Tag: Amarinder Singh

  • ಸಿಧು ರಾಜೀನಾಮೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಮ್ಮತಿ

    ಸಿಧು ರಾಜೀನಾಮೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಮ್ಮತಿ

    ಚಂಡೀಗಢ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರ ಸಚಿವ ಸ್ಥಾನದ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವೀಕರಿಸಿದ್ದಾರೆ.

    ಅಮರಿಂದರ್ ಸಿಂಗ್ ಜೊತೆಗಿನ ಅಸಮಾಧಾನದ ಬಳಿಕ ನವಜೋತ್ ಸಿಂಗ್ ಸಿಧು ಜುಲೈ 14ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಹಾಕಿಕೊಂಡಿದ್ದರು. ಸಿಧು ಅವರ ರಾಜೀನಾಮೆಯನ್ನು ಕಾಯ್ದಿರಿಸಿದ್ದ ಅಮರಿಂದರ್ ಸಿಂಗ್ ಇಂದು ಸಮ್ಮತಿ ಸೂಚಿಸಿದ್ದಾರೆ.

    ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರವು ಜೂನ್‍ನಲ್ಲಿ ಸಂಪುಟ ಪುನಾರಚನೆ ಮಾಡಿತ್ತು. ಈ ವೇಳೆ ನವಜೋತ್ ಸಿಂಗ್ ಸಿಧು ಅವರಿಂದ ಸಂಸ್ಥೆಗಳ ಖಾತೆ ಹಿಂಪಡೆದು, ಇಂಧನ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆಗೆ ಸಚಿವರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಕ್ಯಾಪ್ಟನ್ ಅವರ ಈ ನಡೆಯಿಂದ ನವಜೋತ್ ಸಿಧು ಅಸಮಾಧಾನ ಹೊರ ಹಾಕಿದ್ದರು. ಈ ಇಬ್ಬರು ನಾಯಕರ ನಡುವೆ ಶೀತಲ ಸಮರ ಮುಂದುವರಿದು, ರಾಜೀನಾಮೆ ಹಂತಕ್ಕೆ ಬಂದು ನಿಂತಿತ್ತು.

    ನವಜೋತ್ ಸಿಂಗ್ ಸಿಧು ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ, ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ಜುಲೈ 14ರಂದು ತಮ್ಮ ರಾಜೀನಾಮೆ ಪತ್ರವನ್ನು ಪಂಜಾಬ್ ಸಿಎಂಗೆ ಕಳುಹಿಸಿರುವುದಾಗಿ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದರು.

  • ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ನವದೆಹಲಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.

    ಸಿಧು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2019 ರ ಜೂನ್ 10 ರಂದು ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪತ್ರವನ್ನು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರಿಗೂ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಆರಂಭದಿಂದಲೂ ಸಿಧು ಮತ್ತು ಅಮರೀಂದರ್ ಸಿಂಗ್ ನಡುವೆ ಒಳ ಜಗಳಗಳು ಇದ್ದವು. ಜೂನ್ 6 ರಂದು ಅಮರೀಂದರ್ ಸಿಂಗ್ ತಮ್ಮ ಸಂಪುಟ ಪುನರ್ ರಚನೆ ಮಾಡಿದ್ದು, ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರದಂತಹ ಪ್ರಮುಖ ಖಾತೆಗಳನ್ನು ಸಿಧು ಅವರಿಂದ ಹಿಂಪಡೆದು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಖಾತೆ ಅವರಿಗೆ ನೀಡಿದ್ದರು.

    ಇದಾದ ನಂತರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಜೂನ್ 8 ರಂದು ಮುಖ್ಯಮಂತ್ರಿ ರಚಿಸಿದ ಸಮಾಲೋಚನಾ ಗುಂಪುಗಳಿಂದ ಸಿಧು ಅವರು ಹೊರಗುಳಿದಾಗ ಅವರು ರಾಜೀನಾಮೆ ನೀಡಬಹುದು ಎಂದು ಹೇಳಲಾಗಿತ್ತು.

    ಈ ಹಿಂದೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ರಾಜ್ಯದ ಪಕ್ಷದ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದ ಸಿಧು ಅವರಿಂದ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಹಾಳಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ನಂತರ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಿಂದ ಲೋಕಸಭಾ ಚುನಾವಣೆಯಲ್ಲಿ ಸೋತರೆ ರಾಜಕೀಯ ತೊರೆಯುವುದಾಗಿ ಈ ಹಿಂದೆ ಪ್ರತಿಜ್ಞೆಯನ್ನು ಕೂಡ ಮಾಡಿದ್ದರು.

    ಕಳೆದ ಜೂನ್ 10 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ನವದೆಹಲಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಇರುವ ಪರಿಸ್ಥಿತಿಯ ಬಗ್ಗೆ ತಿಳಿಸಿದರು. ಆ ದಿನವೇ ರಾಜೀನಾಮೆ ಪತ್ರವನ್ನು ನೀಡಿದ್ದರು.

  • ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.

    ನೀತಿ ಆಯೋಗದ ಐದನೇ ಆಡಳಿತ ಮಂಡಳಿ ಸಭೆ ಶನಿವಾರ ನಡೆದಿದ್ದು, ಸಭೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಅವರು ಸಭೆಗೆ ಗೈರಾಗಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಯಗಳಿಸಿ ಅಧಿಕಾರದ ಗದ್ದುಗೆಯನ್ನೇರಿದ ಎನ್‍ಡಿಎ ಸರ್ಕಾರದ ಮೊದಲ ನೀತಿ ಆಯೋಗದ ಸಭೆಯನ್ನು ಮೂವರು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಮುಖ ನಾಯಕರು, ಅಧಿಕಾರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಭಾಗವಹಿಸಿದ್ದರು.

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹವಾಮಾನದ ವೈಪರಿತ್ಯದಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಮರಿಂದರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕರೆದಿದ್ದ ಸಭೆಗೂ ಗೈರಾಗಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಟಿಆರ್‍ಎಸ್ ನಾಯಕ ಹಾಗೂ ಮಾಜಿ ಸಂಸದ ಬಿ.ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿ ಗುರುವಾರದ ನಂತರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಕುರಿತು ಕೆಸಿಆರ್ ಖಚಿತಪಡಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈತಬಂಧು ಯೋಜನೆ ಕುರಿತು ನೀತಿ ಆಯೋಗದ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಗಮನ ಸೆಳೆಯಲು ತಯಾರಾಗಿದ್ದರು. ಈ ಯೋಜನೆ ವಿವಿಧ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಸಹ ಹೇಳಿದ್ದರು. ಆದರೆ, ದಿಢೀರನೆ ನೀತಿ ಆಯೋಗದ ಸಭೆಯನ್ನು ಕೆಸಿಆರ್ ತಿರಸ್ಕರಿಸಲು ಕಾರಣ ಏನೆಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆ ಉದ್ಘಾಟನೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಧಾನಿಗಳ ಭೇಟಿಗೆ ಅನುಮತಿ ಕೋರಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅನುಮತಿ ದೊರೆಯದ ಹಿನ್ನೆಲೆ ಕೆಸಿಆರ್ ಅವರು ಅಸಮಾಧಾನಗೊಂಡು ನೀತಿ ಆಯೋಗದ ಸಭೆಗೆ ಗೈರಾಗುತ್ತಿದ್ದಾರೆ ಎಂದು ವರದಿಯಾಗಿದೆ.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯೊಂದಿಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದು, ನೀತಿ ಆಯೋಗದ ಸಭೆಯಿಂದ ಏನೂ ಫಲಪ್ರದವಿಲ್ಲ. ರಾಜ್ಯದ ಯೋಜನೆಗಳಿಗೆ ಹಣ ನೀಡುವ ಅಧಿಕಾರ ನೀತಿ ಆಯೋಗಕ್ಕಿಲ್ಲ ಎಂದು ದೂರಿದ್ದಾರೆ.

