Tag: alcohol

  • ಗೋಕರ್ಣದಲ್ಲಿ ರೇವ್ ಪಾರ್ಟಿ- ವಿದೇಶಿಗರು ಸೇರಿ ಮೂವರ ಬಂಧನ!

    ಗೋಕರ್ಣದಲ್ಲಿ ರೇವ್ ಪಾರ್ಟಿ- ವಿದೇಶಿಗರು ಸೇರಿ ಮೂವರ ಬಂಧನ!

    ಕಾರವಾರ: ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ವಿದೇಶಿಗರು ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ನಡೆದಿದೆ.

    ಅರಣ್ಯದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕವಸ್ತುಗಳಾದ ಚರಸ್ ಹಾಗೂ ಕೆಟೋಮಿನ್ ಇಟ್ಟುಕೊಂಡಿದ್ದ ಇಸ್ರೇಲ್ ಮೂಲದ ಗೆಲ್‍ಸೆಲ್ ಮನ್(30), ಪಿಂಟೋ(30) ಹಾಗೂ ಕಾಸರಗೋಡು ಮೂಲದ ಗೋಕರ್ಣದ ರೆಗ್ಯುಲರ್ ರೆಸಾರ್ಟ್ ನಲ್ಲಿ ಕೆಲಸ ಮಾಡುವ ಇರ್ಫಾನ್ ಎಂಬವರನ್ನು ಬಂಧನ ಮಾಡಲಾಗಿದೆ.

    ಕುಡ್ಲೆ ಕಡಲ ತೀರದ ರೆಗ್ಯೂಲಸ್ ರೆಸಾರ್ಟ್ ಹಾಗೂ ಅರಣ್ಯವೊಂದರಲ್ಲಿ ಪಾರ್ಟಿ ನಡೆಸಲಾಗುತಿತ್ತು. ರಾತ್ರಿ ವೇಳೆ ನಡೆಸುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಈ ಪಾರ್ಟಿಯಲ್ಲಿ ಮಾದಕದ್ರವ್ಯ ಹಾಗೂ ಮಾದಕ ವಸ್ತುಗಳನ್ನ ಬಳಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

    ಎರಡು ಕಡೆ ಪಾರ್ಟಿಯಲ್ಲಿ ಬಳಸಿದ್ದ ಮದ್ಯ, ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸೌಂಡ್ ಸಿಸ್ಟಮ್ ಗಳನ್ನ ವಶಕ್ಕೆ ಸಹ ಪಡೆಯಲಾಗಿದೆ. ಗೋಕರ್ಣದ ಸಿಪಿಐ ಸಂತೋಷ್ ಶಟ್ಟಿ, ಪಿ.ಎಸ್,ಐ ಸಂತೋಷ್, ಅಂಕೋಲದ ಪಿಎಸ್‍ಐ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವಸ್ಥಾನದಲ್ಲಿ ಮದ್ಯ ಹಂಚಿದ ಬಿಜೆಪಿ ನಾಯಕ!

    ದೇವಸ್ಥಾನದಲ್ಲಿ ಮದ್ಯ ಹಂಚಿದ ಬಿಜೆಪಿ ನಾಯಕ!

    ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರ ದೇವಸ್ಥಾನದಲ್ಲಿ ಜನರಿಗೆ ಊಟದ ಜೊತೆ ಮದ್ಯ ಹಂಚಿ ವಿವಾಧದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

    ಭಾನುವಾರದಂದು ಬಿಜೆಪಿ ನಾಯಕ ನರೇಶ್ ಅವರ ಪುತ್ರ ನಿತೀನ್, ಪಾಸಿ ಸಮುದಾಯದವರಿಗೆ ಸಮ್ಮೇಳನವನ್ನು ಹಾರ್ಡೊಯ್‍ನ ಶ್ರವಣ ದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದರು. ಈ ವೇಳೆ ಸಮ್ಮೇಳನಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಊಟದ ಜೊತೆ 200 ಎಂಎಲ್ ಮದ್ಯದ ಬಾಟಲಿಯನ್ನು ಪ್ಯಾಕ್ ಮಾಡಿ ವಿತರಿಸಲಾಗಿತ್ತು. ಸಮ್ಮೇಳನಕ್ಕೆ ಬಂದಿದ್ದ ಮಕ್ಕಳಿಗೂ ಕೂಡ ಅದೇ ಊಟದ ಪ್ಯಾಕ್‍ಗಳನ್ನು ನೀಡಲಾಗಿತ್ತು. ಈ ವೇಳೆ ಸ್ಥಳಿಯರೊಬ್ಬರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹಾಗೂ ಜನರು ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಹಾರ್ಡೊಯ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನರೇಶ್ ಅಗರ್ವಾಲ್ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು, ಜನರ ಬೆಂಬಲ ಪಡೆಯಲು ಬಿಜೆಪಿ ನಾಯಕ ಈ ರೀತಿ ಮದ್ಯವನ್ನು ಹಂಚಿದ್ದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿದೆ.

    ಈ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ಕೂಡ ನರೇಶ್ ಅಗರ್ವಾಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾರ್ಡೊಯ್ ಕ್ರೇತ್ರದಿಂದ ಗೆದ್ದ ಬಿಜೆಪಿ ಎಂಪಿ ಅಂಶುಲ್ ವರ್ಮಾ ಪ್ರತಿಕ್ರಿಯಿಸಿ, ಉನ್ನತ ಸ್ಥಾನದಲ್ಲಿರುವ ನಾಯಕನಾಗಿ ನರೇಶ್ ಅವರು ಈ ರೀತಿ ತಪ್ಪು ಕೆಲಸ ಮಾಡಿದ್ದಾರೆ. ಈ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡುತ್ತೇವೆ. ಇತ್ತಿಚಿಗಷ್ಟೆ ನರೇಶ್ ಅವರು ಬಿಜೆಪಿಗೆ ಸೇರಿದ್ದರು. ಈಗ ಈ ರೀತಿ ಕೆಲಸ ಮಾಡಿ ಪಕ್ಷದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಓದುವ ಮಕ್ಕಳ ಕೈಗೆ ಪುಸ್ತಕ-ಪೆನ್ನು ನೀಡುವ ಬದಲು ಮದ್ಯವನ್ನು ನೀಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತಂದೆ ಮಗ ಇಬ್ಬರ ವಿರುದ್ಧವು ಪ್ರತಿಭಟನೆ ಮಾಡುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯಪ್ರಿಯರಿಗಿಲ್ಲ ಬಂದ್ ಬಿಸಿ- ಬೆಳ್ಳಂಬೆಳಗ್ಗೆ ಬಾರ್​ಗೆ ಮಹಿಳೆ ಎಂಟ್ರಿ

    ಮದ್ಯಪ್ರಿಯರಿಗಿಲ್ಲ ಬಂದ್ ಬಿಸಿ- ಬೆಳ್ಳಂಬೆಳಗ್ಗೆ ಬಾರ್​ಗೆ ಮಹಿಳೆ ಎಂಟ್ರಿ

    – ಬಂದ್ ಆದ್ರೂ ಕೊಪ್ಪಳದಲ್ಲಿ ಬಾರ್ ಓಪನ್

    ಕೊಪ್ಪಳ: ಎರಡು ದಿನ ಕಾರ್ಮಿಕ ಮುಷ್ಕರ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭಾರತ್ ಬಂದ್ ಘೋಷಣೆಯಾಗಿದೆ. ಆದರೆ ಕೊಪ್ಪಳದಲ್ಲಿ ಬೆಳ್ಳಂಬೆಳ್ಳಗೆ ಬಾರ್ ಓಪನ್ ಆಗಿದ್ದು, ಮದ್ಯ ಪ್ರಿಯರು ಫುಲ್ ಖುಷಿಯಾಗಿದ್ದಾರೆ.

    ಇಂದು ಬಂದ್ ಇದ್ದರೂ ಕೂಡ ಬಾರ್ ಮಾಲೀಕರು ಬೆಳ್ಳಂಬೆಳ್ಳಗೆ ತಮ್ಮ ಅಂಗಡಿಯನ್ನು ಓಪನ್ ಮಾಡಿದ್ದಾರೆ. ಹಾಗಾಗಿ ಬೆಳ್ಳಂಬೆಳ್ಳಗೆ ಮದ್ಯ ಪ್ರಿಯರು ಬಾರ್ ಮುಂದೆ ಹಾಜರಾಗಿದ್ದಾರೆ. ಬಾರ್ ಓಪನ್ ಆಗುತ್ತಿದ್ದಂತೆಯೇ ಮಹಿಳೆಯೊಬ್ಬರು ಎಣ್ಣೆ ಹೊಡೆಯಲು ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಭಾರತ್ ಬಂದ್ ದಿನ ಕೂಡ ಬಾರ್ ಓಪನ್ ಇರುವುದು ಎಲ್ಲಾ ಕುಡುಕರಿಗೂ ಖುಷಿ ತಂದಿದೆ. ಎಲ್ಲರೂ ಬಾರ್ ಮುಂದೆ ಮದ್ಯಪಾನ ಮಾಡಿ ಖುಷಿಪಡುತ್ತಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾ., ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ತುಮಕೂರು, ರಾಯಚೂರು, ದಾವಣಗೆರೆ, ರಾಮನಗರ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಬಾಗಲಕೋಟೆ, ಬೀದರ್, ಕಲಬುರಗಿ, ಗದಗ, ಚಿಕ್ಕಬಳ್ಳಾಪುರ, ಕೊಪ್ಪಳ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಮಡಿಕೇರಿ, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಹಾಸನ, ಯಾದಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್‍ಗೆ ಈವರೆಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಭರ್ಜರಿ ಎಣ್ಣೆ ಮಾರಾಟ – ಕೋಟಿ ಕೋಟಿ ಬಾಚಿದ ಅಬಕಾರಿ ಇಲಾಖೆ

    ಹೊಸ ವರ್ಷಕ್ಕೆ ಭರ್ಜರಿ ಎಣ್ಣೆ ಮಾರಾಟ – ಕೋಟಿ ಕೋಟಿ ಬಾಚಿದ ಅಬಕಾರಿ ಇಲಾಖೆ

    ಬೆಂಗಳೂರು: ಹೊಸ ವರ್ಷ ಅಬಕಾರಿ ಇಲಾಖೆಗೆ ಕುಡುಕರು ಗಿಫ್ಟ್ ನೀಡಿದ್ದು, ಅಬಕಾರಿ ಇಲಾಖೆಯ ಆದಾಯ ಈ ವರ್ಷ ಶೇ.12 ರಷ್ಟು ಏರಿಕೆಯಾಗಿದೆ.

    ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದಲ್ಲಿ ಒಟ್ಟು 3.83 ಲಕ್ಷ ಕೇಸ್ (ಬಾಕ್ಸ್) ಮದ್ಯ ಮಾರಾಟವಾಗಿದೆ. ಈ ಮೂಲಕ ಒಟ್ಟು ಬರೋಬ್ಬರಿ 80 ಕೋಟಿ ರೂ. ಆದಾಯ ಸಂಗ್ರಹಗೊಂಡಿದೆ.

    ಸಿಲಿಕಾನ್ ಸಿಟಿಯಲ್ಲಿಯೇ 81 ಸಾವಿರ ಮದ್ಯ ಬಾಕ್ಸ್ ಮಾರಾಟವಾಗಿದ್ದು, ಬೆಂಗಳೂರಿನಲ್ಲಿಯೇ 20 ಕೋಟಿ ರೂ. ಆದಾಯ ಗಳಿಕೆಯಾಗಿದೆ. ಈ ಮೂಲಕ ಹೊಸ ವರ್ಷದಂದು ರಾಜ್ಯ ಸರ್ಕಾರಕ್ಕೆ ಕುಡುಕರು ಗಿಫ್ಟ್ ನೀಡಿದ್ದಾರೆ.

    ಕಳೆದ ವರ್ಷ ರಾಜ್ಯದಲ್ಲಿ 60-65 ಕೋಟಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಈ ಮೊತ್ತ 80 ಕೋಟಿ ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 15 ಕೋಟಿ ಆದಾಯ ಕಳೆದ ವರ್ಷ ಆಗಿತ್ತು. ಈ ವರ್ಷ ಇದು 20 ಕೋಟಿಗೆ ಜಂಪ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮ’ದ್ಯ’ಧ್ಯರಾತ್ರಿಯ ನಶೆಯಲ್ಲಿಯೇ ನಂದಿಬೆಟ್ಟಕ್ಕೆ ಯುವಕರ ಎಂಟ್ರಿ-ಸಿಬ್ಬಂದಿ ಜೊತೆ ಕಿರಿಕ್

    ಮ’ದ್ಯ’ಧ್ಯರಾತ್ರಿಯ ನಶೆಯಲ್ಲಿಯೇ ನಂದಿಬೆಟ್ಟಕ್ಕೆ ಯುವಕರ ಎಂಟ್ರಿ-ಸಿಬ್ಬಂದಿ ಜೊತೆ ಕಿರಿಕ್

    ಚಿಕ್ಕಬಳ್ಳಾಪುರ: ರಾತ್ರಿ ಕುಡಿದ ಮದ್ಯದ ಅಮಲು ಇಳಿಯದೆ ಕುಡುಕ ಯುವಕರು ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ.

    ಕುಡುಕ ಯುವಕರು ರಾತ್ರಿ ಕುಡಿದ ಅಮಲಿನಲ್ಲಿ ಮದ್ಯದ ಬಾಟಲಿ ಸಮೇತ ನಂದಿಗಿರಿಧಾಮಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಯುವಕರನ್ನು ನಂದಿಗಿರಿಧಾಮದ ಮುಖ್ಯದ್ವಾರದಲ್ಲೇ ವಶಕ್ಕೆ ಪಡೆದುಕೊಳ್ಳಲಾಯಿತು. ಕೆಲ ಯುವಕರು ಟಿಕೆಟ್ ಖರೀದಿ ಮಾಡದೆ ಒಳನುಗ್ಗಲು ಯತ್ನಿಸಿದ್ದಾರೆ. ನಶೆಯಲ್ಲಿದ್ದ ಯುವಕನಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ.

    ಹೊಸ ವರ್ಷದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳೋಕೆ ಅಂತ ಪ್ರವಾಸಿಗರು ನಾ ಮುಂದು ತಾ ಮುಂದು ಮುಗಿಬಿದ್ದಿದ್ದಾರೆ. ಬೆಳಗ್ಗೆ 8 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿಷೇಧ ಹೇರಿತ್ತಾದರೂ ಪ್ರವಾಸಿಗರ ಒತ್ತಡದ ಹಿನ್ನೆಲೆಯಲ್ಲಿ 6 ಗಂಟೆ 30 ನಿಮಿಷಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

    ಮಧ್ಯ ರಾತ್ರಿಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಕಾದು ಕುಳಿತ್ತಿದ್ದು, ಬೆಳ್ಳಂ ಬೆಳಗ್ಗೆ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕೊಡಲೇ ಬೈಕ್ ಸವಾರರು ಕಾರು ಸವಾರರು ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಅಲ್ಲದೇ ಹೊಸ ವರ್ಷದ ಪಾರ್ಟಿ ಅಮಲಿನಲ್ಲಿ ಕಾರ್ ಹಾಗೂ ಬೈಕ್ ಅಪಘಾತ ಸಂಭವಿಸಿದ್ದು, ರಸ್ತೆ ಮಧ್ಯದಲ್ಲಿಯೇ ವಾಹನಗಳನ್ನು ಬಿಟ್ಟು ಹೋದ ಘಟನೆ ನಂದಿಗಿರಿಧಾಮದ ಕಾರಹಳ್ಳಿ ಕ್ರಾಸ್ ಬಳಿ ನಡೆದಿದೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಕೋಡಾ ರ್ಯಾಪಿಟ್ ಕಾರ್ ಹಾಗೂ ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿತು. ಅಪಘಾತದ ಬಳಿಕ ವಾಹನಗಳನ್ನು ರಸ್ತೆ ಮಧ್ಯದಲ್ಲಿ ಬಿಟ್ಟು ಚಾಲಕ ಹಾಗೂ ಸವಾರ ಪರಾರಿಯಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ, ಎಡಭಾಗದ ಡೋರ್ ಗೆ ಹೊಡೆತ ಬಿದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಬೆಂಗಳೂರು: 2018 ಇಯರ್ ಎಂಡ್ ಸೆಲೆಬ್ರೇಶನ್ ಸಿಲಿಕಾನ್ ಸಿಟಿ ಜೋರಾಗಿದ್ದು, ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿ ನಗರದ ಬಹುತೇಕ ಮದ್ಯದಂಗಡಿ ಫುಲ್ ರಶ್ ಆಗಿದೆ.

    ಮಟ ಮಟ ಮಧ್ಯಾಹ್ನವೇ ಗಂಟಲಿಗೆ ಪೆಗ್ ಇಳಿಸಿಕೊಂಡಿರುವ ಕುಡುಕರು ಎಣ್ಣೆ ಕಿಕ್‍ನಲ್ಲಿದ್ದಾರೆ. ಬೆಂಗಳೂರು ರೋಡ್‍ನಲ್ಲಿ ಕೆಲವರು ಡಿಸ್ಕೋ ಡ್ಯಾನ್ಸ್ ಶುರು ಮಾಡಿದರೆ, ಮತ್ತೆ ಕೆಲವರು ವಿವಿಧ ಭಂಗಿಗಳಲ್ಲಿ ಆಕಾಶ ನೋಡುತ್ತಾ ನಿದ್ರೆ ಲೋಕಕ್ಕೆ ಜಾರಿದ್ದಾರೆ. ಇನ್ನು ಕೆಲವರು ಟೈಟ್ ಆಗಿ ಕೈಕಾಲು ನೆಲದಲ್ಲಿ ನಿಲ್ಲದೇ ತೂರಾಡುತ್ತಾ ಫುಲ್ ಝೂಮ್‍ನಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ವಿಶ್ ಮಾಡುತ್ತಿದ್ದಾರೆ.

    ಅಷ್ಟೇ ಅಲ್ಲದೇ ರಾತ್ರಿಗೂ ರೌಂಡ್ ಟೇಬಲ್‍ಗೆ ಫುಲ್ ಪ್ಲಾನ್ ನಡೆಯುತ್ತಿದೆ. ಮುಂದಿನ ವರ್ಷ ಎಣ್ಣೆ ಮುಟ್ಟಲ್ಲ ಅಂತಾ ಕೆಲ ಕುಡುಕರು ಹುಸಿ ಪ್ರಾಮಿಸ್ ಬೇರೆ ಮಾಡಿದ್ದಾರೆ. ಇನ್ನು ಕೆಲವರು ಮುಂದಿನ ವರ್ಷದಿಂದ ಎಣ್ಣೆ ರೇಟು ಕಡಿಮೆ ಆದರೆ ಅದೇ ದೊಡ್ಡ ಗಿಫ್ಟ್. ಆದರೆ ಅವರು ರೇಟ್ ಕಡಿಮೆ ಮಾಡುವುದಿಲ್ಲ, ನಾವು ಕುಡಿಯೋದು ಬಿಡಂಗಿಲ್ಲ ಅಂತಾ ಫೀಲ್ ನಲ್ಲಿ ಮಾತನಾಡಿದ್ದಾರೆ.

    ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಬಂದೋಬಸ್ತ್‍ಗಾಗಿ 5 ಜನ ಹೆಚ್ಚುವರಿ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್ ಪೆಕ್ಟರ್, 430 ಪಿಎಸ್‍ಐ, 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೋಂಗಾರ್ಡ್ 1500, ಗರುಡಾ ಪೋರ್ಸ್ 1, ಕ್ಯೂಅರ್ಟಿ 2 ಪಡೆ, ವಾಟರ್ ಜೆಟ್ 2, ಕೆಎಸ್‍ಆರ್ ಪಿ 50 ತುಕಡಿ, ಸಿಎಆರ್ 30 ತುಕಡಿಗಳನ್ನು ನಿಯೋಜಿಸಲಾಗಿದೆ.

    ನಗರದ ಜನದಟ್ಟನೆ ಇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 1 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗೆಯೇ 15 ವಾಚ್ ಟವರ್, ನಾಲ್ಕು ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದು ಗಾಡಿ ಓಡ್ಸಿದ್ರೆ ಕಲ್ಯಾಣ ಮಂಟಪ ಫಿಕ್ಸ್!

    ಕುಡಿದು ಗಾಡಿ ಓಡ್ಸಿದ್ರೆ ಕಲ್ಯಾಣ ಮಂಟಪ ಫಿಕ್ಸ್!

    ಬೆಂಗಳೂರು: ಹೊಸ ವರ್ಷದಲ್ಲಿ ಕುಡಿದು ವಾಹನ ಚಲಾಯಿಸುವ ಸವಾರರೇ ಎಚ್ಚರ, ಯಾಕೆಂದರೆ ಕುಡಿದು ವಾಹನ ಚಲಾಯಿಸಿದರೇ ರಾತ್ರಿ ಪೂರ್ತಿ ಜಾಗರಣೆ ಮಾಡಬೇಕಾಗುತ್ತದೆ.

    ಹೌದು.ಹೊಸ ವರ್ಷಕ್ಕೆ ಮುಂಜಾಗೃತ ಕ್ರಮವಾಗಿ ಬೆಂಗಳೂರು ಸಂಚಾರಿ ಪೊಲೀಸರು ಹೊಸ ತಂತ್ರ ರೂಪಿಸಿದ್ದು, ಕುಡಿದು ವಾಹನ ಚಲಾಯಿಸುವವರಿಗಾಗಿ ಪೊಲೀಸರು ಕಲ್ಯಾಣ ಮಂಟಪವನ್ನು ಬುಕ್ ಮಾಡಿದ್ದಾರೆ. ಒಂದು ವೇಳೆ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ರಾತ್ರಿಯೆಲ್ಲಾ ಮದುವೆ ಮನೆಯಲ್ಲಿ ಲಾಕ್ ಆಗಬೇಕಾಗುತ್ತದೆ.

    ಈಗಾಗಲೇ ಸಂಚಾರಿ ಪೊಲೀಸರು 8 ಕಲ್ಯಾಣ ಮಂಟಪಗಳನ್ನ ಬುಕ್ ಮಾಡಿದ್ದಾರೆ. ಕುಡಿದು ಸಿಕ್ಕಿ ಬಿದ್ದವರನ್ನ ಕಲ್ಯಾಣ ಮಂಟಪದಲ್ಲಿ ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ರಾತ್ರಿಯಿಡಿ ಕಲ್ಯಾಣ ಮಂಟಪದಲ್ಲಿ ಜಾಗರಣೆ ಮಾಡಿಸಿ ಬೆಳಗ್ಗೆ ಮದ್ಯದ ಅಮಲು ಇಳಿದ ನಂತರ ಬಿಟ್ಟು ಕಳಿಸಲಾಗುತ್ತದೆ. ಹೊಸ ವರ್ಷ ಕುಡಿದು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಹೊಸ ಪ್ಲಾನ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ರಾತ್ರಿ ಜಾಗರಣೆ ಜೊತೆಗೆ ಸಾವಿರಾರು ರೂಪಾಯಿ ದಂಡ ಹಾಕಲು ಪೊಲೀಸರು ಸನ್ನದಾಗಿದ್ದಾರೆ. ಇದರ ಜೊತೆಗೆ ತುರ್ತು ಸಂದರ್ಭಕ್ಕಾಗಿ 100 ಅಂಬುಲೆನ್ಸ್ ಗಳನ್ನು ಸಹ ಬುಕ್ ಮಾಡಿದ್ದಾರೆ. ಅಂಬುಲೆನ್ಸ್ ನಿರ್ವಹಣೆಗೆ ಓರ್ವ ಅಧಿಕಾರಿ ನೇಮಕ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅಂಬುಲೆನ್ಸ್ ನಿಲ್ಲಿಸಲು ಸೂಚನೆಯನ್ನು ನೀಡಲಾಗಿದೆ. ಇನ್ನೂ ಸಂಜೆ 4 ಗಂಟೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಕಾಮರಾಜ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ 8 ಪ್ರಮುಖ ರಸ್ತೆಗಳು ಬಂದ್ ಆಗಲಿವೆ.

    ಈ ಪ್ರಮುಖ ರಸ್ತೆಯಲ್ಲಿ ಸಂಜೆ 4 ಗಂಟೆಯಿಂದ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದ್ದು, ಡ್ರಿಂಕ್ ಆಂಡ್ ಡ್ರೈವ್ ಕೇಸ್ ತಪಾಸಣೆ ವೇಳೆ ಸಂಪೂರ್ಣ ಚಿತ್ರೀಕರಣ ಮಾಡಲು ಸೂಚನೆ ನೀಡಲಾಗಿದೆ. ಯಾರೇ ಗಲಾಟೆ ಮಾಡಿದರೂ ರೆಕಾರ್ಡ್ ಮಾಡಬೇಕಾಗುತ್ತದೆ. ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಗೆ ಪ್ರತ್ಯೇಕ 200 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಹೇಳಿದ್ದಾರೆ.

    https://www.youtube.com/watch?v=lC6lrjh7AHk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮದ್ಯಕ್ಕೆ ಬಾರಿ ಡಿಮ್ಯಾಂಡ್-ಅಬಕಾರಿ ಇಲಾಖೆಗೆ ನ್ಯೂ ಇಯರ್ ಬಂಡವಾಳ

    ಮದ್ಯಕ್ಕೆ ಬಾರಿ ಡಿಮ್ಯಾಂಡ್-ಅಬಕಾರಿ ಇಲಾಖೆಗೆ ನ್ಯೂ ಇಯರ್ ಬಂಡವಾಳ

    ಬೆಂಗಳೂರು: ಹೊಸ ವರ್ಷದ ಹೊತ್ತಲ್ಲಿ ಮದ್ಯಕ್ಕೆ ಬಾರಿ ಡಿಮ್ಯಾಂಡ್ ಬಂದಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹೊಸವರ್ಷವೇ ಬಂಡವಾಳವಾಗಿದ್ದು, ಮದ್ಯ ಮಾರಾಟದಲ್ಲಿ ಶೇಕಡಾ 15ರಿಂದ 20ರಷ್ಟು ಹೆಚ್ಚಳವಾಗಿದೆ.

    ಅಬಕಾರಿ ಇಲಾಖೆ ನಗರದಲ್ಲಿ ಒಂದೇ ರಾತ್ರಿಗೆ 40 ಕೋಟಿ ರೂಪಾಯಿ ಟಾರ್ಗೆಟ್ ಮಾಡಲಾಗಿದ್ದು, ಐಷಾರಾಮಿ ಬಾರ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎರಡೂವರೆಯಿಂದ 3 ಲಕ್ಷ ಜನ ಭೇಟಿ ನೀಡುವ ಸಾಧ್ಯತೆ ಇದೆ. ಇನ್ನು 2016ರಲ್ಲಿ ಡಿಸೆಂಬರ್ 31ರ ಮದ್ಯ ಮಾರಾಟದ ವಹಿವಾಟು 31 ಕೋಟಿ ಇದ್ದರೆ, ಕಳೆದ ವರ್ಷ 12 ಕೋಟಿಗೆ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆವರೆಗೂ ಮದ್ಯ ಮಾರಾಟ ಮಾಡಲು ಬಾರ್ & ರೆಸ್ಟೋರೆಂಟ್ ಮತ್ತು ಹೋಟೆಲ್‍ಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ ತಡರಾತ್ರಿವರೆಗೂ ಬಸ್ ಸಂಚಾರ ಇರಲಿದೆ.

    ಈ ಹಿಂದೆಯೇ ಮಧ್ಯರಾತ್ರಿ 2 ಗಂಟೆವರೆಗೆ ಬಾರ್ ತೆರೆಯಲು ಅವಧಿಯನ್ನು ವಿಸ್ತರಿಸಿ ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶಿಸಿದ್ದರು. ಡಿಸೆಂಬರ್ 31ರ ಮಧ್ಯರಾತ್ರಿ 2 ಗಂಟೆ ತನಕ ಬಾರ್ ಗಳು ಓಪನ್ ಆಗಿರಲು ಪೊಲೀಸರಿಂದ ಅನುಮತಿ ಪಡೆಯಬೇಕಾಗುತ್ತದೆ. ಸಿಎಲ್2 ಹೊರತು ಪಡಿಸಿ ಉಳಿದೆಲ್ಲಾ ಬಾರ್, ರಿಕ್ರಿಯೇಷನ್ ಕ್ಲಬ್ ಗಳು ಮತ್ತು ರೆಸ್ಟೋರೆಂಟ್‍ಗಳು ಮೊದಲೇ ಅನುಮತಿ ಪಡೆಯಬೇಕೆಂದು ನಿಬಂಧನೆ ವಿಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯಪಾನ ಸೇವಿಸಿ ನೇಣಿಗೆ ಶರಣಾದ ದಂಪತಿ!

    ಮದ್ಯಪಾನ ಸೇವಿಸಿ ನೇಣಿಗೆ ಶರಣಾದ ದಂಪತಿ!

    ಕೊಪ್ಪಳ: ಕೌಟುಂಬಿಕ ಕಲಹದ ಹಿನ್ನೆಲೆ ಪತಿ ಪತ್ನಿ ಇಬ್ಬರು ಮದ್ಯಪಾನ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹುಲ್ಕಿಹಾಳ್ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಹುಲ್ಕಿಹಾಳ್ ಗ್ರಾಮದ ನಿವಾಸಿ ಈರಪ್ಪ(38) ಮತ್ತು ಉಮಾದೇವಿ(32) ನೇಣಿಗೆ ಶರಣಾದ ದಂಪತಿ. ಈರಪ್ಪ ಹಾಗೂ ಉಮಾದೇವಿ ಕುಟುಂಬದಲ್ಲಿ ಕೆಲ ದಿನಗಳಿಂದ ಇವರಿಬ್ಬರನ್ನು ನೋಡಿಕೊಳ್ಳುವ ವಿಚಾರದ ಬಗ್ಗೆ ಅವರ ಮಕ್ಕಳ ನಡುವೆ ಜಗಳ ನಡೆಯುತ್ತಿತ್ತು. ವಯಸ್ಸಾದ ಈರಪ್ಪ ಹಾಗೂ ಉಮಾದೇವಿಯನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಲ್ಲದೆ ತಂದೆ ತಾಯಿಯ ಬಳಿ ಹೊರಗಿನವರಂತೆ ವರ್ತಿಸುತ್ತಿದ್ದರು. ಆದರೂ ದಂಪತಿ ಹೇಗೋ ಜೀವನ ಸಾಗಿಸುತ್ತ ಬಂದಿದ್ದರು.

    ತಮ್ಮ ಕೊನೆಕಾಲದಲ್ಲಿ ಹೆತ್ತ ಮಕ್ಕಳೇ ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಅಂತ ದಂಪತಿ ಬೇಸತ್ತು ಹೋಗಿದ್ದರು. ಜೀವನದಲ್ಲಿ ಬಹಳ ನೊಂದಿದ್ದರು. ಆದ್ರೆ ಶನಿವಾರ ರಾತ್ರಿ ಅದೇನಾಯ್ತೋ ಗೊತ್ತಿಲ್ಲ ಈರಪ್ಪ ಹಾಗೂ ಉಮಾದೇವಿ ಇಬ್ಬರು ಮದ್ಯಪಾನ ಸೇವಿಸಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

    ಘಟನೆ ಕುರಿತು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನೈತಿಕ ಸಂಬಂಧದಿಂದ ಭಗವಾನ್ ಹುಟ್ಟಿದ್ರೆ, ರಾಮನೂ ಮಾಂಸಹಾರಿ: ಬಿಜೆಪಿ ಜಿಲ್ಲಾಧ್ಯಕ್ಷೆ

