Tag: alcohol

  • ಕೊರೊನಾ ಲಾಕ್‍ಡೌನ್: ಮದ್ಯಯಿಲ್ಲದೆ ಖಿನ್ನೆತೆಯಿಂದ ವ್ಯಕ್ತಿ ಆತ್ಮಹತ್ಯೆ

    ಕೊರೊನಾ ಲಾಕ್‍ಡೌನ್: ಮದ್ಯಯಿಲ್ಲದೆ ಖಿನ್ನೆತೆಯಿಂದ ವ್ಯಕ್ತಿ ಆತ್ಮಹತ್ಯೆ

    ತಿರುವನಂತಪುರಂ: ಕೊರೊನಾ ತಡೆಯಲು ದೇಶಾದ್ಯಂತ ಲಾಕ್‍ಡೌನ್ ಆಗಿದ್ದು, ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಹೀಗಿರುವಾಗ ವ್ಯಕ್ತಿಯೊಬ್ಬ ಮದ್ಯ ಇಲ್ಲದೆ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತ್ರಿಸೂರ್ ಜಿಲ್ಲೆಯ ಕುನ್ನಾಕುಲಂನಲ್ಲಿ ನಡೆದಿದೆ.

    ಸನೋಜ್ ಕುಲಂಗಾರಾ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೊರೊನಾ ತಡೆಯಲು ಎಲ್ಲರೂ ಮನೆಯಲ್ಲಿ ಇರಲಿ ಎಂದು ಪ್ರಧಾನಿ ಮೋದಿ 21 ದಿನ ಲಾಕ್‍ಡೌನ್ ಘೋಷಣೆ ಮಾಡಿದ ನಂತರ ಕೇರಳ ಸರ್ಕಾರ ಸಂಪೂರ್ಣವಾಗಿ ಮದ್ಯ ಬ್ಯಾನ್ ಮಾಡಿದೆ. ಹೀಗಿರುವಾಗ ಸನೋಜ್ ಮದ್ಯ ಸೇವಿಸದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಆತನ ಕುಟುಂಬಸ್ಥರು ಪ್ರತಿಕ್ರಿಯಿಸಿ, ಸನೋಜ್ ಕುಡುಕನಾಗಿದ್ದು, ಮದ್ಯ ಸಂಪೂರ್ಣವಾಗಿ ಬ್ಯಾನ್ ಆಗಿದ್ದಾಗ ಆತ ಖಿನ್ನತೆಗೆ ಒಳಗಾಗಿದ್ದನು ಎಂದು ಪೊಲೀಸರ ಬಳಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದಕ್ಕೂ ಮೊದಲು ನಾಲ್ಕು ಮಂದಿ ಮದ್ಯ ಸೇವಿಸದೇ ಖಿನ್ನತೆಗೆ ಒಳಗಾಗಿ ತಿರುವನಂತಪುರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಎಂದು ತಿಳಿಸಿದ್ದಾರೆ.

  • ಕೊರೊನಾ ಫಿಯರ್ ಮಧ್ಯೆಯೂ ಮದ್ಯ ಮಾರಾಟ – ಗ್ರಾಮಸ್ಥರಿಂದ ತರಾಟೆ

    ಕೊರೊನಾ ಫಿಯರ್ ಮಧ್ಯೆಯೂ ಮದ್ಯ ಮಾರಾಟ – ಗ್ರಾಮಸ್ಥರಿಂದ ತರಾಟೆ

    ಚಿಕ್ಕಮಗಳೂರು: ಇಡೀ ದೇಶವೇ ಕೊರೊನಾ ಫಿಯರ್ ನಿಂದ ಕಂಗಾಲಾಗಿದ್ರೆ, ತಾಲೂಕಿನ ಕರಿಸಿದ್ದನಹಳ್ಳಿಯಲ್ಲಿ ಈ ಭಯವನ್ನೇ ಅಡ್ವಾಂಟೇಜ್ ಮಾಡಿಕೊಂಡಿದ್ದಾರೆ.

    ವೈರಸ್ ಭಯದಿಂದ ಜನ ಮನೆಯಿಂದ ಹೊರಬಾರದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಿಸಿದ್ದನಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸಿಗುತ್ತಿದೆ ಎಂದು ಗೊತ್ತಾದ ಕೂಡಲೇ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಕದ್ದು-ಮುಚ್ಚಿ ಮದ್ಯ ಖರೀದಿಸೋದಕ್ಕೆ ಬರುತ್ತಿದ್ದರು.

    ಜನ ಗುಂಪಾಗಿ ಸೇರಬಾರದು ಎಂದು ದೇಶದ ಪ್ರಧಾನಿಯೇ ಮನವಿ ಮಾಡಿಕೊಂಡು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. ಹೀಗಿರುವಾಗ 25-30 ಮಂದಿ ಮದ್ಯ ಖರೀದಿಸುವುದಕ್ಕೆ ಕರಿಸಿದ್ದನಹಳ್ಳಿಯಲ್ಲಿ ಜಮಾಯಿಸುತ್ತಿದ್ದರು. ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದರು. ಇದರಿಂದ ಸ್ಥಳಿಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿ, ಕರಿಸಿದ್ದನಹಳ್ಳಿ ಜನ ಕೆಂಗೇನಹಳ್ಳಿ ಗೇಟ್ ಬಳಿ ಗ್ರಾಮಕ್ಕೆ ಮದ್ಯ ಖರೀದಿಸಲು ಬರುತ್ತಿದ್ದ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾರ್ಗ ಮಧ್ಯೆಯೇ ಅಡ್ಡಗಟ್ಟಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗ್ರಾಮಸ್ಥರ ವಿರುದ್ಧ ಗ್ರಾಮಸ್ಥರೇ ತಿರುಗಿ ಬಿದ್ದಿದ್ದು ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾರೆ.

  • ಕೊರೊನಾ ವೈರಸ್ ಮುಕ್ತಿಗಾಗಿ ದೇವರಿಗೆ ಮದ್ಯ, ಸಿಗರೇಟು ಅರ್ಪಣೆ

    ಕೊರೊನಾ ವೈರಸ್ ಮುಕ್ತಿಗಾಗಿ ದೇವರಿಗೆ ಮದ್ಯ, ಸಿಗರೇಟು ಅರ್ಪಣೆ

    – ಕಾರವಾರದಲ್ಲಿ ಖಾಫ್ರಿ ದೇವನಿಗೆ ವಿಶಿಷ್ಟ ಸೇವೆ

    ಕಾರವಾರ: ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ವ್ಯಕ್ತಿಯೋರ್ವನನ್ನು ಬಲಿ ತೆಗೆದುಕೊಂಡ ನಂತರ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಸಂಕಷ್ಟ ಬಂದಾಗ ವೆಂಕಟರಮಣ ಎನ್ನುವಂತೆ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಕಾರವಾರದಲ್ಲಿ ಭಕ್ತರು ತಮ್ಮೂರಿಗೆ ಕೊರೊನಾ ವೈರಸ್ ಹಾಗೂ ಯಾವುದೇ ರೋಗ ರುಜನಗಳು ಭಾದಿಸದಿರಲಿ ಎಂದು ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಬಳಿ ಇರುವ ಸರ್ವ ರೋಗ ಕಷ್ಟ ನಿವಾರಕ ಖಾಫ್ರಿ ದೇವರ ಮೊರೆ ಹೋಗಿದ್ದಾರೆ. ದೇವರಿಗೆ ಮದ್ಯ, ಸಿಗರೇಟು, ಕುರಿ, ಕೋಳಿ ನೀಡುವ ಮೂಲಕ ವಿಶಿಷ್ಟವಾಗಿ ದೇವರಲ್ಲಿ ಬೇಡಿಕೊಂಡಿದ್ದಾರೆ.

    ಯಾವುದೇ ದೇವರಿಗೆ ಹಾಲು, ನೈವೇದ್ಯ, ಅಭಿಷೇಕ ಮಾಡುವುದು ಸಾಮಾನ್ಯ. ಅದರಲ್ಲೂ ಉಗ್ರ ಸ್ವರೂಪದ ದೇವರಾದರೆ ಕುರಿ, ಕೋಳಿ ಬಲಿ ನೀಡುತ್ತಾರೆ. ಆದರೆ ಇಲ್ಲಿಯ ದೇವರಿಗೆ ಸಾರಾಯಿ ಅಭಿಷೇಕ, ಸಿಗರೇಟಿನಿಂದ ಪೂಜಿಸುವ ಅಪರೂಪದ ಪದ್ಧತಿಯಿದ್ದು, ರೋಗ ರುಜನ ತೊಂದರೆ ಬಂದರೆ ಈ ರೀತಿಯ ಹರಕೆ ಸಲ್ಲಿಸುವುದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ತಮಗೆ ಹಾಗೂ ತಮ್ಮೂರಿಗೆ ಯಾವುದೇ ರೋಗ ರುಜನಗಳು ಬರಬಾರದು ಎಂದು ದೇವನಿಗೆ ಸಾರಾಯಿ, ಸಿಗರೇಟುಗಳನ್ನು ನೂರಾರು ಭಕ್ತರು ಭಕ್ತಿಯಿಂದ ತಂದು ಇಂದು ಅರ್ಪಿಸಿದರು.

