Tag: Amaranatha Yathra

  • ಉಗ್ರರ ದಾಳಿ ಭೀತಿ: ಅಮರನಾಥ ಯಾತ್ರೆಗೆ ಹೆಚ್ಚಿದ ಭದ್ರತೆ!

    ಉಗ್ರರ ದಾಳಿ ಭೀತಿ: ಅಮರನಾಥ ಯಾತ್ರೆಗೆ ಹೆಚ್ಚಿದ ಭದ್ರತೆ!

    ಶ್ರೀನಗರ: ಉಗ್ರರ ದಾಳಿ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ಹೆಚ್ಚಿನ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ.

    ಜೂನ್ 28 ರಿಂದ ಎರಡು ತಿಂಗಳವರೆಗೆ ನಡೆಯುವ ಅಮರನಾಥ ಯಾತ್ರೆಗೆ ಉಗ್ರರ ಕರಿನೆರಳು ಬೀರಿದೆ. ಈ ಹಿನ್ನೆಲೆಯಲ್ಲಿ ಭಾರತದ ಅಂತರಾಷ್ಟ್ರೀಯ ಗಡಿ ಹಾಗೂ ಪಿಓಕೆ(ಪಾಕ್ ಆಕ್ರಮಿತ ಗಡಿ) ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲು ಸೇನಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರ ವಿಭಾಗದ ಕೇಂದ್ರ ರಿಸರ್ವ್ ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ವಿ.ಎಸ್.ಕೆ. ಕೌಮುಂಡಿ ಮಾತನಾಡಿ, ಅಮರನಾಥ ಯಾತ್ರೆಗೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗಿದೆ. ಬಲ್ಟಮ್ ಮತ್ತು ಪಹಲ್ಗಮ್ ಮಾರ್ಗಗಳಲ್ಲಿ ಹೆಚ್ಚಿನ ಸೇನಾ ಪಡೆಯನ್ನು ನಿಯೋಜಿಸಿದೆ. ಕಾನೂನು ಸುವ್ಯವಸ್ಥೆ ಮತ್ತು ಗೂಢಾಚಾರ ಸಂಸ್ಥೆಗಳು ಈ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಿದೆ ಎಂದು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಗಡಿ ಪ್ರದೇಶ ಚೆಕ್ ಪಾಯಿಂಟ್ ಗಳನ್ನು ಬಲಪಡಿಸಿಲಾಗಿದ್ದು, ಉಗ್ರರು ಒಳನುಸುಳದಂತೆ ಜಾಗೃತೆ ವಹಿಸಲಾಗಿದೆ. ಗುಪ್ತಚರ ಇಲಾಖೆಯು ನೀಡಿರುವ ಸೂಚನೆ ಮೇರೆಗೆ ಹೆಚ್ಚಿನ ಸೇನಾ ತುಕಡಿಯನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಮಾಹಿತಿಗಳು ಸಹ ಅಧಿಕಾರಿಗಳಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಉಗ್ರರ ಯಾವುದೇ ಯೋಜನೆಗಳನ್ನು ತಡೆಯುವಂತಹ ಕೆಲಸವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿಯಲ್ಲಿ ರಾತ್ರಿ ವೇಳೆಯೂ ಗಸ್ತನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿದ್ದು, ಬುಧವಾರ ನಡೆದ ಸಭೆಯಲ್ಲಿ ರಾಜ್ಯಪಾಲರಾದ ಎನ್.ಎನ್.ವೋಹ್ರರವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯಾದ ವಿಜಯ್ ಕುಮಾರ್ ಹಾಗೂ ಇಬ್ಬರು ಭದ್ರತಾ ಸಲಹೆಗಾರರಿಂದ ಮಾಹಿತಿ ಪಡೆದು ಭದ್ರತೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಸಭೆಯಲ್ಲಿ ಮಾತನಾಡಿದ ರಾಜ್ಯಪಾಲರು, ಕದನ ವಿರಾಮ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಉಗ್ರರ ದಾಳಿಗಳಿಂದ ಅನೇಕರು ಮೃತಪಟ್ಟಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಉಗ್ರರ ದಾಳಿಗಳು ನಡೆಯದಂತೆ ಎಚ್ಚರ ವಹಿಸಬೇಕು. ಸೇನೆ ಮತ್ತು ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಮಂಬರುವ ಅಮರನಾಥ ಯಾತ್ರೆಗೆ ಉಗ್ರರ ಭೀತಿ ಇರುವುದರಿಂದ ಯಾತ್ರೆಗೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ಎಂದು ಆದೇಶ ನೀಡಲಾಗಿದೆ ಅಂತಾ ಅಂದ್ರು.

    ಜಮ್ಮು ಕಾಶ್ಮೀರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಪಿಡಿಪಿ ಸರ್ಕಾರ ಅಸ್ಥಿತ್ವ ಕಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಜಾರಿಗೊಳಿಸಿದ್ದರು.