Tag: Allied Government

  • ಹೆಚ್‍ಎಎಲ್ ನಲ್ಲಿ ಬಿಎಸ್‍ವೈ, ಪರಂ ಬೆಂಬಲಿಗರ ಜಟಾಪಟಿ

    ಹೆಚ್‍ಎಎಲ್ ನಲ್ಲಿ ಬಿಎಸ್‍ವೈ, ಪರಂ ಬೆಂಬಲಿಗರ ಜಟಾಪಟಿ

    ಬೆಂಗಳೂರು: ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಜಿ.ಪರಮೇಶ್ವರ್ ಬೆಂಬಲಿಗರು ನಡುವೆ ಗಲಾಟೆ ನಡೆದಿದೆ.

    ಪಕ್ಷೇತರ ಶಾಸಕ ಹೆಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಂಡರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಮುಂಬೈನತ್ತ ಹೊರಡಲು ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

    ಇತ್ತ ನಾಗೇಶ್ ಅವರಿಗಾಗಿ ವಿಶೇಷ ವಿಮಾನ ಸಿದ್ಧಪಡಿಸಿಕೊಂಡಿದ್ದ ಯಡಿತಯೂರಪ್ಪನವರ ಆಪ್ತ ಸಂತೋಷ್ ನಿಂತಿದ್ದರು. ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದ ವೇಳೆ ಯಡಿಯೂರಪ್ಪ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಈ ವೇಳೆ ಇಬ್ಬರು ನಾಯಕರ ಆಪ್ತರ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದರು.

    ಪೊಲೀಸರ ಮೂಲಕ ಎಚ್‍ಎಎಲ್‍ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವ ಶಾಸಕರನ್ನೂ ವಿಶೇಷ ವಿಮಾನ ಹತ್ತಲು ಬಿಡದಂತೆ ಸೂಚಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿ.ಎಸ್.ಯಡಿಯೂರಪ್ಪ, ಶಾಸಕರನ್ನು ತಡೆಯಲು ನೀವ್ಯಾರು ಎಂದು ದಭಾಯಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದೂರವಾಣಿ ಮೂಲಕ ಎಚ್‍ಎಎಲ್‍ನ ಹಿರಿಯ ಪೊಲೀಸ್ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಮುಳುಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರಿಗೆ ಬಳಿಕ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅತೃಪ್ತರ ಗುಂಪು ಸೇರಲು ಮುಂದಾಗಿದ್ದಾರೆ.

  • ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗುತ್ತಾ 36 ಪತ್ರಗಳು

    ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗುತ್ತಾ 36 ಪತ್ರಗಳು

    ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಮೈತ್ರಿ ಸರ್ಕಾರದ ಈ ಸ್ಥಿತಿಗೆ ಆ 36 ಪತ್ರಗಳು ಒಂದು ಕಾರಣ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ಒಟ್ಟು 36 ಪತ್ರಗಳನ್ನು ಸಿಎಂಗೆ ಬರೆದಿದ್ದರು. ಇಷ್ಟು ಪತ್ರ ಬರೆದಿದ್ದರೂ ಒಂದು ಪತ್ರವನ್ನು ಸಿಎಂ ಗಂಭೀರವಾಗಿ ಪರಿಗಣಿಸಿಯೇ ಇಲ್ಲವಂತೆ. ಈ ಕಾರಣಕ್ಕೆ ಅಸಮಾಧಾನಗೊಂಡಿದ್ದ ಎಚ್.ವಿಶ್ವನಾಥ್ ಲೋಕಸಭಾ ಚುನಾವಣೆಯ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

    ರಾಜೀನಾಮೆ ನೀಡಿದ ಬಳಿಕವೂ ಸಿಎಂ ಪತ್ರಕ್ಕೆ ಸ್ಪಂದಿಸಬಹುದು ಎನ್ನುವ ನಿರೀಕ್ಷೆಯನ್ನು ವಿಶ್ವನಾಥ್ ಇಟ್ಟುಕೊಂಡಿದ್ದರು. ಇಷ್ಟಾದರೂ ಸಿಎಂ ವಿಶ್ವನಾಥ್ ಅವರ ಪತ್ರಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಈ ಅವಮಾನವೇ ‘ಹಳ್ಳಿ ಹಕ್ಕಿ’ಯ ಆಕ್ರೋಶಕ್ಕೆ ಕಾರಣವಾಗಿ, ಈ ಸಿಟ್ಟು ಸ್ಫೋಟಗೊಂಡು ಈಗ ಸರ್ಕಾರವನ್ನು ಕುಕ್ಕಿ ಬೀಳಿಸುವ ಹಂತಕ್ಕೆ ತಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

    ಎಚ್.ವಿಶ್ವನಾಥ್ ಅವರು ಕ್ಷೇತ್ರದ ಸಮಸ್ಯೆ, ಕೆಲ ವರ್ಗಾವಣೆ ಪತ್ರಗಳನ್ನು ಕೊಟ್ಟಿದ್ದರು. ಸಿಎಂ ಆಗಲಿ, ಅವರ ಆಪ್ತ ಸಹಾಯಕರಾಗಲಿ, ಅಧಿಕಾರಿಗಳಾಗಲಿ ಈ ಪತ್ರಗಳಿಗೆ ಕ್ಯಾರೇ ಅಂದಿರಲಿಲ್ಲ. ಇದರಿಂದ ಬೇಸರಗೊಂಡ ಹಿರಿಯ ನಾಯಕ ಎಚ್.ವಿಶ್ವನಾಥ್, ಸಿಎಂ ವಿರುದ್ಧ ಬಂಡೇಳಲು ವೇದಿಕೆ ನಿರ್ಮಿಸಿ ಈಗ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.

    ಜೆಡಿಎಸ್‍ನ ಮೂವರು ಶಾಸಕರಿಗೆ ಧೈರ್ಯತುಂಬಿ ಪಕ್ಷ ಬಿಡುವಂತೆ ಸೂಚಿಸಿದ್ದಾರೆ. ಟೀಂನಲ್ಲಿದ್ದ ಮೂವರ ಪೈಕಿ ಸದಸ್ಯ ಇಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಓರ್ವ ಶಾಸಕ ಮಾತ್ರ ರಾಜೀನಾಮೆ ಲಿಸ್ಟ್‍ನಿಂದ ಹೊರಗೆ ಇದ್ದಾರೆ.

    ಅತೃಪ್ತ ಶಾಸಕರ ನೇತೃತ್ವವನ್ನು ವಿಶ್ವನಾಥ್ ವಹಿಸಿಕೊಂಡಿದ್ದು ಶನಿವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ನಮ್ಮ ರಾಜೀನಾಮೆಗೆ ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಹೇಳಿದ್ದರು.

    ಕ್ಷಿಪ್ರ ಬೆಳವಣಿಗೆಗೆ ಸರ್ಕಾರ ನಡೆಸುವವರೇ ಕಾರಣ. ಸಮ್ಮಿಶ್ರ ಸರ್ಕಾರ ಜನರ ಆಶೋತ್ತರಗಳನ್ನು ಅರ್ಥೈಸಿಕೊಂಡು ಎರಡು ಪಕ್ಷದ ಶಾಸಕರನ್ನು ಒಂದಾಗಿ ಕರೆದುಕೊಂಡು ಹೋಗಲು ವಿಫಲವಾಗಿದೆ. ಸರ್ಕಾರ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಎಲ್ಲರ ಸಲಹೆ ತೆಗೆದುಕೊಂಡು ಹೋಗಲು ವಿಫಲವಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಸತ್ತು ಹೋಗಿದೆ. ಇದೂ ಸರ್ಕಾರ ನಡೆಗೆ ಬಹುಮುಖ್ಯ ಉದಾಹರಣೆಯಾಗಿದೆ. ಇಂತಹ ಹಲವು ಕಾರ್ಯಗಳು ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ. ಸರ್ಕಾರ ನಡೆಸುವವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪ ಮಾಡದೇ ಟೀಕಿಸಿದ್ದರು.

  • ರಾಜೀನಾಮೆ ನೀಡಲು ಸಿಎಂ ನಿರ್ಧಾರ?

    ರಾಜೀನಾಮೆ ನೀಡಲು ಸಿಎಂ ನಿರ್ಧಾರ?

    ಬೆಂಗಳೂರು: ಅಮೆರಿಕದಿಂದ ಆಗಮಿಸುತ್ತಿರುವ ಸಿಎಂ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಸೋಮವಾರ ಜೆಡಿಎಸ್ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಆದರೆ ಈಗ ಬದಲಾವಣೆ ಮಾಡಿ ಇಂದು ಸಂಜೆಯೇ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ.