  • ಕ್ಯಾಪ್ಟನ್ ವಿರುದ್ಧ ಕಮೆಂಟ್, ಸಿಧುಗೆ ಅಸಮಾಧಾನ ಇದ್ರೆ ಸಚಿವ ಸ್ಥಾನ ಬಿಡಲಿ – ಪಂಜಾಬ್ ಸಚಿವ

    ಕ್ಯಾಪ್ಟನ್ ವಿರುದ್ಧ ಕಮೆಂಟ್, ಸಿಧುಗೆ ಅಸಮಾಧಾನ ಇದ್ರೆ ಸಚಿವ ಸ್ಥಾನ ಬಿಡಲಿ – ಪಂಜಾಬ್ ಸಚಿವ

    ನವದೆಹಲಿ: ಪಂಜಾಬಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಗ್ಗೆ ಅಸಮಾಧಾನ ಇದ್ದರೆ, ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಸಾಧು ಸಿಂಗ್ ಧರ್ಮಶಾಟ್ ಅವರು ಕಿಡಿಕಾರಿದ್ದಾರೆ.

    ತನ್ನ ಪತ್ನಿಗೆ ಈ ಬಾರಿಯ ಲೋಕಸಭಾ ಚುನವಾಣೆಯಲ್ಲಿ ಟಿಕೆಟ್ ನೀಡದಿದ್ದಕ್ಕೆ ನವಜೋತ್ ಸಿಂಗ್ ಸಿಧು ಅವರು ಅಮರೀಂದರ್ ಸಿಂಗ್ ಅವರ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸರುವ ಸಾಧು ಸಿಂಗ್ ಸಿಧು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸೋಮವಾರ ಪಕ್ಷದ ಸಭೆಯಲ್ಲಿ ಸಾಧು ಸಿಂಗ್, ನವಜೋತ್ ಸಿಂಗ್ ಸಿಧು ಮೊದಲು ಬಿಜೆಪಿಯಲ್ಲಿ ಇದ್ದವರು ಈಗ ಕಾಂಗ್ರೆಸ್‍ಗೆ ಬಂದಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಿಂದಲೂ ಹೊರ ಬಿದ್ದರೆ ಎಲ್ಲಿ ಹೋಗುತ್ತಾರೆ ಎಂಬುದು ಆ ದೇವರಿಗೆ ಗೊತ್ತು. ಅವರಿಗೆ ನಮ್ಮ ಸಿಎಂ ಮೇಲೆ ಅಸಮಾಧಾನ ಇದ್ದರೆ ಅವರು ನಮ್ಮ ಸಚಿವ ಸಂಪುಟ ತೊರೆಯಬಹುದು. ಈ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

    ಮೂಲಗಳ ಪ್ರಕಾರ ಕಾಂಗ್ರೆಸ್ ಹೈ ಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಸಿಧು ಅವರಿಗೆ ಈ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಜೊತೆ ಯಾವುದೇ ವೈರತ್ವವಿಲ್ಲ. ಅವರೊಬ್ಬ ಮಹತ್ವಾಕಾಂಕ್ಷೆಯ ನಾಯಕರಾದ್ರೆ ತಪ್ಪೇನು? ಜನರು ಮಹತ್ವಾಕಾಂಕ್ಷೆಯಿಂದ ಬದುಕಬೇಕು ಎಂಬುವುದು ನನ್ನ ವಾದ. ಬಾಲ್ಯದಿಂದಲೂ ಸಿಧು ಅವರನ್ನ ನಾನು ಬಲ್ಲೆ. ನಮ್ಮಿಬ್ಬರ ಮಧ್ಯೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿಲ್ಲ. ಬಹುಶಃ ನನ್ನನ್ನು ಬದಿಗೆ ತಂದು ಮುಖ್ಯಮಂತ್ರಿಯಾಗುವ ಆಸೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಇದನ್ನು ಓದಿ: ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ಏನಿದು ವಿವಾದ?
    ಈ ಬಾರಿಯ ಲೋಕಸಭಾ ಚುನಾವಣೆ ಸಿಧು ತಮ್ಮ ಪತ್ನಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರ ಮುಂದೆ ಮನವಿ ಮಾಡಿಕೊಂಡಿದ್ದರು. ಆದರೆ ಪಕ್ಷ ನವಜೋತ್ ಕೌರ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನವಜೋತ್ ಕೌರ ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇತ್ತ ಸಿಧು ಸಹ ಪತ್ನಿಯ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ.

  • ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ಚಂಢೀಗಢ: ಪಂಜಾಬ್ ಸಿಎಂ ಮತ್ತು ಸಚಿವ ನವಜೋತ್ ಸಿಂಗ್ ಸಿಧು ನಡುವೆ ಎಲ್ಲವೂ ಸರಿ ಇಲ್ಲ ಎಂಬುವುದು ಪದೇ ಪದೇ ಸಾಬೀತಾಗುತ್ತಿದೆ. ನನ್ನನ್ನು ಪಕ್ಕಕ್ಕೆ ಸರಿಸಿ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

    ಪಂಜಾಬಿನ 13 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಪಟಿಯಾಲಾದ ಮತಗಟ್ಟೆ 89ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನವಜೋತ್ ಸಿಂಗ್ ಸಿಧು ಜೊತೆ ಯಾವುದೇ ವೈರತ್ವವಿಲ್ಲ. ಅವರೊಬ್ಬ ಮಹತ್ವಾಕಾಂಕ್ಷೆಯ ನಾಯಕರಾದ್ರೆ ತಪ್ಪೇನು? ಜನರು ಮಹತ್ವಾಕಾಂಕ್ಷೆಯಿಂದ ಬದುಕಬೇಕು ಎಂಬುವುದು ನನ್ನ ವಾದ. ಬಾಲ್ಯದಿಂದಲೂ ಸಿಧು ಅವರನ್ನ ನಾನು ಬಲ್ಲೆ. ನಮ್ಮಿಬ್ಬರ ಮಧ್ಯೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿಲ್ಲ. ಬಹುಶಃ ನನ್ನನ್ನು ಬದಿಗೆ ತಂದು ಮುಖ್ಯಮಂತ್ರಿಯಾಗುವ ಆಸೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆ ಸಿಧು ತಮ್ಮ ಪತ್ನಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರ ಮುಂದೆ ಮನವಿ ಮಾಡಿಕೊಂಡಿದ್ದರು. ಆದ್ರೆ ಪಕ್ಷ ನವಜೋತ್ ಕೌರ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನವಜೋತ್ ಕೌರ ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇತ್ತ ಸಿಧು ಸಹ ಪತ್ನಿಯ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ.

    13 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಗಲಾಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಅಕಾಲಿದಳ ನಾಯಕರು ಶಾಂತಿ ಕಾಪಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಬನ್ನಿ – ಮೋದಿಗೆ ಪಂಜಾಬ್ ಸಿಎಂ ಮನವಿ

    ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಬನ್ನಿ – ಮೋದಿಗೆ ಪಂಜಾಬ್ ಸಿಎಂ ಮನವಿ

    ನವದೆಹಲಿ: ಪಾಕ್ ವಶದಿಂದ ಮಾತೃ ಭೂಮಿಗೆ ಮರಳುತ್ತಿರುವ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ವಾಘಾ ಗಡಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

    ಟ್ವೀಟ್ ಮೂಲಕ ಮನವಿ ಸಲ್ಲಿಸಿದ ಅಮರೀಂದರ್ ಸಿಂಗ್ ಅವರು, ಸದ್ಯ ನಾನು ಅಮೃತ್‍ಸರದಲ್ಲಿದ್ದೇನೆ. ಈಗ ಪಂಜಾಬಿನ ಗಡಿ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿರುವೆ. ಪೈಲಟ್ ಅಭಿನಂದನ್ ಅವರನ್ನು ವಾಘಾ ಗಡಿಯಿಂದ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ನಮ್ಮ ರಾಜ್ಯದ ಗಡಿ ಪ್ರದೇಶದಿಂದ ವೀರ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಾನು ಹಾಗೂ ಅಭಿನಂದನ್ ತಂದೆ ಇಬ್ಬರೂ ರಾಷ್ಟ್ರೀಯ ಭದ್ರತಾ ಅಕಾಡೆಮಿಯ (ಎನ್‍ಡಿಎ) ನಿವೃತ್ತ ಉದ್ಯೋಗಿಗಳು ಎಂದು ತಿಳಿಸಿದ್ದಾರೆ.

