Tag: alcohol

  • ರಾಜಕಾಲುವೆಗೆ ಬಿದ್ದು ಕುಡುಕನ ರಂಪಾಟ – ಕಾಪಾಡಿದ್ರೂ ಮತ್ತೆ ಚಳಿಯಾಗುತ್ತೆ ಎಂದು ಬಿದ್ದ

    ರಾಜಕಾಲುವೆಗೆ ಬಿದ್ದು ಕುಡುಕನ ರಂಪಾಟ – ಕಾಪಾಡಿದ್ರೂ ಮತ್ತೆ ಚಳಿಯಾಗುತ್ತೆ ಎಂದು ಬಿದ್ದ

    – ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಗದ ಕುಡುಕ

    ಬೆಂಗಳೂರು: ಕುಡುಕನೊಬ್ಬ ಕುಡಿದ ಮತ್ತಿನಲ್ಲಿ ರಾಜಕಾಲುವೆಗೆ ಬಿದ್ದು ರಂಪಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಲಾಲ್‍ಬಾಗ್ ರೋಡ್ ರಾಜಕಾಲುವೆಯಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಸುಮಾರು 10 ಗಂಟೆಗೆ ರಾಜಕಾಲುವೆ ಬಿದ್ದಿದ್ದಾನೆ. ಬೃಹತ್ ರಾಜಕಾಲುವೆ ಇದಾಗಿದ್ದು, ಲಾಲ್‍ಬಾಗ್ ನಿಂದ ಸಂಪಗಿ ರಾಮ ನಗರದ ಕಡೆ ಸಾಗುವ ರಾಜಕಾಲುವೆ ಇದಾಗಿದೆ.

    ಕುಡುಕ ರಾಜಕಾಲುವೆ ಬಿದ್ದ ತಕ್ಷಣವೇ ಸ್ಥಳೀಯ ಯುವಕರು ಆತನನ್ನು ಮೇಲಕ್ಕೆತ್ತಿ ಟೀ ಮತ್ತು ಬನ್ ಕೊಟ್ಟು ಮನೆಗೆ ಹೋಗು ಎಂದು ಬುದ್ಧಿ ಹೇಳಿದ್ದಾರೆ. ಆದರೆ ಆತ ನಾನು ಮನೆಗೆ ಹೋಗಲ್ಲ, ಮೇಲಕ್ಕೆ ಬಂದರೆ ಚಳಿಯಾಗುತ್ತೆ ಎಂದು ಮತ್ತೆ ರಾಜಕಾಲುವೆಗೆ ಬಿದ್ದಿದ್ದಾನೆ. ರಾಜಕಾಲುವೆಯ ಕೆಳಗೆ ಅಡಗಿ ಕುಳಿತಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಎಸ್‍ಜೆ ಪಾರ್ಕ್ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ಮಾಡಿದ್ದಾರೆ.

    ಶೋಧಕಾರ್ಯ ವೇಳೆಯೂ ಕುಡುಕ ರಾಜಕಾಲುವೆ ಒಳಗಡೆ ಪತ್ತೆಯಾಗಿಲ್ಲ. ರಾಜಕಾಲುವೆ ಒಳಗಡೆ 100 ಮೀಟರ್ ದೂರ ಸಾಗಿದ್ದಾನೆ ಎನ್ನಲಾಗುತ್ತಿದೆ. ಎಷ್ಟೇ ಶೋಧ ಕಾರ್ಯ ಮಾಡಿದರೂ ಕುಡುಕ ಪತ್ತೆಯಾಗಿಲ್ಲ. ರಾಜಕಾಲುವೆ ಮೂಲಕ ಬೇರೆಡೆಗೆ ಸಾಗಿದ್ದಾನೆ ಎನ್ನಲಾಗುತ್ತಿದ್ದು, ಸದ್ಯಕ್ಕೆ ಶೋಧ ಕಾರ್ಯಾಚರಣೆ ಮುಕ್ತಾಯ ಮಾಡಲಾಗಿದೆ. ಕುಡುಕ ಕುಡಿದ ಮತ್ತಲ್ಲಿ ರಾಜಕಾಲುವೆಯಲ್ಲಿ ಎಲ್ಲಿಗೆ ಹೋದ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.

  • ಡಿ. 31ರಂದು ಬೆಳಗಾವಿಯಲ್ಲಿ ಬರೋಬ್ಬರಿ 6.49 ಕೋಟಿ ರೂ. ಮದ್ಯ ಮಾರಾಟ

    ಡಿ. 31ರಂದು ಬೆಳಗಾವಿಯಲ್ಲಿ ಬರೋಬ್ಬರಿ 6.49 ಕೋಟಿ ರೂ. ಮದ್ಯ ಮಾರಾಟ

    ಬೆಳಗಾವಿ: ಭೀಕರ ಪ್ರವಾಹದಿಂದ ನಲುಗಿದ ಬೆಳಗಾವಿಯ ಜನತೆ 2020ಯನ್ನು ಸ್ವಾಗತಿಸುವ ಭರದಲ್ಲಿ ಕುಂದಾನಗರಿ, ಸ್ಮಾರ್ಟ್ ಸಿಟಿಯ ಜನತೆ ಪಾರ್ಟಿ, ಮೋಜು-ಮಸ್ತಿಯೊಂದಿಗೆ ರಾಜ್ಯ ಸರ್ಕರದ ಬೊಕ್ಕಸೆಯನ್ನು ಭರ್ಜರಿಯಾಗಿ ತುಂಬಿಸಿದ್ದಾರೆ.

    ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಡಿಸೆಂಬರ್ 31ರ ಒಂದೇ ದಿನದಂದು ಬರೋಬ್ಬರಿ 6.49 ಕೋಟಿ ರೂ. ಹೆಚ್ಚು ಮದ್ಯ ಮಾರಾಟವಾಗಿದೆ. ಡಿ. 31ರಂದು ಅಬಕಾರಿ ಇಲಾಖೆಗೆ ಭರ್ಜರಿ ವ್ಯಾಪಾರವಾಗಿದ್ದರೂ ಇಲಾಖೆ ಅಂದುಕೊಂಡ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

    ಬೆಳಗಾವಿ ಸೇರಿದಂತೆ ನೂತನ ವರ್ಷವನ್ನು ಸ್ವಾಗತಿಸುವ ಭರದಲ್ಲಿ ರಾಜ್ಯದ ಜನತೆ ಅಬಕಾರಿ ಇಲಾಖೆಗೆ ಭರ್ಜರಿ ಉಡುಗೊರೆ ನೀಡಿದ್ದು, ಅಬಕಾರಿ ಇಲಾಖೆಗೆ ಈ ವರ್ಷ ಬರೋಬ್ಬರಿ 15 ಪ್ರತಿಶತ ಏರಿಕೆಯಾಗಿದೆ. ಅಲ್ಲದೆ ರಾಜ್ಯದಲ್ಲಿ ಒಟ್ಟು 597 ಕೋಟಿ ರೂ. ಆದಾಯ ಒಂದೇ ದಿನದಲ್ಲಿ ಅಬಕಾರಿ ಇಲಾಖೆಗೆ ಆದಾಯ ತರಿಸಿದ್ದು ಗಮನಾರ್ಹ ಸಂಗತಿ.

    ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದಲ್ಲಿ ಒಟ್ಟು 5.88 ಲಕ್ಷ ಕೇಸ್ ಮಾರಾಟವಾಗಿದೆ. ಇದರಲ್ಲಿ 6.49 ಲಕ್ಷ ರೂ. ಗಳಷ್ಟು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟವಾಗಿದ್ದು ವಿಶೇಷವಾಗಿದೆ. ವರ್ಷಾಂತ್ಯಕ್ಕೆ ಬೆಳಗಾವಿಯಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳಲ್ಲಿ ಬಾಕ್ಸ್ ಗಟ್ಟಲೇ ಎಣ್ಣೆ ಮಾರಾಟವಾಗಿದೆ. ಚಳಿಗಾಲ ಇರುವುದರಿಂದ ತಂಡಿಯ ಸಮಯದಲ್ಲಿ ಬೇಡಿಕೆ ಕಡಿಮೆ ಇದ್ದ ಬಿಯರ್ ಗೆ ಶೇ. 20ರಷ್ಟು ಅಧಿಕ ಮಾರಾಟವಾಗಿದೆ.

  • ಅಕ್ರಮ ಮದ್ಯ ಮಾರಾಟ ಮಾಡ್ತಿದ್ದಾತ ಪೊಲೀಸರ ವಶಕ್ಕೆ

    ಅಕ್ರಮ ಮದ್ಯ ಮಾರಾಟ ಮಾಡ್ತಿದ್ದಾತ ಪೊಲೀಸರ ವಶಕ್ಕೆ

    ಮಡಿಕೇರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿದ್ದಾರೆ.

    ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆಯಲ್ಲಿ ನಡೆದಿದೆ. ಚೆನ್ನಯ್ಯನ ಕೋಟೆ ಗ್ರಾಮದ ನಿವಾಸಿ ಸುನಿಲ್ ಎಂಬಾತ ತನ್ನ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

    ಈ ಸುಳಿವಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಹೆಚ್.ಸಿ. ಬೋಜಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

     

  • ಒಂದೇ ಟೇಬಲಿನಲ್ಲಿ ಎಣ್ಣೆ, ಚಿಕನ್ ಸೇವಿಸಿ ನಂತರ ಸ್ನೇಹಿತನನ್ನೆ ಹೊಡೆದು ಕೊಂದ ಗೆಳೆಯರು

    ಒಂದೇ ಟೇಬಲಿನಲ್ಲಿ ಎಣ್ಣೆ, ಚಿಕನ್ ಸೇವಿಸಿ ನಂತರ ಸ್ನೇಹಿತನನ್ನೆ ಹೊಡೆದು ಕೊಂದ ಗೆಳೆಯರು

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗೆಳೆಯರಿಬ್ಬರು ಸೇರಿ ಸ್ನೇಹಿತನನ್ನೇ ಬಡಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    30 ವರ್ಷದ ಇರ್ಫಾನ್ ಕೊಲೆಯಾದ ಯುವಕ. ಇರ್ಫಾನ್ ಕಮರ್ಷಿಯಲ್ ಸ್ಟ್ರೀಟ್ ನಿವಾಸಿಯಾಗಿದ್ದು, ಹೂವಿನ ವ್ಯಾಪಾರ ಮಾಡಿಕೊಂಡಿದ್ದ. ಆರೋಪಿಗಳಾದ ಶಕ್ತಿವೇಲು, ಮಲೈ ಹಾಗೂ ಸಂತ್ರಸ್ತ ಇರ್ಫಾನ್ ಒಂದೇ ಟೆಬಲ್ ನಲ್ಲಿ ನಿತ್ಯ ಮದ್ಯಪಾನ ಮಾಡಿ ಅರ್ಧ ಪ್ಲೇಟ್ ಕಬಾಬ್ ಹಂಚಿಕೊಂಡು ತಿನ್ನುತ್ತಿದ್ದ ಗೆಳೆಯರು. ಎಂದಿನಂತೆ ನಿನ್ನೆಯೂ ಕೂಡ ಬಾರ್ ನಲ್ಲಿ ಕುಡಿದು ಹೋಗುತ್ತಿರುವಾಗ ಮೂವರ ನಡುವೆ ಗಲಾಟೆ ಆಗಿದೆ.

    ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಆರೋಪಿಗಳಾದ ಶಕ್ತಿವೇಲು, ಮಲೈ ಮೋರಿ ಪಕ್ಕದಲ್ಲಿ ಬಿದ್ದಿದ್ದ ಬಡಿಗೆಯಿಂದ ಇರ್ಫಾನ್ ತಲೆಗೆ ಹೊಡೆದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಇರ್ಫಾನ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇರ್ಫಾನ್ ಸತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆ ಇಬ್ಬರೂ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಕ್ತಿವೇಲು ಹಾಗೂ ಮಲೈ ಇಬ್ಬರನ್ನೂ ಬಂಧಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

  • ಚಾಕ್ಲೇಟ್ ಅಂಗಡಿಯಲ್ಲಿ ಎಣ್ಣೆ ಮಾರಾಟ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಚಾಕ್ಲೇಟ್ ಅಂಗಡಿಯಲ್ಲಿ ಎಣ್ಣೆ ಮಾರಾಟ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    – ಕುಡುಕರ ಅಡ್ಡೆಯಾಗ್ತಿದೆ ಶಾಲಾ ಆವರಣ

    ಯಾದಗಿರಿ: ಶಾಲಾ ವ್ಯಾಪ್ತಿಯಿಂದ 100 ಮೀ. ದೂರದಲ್ಲಿ ಮದ್ಯ, ಪಾನ್ ಮಸಾಲಾ, ತಂಬಾಕು ಮಾರಾಟ ಮಾಡಬೇಕು ಎಂಬ ನಿಯಮವಿದೆ. ಅಲ್ಲದೆ ಅನುಮತಿ ಇಲ್ಲದೆ ಮದ್ಯ ಮಾರಾಟ ಮಾಡುವುದು ಸಹ ಅಪರಾಧ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಇಂತಹ ನಿಯಮಗಳಿಗೆ ಯಾರೂ ಕೇರ್ ಮಾಡಲ್ಲ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಶಾಲೆ ಅಂದ್ರೆ ದೇಗುಲಕ್ಕೆ ಸಮಾನ. ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಾರೆ. ಶಿಕ್ಷಕರು ದೇವರ ಸಮಾನರಾಗಿ ಮಕ್ಕಳಿಗೆ ಬೋಧಿಸ್ತಾರೆ. ಆದರೆ ಈಗ ಹಣಕ್ಕಾಗಿ ಸರ್ಕಾರಗಳು, ಜಿಲ್ಲಾಡಳಿತ ಯಾವ ಮಟ್ಟಕ್ಕೂ ಇಳಿಯುತ್ತವೆ ಅನ್ನೋದಕ್ಕೆ ಈ ಕಾರ್ಯಾಚರಣೆಯೇ ನಿದರ್ಶನವಾಗಿದೆ.

    ಯಾದಗಿರಿಯಲ್ಲಿರೋ ಶಾಲಾ ಆವರಣ ಈಗ ಕುಡುಕರ ಅಡ್ಡೆಯಾಗುತ್ತಿದೆ. ಇಲ್ಲಿ ಯಾವುದೇ ಕಾನೂನನ್ನು ಲೆಕ್ಕಿಸದೇ, ಅಕ್ರಮ ಮದ್ಯ ಮಾರಾಟದ ದಂಧೆ ಜೋರಾಗಿಯೇ ನಡೆಯುತ್ತಿದೆ. ನಾರಾಯಣಪುರ ಠಾಣೆ ವ್ಯಾಪ್ತಿಗೆ ಬರುವ ಹೊರಹಟ್ಟಿ ಎಂಬಲ್ಲಿನ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಚಾಕ್ಲೇಟ್ ಮಾರೋ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಒಂದು ಕಡೆ ಶಾಲಾ ಮಕ್ಕಳಿಗೆ ಚಾಕ್ಲೇಟ್ ಮಾರಾಟ ಮಾಡಿ, ಮತ್ತೊಂದು ಕಡೆ ಎಣ್ಣೆ ಮಾರಾಟ ಮಾಡುತ್ತಿದ್ದಾರೆ.

    ರಹಸ್ಯ ಕಾರ್ಯಾಚರಣೆ-1
    ಸ್ಥಳ: ಶಾಲೆಯ ಬಳಿ
    ಪ್ರತಿನಿಧಿ: ಕ್ವಾಟರ್ ಸಿಗುತ್ತಾ…?
    ವ್ಯಾಪಾರಿ: ಇಲ್ಲ… ಯಾವುದೂ ಇಲ್ಲ… ಯಾವ ಊರು ನಿಮ್ದು..?
    ಪ್ರತಿನಿಧಿ: ಸಿಗುತ್ತೆ ಅಂತ ಯಾರೋ ಅಂದ್ರು..
    ವ್ಯಾಪಾರಿ: ಯಾವ ಊರು ನಿಮ್ಮದು..?
    ಪ್ರತಿನಿಧಿ: ಇಲ್ಲಿ ಸಿಗುತ್ತೆ ಅಂತ ಹೇಳಿದ್ರು.. ನಾವು ಶಾಲೆಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದೀವಿ…

    ವ್ಯಾಪಾರಿ: ನಾವು ಕಳ್ಳತನದಿಂದ ಮಾರುತ್ತಿದ್ದೀವಿ.. ಅದಕ್ಕಾಗಿ ಕೇಳಿದ್ವಿ..
    ವ್ಯಾಪಾರಿ: ಮಕ್ಕಳೇ ಹೋಗಿ ಹೋಗಿ ನೀವ್…. ನಾವ್ ಏನೋ ಮಾಡಕತ್ತೀವಿ..
    ಪ್ರತಿನಿಧಿ: ಯಾವು ಯಾವು ಸಿಗುತ್ತೆ..?
    ವ್ಯಾಪಾರಿ: ಹೈವಾರ್ಡ್ಸ್…. ಅದು ಬಿಟ್ಟರೆ ಮತ್ಯಾವುದೂ ಇಲ್ಲ…

    ಡಿಸಿ ಮನೆ ಹಿಂದೆಯೇ ಕುಡುಕರ ಸಾಮ್ರಾಜ್ಯ!
    ಯಾದಗಿರಿ ನಗರದ ಹೃದಯ ಭಾಗದಲ್ಲಿ ಮತ್ತು ಡಿಸಿ ಅವರ ಸರ್ಕಾರಿ ಮನೆಯಿಂದಿನ ಗಾಂಧಿನಗರದಲ್ಲಿ ರಾತ್ರಿಯಾದ್ರೆ ಸಾಕು ಮನೆಮನೆಯಲ್ಲಿ ಅಕ್ರಮ ಮದ್ಯ ಮಾರಾಟದ್ದೇ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಇಲ್ಲಿ ಮಧ್ಯರಾತ್ರಿ ಹೋಗಿ ಮನೆ ಬಾಗಿಲು ಬಡಿದು ಎಣ್ಣೆ ಕೊಡಿ ಅಂದ್ರೆ ತಕ್ಷಣ ಕೊಡುತ್ತಾರೆ. ಕೇವಲ ಅಕ್ರಮ ಮದ್ಯ ಮಾತ್ರವಲ್ಲ ಬ್ಯಾನ್ ಆದ ಮತ್ತುಭರಿತ ಪದಾರ್ಥವಾದ ಸ್ಪಿರಿಟ್ ಮಿಥೇನಿಯಂ ಸಹ ಸಿಗುತ್ತದೆ.

    ರಹಸ್ಯ ಕಾರ್ಯಾಚರಣೆ-02
    ಸ್ಥಳ: ಗಾಂಧಿನಗರ, ಯಾದಗಿರಿ
    ಪ್ರತಿನಿಧಿ: ಇದೇನು…?
    ಮನೆಯವರು: ಕುಡಿಬೇಕು.. ಇದನ್ನಾ ನೆಕ್ಕಬೇಕು… ವಾಂತಿ ಬರಲ್ಲಾ ಚೆನ್ನಾಗಿರುತ್ತೆ ತಗೊಳ್ಳಿ.. ನಾನು ಸುಳ್ಳು ಹೇಳ್ತಿಲ್ಲ.. ಕುಡಿಯುವಾಗ ಇದನ್ನು ತಗೆದುಕೊಳ್ಳಬೇಕು ವಾಂತಿ ಬರಲ್ಲ…
    ಪ್ರತಿನಿಧಿ: ಯಾವುದು ಇದೆ…?
    ಮನೆಯವರು: ಓರಿಜಿನಲ್ ಚಾಯ್ಸ್, ಎಂಸಿ ರಮ್…
    ಪ್ರತಿನಿಧಿ: ಅವರೆಡು ಬಿಟ್ಟು ಮತ್ಯಾವುದೂ ಇಲ್ವಾ..? ವಿಸ್ಕಿ ಇದೆಯಾ ನೋಡಿ..
    ಮನೆಯವರು: ಇಲ್ಲ ಸರ್.. ಎಂಸಿ ರಮ್ ಮಾತ್ರ ಇದೆ…

    ಪ್ರತಿನಿಧಿ: ಏನಿದೆ
    ಮನೆಯವರು: ಎಂಸಿ ರಮ್
    ಪ್ರತಿನಿಧಿ: ಏನೇನಿದೆ..?
    ಮನೆಯವರು: ಏನು ಬೇಕು ಹೇಳಿ ನಮಗೆ ನಿದ್ದೆ ಬರುತ್ತಿದೆ.
    ಪ್ರತಿನಿಧಿ: ವಿಸ್ಕಿ ಇದೆಯಾ ಅಂತ ಕೇಳ್ದೆ
    ಮನೆಯವರು: ಐಬಿ ಇದೆ.. 230 ಆಗುತ್ತೆ
    ಪ್ರತಿನಿಧಿ: ಅದನ್ನೇ ಕೊಡಿ..

    ಈ ಅಕ್ರಮ ಮದ್ಯಮಾರಾಟ ದಂಧೆಗೆ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ಹೊರಹಟ್ಟಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಿ, ಕೇಸು ದಾಖಲಿಸಿದ್ದ ಚಂದ್ರು ಮತ್ತು ಗೋವಿಂದ ಎಂಬ ಇಬ್ಬರು ಪೊಲೀಸ್ ಪೇದೆಗಳನ್ನು ಹಿರಿಯ ಅಧಿಕಾರಿಗಳು ರಾತ್ರೋರಾತ್ರಿ ಎತ್ತಂಗಡಿ ಮಾಡಿದ್ದಾರೆ. ಪೇದೆಗಳು ಹಿಡಿದು ತಂದಿದ್ದ ವಾಹನವನ್ನು ಸುಳ್ಳು ದಾಖಲೆ ಸೃಷ್ಟಿ ಮಾಡಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮದ್ಯ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗ ಇಂತಹ ಅಕ್ರಮ ಮಾರಾಟದಿಂದ ಇನ್ನಷ್ಟು ಜನ ಯುವಕರು ದಾರಿ ತಪ್ಪುವುದು ಖಚಿತ. ಇದರ ನಡುವೆ ಇಂತಹ ಕಾನೂನು ಬಾಹಿರ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಸ್ವತಃ ಪೊಲೀಸ್ ಪೇದೆಗಳನ್ನು ಅವರ ಇಲಾಖೆ ಅಡಗಿಸಿದ್ರೆ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಮದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಮದ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟ 44 ಜನ ವ್ಯಸನಿಗಳು

    ಮದ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟ 44 ಜನ ವ್ಯಸನಿಗಳು

    ರಾಯಚೂರು: ಮದ್ಯವ್ಯಸನ ಮುಕ್ತ ಸಮಾಜಕ್ಕಾಗಿ ರಾಯಚೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 1,450ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಮುಕ್ತಾಯ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಕಳೆದ ಒಂದು ವಾರದಿಂದ ಮದ್ಯ ವರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮದುವೆ ಮನೆಯಂತೆ ಶೃಂಗಾರಗೊಂಡಿದ್ದ ಕಾರ್ಯಕ್ರಮದಲ್ಲಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮದ ಕೊನೆಯ ದಿನಕ್ಕೆ ಮಹಿಳೆಯರು ಚಾಲನೆ ನೀಡಿದರು. ಕಾರ್ಯಕ್ರಮದಿಂದ 44 ಜನ ಮದ್ಯ ವ್ಯಸನಿಗಳು ಮದ್ಯ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ವರ್ಜನೆ ಮಾಡಿದ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    8 ದಿನಗಳ ಕಾಲ ನಡೆದ ಯಶಸ್ವಿ ಶಿಬಿರದಲ್ಲಿ ಮದ್ಯ ಬಿಟ್ಟ ಪುರುಷರು ಮದುಮಗನಂತೆ ಕಂಗೊಳಿಸ್ತಿದ್ರು. ಅವರೊಂದಿಗೆ ಬಂದಿದ್ದ ಕುಟುಂಬಸ್ಥರು ನಮ್ಮವರು ಕುಡಿತ ಬಿಟ್ಟರು ಎನ್ನುವ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಗಂಡಂದಿರು ಹೆಂಡತಿಗೆ ಮಲ್ಲಿಗೆ ಮುಡಿಸಿದ್ರೆ, ಹೆಂಡತಿಯರು ಗಂಡನ ಆಶೀರ್ವಾದ ಪಡೆದರು. ತಾಯಿ-ಮಗ ಹಾಗೂ ಅಣ್ಣ-ತಂಗಿ ಇದ್ರೆ, ಕುಡಿತ ಬಿಟ್ಟವರು ತಾಯಿ ಹಾಗೂ ಅಕ್ಕ, ತಂಗಿಯ ಆಶೀರ್ವಾದ ಪಡೆದಿದ್ದು ಹಾಗೂ ಕೊನೆಯಲ್ಲಿ ಸಭೆಯಲ್ಲಿ ಸೇರಿದವರೆಲ್ಲ ಅಕ್ಷತೆ ಹಾಕಿ ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು.

    ಕಳೆದ ನಾಲ್ಕು ವರ್ಷಗಳಿಂದ ಕುಡಿತದ ಚಟಕ್ಕೆ ಒಳಗಾಗಿ ಬದುಕು ಹಾಳುಮಾಡಿಕೊಂಡಿದ್ದೆ ಆದರೆ ಈಗ ಉತ್ತಮ ಜೀವನ ನಡೆಸುವ ಭರವಸೆ ಬಂದಿದೆ ಎಂದು ಶಿಬಿರದಿಂದ ಕುಡಿತದ ಚಟ ಬಿಟ್ಟಿರುವ ರಾಯಚೂರಿನ ಉರುಕುಂದಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ ರಾಯಚೂರು ಮಾತ್ರವಲ್ಲದೆ ಕಲಬುರ್ಗಿ ಸೇರಿ ವಿವಿಧೆಡೆಯವರು ಭಾಗವಹಿಸಿದ್ದರು.

  • ಮುಂಜಾನೆ 4 ಗಂಟೆಗೆ ಮದ್ಯ ಸೇವಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

    ಮುಂಜಾನೆ 4 ಗಂಟೆಗೆ ಮದ್ಯ ಸೇವಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಸ್‍ಆರ್‍ಎಸ್ ಟ್ರಾವೆಲ್ಸ್ ನ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಬಳಿ ನಡೆದಿದೆ.

    ಶ್ರೀನಿವಾಸ್ ಅಲಿಯಾಸ್ ಸಿಬಿಐ ಮೃತಪಟ್ಟ ಪಾದಚಾರಿ. ಮೃತ ಶ್ರೀನಿವಾಸ್ ಮದ್ಯ ವ್ಯಸನಿಯಾಗಿದ್ದು, ಗ್ರಾಮದ ಹೊರವಲಯದಲ್ಲಿ ರಾತ್ರಿಯಿಡೀ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗೆ ಮುಂಜಾನೆ 4 ಗಂಟೆಗೆ ಹೋಗಿದ್ದನು. ಅಕ್ರಮ ಮದ್ಯ ಮಾರಾಟದ ಅಂಗಡಿಗೆ ಹೋಗಿ ಮದ್ಯ ಸೇವಿಸಿ ಬರುತ್ತಿದ್ದ ಶ್ರೀನಿವಾಸ್‍ಗೆ ಬಸ್ ಡಿಕ್ಕಿ ಹೊಡೆದಿದ್ದು, ತದನಂತರ ವಿದ್ಯುತ್ ಕಂಬಕ್ಕೂ ಸಹ ಡಿಕ್ಕಿ ಹೊಡೆದಿದೆ.

    ಅಪಘಾತ ನಂತರ ಚಾಲಕ ಬಸ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆ ಬಳಿ ಬಸ್ ನಿಲ್ಲಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಹಲವರು ಬಲಿಯಾಗುತ್ತಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಪಟ್ಟವರು ಬ್ರೇಕ್ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಜನ ಎಣ್ಣೆ ಹಾಕುವುದನ್ನು ಕಡಿಮೆ ಮಾಡಿದ್ದೇಕೆ, ತನಿಖೆ ಮಾಡಿ: ಅಬಕಾರಿ ಆಯುಕ್ತರ ಆದೇಶ

    ಜನ ಎಣ್ಣೆ ಹಾಕುವುದನ್ನು ಕಡಿಮೆ ಮಾಡಿದ್ದೇಕೆ, ತನಿಖೆ ಮಾಡಿ: ಅಬಕಾರಿ ಆಯುಕ್ತರ ಆದೇಶ

    ಬೆಂಗಳೂರು: ರಾಜ್ಯದ ಜನ ಎಣ್ಣೆ ಹಾಕುವುದನ್ನು ಯಾಕೆ ಕಡಿಮೆ ಮಾಡಿದ್ದಾರೆ. ತನಿಖೆ ಮಾಡಿ ಮೂರು ದಿನದೊಳಗೆ ವರದಿ ಕೊಡಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ರಾಜ್ಯದಲ್ಲಿ ಬಿಯರ್ ಮಾರಾಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಬೇಕು. ಆದರೆ ಈ ವರ್ಷ ಮಾರಾಟದ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಇದ್ರಿಂದ ತಲೆಕೆಡಿಸಿಕೊಂಡ ಅಬಕಾರಿ ಆಯುಕ್ತರು ಜಂಟಿ ಆಯುಕ್ತರಿಗೆ ಮೂರು ದಿನದೊಳಗೆ ವಿಶ್ಲೇಷಣಾ ವರದಿ ಕೊಡುವಂತೆ ಸೂಚಿಸಿದ್ದಾರೆ.

    ಈ ವರದಿ ಹಾಸ್ಯಾಸ್ಪದವಾಗಿದ್ದು, ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ. ಸೇಲ್ ಆಗುವುದು ಹೇಗೆ ಎಂದು ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ ಅವರು ಟಾಂಗ್ ಕೊಟ್ಟಿದ್ದಾರೆ.

    ಅಬಕಾರಿ ಇಲಾಖೆ ಬೇರೆ ಮದ್ಯ ಪೂರೈಕೆ ಮಾಡುತ್ತದೆ. ಏಕೆಂದರೆ ಆದಾಯದ ಪ್ರಮಾಣ ಹೆಚ್ಚಾಗಿರುತ್ತೆ. ಬಿಯರ್ ಸೇಲ್‍ನಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ. ಹೀಗಾಗಿ ಪೂರೈಕೆ ಕಡಿಮೆ ಮಾಡಿದೆ. ನಾವು ಬಿಯರ್ ಪೂರೈಕೆಗೆ ದುಂಬಾಲು ಬಿದರೂ ಕಳುಹಿಸುತ್ತಿರಲಿಲ್ಲ ಎಂದು ಬಾರ್ ಮಾಲೀಕರು ಹೇಳಿದ್ದಾರೆ.

  • ಕಾರೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ – ಯುವಕನನ್ನು ಹಿಡಿದ ಪೊಲೀಸರು

    ಕಾರೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ – ಯುವಕನನ್ನು ಹಿಡಿದ ಪೊಲೀಸರು

    – ಮದ್ಯದ ಅಮಲಿನಲ್ಲಿದ್ದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ

    ಮಂಗಳೂರು: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಯುವಕನೋರ್ವ ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಘಟನೆ ಮಂಗಳೂರಿನ ಸುರತ್ಕಲ್ ಸಮೀಪ ನಡೆದಿದೆ.

    ಸುರತ್ಕಲ್ ಪರಿಸರದಲ್ಲಿ ಕಾರೊಂದರ ಮುಂದಿನ ಸೀಟ್ ನಲ್ಲಿ ಯುವತಿಯೋರ್ವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಳು. ಯುವಕನೋರ್ವ ಗಾಬರಿಯಿಂದ ವೇಗವಾಗಿ ಕಾರು ಚಲಾಯಿಸುತ್ತಾ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಈ ಕಾರನ್ನು ಇತರೆ ವಾಹನ ಸವಾರರು ಹಿಂಬಾಲಿಸಿ ಸುರತ್ಕಲ್ ನ ಕುಳಾಯಿ ಎಂಬಲ್ಲಿ ತಡೆದು ನಿಲ್ಲಿಸಿದ್ದಾರೆ.

    ಆತನಲ್ಲಿ ಪ್ರಶ್ನಿಸುವಾಗ ಈಕೆ ತನ್ನ ಗೆಳತಿ ಎಂದಿದ್ದು ಆಕೆಯ ಪ್ರಜ್ಞಾಹೀನ ಸ್ಥಿತಿಗೆ ಕಾರಣ ಏನು ಎಂಬುದನ್ನು ಸರಿಯಾಗಿ ಹೇಳದೆ ಚಡಪಡಿಸುತ್ತಿದ್ದ. ಸ್ಥಳೀಯರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಂತೆ ಯುವಕ ಎಲ್ಲರ ಎದುರಲ್ಲೇ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದ. ಯುವತಿ ಆಗಲೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದುದ್ದರಿಂದ ಸ್ಥಳೀಯರು ಆತನ ಕಾರು ನಂಬರ್ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕಾರನ್ನು ದಾರಿ ಮಧ್ಯೆ ತಡೆದು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಬಾಯಿಬಿಟ್ಟಿದ್ದು, ಯುವತಿ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು ತನ್ನ ಗೆಳತಿ ಎಂದು ಹೇಳಿದ್ದ. ಜೊತೆಗೆ ಸ್ನೇಹಿತರೆಲ್ಲ ಸೇರಿ ಸುರತ್ಕಲ್ ಬೀಚ್ ನಲ್ಲಿ ಪಾರ್ಟಿ ಮಾಡಿದ್ದು, ಈ ಸಂದರ್ಭ ಯುವತಿ ಮದ್ಯಪಾನ ಸೇವಿಸಿದ್ದು ಅದರ ಪರಿಣಾಮ ಆಕೆ ಪ್ರಜ್ಞೆ ಇಲ್ಲದಂತಾಗಿದೆ. ನಾನು ಆಕೆಯನ್ನು ಆಕೆಯ ಮನೆಗೆ ಬಿಡಲು ಹೋಗುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು, ಆಕೆಗೆ ಪ್ರಜ್ಞೆ ಬಂದ ಬಳಿಕ ಇಬ್ಬರನ್ನು ಕಳಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಚಾಕು ಇರಿದು ಮಗನನ್ನೇ ಕೊಂದ ತಂದೆ

    ಕುಡಿದ ಮತ್ತಿನಲ್ಲಿ ಚಾಕು ಇರಿದು ಮಗನನ್ನೇ ಕೊಂದ ತಂದೆ

    ಉಡುಪಿ: ಕುಡಿದ ಮತ್ತಿನಲ್ಲಿದ್ದ ತಂದೆ ಮಗನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಚಾಕು ಇರಿದು ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕು ಮಂಗಳಪಾದೆಯಲ್ಲಿ ನಡೆದಿದೆ.

    ವಿಕ್ಟೋರ್ ಡಿಸೋಜಾ ಮದ್ಯ ವ್ಯಸನಿ. ದಿನಂಪ್ರತಿ ಕುಡಿದು ಮನೆ ಮನೆ ಮಂದಿ ಜೊತೆ ಜಗಳವಾಡುತ್ತಿದ್ದ. ತನ್ನ ಸ್ವಂತ ಮಗ ವಿವಿಯನ್‍ಗೆ ಇಂದು ಸಂಜೆ ಕುಡಿದ ಮತ್ತಿನಲ್ಲೇ ಚಾಕುವಿನಿಂದ ತೊಡೆಗೆ ಚುಚ್ಚಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವಿಯನ್ ಪ್ರಜ್ಞೆ ತಪ್ಪಿದ್ದಾನೆ.

    ಮನೆಯಲ್ಲಿದ್ದ ಅಸ್ವಸ್ಥ ತಾಯಿ ಮತ್ತೊಬ್ಬ ಮಗನಿಗೆ ಫೋನ್ ಮಾಡಿದ್ದಾರೆ. ವಿವಿಯನ್‍ನ ಸಹೋದರ ಮನೆಗೆ ಬಂದು ಪೊಲೀಸರಿಗೆ ದೂರು ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾನೆ. ಆಸ್ಪತ್ರೆ ತಲುಪಿ ವೈದ್ಯರು ಪರೀಕ್ಷೆ ನಡೆಸಿದಾಗ ವಿವಿಯನ್ ಕೊನೆಯುಸಿರೆಳೆದಿದ್ದ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿಕ್ಟರ್ ಡಿಸೋಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮದ್ಯ ಸೇವನೆ ಮಾಡಿ ವಿಕ್ಟರ್ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ. ಮಕ್ಕಳ ಜೊತೆ ಕ್ಷುಲ್ಲಕ ಕಾರಣಕ್ಕೆ ಕಾಲು ಕೆರೆದು ಜಗಳಕ್ಕಿಳಿಯುತ್ತಿದ್ದ ಎಂದು ಮನೆಯವರು ಮತ್ತು ಸ್ಥಳೀಯರು ಹೇಳಿದ್ದಾರೆ. ಮಂಗಳವಾರ ಸಂಜೆ ಜಗಳ ತಾರಕಕ್ಕೇರಿ ಚಾಕುವಿನಿಂದ ತೊಡೆಗೆ ಇರಿದಿದ್ದಾನೆ. ನಶೆಯಲ್ಲಿದ್ದ ವಿಕ್ಟರ್ ಗೆ ಮಗ ವಿವಿಯನ್ ಮೃತಪಟ್ಟಿರುವುದು ಇನ್ನೂ ಗೊತ್ತಿಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಹೇಳುತ್ತಿರುವುದಾಗಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

    ರಕ್ತಸ್ರಾವದಿಂದ ಸಾವು
    ವಿವಿಯನ್‍ಗೆ ಚಾಕು ಚುಚ್ಚಿದ್ದರಿಂದ ಆತ ರಕ್ತದ ನಡುವಿನಲ್ಲಿ ಬಿದ್ದು ಕೆಲಕಾಲ ಒದ್ದಾಡಿದ್ದಾನೆ. ಮನೆಯಲ್ಲಿ ತಾಯಿ ಇದ್ದರೂ ಅವರು ಕಾಲು ಮುರಿತಕ್ಕೆ ಒಳಗಾಗಿದ್ದರು. ಮತ್ತೊಬ್ಬ ಮಗನನ್ನು ಫೋನ್ ಮಾಡಿ ಕರೆಸಿದ ನಂತರ ಆತ ಬಂದಿದ್ದಾನೆ. ಬಂದವನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ತುರ್ತು ಚಿಕಿತ್ಸಾ ವಾಹನಕ್ಕೆ ಕರೆಮಾಡಿದ್ದಾರೆ. ಇಷ್ಟೆಲ್ಲದರ ನಡುವೆ ವಿವಿಯನ್ ಕಾಲಿಗೆ ಬಟ್ಟೆಯನ್ನು ಕೂಡಾ ಯಾರೂ ಸುತ್ತಿಲ್ಲ. ತೀವ್ರ ರಕ್ತಸ್ರಾವಗೊಂಡು ವಿವಿಯನ್ ಮನೆಯಲ್ಲೇ ಪ್ರಾಣ ಕಳೆದುಕೊಂಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.