Tag: alliance government

  • ಒಂದು ವರ್ಷ ಎರಡು ತಿಂಗಳ ಅನೈತಿಕ ಸಂಬಂಧ ಇಂದಿಗೆ ಅಂತ್ಯ – ಉಮೇಶ್ ಕತ್ತಿ

    ಒಂದು ವರ್ಷ ಎರಡು ತಿಂಗಳ ಅನೈತಿಕ ಸಂಬಂಧ ಇಂದಿಗೆ ಅಂತ್ಯ – ಉಮೇಶ್ ಕತ್ತಿ

    ಬೆಂಗಳೂರು: ಮೈತ್ರಿ ಸರ್ಕಾರದ ಒಂದು ವರ್ಷ ಎರಡು ತಿಂಗಳ ಅನೈತಿಕ ಸಂಬಂಧ ಮುರಿದು ಹೋಯ್ತು ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ವ್ಯಂಗ್ಯವಾಡಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡಲು ಅನೈತಿಕ ಸಂಬಂಧ ಬೆಳೆಸಿಕೊಂಡು ಬಂದರು. ಒಂದು ವರ್ಷ ಎರಡು ತಿಂಗಳಿಗೆ ಅದು ಬಿದ್ದು ಹೋಯ್ತು. ಮುಂದೆ ಹೊಸ ಸರ್ಕಾರ ರಚನೆ ಮಾಡುತ್ತೇವೆ ಮತ್ತು ಉತ್ತಮ ಆಡಳಿತ ಕೊಡುತ್ತೇವೆ ಎಂದು ಹೇಳಿದರು.

    ಕಾಂಗ್ರೆಸ್, ಜೆಡಿಎಸ್ ಅನೈತಿಕ ಸಂಬಂಧ ಇಂದಿಗೆ ಅಂತ್ಯವಾಗಿದೆ. ಈ ಸಂಬಂಧ ಅಂತ್ಯವಾಗಲು ಸಿದ್ದರಾಮಯ್ಯ ಎಂದ ಅವರು, ಸರ್ಕಾರ ರಚನೆ ಮಾಡಲು ರಾಜ್ಯಪಾಲರನ್ನು ಭೇಟಿ ಆಗುತ್ತೇವೆ. ಇಲ್ಲದೆ ಇದ್ದರೆ ಮತ್ತೊಂದು ಚುನಾವಣೆಗೂ ಹೋಗಲು ನಾವು ಸಿದ್ಧ ಎಂದು ಹೇಳಿದರು.

  • ನಾನು ಅತೃಪ್ತ ಬಣದಲ್ಲಿ ಇಲ್ಲ, ಮೈತ್ರಿ ಸರ್ಕಾರ ಅಪಾಯದಲ್ಲಿದೆ – ಸುಧಾಕರ್

    ನಾನು ಅತೃಪ್ತ ಬಣದಲ್ಲಿ ಇಲ್ಲ, ಮೈತ್ರಿ ಸರ್ಕಾರ ಅಪಾಯದಲ್ಲಿದೆ – ಸುಧಾಕರ್

    ಬೀದರ್: ನಾನು ಅತೃಪ್ತ ಬಣದಲ್ಲಿ ಇಲ್ಲ. ಆದರೆ ಮೈತ್ರಿ ಸರ್ಕಾರ ನಿಜವಾಗಿಯೂ ಅಪಾಯದಲ್ಲಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ನನಗೆ ಆಚ್ಚರಿ ತಂದಿದೆ. ಈ ಹಿಂದೆ ನನ್ನ ಜೊತೆ ಮಾತನಾಡಿದಾಗ ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದರು. ಅವರ ಈ ನಿರ್ಣಾಯವನ್ನು ನನಗೆ ನಂಬಲು ಆಗುತ್ತಿಲ್ಲ ಎಂದು ತಿಳಿಸಿದರು.

    ಇದು ಏಕಾಏಕಿಯಾಗಿ ಆದ ಬೆಳವಣಿಗೆ ಅಲ್ಲ. ಸುಮಾರು 13 ತಿಂಗಳಿನಿಂದ ನಡೆಯುತ್ತಿರುವ ನಿರಂತರ ಪ್ರಕ್ರಿಯೆ ಇದು. ವೈಯಕ್ತಿಕ ಹಿತಾಸಕ್ತಿಗಳನ್ನು ಎಲ್ಲಾ ರಾಜಕಾರಣಿಗಳು ಇಟ್ಟುಕೊಂಡಿರುತ್ತಾರೆ. ನಮ್ಮ ವೈಯಕ್ತಿಕ ಆಸೆಗಳಿಗೆ ತೃಪ್ತಿ ಪಡೆಸಲು ಸಮ್ಮಿಶ್ರ ಸರ್ಕಾರದಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ಅಸಮಾಧಾನ, ಅತೃಪ್ತಿ ಮತ್ತು ಭಿನ್ನಾಭಿಪ್ರಾಯಗಳು ಈ ಸಮ್ಮಿಶ್ರ ಸರ್ಕಾರದಲ್ಲಿ ಇದ್ದವು ಎಂದು ತಿಳಿಸಿದರು.

    ಇದರ ಜೊತೆಗೆ ಮೈತ್ರಿ ಸರ್ಕಾರ ಕೂಡಾ ಶಾಸಕರ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರೆ ಈ ರೀತಿ ಆಗುತ್ತಿರಲ್ಲಿಲ್ಲ ಎಂದು ಡಾ.ಕೆ ಸುಧಾಕರ್ ಅವರು ಅಭಿಪ್ರಾಯಪಟ್ಟರು.

  • ಪಕ್ಷ ಬಿಡೋದಕ್ಕೆ ನಮಗೂ ದುಃಖವಾಗಿದೆ: ರಾಮಲಿಂಗಾ ರೆಡ್ಡಿ

    ಪಕ್ಷ ಬಿಡೋದಕ್ಕೆ ನಮಗೂ ದುಃಖವಾಗಿದೆ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಪಕ್ಷ ಬಿಟ್ಟು ಹೋಗಲು ನಮಗೂ ತುಂಬಾ ದು:ಖವಾಗುತ್ತಿದೆ. ಆದರೆ ನನಗೆ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ಬೇಸರವಿಲ್ಲ ಎಂದು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗ ರೆಡ್ಡಿ, ನಾನು ಮೊದಲಿನಿಂದ ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ನಾನು ಈಗ ಬಂದು ರಾಜೀನಾಮೆ ಕೊಡುತ್ತಿದ್ದೇನೆ. ಒಳಗಡೆ ಯಾರೆಲ್ಲ ಇದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಈಶ್ವರ ಖಂಡ್ರೆ ಅವರು, ನೀವೇ ಪಕ್ಷ ಕಟ್ಟಿ ಬೆಳೆಸಿದ್ದೀರಿ, ಪಕ್ಷ ಬಿಡುವುದು ಬೇಡ ಎಂದು ಹೇಳಿದರು. ಆದರೆ ನಾವು ಅವರಿಗೆ ಈ ಹಿಂದೆಯೇ ರಾಜೀನಾಮೆ ಕೊಡಲು ಕಾರಣ ಹೇಳಿದ್ದೇನೆ. ಪಕ್ಷ ಬಿಟ್ಟು ಹೋಗಲು ನಮಗೂ ತುಂಬಾ ದು:ಖವಾಗುತ್ತಿದೆ. ಆದರೆ ನನಗೆ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ಬೇಸರವಿಲ್ಲ. ಹೀಗಾಗಿ ಈ ಹಿಂದೆಯೇ ರಾಜೀನಾಮೆಯ ಬಗ್ಗೆ ಕಾರಣಗಳನ್ನು ಹೇಳಿದ್ದೇನೆ. ತಕ್ಷಣಕ್ಕೆ ಬೇರೆ ಪಕ್ಷಕ್ಕೆ ಸೇರುವ ಯೋಚನೆ ಮಾಡಿಲ್ಲ ಎಂದು ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ವೇಳೆ ರಾಜೀನಾಮೆ ನೀಡಲು ಕಾರಣ ಏನು ಎನ್ನುವುದನ್ನು ಕೇಳಿದ್ದಕ್ಕೆ ಈ ಹಿಂದೆಯೇ ನಾನು ಹಲವಾರು ಸಂದರ್ಭದಲ್ಲಿ ಹೇಳಿದ್ದೇವೆ. ಅದೇ ವಿಡಿಯೋವನ್ನು ಪ್ರಸಾರ ಮಾಡಿ ಎಂದು ತಿಳಿಸಿದರು.

    ಪುತ್ರಿ ಸೌಮ್ಯಾ ರೆಡ್ಡಿ ರಾಜೀನಾಮೆ ನೀಡುತ್ತಾರಾ ಎಂದು ಕೇಳಿದ್ದಕ್ಕೆ, ಈ ವಿಚಾರ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ನೋಡಿ ಎಂದು ತಿಳಿಸಿದರು.

  • ಸಿಎಂ ಅಮೆರಿಕದಲ್ಲಿರುವಾಗ ಬಿಜೆಪಿಯಿಂದ ಆಪರೇಷನ್ ಬಾಂಬ್ -ಶೀಘ್ರ ಬಿಜೆಪಿ ಸರ್ಕಾರ ಎಂದ ಡಿವಿಎಸ್

    ಸಿಎಂ ಅಮೆರಿಕದಲ್ಲಿರುವಾಗ ಬಿಜೆಪಿಯಿಂದ ಆಪರೇಷನ್ ಬಾಂಬ್ -ಶೀಘ್ರ ಬಿಜೆಪಿ ಸರ್ಕಾರ ಎಂದ ಡಿವಿಎಸ್

    ಬೆಂಗಳೂರು: ಸಿಎಂ ಅವರು ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಆದರೆ ಇತ್ತ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದ್ದು, ಆಪರೇಷನ್ ಕಮಲದ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಸುಳಿವು ಕೊಟ್ಟಿದ್ದಾರೆ.

    ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ಇತ್ತ ಸರ್ಕಾರ ರಚನೆಗೆ ಕಾಲ ಕೂಡಿಬರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ನಾಗೇಂದ್ರನನ್ನು ಸಿ.ಪಿ ಯೋಗೇಶ್ವರ್ ಭೇಟಿಯಾಗಿದ್ದಾರೆ.

    ಬೆಂಗಳೂರಿನ ಬಂಟರ ಸಂಘದಲ್ಲಿ ಮಾತನಾಡಿದ ಡಿವಿಎಸ್, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇರಬಹುದು. ಆದರೆ ಲೋಕಸಭಾ ಚುನಾವಣೆ ನಡೆದಾಗ, ನಮಗೆ ಅವರ ಮೇಲೆ ವಿಶ್ವಾಸ ಇಲ್ಲ. ನಮಗೆ ನಿಮ್ಮ ಮೇಲೆ ವಿಶ್ವಾಸವಿದೆ. ಹೀಗಾಗಿ 28 ರಲ್ಲಿ 26 ಸ್ಥಾನಗಳನ್ನು ಕೊಟ್ಟಿದ್ದೇನೆ. ಈ ರಾಜ್ಯದ ಮುಂದಿನ ಆಗುಹೋಗುಗಳಿಗೆ ಪರೋಕ್ಷವಾಗಿ ನೀವೇ ಜವಬ್ದಾರರಾಗಬೇಕೆಂಬ ಸಂದೇಶವನ್ನು ಈ ರಾಜ್ಯದ ಜನರು ಕೊಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು.

    ಕರ್ತವ್ಯಕ್ಕೆ ಮೊದಲ ಆದ್ಯತೆ, ನಂತರ ಅಧಿಕಾರ ಎರಡನೇಯದು. ಒಬ್ಬ ಎಂಎಲ್‍ಎ ಆಗಿ ನಾನು ಏನು ಮಾಡಬೇಕು, ಕೇಂದ್ರ ಸಚಿವನಾಗಿ ರಾಜ್ಯಕ್ಕೆ ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ. ನನ್ನ ಪಕ್ಷದ ಘಟನೆ-ಗೌರವವನ್ನು ಎತ್ತಿ ಹಿಡಿಯುತ್ತೇನೆ. ಅತ್ಯಂತ ಶೀಘ್ರವಾಗಿ ಕರ್ನಾಟಕದಲ್ಲೂ ಕೂಡ ನಮ್ಮ ಸರ್ಕಾರ ಬರುತ್ತದೆ. ಬಿಜೆಪಿ ಸರ್ಕಾರ ಬಂದಾಗ ರಾಜ್ಯ ಮತ್ತು ಕೇಂದ್ರ ಒಂದೇ ದಿಸೆಯಲ್ಲಿ ಮುಂದೆಹೋಗುವಂತೆ ಆಗುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಡಿವಿಎಸ್ ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

    ಸರ್ಕಾರ ಸತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಬರ ಇರುವಾಗ ಅಮೆರಿಕಾ ಪ್ರವಾಸ ಬೇಕಿತ್ತಾ? ಕರ್ನಾಟಕ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಇದನ್ನು ಬಹಳ ಸಮಯ ಸಹಿಸಿಕೊಳ್ಳಲು ಸಾದ್ಯವಿಲ್ಲ. ಯಾವ ಸಮಯದಲ್ಲಾದರೂ ಸರ್ಕಾರ ಬೀಳಬಹುದು. ನಾವು ಯಾವ ಎಂಎಲ್‍ಎ ಅನ್ನು ಬನ್ನಿ ಎಂದು ಕರೆಯುತ್ತಿಲ್ಲ. ಅವರೇ ಬಿಟ್ಟು ಬಂದು ಸರ್ಕಾರ ಬಿದ್ದರೆ, ನಾವು ಅದಕ್ಕೆ ಜವಬ್ದಾರರಲ್ಲ. 13ನೇ ತಿಂಗಳಿಗೇ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಿಮಗೆ ಯೋಗ್ಯತೆ ಇದ್ದರೆ ಸರಿಯಾಗಿ ಆಡಳಿತ ನಡೆಸಿ, ಇಲ್ಲ ಆಡಳಿತವನ್ನು ಬಿಟ್ಟು ಹೋಗಿ. ರಾಜ್ಯದ ಮತದಾರರು ಚುನಾವಣೆಗೆ ಸಿದ್ಧರಿಲ್ಲ. ಅವರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಯಡಿಯೂರಪ್ಪ ಆಕ್ರೋಶದಿಂದ ಮಾತನಾಡಿದರು.

  • ಐಎಂಎ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು – ಸಂಸದ ರಮೇಶ್ ಜಿಗಜಿಣಗಿ

    ಐಎಂಎ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು – ಸಂಸದ ರಮೇಶ್ ಜಿಗಜಿಣಗಿ

    -ಗ್ರಾಮ ವಾಸ್ತವ್ಯ ಅನ್ನೋದು ನಾಟಕ

    ವಿಜಯಪುರ: ಜನರಿಂದ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಚನೆ ಮಾಡಿರುವ ಐಎಂಎ ಕಂಪನಿಯ ಪ್ರಕರಣದಲ್ಲಿ ತನಿಖೆಯ ನಂತರ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಈ ರೀತಿಯ ವಂಚನೆ ಮಾಡಿರುವುದರಿಂದ ಇದೊಂದು ಹೇಯ ಕೃತ್ಯ. ಬಡ್ಡಿ ಹಣದ ಆಸೆಗೆ ಜನರು ಮರುಳಾಗಬಾರದು. ಈ ರೀತಿಯ ವ್ಯವಹಾರ ಮಾಡುವವರ ವಿರುದ್ಧ ಸರ್ಕಾರ ನಿಗಾವಹಿಸಬೇಕು ಎಂದು ತಿಳಿಸಿದರು.

    ಇದೇ ವೇಳೆ ಶುಕ್ರವಾರ ನಡೆಯಲಿರುವ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿ, ದೋಸ್ತಿ ಸರ್ಕಾರಕ್ಕೆ ಜನರ ಹಾಗೂ ಗೋವುಗಳ ಪಾಪ ತಟ್ಟಿದೆ. ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಮೈತ್ರಿ ಸರ್ಕಾರದ ಕಡೆ ಒಂದು ರೂಪಾಯಿ ಕೂಡಾ ಇಲ್ಲ ಎಂದು ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಸಿಎಂ ಗ್ರಾಮ ವಾಸ್ತವ್ಯ ಅನ್ನೋದು ನಾಟಕ. ಈ ಹಿಂದೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ ಯಾವ ಊರು ಅಭಿವೃದ್ಧಿ ಆಗಿಲ್ಲ. ಜನರು ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ. ಅದಕ್ಕಾಗಿ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದು ಸಿಎಂ ವಿರುದ್ಧ ಕಿಡಿಕಾರಿದರು.

  • ಕೆಎಂಎಫ್ ಅಧ್ಯಕ್ಷರಾಗಲು ಹೆಚ್.ಡಿ ರೇವಣ್ಣ ಪ್ರಯತ್ನ?

    ಕೆಎಂಎಫ್ ಅಧ್ಯಕ್ಷರಾಗಲು ಹೆಚ್.ಡಿ ರೇವಣ್ಣ ಪ್ರಯತ್ನ?

    – ಮೈತ್ರಿ ಸರ್ಕಾರದಲ್ಲಿ ಮತ್ತೆ ಬಿರುಕು

    ಕಲಬುರಗಿ: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷರಾಗಲು ಸಚಿವ ಹೆಚ್.ಡಿ ರೇವಣ್ಣ ಇದೀಗ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಸಚಿವರ ಕನಸಿಗೆ ಬ್ರೇಕ್ ನೀಡಲು ರಣತಂತ್ರ ರೂಪಿಸುತ್ತಿದೆ ಎಂಬ ಮಾಹಿತಿ ಮೈತ್ರಿ ಅಂಗಳದಲ್ಲಿ ಹರಿದಾಡುತ್ತಿದೆ.

    ಅಧ್ಯಕ್ಷ ಸ್ಥಾನ ಮತ್ತೆ ಪಡೆಯಲು ರಾಜ್ಯದ ಒಟ್ಟು 13 ಹಾಲು ಒಕ್ಕೂಟ ಮಂಡಳಿಗಳಿಂದ ತಮಗೇ ಬೆಂಬಲಿಸುವರನ್ನೇ ರಾಜ್ಯ ಮಟ್ಟದ ನಿರ್ದೇಶಕರನ್ನಾಗಿ ನೇಮಕ ಮಾಡಿ ಕಳುಹಿಸುವಂತೆ ಹೆಚ್.ಡಿ.ರೇವಣ್ಣ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಈ ಮೂಲಕ ಅಧ್ಯಕ್ಷ ಪಟ್ಟಕ್ಕಾಗಿ ರೇವಣ್ಣ ಲಾಬಿ ಜೋರಾಗಿ ನಡೆಸಿದ್ದಾರೆ ಎನ್ನಲಾಗಿದೆ.

    ಇನ್ನು ಇದರ ಮೊದಲ ಹೆಜ್ಜೆ ಎಂಬಂತೆ ಕಲಬುರಗಿ ಹಾಲು ಒಕ್ಕೂಟದಿಂದ ಸಚಿವ ಬಂಡೆಪ್ಪ ಖಾಶಂಪುರ ಸಹೋದರ ಮಾರುತಿ ಖಾಶಂಪುರ ಅವರನ್ನು ರಾಜ್ಯ ಮಟ್ಟದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇನ್ನು ಮೈತ್ರಿ ಧರ್ಮದಂತೆ ಕೆಎಂಎಫ್ ಅಧ್ಯಕ್ಷ ಪಟ್ಟ ಕಾಂಗ್ರೆಸ್‍ಗೇ ಸಿಗಬೇಕು. ಈ ಕಾರಣಕ್ಕೆ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ಕೊಡಿಸಲು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಅಖಾಡಕ್ಕೆ ಇಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬಳ್ಳಾರಿ ಹಾಲು ಒಕ್ಕೂಟದಿಂದ ಶಾಸಕ ಭೀಮಾನಾಯ್ಕ್ ರನ್ನು ರಾಜ್ಯಮಟ್ಟಕ್ಕೆ ನಿರ್ದೇಶಕರಾಗಿ ನೇಮಕ ಮಾಡಿಸಿ ಕಳುಹಿಸಿದ್ದು, ಯಾವುದೇ ಕಾರಣಕ್ಕೂ ಅಧ್ಯಕ್ಷ ಪಟ್ಟ ರೇವಣ್ಣರಿಗೆ ಸಿಗದಂತೆ ಕೈ ನಾಯಕರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯದ ಎಲ್ಲ ಒಕ್ಕೂಟದ ನಿರ್ದೇಶಕರಿಗೆ ಕೈ ಪಕ್ಷದ ಬೆಂಬಲಿತ ನಿರ್ದೇಶಕರನ್ನೆ ರಾಜ್ಯ ಮಟ್ಟದ ನಿರ್ದೇಶಕ ಹುದ್ದೆಗೆ ಆಯ್ಕೆ ಮಾಡಿ ಕಳುಹಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.

    ಈ ಮೂಲಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂಡಿದ್ದ ಬಿರುಕು, ಈಗ ಕೆಎಂಎಫ್ ಅಧ್ಯಕ್ಷ ಪಟ್ಟ ವಿಷಯದಲ್ಲಿ ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಸಾಧ್ಯತೆಗಳಿವೆ.

  • ಎಲೆಕ್ಷನ್‍ಗೆ ಹೋಗೋಣ, ಇಲ್ಲ ವಿರೋಧ ಪಕ್ಷವಾಗಿ ಕೂರೋಣ: ಮಂಡ್ಯದ ಕೈ ನಾಯಕ

    ಎಲೆಕ್ಷನ್‍ಗೆ ಹೋಗೋಣ, ಇಲ್ಲ ವಿರೋಧ ಪಕ್ಷವಾಗಿ ಕೂರೋಣ: ಮಂಡ್ಯದ ಕೈ ನಾಯಕ

    ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಂಡ್ಯದ ಕೈ ನಾಯಕ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿಯೂ ಸರ್ಕಾರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಇದರಿಂದ ಜೊತೆಲಿದ್ದಂತಹ ಕಾಂಗ್ರೆಸ್ ಪಕ್ಷ ನೋವು ಅನುಭವಿಸಬೇಕಾಗುತ್ತದೆ. ಜೆಡಿಎಸ್ ನವರರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಎಲೆಕ್ಷನ್‍ಗೆ ಹೋಗೋಣ ಇಲ್ಲ ವಿರೋಧ ಪಕ್ಷವಾಗಿ ಕೂರೋಣ” ಎಂದು ಬರೆದು ಈ ಮೂಲಕ ತಮ್ಮ ನಿರ್ಧಾರವನ್ನು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

    ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ಧ. ಆದರೆ ಇದೇ ತರ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮ ನಾಯಕರು ಇದನ್ನ ಸರಿಪಡಿಸಬೇಕು ಇಲ್ಲ, ಒಂದು ಪೂರ್ಣ ಪ್ರಮಾಣದ ತೀರ್ಮಾನ ತೆಗೆದುಕೊಳ್ಳಬೇಕು. ಆಗ್ಲಿಲ್ಲ ಅಂದರೆ ಮುಂದೆ ಪಕ್ಷವನ್ನು ಈ ಸ್ಥಿತಿಗೆ ಬರದೆ ಇರುವಂತೆ ನೋಡಿಕೊಳ್ಳವುದಕ್ಕೆ ಪಕ್ಷದ ಎಲ್ಲ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

    ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡುವುದಕ್ಕೆ ಹೋಗಲ್ಲ. ಆದರೆ ಈಗಿನ ನಡವಳಿಕೆ ನೋಡುತ್ತಿದ್ದರೆ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣುತ್ತಿಲ್ಲ. ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ ಎಂದು ಈಗ ಕೆಲವರಿಗೆ ಮನವರಿಕೆಯಾಗಿದೆ. ನಾನು ಕಾದು ನೋಡುತ್ತೀನಿ. ಹೆಚ್ಚು ದಿನ ಉಳಿಯಲ್ಲ. ಈಗಾಗಲೇ ಜನ ಲೋಕಸಭಾ ಚುನಾವಣೆಯಲ್ಲಿ ಒಂದು ಸಾರಿ ತೋರಿಸಿದ್ದಾರೆ. ಇನ್ನು ಮತ್ತೆ ಅದನ್ನೇ ಮಾಡಿದರೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಬಿಡಿ, ನನ್ನೊಬ್ಬನ ಕೈಲಿ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗದ್ದಕ್ಕೆ ನನಗೆ ಸೋಲು – ಮೊಯ್ಲಿ

    ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗದ್ದಕ್ಕೆ ನನಗೆ ಸೋಲು – ಮೊಯ್ಲಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗಲಿಲ್ಲ ಎಂದು ಮೈತ್ರಿ ಅಭ್ಯರ್ಥಿಯಾಗಿದ್ದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಪರಾಮರ್ಶೆ ಮಾಡುತ್ತೇವೆ. ಚುನಾವಣೆಯಲ್ಲಿ ನಾಯಕರು ಹೊಂದಾಣಿಕೆ ಮಾಡಿಕೊಂಡರೆ ಸರಿಹೋಗುವುದಿಲ್ಲ ತಳಮಟ್ಟದಲ್ಲೂ ಹೊಂದಾಣಿಕೆ ಆಗುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಎರಡೂ ಪಕ್ಷಗಳ ನಾಯಕರು ಹೊಂದಾಣಿಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸಲಿಲ್ಲ. ಸೂಕ್ತ ಹೊಂದಾಣಿಕೆ ಇದ್ದಿದ್ದರೆ ಈ ರೀತಿಯ ಫಲಿತಾಂಶ ಬರುತ್ತಿರಲಿಲ್ಲ. ಸಮನ್ವಯತೆಯ ಕೊರತೆಯೇ ಈ ಫಲಿತಾಂಶಕ್ಕೆ ಮೂಲ ಕಾರಣ. ಸರ್ಕಾರದ ಮಟ್ಟದಲ್ಲಿ ಹೊಂದಾಣಿಕೆ ಆಗಿತ್ತು ಆದರೆ ತಳಮಟ್ಟದಲ್ಲಿ ಹೊಂದಾಣಿಕೆ ಆಗಬೇಕು. ಈ ಕೆಲಸ ಮೊದಲು ಆಗಬೇಕು ಎಂದು ಹೇಳಿದರು.

    ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಮೊಯ್ಲಿ ಅವರು, ಯಡಿಯೂರಪ್ಪ ಅವರ ಅಸ್ತಿತ್ವ ಆಪರೇಷನ್ ಕಮಲದಿಂದಲೇ ಇರೋದು. ಅದಕ್ಕಾಗಿ ಯಡಿಯೂರಪ್ಪ ಯಾವಾಗಲೂ ಆಪರೇಷನ್ ಕಮಲ ಎನ್ನುತ್ತಿರುತ್ತಾರೆ ಎಂದು ಆರೋಪ ಮಾಡಿದರು. ರಾಷ್ಟ್ರ ಮತ್ತು ರಾಜ್ಯದ ದೃಷ್ಟಿಯಿಂದ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರಬೇಕು. ಸರ್ಕಾದದಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಂಡು ಸರ್ಕಾರ ಮುನ್ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಗುರುವಾರ ಶಿವಮೊಗ್ಗದ ಪ್ರತಿ ಮನೆಗೂ ಲಾಡು ವಿತರಣೆ – ಈಶ್ವರಪ್ಪ

    ಗುರುವಾರ ಶಿವಮೊಗ್ಗದ ಪ್ರತಿ ಮನೆಗೂ ಲಾಡು ವಿತರಣೆ – ಈಶ್ವರಪ್ಪ

    ಶಿವಮೊಗ್ಗ: ಇದೇ ತಿಂಗಳು ಮೇ 30 ರಂದು ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರತಿ ಮನೆಗೂ ಲಾಡು ವಿತರಣೆ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 30 ರಂದು ಪ್ರತಿ ಬೂತ್‍ನಲ್ಲೂ ಒಂದು ಲಕ್ಷ ಲಾಡು ವಿತರಣೆ ಮಾಡಲಾಗುವುದು. ಈಗಾಗಲೇ ಮೂರು ಕಡೆ ಲಾಡು ರೆಡಿ ಮಾಡಲಾಗುತ್ತಿದೆ. ಆ ದಿನ ನಾನು ದೆಹಲಿಗೆ ತೆರಳುವುದಿಲ್ಲ. ಇಲ್ಲಿಯೇ ಜನರ ಜೊತೆ ಸಂಭ್ರಮ ಆಚರಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಸರ್ಕಾದಿಂದ ಜಿಂದಾಲ್ ಕಂಪನಿಗೆ ಭೂಮಿ ಕೊಡುವ ವಿಚಾರದ ಬಗ್ಗೆ ಕೇಳಿದಾಗ, ಮೂರು ಬಿಟ್ಟ ಮೈತ್ರಿ ಸರ್ಕಾರ 3,666 ಎಕರೆ ಜಾಗವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಈ ಸರ್ಕಾರ ನದಿ, ನೀರು, ಹೆಣ್ಣುಮಕ್ಕಳ ಬಗ್ಗೆ ಗಮನ ನೀಡುತ್ತಿಲ್ಲ. ಜಿಂದಾಲ್ ಕಂಪನಿಯವರು ಸರ್ಕಾರಕ್ಕೆ ಸಾವಿರಾರು ಕೋಟಿ ಬಾಕಿ ಕೊಡಬೇಕಿದೆ. ಹೀಗಿರುವಾಗ 3,666 ಎಕರೆ ಭೂಮಿಯನ್ನು 30 ಕೋಟಿಗೆ ಮಾರಾಟ ಮಾಡಲು ಹೊರಟಿದ್ದಾರೆ ಇದನ್ನು ಕೇಳಿದರೆ ಭಯವಾಗುತ್ತದೆ ಎಂದು ಹೇಳಿದರು. ಇದನ್ನು ಓದಿ: ಚುನಾವಣೆ ಬಳಿಕ ಮೊದಲ ಸಂಪುಟ ಸಭೆ – ವಿವಾದಕ್ಕೀಡಾಯ್ತು ಸರ್ಕಾರದ ನಿರ್ಣಯ

    ಮೈತ್ರಿ ಸರ್ಕಾರಕ್ಕೆ ಪತನವಾಗುವ ಭಯ ಇದ್ದು ಅದಕ್ಕೆ ಎಷ್ಟು ಆಗುತ್ತೋ ಅಷ್ಟು ಬಾಚಿಕೊಂಡು ಹೋಗಲು ತೀರ್ಮಾನ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಮೇಲೂ ಈ ತೀರ್ಮಾನ ಮಾಡಿದ್ದಾರೆ ಇದನ್ನು ಸರ್ಕಾರ ರದ್ದು ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ಮತ್ತು ನಾಯಕರು ಸಭೆ ಸೇರಲಿದ್ದೇವೆ. ಆ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

    ಆಪರೇಷನ್ ಕಮಲದ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಆಪರೇಷನ್ ಕಮಲ ಮಾಡುವುದಿಲ್ಲ. ನಮ್ಮ ಪಕ್ಷದಲ್ಲಿ 105 ಹುಲಿಗಳು ಇದ್ದೇವೆ. ನಮ್ಮನ್ನು ಮುಟ್ಟುವ ಶಕ್ತಿ ಯಾರಿಗೂ ಇಲ್ಲ. ಮೈತ್ರಿಯೇ ಬೇಡ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಬೀಳಿಸುವ ಪ್ರಯತ್ನ ನಾವು ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

  • ರಾಜ್ಯದಲ್ಲಿ ಸರ್ಕಾರವಿದೆ ಅನ್ನೋದು ಜನರಿಗೆ ಗೊತ್ತಿಲ್ಲ: ಶೆಟ್ಟರ್

    ರಾಜ್ಯದಲ್ಲಿ ಸರ್ಕಾರವಿದೆ ಅನ್ನೋದು ಜನರಿಗೆ ಗೊತ್ತಿಲ್ಲ: ಶೆಟ್ಟರ್

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರವಿದೆ ಎನ್ನುವುದು ಜನರಿಗೆ ಗೊತ್ತಿಲ್ಲ, ಇದು ಅಪವಿತ್ರ ಮೈತ್ರಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದ್ದಾರೆ.

    ನಗರದ ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಗುಡುಗಿದ್ದಾರೆ.

    ಮೈತ್ರಿ ಸರ್ಕಾರ ಪತನವಾಗುವುದು ಖಚಿತ. ಮೈತ್ರಿ ನಾಯಕರು ಏನೇ ಸ್ಟಂಟ್ ಮಾಡಿದರೂ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಭಾರೀ ದೊಡ್ಡ ಪ್ರಮಾಣದಲ್ಲಿದೆ. ಈಗ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈಗ ಮಾಡಿದರೆ ನಾಲ್ಕು ಮಂದಿ ಸಂಪುಟದಿಂದ ಹೊರಗೆ ಹೋಗುವುದು ಒಳಗೆ ಬರುವುದು ಇದೇ ಆಗುತ್ತದೆ. ಯಾರೇ ಏನೇ ಕಸರತ್ತು ಮಾಡಿದರೂ ಈಗ ತೆರೆ ಎಳೆಯಲಾಗುತ್ತದೆ. ಮೈತ್ರಿಯಲ್ಲಿರುವ ಭಿನ್ನಮತೀಯರೇ ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25+1 ಸ್ಥಾನ ಗೆದ್ದಿದೆ. ಈ ಫಲಿತಾಂಶವನ್ನು ನೋಡಿ ಇವರಿಗೆ ನೈತಿಕತೆ ಇದ್ದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು ಎಂದು ಹೇಳಿದರು.

    ಮೈತ್ರಿ ಸರ್ಕಾರದಿಂದ ಜಿಂದಾಲ್ ಕಂಪನಿಗೆ 3,600 ಎಕರೆ ಜಮೀನು ಮಾರಾಟ ಕ್ರಯಪತ್ರ ಹಸ್ತಾಂತರ ವಿಚಾರದ ಬಗ್ಗೆ ಕೇಳಿದಾಗ, ಈ ಸರ್ಕಾರ ಯಾವಾಗ ಹೋಗುತ್ತದೋ ಗೊತ್ತಿಲ್ಲ. ಸರ್ಕಾರದ ಪತನಕ್ಕೆ ಅಂತಿಮ ಕ್ಷಣ ಬಂದಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಮೈತ್ರಿ ಸರ್ಕಾರ ಸರ್ಕಾರದ ಜಮೀನು ಲೂಟಿ ಮಾಡುತ್ತಿದೆ. ಇದೊಂದು ಹಗರಣ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದರು.