Tag: alcohol

  • ಮದ್ಯ ಕಳ್ಳತನದ ಆರೋಪಿ ಬಾವಿಗೆ ಬಿದ್ದು ಸಾವು

    ಮದ್ಯ ಕಳ್ಳತನದ ಆರೋಪಿ ಬಾವಿಗೆ ಬಿದ್ದು ಸಾವು

    – ಪೊಲೀಸರ ವಿರುದ್ಧ ಕೊಲೆ ಆರೋಪ

    ಬೆಂಗಳೂರು: ಬಾರ್‌ನಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಕೂರು ಹೊರವಲಯ ಹೊಸಕೋಟೆಯ ನಡುವತ್ತಿ ಗ್ರಾಮದಲ್ಲಿ ನಡೆದಿದೆ.

    ನಡುವತ್ತಿ ಗ್ರಾಮದ ಮುನಿಪಿಳ್ಳಪ್ಪ (52) ಬಾವಿಗೆ ಬಿದ್ದು ಸಾವನಪ್ಪಿರುವ ಆರೋಪಿ. ಮುನಿಪಿಳ್ಳಪ್ಪ ನಡುವತ್ತಿ ಗ್ರಾಮದ ಬಾರ್ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ. ಹೀಗಾಗಿ ಆರೋಪಿಯನ್ನು ಬಂಧಿಸಿದ್ದ ತಿರುಮಶೆಟ್ಟಿಹಳ್ಳಿ ಪೊಲೀಸರು ಸ್ಥಳ ಮಹಜರ್ ಮಾಡಲು ಶುಕ್ರವಾರ ಕರೆದೊಯ್ದಿದ್ದರು. ಇದನ್ನೂ ಓದಿ: ಏನೇ ಒತ್ತಡ ಬಂದ್ರೂ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ: ಬೊಮ್ಮಾಯಿ

    ಮುನಿಪಿಳ್ಳಪ್ಪ ಬಾರ್‍ನಲ್ಲಿ ಕದ್ದ ಮದ್ಯದವನ್ನು ಬಾವಿಯ ಬಳಿ ಬಚ್ಚಿಟ್ಟ ಹಿನ್ನೆಲೆ ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯವ್ಯಸನಿಗಳಿಗೆ ಬ್ಯಾಡ್ ನ್ಯೂಸ್.!

    ಆದರೆ ಆರೋಪಿಯ ಸಂಬಂಧಿಕರು ಮಾತ್ರ, ‘ಪೊಲೀಸರು ಮದ್ಯ ಕಳ್ಳತನ ಮಾಡಿದ್ದಿಯಾ ಎಂದು ಮುನಿಪಿಳ್ಳಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಹಿನ್ನೆಲೆ ಆತ ಸಾವನ್ನಪ್ಪಿದ್ದು, ಅದನ್ನು ಮುಚ್ಚಿಹಾಕಲು ಪೊಲೀಸರು ಮುನಿಪಿಳ್ಳಪ್ಪ ಬಾವಿಗೆ ಬಿದ್ದು ಸಾವನಪ್ಪಿದ್ದಾನೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ದಂಡ

  • ಲಾಕ್‍ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ಮದ್ಯ ಮಾರಾಟ

    ಲಾಕ್‍ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ಮದ್ಯ ಮಾರಾಟ

    – ವ್ಯಕ್ತಿ ಅರೆಸ್ಟ್, ಎಣ್ಣೆನೂ ಸೀಜ್

    ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ ಬದಿ ಎಣ್ಣೆ ಮಾರಾಟ ಜೋರಾಗಿ ನಡೆಯುತ್ತಿದೆ.

    ಹೌದು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಚಂದನ ವೈನ್ಸ್‍ನಲ್ಲಿ ಕೆಲಸ ಮಾಡ್ತಿದ್ದ ಕ್ಯಾಶಿಯರ್ ವೆಂಕಟೇಶ್ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾನೆ. ಅಲ್ಲದೆ ಅದನ್ನ ರಸ್ತೆ ಬದಿ ನಿಂತು ಡಬಲ್‍ಗಿಂತ ಹೆಚ್ಚಿನ ರೇಟಿಗೆ ಮಾರುತ್ತಿದ್ದನು. ವಿಷಯ ತಿಳಿದ ಕೂಡಲೇ ಹಲವರು ಡೈಲಿ ನೈಂಟಿ ಹಾಕೋಣ ಸಾಕು ಅಂತ ಖರೀದಿ ಕೂಡ ಮಾಡಿದ್ದಾರೆ.

    ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಉಲ್ಲಂಘಿಸಿ ಅಕ್ರಮ ಮದ್ಯ ಮಾರುತ್ತಿದ್ದ ವ್ಯಕ್ತಿ ಮೇಲೆ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಿ ಬಾರ್ ಕ್ಯಾಶಿಯರ್ ವೆಂಕಟೇಶ್‍ನನ್ನ ಬಂಧಿಸಿದ್ದಾರೆ.

    ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಮೂರು ಚೀಲದಷ್ಟು ಮದ್ಯವನ್ನು ಕೂಡ ಜಪ್ತಿ ಮಾಡಲಾಗಿದ್ದು, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಣ್ಣೆ ಸಿಕ್ಕವರು ಓ ಮೈ ಗಾಡ್, 15ರ ತನಕ ಹೇಗೋ ನೈಂಟಿ ಹಾಕೊಂಡ್ ತಳ್ಳಬಹುದು ಅಂತಿದ್ರೆ, ಸಿಗದವರು ಈ ಪೊಲೀಸ್ರಿಗೆ 10 ನಿಮಿಷ ಲೇಟಾಗಿ ಬರೋದಕ್ಕೆ ಏನಾಗಿತ್ತು ಅಂತ ಗೊಣಗುತ್ತಿದ್ದಾರೆ.

  • ಎಣ್ಣೆ ಸಿಗದೆ ಬಾವಿಗೆ ಹಾರಿದ ಮದ್ಯಪ್ರಿಯ – 4 ದಿನದ ಬಳಿಕ ಮೃತದೇಹ ಪತ್ತೆ

    ಎಣ್ಣೆ ಸಿಗದೆ ಬಾವಿಗೆ ಹಾರಿದ ಮದ್ಯಪ್ರಿಯ – 4 ದಿನದ ಬಳಿಕ ಮೃತದೇಹ ಪತ್ತೆ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ ಮದ್ಯ ಮಾರಾಟ ಕೂಡ ಸ್ಥಗಿತಗೊಂಡಿದೆ. ಪೊಲೀಸರು ಮದ್ಯದ ಅಂಗಡಿಗಳನ್ನ ಸೀಜ್ ಮಾಡಿದ್ದರಿಂದ ಕದ್ದುಮುಚ್ಚಿಯೂ ಮದ್ಯ ಕೊಳ್ಳಲು ಮದ್ಯ ಪ್ರಿಯರಿಗೆ ಸಾಧ್ಯವಾಗುತ್ತಿಲ್ಲ. ಕಳೆದೊಂದು ವಾರದಿಂದ ಮದ್ಯಕ್ಕಾಗಿ ಎಷ್ಟೇ ಹುಡುಕಾಡಿದರು ಎಣ್ಣೆ ಸಿಗದ ಕಾರಣ ವ್ಯಕ್ತಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

    ಮೃತನನ್ನ ಮೂಡಿಗೆರೆಯ ಯೋಗೀಶ್(40) ಎಂದು ಗುರುತಿಸಲಾಗಿದೆ. ಈತ ಮೂಡಿಗೆರೆಯ ಹೊಟೇಲ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದನು. ಕುಡಿತದ ಚಟಕ್ಕೆ ದಾಸನಾಗಿದ್ದ ಈತನಿಗೆ ಲಾಕ್‍ಡೌನ್ ಜಾರಿಯಾದ ಬಳಿಕ ಎಲ್ಲೂ ಎಣ್ಣೆ ಸಿಗ್ತಿರಲಿಲ್ಲ. ಮದ್ಯ ಇಲ್ಲದೆ ಇರಲು ಆಗುತ್ತಿಲ್ಲ ಎಂದು ತನ್ನ ಸ್ನೇಹಿತರ ಬಳಿ ಯೋಗೇಶ್ ಹೇಳಿಕೊಂಡಿದ್ದನು. ಕಳೆದ ನಾಲ್ಕು ದಿನಗಳ ಹಿಂದೆ ಎಲ್ಲೂ ಎಣ್ಣೆ ಸಿಗದ ಕಾರಣ ಮಾನಸಿಕ ಖಿನ್ನತೆಗೊಳಗಾಗಿದ್ದನು. ಈ ಕಾರಣಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಯೋಗೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಬಾವಿಯ ಸುತ್ತಮುತ್ತ ಓಡಾಡುವಾಗ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಇಂದು ಬಾವಿಯಲ್ಲಿ ಸ್ಥಳೀಯರು ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತನ ಕೈಯಲ್ಲಿದ್ದ ಬಳೆ ಹಾಗೂ ಶರ್ಟ್ ನೋಡಿ ಯೋಗೇಶ್ ಎಂದು ಅವನ ಸ್ನೇಹಿತರು ಪತ್ತೆ ಹಚ್ಚಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಎಲ್ಲಿಯೂ ಮದ್ಯ ಸಿಗದೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

    ಎಲ್ಲಿಯೂ ಮದ್ಯ ಸಿಗದೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

    ದಾವಣಗೆರೆ: ಲಾಕ್‍ಡೌನ್ ಆಗಿದ್ದೇ ಆಗಿದ್ದು, ಕುಡುಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಅದರಲ್ಲೂ ಎಣ್ಣೆ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗೆಯೇ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಎಣ್ಣೆ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ನಗರದ ಭರತ್ ಕಾಲೋನಿಯ ನಿವಾಸಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ರವಿಚಂದ್ರ, (43) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭಾರತ ಲಾಕ್‍ಡೌನ್ ಹಿನ್ನಲೆ ಬಾರ್‍ಗಳೆಲ್ಲ ಬಂದ್ ಆಗಿದ್ದು, ಕುಡುಕರಿಗೆ ಎಲ್ಲಿಲ್ಲದ ಕಷ್ಟವಾಗಿತ್ತು. ಕಳೆದ ಹತ್ತು ದಿನಗಳಿಂದ ಎಣ್ಣೆ ಇಲ್ಲದೆ ಪರದಾಡುತ್ತಿದ್ದ ರವಿಚಂದ್ರ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಮದ್ಯ ಸೇವನೆ ಮಾಡಿಯೇ ಮನೆಗೆ ಬರುತ್ತಿದ್ದ.

    ಒಂದು ದಿನ ಏನಾದ್ರು ಮದ್ಯ ಸಿಗದೇ ಇದ್ದರೆ ಹುಚ್ಚನಂತೆ ವರ್ತಿಸುತ್ತಿದ್ದ. ಹೀಗಾಗಿ ಲಾಕ್ ಡೌನ್ ಬಳಿಕ ಎಲ್ಲಾ ಕಡೆ ಎಣ್ಣೆಗಾಗಿ ಪರದಾಡಿದ್ದು, ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿದ್ದ. ಇದರಿಂದ ನೊಂದು ಇಂದು ಬೆಳಗ್ಗಿನ ಜಾವ ನಿರ್ಜನ ಪ್ರದೇಶಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ರವಿಚಂದ್ರಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 12 ವರ್ಷದ ಗಂಡು ಮಗ ಇದ್ದಾನೆ. ಈಗ ಕುಟುಂಬದ ಆಧಾರಸ್ತಂಭವಿಲ್ಲದೆ ಬೀದಿಗೆ ಬಿದ್ದಂತಾಗಿದೆ.

    ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಮದ್ಯವಿಲ್ಲದೆ ಕಂಗೆಟ್ಟು ವೈನ್ ಶಾಪ್‍ನಲ್ಲಿ ಕಳವು

    ಮದ್ಯವಿಲ್ಲದೆ ಕಂಗೆಟ್ಟು ವೈನ್ ಶಾಪ್‍ನಲ್ಲಿ ಕಳವು

    ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಮಧ್ಯೆ ಕುಡಿಯಲು ಸಿಗದೆ ಕೆಲ ಕುಡುಕರು ಪರದಾಡುತ್ತಿದ್ದು, ಕಳ್ಳತನದ ಮೊರೆ ಹೋಗುತ್ತಿದ್ದಾರೆ.

    ಮಂಗಳೂರಿನಲ್ಲಿ ಕೆಲ ಕುಡುಕರು ಮದ್ಯವಿಲ್ಲದೆ ಕಂಗೆಟ್ಟಿದ್ದರಿಂದ ಕಳ್ಳತನ ಮಾಡಿದ್ದಾರೆ. ನಗರದ ಹೊರವಲಯದ ದೇರಳಕಟ್ಟೆಯ ನಿತ್ಯಾನಂದನಗರದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಸ್ವಾಮ್ಯದ ಎಂಎಸ್ ಐಎಲ್ ಮದ್ಯದಂಗಡಿಯಲ್ಲಿ ಕಳವು ಮಾಡಿದ್ದಾರೆ. ಶಟರ್ ಮುರಿದು ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.

    ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 1.5 ಲಕ್ಷ ರೂ., ದುಬಾರಿ ಮದ್ಯ ಬಿಟ್ಟು ಕಡಿಮೆ ಬೆಲೆ ಬಿಯರ್, ಬ್ರ್ಯಾಂಡಿ ಕದ್ದೊಯ್ದ ಕಳ್ಳರು

    1.5 ಲಕ್ಷ ರೂ., ದುಬಾರಿ ಮದ್ಯ ಬಿಟ್ಟು ಕಡಿಮೆ ಬೆಲೆ ಬಿಯರ್, ಬ್ರ್ಯಾಂಡಿ ಕದ್ದೊಯ್ದ ಕಳ್ಳರು

    ಗದಗ: ಕೊರೊನಾ ವೈರಸ್ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಈ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡು ಕೆಲವರು ಮದ್ಯ ಕಳ್ಳತನಕ್ಕೆ ಮುಂದಾಗಿದ್ದಾರೆ.

    ಗದಗ ತಾಲೂಕಿನ ಕಳಸಾಪೂರ ಗ್ರಾಮದ ಹೊರವಲಯದ ನಾಗಾವಿ ರಸ್ತೆಯಲ್ಲಿರುವ ಎಂಎಸ್‍ಐಎಲ್ ಮದ್ಯದಂಗಡಿಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ವಿಚಿತ್ರ ಎಂದರೆ ಖದೀಮರು ತಮಗೆ ಇಷ್ಟವಾಗಿರುವ ಬಿಯರ್, ಬ್ರ್ಯಾಂಡಿ ಸೇರಿದಂತೆ ಇತರೆ ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ದುಬಾರಿ ಬೆಲೆಯ ಮದ್ಯ ಅಂಗಡಿಯಲ್ಲಿದ್ದರೂ ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕದ್ದೊಯ್ದಿದ್ದಾರೆ.

    ಅಷ್ಟೇ ಅಲ್ಲದೇ 1.5 ಲಕ್ಷ ರೂ. ನಗದು ಅಂಗಡಿಯ ಕೌಂಟರ್ ಡ್ರಾನಲ್ಲಿದ್ದರೂ ಅದ್ಯಾವುದನ್ನೂ ಕಳ್ಳರು ಮುಟ್ಟಿಲ್ಲ. ಬಹುಶಃ ಇಷ್ಟು ದಿನ ಎಣ್ಣೆ ಸಿಗದೇ ಕಂಗಾಲಾದ ಕುಡುಕರೇ ಈ ಕೃತ್ಯವೆಸೆಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಡಿವೈಎಸ್‍ಪಿ ಎಸ್.ಕೆ ಪ್ರಹ್ಲಾದ್, ಗ್ರಾಮೀಣ ಪಿಎಸ್‍ಐ ಮಲ್ಲಿಕಾರ್ಜುನ್ ಕುಲಕರ್ಣಿ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಸೈನಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಮೂಲಕ ಕಳ್ಳರಿಗೆ ಬಲೆಬೀಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾಕ್‍ಡೌನ್ ನಡುವೆ ಕದ್ದು ಮುಚ್ಚಿ ಮದ್ಯದಂಗಡಿ ಓಪನ್

    ಲಾಕ್‍ಡೌನ್ ನಡುವೆ ಕದ್ದು ಮುಚ್ಚಿ ಮದ್ಯದಂಗಡಿ ಓಪನ್

    ತುಮಕೂರು: ಇಡೀ ದೇಶವೇ ಲಾಕ್‍ಡೌನ್ ಆಗಿ 8 ದಿನಗಳು ಕಳೆಯುತ್ತಾ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಾರ್ ಮಾಲೀಕರು ರಾತ್ರಿ ವೇಳೆ ಬಾರ್‌ನ ಮೂಲಕ ಮದ್ಯ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಜಿಲ್ಲೆಯ ತಿಮ್ಮಣ್ಣ ಗ್ರಾಮದಲ್ಲಿ ಬಾರ್ ಮಾಲೀಕನ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾರ್ ಮುಂದೆ ಜಯಾಯಿಸಿದ ಗ್ರಾಮಸ್ಥರು ಬಾರ್ ಬಾಗಿಲಿಗೆ ಸೀಲ್ ಹಾಕಿದನ್ನ ವ್ಯಂಗ್ಯ ಮಾಡಿದ್ದಾರೆ. ರಾತ್ರಿ ವೇಳೆ ಸೀಲ್ ಓಪನ್ ಮಾಡಿ ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ವಿಷಯ ತಿಳಿದ ಗ್ರಾಮಸ್ಥರು ಸೀಲ್ ಮಾಡಿರುವ ಅಂಗಡಿಯ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

    ಸೀಲ್ ಹಾಕಿರುವ ರೀತಿ ನಾಟಕ ಮಾಡಿ ಅಧಿಕಾರಿಗಳು ಕೀ ಓಪನ್ ಮಾಡುವ ಜಾಗದಲ್ಲಿ ಸೀಲ್ ಹಾಕದೇ ಬಿಟ್ಟಿರೋದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿ ರಾತ್ರಿ ಬಾರ್ ಓಪನ್ ಮಾಡಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿರುವ ಹನುಮಾನ್ ಬಾರ್‌ನ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಅಬಕಾರಿ ಹಾಗೂ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಮತ್ತೊಮ್ಮೆ ಸೀಲ್ ಹಾಕಿದ್ದಾರೆ ಎನ್ನಲಾಗಿದೆ.

  • ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿ – ಮದ್ಯ ಸಿಗದಕ್ಕೆ 13 ಸಾವು

    ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿ – ಮದ್ಯ ಸಿಗದಕ್ಕೆ 13 ಸಾವು

    ಬೆಂಗಳೂರು: ಕುಡುಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿರೋದು, ಕೊರೊನಾ ವೈರಸ್ ಲಾಕ್‍ಡೌನ್ ವೇಳೆ ಉದ್ಭವಿಸಿರುವ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ದೇಶ ಲಾಕ್‍ಡೌನ್ ಆಗಿದೆ. ಹೀಗಾಗಿ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ಕುಡಿಯಲು ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಕಳೆದ ಆರು ದಿನಗಳಲ್ಲಿ ರಾಜ್ಯದ ಹಲವೆಡೆ ಒಟ್ಟು 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇಂದು ಮೂವರು ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದ ಎಂ.ಶಂಕರ (36) ಮದ್ಯೆ ಸಿಗದೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ 30 ವರ್ಷದ ಆನಂದ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

    ಉಡುಪಿ ಜಿಲ್ಲೆ ಒಂದರಲ್ಲೇ ಆರು ಮಂದಿ ಕುಡುಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಇಬ್ಬರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಹುಬ್ಬಳ್ಳಿ ಮತ್ತು ಬೀದರ್ ನಲ್ಲಿ ತಲಾ ಒಬ್ಬೊಬ್ಬರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಮುಳಬಾಗಿಲಿನ ಮುದಿಗೆರೆ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಈ ಮಧ್ಯೆ ಕುಡುಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಸಿಎಂ ಪಿಣರಯ್ ವಿಜಯನ್, ವೈದ್ಯರ ಚೀಟಿ ತಂದರೆ ಮದ್ಯ ವಿತರಣೆ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

  • ಕುಡುಕರ ಆತ್ಮಹತ್ಯೆಯಿಂದ ಎಚ್ಚೆತ್ತ ಸರ್ಕಾರ

    ಕುಡುಕರ ಆತ್ಮಹತ್ಯೆಯಿಂದ ಎಚ್ಚೆತ್ತ ಸರ್ಕಾರ

    -ಆನ್‍ಲೈನ್ ಮೂಲಕ ಮದ್ಯ ಮಾರಾಟಕ್ಕೆ ಚಿಂತನೆ

    ತಿರುವನಂತಪುರ: ಕುಡುಕರ ಆತ್ಮಹತ್ಯೆಯಿಂದ ಎಚ್ಚತ್ತಿರುವ ಕೇರಳ ಸರ್ಕಾರ ಆನ್‍ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಚಿಂತನೆ ನಡೆಸಿದೆ.

    ಮದ್ಯ ಸಿಗದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಆತ್ಮಹತ್ಯೆಗೆ ಯತ್ನಿಸಿದವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಕುಡಿತ ಚಟಕ್ಕೆ ಒಳಗಾದವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಅಬಕಾರಿ ಇಲಾಖೆಯಿಂದ ಚಿಕಿತ್ಸೆ ನೀಡಲಾಗುವವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಮದ್ಯದ ಸಂಗ್ರಹಣೆ ಇಲ್ಲದ ಕಾರಣ ಆನ್‍ಲೈನ್ ಮಾರಾಟದಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಕುಡುಕರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.

    ಕರ್ನಾಟಕದಲ್ಲಿಯೂ ಕುಡುಕರ ಅತ್ಮಹತ್ಯೆ:
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು, ಬೀದರ್, ಹುಬ್ಬಳ್ಳಿಯಲ್ಲಿ ಒಬ್ಬರು ಮದ್ಯ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರಿನಲ್ಲೊಬ್ಬ ಕತ್ತು ಕೊಯ್ದುಕೊಂಡು ಆಸ್ಪತ್ರೆ ಸೇರಿದ್ದಾನೆ. ಎಣ್ಣೆಗಾಗಿ ಒಟ್ಟು ನಾಲ್ಕು ಸಾವಿನ ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆಯಲ್ಲಿ ಎಣ್ಣೆ ಬೇಕು ಅಂತ ಊರೆಲ್ಲಾ ಅಲೆದು ಸುಸ್ತಾಗಿ, ಕೊನೆಗೆ ಅಂಗಡಿವೊಂದರ ಶೆಟರ್ ತೆಗೆಯುವ ಸಾಹಸಕ್ಕೆ ಕುಡುಕನೊಬ್ಬ ಮುಂದಾಗಿದ್ದನು. ಅದು ಸಾಧ್ಯವಾಗದೆ ಕೋಲಿನಿಂದ ಗೋಡೆಗೆ ಹೊಡೆದು ಆಕ್ರೋಶ ಹೊರಹಾಕಿದ್ದಾನೆ.

    ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ಮಂಜುನಾಥ್ ಎಂಬಾತ, ಆರಡಿ ದೂರ ನಿಂತು ಎಣ್ಣೆ ಖರೀದಿಸುತ್ತೇವೆ. ಬೆಳಗ್ಗೆ 9 ರಿಂದ 12ರವರೆಗೆ ಎಂಎಸ್‍ಐಎಲ್ ಓಪನ್ ಮಾಡಿ ಅಂತ ಸಿಎಂ ಹಾಗೂ ಅಬಕಾರಿ ಸಚಿವರಿಗೆ ವಾಟ್ಸಾಪ್ ಮೂಲಕ ಮನವಿ ಮಾಡಿದ್ದಾರೆ. ಮೈಸೂರಿನ ಧನಗಳ್ಳಿಯ ಡಿ.ಸಾಲುಂಡಿ ಗ್ರಾಮದ ಕೃಷಿ, ಕೂಲಿ ಕಾರ್ಮಿಕರು, ಮದ್ಯದಂಗಡಿ ತೆರೆಯುವಂತೆ ಪ್ರತಿಭಟನೆ ನಡೆಸಿದ್ದಾರೆ. ಎಣ್ಣೆ ಇಲ್ಲದೇ ನಾವು ಕೆಲಸ ಮಾಡಕಾಗಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

  • ಕುಡಿಯಲು ಮದ್ಯ ಸಿಗದೇ ನಾಲ್ವರು ಆತ್ಮಹತ್ಯೆ

    ಕುಡಿಯಲು ಮದ್ಯ ಸಿಗದೇ ನಾಲ್ವರು ಆತ್ಮಹತ್ಯೆ

    ಬೀದರ್/ಮಂಗಳೂರು: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಭಾರತ ಸಂಪೂರ್ಣ ಲಾಕ್‍ಡೌನ್ ಆಗಿದ್ದು, ಹೀಗಾಗಿ ಅಬಕಾರಿ ಇಲಾಖೆ ಕೂಡ ಸಾರಾಯಿ ಬಂದ್ ಮಾಡಿರುವುದರಿಂದ ಕುಡುಕರು ಪರದಾಡುತ್ತಿದ್ದಾರೆ. ಅಲ್ಲದೇ ಕುಡಿಯಲು ಮದ್ಯ ಸಿಗದೇ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕುಡಿಯಲು ಮದ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಾವಿಗೆ ಹಾರಿ ಹೋಟೆಲ್ ಕಾರ್ಮಿಕ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಭಾಲ್ಕಿ ಪಟ್ಟಣದ ಕೋಟೆಯ ಝರ ಬಾವಿಗೆ ಹಾರಿ 40 ವರ್ಷದ ಭಾಸ್ಕರ್ ನಸುಕಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂಲತ ಉಡುಪಿ ಜಿಲ್ಲೆಯ ಕುಂದಾಪೂರ ವ್ಯಕ್ತಿಯಾಗಿದ್ದು, ಸುಮಾರು ವರ್ಷಗಳಿಂದ ಬೀದರ್‌ನ ಭಾಲ್ಕಿಯಲ್ಲಿ ವಾಸವಾಗಿದ್ದನು.

    ಭಾಲ್ಕಿ ಪಟ್ಟಣದ ಉಡುಪಿ ಹೋಟೆಲ್‍ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ಸುದ್ದಿ ತಿಳಿದು ಭಾಲ್ಕಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.

    ಇತ್ತ ದಕ್ಷಿಣ ಕನ್ನಡದಲ್ಲಿ ಮದ್ಯ ಸಿಗಲಿಲ್ಲ ಅಂತ ಎಣ್ಣೆ ಪ್ರಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಬ ತಾಲೂಕಿನಲ್ಲಿ ಮದ್ಯ ದೊರೆಯದೇ ಬೇಸರದಿಂದ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

    ಇನ್ನೂ ಹುಬ್ಬಳ್ಳಿ ಜಿಲ್ಲೆಯ ಹೊಸೂರಿನ ಗಣೇಶ ಪಾರ್ಕಿನಲ್ಲಿ ಧಾರವಾಡ ಮೂಲದ ಉಮೇಶ್ ಹಡಪದ (46) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ ರಟಗಲ್ ಅವರ ನಿರ್ಮಾಣ ಹಂತದ ಮನೆಯ ವಾಚ್ ಮೆನ್ ಆಗಿ ಉಮೇಶ್ ಕೆಲಸ ಮಾಡುತ್ತಿದ್ದ. ಕಳೆದ ಐದು ದಿನದಿಂದ ಕುಡಿಯಲು ಮದ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ.

    ಕಳೆದ 15 ದಿನದ ಹಿಂದೆ ಉಮೇಶ್ ಕೆಲಸಕ್ಕೆ ಸೇರಿಕೊಂಡಿದ್ದನು ಎಂದು ತಿಳಿದು ಬಂದಿದೆ. ಮೂರು ವರ್ಷದಿಂದ ಕುಟುಂಬ ವರ್ಗದವರಿಂದ ಉಮೇಶ್ ದೂರ ಉಳಿದಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.