    ಪೈಲಟ್ ಅಭಿನಂದನ್ ಅವರು ಫೆಬ್ರವರಿ 27ರಂದು ಪಾಕಿಸ್ತಾನ ಸೇನೆಯ ಬಂಧನಕ್ಕೆ ಒಳಗಾಗಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಮಾತೃ ಭೂಮಿಗೆ ಮರಳುತ್ತಿರುವ ಅಭಿನಂದನ್ ಅವರನ್ನು ಸ್ವಾಗತಿಸಲು ಪಂಚಾಬ್‍ನ ವಾಘಾ ಗಡಿಯಲ್ಲಿ ಸಾವಿರಾರು ಜನರು ಸೇರಿದ್ದಾರೆ. ವೀರ ಯೋಧನ ಸ್ವಾಗತಕ್ಕೆ ದೇಶದ ಜನತೆ ಕಾತರದಲ್ಲಿದ್ದಾರೆ.

    ನಮ್ಮ ಬಂಧನದಲ್ಲಿ ಭಾರತೀಯ ಪೈಲಟ್ ಇದ್ದಾರೆ. ಉಭಯ ದೇಶಗಳ ಮಧ್ಯೆ ಶಾಂತಿ ಕಾಪಾಡುವ ಉದ್ದೇಶದಿಂದ ಶುಕ್ರವಾರ ಅವರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದ ಪಾಕ್ ಸರ್ಕಾರ ಗುರುವಾರ ಸಂಜೆ ಅಧಿಕೃತವಾಗಿ ಮಾಹಿತಿ ನೀಡಿತ್ತು.

    ಪೈಲಟ್ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ದಮಾನ್ ಸೇರಿದಂತೆ ಸಂಬಂಧಿಕರು ವಾಘಾ ಗಡಿಯಲ್ಲಿ ಅಭಿನಂದನ್ ಅವರ ಆಗಮನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅಭಿನಂದನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಾಘಾ ಗಡಿ ಪ್ರದೇಶಕ್ಕೆ ಬರಬೇಕು ಎಂದು ಪಂಚಾಬ್ ಸಿಎಂ ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=V3v7nPlplzo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹರ್ಯಾಣ ಸಿಎಂ ತೆಗಳಿ, ಪಂಜಾಬ್ ಸಿಎಂ ಕ್ರಮವನ್ನು ಹೊಗಳಿದ ವೀರಪ್ಪ ಮೊಯ್ಲಿ

    ಹರ್ಯಾಣ ಸಿಎಂ ತೆಗಳಿ, ಪಂಜಾಬ್ ಸಿಎಂ ಕ್ರಮವನ್ನು ಹೊಗಳಿದ ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ವಿರುದ್ಧ ವಾಗ್ದಾಳಿ ನಡೆಸಿ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಸಂಸದ ವೀರಪ್ಪ ಮೊಯ್ಲಿ ಹೊಗಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂಸಾಚಾರವನ್ನು ನಿಭಾಯಿಸಲು ಆಗದ ಮನೋಹರ್ ಲಾಲ್ ಖಟ್ಟರ್ ಹರ್ಯಾಣದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಯೋಗ್ಯ ಎಂದು ಸಂಸದ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.

    ಗುಪ್ತಚರ ಮಾಹಿತಿ ಇದ್ದರೂ ಅಲ್ಲಿ ಸೂಕ್ತ ಮಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿಲ್ಲ. ಹಿಂಸಾಚಾರ ನಡೆಸುವ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಕ್ರಮಗಳನ್ನು ಕೈಗೊಳ್ಳದ ಕಾರಣ ಮುಖ್ಯಮಂತ್ರಿ ಆಗಿರಲು ಖಟ್ಟರ್ ಆಯೋಗ್ಯ ಎಂದು ವಾಗ್ದಾಳಿ ನಡೆಸಿದರು.

    ಪಂಜಾಬ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸರ್ಕಾರ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿತ್ತು ಎಂದು ಹೇಳುವ ಮೂಲಕ ಅಮರಿದಂದರ್ ಸಿಂಗ್ ಅವರನ್ನು ವೀರಪ್ಪ ಮೊಯ್ಲಿ ಸಮರ್ಥಿಸಿಕೊಂಡರು.

     

  • ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    – ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ

    ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.

    ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.

    ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.

    ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

    ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.