Tag: Amavasaye

  • ವೈಶಾಖ ಮಾಸದ ಕೃಷ್ಣ ಪಕ್ಷದ ಬಾದಾಮಿ ಅಮಾವಾಸ್ಯೆಯ ಆಚರಣೆ

    ವೈಶಾಖ ಮಾಸದ ಕೃಷ್ಣ ಪಕ್ಷದ ಬಾದಾಮಿ ಅಮಾವಾಸ್ಯೆಯ ಆಚರಣೆ

    – ಅಮವಾಸ್ಯೆಯಂದು ಶಕ್ತಿ ದೇವತೆಯ ಆರಾಧನೆ
    – ಆರಾಧನೆಯಿಂದ ಶತ್ರು ಭಾದೆ ನಿವಾರಣೆ

    ಬೆಂಗಳೂರು: ಬಹುತೇಕ ಜನರಿಗೆ ಅಮವಾಸ್ಯೆ ಇಂದು ಅಥವಾ ನಾಳೆಯೋ ಎಂಬ ಗೊಂದಲದಲ್ಲಿರುತ್ತಾರೆ. ಬಾದಾಮಿ ಅಮಾವಾಸ್ಯೆ ಎಂದರೆ ಕೇವಲ ಬಾದಾಮಿ ಬನಶಂಕರಿಯ ತಾಯಿಯ ಆರಾಧಕರು ಆಚರಣೆ ಮಾಡುತ್ತಾರೆ ಎಂಬ ಕಲ್ಪನೆಯನ್ನು ಹೊಂದಿರುತ್ತಾರೆ. ಬಾದಾಮಿ ಅಮಾವಾಸ್ಯೆಯಂದು ಶಕ್ತಿ ದೇವತೆಯನ್ನು ಆರಾಧನೆ ಮಾಡಲಾಗುತ್ತಿದೆ. ಪ್ರತಿಯೊಂದು ಕುಟುಂಬಕ್ಕೂ ಕುಲದೇವತೆ ಎಂಬುವುದು ಇರುತ್ತದೆ. ಈ ಅಮವಾಸ್ಯೆಯಂದು ಕುಲದೇವತೆ ಅಥವಾ ಗ್ರಾಮದೇವತೆಯನ್ನು ಭಕ್ತಿಯಿಂದ ಆರಾಧಿಸಬೇಕು.

    ಈ ಬಾದಾಮಿ ಅಮಾವಾಸ್ಯೆ ಇಂದು ಸಂಜೆ 4 ಗಂಟೆ 40 ನಿಮಿಷಕ್ಕೆ ಪ್ರಾರಂಭವಾಗಿ ಸೋಮವಾರ 3 ಗಂಟೆ 30ರಿಂದ 36 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಇಂದೇ ಸೋಮವಾರ ಅಮಾವಾಸ್ಯೆಯನ್ನು ಆಚರಿಸಬೇಕು. ಈ ಅಮಾವಾಸ್ಯೆಯ ಹಿಂದಿನ ಮತ್ತು ಮುಂದಿನ ದಿನವನ್ನು ಅನಧ್ಯಯನ ಎಂದು ಕರೆಯಲಾಗುತ್ತದೆ. ಈ ಅನಧ್ಯಯನದಂದು ಪ್ರಕೃತಿಯಲ್ಲಿ ಏರಿಳಿತಗಳು ಉಂಟಾಗುತ್ತವೆ ಎಂಬುವುದು ನಂಬಿಕೆ. ಶಕ್ತಿ ಸ್ವರೂಪಿನಿ ದೇವಿಯ ಶಕ್ತಿ ಈ ಅಮಾವಾಸ್ಯೆಯಂದು ಹೆಚ್ಚಾಗುತ್ತದೆ. ಇಂತಹ ಶಕ್ತಿ ದೇವತೆಯ ಆರಾಧನೆಯೇ ಬಾದಾಮಿ ಅಮವಾಸ್ಯೆಯ ವೈಶಿಷ್ಟ್ಯತೆ.