    ಶತಮಾನದ ಇತಿಹಾಸ ಹೊಂದಿದ ವಿಶಿಷ್ಟ ದೇವರು:
    ಸುಮಾರು 1 ಶತಮಾನಗಳ ಹಿಂದೆ ದಕ್ಷಿಣ ಆಫ್ರಿಕಾ ದೇಶದ ಖಾಫ್ರಿ ಹೆಸರಿನ ಪ್ರಜೆ ಇಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದನಂತೆ. ಆತ ಪರೋಪಕಾರಿ ವ್ಯಕ್ತಿಯಾಗಿದ್ದ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದನಂತೆ. ಹೀಗಾಗಿ ಅವನಿಗೆ ಬಡವರ ರಕ್ಷಕ ಎಂದು ಕರೆಯಲಾಗುತ್ತಿತ್ತು. ಕೆಲವರ ಪಾಲಿಗೆ ಆತ ದೇವಮಾನವನಾಗಿದ್ದನು. ಹೀಗಿರುವಾಗ ಆತ ಇದ್ದಕ್ಕಿದ್ದಂತೆ ಕಣ್ಮರೆಯಾದ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಆದರೂ ಜನರು ಆತನ ಮೇಲೆ ಅಪಾರವಾದ ಭಯ-ಭಕ್ತಿ ಹೊಂದಿದ್ದರು. ಒಂದು ದಿನ ಗ್ರಾಮದ ಪರಸಪ್ಪ ಎಂಬಾತನಿಗೆ ಕಣ್ಮರೆಯಾದ ಖಾಫ್ರಿ ಕನಸಿನಲ್ಲಿ ಬಂದು ತನಗೊಂದು ಗುಡಿಯನ್ನು ಕಟ್ಟುವಂತೆ ಹಾಗೂ ತನಗೆ ಇಷ್ಟವಾದ ಸಾರಾಯಿ, ಸಿಗರೇಟು ಮಾಂಸದ ಭಕ್ಷಾದಿಗಳನ್ನು ನೀಡುವಂತೆ ಸೂಚಿಸಿದನೆಂದು ಹೇಳಲಾಗುತ್ತದೆ. ಇದರಿಂದ ಪರಸಪ್ಪ ಖಾಫ್ರಿಯ ಒಂದು ಕಲ್ಲಿನ ಮೂರ್ತಿಯನ್ನು ತಂದು ಪ್ರತಿಷ್ಟಾಪಿಸಿ ಪೂಜಿಸಲು ಪ್ರಾರಂಭಿಸಿದನು.

    ಖಾಫ್ರಿಯ ಮೇಲೆ ಭಯ-ಭಕ್ತಿಯಿದ್ದವರು ರೋಗ ರುಜನ ಹರಡದಂತೆ ಹಾಗೂ ಯಾವುದೇ ಕಷ್ಟಗಳಿದ್ದರೂ ಬಂದು ಆತನ ಕಲ್ಲಿನ ಮೂರ್ತಿಗೆ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಖಾಫ್ರಿ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬರುವಾಗ ಎಲ್ಲರನ್ನೂ ಕಾಪಾಡುವಂತೆ ಕೋರಿ ಕಡ್ಡಾಯವಾಗಿ ಸಾರಾಯಿ, ಸಿಗರೇಟು ತಂದು ದೇವರಿಗೆ ಸಲ್ಲಿಸುತ್ತಾರೆ.

    ಸ್ಥಳೀಯರ ಪ್ರಕಾರ ಖಾಪ್ರಿ ಎನ್ನುವ ಸಂತ ಇಂದು ನಮಗೆ ನಮ್ಮ ಕಷ್ಟ-ಕಾರ್ಪಣ್ಯಗಳನ್ನು, ರೋಗ ರುಜನಗಳನ್ನು ನಿವಾರಿಸುವ, ಬೇಡಿಕೆಗಳನ್ನು ಈಡೇರಿಸುವ ಸಾಕ್ಷಾತ್ ದೇವನಾಗಿ ಇಲ್ಲಿ ನೆಲೆ ನಿಂತಿದ್ದಾನೆ. ಭಕ್ತಾದಿಗಳು ಅವನ ಮೇಲೆ ಭಕ್ತಿಯಿಟ್ಟು ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ ಎನ್ನುತ್ತಾರೆ.

    ಖಾಫ್ರಿ ದೇವರಿ ಆಚರಣೆಯ ವಿಶಿಷ್ಟತೆ:
    ಹೂ-ಹಣ್ಣು ಕಾಯಿಯನ್ನು ಸಲ್ಲಿಸುವುದು. ಕೋಳಿಯನ್ನು ಬಲಿಕೊಡುವುದು, ಖಾಯಿಪಲ್ಲೆ ತರಕಾರಿಯ ತುಲಾಭಾರ ನಡೆಸುವುದು ಖಾಫ್ರಿ ದೇವರಿಗೆ ಪೂಜೆ ಸಲ್ಲಿಸುವ ಸಂಪ್ರದಾಯದ ಭಾಗವಾಗಿದೆ. ಜೊತೆಗೆ ಭಕ್ತಾದಿಗಳು ವೈವಿಧ್ಯಮಯವಾದ ಮದ್ಯಗಳನ್ನು ತಂದು ದೇವನಿಗೆ ಸಲ್ಲಿಸುವುದು ವಿಶೇಷವಾಗಿದೆ.

    ಅಲ್ಲದೇ ಅದನ್ನೆ ದೇವರ ಪ್ರಸಾದ ಎಂದು ಸ್ವೀಕರಿಸುವವರು ಇದ್ದಾರೆ. ಸಿಗರೇಟನ್ನು ತಂದು, ಅಗರಬತ್ತಿಯ ರೂಪದಲ್ಲಿ ಆರತಿಯನ್ನು ಮಾಡುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಕಾರವಾರವಷ್ಟೇ ಅಲ್ಲದೇ ಗೋವಾ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಹಲವರು ಕಟ್ಟಿಕೊಂಡ ಹರಕೆ ಈಡೇರಿದ ನಂತರದಲ್ಲಿ ತಮ್ಮ ಮನಸ್ಸಿಗೆ ತೋಚಿದಂತೆ ಹಣದ ರೂಪದಲ್ಲಿ, ವಸ್ತುರೂಪದಲ್ಲಿ ಸೇವೆಯನ್ನು ಕೂಡ ಸಲ್ಲಿಸುತ್ತಾರೆ.

  • ಕುಡಿಯಲು ಹಣವಿಲ್ಲದಿದ್ದಾಗ ಟ್ರೈನಿನಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ

    ಕುಡಿಯಲು ಹಣವಿಲ್ಲದಿದ್ದಾಗ ಟ್ರೈನಿನಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ

    – ಕದ್ದ ಹಣದಲ್ಲಿ ಮೈಸೂರಿನಲ್ಲಿ ಪಾರ್ಟಿ

    ಬೆಂಗಳೂರು: ಎಣ್ಣೆ ಹೊಡೆಯೋಕೆ ದುಡ್ಡಿಲ್ಲದಿದ್ದರೆ ಏನಂತೆ, ಸೊಂಪಾಗಿ ಸಿಲಿಕಾನ್ ಸಿಟಿ ಇದ್ಯಲ್ಲಾ ಎಂಬ ಮೈಂಡ್ ಸೆಟ್ ಅವರದ್ದು. ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಕೈಚಳಕ ತೋರುತ್ತಿದ್ದ ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.

    ದಿಲೀಪ್ (34) ಹಾಗೂ ಮಸ್ತಾನ್ (38) ಬಂಧಿತ ಆರೋಪಿಗಳು. ಬೆಂಗಳೂರಲ್ಲಿ ಓಡಾಡಲಿಕ್ಕೆ ಬಾಡಿಗೆ ಬೈಕ್ ಪಡೆಯುತ್ತಿದ್ದ ಆರೋಪಿಗಳು, ಕಳ್ಳತನ ಮಾಡಿ ಪುನಃ ಮೈಸೂರು ಸೇರಿಕೊಳ್ಳುತ್ತಿದ್ದರು. ಈಗ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಂದ ಖರ್ತನಾಕ್ ಆರೋಪಿಗಳು ಸೆರೆಸಿಕ್ಕಿದ್ದಾರೆ.

    ಕುಡಿಯಲಿಕ್ಕೆ ಹಣವಿಲ್ಲದಿದ್ದಾಗ ಟ್ರೈನ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದರು. ಗಮನ ಬೇರೆಡೆ ಸೆಳೆದು ಕೈಚಳಕ ತೋರುತ್ತಿದ್ದರು. ಒಬ್ಬರೇ ಮಾರಾಟಗಾರರು ಇರುವ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು, ಮೊದಲು ಒಬ್ಬ ಅಂಗಡಿಗೆ ಬಂದು ವ್ಯಾಪಾರ ಮಾಡಿ ಪರಿಸ್ಥಿತಿ ಅವಲೋಕಿಸುತ್ತಿದ್ದ. ನಂತರ ಮತ್ತೊಬ್ಬ ಬಂದು ಅಂಗಡಿಯಲ್ಲಿರದ ವಸ್ತುಗಳನ್ನು ಕೇಳುತ್ತಿದ್ದ. ಈ ವೇಳೆ ಗಮನ ಬೇರೆ ಕಡೆ ಸೆಳೆದು ಪೆಟ್ಟಿಗೆಯಿಂದ ಹಣ ಕದ್ದು ಪರಾರಿ ಆಗುತ್ತಿದ್ದರು.

    ಅಂಗಡಿಯಲ್ಲಿ ಕೆಲ ವಸ್ತುಗಳು ಇಲ್ಲ ಎಂದಾದಾಗ ಬೇರೆ ಕಡೆಯಿಂದ ತಂದುಕೊಡಿ ಅಂತಿದ್ದ ಆರೋಪಿಗಳು ಅಂಗಡಿಯವರು ಬೇರೆಡೆಯಿಂದ ಅಥವಾ ಗೋಡೌನ್ ನಿಂದ ತರಲಿಕ್ಕೆ ಹೋದಾಗ ಕೈ ಚಳಕ ತೋರುತ್ತಿದ್ದರು. ಕಳೆದ ಮಾರ್ಚ್ 3 ರಂದು ಬನಶಂಕರಿಯಲ್ಲಿ ಕೈಚಳಕ ತೋರಿದ್ದ ಆರೋಪಿಗಳು, ಲೋಕೆಶ್ ಎಂಬುವರ ಬುಕ್ ಸ್ಟೋರ್ ನಲ್ಲಿ 50 ಸಾವಿರ ಹಣ ಎಗರಿಸಿದ್ದರು.

    ಅಂಗಡಿಯ ಗೋಡೌನ್‍ನಿಂದ ಥರ್ಮಕೋಲ್ ತಂದುಕೊಡುವಂತೆ ತಿಳಿಸಿ ಹಣ ಎಗರಿಸಿ ಎಸ್ಕೇಪ್ ಆಗಿದ್ದರು. ಬೆಂಗಳೂರಲ್ಲಿ ಕೈಚಳಕ ತೋರಿ ಕದ್ದ ಹಣದಲ್ಲಿ ಮೈಸೂರಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಕುಡಿದು ಆಸ್ಪತ್ರೆಯಲ್ಲಿ ಬೆತ್ತಲಾಗಿ ಮಲಗಿದ ವೈದ್ಯ – ರೋಗಿ ಸಾವು

    ಕುಡಿದು ಆಸ್ಪತ್ರೆಯಲ್ಲಿ ಬೆತ್ತಲಾಗಿ ಮಲಗಿದ ವೈದ್ಯ – ರೋಗಿ ಸಾವು

    ಚಿಕ್ಕಮಗಳೂರು: ರೋಗಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯಲ್ಲಿದ್ದ ವೈದ್ಯರು ಮದ್ಯಪಾನ ಸೇವನೆ ಮಾಡುವುದರಲ್ಲಿ ಬ್ಯುಸಿ ಇದ್ದ ಕಾರಣ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ಚನ್ನಕೇಶವನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ವೈದ್ಯ ಚನ್ನಕೇಶವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಜ್ಜಂಪುರ ಸಮೀಪದ ಹೆಬ್ಬುರು ಮೂಲದ ಪುಟ್ಟಮ್ಮಗೆ ಬಿಪಿ ಹಾಗೂ ಶುಗರ್ ಹೆಚ್ಚಿದ್ದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಡ್ಯೂಟಿಯಲ್ಲಿದ್ದ ಚನ್ನಕೇಶವ ಮದ್ಯಪಾನ ಮಾಡಿ ರೋಗಿಗೆ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಯಲ್ಲಿದ್ದ ನರ್ಸ್‍ಗಳು ರೋಗಿಗೆ ಚಿಕಿತ್ಸೆ ನೀಡಿದ್ದಾರೆ.

    ಆಸ್ಪತ್ರೆಗೆ ಬಂದ ಸ್ವಲ್ಪ ಹೊತ್ತಿನಲ್ಲೇ ರೋಗಿ ಸಾವನ್ನಪ್ಪಿದ್ದಾರೆ. ರೋಗಿ ಪುಟ್ಟಮ್ಮ ಬಿಪಿ ಹಾಗೂ ಶುಗರ್‍ನಿಂದಲೇ ಸಾವನ್ನಪ್ಪಿದರೋ ಅಥವಾ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ವೈದ್ಯರ ಕೊಠಡಿಗೆ ಹೋದಾಗ, ವೈದ್ಯರು ಫುಲ್ ಎಣ್ಣೆ ಕುಡಿದು ಬೆತ್ತಲೆ ಮಲಗಿದ್ದಾರೆ. ಮೈಮೇಲೆ ಒಂದಿಂಚು ಬಟ್ಟೆ ಹಾಗೂ ಪ್ರಜ್ಞೆ ಇಲ್ಲದಂತೆ ಮಲಗಿದ್ದ ವೈದ್ಯನ ಕಂಡು ಸ್ಥಳೀಯರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ.

    ಕೂಡಲೇ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಈ ರೀತಿಯ ವೈದ್ಯರು ಯಾವ ಆಸ್ಪತ್ರೆಗೂ ಬೇಡ, ಇವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಬಜೆಟ್‍ನಲ್ಲಿ ಕುಡುಕರಿಗೆ ‘ಕಿಕ್’ ಶಾಕ್?

    ಬಜೆಟ್‍ನಲ್ಲಿ ಕುಡುಕರಿಗೆ ‘ಕಿಕ್’ ಶಾಕ್?

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾರ್ಚ್ 5 ರಂದು ಮಂಡಿಸಲಿರುವ 2020-21ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯದ ಮದ್ಯಪ್ರಿಯರಿಗೆ ‘ಕಿಕ್’ ಸಾಧ್ಯತೆ ಇದೆ.

    ಹೌದು. ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಎಣ್ಣೆ ರೇಟು ಏರಿಸಲು ಸಜ್ಜಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅಬಕಾರಿ ತೆರಿಗೆಯನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಶೇ.10ರಷ್ಟು ಹೆಚ್ಚಳ ತೀರ್ಮಾನವನ್ನು ಬಿಎಸ್‍ವೈ ಬಜೆಟ್‍ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ಮೂಲಕ ಅಬಕಾರಿ ಟಾರ್ಗೆಟ್ ಹೆಚ್ಚಳ ಮಾಡುವ ಸಾಧ್ಯತೆ ಇದ್ದು, ಟಾರ್ಗೆಟ್ ರೀಚ್ ಆಗಬೇಕಾದರೆ ದರ ಹೆಚ್ಚಳ ಅನಿವಾರ್ಯ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ.

    ಈ ಹಿನ್ನೆಲೆಯಲ್ಲಿ ಮದ್ಯದ ಎಲ್ಲಾ 18 ಸ್ಲಾಬ್‍ಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಈ ವರ್ಷದ ಆರ್ಥಿಕ ಗುರಿ 20,950 ಕೋಟಿ ರೂ. ಇದೆ. 2020-21ನೇ ಸಾಲಿಗೆ ಅಂದಾಜು 25 ಸಾವಿರ ರೂ. ನಿಗದಿಪಡಿಸಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಮದ್ಯದ ದರ ಹೆಚ್ಚಳ ಜೊತೆ ಬಾರ್ ಮಾಲೀಕರ ಲೈಸನ್ಸ್ ರಿನೀವಲ್ ದರವನ್ನು ಕೂಡ ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ ಎಂಬುದಾಗಿ ತಿಳಿದುಬಂದಿದೆ.

  • ಎಣ್ಣೆ ಮತ್ತಲ್ಲಿ ನಾಯಿ ಮರಿಗೆ ಪೆಗ್ ಹಾಕಿಸಿ ಯುವಕನಿಂದ ವಿಕೃತಿ

    ಎಣ್ಣೆ ಮತ್ತಲ್ಲಿ ನಾಯಿ ಮರಿಗೆ ಪೆಗ್ ಹಾಕಿಸಿ ಯುವಕನಿಂದ ವಿಕೃತಿ

    ಕಾರವಾರ: ಯುವಕನೊಬ್ಬ ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕುಮಟಾ ಪಟ್ಟಣದ ಕಡ್ಲೆ ಗಾಂಧಿವನ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಗಾಳಿ ಮರದ ಕೆಳಗೆ ಹಾಡಹಗಲೇ ಮದ್ಯದ ಬಾಟಲಿ ಹಿಡಿದು ಕುಳಿತ ಯುವಕ, ನಾಯಿ ಮರಿಯೊಂದನ್ನು ಹಿಡಿದು ಅದರ ಬಾಯಿಗೆ ಮದ್ಯ ಸುರಿದು ವಿಕೃತಿ ಮೆರದಿದ್ದಾನೆ.

    ನೀನು ಕೂತ್ಕೊಳ್ಳೆ, ಲಾಸ್ಟ್ ಪೆಗ್ ಐತಿ ಅಷ್ಟೇ. ತಿಂಡಿ ತಿಂದಿದ್ದೀಯಲಾ, ಕುಡಿಲೇ ಬೇಕು ಈಗ ಎನ್ನುತ್ತಾ ಮದ್ಯ ಕುಡಿಸಿದ್ದಾನೆ. ಸಮೀಪದಲ್ಲಿದ್ದ ಮತ್ತೊಬ್ಬ ಅದನ್ನು ವಿಡಿಯೋ ಮಾಡಿದ್ದು, ಯುವಕ ಶಿರಸಿ ಮೂಲದವನು ಎಂದು ತಿಳಿದುಬಂದಿದೆ. ಆದರೇ ಈವರೆಗೂ ಆತನ ಹೆಸರು ಪತ್ತೆಯಾಗಿಲ್ಲ. ನಾಯಿ ಮರಿಗೆ ಮದ್ಯ ಕುಡಿಸಿದ ಈತ, ಅಮಲೇರಿ ಅವುಗಳು ಒದ್ದಾಡುವುದನ್ನು ಕಂಡು ವಿಕೃತವಾಗಿ ಆನಂದಪಟ್ಟಿದ್ದಾನೆ. ಯುವಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • ಮದ್ಯಪಾನ ಮಾಡಿಸಿ ಅನೇಕ ವಿದ್ಯಾರ್ಥಿಗಳೊಂದಿಗೆ ಮಾಜಿ ಶಿಕ್ಷಕಿ ಸೆಕ್ಸ್

    ಮದ್ಯಪಾನ ಮಾಡಿಸಿ ಅನೇಕ ವಿದ್ಯಾರ್ಥಿಗಳೊಂದಿಗೆ ಮಾಜಿ ಶಿಕ್ಷಕಿ ಸೆಕ್ಸ್

    – ಪ್ರೌಢ ಶಾಲೆಯ ಶಿಕ್ಷಕಿಯಿಂದ ನೀಚ ಕೃತ್ಯ

    ಅಟ್ಲಾಂಟಾ: ಶಾಲೆಯ ಮಾಜಿ ಉದ್ಯೋಗಿಯೊಬ್ಬಳು ಅನೇಕ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ಮಾಡಿದಲ್ಲದೇ ಅವರಿಗೆ ಮದ್ಯಪಾನ ಮಾಡಿಸಿರುವ ಘಟನೆ  ಅಮೆರಿಕದ ಅಟ್ಲಾಂಟಾನಲ್ಲಿ ನಡೆದಿದೆ.

    ಆರೋಪಿಯನ್ನು ಬೆತ್ಲೆಹೆಮ್ ನಿವಾಸಿ ಹೀದರ್ ಕಿಶುನ್ (35) ಎಂದು ಗುರುತಿಸಲಾಗಿದೆ. ಈಕೆ ಜಾರ್ಜಿಯಾ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ಈಕೆ ಅನೇಕ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ಮಾಡಿದ್ದಾಳೆ. ಅಲ್ಲದೇ ಅವರಿಗೆ ಮದ್ಯಪಾನ ಕೂಡ ಮಾಡಿಸಿದ್ದಾಳೆ. ಹೀಗಾಗಿ ಈಕೆಯ ಮೇಲೆ ಅಪ್ರಾಪ್ತ ಮಕ್ಕಳಿಗೆ ಕಿರುಕುಳ, ಮದ್ಯಪಾನ ಮಾಡಿಸಿದ ಪ್ರಕರಣ ಸೇರಿದಂತೆ ಅನೇಕ ಕೇಸ್‍ಗಳು ದಾಖಲಾಗಿವೆ.

    ಸ್ಥಳೀಯ ಶಾಲೆಯ ವಿದ್ಯಾರ್ಥಿಗಳ ಜೊತೆ ತನ್ನ ಮನೆಯಲ್ಲಿ ಇದ್ದಾಗಲೇ ಆರೋಪಿ ಕಿಶುನ್‍ನನ್ನು ಕಳೆದ ಶುಕ್ರವಾರ ಬಂಧಿಸಲಾಗಿದೆ. ಈಕೆ ಜಾರ್ಜಿಯಾ ಪ್ರೌಢ ಶಾಲೆಯಲ್ಲಿ ಪ್ಯಾರಾ ಪ್ರೊಫೆಷನಲ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ಆರೋಪಿ ಕಿಶುನ್ ಅನೇಕ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಅಲ್ಲದೇ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಮದ್ಯಪಾನ ಮಾಡಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಿಶುನ್ ಈ ಘಟನೆಯ ಸಮಯದಲ್ಲಿ ಬ್ಯಾರೊ ಕೌಂಟಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಅವಳು ಕೆಲಸ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಆರೋಪಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಹಿಂದೆ ಕಿಶುನ್ ಗ್ವಿನ್ನೆಟ್ ಕೌಂಟಿ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.

    ಪೊಲೀಸರು ಆರೋಪಿ ಕಿಶುನ್‍ನನ್ನು ಶುಕ್ರವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಆಕೆಯ ಜಾಮೀನು ಅರ್ಜಿಯನ್ನು ನಿರಾಕರಿಸಲಾಗಿದೆ. ಸದ್ಯಕ್ಕೆ ಆಕೆಯನ್ನು ಬ್ಯಾರೊ ಕೌಂಟಿ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.

  • ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ಬೆಂಗಳೂರು: ದಾಳಿ ಮಾಡುವುದಕ್ಕೆ ಹೋದ ಬೆಂಗಳೂರು ಸಿಸಿಬಿ ಪೊಲೀಸರು ಅದೇ ಮನೆಯಲ್ಲೇ ರಾತ್ರಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ.

    ಅಟಿಕಾ ಗೋಲ್ಡ್ ಕಂಪೆನಿ ಮಾಲೀಕ ಬಾಬು ಅವರ ಬಾಣಸವಾಡಿ ಬಳಿಯ ಕಲ್ಯಾಣ ನಗರದ ಮನೆ ಮೇಲೆ ಕಳೆದ 30ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಾಲೀಕ ಬಾಬು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ಬಾಬುಗಾಗಿ ಕಾಯುತ್ತಿದ್ದರು. ಅಲ್ಲದೆ ರಾತ್ರಿ ಆದರೂ ಪರವಾಗಿಲ್ಲ ಕಾಯೋಣ ಎಂದು ಕಾದು ಕುಳಿತ್ತಿದ್ದರು. ಆದರೆ ಬಾಬು ಮನೆಗೆ ಬಂದಿಲ್ಲ.

    ತಡರಾತ್ರಿ ಹಿರಿಯ ಅಧಿಕಾರಿಗಳು ಮನೆಗೆ ಹೋದ ನಂತರ ಅಲ್ಲಿಯೇ ಉಳಿದಿದ್ದ ಐವರು ಸಿಸಿಬಿ ಅಧಿಕಾರಿಗಳು ಅದೇ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೊಲೀಸರು ಪಾರ್ಟಿ ಮಾಡುವ ದೃಶ್ಯವನ್ನು ಮನೆಯವರು ಸೆರೆಹಿಡಿದಿದ್ದಾರೆ. ಪೊಲೀಸರ ಎಣ್ಣೆ ಪಾರ್ಟಿಯ ವಿಡಿಯೋವನ್ನು ಮಾಲೀಕ ಬಾಬು ಬಿಡುಗಡೆ ಮಾಡುವ ಮೂಲಕ ಪೊಲೀಸರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಹಿರಿಯ ಅಧಿಕಾರಿ, ಇದು ನಮ್ಮ ಪೊಲೀಸರು ಎನ್ನುವುದರ ಬಗ್ಗೆ ಅನುಮಾನವಿದೆ. ವಿಡಿಯೋ ಪರಿಶೀಲನೆ ನಡೆಸಿದ ನಂತರ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಹೊಸ ವರ್ಷದ ಆಚರಣೆಯ ಪಾರ್ಟಿ – ರಾಮನಗರದಲ್ಲಿ ಒಂದೇ ದಿನಕ್ಕೆ 3 ಕೋಟಿ ಎಣ್ಣೆ ಬಿಕರಿ

    ಹೊಸ ವರ್ಷದ ಆಚರಣೆಯ ಪಾರ್ಟಿ – ರಾಮನಗರದಲ್ಲಿ ಒಂದೇ ದಿನಕ್ಕೆ 3 ಕೋಟಿ ಎಣ್ಣೆ ಬಿಕರಿ

    ರಾಮನಗರ: ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಏನೇ ಪಾರ್ಟಿ ಆಯೋಜಿಸಿದ್ರೂ ಎಣ್ಣೆ ಬೇಕೇ ಬೇಕು. ಅಬ್ಬರದ ಪಾರ್ಟಿಗೆ ಹೋಗುವುದಕ್ಕೆ ಆಗಲ್ಲ ಎಂದರೂ ಸ್ನೇಹಿತರ ಜೊತೆ ಮದ್ಯ ಪಾರ್ಟಿ ಮಾಡಲೇಬೇಕು. ಹಾಗಾಗಿಯೇ ನ್ಯೂ ಇಯರ್ ನೆಪದಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡಿರುವ ಅಬಕಾರಿ ಇಲಾಖೆ, ವರ್ಷಾಚರಣೆಗೆ ಭರ್ಜರಿ ಎಣ್ಣೆ ವ್ಯಾಪಾರ ನಡೆಸಿದೆ.

    ಪ್ರತಿನಿತ್ಯ ಮಾರಾಟ ಮಾಡುತ್ತಿದ್ದ ಮದ್ಯ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿಯೇ ಡಿ.31ರ ರಾತ್ರಿ ವ್ಯಾಪಾರ ನಡೆಸಿದೆ. ಒಂದೇ ರಾತ್ರಿ 3,25,60,134 ರೂ. ಮೌಲ್ಯದ ಮದ್ಯ ವ್ಯಾಪಾರ ನಡೆಸಿದೆ. ಆದರೆ 2018ರ ಡಿ. 31ರ ರಾತ್ರಿ ಸೇಲ್ ಆಗಿದ್ದ ಎಣ್ಣೆಗಿಂತ ಈ ಬಾರಿ 11 ಲಕ್ಷ ರೂ. ಮೌಲ್ಯದಷ್ಟು ಕಡಿಮೆ ಎಣ್ಣೆ ಸೇಲ್ ಆಗಿದೆ.

    2020 ಹೊಸ ವರ್ಷಾಚರಣೆ ಕುಡುಕರ ಪಾಲಿಗೆ ಕಿಕ್ ಕೊಂಚ ಪ್ರಮಾಣ ಕಡಿಮೆಯಾಗಿತ್ತು ಎನ್ನಬಹುದು. ಅದರಲ್ಲೂ ಸ್ವಲ್ಪ ಚಳಿಗಾಲದ ಎಫೆಕ್ಟ್ ಬಿಯರ್ ಸ್ವಲ್ಪ ಕಡಿಮೆ ಸೇಲ್ ಆಗುವಂತೆ ಮಾಡಿದೆ. ಹೊಸ ವರ್ಷವನ್ನು ಬರಮಾಡಿಕೊಂಡ ರಾಮನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳಲ್ಲಿ ಮುಗಿಬಿದ್ದು ಕೇಸ್ ಗಟ್ಟಲ್ಲೇ ಮದ್ಯ ಮತ್ತು ಬಿಯರ್ ಬಾಟಲ್‍ಗಳನ್ನು ಖರೀದಿ ಮಾಡಿದ ಮದ್ಯ ಪ್ರಿಯರು, ಹೊಸ ವರ್ಷವನ್ನು ಅದ್ಧೂರಿಯಾಗಿ ಪಾರ್ಟಿ ಮಾಡುವ ಮೂಲಕ ಆಚರಿಸಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಪಾನೀಯ ನಿಗಮದಿಂದ ಎಲ್ಲಾ ಬಾರ್ & ರೆಸ್ಟೊರೆಂಟ್ ಮತ್ತು ಮದ್ಯದಂಗಡಿಗಳು ಬರೋಬ್ಬರಿ 3.25 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿ ಮಾರಾಟ ಮಾಡಿವೆ. ಇದನ್ನು ಇತರೆ ದಿನಕ್ಕೆ ಹೋಲಿಸಿದರೆ, ಮದ್ಯದ ಪ್ರಮಾಣ ಶೇ.55ರಷ್ಟು ಏರಿಕೆಯಾಗಿದೆ ಎನ್ನಬಹುದು.