Tag: Allied Government

  • ಇದು ದೋಸ್ತಿ ಅಲ್ಲ, ದುಷ್ಮನ್ ಸರ್ಕಾರ- ಶ್ರೀನಿವಾಸ್ ಪ್ರಸಾದ್

    ಇದು ದೋಸ್ತಿ ಅಲ್ಲ, ದುಷ್ಮನ್ ಸರ್ಕಾರ- ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಇದು ದೋಸ್ತಿ ಸರ್ಕಾರ ಅಲ್ಲ, ಇದು ದುಷ್ಮನ್ ಸರ್ಕಾರ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಒಳಗೊಳಗೆ ಅಸಮಾಧಾನವಿದೆ. ಎಚ್ ವಿಶ್ವನಾಥ್ ಅವರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನವಿತ್ತು. ಈ ಹಿಂದೆ ಅವರು `ಹಳ್ಳಿ ಹಕ್ಕಿ’ ಎಂಬ ಪುಸ್ತಕ ಬರೆದಿದ್ದರು. ಈಗ ಜೆಡಿಎಸ್ ಜೊತೆ ಇದ್ದ ಅನುಭವವನ್ನು `ಹಳ್ಳಿ ಹಕ್ಕಿಯ ಗೋಳು’ ಎಂದು ಬರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಮಧ್ಯಂತರ ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಬೇಕಿದ್ದರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಈ ಬಗ್ಗೆ ಈಗಾಗಲೇ ಯಡಿಯೂರಪ್ಪ ಅವರು ಹೇಳಿದ್ದಾರೆ. ಸರ್ಕಾರ ಏನ್ ಆಗುತ್ತದೆ ಎಂದು ಮಂಗಳವಾರದವರೆಗೆ ಕಾದು ನೋಡಬೇಕಿದೆ. ಮುಖ್ಯಮಂತ್ರಿ ಅವರು ಕೂಡ ಸ್ಪೀಕರ್ ಬಳಿ ಟೈಮ್ ಕೇಳಿದ್ದಾರೆ. ಏನಾಗುತ್ತೆ ನೋಡಬೇಕು ಎಂದು ಹೇಳಿದರು.

    ಈಗಾಗಲೇ ಎಲ್ಲರೂ ಕೂಡ ರೆಸಾರ್ಟ್ ನಲ್ಲಿ ಇದ್ದಾರೆ. ಈ ರೀತಿಯ ಸ್ಥಿತಿ ಕರ್ನಾಟಕದಲ್ಲಿ ಬಂದಿರುವುದು ನಮ್ಮ ದೌರ್ಭಾಗ್ಯ. ಇಂತಹ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಲಿ – ಭಗವಂತ್ ಖೂಬಾ

    ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಲಿ – ಭಗವಂತ್ ಖೂಬಾ

    ಬೀದರ್: ಬಹುಮತವಿಲ್ಲದೆ ಅಲ್ಪಮತಕ್ಕೆ ಕುಸಿದಿರುವ ಸರ್ಕಾರದಲ್ಲಿ ಸಿಎಂ ಏನು ಬಹುಮತ ಸಾಬೀತು ಮಾಡುತ್ತಾರೆ ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ. ಹೀಗಿರುವಾಗ ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗುತ್ತೇನೆ ಎನ್ನುವುದಕ್ಕೆ ಮುಖ್ಯಮಂತ್ರಿಗಳಿಗೆ ಯಾವ ನೈತಿಕತೆಯೂ ಇಲ್ಲಾ ಎಂದು ಸಂಸದ ಭಗವಂತ್ ಖೂಬಾ ವಾಗ್ದಾಳಿ ನಡೆಸಿದ್ದಾರೆ.

    ನಗರದ ರಂಗಮಂದಿರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರು, ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಾರೆ. ಇನ್ನು ಕೆಲವರು ಈಗಿರುವ ಸಿಎಂ ಇರಬೇಕು ಎನ್ನುತ್ತಾರೆ. ಇದನ್ನು ನೋಡಿದರೆ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟು ಗೊಂದಲಗಳು ಇವೆ ಹಾಗೂ ಸ್ವಾರ್ಥವಿದೆ ಎಂದು ಗೊತ್ತಾಗುತ್ತಿದೆ. ರಾಜ್ಯದ ಏಳಿಗೆಯ ಬಗ್ಗೆ ಎರಡು ಪಕ್ಷಗಳು ಸ್ವಲ್ಪವು ಯೋಚನೆ ಮಾಡುತ್ತಿಲ್ಲಾ ಎಂದು ಮೈತ್ರಿ ಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಬೇಕು. ರಿವರ್ಸ್ ಆಪರೇಷನ್ ಮಾಡುತ್ತೇನೆ. ಬೇರೆ ಏನೋ ತಂತ್ರಗಾರಿಕೆ ಮಾಡುತ್ತೇನೆ ಎಂದರೆ ರಾಜ್ಯದ ಜನರಿಗೆ ಇದು ಸರಿ ಬರೋಲ್ಲಾ ಎಂದು ಬಿಜೆಪಿ ಸಂಸದ ಭಗವಂತ್ ಖೂಬಾ ಸಿಎಂ ಹಾಗೂ ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.

  • 10 ಮಂದಿಯ ಜೊತೆ ನಮ್ಮ ಅರ್ಜಿಯನ್ನೂ ಪರಿಗಣಿಸಿ – ಸುಪ್ರೀಂ ಮೆಟ್ಟಿಲೇರಿದ ಐವರು ಶಾಸಕರು

    10 ಮಂದಿಯ ಜೊತೆ ನಮ್ಮ ಅರ್ಜಿಯನ್ನೂ ಪರಿಗಣಿಸಿ – ಸುಪ್ರೀಂ ಮೆಟ್ಟಿಲೇರಿದ ಐವರು ಶಾಸಕರು

    ಬೆಂಗಳೂರು: ಮೈತ್ರಿ ನಾಯಕತ್ವದ ಮೇಲೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿ ಮುಂಬೈನಲ್ಲಿದ್ದ 10 ಶಾಸಕರು ರಾಜೀನಾಮೆಯನ್ನು ಪರಿಗಣಿಸುವಂತೆ ಸೂಚನೆ ನೀಡಲು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೆ ಐವರು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗಾಗಲೇ 10 ಶಾಸಕರ ರಾಜೀನಾಮೆ ಕುರಿತ ಅಫಿಡವಿಟ್ ಸಲ್ಲಿಕೆ ಮಾಡಿದ್ದ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಂಗಳವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿತ್ತು. ಸದ್ಯ ಕಾಂಗ್ರೆಸ್ ಶಾಸಕರಾದ ರೋಷನ್ ಬೇಗ್, ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್, ಆನಂದ್ ಸಿಂಗ್, ಮುನಿರತ್ನ ಅವರು ಕೂಡ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿರುವುದರಿಂದ ಇವರ ಅರ್ಜಿಯನ್ನು ಇದೇ ವೇಳೆ ಪರಿಗಣಿಸುವ ಸಾಧ್ಯತೆ ಇದೆ.

    ಶಾಸಕರ ಮನವಿಯೇನು?: ಈ ಹಿಂದೆ 10 ಶಾಸಕರು ತಮ್ಮ ಅಫಿಡವಿಟ್‍ನಲ್ಲಿ ಪ್ರಸ್ತಾಪಿಸಿದ್ದ ಅಂಶಗಳನ್ನೇ ಈ ಐವರು ಕೂಡ ಪ್ರಸ್ತಾಪ ಮಾಡಿದ್ದಾರೆ. ನಿಯಮಾವಳಿಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆದರೆ ಇದುವರೆಗೂ ನಮ್ಮ ರಾಜೀನಾಮೆಯನ್ನು ಪರಿಗಣಿಸಿಲ್ಲ. ಅನಗತ್ಯವಾಗಿ ಸಮಯ ವ್ಯರ್ಥ ಮಾಡಲಾಗುತ್ತಿದೆ. ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕಾಗಿ ಸ್ವ-ಇಚ್ಛೆಯಿಂದಲೇ ರಾಜೀನಾಮೆ ಸಲ್ಲಿಸಿದ್ದೇವೆ. ನಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಅವರಿಗೆ ನಿರ್ದೇಶಿಸಬೇಕು ಎಂದು ಅಫಿಡವಿಟ್‍ನಲ್ಲಿ ಮನವಿ ಮಾಡಿದ್ದಾರೆ.

    ಅತೃಪ್ತ ನಾಯಕರ ಮನವೊಲಿಕೆಗೆ ಈಗಾಗಲೇ ದೋಸ್ತಿ ನಾಯಕರು ತೀವ್ರ ಪ್ರಯತ್ನ ನಡೆಸುತ್ತಿರುವುದರಿಂದ ಶಾಸಕರ ನಡೆ ಅಚ್ಚರಿ ಮೂಡಿಸಿದೆ. ಸಚಿವ ಎಂಟಿಬಿ ನಾಗರಾಜ್ ಅವರು ಮನವೊಲಿಕೆ ಸಂಬಂಧ ಯಾವುದೇ ಸ್ಪಷ್ಟ ಆಶ್ವಾಸನೆಯನ್ನು ನೀಡಿಲ್ಲ. ಪರಿಣಾಮ ಮಂಗಳವಾರ ನ್ಯಾಯಾಲಯ ಯಾವ ಅಭಿಪ್ರಾಯ ವ್ಯಕ್ತಪಡಿಸಲಿದೆ ಎಂಬುದು ಕೂಡ ತೀವ್ರ ಕುತೂಹಲ ಮೂಡಿಸಿದೆ. 10 ಶಾಸಕರ ಜೊತೆ ಮತ್ತೆ ಈ ಶಾಸಕರ ಅರ್ಜಿಯನ್ನು ಪರಿಗಣಿಸುತ್ತಾ ಎಂಬುದು ಕೂಡ ಕುತೂಹಲ ಮೂಡಿಸಿದೆ. ಆದರೆ ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮಾತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಬಿಜೆಪಿ ಶಾಸಕರ 3 ದಿನ ರೆಸಾರ್ಟ್ ವಾಸ್ತವ್ಯ- 1.15 ಕೋಟಿ ರೂ. ವೆಚ್ಚ

    ಬಿಜೆಪಿ ಶಾಸಕರ 3 ದಿನ ರೆಸಾರ್ಟ್ ವಾಸ್ತವ್ಯ- 1.15 ಕೋಟಿ ರೂ. ವೆಚ್ಚ

    ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಿದರೆ, ಇತ್ತ ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ತಮ್ಮ ಶಾಸಕರನ್ನೂ ರೆಸಾರ್ಟ್‍ಗೆ ಕಳುಹಿಸಿದೆ. ಬಿಜೆಪಿ ಶಾಸಕರ ಮೂರು ದಿನಗಳ ರೆಸಾರ್ಟ್ ವೆಚ್ಚ ಬರೋಬ್ಬರಿ 1.15 ಕೋಟಿ ರೂ. ಆಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬಿಜೆಪಿ ಶಾಸಕರು ಒಟ್ಟು ಎರಡು ರೆಸಾರ್ಟ್ ಗಳಲ್ಲಿ ತಂಗಿದ್ದಾರೆ. ರಮಡ ರೆಸಾರ್ಟ್ ನಲ್ಲಿ ಒಟ್ಟು 73 ಬಿಜೆಪಿ ಶಾಸಕರು ಹಾಗೂ ಸಾಯಿಲೀಲಾದಲ್ಲಿ 20 ಶಾಸಕರು ವಾಸ್ತವ್ಯ ಹೂಡಿದ್ದಾರೆ. ರಮಡದಲ್ಲಿ ಒಂದು ದಿನದ ವಾಸ್ತವ್ಯಕ್ಕೆ 30 ಸಾವಿರ ರೂ. ವೆಚ್ಚವಾಗುತ್ತದೆ. ಮಾತ್ರವಲ್ಲದೆ, ತಿಂಡಿ, ಊಟ, ಮಸಾಜ್ ಎಲ್ಲದಕ್ಕೂ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ.

    ಒಂದು ದಿನಕ್ಕೆ ಒಟ್ಟು ಬಿಜೆಪಿ ಶಾಸಕರ ವೆಚ್ಚ ಸುಮಾರು 35 ರಿಂದ 40 ಲಕ್ಷ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮೂರು ದಿನಗಳಿಗೆ ಎಲ್ಲ ಶಾಸಕರ ರೆಸಾರ್ಟ್ ವೆಚ್ಚ ಒಟ್ಟು 1.15 ಕೋಟಿ ರೂ.ಗೂ ಹೆಚ್ಚು ಆಗಲಿದೆ ಎಂದು ತಿಳಿದುಬಂದಿದೆ.

    ವಾಕಿಂಗ್, ಜಾಗಿಂಗ್ ಮೂಡ್‍ನಲ್ಲಿ ಶಾಸಕರು
    ರಾಜಾನುಕುಂಟೆ ಸಮೀಪದ ರಮಡ ರೆಸಾರ್ಟ್‍ನಲ್ಲಿ ತಂಗಿರುವ ಶಾಸಕರು ಬೆಳಗ್ಗೆ ಫ್ರೆಶ್ ಮೂಡ್‍ನಲ್ಲಿದ್ದಾರೆ. ಇಂದು ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಮಾಡುವ ಮೂಲಕ ತಮ್ಮ ದಿನವನ್ನು ಆರಂಭಿಸಿದ್ದಾರೆ. ಪರಸ್ಪರ ಮಾತನಾಡುತ್ತಾ, ಎಂಜಾಯ್ ಮಾಡುತ್ತಾ ತಮ್ಮ ದಿನವನ್ನು ಆರಂಭಿಸಿದ್ದಾರೆ.

    ರಾಜ್ಯ ರಾಜಕೀಯದಲ್ಲೀಗ ಮೂರು ಪಕ್ಷ, 3 ದಿನ, 3 ಪ್ಲಾನ್ ನಡೀತಿದೆ. ದೋಸ್ತಿ ಸರ್ಕಾರ ವಿಶ್ವಾಸಮತದ ವಿಶ್ವಾಸದಲ್ಲಿರುವ ಕಾರಣ ಬಿಜೆಪಿ ಶಾಕ್‍ಗೆ ಒಳಗಾಗಿ ರಿವರ್ಸ್ ಆಪರೇಷನ್ ಭಯದಿಂದ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ. ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ಸಿಕ್ಕಿಲ್ಲ. ಹೀಗಾಗಿ ಗೊರಗುಂಟೆಪಾಳ್ಯದ ತಾಜ್ ವಿವಾಂತ ಹೋಟೆಲ್‍ನಲ್ಲಿ ತನ್ನ ಶಾಸಕರನ್ನು ಕಾಂಗ್ರೆಸ್ ಇರಿಸಿದೆ. ಜೆಡಿಎಸ್ ಶಾಸಕರು ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್‍ಶೈರ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ಸದನ ಆರಂಭವಾಗುವವರೆಗೆ ಎಲ್ಲರನ್ನು ರೆಸಾರ್ಟ್ ಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಲ್ಲದೆ ಎಲ್ಲಾ ಕಡೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.

     

  • ವಿಶ್ವಾಸ ಮತಯಾಚನೆ ಮೈತ್ರಿ ಸರ್ಕಾರದ ಪಿತೂರಿಯ ಒಂದು ಭಾಗ: ಬಿಎಸ್‍ವೈ

    ವಿಶ್ವಾಸ ಮತಯಾಚನೆ ಮೈತ್ರಿ ಸರ್ಕಾರದ ಪಿತೂರಿಯ ಒಂದು ಭಾಗ: ಬಿಎಸ್‍ವೈ

    – ಕೆಲವೇ ದಿನಗಳಲ್ಲಿ ಸರ್ಕಾರ ಬೀಳುವುದು ನಿಶ್ಚಿತ

    ಬೆಂಗಳೂರು: ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿರುವುದು ಉಳಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಟ್ಟು ಹೋಗುವುದನ್ನು ತಡೆಯಲು ಮಾಡಿರುವ ವ್ಯವಸ್ಥಿತ ಪಿತೂರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹರಿಹಾಯ್ದಿದ್ದಾರೆ.

    ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದು ಉಳಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಹೋಗುವುದನ್ನು ತಡೆಯಲು ಸಿಎಂ ಮಾಡಿರುವ ವ್ಯವಸ್ಥಿತ ರಾಜಕೀಯ ಪಿತೂರಿ ಎಂದು ಕಿಡಿ ಕಾರಿದ್ದಾರೆ.

    ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಬಹುಮತ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವೇ ಇಲ್ಲ. ವಾತವರಣ ನಮಗೆ ಅನುಕೂಲಕರವಾಗಿದೆ. ಆದರೂ ವಿಶ್ವಾಸಮತ ಯಾಚಿಸುವ ಧೈರ್ಯ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರ ಕೆಲವೇ ದಿನಗಳಲ್ಲಿ ಬೀಳೋದು ನಿಶ್ಚಿತ ಎಂದು ಹೇಳಿದರು. ಇಂದು ರೆಸಾರ್ಟ್‍ಗೆ ತೆರಳಿ ನಮ್ಮ ಶಾಸಕರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

    ಶುಕ್ರವಾರ ಸದನದಲ್ಲಿ ಸಿಎಂ ಮಾತನಾಡಿ, ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತ ಮಂಡನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದಿದ್ದರು. ಸದನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಸಿಎಂ ಮಾತನ್ನು ಕೇಳಿದ ತಕ್ಷಣ ಕಲಾಪದ ಮಧ್ಯೆ ತಮ್ಮ ಕೊಠಡಿಗೆ ಎದ್ದು ಹೋದ ಬಿಎಸ್‍ವೈ ಕೆಲ ಬಿಜೆಪಿ ಶಾಸಕರೊಂದಿಗೆ ಚರ್ಚೆ ಮಾಡಿದ್ದರು.

  • ಸಮ್ಮಿಶ್ರ ಸರ್ಕಾರಕ್ಕೆ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ – ಸತೀಶ್ ಜಾರಕಿಹೂಳಿ

    ಸಮ್ಮಿಶ್ರ ಸರ್ಕಾರಕ್ಕೆ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ – ಸತೀಶ್ ಜಾರಕಿಹೂಳಿ

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರಕ್ಕೆ ಅತೃಪ್ತತೆಯ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ. ನಾವು ಬೆಂಕಿ ಹಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಎಂದೂ ರೆಸಾರ್ಟಿಗೆ ಹೋದವನಲ್ಲ, ಹಾಗಾಗಿ ರೆಸಾರ್ಟಿಗೆ ಹೋಗಲ್ಲ. ನಾನು ನನ್ನ ಊರು ಬೆಳಗಾವಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

    ಅತೃಪ್ತ ಶಾಸಕರು ಯಾರೂ ಬಿಜೆಪಿಯವರಲ್ಲ. ಕಾಂಗ್ರೆಸ್-ಜೆಡಿಎಸ್‍ನ ನಮ್ಮ ಅರ್ಧಕ್ಕೂ ಹೆಚ್ಚು ಶಾಸಕರು ವಾಪಸ್ ಬರುತ್ತಾರೆ. ಸಿಎಂ ಸಹ ಸಚಿವ ಸಂಪುಟ ಸಭೆಯಲ್ಲಿ ಅಭಯ ನೀಡಿದ್ದಾರೆ. ನೀವು ಯಾರು ಹೆದರಬೇಡಿ ಎಂದು ಮುಖ್ಯಮಂತ್ರಿ ನಮಗೆ ಆಭಯ ನೀಡಿದ್ದಾರೆ ಎಂದು ತಿಳಿಸಿದರು.

  • 500 ಕೋಟಿ ಲಂಚ – ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

    500 ಕೋಟಿ ಲಂಚ – ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

    – ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಂತೆ ವಿ.ಆರ್.ವಾಲಾ ಆದೇಶ

    ಬೆಂಗಳೂರು: ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿದ್ದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ಲೋಕೋಪಯೋಗಿ ಇಲಾಖೆಯಲ್ಲಿ ಸೋಮವಾರ ಸುಮಾರು 800 ಜನ ಎಂಜಿನಿಯರ್ ಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿದ್ದು, ಇದಕ್ಕಾಗಿ 500 ಕೋಟಿ ರೂ. ಹಣ ಪಡೆದಿದ್ದಾರೆ. ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಸಮುದಾಯದ ಎಂಜಿನಿಯರ್ ಗಳು ವರ್ಗಾವಣೆ ಮಾಡಿಸಿಕೊಳ್ಳಲು ಒಂದು ವರ್ಷದಿಂದ ಕಾಯುತ್ತಿದ್ದರು. ಇಂತಹ ಸಮಯದಲ್ಲಿ ಹಣ ಪಡೆದು ಏಕಾಏಕಿ ಮನಬಂದಂತೆ ಎಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ, ಸರ್ಕಾರ ಮಾಡಿರುವ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರಿಗೆ ಲಿಂಗಮೂರ್ತಿ ದೂರು ನೀಡಿದ್ದಾರೆ.

    ರಾಜ್ಯಪಾಲರ ಚಾಟಿ: ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಈ ಹಿಂದೆ ಬಿಜೆಪಿ ಸಹ ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಸೂಚನೆ ಹೊರಡಿಸಿದ್ದಾರೆ.

    ಏನಿದು ಪ್ರಕರಣ?
    ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣ ಇಲಾಖೆಯಲ್ಲಿ ಬುಧವಾರ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿತ್ತು.

    ಈ ಹಿಂದೆ ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದರು. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದ್ದವು.

  • ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ – ಕೆ.ಬಿ.ಕೋಳಿವಾಡ

    ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ – ಕೆ.ಬಿ.ಕೋಳಿವಾಡ

    ಹಾವೇರಿ: ರಾಜ್ಯದಲ್ಲಿ ಇವತ್ತಿನ ರಾಜಕೀಯ ಪರಿಸ್ಥಿತಿಗೆ ಮಾಜಿ ಮುಖ್ಯಮಂತ್ರಿ ಕಾರಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅಸಮಾಧಾನ ಹೊರಹಾಕಿದ್ದಾರೆ.

    ಇಂದು ರಾಣೇಬೆನ್ನೂರಿನಲ್ಲಿ ಅವರ ನಿವಾಸದಲ್ಲಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತಿನ ರಾಜಕೀಯ ವಿಚಾರದ ಹಿಂದೆ ಯಾರಿದ್ದಾರೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅದನ್ನು ನನ್ನ ಬಾಯಿಂದ ಏಕೆ ಹೇಳಿಸ್ತೀರಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ.

    ರಾಜೀನಾಮೆ ನೀಡಿರುವ ಶಾಸಕ ಆರ್.ಶಂಕರ್ ಬಗ್ಗೆ ಮಾತನಾಡಿ, ನಾನು ಅವತ್ತೇ ಅವರು ಪಕ್ಷ ಸೇರ್ಪಡೆ ಆಗುವುದನ್ನು ವಿರೋಧಿಸಿದ್ದೆ. ಆರ್.ಶಂಕರ್ ಆಯಾ ರಾಮ ಗಯಾ ರಾಮ ಇದ್ದಂತೆ. ರಾಣೇಬೆನ್ನೂರು ಕ್ಷೇತ್ರದಿಂದ ಆಯ್ಕೆ ಆದವರ ಪೈಕಿ ಈವರೆಗೆ ಯಾರೂ ಶಂಕರ್ ರೀತಿಯ ರಾಜಕಾರಣ ಮಾಡಿಲ್ಲ. ಶಾಸಕ ಶಂಕರ್ ತಾಲೂಕಿನ ಜನರ ಮಾನ ಹರಾಜು ಹಾಕಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

    ಪ್ರಸ್ತುತ ರಾಜಕೀಯ ಬೆಳವಣಿಗೆ ಬೇಸರ ತರಿಸಿದೆ. ಸಮ್ಮಿಶ್ರ ಸರ್ಕಾರದ ಬದಲು ಪ್ರತಿಪಕ್ಷದ ಸ್ಥಾನದಲ್ಲಿ ಕೂರೋದು ಒಳ್ಳೆಯದು. ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಹೋರಾಟ ಮಾಡೋಣ ಎಂದು ಹೇಳಿದರು.

  • ಸ್ಪೀಕರ್ ವಿಳಂಬ ಅಸ್ತ್ರಕ್ಕೆ ಬಿಜೆಪಿ ಪ್ರತಿ ಅಸ್ತ್ರ – ಸರ್ಕಾರ ರಚಿಸಲು ಬಿಜೆಪಿ ಮಾಸ್ಟರ್ ಪ್ಲಾನ್

    ಸ್ಪೀಕರ್ ವಿಳಂಬ ಅಸ್ತ್ರಕ್ಕೆ ಬಿಜೆಪಿ ಪ್ರತಿ ಅಸ್ತ್ರ – ಸರ್ಕಾರ ರಚಿಸಲು ಬಿಜೆಪಿ ಮಾಸ್ಟರ್ ಪ್ಲಾನ್

    ಬೆಂಗಳೂರು: ಶಾಸಕರ ರಾಜೀನಾಮೆ ಸದ್ಯ ಅಂಗೀಕಾರ ಆಗುವುದಿಲ್ಲ ಎಂಬುದನ್ನು ಅರಿತ ಬಿಜೆಪಿ, ಸರ್ಕಾರ ರಚಿಸಲು ಅಗತ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಹುಡುಕುತ್ತಿದೆ.

    ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದಿದ್ದರೂ ಶಾಸಕರ ರಾಜೀನಾಮೆ ಅಂಗೀಕಾರ ಆಗುವವರೆಗೆ ಬಿಜೆಪಿ ಕಾಯಲೇಬೇಕಾಗಿದೆ. ಹೀಗಾಗಿ ರಾಜೀನಾಮೆ ಅಂಗೀಕಾರಕ್ಕೆ ಎಲ್ಲ ಮಾರ್ಗಗಳನ್ನೂ ಬಿಜೆಪಿ ಸೃಷ್ಟಿಸುತ್ತಿದ್ದು, ಸಂದರ್ಭಕ್ಕೆ ತಕ್ಕಂತೆ ದಾಳ ಉರುಳಿಸಲು ಯೋಜನೆ ರೂಪಿಸಿದೆ. ಮೈತ್ರಿ ನಾಯಕರ ತಂತ್ರಗಳಿಗೆ ಪ್ರತಿ ತಂತ್ರ ಒಡ್ಡಲು ಬಿಜೆಪಿ ತಯಾರಿ ಮಾಡಿಕೊಂಡಿದೆ.

    ಕಾನೂನು ಮಾರ್ಗ, ಶಾಸಕರ ರಾಜೀನಾಮೆಯನ್ನು ಬೇಗ ಅಂಗೀಕರಿಸುವಂತೆ ಒತ್ತಡ ಹೇರುವುದು, ಕೇಂದ್ರದ ನೆರವು, ರಾಜ್ಯಪಾಲರ ಮೇಲೆ ಒತ್ತಡ, ಮೈತ್ರಿ ಪಕ್ಷಗಳ ಅತೃಪ್ತ ಶಾಸಕರ ಮೇಲಿನ ಹಿಡಿತ ಕಾಯ್ದುಕೊಳ್ಳುವ ಮೂಲಕ ಅತೃಪ್ತರು ಕೈ ಜಾರದಂತೆ ನಿಗಾ ವಹಿಸುವುದು, ಮೈತ್ರಿ ನಾಯಕರ ತಂತ್ರಗಳಿಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ರೀತಿಯ ತಂತ್ರಗಳನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ತಿಳಿದು ಬಂದಿದೆ.

    ಸದ್ಯ ರಾಜೀನಾಮೆ ನೀಡಿರುವ 13 ಅತೃಪ್ತರು ನಮ್ಮ ಪಕ್ಷವನ್ನು ಸೇರಲಿದ್ದಾರೆ ಎನ್ನುವುದನ್ನು ಬಿಜೆಪಿ ನಂಬಿಲ್ಲ. ಹೀಗಾಗಿ ಮೈತ್ರಿ ಪಕ್ಷಗಳ ಅತೃಪ್ತರ ಪೈಕಿ ನಂಬಿಕಸ್ತ ಶಾಸಕರು ಯಾರು ಎಂದು ಪತ್ತೆ ಹಚ್ಚುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ಸ್ಪಷ್ಟವಾಗಿ ತಿಳಿಯಬೇಕಾದರೆ ಅಧಿವೇಶನದವರೆಗೆ ಕಾಯಬೇಕು. ಹೀಗಾಗಿ ಬಿಜೆಪಿ ನಾಯಕರು ಅಧಿವೇಶನದವರೆಗೆ ತಟಸ್ಥವಾಗಿ ಉಳಿಯಲು ಮುಂದಾಗಿದ್ದಾರೆ.

    ಬಹುಮತ ಸಾಬೀತುಪಡಿಸುವ ದಿನ ಯಾವ ಶಾಸಕರು, ಯಾರ ಪರ ಇದ್ದಾರೆ ಎಂಬುದನ್ನು ತಿಳಿದು ಅವರನ್ನಷ್ಟೇ ಪಕ್ಷಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ಮುಂದಾಗಿದೆ. ಎರಡು ಬಾರಿ ಆಪರೇಷನ್ ಕಮಲ ಪ್ರಯತ್ನ ವಿಫಲವಾದ ಹಿನ್ನೆಲೆ ಬಿಜೆಪಿ ಈ ಬಾರಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಅನುಸರಿಸಿ ಪ್ಲಾನ್ ವಿಫಲವಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯನ್ನಿಡುತ್ತಿದೆ ಎಂದು ತಿಳಿದು ಬಂದಿದೆ.

  • ದಿಢೀರ್ ಸ್ಥಳ ಬದಲಾವಣೆ – ದೇವನಹಳ್ಳಿಗೆ ಜೆಡಿಎಸ್ ಶಾಸಕರು ಶಿಫ್ಟ್

    ದಿಢೀರ್ ಸ್ಥಳ ಬದಲಾವಣೆ – ದೇವನಹಳ್ಳಿಗೆ ಜೆಡಿಎಸ್ ಶಾಸಕರು ಶಿಫ್ಟ್

    ಬೆಂಗಳೂರು: ಶಾಸಕರ ಸರಣಿ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕರು ಕೊಡಗಿನ ರೆಸಾರ್ಟ್‍ಗೆ ಹೋಗಲು ಸಕಲ ಸಿದ್ಧತೆ ನಡೆದಿತ್ತು. ಆದರೆ ಈಗ ದಿಢೀರ್ ನಿರ್ಧಾರ ಬದಲಾವಣೆ ಮಾಡಿ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ತಂಗಿದ್ದಾರೆ.

    ಆಪರೇಷನ್ ಕಮಲದ ಭೀತಿಯಿಂದ ತಮ್ಮ ಶಾಸಕರನ್ನು ರಕ್ಷಿಸಲು ಸೋಮವಾರಪೇಟೆ ತಾಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟ್‍ನಲ್ಲಿ ತಂಗಲು ರೂಂ ಬುಕ್ ಮಾಡಿದ್ದರು. ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಂ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಮಡಿಕೇರಿಗೆ ಪ್ರಯಾಣ ಮಾಡಲು ತುಂಬ ಸಮಯ ಬೇಕು ಮತ್ತು ಏನಾದರೂ ದಿಢೀರ್ ಬದಲಾವಣೆಯಾದರೆ ತಕ್ಷಣ ಬೆಂಗಳೂರಿಗೆ ಬರುವುದು ಕಷ್ಟ ಎಂಬ ಕಾರಣಕ್ಕೆ ಹತ್ತಿರದ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟಿಗೆ ಜೆಡಿಎಸ್ ಹೋಗಿದ್ದಾರೆ ಎನ್ನಲಾಗಿದೆ. ಶಾಸಕರು ತಂಗಿರುವ ರೆಸಾರ್ಟಿಗೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

    ಡಾ.ಶ್ರೀನಿವಾಸ್ ಮೂರ್ತಿ, ಸುರೇಶ್ ಗೌಡ, ಬಂಡೆಪ್ಪ ಕಾಶಂಪೂರ್, ನಾಗನಗೌಡ ಕಂದಕೂರು, ಗೌರಿ ಶಂಕರ್, ವೆಂಕಟರಾವ್ ನಾಡಗೌಡ, ನಿಸರ್ಗ ನಾರಾಯಣಸ್ವಾಮಿ, ರಾಜಾ ವೆಂಕಟಪ್ಪ ನಾಯಕ, ಸಾರಾ ಮಹೇಶ್, ಸುರೇಶ್ ಗೌಡ, ಸತ್ಯ ನಾರಾಯಣ, ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ, ಪುಟ್ಟರಾಜು, ಡಿಸಿ ತಮ್ಮಣ್ಣ, ಲಿಂಗೇಶ್, ಮಹದೇವ್, ಬಾಲಕೃಷ್ಣ. ಮನಗೂಳಿ, ಎಚ್.ಕೆ.ಕುಮಾರಸ್ವಾಮಿ, ಕೃಷ್ಣಾ ರೆಡ್ಡಿ ರೆಸಾರ್ಟಿನಲ್ಲಿ ತಂಗಿದ್ದಾರೆ.

    ರವೀಂದ್ರ ಶ್ರೀಕಂಠಯ್ಯ, ಮಂಜುನಾಥ, ಅನಿತಾ ಕುಮಾರಸ್ವಾಮಿ, ಮಾಗಡಿ ಮಂಜುನಾಥ್, ಎಚ್.ಡಿ.ರೇವಣ್ಣ, ಎಟಿ ರಾಮಸ್ವಾಮಿ, ಜಿಟಿ ದೇವೇಗೌಡ, ಶ್ರೀನಿವಾಸ ಗೌಡ, ಶಿವಲಿಂಗೇಗೌಡ, ಅಶ್ವಿನ್ ಕುಮಾರ್, ಎಂ ಶ್ರೀನಿವಾಸ್ ಗೈರಾಗಿದ್ದಾರೆ.