Tag: alcohol

  • 100ಕ್ಕೆ ಕರೆ ಮಾಡಿ ಪೊಲೀಸರಲ್ಲಿ ಮದ್ಯ ತರಲು ಹೇಳಿದ ಭೂಪ

    100ಕ್ಕೆ ಕರೆ ಮಾಡಿ ಪೊಲೀಸರಲ್ಲಿ ಮದ್ಯ ತರಲು ಹೇಳಿದ ಭೂಪ

    ಭೋಪಾಲ್: ಪೊಲೀಸ್ ಠಾಣೆಗೆ ಕರೆ ಮಾಡಿ ಕುಡುಕನೊಬ್ಬ ತನಗೆ ಮದ್ಯ ತಂದು ಕೊಡಿ ಎಂದು ಆರ್ಡರ್ ಮಾಡಿದ ವಿಡಿಯೋ ವೈರಲ್ ಆಗಿದೆ. ಯಾವುದೇ ಭಯವಿಲ್ಲದೆ ಧೈರ್ಯವಾಗಿ ಖಾಕಿಗೇ ಕುಡುಕ ಆರ್ಡರ್ ಮಾಡಿರುವ ಪರಿಗೆ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

    ಮಧ್ಯಪ್ರದೇಶದ ಕೊಟಾರ್ ಪ್ರದೇಶದ ನಿವಾಸಿ ಸಚಿನ್ ಮದ್ಯದ ನಶೆಯಲ್ಲಿ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮದ್ಯ ಕೊಡಿಸಿ ಎಂದಿದ್ದಾನೆ. ಆತನ ಮಾತು ಕೇಳಿ ಸ್ಥಳಕ್ಕೆ ಹೋದ ಪೊಲೀಸರಿಗೆ ಆತ ಧೈರ್ಯದಿಂದ ಉತ್ತರಿಸಿದ ಪರಿಗೆ ಸ್ವತಃ ಪೊಲೀಸರೇ ನಕ್ಕಿದ್ದಾರೆ. ಕುಡುಕ ಪೊಲೀಸರ ಬಳಿ ನನಗೆ ಮದ್ಯ ಕೊಡುತ್ತಿಲ್ಲ. ಏನಾದರೂ ಮಾಡಿ ಮದ್ಯ ಕೊಡಿಸಿ. ನಾನು ಯಾರ ಮೇಲೂ ದೂರು ಕೊಡುವುದಿಲ್ಲ. ನನಗೆ ಮದ್ಯ ಬೇಕು ಅಷ್ಟೆ ಎಂದು ಪೊಲೀಸರ ಎದುರೇ ಹೇಳಿದ್ದಾನೆ.

    ವಿಡಿಯೋದಲ್ಲಿ ಕುಡುಕ ಮದ್ಯದ ಅಂಗಡಿ ಮುಂದೆ ನಿಂತು ಪೊಲೀಸರಿಗೆ ಎಣ್ಣೆ ಕೊಡಿಸಿ ಎಂದು ಆರ್ಡರ್ ಮಾಡಿದ್ದಾನೆ. ಇದನ್ನು ಸ್ವತಃ ಪೊಲೀಸರೇ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಎಷ್ಟು ಬೆಳಗ್ಗೆ ಯಾಕೆ ಕುಡಿಯುತ್ತಿದ್ದೀಯಾ? ಇದೇ ಮದ್ಯ ಅಂಗಡಿಯಲ್ಲೇ ಯಾಕೆ ಕುಡಿಯಬೇಕು ನೀನು ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಇದಕ್ಕೆ ಉತ್ತರಿಸಿದ ಕುಡುಕ, ಇದು ನನ್ನ ತಾತನ ಅಂಗಡಿ ಇಲ್ಲಿ ನಾನು ಹಣ ಕೊಟ್ಟು ಕುಡಿಯಲು ಬಂದರೂ ಅವರು ನನಗೆ ಮದ್ಯ ಕೊಡುವುದಿಲ್ಲ. ಮೊಮ್ಮಗ ಮದ್ಯ ಕುಡಿಯಬಾರದು ಎಂದು ಹೇಳುತ್ತಾರೆ. ಅದಕ್ಕೆ ಬೆಳಗ್ಗೆ ಇಲ್ಲೇ ಹತ್ತಿರವಿರುವ ಅಂಗಡಿಯಲ್ಲಿ ಕುಡಿದು ಬಂದೆ. ಈಗ ನನಗೆ ಕುಡಿಯಬೇಕು, ಮದ್ಯ ಕೊಡಿಸಿ ಅಷ್ಟೇ ಎಂದು ಆರ್ಡರ್ ಮಾಡಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕುಡುಕನ ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಮದ್ಯ ಒಳಗೆ ಹೋದರೆ ಎಂಥಹ ವ್ಯಕ್ತಿಗಾದರೂ ಧೈರ್ಯ ಬರುತ್ತದೆ. ಪೊಲೀಸರು ಆಗಿದ್ದರೇನು? ಯಾರಾದರೇನು? ಕಾನ್ಫಿಂಡೆನ್ಸ್ ನಲ್ಲಿ ಇರುತ್ತಾರೆ ಎಂದು ಕಾಲೆಳೆದಿದ್ದಾರೆ.

  • ಎಲೆಕ್ಷನ್ ಹೀಟ್ ಅಕ್ರಮ ಮದ್ಯ ಮಾರಾಟ – ರಾತ್ರಿ ಬನ್ನಿ ಎಷ್ಟು ಬೇಕಾದ್ರೂ ಎಣ್ಣೆ ಕೊಡ್ತೀವಿ

    ಎಲೆಕ್ಷನ್ ಹೀಟ್ ಅಕ್ರಮ ಮದ್ಯ ಮಾರಾಟ – ರಾತ್ರಿ ಬನ್ನಿ ಎಷ್ಟು ಬೇಕಾದ್ರೂ ಎಣ್ಣೆ ಕೊಡ್ತೀವಿ

    – ಬಾರ್ ಮಾಲೀಕರ ಭರ್ಜರಿ ಆಫರ್

    ಬೆಂಗಳೂರು: ಉಪಚುನಾವಣೆಯ ಕಾವು ಹೆಚ್ಚಾದಂತೆ, ಮತದಾರರ ಬೇಟೆಗೆ ಅಖಾಡ ಸಜ್ಜಾಗಿದೆ. ಎಲೆಕ್ಷನ್ ಟೈಂನಲ್ಲಿ ಈಗ ಎಣ್ಣೆ ಕಿಕ್ಕು ಸಖತ್ ಸೌಂಡ್ ಮಾಡುತ್ತಿದೆ. ಬೈ ಎಲೆಕ್ಷನ್ ಅಖಾಡದಲ್ಲಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಎಣ್ಣೆ ಭರಾಟೆ ಹೇಗೆ ನಡೆಯುತ್ತಿದೆ ಎಂಬುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

    ಬೈ ಎಲೆಕ್ಷನ್ ಅಖಾಡದ ಕಿಕ್ ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಮಧ್ಯೆ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ, ಸಖತ್ ಎಣ್ಣೆ ವ್ಯೂಹ ಹೆಣೆಯಲಾಗುತ್ತಿದೆ. ಬಾರ್ ಗಳ ಎಣ್ಣೆ ಮೇಲೆ ಅಬಕಾರಿ ಹೆಚ್ಚು ಕಣ್ಣು ಇಟ್ಟಿರುವುದರಿಂದ ಈಗ ಎಲೆಕ್ಷನ್ ಎಣ್ಣೆ ಸೇಲ್‍ಗೆ ಹೊಸ ದಾರಿ ಹುಡುಕಿಕೊಂಡಿರುವುದು ಪಬ್ಲಿಕ್ ಟಿವಿಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

    ಸ್ಥಳ : ಮಾಗಡಿ ರೋಡ್
    ಬಾರ್ & ರೆಸ್ಟೋರೆಂಟ್

    ಮಾಗಡಿ ರೋಡ್ ಪಕ್ಕದಲ್ಲಿಯೇ ಇರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಇದು. ಚುನಾವಣಾ ಸಂದರ್ಭದಲ್ಲಿ ಅಬಕಾರಿ ನಿಯಮಗಳನ್ನು ಬಾರ್ ಗಳು ಪಾಲಿಸಬೇಕು. ದಿನಕ್ಕೆ ಎಷ್ಟು ಕೇಸ್ ಮಾರಾಟ ಆಗುತ್ತೆ ಎಂಬ ಮಾಹಿತಿಯನ್ನು ನೀಡಬೇಕು. ಆದರೆ ಇದ್ಯಾವುದನ್ನೂ ಪಾಲಿಸದ ಬಾರ್ ಮಾಲೀಕರು, ಚುನಾವಣೆಗೆ ಎಣ್ಣೆ ಸಪ್ಲೈ ಮಾಡುತ್ತೀರಾ ಎಂದು ಕೇಳಿದ್ದೇ ತಡ, ನಾವು ಅಬಕಾರಿಗೆ ಮಾರಾಟದ ಲೆಕ್ಕ ಕೊಡದೇ ನಿಮಗೆ ಮಾರುತ್ತೇವೆ ಡೋಂಟ್ ವರಿ, ಎಷ್ಟು ಕೇಸ್ ಬೇಕಾದರೂ ಕೊಡುತ್ತೇವೆ. ನಾವು ಕೊಡುವ ಬಾಟಲ್ ಮೇಲೆ ಇರುವ ಸೀಲ್ ಕಿತ್ತಾಕಿ, ನಿಮ್ಮ ಮನೆಗಳಲ್ಲಿ ಇಷ್ಟಿಷ್ಟು ಕೇಸ್ ಎಂದು ಇಟ್ಟುಕೊಳ್ಳಿ ಮತದಾರರಿಗೆ ಹಂಚಿ ಎಂದು ಸಲಹೆ ನೀಡುತ್ತಾರೆ.

    ಪ್ರತಿನಿಧಿ : 10 ಕೇಸ್ ಎಣ್ಣೆ ಬೇಕಿತ್ತಲ್ಲ
    ಮಾಲೀಕ : ಯಾವುದು
    ಪ್ರತಿನಿಧಿ : ಟೋಬ್ಯಾಕ್
    ಮಾಲೀಕ : ಯಾವುದು ಕೋಲ್ಡಾ
    ಪ್ರತಿನಿಧಿ : ಹು ಎಲೆಕ್ಷನ್ ಇತ್ತಲ್ಲ ಹಾಗಾಗಿ
    ಮಾಲೀಕ : ಗೊತ್ತಾಯ್ತು ಹಂಚುವುದಕ್ಕೆ
    ಪ್ರತಿನಿಧಿ : ಹು ಸರ್ ಬೇಕಿತ್ತು
    ಮಾಲೀಕ : ಎರಡು ದಿನ ರಜೆ ಇದೇ ಇವತ್ತೇ ತಗೊಂಡು ಹೋಗಿ ಇಟ್ಟುಕೊಂಡು ಬಿಡಿ
    ಪ್ರತಿನಿಧಿ : ಭಾನುವಾರ ಬೇಕಿರೋದು
    ಮಾಲೀಕ : ಸಂಜೆ ಬನ್ನಿ ನಂಬರ್ ಕೊಟ್ಟೋಗಿ
    ಪ್ರತಿನಿಧಿ : ನಂಬರ್ ಕೊಡ್ತೀವಿ. ಹೇಗೆ ಎಲೆಕ್ಷನ್ ಟೈಂನಲ್ಲಿ ಸಿಗುತ್ತಾ
    ಮಾಲೀಕ : ಸಿಗುತ್ತೆ ಆದರೆ ಪ್ಯಾಕೇಟ್ ಮೇಲಿರುವ ಲೇಬಲ್ ಕಿತ್ತಾಕಿ
    ಪ್ರತಿನಿಧಿ : ಹೌದಾ
    ಮಾಲೀಕ : ಲೇಬಲ್ ಕಿತ್ತಾಕಿ ಹಂಚಿ ಇಂತಹ ಬಾರು ಎಂದು ಗೊತ್ತಾಗಲ್ಲ
    ಪ್ರತಿನಿಧಿ : ಹೌದಾ ಹಾಗೇ ಮಾಡಬಹುದಾ
    ಮಾಲೀಕ : ಹಾಗೇ ಮಾಡಿ. ಜಾಸ್ತಿ ಕೇಸ್ ನಿಮ್ಮ ಕ್ಲೋಸ್ ಆಗಿ ಇರೋರು ಮನೇಲಿ ಹಂಚಿ
    ಪ್ರತಿನಿಧಿ : ಹಂಚಬಹುದು
    ಮಾಲೀಕ : ನಿಮ್ಮ ನಂಬರ್ ಕೊಟ್ಟು ಹೋಗಿ ಸಂಜೆ ಬನ್ನಿ
    ಪ್ರತಿನಿಧಿ : ನಿಮ್ಮ ನಂಬರ್ ಹೇಳಿ ಕಾಲ್ ಮಾಡ್ತೀನಿ