    ಸಿಎಂ ಅಮೆರಿಕದಿಂದ ನೇರವಾಗಿ ದೆಹಲಿಗೆ ಇಂದು ಸಂಜೆ 3.15ಕ್ಕೆ ಆಗಮಿಸಲಿದ್ದು, ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಎಚ್‍ಎಎಲ್ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದು, ಬಂದ ತಕ್ಷಣ ಜೆಡಿಎಸ್ ಶಾಸಕರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಮಾಜಿ ಪ್ರಧಾನಿ ದೇವೇಗೌಡ ಮಾತುಕತೆ ನಡೆಸಿದ್ದು, ಸಿಎಂ ಆಗಮಿಸಿದ ತಕ್ಷಣ ದೇವೇಗೌಡರು, ಕುಮಾರಸ್ವಾಮಿ, ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ.

    ಸಿಎಂ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗಾಗಲೇ ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ. ಶಾಸಕರು ಮರಳಿ ಬರುವುದಿಲ್ಲ, ಎಳೆದಾಡಿ ಬಹುಮತ ಸಾಬೀತಿಗೆ ಮುಂದಾಗಿ ಮುಖಭಂಗ ಅನುಭವಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂಬ ತೀರ್ಮಾನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

    ಬಿಜೆಪಿ ದ್ರೋಹ ಮಾಡಿ ನಮ್ಮ ಶಾಸಕರನ್ನು ಸೆಳೆದುಕೊಂಡಿದೆ ಎಂದು ಜನರ ಬಳಿ ಹೇಳಿ ಪಕ್ಷ ಸಂಘಟನೆ ಮಾಡಲು ಜೆಡಿಎಸ್ ಮುಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿವೆ.

  • ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಸೌಂದರ್ಯ ಎಂದ ಖಾದರ್

    ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಸೌಂದರ್ಯ ಎಂದ ಖಾದರ್

    ತುಮಕೂರು: ಮೈತ್ರಿ ಸರ್ಕಾರದ 12 ಜನ ಶಾಸಕರುಗಳು ರಾಜೀನಾಮೆ ನೀಡುತ್ತಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ “ಇವೆಲ್ಲಾ ಪ್ರಜಾಪ್ರಭುತ್ವದ ಸೌಂದರ್ಯ” ಎಂದು ಬಣ್ಣಿಸಿದ್ದಾರೆ.

    ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ರೀತಿಯ ಕೆಲವು ವಿಚಾರಗಳು ಬರುತ್ತವೆ. ಇವೆಲ್ಲಾ ಬ್ಯೂಟಿ ಆಫ್ ಡೆಮಾಕ್ರಸಿ ಎಂದು ಉತ್ತರಿಸಿದರು.

    ಶಾಸಕರು ರಾಜೀನಾಮೆ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮೈತ್ರಿ ಸರ್ಕಾರ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿದರು. ರಾಜೀನಾಮೆ ಕೊಟ್ಟ ಬಹುತೇಕ ಶಾಸಕರು ಸಿದ್ದರಾಮುಯ್ಯನವರ ಬೆಂಬಲಿಗರು ಎಂಬ ಮಾತಿಗೆ ಉತ್ತರಿಸಿದ ಖಾದರ್, ಕಾಂಗ್ರೆಸ್ಸಿನ ಎಲ್ಲಾ ಶಾಸಕರಿಗೂ ಸಿದ್ದರಾಮಯ್ಯ ನಾಯಕರು ಎಂದು ಹೇಳಿ ಸುಮ್ಮನಾದರು.

  • ಡೆವಲಪರ್ಸ್, ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಶಾಸಕರಿಗೆ ಆಫರ್: ಡಿಕೆಶಿ ಬಾಂಬ್

    ಡೆವಲಪರ್ಸ್, ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಶಾಸಕರಿಗೆ ಆಫರ್: ಡಿಕೆಶಿ ಬಾಂಬ್

    ಬೆಂಗಳೂರು: ಮೈತ್ರಿ ಸರ್ಕಾರ ಶಾಸಕರು ರಾಜೀನಾಮೆ ನೀಡಿದ್ದು, ಅವರ ಮನವೊಲಿಕೆ ಮಾಡುವ ಕಾರ್ಯವನ್ನು ಮಾಡುತ್ತವೆ. ನಾವು ಎಲ್ಲಾ ತ್ಯಾಗಕ್ಕೂ ಸಿದ್ಧವಾಗಿರುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ನಿಯಮಗಳಿವೆ. ಅದರಂತೆ ಮುಂದಿನ ಕ್ರಿಯೆ ನಡೆಯುತ್ತದೆ. ಆದರೆ ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಯವರು ಮೌನವಹಿಸಿದ್ದಾರೆ. ಆದರೆ ಅವರು ಎಷ್ಟು ಹಣವನ್ನು ಡೆವಲಪರ್ಸ್ ಹಾಗೂ ಗುತ್ತಿಗೆದಾರರಿಂದ ವಸೂಲಿ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಾಂಬ್ ಸಿಡಿಸಿದರು.

    ರಾಜೀನಾಮೆ ನೀಡಿರುವ ಶಾಸಕರಲ್ಲಿ ಕೆಲ ಆತ್ಮೀಯರು ಇದ್ದಾರೆ. ಅವರೊಂದಿಗೆ ಮಾತನಾಡಿದ್ದೆನೆ. ಅವರು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಿದ್ದರೂ ಕೂಡ ನನ್ನ ಬಳಿ ಮಾತನಾಡಿದ್ದಾರೆ. ಎಷ್ಟೋ ಶಾಸಕರು ಹೋಗಿದ್ದಾರೆ ಬಂದಿದ್ದಾರೆ ಎಂದು ಶಾಸಕರ ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಹೋಗುವವರು ಹೋಗುತ್ತಾರೆ ಅವರ್ನು ಹಿಡಿದುಕೊಳ್ಳಲು ಆಗುವುದಿಲ್ಲ. ನನ್ನ ಬಂಡಾಯ ಶಮನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಕಾದು ನೋಡಿ ಎಂದರು.

  • ನಿಂಬೆಹಣ್ಣು ರೇವಣ್ಣ ಸರ್ಕಾರದ ಬಗ್ಗೆ ಏನ್ ಭವಿಷ್ಯ ಹೇಳ್ತಾರೆ? ಆರ್. ಆಶೋಕ್

    ನಿಂಬೆಹಣ್ಣು ರೇವಣ್ಣ ಸರ್ಕಾರದ ಬಗ್ಗೆ ಏನ್ ಭವಿಷ್ಯ ಹೇಳ್ತಾರೆ? ಆರ್. ಆಶೋಕ್

    -ಆಷಾಢದಲ್ಲಿ ಬಿಜೆಪಿ ಸರ್ಕಾರ ರಚೆನೆಯಾಗಬೇಕು ಅನ್ನೋದು ನಮ್ಮ ಆಸೆ

    ಮಂಡ್ಯ: ನಿಂಬೆಹಣ್ಣು ರೇವಣ್ಣ (ಸಚಿವ ಹೆಚ್.ಡಿ.ರೇವಣ್ಣ) ಈಗ ಮೈತ್ರಿ ಸರ್ಕಾರದ ಬಗ್ಗೆ ಏನ್ ಭವಿಷ್ಯ ನುಡಿತಾರ ನೋಡಬೇಕಿದೆ ಎಂದು ಬಿಜೆಪಿ ಮುಖಂಡ ಆರ್ ಆಶೋಕ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ ಪತನದತ್ತ ಸಾಗುತ್ತಿದೆ. ಸರ್ಕಾರದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಕುಮಾರಸ್ವಾಮಿ ಆಡಳಿತ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಿದ್ದಾರೆ.

    ಸರ್ಕಾರದಲ್ಲಿ ಜೆಡಿಎಸ್ ಶಾಸಕರಿಗೊಂದು ಕಾಂಗ್ರೆಸ್ ಶಾಸಕರಿಗೊಂದು ತಾರತಮ್ಯ ಮಾಡಲಾಗಿದ್ದು, ಕೈ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಆನಂದ್ ಸಿಂಗ್ ರಾಜೀನಾಮೆ ಸರ್ಕಾರದ ಪತನಕೆ ನಾಂದಿಯಾಗಿದೆ. ಆನಂದ್ ಸಿಂಗ್ ಹಿಂದೆ ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಬಿಜೆಪಿ ಆಪರೇಷನ್ ಕಮಲ ಮಾಡಲ್ಲ ಸರ್ಕಾರ ತಾನಾಗಿಯೇ ಬೀಳಲಿದೆ. ಸಿಎಂ ಮಗ ಸೋತರೆ ಮುಖ್ಯಮಂತ್ರಿ ಸೋತ ಹಾಗೆ, ಲೋಕಸಭೆ ಸೋಲಿನ ಬಳಿಕ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಆದರೆ ಅವರು ಕುರ್ಚಿಗೆ ಅಂಟಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮಧ್ಯಂತರ ಚುನಾವಣೆಗೆ ಹೋಗಲ್ಲ. ನಾವು ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದು ಹೇಳಿದ್ದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ತಿರುಗೇಟು ಕೊಟ್ಟ ಆರ್.ಅಶೋಕ್, ಅವರ ಅಣ್ಣನನ್ನೇ ಅವರ ಕೈಯಲ್ಲಿ ಹಿಡಿದುಕೊಳ್ಳಲು ಆಗದಿದ್ದ ಮೇಲೆ ರಿವರ್ಸ್ ಆಪರೇಷನ್ ಹೇಗೆ ಮಾಡುತ್ತಾರೆ?.್ತ ಈ ಸರ್ಕಾರ ಬಿದ್ದು ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಸಿದ್ದಾರೆ ಎಂದು ಹೇಳಿದರು.

    ಮಧ್ಯಂತರ ಚುನಾವಣೆಯ ಅವಶ್ಯಕತೆ ಇಲ್ಲ, ನಾವು 105 ಜನ ಇದ್ದೀವಿ. ನಮಗೆ ಸರ್ಕಾರ ರಚಿಸುವ ನೈತಿಕತೆ ಇದೆ. ಯಾರ ಯಾರು ರಾಜೀನಾಮೆ ನೀಡುತ್ತಾರೆ ಅನ್ನೋದನ್ನು ಇನ್ನೊಂದು ವಾರ ಕಾದು ನೋಡಿ. ಸರ್ಕಾರದ ಸುಳ್ಳು ಭರವಸೆಗಳಿಂದ ಕರ್ನಾಟಕದ ಜನ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜೀನಾಮೆ ಪರ್ವ ಶುರುವಾಗಲಿದ್ದು, ಏಣಿಕೆ ಮಾಡದಷ್ಟು ಆಶ್ಚರ್ಯಕರವಾಗಿ ಒಂದಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದರು.

  • ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಜೆಡಿಎಸ್ ಕಥೆ: ಆರ್. ಅಶೋಕ್

    ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಜೆಡಿಎಸ್ ಕಥೆ: ಆರ್. ಅಶೋಕ್

    – ನಾವು ಹುಟ್ಟಿದಾಗಿನಿಂದಲೂ ಅನ್ನ ತಿನ್ನುತ್ತಿದ್ದೇವೆ, ಸಗಣಿ ತಿಂತಿಲ್ಲ

    ಮೈಸೂರು: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗಾಗಿದೆ ಜೆಡಿಎಸ್ ಕಥೆ ಎಂದು ದಳ ನಾಯಕರ ಪಾದಯಾತ್ರೆ ಬಗ್ಗೆ ಮಾಜಿ ಡಿಸಿಎಂ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ ದಂಡನಾಯಕ ದೇವೇಗೌಡರೇ ಸೋತಿದ್ದಾರೆ. ಇದ್ದರಿಂದ ಜೆಡಿಎಸ್ ಪಕ್ಷ ದಿಕ್ಕು ದೆಸೆ ಇಲ್ಲದಂತಾಗಿದೆ. ದೇವೇಗೌಡರಿಗೆ ವಯಸ್ಸಾಗಿದೆ. ಅವರು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಮಾಡಲ್ಲ ಅಂತಾರೆ. ಆದರೆ ಅವರು ಸ್ಪರ್ಧೆ ಮಾಡುತ್ತಾರೆ ಎಂದರು.

    ಮಧ್ಯಂತರ ಚುನಾವಣೆ ಬಂದರೆ ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಬರಲ್ಲ. ನಿತ್ಯವೂ ನಾವು ಅವರಿಗೆ ಟಾಂಗ್ ಕೋಡೋ ಬದಲು ಸುಮ್ಮನಿದ್ದರೆ ಮೈತ್ರಿ ಸರ್ಕಾರವೇ, ಸರ್ಕಾರವನ್ನು ಫಿನಿಶ್ ಮಾಡಿ ಬಿಡಲಿದೆ. ಈ ಸರ್ಕಾರ ಬದುಕಿದೆಯೋ ಸತ್ತಿದ್ಯೋ ಎಂದು ಡಾಕ್ಟರ್ ಬಿಪಿ ಚೆಕ್ ಮಾಡುವಂತಾಗಿದೆ. ಇವರ ಆಡಳಿತ 1 ವರ್ಷದಿಂದ ಇರುತ್ತೋ ಹೋಗುತ್ತೋ ಎನ್ನುವ ರೀತಿ ಇದೆ. ಮಧ್ಯಂತರ ಚುನಾವಣೆ ಬರುವುದಾದರೆ ಜೆಡಿಎಸ್- ಕಾಂಗ್ರೆಸ್ ಜಗಳದಿಂದ ಬರುತ್ತದೆ ಎಂದರು.

    ಈ ಸರ್ಕಾರ ಬೇಕಿರೋದು ಕೇವಲ ಮೂರು ಜನಕ್ಕೆ ಮಾತ್ರ. ಡಿಕೆ ಶಿವಕುಮಾರ್, ಕುಮಾರಸ್ವಾಮಿ ಹಾಗೂ ಪರಮೇಶ್ವರ್‍ಗೆ ಮಾತ್ರ ಈ ಸರ್ಕಾರ ಬೇಕಾಗಿದೆ. ಕಾಂಗ್ರೆಸ್‍ಗೂ ಬೇಕಿಲ್ಲ, ಜೆಡಿಎಸ್‍ಗೂ ಈ ಮೈತ್ರಿ ಬೇಕಿಲ್ಲ. ಕೇವಲ ಅಧಿಕಾರದ ಆಸೆಗೆ ಇವರು ಅಂಟಿಕೊಂಡಿದ್ದಾರೆ. ಕರ್ನಾಟಕದ ಜನ ಕಾಂಗ್ರೆಸ್‍ಗೆ ಒಂದು ನಾಮ, ಜೆಡಿಎಸ್‍ಗೊಂದು ನಾಮ ಹಾಕಿದ್ದಾರೆ. ಹೀಗೆ ನಾಮ ಹಾಕಿದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು ಎಂದು ಕಿಡಿಕಾರಿದರು.

    ಕೇವಲ ಅಧಿಕಾರಕ್ಕಾಗಿ ಸ್ವಾರ್ಥ ಸಾಧನೆಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಆದರೆ ಇರುವಷ್ಟು ದಿನ ಅಧಿಕಾರದಲ್ಲಿ ಇದ್ದು ಆಡಳಿತ ನಡೆಸುತ್ತಿದ್ದಾರೆ. ಸರ್ಕಾರ ಮಾಡೋ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಾವು ಸರ್ಕಾರವನ್ನು ಮಾಡುತ್ತಿವಿ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ನನ್ನ ಅನ್ನ ತಿಂತಿದೀರ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅದನ್ನು ಅವರ ಮನೆಯಿಂದ ತಂದು ಕೊಡ್ತಿದ್ದಾರಾ.? ಅವರ ಮನೆ ದುಡ್ಡು ಕೊಟ್ಟು, ರೋಡ್ ಮಾಡಿದರೆ, ಹಾಲು ಕೊಟ್ಟಿದ್ದರೆ, ಅಕ್ಕಿ ಕೊಟ್ಟಿದರೆ ಲೆಕ್ಕ ಬರಲಿ. ಸ್ವಾಮಿ ಈ ಪ್ರಪಂಚ ಹುಟ್ಟಿದಾಗಿನಿಂದಲೂ ನಾವು ಅನ್ನ ತಿನ್ನುತ್ತಿದ್ದೇವೆ, ಸಗಣಿ ತಿಂತಿಲ್ಲ. ತೆರಿಗೆ ಹಣದಿಂದ ಎಲ್ಲಾ ನಡಿತಿರೋದು. ಯಾರು ತಮ್ಮ ಮನೆಯಿಂದ ತಂದು ಕೊಡಲ್ಲ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

  • ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ವಾಮಮಾರ್ಗ ಹಿಡಿದಿದೆ – ಕೃಷ್ಣಬೈರೇಗೌಡ

    ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ವಾಮಮಾರ್ಗ ಹಿಡಿದಿದೆ – ಕೃಷ್ಣಬೈರೇಗೌಡ

    – ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಜೆಪಿಯದ್ದು

    ಕೊಪ್ಪಳ: ಮೈತ್ರಿ ಸರ್ಕಾರ ಕೆಡವಲು ದುಷ್ಟ, ವಾಮಮಾರ್ಗಗಳನ್ನೆಲ್ಲ ಬಿಜೆಪಿ ಮಾಡುತ್ತಿದೆ. ಆದರೆ ಬಿಜೆಪಿ ಮಾಡುವ ಎಲ್ಲಾ ವಾಮಮಾರ್ಗವನ್ನು ಮೀರಿ ಸರ್ಕಾರ ನಡೆಸುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

    ಇಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಕಾಮಗಾರಿಗಳ ಕ್ಷೇತ್ರ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರ ಬೀಳಿಸುವುದಕ್ಕೆ ಏನೆಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡುವುದರಿಂದ ಹಿಡಿದು ದುಷ್ಟ ಮಾರ್ಗಗಳನ್ನು ಬಳಸಿ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯವರ ಮೇಲೆ ಕಿಡಿಕಾರಿದರು.

    ಇದನ್ನೆಲ್ಲ ಮೀರಿ ನಾವು ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಸರ್ಕಾರ ಸುಭದ್ರವಾಗಿದೆ ಎಂದು ಅವರು ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಬೇಕು ಎಂಬ ಸಿಎಂ ಹೇಳಿಕೆ ಸಮರ್ಥಿಸಿಕೊಂಡರು. ಪ್ರತಿಭಟನಾಕಾರರಿಗೆ ಸಿಎಂ ಸಮಯ ನೀಡಿದ್ದರು. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಅವರು ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

    ಮೋದಿಗೆ ವೋಟ್ ಹಾಕಿ ನನಗೆ ಸಮಸ್ಯೆ ಹೇಳ್ತೀರಾ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಸಿಎಂ ರವರು ವಾಸ್ತವವಾಗಿ ಮಾತನಾಡಿದ್ದಾರೆ. ರಾಜಕೀಯದಲ್ಲಿ ವಾಸ್ತವವಾಗಿ ಮಾತನಾಡಿದರೆ ಹಿಡಿಸೊಲ್ಲ ಎಂದರು. ಗ್ರಾಮ ವಾಸ್ತವ್ಯದ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಆದರೆ ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.

  • ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಏರಿಕೆಯನ್ನ ಸಮರ್ಥಿಸಿಕೊಂಡ ಸಚಿವ ತುಕಾರಂ

    ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಏರಿಕೆಯನ್ನ ಸಮರ್ಥಿಸಿಕೊಂಡ ಸಚಿವ ತುಕಾರಂ

    ಬಳ್ಳಾರಿ: ವೈದ್ಯಕೀಯ ವಿದ್ಯಾರ್ಥಿಗಳ ಶುಲ್ಕ ಏರಿಕೆ ಇಂದಿನ ವ್ಯವಸ್ಥೆಗೆ ಅನುಗುಣವಾಗಿದೆ ಎಂದು ಶುಲ್ಕ ಏರಿಕೆ ಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಸಮರ್ಥಿಸಿಕೊಂಡಿದ್ದಾರೆ.

    ಜಿಲ್ಲೆಯ ಜಿಂದಾಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕಾದಾಗ ಹಣಕಾಸಿನ ಅವಶ್ಯಕತೆ ಇರುತ್ತದೆ. ಹಾಗಾಗಿ ಶುಲ್ಕ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.

    ಇದೇ ವೇಳೆ ಚುನಾವಣೆ ನಂತರ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಬಳ್ಳಾರಿಗೆ ಕಾಲಿಟ್ಟಿಲ್ಲ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಸಚಿವ ತುಕಾರಾಂ, ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಡಿ.ಕೆ ಶಿವಕುಮಾರ್‍ರವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನನಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದಾರೆ. ಈ ವಿಚಾರಗಳು ಹೈಕಮಾಂಡ್ ತಿರ್ಮಾನಗಳಾಗಿದ್ದು, ಆದರ ಬಗ್ಗೆ ನಾನು ಮಾತನಾಡುವುದಿಲ್ಲ. ಅಲ್ಲದೇ ಪಕ್ಷ ಬಳ್ಳಾರಿಯ ಜವಾಬ್ದಾರಿಯನ್ನು ಕೊಟ್ಟರೆ ನಾನು ನಿರ್ವಹಿಸುವೆ ಎಂದು ಹೇಳುವ ಮೂಲಕ ಬಳ್ಳಾರಿ ಉಸ್ತುವಾರಿ ಸಚಿವನಾಗುವ ಆಸೆಯನ್ನು ಹೊರ ಹಾಕಿದರು.

    ಮೈತ್ರಿ ಸರ್ಕಾರ ಬಗ್ಗೆ ಮಾಜಿ ಸಂಸದ ವೀರಪ್ಪ ಮೊಯ್ಲಿ ಅಸಮಧಾನ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಮೈತ್ರಿಯಲ್ಲಿ ಜತೆಗೂಡಿ ಚುನಾವಣೆ ಎದುರಿಸಿದ್ದೇವೆ. ಪ್ರತ್ಯೇಕ ಚುನಾವಣೆ ಮಾಡಿದ್ದರೆ ಅನುಕೂಲವಾಗುತ್ತೇನೋ, ಜತೆಗೂಡಿ ಚುನಾವಣೆ ನಡೆಸಿದ್ದರಿಂದ ಅನಾನುಕೂಲವಾಗಿದೆ ಎಂಬ ವಿಚಾರಗಳು ಚರ್ಚೆಗೆ ಬರುವುದು ಸಹಜ. ಅಲ್ಲದೆ ವೀರಪ್ಪ ಮೊಯ್ಲಿ ಸಾಹೇಬರು ಹಿರಿಯರು ಅವರು ವಿಶ್ಲೇಷಣೆ ಮಾಡುತ್ತಾರೆ. ಆ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    – ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡುವುದರಿಂದ ಅಭಿವೃದ್ಧಿಯಾಗಲ್ಲ

    ಹುಬ್ಬಳ್ಳಿ: ಸಿಎಂ ಗ್ರಾಮ ವಾಸ್ತವ್ಯ ಮಾಡಿ ಕೇವಲ ಅರ್ಜಿ ತೆಗೆದುಕೊಂಡು ಬಂದರೆ ಅಭಿವೃದ್ಧಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಇಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾಡೋ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡಿದರೆ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದಾರೆ.

    ಒಂದು ಗ್ರಾಮಕ್ಕೆ ಹೋಗಿ ಒಂದು ದಿನ ಇದ್ದು ಕೇವಲ ಅರ್ಜಿಗಳನ್ನು ತೆಗೆದುಕೊಂಡು ಬಂದರೆ ಏನ್ ಅಭಿವೃದ್ಧಿ ಆಗತ್ತೆ, ಅದು ಅಧಿಕಾರಿಗಳು ಮಾಡೋ ಕೆಲಸ. ಮೊದಲು ಸಿಎಂ ಕಟ್ಟುನಿಟ್ಟಿನ ಆಡಳಿತ ನಡೆಸಲಿ. ತಮ್ಮಲ್ಲಿನ ಒಳ ಜಗಳವನ್ನು ಬಗೆಹರಿಸಲಿ. ಅದು ಬಿಟ್ಟು ಗ್ರಾಮ ವಾಸ್ತವ್ಯ ಎಂದು ನಾಟಕ ಮಾಡಿದರೆ ಏನು ಅಭಿವೃದ್ಧಿ ಆಗಲ್ಲ ಎಂದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಮಾತನಾಡಿ, ಈ ಯೋಗ ಡೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲು ಭಾರತದ ಪ್ರಧಾನಿ ಮೋದಿ ಅವರು ಕಾರಣ. 2015 ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಬಗ್ಗೆ ಮೊದಲು ಪ್ರಸ್ತಾಪಿಸಿದ್ದು ಮೋದಿ ಅವರು ಇದಕ್ಕೆ ಪ್ರಪಂಚದ 170 ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಅದ್ದರಿಂದ ಜೂನ್ 21 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]