Tag: Amavasye

  • ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

    ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

    – 18 ದಿನದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ

    ಅಯೋಧ್ಯೆ: ರಾಮಮಂದಿರದಲ್ಲಿ ಬಾಲಕರಾಮನ ಪ್ರಾಣಪ್ರತಿಷ್ಠಾಪನೆ ಆದಾಗಿಂದ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಂತೆಯೇ ಇಂದು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ಬಾಲಕರಾಮನ ದರ್ಶನ ಪಡೆಯುತ್ತಿದ್ದಾರೆ.

    ಹೌದು. ವೀಕೆಂಡ್‌ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಗೆ (Ayodhya Ram Mandir) ಭಕ್ತ ಸಾಗರವೇ ಹರಿದುಬಂದಿದೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ. ಭಕ್ತರು ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನ ಮಾಡಿ ರಾಮ ಮಂದಿರದತ್ತ ದೌಡಾಯಿಸುತ್ತಿರುವ ವೀಡಿಯೋ ಇದೀಗ ವೈರಲ್‌ ಆಗುತ್ತಿದೆ.

    ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ವಿಐಪಿ ಗೇಟ್ ಕೂಡ ತೆರೆದಿದೆ. ಒಂದೆಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಭಕ್ತರಿಗೆ ಲಾಕರ್ ವ್ಯವಸ್ಥೆ ಸಿಗದಿದ್ದರಿಂದ ಮೊಬೈಲ್ ಫೋನ್, ಲಗೇಜ್ ಜೊತೆಯೇ ಮಂದಿರದೊಳಗೆ ನುಗ್ಗುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

    ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಬಾಲಕರಾಮನ ಪ್ರಾಣಪ್ರತಿಷ್ಠೆ ನಡೆದಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಸಿನಿಮಾ ತಾರೆಗಳು ಹೀಗೆ ಸಾಕಷ್ಟು ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಿದ್ದರು. ಇದಾದ ಬಳಿಕ ಮುಸ್ಲಿಮರು ಸೇರಿದಂತೆ ಸಾವಿರಾರು ಮಂದಿ ರಾಮಮಂದಿರಕ್ಕೆ ಆಗಮಿಸಿದ್ದಾರೆ.

    ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಗುಂಪು ಜನವರಿ 25 ರಂದು ಲಕ್ನೋದಿಂದ ಕಾಲ್ನಡಿಗೆಯ ಮೂಲಕ ರಾಮಮಂದಿರಕ್ಕೆ ಆಗಮಿಸಿತ್ತು. 350 ಮಂದಿ ಮುಸ್ಲಿಂ ಭಕ್ತರ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆಯೇ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆಗೆ ತಲುಪಿತ್ತು. 6 ದಿನಗಳಲ್ಲಿ ಪ್ರತಿ 25 ಕಿ.ಮೀ ಬಳಿಕ ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು ಎಂದು MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಹೇಳಿದ್ದರು.

  • ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ- ಗ್ರಹಣದಂದೇ ಶನಿ ಅಮಾವಾಸ್ಯೆ

    ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ- ಗ್ರಹಣದಂದೇ ಶನಿ ಅಮಾವಾಸ್ಯೆ

    ಬೆಂಗಳೂರು: ನಭೋಮಂಡಲದ ಕೌತುಕ, ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಕೆಟ್ಟ ಪರಿಣಾಮ ಬೀರುತ್ತದೆ ಅಂತಾರೆ. ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ.

    ಏಪ್ರಿಲ್ 30ರಂದು ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ. ಆದರೆ ಗ್ರಹಣವನ್ನು ಸೂತಕ ಎಂದೇ ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತೆ. ಸೂರ್ಯನಿಗೆ ಅಥವಾ ಚಂದ್ರನಿಗೆ ಗ್ರಹಣ ಬಂದ್ರೆ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಮಾತ್ರವಲ್ಲದೇ ಪ್ರಕೃತಿಗೂ ಹಾನಿ, ಭೂಮಿಯ ಮೇಲೆ ಗ್ರಹಣದ ಕರಿಛಾಯೆ ಬೀಳಲಿದೆ ಎನ್ನುವ ಪ್ರತೀತಿ ಇದೆ. ಇನ್ನು ಅದೇ ದಿನ ಶನಿ ಅಮಾವಾಸ್ಯೆಯೂ ಇದೆ. ಹೀಗಾಗಿ ಈ ಬಾರಿಯ ಸೂರ್ಯಗ್ರಹಣ ಹೆಚ್ಚು ಪ್ರಭಾವಶಾಲಿ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂದಾಜು.

    ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 30ರಂದು ಶನಿವಾರ ಮಧ್ಯಾಹ್ನ 12.15ಕ್ಕೆ ಆರಂಭವಾಗುವ ಗ್ರಹಣ, ಸಂಜೆ 4 ಗಂಟೆ 7 ನಿಮಿಷಕ್ಕೆ ಅಂತ್ಯವಾಗಲಿದೆ. ಭಾಗಶಃ ಸೂರ್ಯಗ್ರಹಣದ ಸಂಧರ್ಭದಲ್ಲಿ ಶನಿ ಅಮಾವಾಸ್ಯೆ ಇರುವುದರಿಂದ ಕೆಲ ಶನಿದೇಗುಲ ಸೇರಿದಂತೆ ಶಿವ ದೇಗುಲದಲ್ಲಿಯೂ ವಿಶೇಷ ಪೂಜೆಗಳು ನಡೆಯಲಿದೆ.

    ವಿಜ್ಞಾನಿಗಳ ಪ್ರಕಾರ ಕೌತುಕ, ಜ್ಯೋತಿಷಿಗಳ ಪ್ರಕಾರ ಭೂಮಿಗೆ ಕೆಡುಕಿನ ನಂಬಿಕೆ. ಒಟ್ಟಾರೆ ವರ್ಷದ ಮೊದಲ ಸೂರ್ಯಗ್ರಹಣದ ವಿಸ್ಮಯ ನಾಳೆ ನಡೆಯಲಿದೆ. ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

  • ಅಮಾವಾಸ್ಯೆ ಪ್ರಯುಕ್ತ ದೇವಿ ದೇಗುಲಗಳಲ್ಲಿ ಭಕ್ತಸಾಗರ – ಕೊರೊನಾ ನಿಯಮ ಮರೆತು ದರ್ಶನ

    ಅಮಾವಾಸ್ಯೆ ಪ್ರಯುಕ್ತ ದೇವಿ ದೇಗುಲಗಳಲ್ಲಿ ಭಕ್ತಸಾಗರ – ಕೊರೊನಾ ನಿಯಮ ಮರೆತು ದರ್ಶನ

    ಬೆಂಗಳೂರು: ದೀಪಾವಳಿ ಹಬ್ಬ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿರುವ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಾ ಇದೆ.

    ಬೆಳ್ಳಂಬೆಳ್ಳಗ್ಗೆ ಪೂಜೆ ಸಲ್ಲಿಸಲು ಪುಟ್ಟ ಪುಟ್ಟ ಕಂದಮ್ಮಗಳನ್ನ ಜೊತೆ ಕುಟುಂಬ ಸಮೇತರಾಗಿ ಜನ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಆದರೆ ಜನ ದೇವಸ್ಥಾನದ ಒಳಗೆ ಕೊರೊನಾ ನಿಯಮವನ್ನ ಪಾಲನೆ ಮಾಡುತ್ತಿಲ್ಲ. ಭಕ್ತರು ಸಾಮಾಜಿಕ ಅಂತರ ಮರೆತು ಗುಂಪು ಗೂಡಿದ್ದಾರೆ.

    ಮಾಸ್ಕ್ ಕೂಡ ಹಾಕದೇ ಪೂಜೆಯಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಮಾಸ್ಕ್ ಹಾಕಿದರೂ ಸರಿಯಾಗಿ ಹಾಕಿಲ್ಲ, ಕಾಟಾಚಾರಕ್ಕೆ ಮಾಸ್ಕ್ ಧರಿಸಿದಂತೆ ಭಾಸವಾಗುತ್ತಿದೆ. ಇನ್ನೂ ಕೆಲವರು ಪುಟ್ಟ ಕಂದಮ್ಮನನ್ನ ದೇವಸ್ಥಾನಕ್ಕೆ ಕರೆತಂದಿದ್ದಾರೆ. ಆದರೆ ಮನೆಯವರು ಮಾಸ್ಕ್ ಹಾಕಿದ್ದರೆ ಕಂದಮ್ಮನಿಗೆ ಮಾಸ್ಕ್ ಹಾಕಿಲ್ಲ. ಈ ರೀತಿ ಅಣ್ಣಮ್ಮ ದೇವಸ್ಥಾನದ ಬಳಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

    ಇತ್ತ ಮಲ್ಲೇಶ್ವರಂ ದೇವಾಲಯಗಳು ಖಾಲಿ ಖಾಲಿಯಾಗಿವೆ. ಕೊರೊನಾ ಭಯದಿಂದ ದೇವಾಲಯದ ಕಡೆ ಜನರೇ ಬಂದಿಲ್ಲ. ಸರ್ಕಲ್ ಮಾರಮ್ಮ, ಗಂಗಮ್ಮ ದೇವಾಲಯ ಲಕ್ಷ್ಮೀ ನರಸಿಂಹ ದಕ್ಷಿಣ ಮುಖ ನಂದಿ ದೇವಾಲಯದಲ್ಲಿ ಬೆರಳೆಣಿಕೆಯಷ್ಟು ಭಕ್ತರು ಕಾಣಿಸುತ್ತಿದ್ದಾರೆ. ಇನ್ನು ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಜನ ಜಾತ್ರೆ ತುಂಬಿ ತುಳುಕುತ್ತಿದ್ದು, ಜನ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ನೂರಾರು ಜನ ಕ್ಯೂ ನಿಂತಿದ್ದು, ಸಾಮಾಜಿಕ ಅಂತರವನ್ನೇ ಮರೆತು ದೇವರ ದರ್ಶನದಲ್ಲಿ ಮುಳುಗಿದ್ದಾರೆ.

  • ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಎಳ್ಳ ಅಮಾವಾಸ್ಯೆ ಆಚರಣೆ

    ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಎಳ್ಳ ಅಮಾವಾಸ್ಯೆ ಆಚರಣೆ

    ಬೆಳಗಾವಿ: ಚಿಕ್ಕೋಡಿ ಭಾಗದ ರೈತರು ಇಂದು ಎಳ್ಳ ಅಮವಾಸ್ಯೆ ಆಚರಿಸಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಅತಿವೃಷ್ಟಿಯ ಬಾಧೆಯ ನಡುವೆಯೂ ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದರೂ, ರೈತರ ಸಂಪ್ರದಾಯಕ್ಕೆ ಯಾವಾಗಲೂ ಬರವಿಲ್ಲ ಎಂಬಂತೆ ಸಡಗರವಿಲ್ಲದಿದ್ದರೂ ಸರಳವಾಗಿ ಹಬ್ಬವನ್ನ ಆಚರಿಸಿದ್ದಾರೆ.

    ಭೂಮಿ ತಾಯಿಗೆ ಅನ್ನ ಪ್ರಸಾದ ಹಾಗೂ ನೀರನ್ನು ಅರ್ಪಿಸುವ ಮೂಲಕ ಸಂತೃಪ್ತಗೊಳಿಸುವ ಸಂಭ್ರಮದ ಎಳ್ಳ ಅಮವಾಸ್ಯೆಯನ್ನು ಆಚರಿಸಲಾಯಿತು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಅನ್ನದಾತರಾದ ರೈತರ ಜೀವನ ಸುಖಮವಾಗಬೇಕೆಂದು ಮಹಿಳೆಯರು, ಮಕ್ಕಳು ಭೂಮಾತೆಗೆ ಪೂಜೆ ಸಲ್ಲಿಸಿದರು.

    ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳ ಅಮವಾಸ್ಯೆಯ ದಿನದಂದು ಉತ್ತರ ಕರ್ನಾಟಕದ ರೈತರು ತಮ್ಮ ತಮ್ಮ ಹೊಲಗಳಿಗೆ ಕುಟುಂಬ ಸಮೇತ ಹೋಗಿ, ತಮ್ಮ ಹೊಲದಲ್ಲಿ ಹಸಿರಿನಿಂದ ಕಂಗೊಳಿಸುವ ಭೂ ತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವ ವಾಡಿಕೆ. ಹಾಗೆಯೇ ಜೋಳದ ಕಡಬು, ರೊಟ್ಟಿಯ ಮಿಶ್ರಣದಿಂದ ಮಾಡಿದ ಚರಗವನ್ನು ಹೊಲದ ತುಂಬಾ ಚೆಲ್ಲುವ ಮೂಲಕ ಈ ಸುಗ್ಗಿ ಸಮೃದ್ಧಿಯಾಗುವಂತೆ ಮಾಡು ತಾಯಿ ಎಂದು ಭೂ ತಾಯಿಗೆ ಬೇಡಿಕೊಂಡರು.

    ರೈತ ಮಹಿಳೆಯರು ಜಮೀನಿಗೆ ತೆರಳುವ ಮುನ್ನ ಮನೆಯಲ್ಲಿ ವಿವಿಧ ರೀತಿಯ ಭೋಜನವನ್ನು ತಯಾರಿಸುತ್ತಾರೆ. ಅದರಲ್ಲೂ ಶೇಂಗಾ ಹೋಳಿಗೆ, ರೊಟ್ಟಿ, ಶೇಂಗಾ ಚಟ್ನಿ, ಪುಂಡಿಫಲ್ಲಿ, ಬಜ್ಜಿ, ಕಡಬು ಸೇರಿದಂತೆ ಹತ್ತಾರು ರೀತಿಯ ಅಡುಗೆಯನ್ನು ಮಾಡಿಕೊಳ್ಳುತ್ತಾರೆ. ತಮ್ಮ ತಮ್ಮ ಹೊಲಗಳಲ್ಲಿ ಹಸಿರನ್ನುಟ್ಟು ಕಂಗೊಳಿಸುತ್ತಿರುವ ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಕುಟುಂಬದ ಎಲ್ಲ ಜನರು ಸೇರಿ ಭರ್ಜರಿ ಭೋಜನವನ್ನು ಸವಿದು ಹಬ್ಬದ ಸಂಭ್ರಮ ಸವಿದರು.

  • ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

    ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

    – ತಿರುಪತಿಯಲ್ಲಿ ಬಿಎಸ್‍ವೈ ಪೂಜೆ

    ಚಿಕ್ಕಮಗಳೂರು: ಇಂದು ವರ್ಷದ ಮೊದಲ ಅಮಾವಾಸ್ಯೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಬಳಿಕದ ಪ್ರಪ್ರಥಮ ಅಮಾವಾಸ್ಯೆ. ಒಂದೆಡೆ ಪ್ರಚಂಡ ಮಾರುತವಾದ್ರೆ, ಮತ್ತೊಂದೆಡೆ ಕರ್ನಾಟಕ ರಾಜಕೀಯದಲ್ಲಿ ಮತ್ತೆ ಅಸ್ಥಿರತೆಯ ಭೀತಿ ಎದುರಾಗಿದೆ. ಯಾಕಂದ್ರೆ ಲೋಕಸಭಾ ಫಲಿತಾಂಶಕ್ಕೆ ಕೇವಲ 19 ದಿನವಷ್ಟೇ ಉಳಿದಿದೆ.

    ಇಂತಹ ಹೊತ್ತಲ್ಲಿ ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಹಾಗೂ ಇಬ್ಬರಿಗೂ ಅವರ ಮಕ್ಕಳದ್ದೇ ಚಿಂತೆಯಾಗಿದೆ. ತಮ್ಮ ಮಕ್ಕಳು ಗೆಲ್ಲುತ್ತಾರಾ ಇಲ್ವಾ ಅನ್ನೋ ಟೆನ್ಷನ್ ಆರಂಭವಾಗಿದೆ ಎನ್ನಲಾಗಿದೆ.

    ತಮ್ಮ ರಾಜಕೀಯ ವಾರಸುದಾರ ನಿಖಿಲ್ ಗೆಲ್ಲುತ್ತಾರಾ ಇಲ್ವಾ ಅನ್ನೋ ಚಿಂತೆ ಎಚ್‍ಡಿಕೆಗೆ ಕ್ಷಣಕ್ಷಣವೂ ಕಾಡುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಜೊತೆ ಸೇರಿಕೊಂಡು ಹುಟ್ಟುಹಾಕಿದ್ದ ಸಮ್ಮಿಶ್ರ ಸರ್ಕಾರ ಮೇ 23ರ ಬಳಿಕವೂ ಜೀವಂತವಾಗಿ ಉಸಿರಾಡುತ್ತಾ..? ಪದೇ ಪದೇ ಅಲುಗಾಡುತ್ತಿರುವ ಸಿಎಂ ಕುರ್ಚಿ ಪರ್ಮೆನೆಂಟ್ ಆಗಿ ಉರುಳುತ್ತಾ ಅನ್ನೋ ಆತಂಕದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಶಿವಮೊಗ್ಗದಲ್ಲಿ ಬಿಎಸ್‍ವೈಗೆ ಸುಪುತ್ರ ರಾಘವೇಂದ್ರ ಗೆಲ್ತಾನಾ ಅನ್ನೋ ಆತಂಕವಾದ್ರೆ, ಮತ್ತೊಂದೆಡೆ 54 ಗಂಟೆಯಷ್ಟೇ ಕೈಗೆ ದಕ್ಕಿದ್ದ ಸಿಎಂ ಕುರ್ಚಿ ಲೋಕಸಭಾ ಫಲಿತಾಂಶ ಬಳಿಕ ಮತ್ತೆ ಸಿಗುತ್ತಾ ಅನ್ನೋದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಕಾಡುತ್ತಿದೆ. ಪುತ್ರರ ರಾಜಕೀಯ ಭವಿಷ್ಯ ಮತ್ತು ಸಿಎಂ ಪಟ್ಟದ ಚಿಂತೆಯಲ್ಲಿರುವ ಸಿಎಂ ಮತ್ತು ಮಾಜಿ ಸಿಎಂ ಶನಿವಾರದ ಅಮಾವಾಸ್ಯೆಯಂದು ದೇವರ ಮೊರೆ ಹೋಗಿದ್ದಾರೆ.

    ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಐದು ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ಕುಮಾರಸ್ವಾಮಿ ಮತ್ತು ದೇವೇಗೌಡರು ಯಜ್ಞ ಯಾಗಾದಿಗಳಲ್ಲಿ ಬ್ಯುಸಿ ಆಗಿದ್ದಾರೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡ್ನಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಸತತ 5 ಗಂಟೆ ಪೂಜೆಯಲ್ಲಿ ಕೈಗೊಂಡಿದ್ದಾರೆ. ಸಂಜೆ ಐದೂವರೆಯಿಂದ ಶುರುವಾಗಿದ್ದ ಪೂಜೆ ರಾತ್ರಿ ಹತ್ತೂವರೆಗೆ ಮುಗೀತು.

    ಬಳಿಕ ತಲವಾನೆಯ ಗುಡ್ಡೇತೋಟ ರೆಸಾರ್ಟ್ ನಲ್ಲಿ ಸಿಎಂ ಉಳಿದುಕೊಂಡರು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಗಣಪತಿ ಹೋಮ, ರುದ್ರಯಾಗ ಆರಂಭವಾಗಿದೆ. ಸಿಎಂ, ಮಾಜಿ ಪ್ರಧಾನಿ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ 200 ಮೀಟರ್ ದೂರದವರೆಗೂ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇನ್ನು ಯಡಿಯೂರಪ್ಪ ಅವರು ಬೆಳಗ್ಗೆ 6.30ಕ್ಕೆ ತಿರುಪತಿಯಲ್ಲಿ ಪೂಜೆ ನೆರವೇರಿಸಿದ್ದಾರೆ.

  • ಅಮಾವಾಸ್ಯೆ ಬೆನ್ನಲ್ಲೇ ಪ್ರತ್ಯೇಕ ಅಪಘಾತಗಳಲ್ಲಿ 5 ಮಂದಿ ದುರ್ಮರಣ!

    ಅಮಾವಾಸ್ಯೆ ಬೆನ್ನಲ್ಲೇ ಪ್ರತ್ಯೇಕ ಅಪಘಾತಗಳಲ್ಲಿ 5 ಮಂದಿ ದುರ್ಮರಣ!

    ಮಂಡ್ಯ: ಅಮಾವಾಸ್ಯೆ ಬೆನ್ನಲ್ಲೇ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಒಟ್ಟು ಐದು ಮಂದಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿ ಭಾನುವಾರ ಬೆಳಗ್ಗೆ ನಡೆದ ಬೈಕ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಪ್ರವೀಣ್ ಹಾಗೂ ಪ್ರಮೋದ್ ಇಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿ ಬಳಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಟ್ರಾಕ್ಟರ್ ಚಾಲಕ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಬಗ್ಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    ಮದ್ದೂರು ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನ ಬಳಿ ಕಾರ್ ಪಲ್ಟಿಯಾಗಿ ಬೆಂಗಳೂರಿನ ಉಮೇಶ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ಬೈಕ್ ನಿಂದ ಆಯತಪ್ಪಿ ಬಿದ್ದು ನಾಗೇಂದ್ರ ಎಂಬ ಯುವಕ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews