ ಸಭೆಯಲ್ಲಿ ಇ-ಕಾಮರ್ಸ್ ಉದ್ಯಮವನ್ನು ಹೊಸ ವಾಣಿಜ್ಯ ಉಪಕ್ರಮ ಎಂದು ಕರೆಯುವ ಮೂಲಕ ಜಿಯೋ ಮಾರ್ಟ್ ಆರಂಭಿಸುವ ಸುಳಿವು ನೀಡಿದ್ದರು. ಮೂರು ಕೋಟಿ ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ದೇಶದ 20 ಕೋಟಿ ಮನೆಗಳೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು.

    ತನ್ನ ಇ-ಕಾಮರ್ಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರಿಲಯನ್ಸ್ ರಿಟೇಲ್ ಜಿಯೋಮಾರ್ಟ್‍ಗಾಗಿ ಪೂರ್ವ ನೋಂದಣಿಗಳಿಗೆ ಆಹ್ವಾನಿಸಿದೆ. ಈ ಹೊಸ ಉದ್ಯಮವು 50 ಸಾವಿರಕ್ಕೂ ಹೆಚ್ಚು ಕಿರಾಣಿ ಉತ್ಪನ್ನಗಳಿಗೆ ಬಂಡವಾಳ ನೀಡಲು ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಬೆಲೆ ಮತ್ತು ಉಚಿತ ಡೆಲಿವರಿಗೆ ಹೆಚ್ಚು ಆದ್ಯತೆ ನೀಡಿದ್ದು ಉತ್ಪನ್ನಗಳು ವಾಪಸ್ ಆಗದ ರೀತಿಯಲ್ಲಿ ಎಕ್ಸ್‍ಪ್ರೆಸ್ ಡೆಲಿವರಿ ಸೇವೆಯನ್ನ ಗ್ರಾಹಕರಿಗೆ ಒದಗಿಸಲಿದೆ. ಇದಕ್ಕಾಗಿ ಜಿಯೋ ಮಾರ್ಟ್ “ದೇಶ್ ಕೀ ನಾಯ್ ದುಕಾನ್” (ದೇಶದ ಹೊಸ ಅಂಗಡಿ) ಸಬ್ ಟೈಟಲ್ ನ್ನು ನೀಡಿದ್ದು ಅಮೇಜಾನ್ ಫ್ಲಿಪ್‍ಕಾರ್ಟ್ ನಂತೆ ತನ್ನತ್ತ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

    ವರದಿಗಳ ಪ್ರಕಾರ ರಿಲಯನ್ಸ್ ರಿಟೇಲ್, ತನ್ನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್‍ಗೆ ನೋಂದಾಯಿಸಲು ಮತ್ತು ಪ್ರಾಥಮಿಕ ರಿಯಾಯಿತಿಗಳನ್ನು ಪಡೆದುಕೊಳ್ಳಲು ಆಹ್ವಾನವನ್ನು ಕಳುಹಿಸುತ್ತಿದೆ. 3 ಸಾವಿರ ರೂ. ನೀಡಿ ನೊಂದಾಯಿಸಿದ್ದಲ್ಲಿ ಜಿಯೋ ಮಾರ್ಟ್ ನಲ್ಲಿ ಹೆಚ್ಚಿನ ರಿಯಾಯಿತಿ ಪಡೆಯುವ ಅವಕಾಶ ನೀಡುವುದಾಗಿ ಹೇಳಿದೆ.

    ಜಿಯೋ ಮಾರ್ಟ್ ಸ್ಥಳೀಯ ಉಗ್ರಾಣವನ್ನು ನಿರ್ಮಿಸುವ ಬದಲು, “ಆನ್‍ಲೈನ್ – ಟು – ಆಫ್‍ಲೈನ್” ಮಾರುಕಟ್ಟೆ ನಿರ್ಮಿಸುತ್ತಿದೆ. ಅಮೆಜಾನ್ ಪ್ರೈಮ್ ನೌ ಮತ್ತು ಗ್ರೂಫರ್ಸ್‍ನಂತೆಯೇ ಕಿರಾಣಿ ವಸ್ತುಗಳನ್ನು ಹತ್ತಿರದ ವ್ಯಾಪಾರಿಗಳಿಂದ ಪಡೆದು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದೆ. ಇದರಿಂದ ಜಿಯೋ ಮಾರ್ಟ್ ಹೊಸ ಉದ್ಯಮವು ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರದೇಶದಲ್ಲಿನ ಆನ್‍ಲೈನ್ ಕೇಂದ್ರೀಕೃತ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸುವ ವೇದಿಕೆಯಾಗಿ ಹೊರ ಹೊಮ್ಮಲಿದೆ ಎನ್ನಲಾಗಿದೆ.

    ಆರಂಭದಲ್ಲಿ, ಜಿಯೋಮಾರ್ಟ್, ದೈನಂದಿನ ಅವಶ್ಯಕತೆಗಳಾದ ಸಾಬೂನು, ಶ್ಯಾಂಪೂ ಮತ್ತು ಇತರ ಮನೆ ಬಳಕೆಯ ವಸ್ತುಗಳನ್ನು ಕೇವಲ ಎರಡು ಗಂಟೆಯಲ್ಲಿ ಪೂರೈಕೆ ಮಾಡಲಿದೆ ಎಂದು ಹೇಳಿಕೊಂಡಿದೆ. ಜಿಯೋ ಮಾರ್ಟ್‍ನ ಈ ಬೆಳವಣಿಗೆ ಅಮೆಜಾನ್‍ನ ಪ್ರೈಮ್ ನೌಗೆ ಕಷ್ಟ ಕರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್ ಜಿಯೋಮಾರ್ಟ್ ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಲಿದೆ.