Tag: Amazon Prime

  • ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್‌

    ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್‌

    ಕಾಂತಾರ: ಚಾಪ್ಟರ್‌ 1 (Kantara Chapter 1) ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಈ ವರ್ಷದ ಸೂಪರ್‌ ಹಿಟ್‌ ಚಲನಚಿತ್ರ ಅಕ್ಟೋಬರ್‌ 31 ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

    ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡುಗಡೆ ಮಾಡಲಾಗುವುದು ಎಂದು ಅಮೆಜಾನ್‌ ಪ್ರೈಮ್‌ (Amazon Prime) ಅಧಿಕೃತವಾಗಿ ತಿಳಿಸಿದೆ.

    ಕಾಂತಾರದ ಎಲ್ಲಾ ಭಾಷೆಗಳ ಒಟಿಟಿ ಹಕ್ಕುಗಳನ್ನು (OTT Rights) ಅಮೆಜಾನ್‌ ಪಡೆದುಕೊಂಡಿದ್ದರೂ ಹಿಂದಿ ಭಾಷೆಗೆ ಡಬ್‌ ಆಗಿರುವ ಸಿನಿಮಾ ರಿಲೀಸ್‌ ಆಗುತ್ತಿಲ್ಲ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈಗಲೂ ಕಾಂತಾರ ಟಿಕೆಟ್‌ಗಳು ಸೇಲ್‌ ಆಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್‌ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

     

    ಬಿಡುಗಡೆಯಾಗಿ 25 ದಿನ ಕಳೆದರೂ ಕಾಂತಾರ ಕ್ರೇಜ್‌ ಇನ್ನೂ ಕಡಿಮೆಯಾಗಿಲ್ಲ. ನಾಲ್ಕನೇ ವಾರಕ್ಕೆ ಕಾಲಿಟ್ಟರೂ ಈಗಲೂ ಬುಕ್‌ಮೈಶೋದಲ್ಲಿ ಟಿಕೆಟ್‌ ಮಾರಾಟವಾಗುತ್ತಿದೆ. ಹಿಂದಿಯಲ್ಲಿ ಮೊದಲ ವಾರ 110.10 ಕೋಟಿ ರೂ. ಗಳಿಸಿದರೆ ಎರಡನೇ ವಾರದಲ್ಲಿ 54.57 ಕೋಟಿ ರೂ., ಮೂರನೇ ವಾರದಲ್ಲಿ 28.95 ಕೋಟಿ ರೂ., ನಾಲ್ಕನೇ ವಾರದಲ್ಲಿ 11.94 ಕೋಟಿ ರೂ. ಗಳಿಸುವ ಮೂಲಕ ಒಟ್ಟು 205.56 ಕೋಟಿ ರೂ. ಗಳಿಸಿದೆ.

    ಇಲ್ಲಿಯವರೆಗೆ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ 809 ಕೋಟಿ ರೂ. ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ಈ ಮೂಲಕ ಈ ವರ್ಷ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಚಾವಾ ಸಿನಿಮಾವನ್ನು ಮೀರಿಸಿದೆ. ಚಾವಾ ಸಿನಿಮಾ 807 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು.

    ಕಾಂತಾರ ಸಿನಿಮಾ ನಿರ್ಮಾಣಕ್ಕೆ ಅಂದಾಜು 125 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗುತ್ತಿದೆ. ಒಟಿಟಿ ಹಕ್ಕುಗಳನ್ನು ಅಮೇಜಾನ್‌ ಪ್ರೈಮ್‌ 125 ಕೋಟಿ ರೂ. ನೀಡಿ ಖರೀದಿಸಿದೆ ಎನ್ನಲಾಗುತ್ತಿದೆ. ಕೆಜಿಎಫ್‌ ನಂತರ ಅತಿದೊಡ್ಡ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾದ ಎರಡನೇ ಕನ್ನಡ ಚಿತ್ರ ಕಾಂತಾರವಾಗಿದೆ.

    2022 ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಬಜೆಟ್‌ ಅಂದಾಜು 16 ಕೋಟಿ ರೂ. ಆಗಿದ್ದರೆ ಬಾಕ್ಸ್‌ ಆಫೀಸ್‌ನಲ್ಲಿ 450 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು.

  • ಎಸ್.ಆರ್.ಕೆ ಅಂದರೆ ಶಾರುಖ್ ಖಾನ್ ಅಲ್ಲ, ಶಿವರಾಜ್ ಕುಮಾರ್ ಎಂದ ಕನ್ನಡ ಸಿನಿ ಪ್ರೇಮಿಗಳು

    ಎಸ್.ಆರ್.ಕೆ ಅಂದರೆ ಶಾರುಖ್ ಖಾನ್ ಅಲ್ಲ, ಶಿವರಾಜ್ ಕುಮಾರ್ ಎಂದ ಕನ್ನಡ ಸಿನಿ ಪ್ರೇಮಿಗಳು

    ಮೆಜಾನ್ ಪ್ರೈಮ್ ವಿಡಿಯೋ ತನ್ನ ಟ್ವಿಟರ್ ಖಾತೆಯಲ್ಲಿ ಯುವರ್ ಫೆವರೆಟ್ ಎಸ್.ಆರ್.ಕೆ ಫಿಲ್ಮ? ಎಂಬ ಪ್ರಶ್ನೆ ಕೇಳಿತ್ತು. ಭಾರತೀಯ ಸಿನಿಮಾ ರಂಗದಲ್ಲಿ ಎಸ್.ಆರ್.ಕೆ ಅಂದರೆ ಶಾರುಖ್ ಖಾನ್ ಎಂದೇ ಅದು ಬಿಂಬಿಸಲು ಹೊರಟಿತ್ತು. ಆದರೆ, ಕನ್ನಡಿಗರು ಈ ಪದಕ್ಕೆ ಬೇರೆಯ ಅರ್ಥವನ್ನೇ ಕೊಟ್ಟಿದ್ದಾರೆ. ನಿರ್ದೇಶಕ ಸುನಿ ಸೇರಿದಂತೆ ಅನೇಕರು ಎಸ್.ಆರ್.ಕೆ ಅಂದರೆ ಶಾರುಖ್ ಖಾನ್ ಅಲ್ಲ, ಕನ್ನಡದ ಶಿವರಾಜ್ ಕುಮಾರ್ ಎಂದೇ ಸೂಚಿಸಿದ್ದಾರೆ.

    ಕನ್ನಡದ ಅನೇಕ ತಂತ್ರಜ್ಞರು ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳು ಶಿವರಾಜ್ ಕುಮಾರ್ ನಟನೆಯ ಅನೇಕ ಸಿನಿಮಾಗಳನ್ನು ಹೆಸರಿಸಿದ್ದಾರೆ. ಶಾರುಖ್ ಖಾನ್ ನಟನೆಯ ಸಿನಿಮಾಗಳಿಗಿಂತಲೂ ಶಿವಣ್ಣ ನಟನೆಯ ಅನೇಕ ಸಿನಿಮಾಗಳ ಯಾದಿಯನ್ನು ಅದಕ್ಕೆ ಒದಗಿಸಿದ್ದಾರೆ. ಅಲ್ಲದೇ, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಕನ್ನಡಿಗರೇ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ

    ಬರೀ ಶಿವರಾಜ್ ಕುಮಾರ್ ನಟನೆಯ ಸಿನಿಮಾಗಳ ಹೆಸರನ್ನು ಮಾತ್ರ ಸೂಚಿಸಿಲ್ಲ. ಬಾಲಿವುಡ್ ಸಿನಿಮಾ ರಂಗದ ಬಗ್ಗೆ ಪಾಠವನ್ನೂ ಕೆಲವರು ಮಾಡಿದ್ದಾರೆ. ಭಾರತೀಯ ಸಿನಿಮಾ ರಂಗ ಅಂದರೆ, ಅದು ಕೇವಲ ಬಾಲಿವುಡ್ ಮಾತ್ರವಲ್ಲ, ಕನ್ನಡವೂ ಸೇರಿದಂತೆ ಹಲವು ಭಾಷೆಯ ಚಿತ್ರರಂಗಗಳು ಇವೆ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ.

    Live Tv

  • Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ನಾಳೆಗೆ ಒಂದು ತಿಂಗಳು. ಈ ಸಂದರ್ಭದಲ್ಲಿ ಕೆಜಿಎಫ್ 2 ಸಿನಿಮಾ ತಂಡದಿಂದ ನೋಡುಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅತೀ ಶೀಘ್ರದಲ್ಲೇ ಅಮೆಜಾನ್ ಪ್ರೇಮ್ ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಸದ್ಯಕ್ಕೆ ಅಮೆಜಾನ್ ಪ್ರೈಮ್ ಮೆಂಬರ್ ಅಲ್ಲದವರು ಸಿನಿಮಾ ನೋಡುವಂತೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಸಾಮಾನ್ಯವಾಗಿ ಅಮೆಜಾನ್ ಪ್ರೈಮ್ ಸದಸ್ಯರಾದವರು ಮಾತ್ರ ಅಲ್ಲಿರುವ ಸಿನಿಮಾ ವೀಕ್ಷಣೆ ಮಾಡುವಂತಹ ಅವಕಾಶವಿತ್ತು. ಆದರೆ, ಕೆಜಿಎಫ್ 2 ಸಿನಿಮಾವನ್ನು ರೆಂಟಲ್ ಬೇಸಸ್ ಆಧಾರದಲ್ಲಿ ನೋಡುವಂತಹ ತಂತ್ರಜ್ಞಾನವನ್ನು ಭಾರತದಲ್ಲಿ ಜಾರಿ ಮಾಡುತ್ತಿದ್ದು, ಇಂತಿಷ್ಟು ಹಣ ಕೊಟ್ಟು 24 ಗಂಟೆಯೊಳಗೆ ಕೆಜಿಎಫ್ 2 ಸಿನಿಮಾ ನೋಡಬಹುದಾಗಿದೆ. ಇದಕ್ಕೆ ಅಮೆಜಾನ್ ಪ್ರೈಮ್ ಸದಸ್ಯರಾಗುವ ಅಗತ್ಯವಿಲ್ಲ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಈ ರೀತಿಯ ವ್ಯವಸ್ಥೆಯನ್ನು ಅಮೆಜಾನ್ ಪ್ರೈಮ್ ವಿದೇಶದಲ್ಲಿ ಪರಿಚಯಿಸಿದೆ. ಆದರೆ, ಭಾರತದಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಕೆಜಿಎಫ್ 2 ಸಿನಿಮಾದ ಮೂಲಕ ಮೊದಲ ಬಾರಿಗೆ ಇಂಥದ್ದೊಂದು ಅವಕಾಶವನ್ನು ನೋಡುಗರಿಗೆ ನೀಡಿದೆ. ಸಾಮಾನ್ಯ ವರ್ಗದ ಜನರಿಗೂ ಈ ಸಿನಿಮಾವನ್ನು ತಲುಪಿಸುವ ಉದ್ದೇಶ ಚಿತ್ರತಂಡದ್ದು ಆಗಿರುವುದರಿಂದ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯದೇ ಇದೊಂದು ಸಿನಿಮಾವನ್ನು ವೀಕ್ಷಿಸುವಂತೆ ಮಾಡಲಾಗಿದೆ. ಈ ಮೂಲಕ ಎಲ್ಲ ವರ್ಗದ ಜನರೂ ಈ ಸಿನಿಮಾವನ್ನು ನೋಡಲಿ ಎನ್ನುವ ಉದ್ದೇಶವಿದೆಯಂತೆ. ಇದನ್ನೂ ಓದಿ : ಬಾಲ್ಯದ ಗೆಳೆಯನ ಮದ್ವೆಯಲ್ಲಿ ಯಶ್ ದಂಪತಿ ಭಾಗಿ

    ಅಮೆಜಾನ್ ಪ್ರೈಮ್ ಸದಸ್ಯತ್ವ ಹೊಂದಿದವರು ಮತ್ತು ಹೊಂದಿಲ್ಲದೇ ಇರುವವರು ಕೆಜಿಎಫ್ 2 ಸಿನಿಮಾ ನೋಡುವುದರಿಂದ ಓಟಿಟಿಯಲ್ಲಿಯೂ ಈ ಸಿನಿಮಾ ದಾಖಲೆಯ ರೀತಿಯಲ್ಲಿ ಕೆಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಥಿಯೇಟರ್ ನಲ್ಲಿ ಸಾವಿರಾರು ಕೋಟಿ ಬಾಚಿರುವ ಕೆಜಿಎಫ್ 2, ಓಟಿಟಿಯಲ್ಲೂ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎನ್ನುತ್ತಿದ್ದಾರೆ ಸಿನಿಪಂಡಿತರು.

    ಯಾವಾಗ ಈ ಸಿನಿಮಾ ಅಮೆಜಾನ್ ಪ್ರೈಮ್‍ ನಲ್ಲಿ ಬರಲಿದೆ ಎಂದು ಕಾಯುವವರಿಗೂ ಶುಭ ಸುದ್ದಿಯಿದೆ. ಈ ವಾರದಲ್ಲೇ ಬಹುಶಃ ದಿನಾಂಕವನ್ನು ಘೋಷಣೆ ಮಾಡಲಿದೆ ಎನ್ನುವ ಮಾಹಿತಿ ಇದೆ. ಸಿನಿಮಾ ರಿಲೀಸ್ ಆಗಿ 50 ದಿನಗಳ ನಂತರ ಬಹುಶಃ ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್ 2 ಲಭ್ಯವಾಗಲಿದೆ.

  • ಅಮೇಜಾನ್ ಪ್ರೈಮ್‍ನಲ್ಲಿ ಒಂದು ಮಿಲಿಯನ್ ವೀಕ್ಷಣೆ: ಫಸ್ಟ್ ಕ್ಲಾಸ್‍ನಲ್ಲಿ ಪಾಸಾದ ನಮ್ ಗಣಿ

    ಅಮೇಜಾನ್ ಪ್ರೈಮ್‍ನಲ್ಲಿ ಒಂದು ಮಿಲಿಯನ್ ವೀಕ್ಷಣೆ: ಫಸ್ಟ್ ಕ್ಲಾಸ್‍ನಲ್ಲಿ ಪಾಸಾದ ನಮ್ ಗಣಿ

    ಕೊರೊನಾ ಎಫೆಕ್ಟ್ ನಿಂದ ಸಿನಿಮಾ ರಿಲೀಸ್ ಆಗ್ತಿಲ್ಲ. ಚಿತ್ರಮಂದಿರಕ್ಕೆ ಬಂದು ಸಿನಿಮಾ ಕಣ್ತುಂಬಿಕೊಳ್ಳೋ ಭಾಗ್ಯ ಸಿನಿರಸಿಕರ ಪಾಲಿಗೆ ಸದ್ಯಕ್ಕಿಲ್ಲ. ಹಾಗಂತ ನಮ್ಮ ಸಿನಿ ಪ್ರೇಮಿಗಳು ಸಿನಿಮಾ ನೋಡೋದು ಬಿಟ್ಟಿಲ್ಲ. ಮನೆಯಲ್ಲಿದ್ದುಕೊಂಡೇ ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಮೇಲೆ ಅಪಾರ ಪ್ರೀತಿ ತೋರುತ್ತಿದ್ದಾರೆ.

    ನಿಜ ಹೇಳ್ಬೇಕು ಅಂದ್ರೆ ಥಿಯೇಟರ್ ಅಂಗಳದಲ್ಲೂ ಸಿಗದ ಅದ್ಭುತ ರೆಸ್ಪಾನ್ಸ್ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಕನ್ನಡ ಸಿನಿಮಾಗಳಿಗೆ ಸಿಕ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ‘ನಮ್ ಗಣಿ ಬಿ.ಕಾಂ ಪಾಸ್’ ಸಿನಿಮಾ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರ ಸುಮಾರು 57 ದಿನಗಳ ಕಾಲ ಚಿತ್ರಮಂದಿರದ ಅಂಗಳದಲ್ಲಿತ್ತು.

    ಚಿತ್ರಕ್ಕೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ನಿಂದ ಸಂತಸಗೊಂಡಿದ್ದ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಿತ್ತು. ಚಿತ್ರತಂಡ ಊಹಿಸದ ರೀತಿಯಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಯಶ್ಸಸ್ಸು ಸಿಕ್ಕಿದೆ. ಇಲ್ಲಿವರೆಗೆ ಒಂದು ಮಿಲಿಯನ್ ವ್ಯೂ ಚಿತ್ರಕ್ಕೆ ಸಿಕ್ಕಿದೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದವ್ರನ್ನು ಸಂಪರ್ಕಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು ಮತ್ತೊಂದು ಸಿನಿಮಾ ಮಾಡುವಂತೆ ಉತ್ತೇಜನ ಕೂಡ ನೀಡ್ತಿದ್ದಾರೆ ಎಂದು ಚಿತ್ರತಂಡ ಖುಷಿಯನ್ನು ಹಂಚಿಕೊಂಡಿದೆ.

    ಚಿತ್ರದ ನಾಯಕ ಕಂ ನಿರ್ದೇಶಕ ಅಭಿಷೇಕ್ ಶೆಟ್ಟಿ ಮೊದಲ ಚಿತ್ರ ಇದಾಗಿದ್ದು, ಮೊದಲ ಪ್ರಯತ್ನದಲ್ಲೇ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದು, ಪಲ್ಲವಿ ಗೌಡ, ರಚನಾ ದಶರಥ, ಸುಚೇಂದ್ರ ಪ್ರಸಾಧ್, ಸುಧಾ ಬೆಳವಾಡಿ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಬೃಂದಾವನ್ ಎಂಟರ್ ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಾಗೇಶ್ ಕುಮಾರ್ ಯು.ಎಸ್ ಬಂಡವಾಳ ಹೂಡಿದ್ದಾರೆ.

    ಬಿ.ಕಾಂ ಪಾಸ್ ಆದ ಹುಡುಗ ಕೆಲಸ ಸಿಗದೇ ಇದ್ದಾಗ ಯಾವೆಲ್ಲ ಪಡಿಪಾಟಲು ಪಡುತ್ತಾನೆ. ಆತನ ಜೀವನನದಲ್ಲಿ ಏನೇನಾಗುತ್ತೆ ಅನ್ನೋದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು, ಹಾಸ್ಯದ ಹೂರಣದ ಜೊತೆ ಭಾವನಾತ್ಮಕ ಅಂಶಗಳು ಚಿತ್ರದಲ್ಲಿದೆ. ಒಟ್ಟಿನಲ್ಲಿ ಒಳ್ಳೆಯ ಸಿನಿಮಾಗಳು ಸೋಲೋದಿಲ್ಲ ಎನ್ನೋದಕ್ಕೆ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಬೆಸ್ಟ್ ಉದಾಹರಣೆ.

  • ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟ ಸ್ಟ್ರೈಕರ್!

    ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟ ಸ್ಟ್ರೈಕರ್!

    ಕೊರೊನಾ ಕಾಟದಿಂದ ಚಿತ್ರಮಂದಿರಗಳು ಮುಚ್ಚಿಕೊಂಡಿರೋದರ ಬಗ್ಗೆ ಚಿತ್ರ ಪ್ರೇಮಿಗಳಲ್ಲೊಂದು ಕೊರಗಿದೆ. ಅದನ್ನು ಕೊಂಚ ನೀಗಿಸಿ ಮನೆಯೊಳಗೆ ಬಣ್ಣದ ಜಗತ್ತು ಕಣ್ತೆಯುವಂತೆ ಮಾಡುವಲ್ಲಿ ಅಮೆಜಾನ್ ಪ್ರೈಮ್‍ನ ಪಾತ್ರ ದೊಡ್ಡದು. ಈಗಾಗಲೇ ಕನ್ನಡದ ಒಂದಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್ ಮೂಲಕ ಲಾಕ್‍ಡೌನ್ ಕಾಲವನ್ನು ಸಹನೀಯವಾಗಿಸಿವೆ. ಅದರಲ್ಲಿಯೇ ಕೆಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿವೆ. ಅಂಥಾದ್ದೇ ಆವೇಗದೊಂದಿಗೆ ಇದೀಗ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರೋ ‘ಸ್ಟ್ರೈಕರ್’ ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟಿದೆ.

    ಇದು ಗರುಡಾದ್ರಿ ಫಿಲಮ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು, ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದ ಚಿತ್ರ. ಪ್ರವೀಣ್ ತೇಜ್ ಮತ್ತು ಶಿಲ್ಪಾ ಮಂಜುನಾಥ್ ನಾಯಕ ನಾಯಕಿಯರಾಗಿ ನಟಿಸಿದ್ದ ಸ್ಟ್ರೈಕರ್ ಈ ವರ್ಷದ ಹಿಂದೆ ಬಿಡುಗಡೆಗೊಂಡಿತ್ತು. ಆರಂಭದಲ್ಲಿಯೇ ವಿಭಿನ್ನ ಕಥಾ ಹಂದರದ ಸುಳಿವಿನೊಂದಿಗೆ ಮಿರುಗುತ್ತಾ ಅದೇ ಆವೇಗದಲ್ಲಿ ತೆರೆ ಕಂಡಿತ್ತು. ಆ ಬಳಿಕ ಪ್ರೇಕ್ಷಕರೆಲ್ಲ ಈ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಗೆ ಮಾರು ಹೋಗಿದ್ದರು.

    ನಿರ್ದೇಶಕ ಪವನ್ ತ್ರಿವಿಕ್ರಮ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದ ರೀತಿಯೇ ಅಂಥಾದ್ದಿದೆ. ಕ್ರೈಂ ಥ್ರಿಲರ್ ಚಿತ್ರಗಳನ್ನು ಅನುಭವಿಸಿ ನೋಡೋ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಹಾಗಿದ್ದ ಮೇಲೆ ಹೊಸ ಪ್ರಯೋಗಗಳೊಂದಿಗೆ ರೂಪುಗೊಂಡಿದ್ದ ಸ್ಟ್ರೈಕರ್ ಅವರಿಗೆ ಇಷ್ಟವಾಗದಿರಲು ಸಾಧ್ಯವೇ? ಈ ಕಾರಣದಿಂದಲೇ ಸ್ಟ್ರೈಕರ್ ಗೆಲುವು ಕಂಡಿತ್ತು. ಇದೀಗ ಆ ಚಿತ್ರ ಕೊರೊನಾ ಕಾಲದಲ್ಲಿ ಮತ್ತಷ್ಟು ಜನರನ್ನು ತಲುಪಿಕೊಳ್ಳುವ ಇರಾದೆಯಿಂದ ಅಮೆಜಾನ್ ಪ್ರೈನಲ್ಲಿ ಕಾರುಬಾರು ಆರಂಭಿಸಿದೆ.

    ಮೂವರು ಸ್ನೇಹಿತರು ಮತ್ತು ಅಲ್ಲಿ ನಡೆಯೋ ಒಂದು ಕೊಲೆಯ ಸುತ್ತಲಿನ ಕಥಾ ಹಂದರ ಈ ಸಿನಿಮಾದಲ್ಲಿದೆ. ಹಾಗಂತ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಕಥೆಯ ಕೇಂದ್ರಕ್ಕೆ ಹಲವಾರು ಕವಲುಗಳಿದ್ದಾವೆ. ಅವೆಲ್ಲವನ್ನೂ ಅಪರಿಮಿತವಾದ ರೋಮಾಂಚಕ ಶೈಲಿಯಲ್ಲಿ, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ರೂಪಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಚೇತೋಹಾರಿ ಅನುಭವ ನೀಡುವ, ರೋಮಾಂಚಕ ಕ್ಷಣಗಳನ್ನ ಯಥೇಚ್ಛವಾಗಿ ಕೊಡಮಾಡುವ ಸ್ಟ್ರೈಕರ್ ನಿಮ್ಮೊಳಗಿನ ಏಕತಾನತೆಯನ್ನ ನೀಗಿಸುವಂತಾಗಲಿ.

  • ಅಮೇಜಾನ್ ಪ್ರೈಮ್‍ನಲ್ಲೀಗ ಫೇಸ್ ಟು ಫೇಸ್!

    ಅಮೇಜಾನ್ ಪ್ರೈಮ್‍ನಲ್ಲೀಗ ಫೇಸ್ ಟು ಫೇಸ್!

    ವರ್ಷದ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರ ಕಡೆಯಿಂದ ಅಪಾರ ಪ್ರೀತಿ, ಮೆಚ್ಚುಗೆ ಗಳಿಸಿಕೊಂಡಿದ್ದ ಚಿತ್ರ ಫೇಸ್ ಟು ಫೇಸ್. ಸಂದೀಪ್ ಜನಾರ್ಧನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಹೊಸತನದ ಸುಳಿವು ಕೊಡುತ್ತಲೇ ಸೃಷ್ಟಿಸಿದ್ದ ಸಂಚಲನವನ್ನು ಪ್ರೇಕ್ಷಕರ್ಯಾರೂ ಮರೆತಿರಲಿಕ್ಕಿಲ್ಲ. ಹೊಸಬರ ತಂಡ, ಅದರ ಫಲವಾಗಿ ಪಡಿಮೂಡಿಕೊಂಡಿದ್ದ ಹೊಸ ಆವೇಗ… ಇಂಥಾ ಒಡ್ಡೋಲಗದಲ್ಲಿಯೇ ತೆರೆ ಕಂಡಿದ್ದ ಫೇಸ್ ಟು ಫೇಸ್ ಗೆದ್ದಿತ್ತು. ಇದೀಗ ಮತ್ತೆ ಅದರ ಹಂಗಾಮ ಅಮೇಜಾನ್ ಪ್ರೈಮ್‍ನಲ್ಲಿ ಶುರುವಾಗಿದೆ.

    ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ರೋಹಿತ್ ಭಾನುಪ್ರಕಾಶ್ ನಿರ್ವಹಿಸಿದ್ದರೆ, ದಿವ್ಯಾ ಉರುಡಗ ಮತ್ತು ಪೂರ್ವಿ ಜೋಶಿ ನಾಯಕಿಯರಾಗಿ ನಟಿಸಿದ್ದಾರೆ. ಈ ಎಲ್ಲರೂ ಕೂಡಾ ತಂತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸೋ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಅಮೇಜಾನ್ ಪ್ರೈಮ್ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ತಲುಪಿಕೊಳ್ಳೋ ಖುಷಿ ಅವರೆಲ್ಲರಲ್ಲಿದೆ. ಮೇಲು ನೋಟಕ್ಕೆ ಸರಳವಾಗಿ ಕಾಣುವ, ಪ್ರೇಮದ ಸುತ್ತ ಗಿರಕಿ ಹೊಡೆಯುವಂತೆ ಕಾಣುವ ಕಥಾ ಎಳೆ ಅಷ್ಟು ಸಲೀಸಾಗಿ ಬಿಚ್ಚಿಕೊಳ್ಳುವಂಥಾದ್ದಲ್ಲ. ನಿರ್ದೇಶಕ ಸಂದೀಪ್ ಜನಾರ್ಧನ್ ಸ್ಕ್ರೀನ್ ಪ್ಲೇ ಮೂಲಕವೇ ಅದನ್ನು ಪರಿಣಾಮಕಾರಿಯಾಗಿಸಿದ್ದಾರೆ.

    ಕರಾವಳಿ ಮತ್ತು ಚಿಕ್ಕಮಗಳೂರು ಪ್ರದೇಶದ ಮಲೆನಾಡಿನಲ್ಲಿ ಕಥೆಯ ಗಾಲಿಗಳು ಅಡ್ಡಾಡುತ್ತವೆ. ಆದರೆÉ ಕಥೆಯೆಂಬುದು ಹಠಾತ್ತನೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಒಂದು ಸಿನಿಮಾವನ್ನು ನೋಡುಗರ ಪಾಲಿಗೆ ಯಾವ್ಯಾವ ಅಂಶಗಳು ವಿಶೇಷವಾಗಿಸಬಹುದೋ ಅದೆಲ್ಲವನ್ನೂ ಒಳಗೊಂಡಿರೋ ಚಿತ್ರ ಫೇಸ್ ಟು ಫೇಸ್. ಕಥೆ ಸೇರಿದಂತೆ ಎಲ್ಲದರಲ್ಲಿಯೂ ಇಲ್ಲಿ ಹೊಸತನಗಳು ಕಾಣಿಸುತ್ತವೆ.

    ಅದರಲ್ಲಿಯೂ ವಿಶೇಷವಾಗಿ ಸ್ಕ್ರೀನ್ ಪ್ಲೇನಲ್ಲಿ ಹೊಸತನವಿದೆ. ಅದರ ಬಲದಿಂದಲೇ ಇಡೀ ಸಿನಿಮಾ ಹೆಜ್ಜೆಹೆಜ್ಜೆಗೂ ನೋಡುಗರನ್ನು ಸರ್‍ಪ್ರೈಸ್‍ಗಳೊಂದಿಗೆ ಮುಖಾಮುಖಿಯಾಗಿಸುತ್ತೆ. ಈ ಕೊರೋನಾ ಕಾಲದಲ್ಲಿ ಸದರಿ ಚಿತ್ರ ಅಮೇಜಾನ್ ಪ್ರೈಮ್‍ಗೆ ಆಗಮಿಸಿದೆ. ಹಾಗೆ ಅಮೇಜಾನ್ ಪ್ರೈಮ್‍ಗೆ ಬರುತ್ತಲೇ ಬಹು ಬೇಡಿಕೆಯೊಂದಿಗೆ ಮುಂದುವರೆಯುತ್ತಿದೆ. ಇದು ನಿಜಕ್ಕೂ ಹೊಸ ಬಗೆಯ ಚಿತ್ರ. ಇದನ್ನು ವೀಕ್ಷಿಸೋದರೊಂದಿಗೆ ನಿಮ್ಮ ಲಾಕ್‍ಡೌನ್ ಕಾಲಾವಧಿ ಸಹನೀಯವಾಗಲಿ!

  • ಅಮೇಜಾನ್ ಪ್ರೈಮ್‍ನಲ್ಲಿ ಖುಷಿಯಿಂದ ಕಿಕ್ಕಿರಿದ ‘ಮುಂದಿನ ನಿಲ್ದಾಣ’!

    ಅಮೇಜಾನ್ ಪ್ರೈಮ್‍ನಲ್ಲಿ ಖುಷಿಯಿಂದ ಕಿಕ್ಕಿರಿದ ‘ಮುಂದಿನ ನಿಲ್ದಾಣ’!

    ಹುಪಾಲು ಜನರ ಖುಷಿಗೆ, ಬೇಸರಕ್ಕೆ, ಥರ ಥರದ ಭಾವಗಳಿಗೆ ಸರಿಕಟ್ಟಾಗಿ ಸಾಥ್ ಕೊಡುತ್ತಿದ್ದ ಚಿತ್ರಮಂದಿರಗಳೀಗ ಬೀಗ ಜಡಿದುಕೊಂಡಿವೆ. ಅದೇನೇ ಬ್ಯುಸಿ, ಕಷ್ಟ ಕಾರ್ಪಣ್ಯಗಳಿದ್ದರೂ ಸಿನಿಮಾ ಮಂದಿರಗಳಿಗೆ ತೆರಳಿ ಸಿನಿಮಾ ನೋಡಿ ನಿರಾಳವಾಗುತ್ತಿದ್ದ ಜನರೆಲ್ಲ ಆ ಅವಕಾಶವಿಲ್ಲದೆ ಏನೋ ಕಳೆದುಕೊಂಡಾಗ ಕಸಿವಿಸಿಗೊಳಗಾಗಿದ್ದಾರೆ. ಆ ನೀರವವನ್ನು ಕೊಂಚ ನೀಗಿರೋದು ಅಮೇಜಾನ್ ಪ್ರೈಮ್‍ನ ಆನ್‍ಲೈನ್ ಮೂಲಗಳು. ಇದೀಗ ಹಲವಾರು ಕನ್ನಡ ಸಿನಿಮಾಗಳು ಈ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತಲುಪಿಕೊಳ್ಳುತ್ತಿದೆ. ಸಿನಿಮಾ ಮಂದಿರಗಳಲ್ಲಿ ತೆರೆಕಂಡು ಯಶ ಕಂಡಿದ್ದ ಮುಂದಿನ ನಿಲ್ದಾಣ ಚಿತ್ರವೂ ಇದೀಗ ಅಮೇಜಾನ್ ಪ್ರೈಮ್‍ಗೆ ಅಡಿಯಿರಿಸಿದೆ.

    ಯುವಪ್ರತಿಭೆ ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿರೋ ಮುಂದಿನ ನಿಲ್ದಾಣದ ನವಿರಾದ ಕಥೆಗೆ, ಯುವ ಸಮುದಾಯದ ಸೂಕ್ಷ್ಮ ತಲ್ಲಣಗಳನ್ನು ದೃಶ್ಯಗಳಲ್ಲಿ ಹಿಡಿದಿಟ್ಟ ಕಲಾತ್ಮಕತೆಗೆ ಮತ್ತು ಅದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿಯೇ ಪ್ರೇಕ್ಷಕರಿಗೆ ಮುಟ್ಟಿಸಿದ ಜಾಣ್ಮೆಯ ಬಗ್ಗೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರ ಕಡೆಯಿಂದಲೂ ಈ ಸಿನಿಮಾಗೆ ಮೆಚ್ಚುಗೆಗಳು ಸಿಕ್ಕಿದ್ದವು. ಹೊಸ ಅಲೆಯ, ಹೊಸ ಆಲೋಚನೆಯ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ಕೈ ಹಿಡಿದೇ ತೀರುತ್ತಾರೆಂಬುದಕ್ಕೆ ಉದಾಹರಣೆ ಎಂಬಂತೆ ಮುಂದಿನ ನಿಲ್ದಾಣ ಗೆದ್ದು ಬೀಗಿತ್ತು.

    ಇದೀಗ ಕೊರೊನಾ ಕಾಲದಲ್ಲಿ ಮುಂದಿನ ನಿಲ್ದಾಣ ಚಿತ್ರ ಅಮೇಜಾನ್ ಪ್ರೈಮ್‍ಗೆ ಅಡಿಯಿರಿಸಿದೆ. ಹೀಗೆ ಆಗಮಿಸಿದ ಕ್ಷಣದಿಂದಲೇ ಈ ಚಿತ್ರ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಅಮೇಜಾನ್ ಪ್ರೈಮ್‍ನಲ್ಲಿಯೇ ಲಾಕ್‍ಡೌನ್ ಅವಧಿಯ ತುಂಬಾ ಕನ್ನಡದ ನಾನಾ ಸಿನಿಮಾಗಳು ಮತ್ತೆ ಹಿಟ್ ಆಗಿವೆ. ಮುಂದಿನ ನಿಲ್ದಾಣ ಕೂಡ ಆ ಆದಿಯಲ್ಲಿ ಸೇರ್ಪಡೆಗೊಳ್ಳೋ ಲಕ್ಷಣಗಳೇ ದಟ್ಟವಾಗಿವೆ. ಈ ವಿದ್ಯಮಾನ ವಿಶಿಷ್ಟವಾದ ಆಲೋಚನಾ ಕ್ರಮದಿಂದ ಜೀವ ಪಡೆದ ಸಿನಿಮಾಗಳು ಎಲ್ಲ ಕಾಲದಲ್ಲಿಯೂ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಳ್ಳುತ್ತದೆಂಬುದಕ್ಕೊಂದು ತಾಜಾ ಉದಾಹರಣೆ.

    ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಮುಂದಿನ ನಿಲ್ದಾಣ ಸಾಫ್ಟ್‍ವೇರ್ ಜಗತ್ತಿನ ಮನಸ್ಥಿತಿಗಳ ಕಥೆ ಹೇಳುತ್ತಲೇ ನಾನಾ ದಿಕ್ಕುಗಳನ್ನು ಕಾಣಿಸಿತ್ತು. ನವಿರಾದ ತ್ರಿಕೋನ ಪ್ರೇಮಕಥೆ, ಅದಕ್ಕೆ ಪಟವಿಟ್ಟಂತಹ ಸದಾ ಗುನುಗಿಸಿಕೊಳ್ಳುತ್ತಿರೋ ಚೆಂದದ ಹಾಡುಗಳೊಂದಿಗೆ ಮುಂದಿನ ನಿಲ್ದಾಣದಲ್ಲಿ ಸಿನಿಮಾಸಕ್ತ ಮನಸುಗಳು ಸದಾ ತಂಗುತ್ತಲೇ ಬರುತ್ತಿವೆ. ಇದೀಗ ಅಮೇಜಾನ್ ಪ್ರೈಮ್ ಮೂಲಕ ಮತ್ತೆ ಮುಂದಿನ ನಿಲ್ದಾಣದಲ್ಲಿ ನಿಂತು ಮತ್ತೊಮ್ಮೆ ಮುದಗೊಳ್ಳೋ ಸದವಕಾಶ ಸಿನಿಮಾ ಪ್ರೇಮಿಗಳಿಗೆ ಸಿಕ್ಕಿದೆ. ನೀವೂ ಕೂಡ ಮಿಸ್ ಮಾಡಿಕೊಳ್ಳದೆ ಮುಂದಿನ ನಿಲ್ದಾಣದ ಮುದಗಳಿಗೆ ಮನಸೊಡ್ಡಿಕೊಳ್ಳಿ.

  • ಬಾಲಿವುಡ್‍ನಲ್ಲಿ ತೆರೆ ಕಾಣಲಿದೆ ಕನ್ನಡತಿ ‘ಶಕುಂತಲಾ ದೇವಿ’ ಸಿನಿಮಾ

    ಬಾಲಿವುಡ್‍ನಲ್ಲಿ ತೆರೆ ಕಾಣಲಿದೆ ಕನ್ನಡತಿ ‘ಶಕುಂತಲಾ ದೇವಿ’ ಸಿನಿಮಾ

    ಮುಂಬೈ: ಕನ್ನಡದ ಕೆಲವು ಸಾಧಕರ ಬಗ್ಗೆ ಪರಭಾಷೆಯವರು ಈಗಾಗಲೇ ಸಿನಿಮಾ ಮಾಡಿದ್ದಾರೆ. ಈಗಲೂ ಮಾಡುತ್ತಲೇ ಇದ್ದಾರೆ. ಆದರೆ ಈಗ ಬಾಲಿವುಡ್‍ನಲ್ಲಿ ಕರ್ನಾಟಕದ ಸಾಧಕಿಯ ಸಿನಿಮಾವೊಂದು ತಯಾರಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

    ಹೌದು, ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿರುವ ಹೆಸರಾಂತ ಗಣಿತಜ್ಞೆ ಶಕುಂತಲಾ ದೇವಿ ಬಗ್ಗೆ ಬಿಟೌನ್‍ನಲ್ಲಿ ಸಿನಿಮಾ ತಯಾರಾಗಿದೆ. ‘ಶಕುಂತಲಾ ದೇವಿ’ ಹೆಸರಿನಲ್ಲಿಯೇ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ನಟಿ ವಿದ್ಯಾಬಾಲನ್ ಶಕುಂತಲಾ ದೇವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನು ಮೆನನ್ ಆ್ಯಕ್ಷನ್ ಕಟ್ ಹೇಳಿದ್ದು, ವಿಕ್ರಂ ಮಲ್ಹೋತ್ರಾ ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಜಿಶು ಸೇನ್‍ಗುಪ್ತಾ ಶಕುಂತಲಾ ದೇವಿ ಅವರ ಪತಿ ಪಾತ್ರದಲ್ಲಿ ನಟಿಸಿದ್ದಾರೆ.

    ಒಂದು ವೇಳೆ ಕೊರೊನಾ ವೈರಸ್ ಭಾರತಕ್ಕೆ ವಕ್ಕರಿಸದೇ ಲಾಕ್‍ಡೌನ್ ಮಾಡಿಲ್ಲವಾಗಿದ್ದರೆ ಈ ವೇಳೆಗೆ ‘ಶಕುಂತಲಾ ದೇವಿ’ ಸಿನಿಮಾ ತೆರೆಕಂಡು ಸಿನಿಪ್ರಿಯರ ಮನ ಗೆಲ್ಲುತ್ತಿತ್ತು. ಆದರೆ ಸದ್ಯ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಚಿತ್ರಮಂದಿರಗಳು ಮುಚ್ಚಿದ್ದು, ಸಿನಿಮಾ ತಂಡ ಚಿತ್ರವನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅಮೆಜಾನ್ ಪ್ರೈಂ ನಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದು, ಸ್ವತಃ ವಿದ್ಯಾ ಬಾಲನ್ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಶಕುಂತಲಾ ದೇವಿ 1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಶಕುಂತಲಾ ದೇವಿಗೆ ಗಣಿತ ಎಂದರೆ ಅಚ್ಚುಮೆಚ್ಚು. ಹೀಗಾಗಿ ಗಣಿತದ ಮೇಲೆ ಅವರಿಗೆ ತುಂಬ ಆಸಕ್ತಿ ಹಾಗೂ ಹಿಡಿತವಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಅವರು ಇತರೆ ಮಕ್ಕಳಿಗೆ ಕಬ್ಬಿಣದ ಕಡಲೆಯಂತಿದ್ದ ಕಷ್ಟವಾದ ಲೆಕ್ಕಗಳನ್ನು ಸಲೀಸಾಗಿ ಬಿಡಿಸುತ್ತಿದ್ದರು. ಇವರು ವರ್ಲ್ಡ್ ರೆಕಾರ್ಡ್ ಕೂಡ ಮಾಡಿದ್ದು, ಹಾಳೆ, ಕ್ಯಾಲ್ಕುಲೇಟರ್ ಸಹಾಯವಿಲ್ಲದೆ ಮನಸ್ಸಿನಲ್ಲಿಯೇ ಗಣಿತದ ಲೆಕ್ಕಗಳನ್ನು ಬಿಡಿಸುವ ಮಟ್ಟಿಗೆ ಅದರ ಮೇಲೆ ಶಕುಂತಲಾ ದೇವಿ ಹಿಡಿತ ಇಟ್ಟುಕೊಂಡಿದ್ದಾರೆ.

    ಕೊರೊನಾ ಹಾವಾಳಿಯಿಂದ ಚಿತ್ರಮಂದಿರಗಳು ಮುಚ್ಚಿರುವ ಹಿನ್ನೆಲೆ ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳನ್ನು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡಗಳು ಮುಂದಾಗಿವೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮನ್ ಖುರಾನಾ ಅಭಿನಯದ ‘ಗುಲಾಬೋ ಸಿತಾಬೋ’ ಸಿನಿಮಾವವನ್ನು ಜೂನ್ 12ಕ್ಕೆ ಜಗತ್ತಿನಾದ್ಯಂತ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

    ಈ ಹಿಂದೆ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ಒಟಿಟಿ ಪ್ಲಾಟ್ ಫಾರ್ಮ್‍ನ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡುವುದಾಗಿ ಪುನೀತ್ ರಾಜ್‍ಕುಮಾರ್ ತಿಳಿಸಿದ್ದರು. ಈ ಮೂಲಕ ಕನ್ನಡ ನಿರ್ಮಾಕಪರು ಕೂಡ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.

    ರಘು ಸಮರ್ಥ ಚಿತ್ರಕಥೆ ಬರೆದು ನಿರ್ದೇಶಿಸಿದ ‘ಲಾ’ ಸಿನಿಮಾ ಜೂನ್ 26ರಂದು ಅಮೆಜಾನ್ ಪ್ರೈಮ್ ಮೂಲಕ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಪನ್ನಗಾಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಚಿತ್ರವು ಅಮೆಜಾನ್ ಪ್ರೈಮ್‍ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ ಎಂದು ಪಿಆರ್‌ಕೆ ಪ್ರೊಡಕ್ಷನ್ಸ್ ಅಧಿಕೃತವಾಗಿ ಮಾಹಿತಿ ನೀಡಿತ್ತು.

  • ದಾಖಲೆಯ ಮೊತ್ತಕ್ಕೆ ರಾಬರ್ಟ್ ಖರೀದಿಗೆ ಮುಂದಾಯ್ತಾ ಅಮೆಜಾನ್ ಪ್ರೈಮ್?

    ದಾಖಲೆಯ ಮೊತ್ತಕ್ಕೆ ರಾಬರ್ಟ್ ಖರೀದಿಗೆ ಮುಂದಾಯ್ತಾ ಅಮೆಜಾನ್ ಪ್ರೈಮ್?

    ಬೆಂಗಳೂರು: ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿವೆ. ಹೀಗಾಗಿ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಪರಿಸ್ಥಿತಿ ಸಹಜವಾಗಿ ಇದ್ದಿದ್ದರೆ, ಇಷ್ಟೊತ್ತಿಗೆ ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತಿತ್ತು. ಏಕೆಂದರೆ ಏಪ್ರಿಲ್ 9 ರಂದು ರಾಬರ್ಟ್ ಚಿತ್ರ ಡುಗಡೆ ಆಗಬೇಕಿತ್ತು. ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ. ಸಿನಿಮಾ ರಂಗದ ಸ್ಥಿತಿಯಂತೂ ಹೇಳತೀರದಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ.

    ಇಷ್ಟು ದಿನ ಟೀಸರ್, ಹಾಡುಗಳು ಸೇರಿದಂತೆ ಸಿನಿಮಾ ಕುರಿತು ವಿವಿಧ ರೀತಿಯಲ್ಲಿ ಅಪ್‍ಡೇಟ್ ನೀಡುತ್ತಿದ್ದ ರಾಬರ್ಟ್ ಚಿತ್ರತಂಡ, ಇದೀಗ ಮೌನಕ್ಕೆ ಶರಣಾಗಿದೆ. ಈ ಹಿಂದೆ ಸ್ವತಃ ಡಿ ಬಾಸ್ ಟ್ವೀಟ್ ಮಾಡಿ ಲಾಕ್‍ಡೌನ್ ಇರುವುದರಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ದರು. ಇದಾದ ಬಳಿಕ ಸಿನಿಮಾ ಕುರಿತು ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ.

    ಈ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ರಾಬರ್ಟ್ ತೆರೆಗೆ ಬರಲಿದೆ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಲ್ಲ. ಸಿನಿಮಾ ಬಿಡುಗಡೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಇನ್ನೊಂದು ಸುದ್ದಿ ಹೊರ ಬಿದ್ದಿದೆ. ಓಟಿಟಿ ಪ್ಲಾಟ್‍ಫಾರ್ಮ್ ಆಗಿರುವ ಅಮೆಜಾನ್ ಪ್ರೈಮ್ ದಾಖಲೆ ಮೊತ್ತಕ್ಕೆ ರಾಬರ್ಟ್ ಸಿನಿಮಾ ಖರೀದಿಸಲು ಮುಂದಾಗಿದೆಯಂತೆ.

    ಲಾಕ್‍ಡೌನ್ ಇರುವ ಹಿನ್ನೆಲೆ ಇದನ್ನೇ ಅವಕಾಶವನ್ನಾಗಿ ಬಳಿಸಿಕೊಂಡಿರುವ ಒಟಿಟಿ ಪ್ಲಾಟ್‍ಫಾರ್ಮ್‍ಗಳು, ಥೀಯೇಟರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳನ್ನು ಖರೀದಿಸಲು ಮುಂದಾಗಿವೆ. ಈ ಕುರಿತು ಹಲವು ಭಾಷೆಗಳ ಸಿನಿಮಾ ಇಂಡಸ್ಟ್ರಿಗಳಲ್ಲಿ ಚರ್ಚೆ ನಡೆದಿದೆ. ಅದೇ ರೀತಿ ಇದೀಗ ಅಮೆಜಾನ್ ಪ್ರೈಮ್ ರಾಬರ್ಟ್ ಚಿತ್ರಕ್ಕೂ ಬೇಡಿಕೆ ಇಟ್ಟಿದೆ. ಆದರೆ ಈ ಆಫರ್ ನ್ನು ನಿರ್ಮಾಪಕರು ತಿರಸ್ಕರಿಸಿದ್ದಾರಂತೆ.

    ಡಿ ಬಾಸ್ ಸಿನಿಮಾ ಎಂದರೆ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬ ಇದ್ದಂತೆ. ಚಿತ್ರ ರಿಲೀಸ್ ಆಗುತ್ತಿದ್ದಂತೆ ಸಂಭ್ರಮಾಚರಣೆ, ಕಟೌಟ್ ಹಾಕುವುದು, ಫಸ್ಟ್ ಡೇ ಫಸ್ಟ್ ಶೋ ನೋಡುವುದು ಹೀಗೆ ಅಭಿಮಾನಿಗಳು ಯೋಜನೆ ರೂಪಿಸಿರುತ್ತಾರೆ. ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆ ಮಾಡಿದರೆ ಈ ಸಂಭ್ರಮವೆಲ್ಲ ತಪ್ಪುತ್ತದೆ. ಹಣಕ್ಕಿಂತ ಅಭಿಮಾನಿಗಳ ಸಂಭ್ರಮ ಮುಖ್ಯ ಎಂದು ತೀರ್ಮಾನಿಸಿ ನಿರ್ಮಾಪಕರು ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ತಡವಾದರೂ ಅಡ್ಡಿಯಿಲ್ಲ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.

    ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಜಗಪತಿಬಾಬು, ರವಿ ಕಿಶನ್, ದೇವರಾಜ್ ಹಾಗೂ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  • ಲಾಕ್ ಡೌನ್ ನಿಂದ ಬೇಸರ ಎಂಬುವವರಿಗೆ ‘ಶ್ರೀ ಭರತ ಬಾಹುಬಲಿ’ಯಿಂದ ಮನರಂಜನೆ!

    ಲಾಕ್ ಡೌನ್ ನಿಂದ ಬೇಸರ ಎಂಬುವವರಿಗೆ ‘ಶ್ರೀ ಭರತ ಬಾಹುಬಲಿ’ಯಿಂದ ಮನರಂಜನೆ!

    ಮಂಜು ಮಾಂಡವ್ಯ ನಾಯಕನಾಗಿ ಮೊದಲ ಬಾರಿಗೆ ಎಂಟ್ರಿಕೊಟ್ಟ ಸಿನಿಮಾ ‘ಶ್ರೀ ಭರತ ಬಾಹುಬಲಿ’. ಚಿಕ್ಕಣ್ಣ ಹಾಗೂ ಮಂಜು ಮಾಂಡವ್ಯ ಭರತ-ಬಾಹುಬಲಿಯಾಗಿ ಜನರನ್ನು ಮನರಂಜಿಸಿದ್ದ ಸಿನಿಮಾ. ಅದೆಷ್ಟೋ ಜನ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಆಗಲಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸುತ್ತಿದ್ರು. ಇದೀಗ ಆ ಬೇಸರವನ್ನ ಹೋಗಲಾಡಿಸುವಂತ ಸಮಯ ಬಂದಿದೆ. ಹೌದು ಅಮೆಜಾನ್ ಪ್ರೈಮ್ ನಲ್ಲಿ ‘ಶ್ರೀ ಭರತ ಬಾಹುಬಲಿ’ ಸಿನಿಮಾ ನೋಡುಗರಿಗೆ ಸಿಕ್ತಾ ಇದೆ.

    ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಪ್ರೈಮ್ ನಲ್ಲಿ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಚಿತ್ರಮಂದಿರದಲ್ಲಿ ಇಂತ ಒಳ್ಳೆ ಮನರಂಜನೆಯ ಸಿನಿಮಾ ನೋಡುವುದಕ್ಕೆ ಆಗಲಿಲ್ಲವಲ್ಲ ಎಂಬ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕೊರೋನಾ ವೈರಸ್ ನಿಂದಾಗಿ ಎಲ್ಲೆಡೆ ಲಾಕ್ ಡೌನ್ ಮುಂದುವರಿದಿದೆ. ಈಗ ಏನಿದ್ರು ಮನೆಯಲ್ಲಿ ಲಾಕ್ ಆಗಿ ಟೈಮ್ ಪಾಸ್ ಗೆ ಏನಾದ್ರೂ ಮಾಡ್ಬೇಕು ಅಂತ ಹುಡುಕ್ತಾ ಇರ್ತಾರೆ. ಇಷ್ಟು ದಿನ ಮನೆಯಲ್ಲೇ ಲಾಕ್ ಆಗಿ ಬೇಸರವೆನಿಸಿದ ಮನಸ್ಸಿಗೆ ಮುದ ನೀಡಿ, ನಕ್ಕ ನಲಿಸಲು ‘ಶ್ರೀ ಭರತ ಬಾಹುಬಲಿ’ ಸೂಕ್ತವಾದ ಸಿನಿಮಾ. ಮನೆ ಮಂದಿಯೆಲ್ಲಾ ಒಂದೆಡೆ ಕುಳಿತು ನಗು ಬಯಸುವವರಿಗಾಗಿ ‘ಶ್ರೀ ಭರತ ಬಾಹುಬಲಿ’ಯನ್ನು ಪ್ರೈಮ್ ನಲ್ಲಿ ಬಿಡುಗಡೆ ಮಾಡಲಾಗಿದೆ.

    ‘ಮಾಸ್ಟರ್ ಪೀಸ್’ ಅಂತ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನ ನಟನೆ ಒಂದು ಕಡೆ, ಹಾಸ್ಯದಲ್ಲಿ ಖ್ಯಾತಿ ಪಡೆದಿರುವ ಚಿಕ್ಕಣ್ಣ ಇನ್ನೊಂದು ಕಡೆ. ಸೀರಿಯಸ್ ಮ್ಯಾಟರ್ ಇಟ್ಟುಕೊಂಡು ಕಾಮಿಡಿ ಕಾನ್ಸೆಪ್ಟ್ ನಲ್ಲಿ ಮನರಂಜನೆ ನೀಡಿದ ಸಿನಿಮಾವಿದು. ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಹರೀಶ್, ಶ್ರೇಯಾ ಶೆಟ್ಟಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಮಂಜು ಮಾಂಡವ್ಯ ಹೊಸಬರನ್ನೇ ತೆರೆ ಮೇಲೆ ತಂದಿದ್ದರು, ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಈ ಸಿನಿಮಾ ಕಂಪ್ಲೀಟ್ ಮನರಂಜನೆಯ ಜೊತೆಗೆ ಒಂದೊಳ್ಳೆ ಸಿನಿಮಾ ನೋಡಿದ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ.