Tag: Alibaba Group

  • ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ ಕಣ್ಮರೆ

    ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ ಕಣ್ಮರೆ

    ಬೀಜಿಂಗ್‌: ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ  ಕಣ್ಮರೆಯಾಗಿದ್ದಾರೆ  ಎಂಬ ಶಂಕೆ ವ್ಯಕ್ತವಾಗಿದೆ.

    2 ತಿಂಗಳ ಹಿಂದೆ ಜಾಕ್‌ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿದ್ದರು. ಈ ಟೀಕೆಯ ಬಳಿಕ ಜಾಕ್‌ ಮಾ ಸಾರ್ವಾಜನಿಕವಾಗಿ ಎಲ್ಲೂ ಕಾಣಿಸಿಲ್ಲ ಎಂದು ವರದಿಯಾಗಿದೆ.

    ತನ್ನ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರೆ ಚೀನಾ ಸರ್ಕಾರ ಸಾರ್ವಜನಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿಯಾಗಿ ಚೀನಾ ಜಾಕ್‌ ಮಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂಬ ಅಭಿಪ್ರಾಯಗಳನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಅನುಮಾನ ಯಾಕೆ?
    ʼಅಮೆರಿಕ ಬಿಸಿನೆಸ್‌ ಹೀರೋʼ ಟ್ಯಾಲೆಂಟ್‌ ಕಾರ್ಯಕ್ರಮವನ್ನು ಜಾಕ್‌ ಮಾ ಪ್ರಯೋಜಿಸಿದ್ದರು. ಈ ಶೋದ ಅಂತಿಮ ಕಾರ್ಯಕ್ರಮದಲ್ಲಿ ಜಾಕ್‌ ಮಾ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಜಾಕ್‌ ಮಾ ಕಾಣಿಸಿರಲಿಲ್ಲ.

    ಆಫ್ರಿಕಾದ ಉದ್ಯಮಿಗಳ ಜೊತೆ ಕಾರ್ಯಕ್ರಮ ನಡೆಸಲು ʼಆಫ್ರಿಕಾ ಬಿಸಿನೆಸ್‌ ಹೀರೋʼ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್‌ ಮಾ ನೇಮಕವಾಗಿದ್ದರು. ಆದರೆ ಈ ಕಾರ್ಯಕ್ರಮದ ವೆಬ್‌ಸೈಟ್‌ನಿಂದ ಜಾಕ್‌ ಮಾ ಫೋಟೋವನ್ನು ತೆಗೆಯಲಾಗಿತ್ತು.

    ಜಾಕ್‌ ಮಾ ಹೇಳಿದ್ದು ಏನು?
    ಅಕ್ಟೋಬರ್‌ 24 ರಂದು ಶಾಂಘೈನಲ್ಲಿ ಜಾಕ್‌ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

    ಜಾಕ್‌ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಜನ ಜಾಕ್‌ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.

    ತನಿಖೆ ಆರಂಭಿಸಿದ್ದು ಯಾಕೆ?
    ಜಾಕ್‌ಮಾ ಆಂಟ್‌ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನವೆಂಬರ್‌ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್‌ ಹಣ ಸಂಗ್ರಹಿಸಲು ಮುಂದಾಗಿತ್ತು. ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು.

    ಚೀನಾ ಸರ್ಕಾರದ ಬಗ್ಗೆ ಬಹಿರಂಗ ಟೀಕೆ, ಐಪಿಒ ಬಿಡುಗಡೆ, ಆಲಿಬಾಬಾ ಕಂಪನಿಯ ಮೇಲೆ ತನಿಖೆ ಈ ಎಲ್ಲ ವಿಚಾರಗಳು ಒಂದಕ್ಕೊಂದು ಹೋಲಿಕೆ ಆಗುತ್ತಿರುವ ಕಾರಣ ಜಾಕ್‌ ಮಾ ಸುರಕ್ಷತೆಯ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ.