Tag: aloo cutlet

  • ಸಿಂಪಲ್‌ ಆಗಿ ಮಾಡಿ ಆಲೂ ಕಟ್ಲೆಟ್

    ಸಿಂಪಲ್‌ ಆಗಿ ಮಾಡಿ ಆಲೂ ಕಟ್ಲೆಟ್

    ಕೆಲವರಿಗೆ ಸಂಜೆ ಚಹಾದೊಂದಿಗೆ ಸ್ಪೆಷಲ್ ಆಗಿ ಏನಾದರು ಮಾಡಿ ತಿನ್ನಬೇಕು ಅಂತ ಮನಸ್ಸು ಆಸೆ ಆಗುತ್ತೆ. ಆದ್ರೆ ಸಿಂಪಲ್ ಹಾಗೂ ಸ್ಪೆಷಲ್ ಆಗಿರೋ ಯಾವ ಸ್ನಾಕ್ಸ್ ಮಾಡಿದರೆ ಮನೆಮಂದಿಗೆ ಇಷ್ಟವಾಗುತ್ತೆ ಎಂದು ಯೋಚಿಸ್ತಾ ಇದ್ದೀರಾ? ಹಾಗಿದ್ರೆ ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ರುಚಿಕರವಾದ ಆಲೂ ಕಟ್ಲೆಟ್ ಯಾವ ರೀತಿ ತಯಾರಿಸುವುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ. ನೀವು ನಿಮ್ಮ ಮನೆಮಂದಿಗೆ, ಮಕ್ಕಳಿಗೆ ಇದನ್ನೊಮ್ಮೆ ಮಾಡಿಕೊಡಿ. ಖಂಡಿತವಾಗಿಯೂ ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಸಾಮಾಗ್ರಿಗಳು:
    ಆಲೂಗಡ್ಡೆ- 2-3
    ಈರುಳ್ಳಿ- 1
    ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಗರಂ ಮಸಾಲೆ- ಅರ್ಧ ಚಮಚ
    ಜೋಳದ ಹಿಟ್ಟು- 4 ಚಮಚ
    ಸಣ್ಣ ರವೆ- 3 ಚಮಚ
    ಕೊತ್ತಂಬರಿ ಸೊಪ್ಪು- 8-10 ಎಸಳು
    ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು- ಒಗ್ಗರಣೆಗೆ
    ಹಸಿಮೆಣಸಿನಕಾಯಿ ಪೇಸ್ಟ್- 1 ಚಮಚ
    ರುಚಿಗೆ ತಕ್ಕಷ್ಟು ಉಪ್ಪು
    ಅಡುಗೆ ಎಣ್ಣೆ

    ಮಾಡುವ ವಿಧಾನ:
    * ಮೊದಲು ಆಲೂಗಡ್ಡೆಯನ್ನು ಬೇಯಿಸಿ ಬಳಿಕ ಸಿಪ್ಪೆ ತೆಗೆದು ಮೆತ್ತಗೆ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ ಹಾಕಿ. ಅದು ಸಿಡಿದ ನಂತರ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ ಹಾಕಿ ಕಂದು ಬಣ್ಣಕ್ಕೆ ತಿರುಗಿದ ತಕ್ಷಣ 1 ಚಮಚ ಹಸಿಮೆಣಸಿನಕಾಯಿ ಪೇಸ್ಟ್, 1 ಚಮಚ ಶುಂಠಿಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಗರಂಮಸಾಲಾ, 8-10 ಎಸಳು ಕೊತ್ತಂಬರಿ ಸೊಪ್ಪು, 1 ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿ.
    * ನಂತರ ಬೇಯಿಸಿ ಮೆತ್ತಗೆ ಮಾಡಿಟ್ಟ ಆಲೂಗಡ್ಡೆ ಹಾಕಿ ಒಗ್ಗರಣೆ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ತಯಾರಾದ ಮಿಶ್ರಣದಲ್ಲಿ ಕಟ್ಲೆಟ್ ಆಕಾರಗಳನ್ನು ಮಾಡಿಕೊಳ್ಳಿ.
    * ಬಳಿಕ 4 ಚಮಚ ಜೋಳದ ಹಿಟ್ಟು ಹಾಗೂ 3 ಚಮಚ ಸಣ್ಣ ರವೆಯನ್ನು ಬೌಲ್‍ನಲ್ಲಿ ಸ್ಪಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ ಗಟ್ಟಿಯಾದ ಪೇಸ್ಟ್ ತರಹ ಮಾಡಿಕೊಳ್ಳಿ.
    * ಆ ಹಿಟ್ಟಿನ ಪ್ಲೇಟ್‍ನಲ್ಲಿ ಮೊದಲು ತಯಾರಿಸಿ ಇಟ್ಟಿದ್ದ ಆಲೂಗಡ್ಡೆ ಮಿಶ್ರಣದ ಕಟ್ಲೆಟ್‍ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಗರಿಗಿಯಾಗಿ ಕರಿಯಿರಿ.
    * ಬಳಿಕ ತಯಾರಿಸಿದ ಕಟ್ಲೆಟ್‍ಗಳನ್ನು ಪ್ಲೇಟ್‍ನಲ್ಲಿ ಇಟ್ಟು ಟೊಮೆಟೋ ಸಾಸ್‍ನೊಂದಿಗೆ ಸವಿದು ಎಂಜಾಯ್ ಮಾಡಿ.
    *ಈ ಕಟ್ಲೆಟ್ ಅನ್ನು ನೀವು ಸಂಜೆ ವೇಳೆ ಚಹಾ ಅಥವಾ ಕಾಫಿ ಜೊತೆಗೆ ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ.