Tag: Alia CX300

  • 130 ಕಿ.ಮೀಗೆ ಕೇವಲ 700 ರೂ. – ವಿಶ್ವದ ಮೊಟ್ಟ ಮೊದಲ ಎಲೆಕ್ಟ್ರಿಕ್‌ ವಿಮಾನ ಆಲಿಯಾ CX-300

    130 ಕಿ.ಮೀಗೆ ಕೇವಲ 700 ರೂ. – ವಿಶ್ವದ ಮೊಟ್ಟ ಮೊದಲ ಎಲೆಕ್ಟ್ರಿಕ್‌ ವಿಮಾನ ಆಲಿಯಾ CX-300

    – 30 ನಿಮಿಷದಲ್ಲಿ 130 ಕಿ.ಮೀ ಹಾರುತ್ತೆ ಈ ವಿಮಾನ

    ಪ್ರಸ್ತುತ ಜಗತ್ತಿನಲ್ಲಿ ಪ್ರತಿನಿತ್ಯ ಏನಾದರೂ ಒಂದು ಟೆಕ್ನಾಲಜಿ ಅಭಿವೃದ್ಧಿ ಹೊಂದುತ್ತಲೇ ಇರುತ್ತದೆ. ಈಗಾಗಲೇ ಜನರು ಎಲೆಕ್ಟ್ರಿಕ್ ಬೈಕ್‌, ವೇಗವಾಗಿ ಓಡುವ ಕಾರುಗಳನ್ನು ಬಳಸುತ್ತಿದ್ದಾರೆ. ಇನ್ನು, ವಾಯುಯಾನ ಇತಿಹಾಸದಲ್ಲಿ ವಿದ್ಯುತ್ ಚಾಲಿತ ವಿಮಾನ ಇನ್ನು ಕೆಲವೇ ದಿನಗಳಲ್ಲಿ ಆಕಾಶದಲ್ಲಿ ಹಾರಾಡಲಿವೆ. ಹೌದು, ಇದೀಗ ವಿಶ್ವದ ಮೊಟ್ಟ ಮೊದಲ ಎಲೆಕ್ಟ್ರಿಕ್‌ ವಿಮಾನ ಯಶಸ್ವಿಯಾಗಿ ಹಾರಾಟ ನಡೆಸಿದೆ.

    ಆಲಿಯಾ ಸಿಎಕ್ಸ್- 300 (Alia CX-300) ವಿಮಾನ ವಿಶ್ವದ ಮೊಟ್ಟಮೊದಲ ಎಲೆಕ್ಟ್ರಿಕ್‌ ಏರ್‌ಕ್ರಾಫ್ಟ್‌ ಆಗಿದ್ದು, ನಾಲ್ವರನ್ನು ಹೊತ್ತು ಯಶಸ್ವಿ ಹಾರಾಟ ನಡೆಸಿದೆ. ಹಾಗಿದ್ರೆ ಆಲಿಯಾ ಸಿಎಕ್ಸ್‌ 300 ವಿಶೇಷತೆಗಳೇನು? ಟಿಕೆಟ್‌ ದರ ಎಷ್ಟು? ಈ ವಿಮಾನವನ್ನು ಅಭಿವೃದ್ಧಿಪಡಿಸಿದ್ದು ಯಾರು ಎಂಬ ಕುರಿತು ಈ ಕೆಳಗೆ ವಿವರಿಸಲಾಗಿದೆ.

    ಇಡೀ ವಾಯುಯಾನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ವಿಮಾನ ಯಶಸ್ವಿ ಹಾರಾಟ ನಡೆಸಿದೆ. ಆಲಿಯಾ ಸಿಎಕ್ಸ್- 300 ವಿಮಾನ ಅಮೆರಿಕದ ವರ್ಮೊಂಟ್ ರಾಜ್ಯದ ದಕ್ಷಿಣ ಬರ್ಲಿಂಗ್ಟನ್​ನಲ್ಲಿರುವ ಬೀಟಾ ಟೆಕ್ನಾಲಜೀಸ್‌ ಕಂಪನಿ ಅಭಿವೃದ್ಧಿ ಪಡಿಸಿದ ಎಲೆಕ್ಟ್ರಿಕ್ ವಿಮಾನವಾಗಿದೆ. ಈಗಾಗಲೇ ಈ ವಿಮಾನವು ನಾಲ್ವರನ್ನು ಹೊತ್ತುಕೊಂಡು ಯಶಸ್ವಿಯಾಗಿ ಪ್ರಯಾಣ ಮಾಡಿದೆ.ಅಮೆರಿಕದ ಈಸ್ಟ್ ಹ್ಯಾಂಪ್ಟನ್​ನಿಂದ ಜಾನ್​ ಎಫ್​ ಕೆನಡಿ ಏರ್​ಪೋರ್ಟ್​​ವರೆಗೆ ಯಶಸ್ವಿಯಾಗಿ ಪ್ರಯಾಣ ಮಾಡಿದೆ. ಕೇವಲ 30 ನಿಮಿಷದಲ್ಲಿ 130 ಕಿಲೋ ಮೀಟರ್​ನಷ್ಟು ದೂರ ಯಶಸ್ವಿಯಾಗಿ ಹಾರಾಟ ನಡೆಸಿದೆ.

    ಸಾಮಾನ್ಯವಾಗಿ ಹೆಲಿಕಾಪ್ಟರ್‌ಗಳಲ್ಲಿ 30 ನಿಮಿಷದ ಹಾರಾಟಕ್ಕಾಗಿ (130 ಕಿ.ಮೀ) ಸುಮಾರು 13,885 ರೂಪಾಯಿ ಮೌಲ್ಯದ ಇಂಧನವನ್ನು ಬಳಸಬೇಕಾಗುತ್ತದೆ. ಆದರೆ ಈ ಎಲೆಕ್ಟ್ರಿಕ್ ವಿಮಾನಗಳು ಸೌರಶಕ್ತಿಯ ಮೂಲಕ ಹಾರಾಟ ನಡೆಸುತ್ತದೆ. ಈ ಮೂಲಕ ನೀವು ಕೇವಲ 694 ರೂಪಾಯಿಗಳಲ್ಲಿ ಈ ಎಲೆಕ್ಟ್ರಿಕ್‌ ವಿಮಾನಗಳಲ್ಲಿ ಪ್ರಯಾಣ ಮಾಡಬಹುದು. ಅಲ್ಲದೆ, ಸಾಮಾನ್ಯ ವಿಮಾನಗಳಂತೆ ಈ ಎಲೆಕ್ಟ್ರಿಕ್‌ ವಿಮಾನಗಳು ಹೆಚ್ಚು ಶಬ್ಧ ಮಾಡುವುದಿಲ್ಲ. ಒಟ್ಟಾರೆ ಪ್ರಯಾಣವನ್ನು ಸುಲಭಗೊಳಿಸುತ್ತದೆ.

    ಬೀಟಾ ಟೆಕ್ನಾಲಜೀಸ್‌ ಸಂಸ್ಥೆ 6 ವರ್ಷಗಳಿಂದ ವಿದ್ಯುತ್‌ ಚಾಲಿತ ವಿಮಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಆಲಿಯಾ ಸಿಎಕ್ಸ್-300 ಸಂಪೂರ್ಣ ಎಲೆಕ್ಟ್ರಿಕ್‌ ವಿಮಾನವಾಗಿದ್ದು, 2022 ರಲ್ಲಿ ತನ್ನ ಮೊದಲ ಪರೀಕ್ಷಾ ಹಾರಾಟ ನಡೆಸಿತು. ಈ ಸಣ್ಣ ವಿಮಾನದಲ್ಲಿ ಸುಮಾರು 9 ಪ್ರಯಾಣಿಕರನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಈ ಎಲೆಕ್ಟ್ರಿಕ್ ವಿಮಾನಗಳು ಕಮರ್ಶಿಯಲ್‌ ಫ್ಲೈಟ್‌ಗಳಾಗುವ ಸಾಧ್ಯತೆಗಳಿವೆ.

    ಇಂಧನ ಬಳಸುವ ಹೆಲಿಕಾಪ್ಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ವಿಮಾನದ ಇಂಧನ ವೆಚ್ಚ 5%ನಷ್ಟಿದೆ. ಇದು ಜೇಬಿಗೂ ಹಿತಕರ ಮಾತ್ರವಲ್ಲದೇ ಯಾವುದೇ ಶಬ್ದವಿಲ್ಲದ ಕಾರಣ ಪ್ರಯಾಣಿಕರ ಕಿವಿಗೂ ಹಿತಕರವಾಗಿರುತ್ತದೆ. ಶಬ್ದವಿಲ್ಲದ ಕಾರಣ ಪ್ರಯಾಣಿಕರು ಆರಾಮಾವಾಗಿ ಮಾತನಾಡಿಕೊಂಡು ಹೋಗಬಹುದು. ವಿದ್ಯುತ್‌ ವಿಮಾನಗಳ ಉತ್ಪಾದನೆ, ಪ್ರಮಾಣೀಕರಣ ಮತ್ತು ವಾಣಿಜ್ಯೀಕರಣಗಳನ್ನು ವೇಗಗೊಳಿಸುವ ಸಲುವಾಗಿ ಬೀಟಾ ಟೆಕ್ನಾಲಜೀಸ್‌ 2756 ಕೋಟಿ ರೂ. ಸಂಗ್ರಹಿಸಿದೆ.

    ಕಾರಿನಲ್ಲಿ ರಸ್ತೆಯ ಮೂಲಕ 130 ಕಿ.ಮೀ ಪ್ರಯಾಣಿಸಲು ಸುಮಾರು 2 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ 30ರಿಂದ 40 ಡಾಲರ್‌ನಷ್ಟು ಇಂಧನ ವೆಚ್ಚವಾಗುತ್ತದೆ. ರೈಲಿನ ಮೂಲಕ ಪೂರ್ವ ಹ್ಯಾಂಪ್ಟನ್‌ನಿಂದ ಪೆನ್ ನಿಲ್ದಾಣಕ್ಕೆ ತಲುಪಲು ಸುಮಾರು 2 ಗಂಟೆ 45 ನಿಮಿಷಗಳು ತಗಲುತ್ತವೆ. ಏಕಮುಖವಾಗಿ ಪ್ರಯಾಣಿಸಲು ರೈಲಿನ ದರ ಸುಮಾರು 20ರಿಂದ 30 ಡಾಲರ್ ಖರ್ಚಾಗುತ್ತದೆ.

    ಆಲಿಯಾ ಸಿಎಕ್ಸ್‌-300 ವಿಮಾನದಲ್ಲಿ ಸಂಪೂರ್ಣ ವಿದ್ಯುತ್‌ ಪ್ರೊಪಲ್ಷನ್‌ ವ್ಯವಸ್ಥೆಯನ್ನು ಶಕ್ತಗೊಳಿಸಲು ಲಿಥಿಯಾಂ-ಐಯನ್‌ ಬ್ಯಾಟರಿಗಳನ್ನು ಬಳಸಲಾಗಿದೆ. ಇಂಧನ ಆಧಾರಿತ ಎಂಜಿನ್‌ಗಳಿಗೆ ಹೋಲಿಸಿದರೆ ಇದರಲ್ಲಿ ಶಬ್ದ, ಕಂಪನ ಹಾಗೂ ನಿರ್ವಹಣಾ ವೆಚ್ಚ ಕಡಿಮೆ.

    ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಗಳಲ್ಲಿ ಭಾರತವೂ ಒಂದು. ಎಲೆಕ್ಟ್ರಿಕ್‌ ವಿಮಾನ ಬಳಕೆಯಿಂದ ಭಾರತಕ್ಕೆ ನಾನಾ ಅನುಕೂಲಗಳಿವೆ. ವಿದ್ಯುತ್‌ ವಿಮಾನ ಬಳಕೆಯಿಂದ ವಿಮಾನಗಳಿಗೆ ಇಂಧನ ಬೇರೆಡೆಯಿಂದ ಆಮದು ಮಾಡಿಕೊಳ್ಳುವುದನ್ನು ನಿಧಾನವಾಗಿ ಕಡಿಮೆಗೊಳಿಸಬಹುದು. ಅಲ್ಲದೇ ಭಾರತೀಯ ನವೋದ್ಯಮಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಸ್ಥಳೀಯ ಬ್ಯಾಟರಿ ವ್ಯವಸ್ಥೆ ಹಾಗೂ ಪ್ರೊಪಲ್ಷನ್‌ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಇದು ಸಹಕಾರಿಯಾಗಬಹುದು. ಇದು ಆತ್ಮ ನಿರ್ಭರ ಭಾರತ ಮತ್ತು ಮೇಕ್‌ ಇನ್‌ ಇಂಡಿಯಾಗೆ ಮತ್ತಷ್ಟು ಪುಷ್ಠಿ ನೀಡುತ್ತದೆ.

    ವಿಮಾನದ ವಿಶೇಷತೆಗಳೇನು?
    -ಸಂಪೂರ್ಣ ವಿದ್ಯುತ್‌ಚಾಲಿತ ವಿಮಾನ
    -ಪೈಲಟ್ ಸೇರಿ 6 ಮಂದಿ ಪ್ರಯಾಣ
    -ಸರಕು ಸಾಗಣೆಗೂ ಶಕ್ತ
    -ಒಂದು ಬಾರಿ ಚಾರ್ಜ್‌ ಮಾಡಿದರೆ 463 ಕಿ.ಮೀ ಹಾರಾಟ
    -ತಾಸಿಗೆ 283 ಕಿ.ಮೀ. ಹಾರಾಟ ವೇಗ
    -ಸಾಂಪ್ರದಾಯಿಕ ಟೇಕ್‌ಆಫ್ ಮತ್ತು ಲ್ಯಾಂಡಿಂಗ್

    ಅನುಕೂಲಗಳೇನು?
    -ಸಾಂಪ್ರದಾಯಿಕ ಇಂಧನಕ್ಕಿಂತ ಕಾರ್ಯಾಚರಣೆ ಅಗ್ಗ
    -ಕಡಿಮೆ ದೂರದ ಪ್ರಯಾಣಕ್ಕೆ ಅನುಕೂಲ
    -ನಗರಗಳಲ್ಲಿ ಏರ್ ಟ್ಯಾಕ್ಸಿಯಾಗಿ ಬಳಕೆ ಸಾಧ್ಯತೆ
    -ಶೂನ್ಯ ಇಂಗಾಲ ಹೊರಸೂಸುವಿಕೆಯಿಂದ ಪರಿಸರ ಸ್ನೇಹಿ

    ಈ ಎಲೆಕ್ಟ್ರಿಕ್‌ ವಿಮಾನವನ್ನು ಒಂದು ಬಾರಿ ಸಂಪೂರ್ಣ ಚಾರ್ಜ್‌ ಮಾಡಿದರೆ ಸುಮಾರು 463 ಕಿ.ಮೀ ಹಾರಾಟ ನಡೆಸಬಹುದು. ಅಲ್ಲದೇ ಈ ವಿಮಾನ ಕಡಿಮೆ ದೂರದ ಪ್ರಯಾಣಕ್ಕೆ ಉತ್ತಮ ಎಂದು ಕಂಪನಿ ತಿಳಿಸಿದೆ. ಈ ವರ್ಷದೊಳಗೆ ವಾಣಿಜ್ಯ ವಿಮಾನಗಳಿಗೆ ಪರವಾನಿಗೆ ನೀಡುವ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಶನ್‌ನ ಪ್ರಮಾಣಿಕರಣವನ್ನು ಪಡೆದುಕೊಳ್ಳುವ ಗುರಿಯನ್ನು ಬೀಟಾ ಟೆಕ್ನಾಲಜೀಸ್‌ ಕಂಪನಿ ಹೊಂದಿದೆ.