    ಸ್ಥಳ : ಮಹಾಲಕ್ಷ್ಮಿ ಲೇಔಟ್ ರೋಡ್
    ಎಂಆರ್‌ಪಿ ಶಾಪ್

    ಮಹಾಲಕ್ಷ್ಮಿ ಲೇಔಟ್ ರೋಡ್‍ನಲ್ಲಿ ಇರುವ ಎಂಆರ್‌ಪಿ ಶಾಪ್‍ನಲ್ಲಿ ಕೇವಲ ಪಾರ್ಸಲ್ ನೀಡುವುದು ಎಂದು ಪಬ್ಲಿಕ್ ಟಿವಿ ತಂಡ ಹೋದರೆ ಅಲ್ಲಿ ಕುಡಿಯೋದಕ್ಕೆ ಅವಕಾಶ ಕೂಡ ಮಾಡಿಕೊಡಲಾಗುತ್ತಿದೆ. ಜೊತೆಗೆ ನಾಲ್ಕು ಕೇಸ್ ಬಿಯರ್ ಬೇಕು ಚುನಾವಣಾ ನೀತಿ ಸಂಹಿತೆ ಇದೆ ಏನು ಮಾಡುವುದು ಎಂದು ಕೇಳಿದರೆ. ಹೌದು ನೀತಿ ಸಂಹಿತೆ ಇದೆ ಅಷ್ಟೊಂದು ಕೊಡುವುದಕ್ಕೆ ಆಗಲ್ಲ. ರಾತ್ರಿ 10 ಗಂಟೆ ಮೇಲಾದರೆ ನೋಡೋಣ. ಇದು ಎಂಆರ್‌ಪಿ ಆದರೂ ಇಲ್ಲಿಯೇ ಕುಡಿಯಬಹುದು ಎಂದು ಹೇಳುತ್ತಾರೆ.

    ಬಾರ್ ಗಳಲ್ಲಿ ಮಾತ್ರವಲ್ಲ ಈ ಎಲೆಕ್ಷನ್ ಎಣ್ಣೆ ವ್ಯಾಪಾರ, ಡಾಬಾಗಳಲ್ಲಿ ಊಟದ ಜೊತೆ ಈಗ ಎಲೆಕ್ಷನ್ ಸ್ಪೆಷಲ್ ಎಣ್ಣೆ ಪ್ಯಾಕೇಜ್ ಭರ್ಜರಿಯಾಗಿ ನೀಡಲಾಗುತ್ತಿದೆ. ಆಯಾಯ ಕ್ಷೇತ್ರದ ಮತದಾರರನ್ನು ಸೆಳೆಯುವುದಕ್ಕೆ ಈ ಗಿಫ್ಟ್ ನೀಡಲಾಗುತ್ತಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಗಡಿ ರೋಡ್ ಉದ್ದಕ್ಕೂ ಇರುವ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಎಲೆಕ್ಷನ್ ಬೆನ್ನಲ್ಲೆ ಎಣ್ಣೆ ಕಿಕ್‍ಗೆ ಹಾಡುಹಗಲೇ ಕುಡುಕರಿಂದ ಡಾಬಗಳಂತೂ ಹೌಸ್‍ಫುಲ್ ಆಗಿದೆ. ನೀತಿ ಸಂಹಿತೆ ಜಾರಿಯಲ್ಲಿದರೂ ಈ ಪರಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ ಅಂದರೆ ಬಹುತೇಕ ಇದಕ್ಕೆ ಸ್ಪಾನ್ಸರ್ಸ್ ಕೂಡ ಸ್ಥಳೀಯ ನಾಯಕರು ಎನ್ನುವ ಅನುಮಾನ ಶುರುವಾಗಿದೆ.

    ಪ್ರತಿನಿಧಿ : ಏನಿದೆ
    ಮಾಲೀಕ : ಚಿಕನ್ ಫ್ರೈ, ಚಿಕನ್ ಕೂರ್ಮಾ, ಮಟನ್ ರೈಸ್
    ಪ್ರತಿನಿಧಿ : ಎಷ್ಟು ಸಿಂಗಲ್ ಪರೋಟ
    ಮಾಲೀಕ : ಸಿಂಗಲ್ ಪರೋಟ ಸಾಕ
    ಪ್ರತಿನಿಧಿ : ಸಾಕು ಮತ್ತೆ ಏನು ಸಿಗುತ್ತೆ
    ಮಾಲೀಕ : ಏನು ಬೇಕು ಹೇಳಿ
    ಪ್ರತಿನಿಧಿ : ಎಣ್ಣೆ ಸಿಗುತ್ತಾ
    ಮಾಲೀಕ : ಹು ಸಿಗುತ್ತೆ
    ಪ್ರತಿನಿಧಿ : ಫೋನ್ ಪೇ ಆಗುತ್ತಾ
    ಮಾಲೀಕ : ಒಳಗಡೆ ಕ್ಯಾಶ್ ಕೊಡಬೇಕು
    ಪ್ರತಿನಿಧಿ : ಹೌದಾ ಪರೋಟ ತಗೋಬೇಕಾ
    ಮಾಲೀಕ : ಪರೋಟಗೆ ಏನಾದ್ರು ಬೇಕಾ
    ಪ್ರತಿನಿಧಿ : ಎಣ್ಣೆ ಬೇಕಿತ್ತು

    ಸ್ಥಳ : ಕಂಠೀರವ ಸ್ಟೇಡಿಯಂ ರೋಡ್
    ಎಂಆರ್‌ಪಿ ಶಾಪ್

    ಕೆಲವು ಬಾರ್ ಗಳಲ್ಲಿ ಕೇಸ್ ಗಟ್ಟಲೆ ಎಣ್ಣೆ ಬೇಕು ಎಂದರೆ, ಇಲ್ಲ ಸರ್ ಕೊಡುವುದಕ್ಕೆ ಆಗಲ್ಲ ಎಲೆಕ್ಷನ್ ಇದೆ ಕೊಡಲ್ಲ ಎಂದು ಹೇಳುತ್ತಾರೆ. ಬೇರೆ ಶಾಪ್ ಎಂಆರ್‌ಪಿನಲ್ಲಿ ಕೇಳಿ ಕೊಡುತ್ತಾರೆ. ನಾವು ಕೊಡಲ್ಲ ಎಂದು ನಿಯಮಗಳನ್ನು ಪಾಲಿಸುತ್ತಿದ್ದಾರೆ.

    ಪ್ರತಿನಿಧಿ : ಎಣ್ಣೆ ಬೇಕಿತ್ತಲ್ಲ ಸರ್ ನಾಲ್ಕು ಕೇಸ್
    ಸಿಬ್ಬಂದಿ : ಈವಾಗ ಸಿಗಲ್ಲ ಸರ್
    ಪ್ರತಿನಿಧಿ : ಯಾಕ್ ಸರ್
    ಸಿಬ್ಬಂದಿ : ಎಲೆಕ್ಷನ್ ಇದೆಯಲ್ಲ
    ಪ್ರತಿನಿಧಿ : ಇದ್ದರೇನು ಕೊಡಿ ಸರ್ ಮದುವೆ ಇದೆ
    ಸಿಬ್ಬಂದಿ : ಕೊಡಲ್ಲ ಸರ್ ಪ್ರಾಬ್ಲಂ ಆಗಿದೆ
    ಪ್ರತಿನಿಧಿ : ಮತ್ತೇ ಹೇಗೆ
    ಸಿಬ್ಬಂದಿ : ಬೇರೆ ಕಡೆ ಸಿಗುತ್ತೆ ನೋಡಿ
    ಪ್ರತಿನಿಧಿ : ಎಲ್ಲಿ ಸರ್
    ಸಿಬ್ಬಂದಿ : ಮುಂದೆ ಹೋಗಿ ಸಿಗುತ್ತೆ

  • ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

    ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

    ನವದೆಹಲಿ: ಸಾಮಾಜಿಕ ಜಾಲತಾಣದಿಂದ ಪರಿಚಯವಾಗಿದ್ದ ಗೆಳೆಯನ ಜೊತೆ ತನ್ನ ಹುಟ್ಟುಹಬ್ಬ ಆಚರಿಸಲು ಹೋಟೆಲ್ ಬುಕ್ ಮಾಡಿದ್ದ ವಿವಾಹಿತ ಮಹಿಳೆ ಬರ್ಬರವಾಗಿ ಕೊಲೆಯಾದ ಘಟನೆ ದೆಹಲಿಯ ಅಲಿಪುರದಲ್ಲಿ ನಡೆದಿದೆ.

    ಅಲಿಪುರದಲ್ಲಿರುವ ಓಯೋ ಹೋಟೆಲ್‍ನಲ್ಲಿ ಈ ಕೊಲೆ ನಡೆದಿದೆ. 33 ವರ್ಷದ ಮಹಿಳೆಯನ್ನು ವಿಕ್ಕಿ ಮನ್(21) ಕೊಲೆ ಮಾಡಿದ್ದಾನೆ. ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ವಿಕ್ಕಿ ಪರಿಚಯವಾಗಿದ್ದನು. ಬಳಿಕ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಸೋಮವಾರ ಮಹಿಳೆಯ ಹುಟ್ಟುಹಬ್ಬವಿತ್ತು. ಹೀಗಾಗಿ ಆಕೆ ವಿಕ್ಕಿ ಜೊತೆ ಹುಟ್ಟುಹಬ್ಬದ ಪಾರ್ಟಿ ಮಾಡಲು ರೂಮ್ ಬುಕ್ ಮಾಡಿದ್ದಳು. ರಾತ್ರಿ ಇಬ್ಬರೂ ರೂಮ್‍ನಲ್ಲಿ ಮದ್ಯ ಸೇವಿಸುತ್ತ ಪಾರ್ಟಿ ಮಾಡುತ್ತಿದ್ದರು.

    ಈ ವೇಳೆ ವಿನಾಕಾರಣ ಮಹಿಳೆ ವಿಕ್ಕಿಯ ಕೆನ್ನೆಗೆ ಬಾರಿಸಿದ್ದಾಳೆ. ಇದಕ್ಕೆ ಕೋಪಗೊಂಡು ವಿಕ್ಕಿಯೂ ಮಹಿಳೆಗೆ ತಿರುಗಿಸಿ ಎರಡೇಟು ಕೊಟ್ಟಿದ್ದಾನೆ. ಅದಕ್ಕೆ ಸುಮ್ಮನಾಗದ ಮಹಿಳೆ ಕೈಯಲ್ಲಿದ್ದ ಮದ್ಯವನ್ನು ವಿಕ್ಕಿ ಮೈಮೇಲೆ ಎರಚಿದ್ದಾಳೆ. ಹೀಗೆ ಇಬ್ಬರ ನಡುವೆ ವಿನಾಕಾರಣ ಜಗಳ ಶುರುವಾಗಿ ಬಳಿಕ ಅದು ತಾರಕಕ್ಕೇರಿ, ಸಿಟ್ಟಿನಲ್ಲಿದ್ದ ವಿಕ್ಕಿ ಮಹಿಳೆಯ ಕತ್ತು ಹಿಸುಕಿ ಹೋಟೆಲ್‍ನಿಂದ ಎಸ್ಕೇಪ್ ಆಗಿದ್ದಾನೆ.

    ವಿಕ್ಕಿ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಸಿಬ್ಬಂದಿ ಆತನ ಬಳಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಆಗ ನಾನು ಮನೆಗೆ ಹೋಗುತ್ತಿದ್ದೇನೆ, ಮಹಿಳೆ ರೂಮ್‍ನಲ್ಲಿಯೇ ಇದ್ದಾಳೆ. ಆದಷ್ಟು ಬೇಗ ಹಿಂದಿರುಗುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಹೋಟೆಲ್ ಸಿಬ್ಬಂದಿ ತಿಂಡಿ ಕೊಡಲು ಹೋದಾಗ ಬಾಗಿಲು ತಟ್ಟಿದರೂ ತೆಗೆಯದ್ದನ್ನು ನೋಡಿ ಬೀಗ ಒಡೆದಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಕಿವಿ, ಮೂಗಿನಿಂದ ರಕ್ತ ಸುರಿದ ಸ್ಥಿತಿಯಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡು ಗಾಬರಿಗೊಂಡು ಹೋಟೆಲ್ ಮಾಲೀಕನಿಗೆ ಮಾಹಿತಿ ಕೊಟ್ಟಿದ್ದಾರೆ.

    ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಳು. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಈ ಸಂಬಂಧ ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಮಹಿಳೆ ಹಾಗೂ ವಿಕ್ಕಿ ಕಳೆದ 5 ತಿಂಗಳಿಂದ 6-7 ಬಾರಿ ಇದೇ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು. ಹೀಗಾಗಿ ಅವರು ರಾತ್ರಿ ದೊಡ್ಡದಾಗಿ ಹಾಡು ಹಚ್ಚಿ ಪಾರ್ಟಿ ಮಾಡುತ್ತಿದ್ದರೂ ನಾವು ಏನು ಹೇಳಿರಲಿಲ್ಲ. ಬರ್ತಡೇ ಪಾರ್ಟಿ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆವು. ಆದರೆ ಬೆಳಗ್ಗೆ ರೂಮ್‍ನಲ್ಲಿ ನೋಡಿದರೆ ಮಹಿಳೆಯ ಕೊಲೆ ಆಗಿತ್ತು ಎಂದು ತಿಳಿಸಿದ್ದಾರೆ.

    ಸದ್ಯ ಈ ಸಂಬಂಧ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ರೂಮ್‍ನಲ್ಲಿ ಏನಾಯ್ತು ಎಂದು ವಿಕ್ಕಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ವಿಚಾರಣೆ ವೇಳೆ ಮೃತ ಮಹಿಳೆ ವಿವಾಹಿತೆ ಹಾಗೂ ಆಕೆಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಸಂಗತಿ ಕೂಡ ತಿಳಿದು ಬಂದಿದೆ.

  • ಕಂಬಕ್ಕೆ ಕಟ್ಟಿ, ಪೆಟ್ರೋಲ್ ಸುರಿದು ಮಗನನ್ನೇ ಜೀವಂತವಾಗಿ ಸುಟ್ಟ ತಂದೆ-ತಾಯಿ!

    ಕಂಬಕ್ಕೆ ಕಟ್ಟಿ, ಪೆಟ್ರೋಲ್ ಸುರಿದು ಮಗನನ್ನೇ ಜೀವಂತವಾಗಿ ಸುಟ್ಟ ತಂದೆ-ತಾಯಿ!

    ಹೈದರಾಬಾದ್: ಕುಡಿತದ ಚಟದಿಂದ ಬೇಸತ್ತು ಸ್ವತಃ ತಂದೆ-ತಾಯಿಯೇ ಮಗನನ್ನು ಜೀವಂತವಾಗಿ ಸುಟ್ಟಿರುವ ಭೀಕರ ಘಟನೆ ತೆಲಂಗಾಣದ ವಾರಂಗಲ್‍ನ ಗ್ರಾಮೀಣ ಜಿಲ್ಲೆಯಲ್ಲಿ ನಡೆದಿದೆ.

    ಹೈದರಾಬ್‍ನಿಂದ 200 ಕಿ.ಮೀ.ದೂರದಲ್ಲಿರುವ ವಾರಂಗಲ್ ಗ್ರಾಮೀಣ ಜಿಲ್ಲೆಯ ಮುಸ್ತಾಯಲಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡಿತದ ಚಟ ಹಾಗೂ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಮಗನಿಂದ ಬೇಸತ್ತ ಕೆ.ಪ್ರಭಾಕರ್ ಹಾಗೂ ವಿಮಲಾ ಅವರು ತಮ್ಮ ಮಗನಾದ ಕೆ.ಮಹೇಶ ಚಂದ್ರ(42)ನನ್ನು ಕಂಬಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾರೆ.

    ಮಹೇಶ್ ಕುಡಿತದ ಚಟಕ್ಕೆ ಒಳಗಾಗಿದ್ದ, ಯಾವಾಗಲೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು. ಆತನ ಕಿರುಕುಳ ಸಹಿಸಲು ತಂದೆ, ತಾಯಿಗೆ ಸಾಧ್ಯವಾಗಿಲ್ಲ. ಮಹೇಶ್ ಕಾಟ ತಾಳಲಾರದೇ ಪತ್ನಿ ಎರಡು ತಿಂಗಳ ಹಿಂದೆಯೇ ತವರು ಮನೆಗೆ ಹೋಗಿದ್ದಳು. ಅಂದಿನಿಂದ ಈತ ತಂದೆ-ತಾಯಿ ಬಳಿಯೇ ಇದ್ದ. ಅಲ್ಲದೆ ಹಣಕ್ಕಾಗಿ ಅವರನ್ನು ಪೀಡಿಸುತ್ತಿದ್ದ, ಕಿರುಕುಳ ನೀಡುವ ಮೂಲಕ ಜೀವ ಹಿಂಡುತ್ತಿದ್ದನು. ಗ್ರಾಮಸ್ಥರು ಸಹ ಈತನಿಗೆ ಹಲವು ಬಾರಿ ಹೊಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇಬ್ಬರು ಮಕ್ಕಳ ತಂದೆಯಾಗಿರುವ ಮಹೇಶ್, ರಾತ್ರಿ ಕಂಠಪೂರ್ತಿ ಕುಡಿದು ಬಂದು ಹೆತ್ತವರನ್ನು ಹೊಡೆಯಲು ಪ್ರಾರಂಭಿಸಿದನು. ಈ ಹಿಂಸೆಯನ್ನು ಸಹಿಸಲಾಗದೆ ಆತನ ತಂದೆ, ತಂದೆ-ತಾಯಿ ಮಹೇಶ್‍ನನ್ನು ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾರೆ.

    ವಾರಂಗಲ್ ಕೃಷಿ ಮಾರುಕಟ್ಟೆಯಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ ಮಹೇಶ್, ತಂದೆ-ತಾಯಿ ಹಚ್ಚಿದ ಬೆಂಕಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ದಮೆರಾದಿಂದ ಹಳ್ಳಿಗೆ ಧಾವಿಸಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಹೇಶ್ ಪೋಷಕರನ್ನು ಬಂಧಿಸಿದ್ದಾರೆ.

  • ಕೆನ್ನೆಗೆ ಹೊಡೆದನೆಂದು ಕಲ್ಲು ಎತ್ತಿ ಹಾಕಿ ಕೊಲೆಯೇ ಮಾಡ್ಬಿಟ್ಟ!

    ಕೆನ್ನೆಗೆ ಹೊಡೆದನೆಂದು ಕಲ್ಲು ಎತ್ತಿ ಹಾಕಿ ಕೊಲೆಯೇ ಮಾಡ್ಬಿಟ್ಟ!

    ತುಮಕೂರು: ಕುಡಿದ ಮತ್ತಿನಲ್ಲಿದ್ದ ರೌಡಿ ಶೀಟರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ತುಮಕೂರಿನ ಬೆಳಗುಂಬದ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಮೋಹನ್ ಕುಮಾರ್ ಅಲಿಯಾಸ್ ಚಟ್ಟ ಕುಮಾರ್ ಮೃತ ರೌಡಿಶೀಟರ್. ಮೋಹನ್ ಕುಮಾರ್ ಹಾಗೂ ಆತನ ಸ್ನೇಹಿತ ಟೆಂಪರ್ ರಾಜಾ ಹನುಮಂತರಪುರದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ನಂತರ ಇಬ್ಬರೂ ಬೈಕ್ ನಲ್ಲಿ ಬೆಳಗುಂಬ ಬಸ್ ಸ್ಟಾಪ್ ಗೆ ತೆರಳಿದ್ದಾರೆ.

    ಬಸ್ ನಿಲ್ದಾಣದ ಬಳಿ ಮಾತಿಗೆ ಮಾತು ಬೆಳೆದಿದೆ. ಚಟ್ಟ ಕುಮಾರ್ ಮೊದಲು ಟೆಂಪರ್ ರಾಜಾನ ಕೆನ್ನೆಗೆ ಏಟು ಕೊಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಾಜ ಅಲ್ಲಿಯೇ ಪಕ್ಕದಲ್ಲಿದ್ದ ಕಲ್ಲು ಎತ್ತಿಹಾಕಿ ಮೋಹನ್ ಕುಮಾರನ ಕೊಲೆ ಮಾಡಿದ್ದಾನೆ.

    ಮೃತ ಮೋಹನ್ ಕುಮಾರ್ 3 ಕೊಲೆ ಪ್ರಕರಣ, ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಕೊಲೆ ಸಂಬಂಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡ್ರಂಕ್ ಆಂಡ್ ಡ್ರೈವ್ – ವ್ಯಕ್ತಿಯ ದೇಹದಲ್ಲೇ ಮದ್ಯ ಉತ್ಪಾದನೆಯಾಗೋದನ್ನು ಕಂಡು ದಂಗಾದ ಪೊಲೀಸರು

    ಡ್ರಂಕ್ ಆಂಡ್ ಡ್ರೈವ್ – ವ್ಯಕ್ತಿಯ ದೇಹದಲ್ಲೇ ಮದ್ಯ ಉತ್ಪಾದನೆಯಾಗೋದನ್ನು ಕಂಡು ದಂಗಾದ ಪೊಲೀಸರು

    ವಾಷಿಂಗ್ಟನ್: ಮದ್ಯ ಕುಡಿಯದೇ ವ್ಯಕ್ತಿಯ ದೇಹದಲ್ಲಿ ಮದ್ಯ ಉತ್ಪಾದನೆಯಾಗುತ್ತಿರುವ ವಿಶೇಷ ಪ್ರಕರಣವೊಂದು ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.

    ಹೌದು. ಉತ್ತರ ಕರೋಲಿನಾದ ವ್ಯಕ್ತಿಯ ಕರುಳಿನಲ್ಲಿ ಮದ್ಯ ಉತ್ಪಾದನೆಯಾಗುತ್ತಿದೆ. ಅಲ್ಲದೆ ಆತನ ದೇಹದಲ್ಲಿನ ಎಲ್ಲ ಕಾರ್ಬೋಹೈಡ್ರೇಟ್‍ಗಳು ಬಿಯರ್ ಆಗಿ ಪರಿವರ್ತಿಸುವ ಶಿಲೀಂದ್ರವನ್ನು ಹೊಂದಿವೆ ಎಂಬ ಅಚ್ಚರಿಯ ವಿಚಾರ ಪತ್ತೆಯಾಗಿದೆ.

    ಅಪರಿಚಿತನೊಬ್ಬ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಮದ್ಯ ಸೇಸಿರುವುದನ್ನು ನಿರಾಕರಿಸಿದ್ದಾನೆ. ನಂತರ ಮದ್ಯ ಪರೀಕ್ಷೆಗೆ ಒಳಪಡಲು ಆತ ನಿರಾಕರಿಸಿದ್ದು, ಆಗ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತನ ರಕ್ತದ ಆಲ್ಕೊಹಾಲ್ ಮಟ್ಟವು 200 ಮಿಲಿಗ್ರಾಂಎಂದು ತೋರಿಸಿದೆ. ಇದು 10 ಆಲ್ಕೊಹಾಲ್ ಯುಕ್ತ ಪಾನೀಯ ಕುಡಿದಿದ್ದಕ್ಕೆ ಸಮಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಗ ವ್ಯಕ್ತಿ ವೈದ್ಯರಿಗೆ ಮಾಹಿತಿ ನೀಡಿದ್ದು, ಸುಮಾರು ಮೂರು ವರ್ಷಗಳಿಂದ ನಾನು ಖಿನ್ನತೆ, ಬ್ರೇನ್ ಫಾಗ್, ಮೆಮೊರಿ ಲಾಸ್ ಹಾಗೂ ವಿಚಿತ್ರ ನಡವಳಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ನನ್ನ ವ್ಯಕ್ತಿತ್ವ ಬದಲಾಗಿರುವುದನ್ನು ಅನುಭವಿಸಿದ್ದೇನೆ. ಬೆರಳಿಗೆ ಗಾಯವಾದಾಗ ಆ್ಯಂಟಿಬಯೋಟಿಕ್ಸ್ ಚಿಕಿತ್ಸೆ ಪಡೆದ ಒಂದು ವಾರದ ನಂತರ ಈ ರೀತಿಯ ಬದಲಾವಣೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾನೆ.

    ಆತ ಮದ್ಯ ಸೇವನೆ ಮಾಡಿರುವುದನ್ನು ಪದೇ ಪದೆ ನಿರಾಕರಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ನಂಬಲಿಲ್ಲ. ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ ನಂತರ ಕುಟುಂಬಸ್ಥರು ಆತನ ಸ್ನೇಹಿತ ಮದ್ಯಪಾನಿಯಾಗಿದ್ದು ಹೀಗಾಗಿ ಕುಡಿಯಬಹುದು ಎಂದು ಶಂಕಿಸಿದ್ದಾರೆ.

    ವೈದ್ಯರು ಪರೀಕ್ಷಿಸಿದಾಗ ಆತನ ದೇಹ ಸಾಮಾನ್ಯವಾಗಿರುವುದು ಕಂಡು ಬಂತು. ನಂತರ ದೇಹದಲ್ಲಿ ಸ್ಯಾಕರೊಮೈಸಿಸ್ ಸೆರೆವಿಸಿಯೆ ಇರುವುದು ಇರುವುದು ಕಂಡು ಬಂದಿದೆ. ಇದನ್ನು ಬ್ರೆವೆರ್ಸ್ ಯೀಸ್ಟ್ ಎಂದು ಸಹ ಕರೆಯುತ್ತಾರೆ.

    ವ್ಯಕ್ತಿಯನ್ನು ಅಂತಿಮವಾಗಿ ನ್ಯೂಯಾರ್ಕ್‍ನ ರಿಚ್ಮಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ತಜ್ಞರ ಬಳಿ ಕರೆದೊಯ್ಯಲಾಯಿತು. ಆಗ ಆಟೋ-ಬ್ರಿವೆರಿ ಸಿಂಡ್ರೋಮ್(ಎಬಿಎಸ್) ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನುವ ವಿಚಾರ ಪತ್ತೆಯಾಗಿದೆ. ಎಬಿಎಸ್ ರೋಗ ಇರುವುದು ಖಚಿತವಾದ ನಂತರ ಓಹಿಯೋ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ನಂತರ ಅವನ ದೇಹ ಸ್ವಲ್ಪ ಸುಧಾರಣೆಯಾಗಿದೆ ಎಂದು ವರದಿಯಾಗಿದೆ.

    ಈ ರೋಗ ಅಪರೂಪದಲ್ಲಿ ಅಪರೂಪ ಜನರಿಗೆ ಬರುತ್ತದೆ. ಕಳೆದ 30 ವರ್ಷಗಳಲ್ಲಿ ವಿಶ್ವದಲ್ಲಿ ಕೇವಲ 5 ಜನರಲ್ಲಿ ಮಾತ್ರ ಕಾಣಿಸಿಕೊಂಡಿದೆ.

  • ಕುಡಿದು ಬಸ್ ಚಲಾಯಿಸಿದ ಬಿಎಂಟಿಸಿ ಚಾಲಕ

    ಕುಡಿದು ಬಸ್ ಚಲಾಯಿಸಿದ ಬಿಎಂಟಿಸಿ ಚಾಲಕ

    ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನೊಬ್ಬ ಕುಡಿದು ಬಸ್ ಡ್ರೈವ್ ಮಾಡಿದ ಘಟನೆಯೊಂದು ಅಕ್ಟೋಬರ್ 5ರಂದು ಯಲಹಂಕದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂದೀಪ್ ಎನ್ ಬಾಬಲಿ ಮದ್ಯಪಾನ ಮಾಡಿ ಬಸ್ ಚಲಾಯಿಸಿದ ಚಾಲಕ. ಸಂದೀಪ್ ಬಿಎಂಟಿಸಿಯ ಎಂ.ಎಸ್ ಪಾಳ್ಯ ಡಿಪೋ 45ರ ಕೆಎ-01 ಎಫ್- 8560 ಬಸ್ ಚಲಾಯಿಸುತ್ತಿದ್ದನು. ವಿದ್ಯಾರಣ್ಯಪುರ ಟು ಮೆಜೆಸ್ಟಿಕ್ ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದಾಗ ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಚಾಲಕನನ್ನು ತಪಾಸಣೆ ನಡೆಸಿದಾಗ ಆತನ ದೇಹದಲ್ಲಿ ಶೇ. 224ರಷ್ಟು ಮದ್ಯ ಪತ್ತೆಯಾಗಿದೆ. ಸದ್ಯ ಚಾಲಕ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿದ್ದು, ಯಲಹಂಕ ಸಂಚಾರಿ ಪೊಲೀಸರು ಬಸ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 14ರಂದು ಕೋರ್ಟ್‍ಗೆ ಹಾಜರಾಗುವಂತೆ ಚಾಲಕನಿಗೆ ನೋಟಿಸ್ ನೀಡಲಾಗಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ಅಧಿಕಾರಿ ಜಯಪ್ರಕಾಶ್ ಅವರು, “ಚಾಲಕನ ರಿಪೋರ್ಟ್ ಬಂದ ಕೂಡಲೇ ಸಸ್ಪೆಡ್ ಮಾಡಲಾಗುತ್ತೆ. ನಂತರ ಚಾಲಕನನ್ನು ಕೆಲ ದಿನಗಳ ಕಾಲ ಬಿಎಂಟಿಸಿ ಕಾರ್ಯಾಗಾರಕ್ಕೆ ಕಳುಹಿಸಿ ಆತನಿಗೆ ಟ್ರೈನಿಂಗ್ ನೀಡಲಾಗುತ್ತೆ. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

  • ಮದ್ಯ ಕುಡಿಯಲು ಹಣ ಕೊಡದ ಅಪ್ಪನ ಕುತ್ತಿಗೆಯನ್ನ ಕೊಡಲಿಯಿಂದ ಕಡಿದ ಮಗ

    ಮದ್ಯ ಕುಡಿಯಲು ಹಣ ಕೊಡದ ಅಪ್ಪನ ಕುತ್ತಿಗೆಯನ್ನ ಕೊಡಲಿಯಿಂದ ಕಡಿದ ಮಗ

    ವಿಜಯಪುರ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂದು ಮಗನೊಬ್ಬ ತಂದೆಯನ್ನ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮಹಾರಾಷ್ಟ್ರ ಗಡಿಯ ಟಾಕಳಿ ಗ್ರಾಮದಲ್ಲಿ ನಡೆದಿದೆ.

    ಕೊಲೆ ಮಾಡಿದ ಪಾಪಿ ಮಗನನ್ನು ಸಂಜೀವ ತೊರವಿ (38) ಎಂದು ಗುರುತಿಸಲಾಗಿದೆ, ಕುಡಿತಕ್ಕೆ ದಾಸನಾಗಿದ್ದ ಈತ ಕುಡಿಯಲು ಹಣ ಕೊಡಲಿಲ್ಲ ಎಂದು ತನ್ನ ಸ್ವಂತ ತಂದೆ ಅಣ್ಣಪ್ಪ ತೊರವಿ (58) ಯನ್ನು ಕೊಲೆ ಮಾಡಿದ್ದಾನೆ.

    ಬುಧವಾರ ಬೆಳಗ್ಗೆ ತಂದೆ ಅಣ್ಣಪ್ಪ ಬಳಿ 1 ಸಾವಿರ ರೂಪಾಯಿ ಕೇಳಿ ಪಡೆದು ಕುಡಿದು ಬಂದಿದ್ದ ಸಂಜೀವ ಮತ್ತೆ ರಾತ್ರಿ ಕುಡಿಯಲು 500 ರೂ. ಕೇಳಿದ್ದಾನೆ. ಇದರಿಂದ ಕೋಪಗೊಂಡ ತಂದೆ ಕೊಡಲ್ಲ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಕೋಪಗೊಂಡ ಮಗ ಸಂಜೀವ ಮನೆಯಲ್ಲಿ ಇದ್ದ ಕೊಡಲಿಯಿಂದ ಅಪ್ಪನ ಕುತ್ತಿಗೆಯನ್ನು ಕಡಿದು ಹಾಕಿದ್ದಾನೆ. ಇದನ್ನು ಓದಿ: ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    ಮನೆಯವರೆಲ್ಲ ಗ್ರಾಮ ದೇವರ ಜಾತ್ರೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರಂ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಡಚಣ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಅನ್ವಯ ಪ್ರಕರಣ ದಾಖಲಾಗಿದೆ.

  • ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಚಿಕ್ಕಮಗಳೂರು: ಒಂದೆಡೆ ಆರೋಗ್ಯ ಸಮಸ್ಯೆ ಇಟ್ಟುಕೊಂದು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನೊಂದೆಡೆ ಕುಡುಕರ ಹಾವಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯೇ ಮದ್ಯದಂಗಡಿ ರೀತಿ ಆಗಿಬಿಟ್ಟಿದೆ.

    ಹೌದು. ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಸೌಲಭ್ಯ ಸಿಗದೇ ಕಷ್ಟಪಡುತ್ತಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆ ನಿರ್ವಹಣೆಯನ್ನು ಸಿಬ್ಬಂದಿ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿರುವುದಕ್ಕೆ ಆಸ್ಪತ್ರೆ ಕುಡುಕರಿಗೆ ಮದ್ಯ ಸೇವಿಸೋ ಅಡ್ಡೆಯಾಗಿಬಿಟ್ಟಿದೆ. ಆಸ್ಪತ್ರೆಯ ಸುತ್ತಮುತ್ತಲ ಆವರಣ, ಶೌಚಾಲಯಗಳು ಹೀಗೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಹಾಗೂ ಪ್ಯಾಕೆಟ್‍ಗಳೇ ರಾರಾಜಿಸುತ್ತಿದೆ. ಎಲ್ಲೆಂದರಲ್ಲಿ ಮದ್ಯ ಸೇವಿಸಿ ಆಸ್ಪತ್ರೆ ಆವರಣವನ್ನು ಕುಡುಕರು ಗಬ್ಬೆಬ್ಬಿಸಿದ್ದಾರೆ.

    ಅಷ್ಟೇ ಅಲ್ಲದೆ ಮದ್ಯ ಕುಡಿದು ಆಸ್ಪತ್ರೆಯ ಗೋಡೆ ಮೇಲೆ ಬಾಟಲಿಗಳನ್ನು ಕುಡುಕರು ಸಾಲಾಗಿ ಜೋಡಿಸಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದು, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಆಸ್ಪತ್ರೆ ಶೌಚಾಲಯಕ್ಕೆ ಹೋಗಲು ರೋಗಿಗಳಿಗೆ ವಾಕರಿಕೆ ಬರುವ ದುಸ್ಥಿತಿ ಇದೆ.

    ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕಂಡು ಬೇಸತ್ತು ಹೋದ ಕೆಲ ರೋಗಿಗಳು ಆಸ್ಪತ್ರೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಮದ್ಯದ ಅವಾಂತರ ಎಲ್ಲೆಡೆ ವೈರಲ್ ಆಗಿದ್ದು, ಸ್ವಚ್ಛತೆಗೆ ಆದ್ಯತೆ ಕೊಡದ ಅಧಿಕಾರಿ, ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಗಮನಹರಿಸಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.

  • ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

    ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

    – ಲಾರಿ ಬಂದರೂ ಕ್ಯಾರೆ ಮಾಡಿಲ್ಲ

    ಕೋಲಾರ: ಟಿವಿಯಲ್ಲಿ ಬರುವ ಆಸೆಗೆ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದು ಗಲಾಟೆ ಮಾಡಿದ ಘಟನೆ ಕೋಲಾರದ ಕೆಜಿಎಫ್ ನಗರದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಪಾರಂಡಳ್ಳಿ ರಸ್ತೆಯಲ್ಲಿ ಕುಡುಕ ಅವಾಂತರ ಮಾಡಿದ್ದಾನೆ. ಸಾವನ್ನು ಲೆಕ್ಕಿಸದೆ ರಸ್ತೆ ಮಧ್ಯೆ ಕುಳಿತು ಕುಡುಕ ಎಣ್ಣೆ ಪಾರ್ಟಿ ಮಾಡಿದ್ದಾನೆ. ರಸ್ತೆಯಲ್ಲಿಯೇ ಕುಳಿತು ಕಂಠ ಪೂರ್ತಿ ಕುಡಿದು ಎಲ್ಲರಿಗೂ ಫುಲ್ ಅವಾಜ್ ಹಾಕಿ ಗಲಾಟೆ ಮಾಡಿದ್ದಾನೆ.

    ಅಷ್ಟೇ ಅಲ್ಲದೆ ಪಾದಚಾರಿಗಳಿಗೆ ಆವಾಜ್ ಹಾಕಿ ಕಿರಿಕಿರಿ ಮಾಡುತ್ತ ತೊಂದರೆ ಕೊಟ್ಟಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ, ವಿಡಿಯೋ ಮಾಡಿ ಟಿವಿಯಲ್ಲಿ ಬರುತ್ತಲ್ಲ ಎಂದು ಕೇಳಿರುವುದು ಸೆರೆಯಾಗಿದೆ. ಟಿವಿಯಲ್ಲಿ ಬರುವ ಆಸೆಯಿಂದ ಕುಡುಕ ಈ ರೀತಿ ಅವಾಂತರ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ರಸ್ತೆಯಲ್ಲಿ ಕೂತು ಕುಡುಕ ಮಾಡಿದ ಅವಾಂತರಕ್ಕೆ ವಾಹನ ಸವಾರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ಲಾರಿ ಬರುತ್ತಿದ್ದರೂ ಕ್ಯಾರೆ ಅನ್ನದೆ ಈ ವ್ಯಕ್ತಿ ಕುಡಿಯುತ್ತ ಕುಳಿತ್ತಿದ್ದನು. ಹೀಗಾಗಿ ಲಾರಿ ಚಾಲಕನೇ ವಾಹನವನ್ನು ರಸ್ತೆ ಬದಿಯಿಂದ ಚಲಾಯಿಸಿಕೊಂಡು ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.