    ಅನೈತಿಕ ಸಂಬಂಧದಿಂದ ಭಗವಾನ್ ಹುಟ್ಟಿದ್ರೆ, ರಾಮನೂ ಮಾಂಸಹಾರಿ: ಬಿಜೆಪಿ ಜಿಲ್ಲಾಧ್ಯಕ್ಷೆ

    ಕಲಬುರಗಿ: ಪ್ರೊ. ಕೆ.ಎಸ್.ಭಗವಾನ್ ತಾಯಿ ಅನೈತಿಕ ಸಂಬಂಧ ಇಟ್ಟು ಅವನ ಹೆತ್ತಿದ್ದು ನಿಜವಾದ್ರೆ, ರಾಮನು ಕೂಡ ಮಾಂಸಹಾರಿ ಅವನು ಮದ್ಯ ಕುಡಿತಿದ್ದು ಅನ್ನೋದು ಸತ್ಯವಾಗುತ್ತೆ ಎಂದು ಪ್ರೊ. ಭಗವಾನ್ ವಿರುದ್ಧ ಕಲಬುರಗಿ ಮಹಿಳಾ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷೆ (ಪೇಜಾವರ ಸೇನೆ ಜಿಲ್ಲಾಧ್ಯಕ್ಷೆ) ದಿವ್ಯಾ ಹಾಗರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿಂದೂ ದೇವತೆಗಳ ವಿರುದ್ಧ ಭಗವಾನ್ ಹೇಳಿಕೆ ಖಂಡಿಸಿ ಪೇಜಾವರ ಸೇನೆ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿವ್ಯಾ ಹಾಗರಗಿ, ಪ್ರೊ. ಭಗವಾನನ್ನು ಶೀಘ್ರ ಬಂಧಿಸದಿದ್ದರೆ, ಅವನ ಬಾಯಿಗೆ ಆಸಿಡ್ ಹಾಕಿ ನಾಲಿಗೆ ಸುಟ್ಟು ಹಾಕುತ್ತೇವೆ. ಭಗವಾನ್ ಒಬ್ಬ ಲು… ಲ… ಎಷ್ಟು ಜನರಿಗೆ ಹುಟ್ಟಿದ್ದಾನೋ ಗೊತ್ತಿಲ್ಲ. ಹೀಗಾಗಿ ಭಗವಾನ್ ಬಾಯಿಗೆ ಬೀಗ ಹಾಕಿ, ಆತ ಹಿಂದೂ ದೇವತೆಗಳನ್ನ ನಿಂದಿಸುವುದೇ ಮಹಾನ್ ಕಾಯಕ ಎಂದುಕೊಂಡಿದ್ದಾನೆ. ಕುಮಾರಸ್ವಾಮಿ ಅವರಿಗೆ ಬೇಕಾದರೆ ತಮ್ಮ ಮನೆಯ ಹಣದಿಂದ ಆತನಿಗೆ ಭದ್ರತೆ ನೀಡಲಿ, ಜನರ ಹಣದಲ್ಲಿ ಆತನಿಗೆ ರಕ್ಷಣೆ ನೀಡಿರುವುದು ಸರಿಯಲ್ಲ ಅಂತಾ ಭಗವಾನ್ ವಿರುದ್ಧ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    ರಾಮ ಮಂದಿರ ಯಾಕೆ ಬೇಡ ಎನ್ನುವ ಪುಸ್ತಕದ ಮೂಲಕ ಹಿಂದೂಗಳ ಆರಾಧ್ಯ ರಾಮ, ಆಂಜನೇಯ, ಸೀತೆಯ ಬಗ್ಗೆ ನಿಂದಿಸಿದ ಪ್ರೊಫೆಸರ್ ಭಗವಾನ್ ಸದ್ಯ ತೀವ್ರ ಚರ್ಚೆಗೀಡಾಗಿದ್ದಾರೆ. ಹೀಗಾಗಿ ಅವರಿಗೆ ಜೀವ ಬೆದರಿಕೆಯಿದ್ದು, ಭಗವಾನ್ ಭದ್ರತೆಗಾಗಿ ರಾಜ್ಯ ಸರ್ಕಾರ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಸಶಸ್ತ್ರ ಮೀಸಲು ಪಡೆಯ ಮೂವರು ಪೊಲೀಸರು ಮತ್ತು ಓರ್ವ ಪೊಲೀಸ್ ಅಧಿಕಾರಿ ಭಗವಾನ್ ಮನೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಭಗವಾನ್ ಹೋದ ಬಂದ ಕಡೆಯೆಲ್ಲಾ ಓರ್ವ ಗನ್‍ಮ್ಯಾನ್ ಇರುತ್ತಾರೆ. ಮೈಸೂರಿನಲ್ಲಿರುವ ಭಗವಾನ್ ಮನೆಗೆ ಸರ್ಕಾರ ಕಡೆಯಿಂದಲೇ ಸಿಸಿಟಿವಿ ಅಳವಡಿಸಲಾಗಿದೆ. ಅದರ ನಿರ್ವಹಣೆಯನ್ನೂ ಸರ್ಕಾರವೇ ಮಾಡುತ್ತಿದೆ. ಇದನ್ನೂ ಓದಿ: ಭಗವಾನ್ ಭದ್ರತೆಗೆ ಅರ್ಧ ಕೋಟಿಗೂ ಹೆಚ್ಚು ಖರ್ಚು ಮಾಡ್ತಿದೆ ಸರ್ಕಾರ..!

    ಈ ಬಗ್ಗೆ ಭಗವಾನ್ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, “ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಇದು ಸರ್ಕಾರ ಮತ್ತು ಸದರಿ ಇಲಾಖೆಗೆ ಬಿಟ್ಟ ವಿಷಯವಾಗಿದೆ. ಸಂವಿಧಾನ ಪ್ರಕಾರವಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಭದ್ರತೆಗೆ ಖರ್ಚು ಆಗುತ್ತಿರುವ ಹಣದ ಬಗ್ಗೆ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಷಯ. ನನಗೆ ಈ ವಿಚಾರದ ಬಗ್ಗೆ ಕೇಳಬೇಡಿ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv