Tag: amareender singh

  • ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ಚಂಡೀಗಢ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದ ಬಳಿಕ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಹಿರಂಗಗೊಳಿಸುವುದಾಗಿ ಅವರು ಹೇಳಿದ್ದಾರೆ.

    ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಇಂದು ಅಮರೀಂದರ್ ಸಿಂಗ್ ಚಂಡಿಗಢದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಜೊತೆಗೆ ಸೀಟು ಹಂಚಿಕೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

    ಅಕಾಲಿದಳ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದ ಅವರು, ಚುನಾವಣಾ ಹೊಸ್ತಿಲಲ್ಲಿ ಬಹಳಷ್ಟು ಕಾಂಗ್ರೆಸ್ ನಾಯಕರು ತಮ್ಮ ಪಾರ್ಟಿ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

    ಇದೇ ವೇಳೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಚಾಟಿ ಬೀಸಿದ ಅವರು, ನನ್ನ ಬೆಂಬಲಿಗರಿಗೆ ಬೆದರಿಕೆ ಹಾಕಲಾಗುತ್ತಿದೆ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಆದರೆ ಇಂತಹ ಕೀಳು ಮಟ್ಟದ ರಾಜಕೀಯದಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಅಸಂಬದ್ಧ ಸುಳ್ಳು ಹೇಳಿಕೆ- ಅಮರೀಂದರ್ ಸಿಂಗ್

    ಅಮರೀಂದರ್ ಸಿಂಗ್ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ನವಜೋತ್ ಸಿಧು, ಕಾಂಗ್ರೆಸ್‍ನ 78 ಶಾಸಕರು ಪಕ್ಷದ ಜೊತೆಗಿದ್ದಾರೆ. ನೀವು ಪಂಜಾಬ್‍ನ ನ್ಯಾಯ ಮತ್ತು ಅಭಿವೃದ್ಧಿಯನ್ನು ತಡೆಯುವ ನಕಾರಾತ್ಮಕ ಶಕ್ತಿಯಾಗಿದ್ದಿರಿ ಎಂದು ಟೀಕಿಸಿದ್ದಾರೆ. ಅಲ್ಲದೆ ನಾನು ಜನರ ಪರ ಧ್ವನಿ ಎತ್ತುತ್ತಿದ್ದಂತೆ, ಸತ್ಯವನ್ನು ಹೇಳುತ್ತಿದ್ದಂತೆ ನೀವು ನನ್ನನ್ನು ಮುಗಿಸಲು ಬಯಸಿದ್ದೀರಿ, ಪಂಜಾಬ್‍ನ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಂಡಿದ್ದಕ್ಕಾಗಿ ಪಂಜಾಬ್‍ನ ಜನರು ಮತ್ತೆ ನಿಮ್ಮನ್ನು ಶಿಕ್ಷಿಸಲು ಕಾಯುತ್ತಿದ್ದಾರೆ ಎಂದು ಸಿಧು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಹೊಸ ಪಕ್ಷ ಸ್ಥಾಪಿಸಲು ಹೊರಟ್ರಾ ಅಮರೀಂದರ್ ಸಿಂಗ್?