    ಸೋಮವಾರ ಮಡಿ ಮೈಲಿಗೆಯಿಂದ ನಿಮ್ಮ ಕುಲದೇವತೆ ಅಥವಾ ಗ್ರಾಮದೇವತೆಯನ್ನು ಭಕ್ತಿಯಿಂದ ಪೂಜೆ ಮಾಡಬೇಕು. ಯಾರು ಭಕ್ತಿ ಭಾವದಿಂದ ಕುಲದೇವತೆಯನ್ನು ಆರಾಧನೆ ಮಾಡುತ್ತಾರೋ ಅಂತಹವರಿಗೆ ಹಿತ ಶತ್ರು, ಅಹಿತ ಶತ್ರು ಮತ್ತು ನೀಚ ಶತ್ರು ಅಂತಹ ಶತ್ರು ಭಾದೆಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆಯಿದೆ.

    ಉದ್ಯೋಗ, ವ್ಯಾಪಾರಗಳಲ್ಲಿ ಬಹಳಷ್ಟು ಜನರು ದೃಷ್ಟಿದೋಷದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತಹವರು ಈ ಅಮಾವಾಸ್ಯೆಯಂದು ಶಕ್ತಿ ಆರಾಧನೆಯಿಂದ ದೋಷ ನಿವಾರಣೆ ಮಾಡಿಕೊಳ್ಳಬಹುದು.

    ಪೂಜೆ ಮಾಡೋದು ಹೇಗೆ?
    ಒಂದು ಕೂಷ್ಮಾಂಡ (ಕುಂಬಳಕಾಯಿ) ತೆಗೆದುಕೊಳ್ಳಬೇಕು. ಕುಂಬಳಕಾಯಿಯ ಮೇಲೆ ಕರ್ಪೂರವನ್ನಿಟ್ಟು ಹಚ್ಚಿ ಮನೆಯ ಒಳಗಡೆ ಓಡಾಡಬೇಕು. ಕರ್ಪೂರ ಹಚ್ಚಿದ ಕುಂಬಳಕಾಯಿ ಹಿಡಿದು ಹೋಗುವಾಗ ”ಸಕಲ ದೋಷ ನಿವಾರಾಣರ್ತು ಮಮಃ, ಗೃಹೆ ಸಕಲ ದೋಷನಿವಾರಣಾರ್ತು” ಎಂದು ಭಕ್ತಿಯಿಂದ ಹೇಳುತ್ತಾ ವ್ಯವಸ್ಥಿತವಾಗಿ ಮನೆಯ ಎಲ್ಲ ಭಾಗಗಳಿಗೆ ಕೂಷ್ಮಾಂಡವನ್ನು ತೋರಿಸಬೇಕು. ಕೊನೆಗೆ ಮನೆಯ ಹೊರಗಡೆ ಬಂದು ಕುಂಬಳಕಾಯಿಯನ್ನು ಒಡೆಯಬೇಕು.

    ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿರುವ ಕಷ್ಟ, ದರಿದ್ರತೆ ದೂರ ಹೋಗುತ್ತದೆ ಎನ್ನುವ ನಂಬಿಕೆಯಿದೆ. ‘ರಜೋಗುಣ’ ಎಂಬ ದೋಷವನ್ನು ನಿವಾರಣೆ ಮಾಡುವ ವಿಶಿಷ್ಟತೆಯನ್ನು ಈ ಅಮಾವಾಸ್ಯೆ ಹೊಂದಿದೆ. ಇಂತಹ ಅಮಾವಾಸ್ಯೆ ಬಂದಿದ್ದು, ಎಲ್ಲರನ್ನು ವ್ಯವಸ್ಥಿತವಾಗಿ ಪೂಜೆ ಮಾಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಬಹುದು.

  • ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

    ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

    ದೀಪಾವಳಿ ಅಶ್ವಯಜ ಮಾಸದ ಕೃಷ್ಣ ಪಕ್ಷದಲ್ಲಿ ಆರಂಭವಾಗಿ ಕಾರ್ತಿಕ ಮಾಸದ ಪಾಡ್ಯದಲ್ಲಿ ಕೊನೆಗೊಳ್ಳುತ್ತದೆ. ದೀಪಾವಳಿಯನ್ನು ಒಟ್ಟು ಮೂರು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಮೊದಲನೆಯ ದಿನ ನರಕ ಚತುರ್ದಶಿ, ಎರಡನೇ ದಿನ ಅಮವಾಸ್ಯೆ ಧನಲಕ್ಷ್ಮೀ ಪೂಜೆ ಮತ್ತು ಮೂರನೇಯ ದಿನ ಬಲಿಪಾಡ್ಯಮಿ ಬಲಿಯೇಂದ್ರನನ್ನು ಆರಾಧನೆ ಮಾಡುವ ಮೂಲಕ ದೀಪಾವಳಿ ಮುಗಿಯುತ್ತದೆ.

    ಹೆಚ್ಚಿನ ಜನರು ಮನೆಯಲ್ಲಿ ಧನಲಕ್ಷ್ಮೀ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ನಾವೆಲ್ಲರು ಸಂಕಲ್ಪ ಮಾಡುವಾಗ ‘ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣಾರ್ಥ’ ಎಂದು ಹೇಳುತ್ತೇವೆ. ಅಂದ್ರೆ ಮನೆಯಲ್ಲಿ ಇರುವಂತಹ ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣೆ ಆಗಲಿ ಎಂಬರ್ಥ. ಹಾಗಾಗಿ ಧನಲಕ್ಷ್ಮಿ ಪೂಜೆಯನ್ನು ತುಂಬಾ ವ್ಯವಸ್ಥಿತವಾಗಿ ಮಾಡಬೇಕು.

    ಪೂಜಾ ವಿಧಾನ:
    ವ್ಯವಸ್ಥಿತವಾಗಿ ಧನಲಕ್ಷ್ಮೀಯ ಯಂತ್ರ ಅಥವಾ ಚಕ್ರವನ್ನಿಟ್ಟು ನಂತರ ಅದರ ಮೇಲೆ ಹಣ ಇಡಬೇಕು. ಆ ಹಣದ ಮೇಲೊಂದು ಕಲಶ ಸ್ಥಾಪಿಸಿ ವ್ಯವಸ್ಥಿತವಾಗಿ ಧನಲಕ್ಷ್ಮೀಯನ್ನು ಆವಾಹನೆ ಮಾಡಬೇಕು. “ಪದ್ಮಪ್ರಿಯೆ, ಪದ್ಮಿನಿ, ಪದ್ಮಹಸ್ತೆ, ಪದ್ಮಾಲಯೆ, ಪದ್ಮದಲಾಯತಾಕ್ಷೆ ವಿಶ್ವಪ್ರಿಯೆ ವಿಶ್ವಮನನುಕೂಲೆ ತದ್ವಾದ ಪದ್ಮಂ ಮಹಿಸನ್ನಿದತ್ವಂ” ಎಂದು ಹೇಳಿ ಮಹಾಲಕ್ಷ್ಮೀಯನ್ನು ಮನೆಗೆ ಬರುವಂತೆ ಕರೆಯಬೇಕು.

    ಯಾವ ಮನೆಯಲ್ಲಿ ಮಹಾಲಕ್ಷ್ಮಿ ನಿಲ್ಲಬೇಕೋ, ಅಲ್ಲಿ ಧನಲಕ್ಷ್ಮೀ ಮತ್ತು ಧಾನ್ಯ ಲಕ್ಷ್ಮೀಗೆ ಆದ್ಯತೆಯನ್ನು ಕೊಡಲೇಬೇಕು. ಕೆಲವರು ಮನೆಯಲ್ಲಿ ಹಣವನ್ನು ಎಸೆಯುತ್ತಿರುತ್ತಾರೆ. ಹಾಗೆಯೇ ಕೆಲವರು ಊಟ ಮಾಡುವ ಆಹಾರವನ್ನು ಅನಾವಶ್ಯಕವಾಗಿ ಚೆಲ್ಲುತ್ತಿರುತ್ತಾರೆ. ಅಂತಹವರ ಮನೆಗೆ ಮಹಾಲಕ್ಷ್ಮೀ ಬರಲು ಹಿಂದೇಟು ಹಾಕುತ್ತಾಳೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

    ಧನಲಕ್ಷ್ಮೀ ಚಕ್ರ:
    ಧನಲಕ್ಷ್ಮೀ ಚಕ್ರವನ್ನು ಪಂಚಲೋಹದಿಂದ ಮಾಡಲಾಗಿರುತ್ತದೆ. ಚಕ್ರ ಬೀಜಕ್ಷರಗಳನ್ನು ಒಳಗೊಂಡಿರುತ್ತದೆ. ಶಂಕರಾಚಾರ್ಯರು ಸಹ ಬೀಜಕ್ಷರ ಮಂತ್ರಗಳಿಂದ ಸಿದ್ಧಿಯನ್ನು ಪಡೆದರು ಎಂಬ ಪ್ರತೀತಿ ಇದೆ. ಸಾಕಷ್ಟು ಪುರಾಣ ಇತಿಹಾಸವುಳ್ಳ ದೇವಸ್ಥಾನದಲ್ಲಿ ಶ್ರೀ ಚಕ್ರವನ್ನು ನಾವು ನೋಡಬಹುದು. ಅಂತಹ ದೇವಾಲಯದಲ್ಲಿ ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣೆಯಾಗಿರುತ್ತಾಳೆ ಎಂಬುವುದನ್ನು ಸಾಕಷ್ಟು ಜನ ಒಪ್ಪಿಕೊಳ್ಳತ್ತಾರೆ. ಶ್ರೀ ಚಕ್ರವುಳ್ಳ ದೇವಸ್ಥಾನ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಧನಲಕ್ಷ್ಮೀ ಚಕ್ರವನ್ನು ಬಳಸಿದ್ರೆ ಒಳ್ಳೆಯದಾಗುತ್ತೆ ಎಂಬುವುದು ನಂಬಿಕೆ.

    ಮನೆಯೂ ಸಹ ಒಂದು ದೇವಾಲಯ. ಮನೆಯಲ್ಲಿಯೂ ದೇಗುಲ ಅಂತಾ ನಿರ್ಮಿಸಿ ಅಲ್ಲಿ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಧನಲಕ್ಷ್ಮೀ ಚಕ್ರ ಬಳಸಿ ವ್ಯವಸ್ಥಿತವಾಗಿ ಪೂಜೆ ಸಲ್ಲಿಸಿದ್ರೆ ಶ್ರೇಯಸ್ಸು ಸಿಗಲಿದೆ.

    ಪ್ರತಿ ವರ್ಷ ಧನಲಕ್ಷ್ಮೀ ಪೂಜೆಗಾಗಿ ಸಿದ್ಧಿಗೊಳಿಸಿರುವ ಚಕ್ರವನ್ನು ಬಳಸಬೇಕು. ಚಕ್ರವನ್ನು ವ್ಯವಸ್ಥಿತವಾಗಿ ಪ್ರತಿಷ್ಠಾಪನೆಗೊಳಿಸಿ ಶ್ರೀ ಸೂಕ್ತ ಅಥವಾ ಬೀಜಕ್ಷರ ಮಂತ್ರ ಒಳಗೊಂಡಿರುವ ಧನಲಕ್ಷ್ಮೀ ಚಕ್ರ ಬಳಸುವ ಮೂಲಕ ಮಹಾಲಕ್ಷ್ಮೀಯನ್ನು ಆವಾಹನೆಯನ್ನು ಮಾಡಬೇಕು. ಮಹಾಲಕ್ಷ್ಮೀಗೆ ಕುಂಕುಮಾರ್ಚನೆ ಮಾಡುವುದರ ಜೊತೆಗೆ ಶೋಡಷ ಉಪಾಚರಗಳನ್ನು ಮಾಡಬೇಕು. ನಿಂಬೆ ಹಣ್ಣಿನ ಪಾನಕ ಮತ್ತು ಹೆಸರು ಬೇಳೆ ಕೋಸಂಬರಿಯನ್ನು ನೈವೇದ್ಯವನ್ನಾಗಿ ಮಾಡಿ, ಸುಮಂಗಲಿಯರಿಗೆ ಅರಿಶಿಣ-ಕುಂಕುಮ ನೀಡಬೇಕು. ಈ ರೀತಿಯಾಗಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದ್ರೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ನಂಂಬಿಕೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv