Tag: alcohol

  • ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ಪೊಲೀಸ್ರಿಗೆ ಸಿಕ್ಕಿಬಿದ್ದ!

    ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ಪೊಲೀಸ್ರಿಗೆ ಸಿಕ್ಕಿಬಿದ್ದ!

    ಬೆಂಗಳೂರು: ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ದುಂಡಾವರ್ತನೆ ತೋರಿದ ಚಾಲಕನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಮಡಿವಾಳದಲ್ಲಿ ನಡೆದಿದೆ.

    ಸಂದೀಪ್ ಪಾಟೀಲ್ ಮದ್ಯ ಸೇವಿಸಿ ಅಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕ. ಮಹಾರಾಷ್ಟ್ರ ಮೂಲದ ಅಂಬುಲೆನ್ಸ್ ಚಾಲಕನಾಗಿರುವ ಸಂದೀಪ್, ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಮಡಿವಾಳದ ಮೂಲಕ ನಗರಕ್ಕೆ ಆಗಮಿಸುತ್ತಿದ್ದನು.

    ಬೆಂಗಳೂರಿನ ಮಡಿವಾಳ ಸರ್ಕಲ್‍ನಲ್ಲಿ ಚೆಕ್ಕಿಂಗ್ ನಡೆಯುತ್ತಿತ್ತು. ಈ ವೇಳೆ ಪೊಲೀಸರನ್ನು ಕಂಡ ಸಂದೀಪ್ ಪಾಟೀಲ್ ವಾಹನ ಬಿಟ್ಟು ಓಡಲು ಯತ್ನಿಸಿದ. ಓಡುತ್ತಿದ್ದ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಲ್ಕೊಮೀಟರ್ ಚೆಕ್ಕಿಂಗ್ ವೇಳೆ ಚಾಲಕ ಮದ್ಯಪಾನ ಮಾಡಿರೋದು ಪತ್ತೆಯಾಗಿದೆ.

    ಬಳಿಕ ಸಂದೀಪ್ ಸಂಚಾರಿ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ಈ ವೇಳೆ ಚಾಲಕ ಪೊಲೀಸರನ್ನೇ ತಳ್ಳಾಡಿದ್ದಾನೆ. ಬಳಿಕ ಮಡಿವಾಳ ಸಂಚಾರಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಾಹನ ಜಪ್ತಿ ಮಾಡಿದ್ದಾರೆ.

  • ಕುಡಿದ ಮತ್ತಲ್ಲಿ ಮಹಿಳಾ ಭಕ್ತರನ್ನು ಚುಡಾಯಿಸಿದ ಬೆಂಗ್ಳೂರು ಯುವಕರಿಗೆ ಧರ್ಮದೇಟು

    ಕುಡಿದ ಮತ್ತಲ್ಲಿ ಮಹಿಳಾ ಭಕ್ತರನ್ನು ಚುಡಾಯಿಸಿದ ಬೆಂಗ್ಳೂರು ಯುವಕರಿಗೆ ಧರ್ಮದೇಟು

    ಮೈಸೂರು: ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.

    ಚಿಕ್ಕಮ್ಮ ಚಿಕ್ಕದೇವಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಯುವಕರು ಬೆಟ್ಟದ ಸಮೀಪವೇ ಕಾರು ನಿಲ್ಲಿಸಿ ಕಾರಿನೊಳಗೆ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ದೇವಸ್ಥಾನಕ್ಕೆ ಬರುತ್ತಿದ್ದ ಮಹಿಳಾ ಭಕ್ತರನ್ನು ಅವಾಚ್ಯ ಪದಗಳಿಂದ ಚುಡಾಯಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

    ಕಾರಿನಲ್ಲಿ ಸುಮಾರು ನಾಲ್ವರು ಯುವಕರಿದ್ದರು ಎಂದು ತಿಳಿದು ಬಂದಿದೆ. ಇದನ್ನು ನೋಡಿದ ಸ್ಥಳೀಯರು ರೊಚ್ಚಿಗೆದ್ದು ಏಕಾಏಕಿ ಕಾರಿನಿಂದ ಹೊರಗಡೆ ಎಳೆದು ಥಳಿಸಿದ್ದಾರೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕರು ಕಾರಿನ ಬಾಗಿಲು ಹಾಕಿಕೊಂಡಿದ್ದರಿಂದ ಸ್ಥಳೀಯರು ಕಾರನ್ನು ಜಖಂಗೊಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಯುವಕರು ಅವರಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

    ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

    ಬೆಂಗಳೂರು: ಬರ್ತ್ ಡೇ ಪಾರ್ಟಿ ಹೆಸರಲ್ಲಿ ಮದ್ಯಪಾನ ಮಾಡಿಸಿ ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಏಪ್ರಿಲ್ 24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವೇಲು ಹಾಗೂ ಆತನ ಸ್ನೇಹಿತರು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು. ವೇಲು ತನ್ನ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಜೀವನ್ ಭೀಮಾನಗರದ ಕ್ಲೌಡ್ ನೈನ್ ಪಬ್ ನಲ್ಲಿ ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದನು.

    ತನ್ನ ಗೆಳೆಯ ವೇಲು ಕರೆದ ಎಂದು ಮಹಿಳೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದಾಳೆ. ಪಾರ್ಟಿಯಲ್ಲಿ ವೇಲು ಹಾಗೂ ಆತನ ಸ್ನೇಹಿತರು ಮಹಿಳೆಗೆ ಮದ್ಯಪಾನ ಮಾಡಿಸಿ ಆಕೆ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಆರೋಪಿಗಳು ರಾತ್ರಿ 11ಕ್ಕೆ ಪಾರ್ಟಿ ಶುರು ಮಾಡಿ ತಡರಾತ್ರಿ 1ರವರೆಗೂ ಹುಟ್ಟುಹಬ್ಬ ಪಾರ್ಟಿ ಮಾಡಿದ್ದಾರೆ.

    ಮಹಿಳೆ ರಾತ್ರಿ 1 ಗಂಟೆ ಆಯ್ತು ಮನೆಗೆ ತೆರಳಬೇಕು ಎಂದು ಓಲಾ ಕ್ಯಾಬ್‍ಗಾಗಿ ಕಾಯುತ್ತ ಪಬ್‍ನ ಹೊರಗೆ ನಿಂತಿದ್ದಾಳೆ. ಈ ವೇಳೆ ವೇಲು ನಾನೇ ಡ್ರಾಪ್ ಕೊಡ್ತಿವಿ ಬಾ ಎಂದು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಆಗ ವೇಲು ಜೊತೆಗೆ ಕಾರಿನಲ್ಲಿದ್ದ ಇಬ್ಬರು ಸ್ನೇಹಿತರು ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಕೇಳಿದ್ದಾರೆ.

    ಇದಕ್ಕೆ ಮಹಿಳೆ ಒಪ್ಪದಿದ್ದಾಗ ಕಾರಿನಲ್ಲಿ ಆಕೆಯ ಮುಖದ ಮೇಲೆ ಹಲ್ಲೆ ಮಾಡಿದ್ದಲ್ಲದ್ದೇ, ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದಾರೆ. ಈ ವೇಳೆ ಮಹಿಳೆ ಸೇವ್ ಮೀ.. ಸೇವ್ ಮಿ.. ಎಂದು ಕಿರುಚಲು ಶುರು ಮಾಡಿದಾಗ ಆರೋಪಿಗಳು ಆಕೆಯನ್ನು ಕಾರಿನಿಂದ ಕೆಳಕ್ಕೆ ತಳ್ಳಿದ್ದಾರೆ.

    ಈ ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34, 504, 354 ಅಡಿ ಪ್ರಕರಣ ದಾಖಲಾಗಿದೆ.

  • ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

    ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

    ರಾಯಚೂರು: ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಶಿವರಾಜ್ ಎಂಬವರ ಹೋಟೆಲ್‍ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ರಾಯಚೂರಿನ ಲಿಂಗಸುಗೂರಿನ ಮುದಗಲ್‍ನ ಹೋಟೆಲ್ ಮೇಲೆ ದಾಳಿ ನಡೆಸಿ ಅಕ್ರಮ ಮದ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    7,800 ಲೀಟರ್ ಬಿಯರ್ ಹಾಗೂ 163 ಲೀಟರ್ ಲಿಕ್ಕರ್ ಸೇರಿದಂತೆ ಲಕ್ಷಾಂತರ ರೂ. ಅಕ್ರಮವಾಗಿ ಸಂಗ್ರಹಿಸಿಟ್ಟ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

    ಲಿಂಗಸುಗೂರು ಅಬಕಾರಿ ನಿರೀಕ್ಷರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಆರೋಪಿ ಶಿವರಾಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿ ಮಂಜುನಾಥ್ ಹಾಗೂ ಶಿವಾನಂದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

  • ನಿಷೇಧಾಜ್ಞೆ ನಡುವೆಯೂ ರಾಯಚೂರಲ್ಲಿ ಮದ್ಯ ಮಾರಾಟ

    ನಿಷೇಧಾಜ್ಞೆ ನಡುವೆಯೂ ರಾಯಚೂರಲ್ಲಿ ಮದ್ಯ ಮಾರಾಟ

    ರಾಯಚೂರು: ರಾಜ್ಯದಲ್ಲಿ ನಾಳೆ ಎರಡನೇ ಹಂತದ ಮತದಾನ ನಡೆಯುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ರಾಯಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆದಿದೆ.

    144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಮದ್ಯ ಮಾರಾಟ ನಿಷೇಧ ಹೇರುತ್ತಿದ್ದಂತೆ ಈಗಾಗಲೇ ಅಕ್ರಮವಾಗಿ ಮದ್ಯ ಮಾರಾಟ ಶುರುವಾಗಿದೆ.

    ಜಿಲ್ಲೆಯ ಸಿಂಧನೂರು ಪಟ್ಟಣದ ನಡುರಸ್ತೆಯಲ್ಲೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಸಿಂಧನೂರು ನಗರದಲ್ಲಿ ದುಪ್ಪಟ್ಟು ಹಣ ಪಡೆದು ಮಾರಾಟ ಮಾಡಲಾಗುತ್ತಿದೆ.

    ಮದ್ಯ ವ್ಯಸನಿಗಳು ದುಬಾರಿಯಾದರೂ ಹೆಚ್ಚು ಹಣ ಕೊಟ್ಟು ಅಕ್ರಮವಾಗಿ ಮದ್ಯ ಕೊಂಡುಕೊಳ್ಳುತ್ತಿದ್ದಾರೆ.

  • ಸ್ನೇಹಿತನನ್ನು ನೋಡಲು ಬಂದ ಐವರು ಯುವಕರಿಂದ ಕುಡಿದು ದಾಂಧಲೆ!

    ಸ್ನೇಹಿತನನ್ನು ನೋಡಲು ಬಂದ ಐವರು ಯುವಕರಿಂದ ಕುಡಿದು ದಾಂಧಲೆ!

    ತುಮಕೂರು: ಬಸ್ ಡಿಪೋದಲ್ಲಿ ಸ್ನೇಹಿತನನ್ನು ನೋಡಲು ಬಂದ ಐವರು ಪಾನಮತ್ತ ಯುವಕರು ದಾಂಧಲೆ ನಡೆಸಿದ್ದಾರೆ.

    ತುಮಕೂರು ಶಿರಾಗೇಟ್ ನಲ್ಲಿರುವ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿಯನ್ನು ನೋಡಲೆಂದು ಐವರು ಸ್ನೇಹಿತರು ಕಾರಿನಲ್ಲಿ ಬಂದಿದ್ದಾರೆ. ಖಾಸಗಿ ವಾಹನ ಆಗಿದ್ದರಿಂದ ಇವರ ಕಾರು ಡಿಪೋ ಒಳಕ್ಕೆ ಬಿಟ್ಟಿಲ್ಲ.

    ಮೊದಲೇ ಕುಡಿದ ಅಮಲಿನಲ್ಲಿದ್ದ ಐವರು ಯುವಕರು ಕಾರು ಒಳಗೆ ಬಿಡುವಂತೆ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಬಸ್ಸುಗಳು ಸಂಚರಿಸದಂತೆ ಅಡ್ಡ ನಿಂತು ತೊಂದರೆ ಮಾಡಿದ್ದಾರೆ. ಡಿಪೋ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಮೂಲಕ ಸುಮಾರು 1 ಗಂಟೆಗಳ ಕಾಲ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

    ಬಳಿಕ ತುಮಕೂರು ನಗರ ಪೊಲೀಸರು ಪಾನಮತ್ತ ಐವರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಹಣದ ಹೊಳೆಯಲ್ಲ, ಹೆಂಡದ ಹೊಳೆ – ಬಳ್ಳಾರಿಯಲ್ಲಿ 1.95 ಕೋಟಿ ಮೌಲ್ಯದ ಮದ್ಯ ವಶ!

    ಹಣದ ಹೊಳೆಯಲ್ಲ, ಹೆಂಡದ ಹೊಳೆ – ಬಳ್ಳಾರಿಯಲ್ಲಿ 1.95 ಕೋಟಿ ಮೌಲ್ಯದ ಮದ್ಯ ವಶ!

    ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಇದುವರೆಗೂ ನಡೆದ ಎಲ್ಲ ಚುನಾವಣೆಗಳಲ್ಲಿ ಕುರುಡು ಕಾಂಚಾಣದ್ದೇ ಸದ್ದು. 500, ಸಾವಿರ ರೂಪಾಯಿಯ ನೋಟುಗಳು ಹರಿದಾಡುತ್ತಿದ್ದ ಕಣದಲ್ಲಿ ಈಗ ಹೆಂಡದ ಹೊಳೆಯೇ ಹರಿಯುತ್ತಿದೆ.

    ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆದರೂ ಇಲ್ಲಿ ಹಣದ ಹೊಳೆಯನ್ನೆ ಹರಿಸಲಾಗುತ್ತದೆ ಎನ್ನುವ ಆರೋಪವಿದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಣಕ್ಕಿಂತ ಮದ್ಯವೇ ಸಾಕಷ್ಟು ಸುದ್ದಿಯಾಗುತ್ತಿದೆ. ಯಾಕೆಂದರೆ ಚುನಾವಣೆಗೆ ಇನ್ನೊಂದು ವಾರ ಬಾಕಿಯಿರುವಾಗಲೇ ವಶಪಡಿಸಿಕೊಂಡ ಮದ್ಯದ ಪ್ರಮಾಣ ನೋಡಿದರೆ ಹೆಂಡದ ಹೊಳೆ ಎಷ್ಟೊಂದು ಪ್ರಮಾಣದಲ್ಲಿದೆ ಅನ್ನೋದು ಇದೀಗ ಬಯಲಾಗಿದೆ.

    ನೀತಿ ಸಂಹಿತೆ ಜಾರಿಯಾದ ದಿನದಿಂದ ಇದುವರೆಗೂ ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರೋಬ್ಬರಿ 1,95,89,137 ಕೋಟಿ ಮೌಲ್ಯದ 33,841 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಇದೂ ದುಪ್ಪಟ್ಟು ಪ್ರಮಾಣವಾಗಿದೆ. ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಮತದಾರರಿಗೆ ಹಚ್ಚಲು ಮುಂದಾದ ಸಾಕಷ್ಟು ಪ್ರಮಾಣದ ಮದ್ಯವನ್ನ ಪೊಲೀಸರು, ಅಬಕಾರಿ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡು ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.

    ಜಿಲ್ಲೆಯಲ್ಲಿ 1,11,35,694 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ. ಮದ್ಯದ ಪ್ರಮಾಣವೇ ಹೆಚ್ಚಾಗಿರುವುದರಿಂದ ಅಕ್ರಮ ಮದ್ಯ ಸಾಗಾಟದ ಮೇಲೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣನ್ನು ಇರಿಸಿ ಹೆಂಡದ ಹೊಳೆ ತಪ್ಪಿಸಲು ಪ್ರಯತ್ನ ನಡೆಸುತ್ತಿದ್ದಾರೆ.

  • ಒಟ್ಟು 3 ದಿನ ಮದ್ಯಮಾರಾಟಕ್ಕೆ ಬ್ರೇಕ್

    ಒಟ್ಟು 3 ದಿನ ಮದ್ಯಮಾರಾಟಕ್ಕೆ ಬ್ರೇಕ್

    ಬೆಂಗಳೂರು: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.

    ಮೊದಲ ಹಂತದ ಚುನಾವಣೆಗಾಗಿ ಇಂದಿನಿಂದ ಮೂರು ದಿನಗಳ ಕಾಲ ಸ್ಥಗಿತವಾದರೆ, ದ್ವಿತೀಯ ಹಂತದ ಚುನಾವಣೆಯ ಸಂದರ್ಭದಲ್ಲಿ ದಿನಾಂಕ 23 ರಿಂದ 24ನವರೆಗೆ ಬಾರ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ಮುಕ್ತಾಯಕ್ಕೆ 48 ತಾಸು ಮುನ್ನ ಅಂದರೆ ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

    ಸ್ಥಳೀಯ ಮತದಾರರಲ್ಲದ ನಾಯಕರೂ ಇಂದು ಸಂಜೆಯೇ ಕ್ಷೇತ್ರಗಳನ್ನು ಬಿಟ್ಟು ಹೊರಡಬೇಕಾಗುತ್ತದೆ. ಈ ಕಾರಣಕ್ಕೆ ಬಹುತೇಕ ಅಭ್ಯರ್ಥಿಗಳು ರೋಡ್ ಶೋ ನಡೆಸಿ ಪ್ರಚಾರ ನಡೆಸಿ ಮತಯಾಚನೆ ನಡೆಸುತ್ತಾರೆ.

    ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬಳಿಕ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಬುಧವಾರ ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಈ ಪ್ರಚಾರದ ವೇಳೆ ಮತದಾರರಿಗೆ ನಾನಾ ಆಮಿಷಗಳನ್ನು ಒಡ್ಡುವ ಸಾಧ್ಯತೆಯಿತೆ. ಈ ರೀತಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.

  • ಮರ್ಯಾದೆ ಕೊಟ್ಟು ಮಾತನಾಡ್ತಿಲ್ಲ ಎಂದು ಕಪಾಳಮೋಕ್ಷ ಮಾಡಿದ್ದ ಸ್ನೇಹಿತನ ಕೊಲೆ

    ಮರ್ಯಾದೆ ಕೊಟ್ಟು ಮಾತನಾಡ್ತಿಲ್ಲ ಎಂದು ಕಪಾಳಮೋಕ್ಷ ಮಾಡಿದ್ದ ಸ್ನೇಹಿತನ ಕೊಲೆ

    ಬೆಂಗಳೂರು: ಮರ್ಯಾದೆ ಕೊಟ್ಟು ಮಾತನಾಡುತ್ತಿಲ್ಲ ಎಂದು ಕಪಾಳಮೋಕ್ಷ ಮಾಡಿದ ಸ್ನೇಹಿತನನ್ನು ವ್ಯಕ್ತಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.

    ಕಳೆದ ಜನವರಿ ತಿಂಗಳ ಭಾನುವಾರ ರಾತ್ರಿ ಮಲಗಿದ್ದ ರಮೇಶ್ ಎಂಬಾತ ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟಿದ್ದನು. ರಮೇಶ್ ಸಾವನ್ನಪ್ಪಿ ನಾಲ್ಕು ದಿನಗಳ ನಂತ್ರ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿತ್ತು. ವಿಷಯ ತಿಳಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅತಿಯಾದ ಕುಡಿತದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂದು ಶಂಕಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು.

    ನಡೆದಿದ್ದೇನು?
    ಉತ್ತರಪ್ರದೇಶದ ಗೋರಖ್‍ಪುರದಿಂದ ಬೆಂಗಳೂರಿಗೆ ಬಂದು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಮೃತ ರಮೇಶ್ ಮತ್ತು ಮನೋಹರ್ ಚಿಕ್ಕಂದಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದವರು. ಅದೇ ಕಾರಣಕ್ಕೆ ಕೆಲಸ ಹುಡುಕಿಕೊಂಡು ಜೊತೆಗೆ ಬೆಂಗಳೂರಿಗೆ ಬಂದಿದ್ದರು. ಜನವರಿಯ ರಜೆ ದಿನ ಇಬ್ಬರು ಕುಳಿತುಕೊಂಡು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ರಮೇಶ್, ಇತ್ತೀಚಿಗೆ ನೀನು ನನಗೆ ಮಾರ್ಯಾದೆ ಕೊಟ್ಟು ಮಾತಾಡ್ತಿಲ್ಲ, ಎಂದು ಮನೋಹರ್ ಕಪಾಳಕ್ಕೆ ಹೊಡೆದಿದ್ದ. ಇದರಿಂದ ಕೋಪಗೊಂಡ ಮನೋಹರ್ ರಮೇಶ್ ಎದೆಗೆ ಬಲವಾಗಿ ಒದ್ದಿದ್ದ, ಪರಿಣಾಮ ರಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದನು.

    ಮೃತದ ದೇಹದ ಮರಣೋತ್ತರ ಪರೀಕ್ಷೆಯ ವರದಿ ನೋಡಿದ ಪೊಲೀಸರಿಗೆ ಎದೆಮೂಳೆ ಮುರಿದಿರುವುದು ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ತನಿಖೆಗೆ ಇಳಿದ ಪೊಲೀಸರು ಆರೋಪಿ ಮನೋಹರ್‍ನನ್ನು ಉತ್ತರಪ್ರದೇಶದಲ್ಲಿ ಬಂಧಿಸಿ ಕರೆತಂದಿದ್ದಾರೆ.

  • ಎಣ್ಣೆ ಬಾಟಲ್‍ಗಾಗಿ ವ್ಯಕ್ತಿಯ ಬರ್ಬರ ಕೊಲೆ: ಮೂವರು ಅರೆಸ್ಟ್

    ಎಣ್ಣೆ ಬಾಟಲ್‍ಗಾಗಿ ವ್ಯಕ್ತಿಯ ಬರ್ಬರ ಕೊಲೆ: ಮೂವರು ಅರೆಸ್ಟ್

    ಬೆಂಗಳೂರು: ಮದ್ಯ ಇರುವ ಬಾಟಲ್‍ಗಾಗಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಯುವಕರನ್ನು ಪುಲಿಕೇಶಿನಗರ ಪೊಲೀಸರು ಇಂದು ಬಂಧಿಸಿದ್ದಾರೆ.

    ಪುಲಿಕೇಶಿನಗರ ಸತ್ಯಶೀಲನ್ ಕೊಲೆಯಾಗಿದ್ದ ವ್ಯಕ್ತಿ. ಸೆಲ್ವರಾಜ್ ತುಳಸಿರಾಮ (18), ಲೋಕೇಶ್ (20) ಹಾಗೂ ಸುನೀಲ್ ಕುಮಾರ್ (24) ಬಂಧಿತ ಯುವಕರು. ಈ ಘಟನೆಯು ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ನಡೆದಿತ್ತು.

    ಆಗಿದ್ದೇನು?:
    ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ರಾತ್ರಿ ಸತ್ಯಶೀಲನ್ ಕೈಯಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಹೋಗುತ್ತಿದ್ದ. ಈ ವೇಳೆ ಲೋಕೇಶ್, ಸೆಲ್ವರಾಜ್ ಹಾಗೂ ಸುನೀಲ್ ಮದ್ಯ ಹುಡುಕಾಡುತ್ತಿದ್ದರು. ಸತ್ಯಶೀಲನ್ ಕೈಯಲ್ಲಿದ್ದ ಮದ್ಯದ ಬಾಟಲ್ ನೋಡಿದ ಯುವಕರು, ಮೊದಲಿಗೆ ಮದ್ಯ ಕೊಡುವಂತೆ ಕೇಳಿದ್ದಾರೆ. ಆದರೆ ಸತ್ಯಶೀಲನ್ ಮದ್ಯ ಬಾಟಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಚಾಕುವಿನಿಂದ ಇರಿದು, ಬಾಟಲ್ ಕಿತ್ತುಕೊಂಡು ಪರಾರಿಯಾಗಿದ್ದರು.

    ಈ ಕುರಿತು ಪುಲಿಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಆರೋಪಿಗಳನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.