Tag: Amaregouda Bayyapur

  • ಜಗತ್ತಿನಲ್ಲಿ ಒಬ್ಬನಿಂದ ರೇಪ್ ಮಾಡಲು ಸಾಧ್ಯವಿಲ್ಲ: ಅಮರೇಗೌಡ ವಿವಾದಿತ ಹೇಳಿಕೆ

    ಜಗತ್ತಿನಲ್ಲಿ ಒಬ್ಬನಿಂದ ರೇಪ್ ಮಾಡಲು ಸಾಧ್ಯವಿಲ್ಲ: ಅಮರೇಗೌಡ ವಿವಾದಿತ ಹೇಳಿಕೆ

    ಕೊಪ್ಪಳ: ಜಗತ್ತಿನಲ್ಲಿ ಒಬ್ಬನಿಂದ ರೇಪ್ (Rape) ಮಾಡಲು ಸಾಧ್ಯವಿಲ್ಲ. 2 ಕೈ ತಟ್ಟಿದ್ರೇನೇ ಚಪ್ಪಾಳೆ ಆಗೋದು ಎಂದು ಕಾಂಗ್ರೆಸ್‌ನ (Congress)  ಹಿರಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ (Amaregouda Bayyapur) ವಿವಾದಿತ ಹೇಳಿಕೆ ನೀಡಿದ್ದಾರೆ.

    ಕುಷ್ಟಗಿ ತಾಲೂಕಿನ ಎಂ ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡ ಸಂಗನಗೌಡ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ. ಈ ಹಿನ್ನೆಲೆ ಸಂತ್ರಸ್ತೆಯ ಮಾವ ನ್ಯಾಯಕ್ಕಾಗಿ ಎಸ್‌ಪಿ ಹಾಗೂ ಮಾಜಿ ಶಾಸಕರ ಬಳಿ ಮನವಿಗೆ ಆಗಮಿಸಿದ್ದರು.

    ಆದರೆ ಈ ವೇಳೆ ಸಂತ್ರಸ್ತೆಯ ಮಾವನಿಗೆ ಪ್ರಶ್ನಿಸಿದ ಅಮರೇಗೌಡ, ಒಬ್ಬ ಹೇಗೆ ರೇಪ್ ಮಾಡಲು ಸಾಧ್ಯ? 1 ಕೈಯಿಂದ ಚಪ್ಪಾಳೆ ಸಾಧ್ಯಾನಾ? ರೇಪ್ ಆಗಬೇಕಾದರೆ 3-4 ಜನ ಇರಬೇಕು. ಒಬ್ಬಾಕೆನ ಒಬ್ಬ ರೇಪ್ ಮಾಡೋದು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಪ್ಪ ಸಿಎಂ ಹಿಂದೆ ತಿರುಗಾಟ – ಮಗ ಊರೆಲ್ಲಾ ಪುಂಡಾಟ!

    ಮರ್ಯಾದೆ ಕಳೆದುಕೊಳ್ತೀರಿ ನೀವು. ಇದರಲ್ಲಿ ಏನೂ ಆಗಲ್ಲ. ನಿನ್ನ ಕಡೆ ವಾದ ಮಾಡೋಕೆ ಆಗಲ್ಲ. ಅದೆಲ್ಲಾ ಮಾಡಬಾರದು, ನಮ್ಮ ಮನೆತನದ ಗೌರವ ನಾವೇ ಕಳೆದುಕೊಂಡ ಹಾಗೆ. ಈಗ ಏನು ಬಂತು ನಿನಗೆ ಬಹಳ ಅಂದ್ರೆ ಅವನನ್ನು ಒಳಗೆ ಹಾಕ್ತಾರೆ ಎಂದು ನಿರ್ಲಕ್ಷ್ಯತನದಿಂದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ: ಮುರುಘಾ ಶ್ರೀ ಆಪ್ತ

  • ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ನಡೆಯಲಿ – ಶಾಸಕ ಅಮರೇಗೌಡ

    ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ನಡೆಯಲಿ – ಶಾಸಕ ಅಮರೇಗೌಡ

    ಕೊಪ್ಪಳ: ಯಾವುದೇ ಕಾರಣಕ್ಕೂ 10ನೇ ತರಗತಿ ಮತ್ತು 12ನೇ ತರಗತಿಯ ಪರೀಕ್ಷೆಗಳು ರದ್ದು ಪಡಿಸಬಾರದು ಎಂದು ಶಾಸಕ ಅಮರೇಗೌಡ ಬಯ್ಯಾಪೂರರವರು ಒತ್ತಾಯಿಸಿದ್ದಾರೆ.

    ಕೊಪ್ಪಳದ ಕುಷ್ಟಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಿಯುಸಿ ಕಾಲೇಜ್ ಪ್ರಾಚಾರ್ಯರು ಮತ್ತು ಪ್ರೌಢ ಶಾಲಾ ಶಿಕ್ಷಕರೊಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅದರಂತೆ ಮಕ್ಕಳು ಕೂಡ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ರದ್ದು ಪಡಿಸುವುದು ಸರಿಯಲ್ಲ ಎಂದಿದ್ದಾರೆ.

    ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆ ಉತ್ತೀರ್ಣರಾಗಿದ್ದೇವೆ ಎಂದು ಮಕ್ಕಳು ನೌಕರಿ ಸೇರುವ ಅವಕಾಶ ಇದೆ. ಆದರೆ ಪರೀಕ್ಷೆ ರದ್ದುಗೊಳಿಸಿ ಕೇವಲ ಗ್ರೇಡ್ ನೀಡಿದರೆ, ಅವರಿಗೆ ಸರಿಯಾದ ಅಂಕಗಳು ಸಿಗದೇ ನೌಕರಿಯಿಂದ ವಂಚಿತಗೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವನ್ನು ಹೊರ ಹಾಕಿದ್ದಾರೆ.

    ಕೇಂದ್ರ ಸರ್ಕಾರ ಸಿಬಿಎಸ್‍ಸಿ 12 ತರಗತಿ ಪರೀಕ್ಷೆಗಳು ರದ್ದುಗೊಳಿಸಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅಮರೇಗೌಡ ಬಯ್ಯಾಪೂರರವರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪರೀಕ್ಷೆಗಳು ರದ್ದುಗೊಳಿಸಬಾರದು. ಬದಲಾಗಿ ಸುರಕ್ಷಿತ ಕ್ರಮಗಳು ಕೈಗೊಂಡು ಪರೀಕ್ಷೆ ನಡೆಸಬೇಕೆಂದು ಸಲಹೆ ನೀಡಿದರು.

  • ಕುಮಾರಸ್ವಾಮಿಗೆ ಬುದ್ಧಿ ಹೇಳುವಷ್ಟು ದೊಡ್ಡವ್ರು ನಾವಲ್ಲ: ಅಮರೇಗೌಡ ಬಯ್ಯಾಪುರ

    ಕುಮಾರಸ್ವಾಮಿಗೆ ಬುದ್ಧಿ ಹೇಳುವಷ್ಟು ದೊಡ್ಡವ್ರು ನಾವಲ್ಲ: ಅಮರೇಗೌಡ ಬಯ್ಯಾಪುರ

    ಕೊಪ್ಪಳ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬುದ್ಧಿ ಹೇಳುವಷ್ಟು ನಾವು ದೊಡ್ಡವರಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಕುಟುಕಿದ್ದಾರೆ.

    ಪ್ರಧಾನಿ ಮೋದಿ ಆಗಮನದಿಂದ ಇಸ್ರೋ ಪ್ರಯತ್ನ ವಿಫಲವಾಯಿತು ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕರು, ಕುಮಾರಸ್ವಾಮಿ ಅವರು ಹಾಗೇ ಹೇಳಿಕೆ ನೀಡಿದ್ದು ತಪ್ಪು. ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡವರು ನಾವಲ್ಲ. ಇಸ್ರೋ ಪ್ರಯತ್ನ ಶ್ಲಾಘನೀಯ. ಕೊನೆ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ವಿಫಲ ಕಂಡಿದೆ ಅಷ್ಟೇ ಎಂದು ತಿಳಿಸಿದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನವು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಆಗಿದೆ. ವಿರೋಧ ಪಕ್ಷಗಳ ನಾಯಕರನ್ನು ಮಾತ್ರ ಬಂಧಿಸಲಾಗುತ್ತಿದೆ. ಬಿಜೆಪಿಯಲ್ಲಿ ಅನೇಕ ನಾಯಕರು ಅವ್ಯವಹಾರ ಎಸಗಿದವರು ಇದ್ದಾರೆ. ಆದರೆ ಅವರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾನೂನು ಚೌಕಟ್ಟು ಮೀರಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ಆರೋಪಿಸಿದರು.

    ಡಿ.ಕೆ.ಶಿವಕುಮಾರ್ ಅವರ ಬಂಧನದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ಆರೋಪ ಸುಳ್ಳು. ಇದು ಕೇವಲ ಉಹಾಪೋಹ. ಇಂತಹ ಹೇಳಿಕೆ ನೀಡುವ ಮೂಲಕ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮಲ್ಲಿರುವ ಸಣ್ಣತನವನ್ನು ವ್ಯಕ್ತಪಡಿಸಿದ್ದಾರೆ. ಅವರು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

    ಎಚ್‍ಡಿಕೆ ಹೇಳಿದ್ದೇನು?:
    ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಪ್ರಧಾನಿ ಮೋದಿ ಅವರು ಪ್ರಚಾರಕ್ಕಾಗಿ ಚಂದ್ರಯಾನ್-2ನ ವಿಕ್ರಂ ಲ್ಯಾಂಡರ್ ಚಂದ್ರಸ್ಪರ್ಶದ ವೇಳೆ ಇಸ್ರೋ ಕಚೇರಿಗೆ ಬಂದಿದ್ದರು. ಈ ಸಾಧನೆಯನ್ನು ತಾವೇ ಮಾಡಿದ್ದಾಗಿ ಬಿಂಬಿಸುವುದಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಕಾಲಿಟ್ಟಿದ್ದು ಇಸ್ರೋ ವಿಜ್ಞಾನಿಗಳಿಗೆ ಎಲ್ಲೋ ಒಂದು ಕಡೆ ಅಪಶಕುನ ಉಂಟಾಯಿತೋ ಏನೋ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಸರಿಯಾಗಿ ಲ್ಯಾಂಡ್ ಆಗಲಿಲ್ಲ ಎಂದು ಹೇಳಿದ್ದರು.

    ರಾಜ್ಯಕ್ಕೆ ಪ್ರವಾಹ ಪರಿಹಾರ ಕಲ್ಪಿಸದ ಪ್ರಧಾನಿ ಮೋದಿ ರಷ್ಯಾಗೆ ಸಾಲ ಕೊಡುತ್ತಾರೆ. ಮೋದಿ ಅವರ ಮುಂದೆ ಮಾತನಾಡುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಹೆದರುತ್ತಾರೆ ಎಂದು ಹೇಳುವಾಗ ಈ ರೀತಿ ವಿವಾದ ಮೇಲೆ ಎಳೆದುಕೊಂಡಿದ್ದರು.

  • ಅತೃಪ್ತರ ರಾಜೀನಾಮೆ ಬೆನ್ನಲ್ಲೇ ಬೆಂಗ್ಳೂರಿಗೆ ಆಗಮಿಸಿದ ‘ಕೈ’ ಮೂವರು ಶಾಸಕರು

    ಅತೃಪ್ತರ ರಾಜೀನಾಮೆ ಬೆನ್ನಲ್ಲೇ ಬೆಂಗ್ಳೂರಿಗೆ ಆಗಮಿಸಿದ ‘ಕೈ’ ಮೂವರು ಶಾಸಕರು

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯ ರಾಜೀನಾಮೆ ಇಂದು ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಈ ಹಿಂದಿನಿಂದಲೂ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್, ಪ್ರತಾಪ್ ಗೌಡ ಪಾಟೀಲ್, ಅಮರೇಗೌಡ ಬಯ್ಯಾಪುರ ಇಂದು ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಪಕ್ಷದ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮೂವರು ಶಾಸಕ ನಡೆ ಕುತೂಹಲಕ್ಕೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭೀಮಾನಾಯ್ಕ್ ಅವರು, ಸಾಕಷ್ಟು ಬಾರಿ ನಾನು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಆನಂದ್ ಸಿಂಗ್ ಅವರು ಬೆಳಗ್ಗೆ ರಾಜೀನಾಮೆ ನೀಡಿದ ಬಳಿಕವೂ ನಾನು ಸ್ಪಷ್ಟನೆ ನೀಡಿದ್ದೆ. ಅವರ ಮನವೊಲಿಕೆ ಮಾಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಇಂದಿಗೂ ಮಾಧ್ಯಮಗಳ ಅತೃಪ್ತ ಪಟ್ಟಿಯಲ್ಲಿ ನಮ್ಮ ಹೆಸರಿದೆ. ನಾವು ಕಾಂಗ್ರೆಸ್‍ನಲ್ಲಿಯೇ ಮುಂದುವರಿಯುತ್ತೇವೆ ಎಂದು ಹೇಳುತ್ತೇನೆ. ಯಾವುದೇ ಕಾರಣಕ್ಕೂ ಮಾಧ್ಯಮಗಳು ಆಪರೇಷನ್ ಕಮಲ ಹೆಸರಿನಲ್ಲಿ ನಮ್ಮ ಹೆಸರು ಪ್ರಸ್ತಾಪ ಮಾಡಬೇಡಿ ಎಂದರು.

    ನಮಗೂ ಮಾನ, ಮರ್ಯಾದೆ ಇದೆ:
    ಈ ವೇಳೆ ಮಾತನಾಡಿದ ಅಮರೇಗೌಡ ಬಯ್ಯಾಪುರ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅವರ ಹಕ್ಕು. ಆದರೆ ರಾಜೀನಾಮೆ ನೀಡಿದ ಬಳಿಕ ಎಲ್ಲಿ ಹೋಗುತ್ತಾರೆ ಎಂಬುವುದು ಕೂಡ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಶಾಸಕರ ರಾಜೀನಾಮೆ ಹಿಂದೆ ನನ್ನ ಕೈವಾಡ ಇದೆ. ನಾನು ರಾಜೀನಾಮೆ ನೀಡುತ್ತೇನೆ ಎಂಬುವುದು ಸುಳ್ಳು. ಆದ್ದರಿಂದ ಮಾಧ್ಯಮಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ ನನ್ನ ಹೆಸರನ್ನು ಆತೃಪ್ತರ ಪಟ್ಟಿಯಲ್ಲಿ ಪ್ರಸ್ತಾಪ ಮಾಡಬೇಡಿ ಎಂದು ಮನವಿ ಮಾಡಿದರು.

    ಸದ್ಯ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ರಾಜೀನಾಮೆ ಅವರು ವೈಯಕ್ತಿಕ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ. ಇದರಿಂದ ನಾವು ನಾವು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದೆ. ಆದ್ದರಿಂದ ಪಕ್ಷದಲ್ಲೇ ಮುಂದುವರಿಯುತ್ತೇವೆ. ಯಾವುದೇ ಅತೃಪ್ತರ ಗುಂಪಿನಲ್ಲಿ ನಾವಿಲ್ಲ. ನಮಗೆ ಮಾನ ಮಾರ್ಯದೆ. ಇದೇ ಪಕ್ಷ ಬಿಡುವ ಯೋಚನೆಯೇ ಇಲ್ಲ ಎಂದರು.

  • ನೀವು ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದೀರಿ: ಕೈ ಶಾಸಕರಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

    ನೀವು ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದೀರಿ: ಕೈ ಶಾಸಕರಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

    ಕೊಪ್ಪಳ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸ್ಥಳೀಯರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಮಲಾಪುರ ಗ್ರಾಮದಲ್ಲಿ ನಡೆದಿದೆ.

    ತೊಗರಿ ಖರೀದಿ ಕೇಂದ್ರದಲ್ಲಿ ಖರೀದಿ ವಿಳಂಬ ಮಾಡುತ್ತಿರುವ ವಿಚಾರ ಸಂಬಂಧ ಕಾಂಗ್ರೆಸ್ ಶಾಸಕ ಅಮರೇಗೌಡ ಭಯ್ಯಾಪುರ್ ಅವರಿಗೆ ಜಮಲಾಪುರ ಗ್ರಾಮಸ್ಥರು ತರಾಟೆಗೆ ತಗೆದುಕೊಂಡಿದ್ದಾರೆ. ಕುಷ್ಟಗಿ ಕೃಷಿ ಮಾರುಕಟ್ಟೆ ಕೇಂದ್ರದಲ್ಲಿ ತೊಗರಿ ಖರೀದಿ ಕೇಂದ್ರ ತೆರೆದರೂ ರೈತರು ಬೆಳೆದ ತೊಗರಿ ಖರೀದಿ ಮಾಡುತ್ತಿಲ್ಲ. ನೀವು ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದೀರಿ? ಗ್ರಾಮದ ರಸ್ತೆಗಳು ಹದಗೆಟ್ಟು ಹೋಗಿವೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ. ನೀವು ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ಗ್ರಾಮಸ್ಥರು ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಶಾಸಕ ಅಮರೇಗೌಡ ಭಯ್ಯಾಪುರ್ ಅವರ ಪ್ರಚಾರಕ್ಕೆ ಅಡ್ಡಿ ಉಂಟಾಯಿತು. ಇದರಿಂದಾಗಿ ಗ್ರಾಮಸ್ಥರನ್ನು ಸಮಾಧಾನಪಡಿಸಿ, ಮುಂದಿನ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದರು.