Tag: alcohol

  • ಎಣ್ಣೆ ಪ್ರಿಯರಿಗೆ ಶಾಕ್- ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ

    ಎಣ್ಣೆ ಪ್ರಿಯರಿಗೆ ಶಾಕ್- ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ

    ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಸರ್ಕಾರ ಇಂದು ಬಿಗ್ ಶಾಕ್ ನೀಡಿದೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಒಂದು ಕಡೆ ಕೋವಿಡ್ ನಿಯಂತ್ರಣ ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಎರಡನ್ನೂ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಶೇ.11ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಈಗಾಗಲೇ ಶೇ.6 ರಷ್ಟು ಅಬಕಾರಿ ಸುಂಕ ಹೆಚ್ಚಳದ ಬಿಸಿ ಅನುಭವಿಸಿದ್ದ ಮದ್ಯಪ್ರಿಯರಿಗೆ ಈಗ ಮತ್ತೆ ಕೊರೊನಾ ಶಾಕ್ ನೀಡಿದೆ.

    ರಾಜ್ಯದಲ್ಲಿ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ತಿಳಿಸಿದ ಸಿಎಂ, ಇನ್ನೆರಡು ದಿನಗಳಲ್ಲಿ ಹೊಸ ಆದೇಶ ಜಾರಿಗೊಳಿಸುವುದಾಗಿ ಮಾಹಿತಿ ನೀಡಿದರು. ಕುಡಿಯುವವರು ಇರುವಾಗ ಏನು ಸಿದ್ಧತೆ ಮಾಡಬೇಕು ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಎಸ್‍ವೈ ತಿರುಗೇಟು ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಮದ್ಯ ಎಷ್ಟು ಮುಖ್ಯ? ಕರ್ನಾಟಕದ ಆದಾಯದಲ್ಲಿ ಎಣ್ಣೆ ಪಾಲು ಎಷ್ಟಿದೆ? ಈಗ ಎಷ್ಟು ಏರಿಕೆಯಾಗಿದೆ?

    ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಲಾಕ್‍ಡೌನ್ ನಿಂದಾಗಿ ಸಭೆ-ಸಮಾರಂಭ, ಮದುವೆ ನಡೆಸದಿರುವುದರಿಂದ ಹೂವು ಬೆಳೆದವರು ನಷ್ಟ ಅನುಭವಿಸಿದ್ದಾರೆ. 11,687 ಹೆಕ್ಟೆರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟ ಆಗದೆ ರೈತರಿಗೆ ನಷ್ಟವಾಗಿದೆ. ಹಾಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದರು.

    ಇತ್ತ ಒಂದು ತಿಂಗಳಿನಿಂದ ಕೆಲಸವಿಲ್ಲದೆ ಕುಳಿತಿರುವ ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರು ಹಾಗೂ ಅಗಸರಿಗೆ ತಲಾ 5 ಸಾವಿರ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಅಂದಾಜು 60,000 ಅಗಸರು, 2,30,000 ಕ್ಷೌರಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಒಟ್ಟು 7,75000 ಜನ ರಾಜ್ಯದಲ್ಲಿ ಇದ್ದಾರೆ.  ಇದನ್ನೂ ಓದಿ: ರಾಜ್ಯದಲ್ಲಿ ಸೋಮವಾರ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

  • ಇಂದಿನಿಂದ ಎಣ್ಣೆ ಮತ್ತಷ್ಟು ದುಬಾರಿ?

    ಇಂದಿನಿಂದ ಎಣ್ಣೆ ಮತ್ತಷ್ಟು ದುಬಾರಿ?

    ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಇಂದು ಬಿಗ್ ಶಾಕ್ ಸುದ್ದಿಯೊಂದು ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಶೇ.6 ರಷ್ಟು ಅಬಕಾರಿ ಸುಂಕ ಹೆಚ್ಚಳದ ಬಿಸಿ ಅನುಭವಿಸಿದ್ದ ಮದ್ಯಪ್ರಿಯರಿಗೆ ಈಗ ಕೊರೊನಾ ಶಾಕ್ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

    ಹೌದು. ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆಯೆಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅಬಕಾರಿ ಸುಂಕದ ಜೊತೆಗೆ ಮದ್ಯದ ಮೇಲಿನ ತೆರಿಗೆಯನ್ನೂ ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ಇಂದು ಸಂಜೆಯೊಳಗಾಗಿ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಈಗಾಗಲೇ ದೆಹಲಿ ಹಾಗೂ ಆಂಧ್ರದಲ್ಲಿ ಮದ್ಯದ ಮೇಲೆ ಕೊರೊನಾ ತೆರಿಗೆ ಹಾಕಲಾಗಿದೆ. ಈ ರಾಜ್ಯಗಳ ಹಾದಿಯಲ್ಲೇ ನಮ್ಮ ರಾಜ್ಯದಲ್ಲೂ ತೆರಿಗೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.

    ದೆಹಲಿಯಲ್ಲಿ ಮಧ್ಯದ ಮೇಲೆ ಶೇ.70ರಷ್ಟು ತೆರಿಗೆ ವಿಧಿಸಲಾಗಿದೆ. ಅದೇ ರೀತಿ ಆಂಧ್ರದಲ್ಲಿ ಶೇ.25 ರಷ್ಟು ತೆರಿಗೆ ವಿಧಿಸಲಾಗಿದೆ. ಇದೇ ರೀತಿ ರಾಜ್ಯ ಸರ್ಕಾರ ಕೂಡ ಅಂದಾಜು ಶೇ.17 ರಷ್ಟು ತೆರಿಗೆ ಹೆಚ್ಚಳ ಮಾಡಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸೋಮವಾರ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

    ಹೊಸ ದರದ ಲೇಬಲ್ ಗಳಿರುವ ಮದ್ಯದ ಸ್ಟಾಕ್ ಮುಂದಿನ ವಾರದಿಂದ ಸಪ್ಲೈ ಆಗಲಿವೆ. ಬಹಳಷ್ಟು ಮದ್ಯದ ಅಂಗಡಿಗಳು ಎಣ್ಣೆ ಮೇಲೆ ಶೇ. 6 ರಷ್ಟು ಅಬಕಾರಿ ಸುಂಕದ ಆಧಾರದಲ್ಲಿ ಈಗಾಗಲೇ ದರ ಹೆಚ್ಚಿಸಿವೆ. ಆ ಮೂಲಕ ಪ್ರತಿ ಬಾಟಲಿಗಳ ಮೇಲೂ ನಿರ್ದಿಷ್ಟ ಸ್ಲ್ಯಾಬ್ ಆಧಾರದಲ್ಲಿ ದರ ಹೆಚ್ಚಳವಾಗಿದೆ. ಲೇಬಲ್ ಅಂಟಿಸದೇ, ಹಳೆಯ ಎಂಆರ್ ಪಿ ದರದ ಮೇಲೆ ಸುಂಕ ಲೆಕ್ಕ ಹಾಕಿ ದರ ಹೆಚ್ಚಳ ಮಾಡಲಾಗಿದೆ.

    ಸದ್ಯ ಹಳೆಯ ಸ್ಟಾಕ್ ಗಳಿರುವ ಹಿನ್ನೆಲೆಯಲ್ಲಿ ಹಳೆಯ ಲೇಬಲ್ ಇದೆ. ಹಾಗಾಗಿ ಈ ಹಳೆ ಎಂಆರ್ ಪಿ ದರದ ಮೇಲೆ ಹೊಸ ಸುಂಕ ಲೆಕ್ಕ ಹಾಕಿ ಮದ್ಯ ಮಾರಾಟ ನಡೆಯುತ್ತಿದೆ. ಆದರೆ ಹಲವು ಮದ್ಯದಂಗಡಿಗಳು ಹಳೆಯ ಎಂಆರ್ ಪಿ ದರದಲ್ಲೇ ಮದ್ಯ ಮಾರಾಟ ಮಾಡುತ್ತಿವೆ. ಇದನ್ನೂ ಓದಿ: ರಾಜ್ಯಕ್ಕೆ ಮದ್ಯ ಎಷ್ಟು ಮುಖ್ಯ? ಕರ್ನಾಟಕದ ಆದಾಯದಲ್ಲಿ ಎಣ್ಣೆ ಪಾಲು ಎಷ್ಟಿದೆ? ಈಗ ಎಷ್ಟು ಏರಿಕೆಯಾಗಿದೆ?

    ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಹೊಸ ಲೇಬಲ್, ಹೊಸ ಎಂಆರ್ ಪಿ ದರ ನಿಗದಿಯಾಗಲಿದ್ದು, ಮದ್ಯದ ಅಂಗಡಿಗಳಿಗೆ ಹೊಸ ಸ್ಟಾಕ್ ಗಳು ಪೂರೈಕೆಯಾಗಲಿದೆ. ಮುಂದಿನ ವಾರದಿಂದ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಕೊರೊನಾ ತೆರಿಗೆ ಆಧರಿಸಿ ಪರಿಷ್ಕೃತ ದರದೊಂದಿಗೆ ಹೊಸ ಸ್ಟಾಕ್ ಮಾರಾಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

  • ಕೋಲು ಹಿಡ್ಕೊಂಡೇ ಮದ್ಯದಂಗಡಿಗೆ ಲಗ್ಗೆಯಿಟ್ಟ ಅಜ್ಜಿ

    ಕೋಲು ಹಿಡ್ಕೊಂಡೇ ಮದ್ಯದಂಗಡಿಗೆ ಲಗ್ಗೆಯಿಟ್ಟ ಅಜ್ಜಿ

    ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ಬಳಿಕ ಮದ್ಯದಂಗಡಿ ತೆರವು 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಜನ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಹುಬ್ಬಳ್ಳಿಯಲ್ಲಿ ಕೂಡ ಅಜ್ಜಿಯೊಬ್ಬರು ದೊಣ್ಣೆ ಹಿಡಿದುಕೊಂಡೇ ಬಂದು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.

    ಹೌದು ಹಳೆ ಹುಬ್ಬಳ್ಳಿಯ ಮದ್ಯದಂಗಡಿಯಲ್ಲಿ ಅಜ್ಜಿ ಸಾರ್ವಜನಿಕರ ಕುತೂಹಲಕ್ಕೆ ಕಾರಣರಾದರು. ಮದ್ಯ ಖರೀದಿ ಮಾಡಲು ಬಂದಿದ್ದ ಅಜ್ಜಿಯನ್ನು ನೋಡಿ ಮದ್ಯಪ್ರಿಯರು ಅಚ್ಚರಿಗೊಂಡಿದ್ದಾರೆ.

    ಕಳೆದ 41 ದಿನಗಳಿಂದ ಅಂದರೆ ಲಾಕ್ ಡಾನ್ ಆದಾಗಿನಿಂದ ಮದ್ಯ ಸಿಗದೇ ಕಂಗಾಲಾಗಿದ್ದ ಅಜ್ಜಿ ಇಂದು ಸ್ವತಃ ತಾನೇ ಮದ್ಯ ಖರೀದಿಗೆ ಬಂದಿದ್ದಾರೆ. ತನ್ನ ಬಳಿ ಇದ್ದ ಚೀಲದಲ್ಲಿದ್ದ ಹಣವನ್ನು ಹುಡುಕಾಡಿ ತೆಗೆದು ಮದ್ಯವನ್ನು ತೆಗೆದುಕೊಂಡು ವಾಪಸ್ ಹೋಗಿದ್ದಾರೆ. ಕೋಲು ಹಿಡಿದು ಕುಂಟುತ್ತಾ ಬಂದ ಅಜ್ಜಿಗೆ ವ್ಯಕ್ತಿಯೊಬ್ಬರು ಸಾಥ್ ನೀಡಿದ್ದಾರೆ.

  • ‘ನೀವೇ ನಮ್ಮ ದೇಶದ ಆರ್ಥಿಕತೆ’- ಎಣ್ಣೆಗೆ ಕ್ಯೂ ನಿಂತವ್ರ ಮೇಲೆ ಹೂಮಳೆ

    ‘ನೀವೇ ನಮ್ಮ ದೇಶದ ಆರ್ಥಿಕತೆ’- ಎಣ್ಣೆಗೆ ಕ್ಯೂ ನಿಂತವ್ರ ಮೇಲೆ ಹೂಮಳೆ

    – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಅಥವಾ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಈ ಲಾಕ್ ಡೌನ್ ಅನ್ನು ಸ್ವಲ್ಪ ಮಟ್ಟಿನಲ್ಲಿ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಆರಂಭಿಸಲಾಗಿದೆ. ಹೀಗಾಗಿ ಜನ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ. ಅಂತೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಕ್ಯೂ ನಿಂತ ಮದ್ಯಪ್ರಿಯರ ಮೇಲೆ ವ್ಯಕ್ತಿಯೊಬ್ಬ ಹೂಮಳೆ ಸುರಿಸಿದ್ದಾರೆ.

    ಹೌದು. ಮದ್ಯದಂಗಡಿ ನಿನ್ನೆ ಆರಂಭವಾಗಿದ್ದು, ಇಂದು ಕೂಡ ಜನ ಎಣ್ಣೆ ಖರೀದಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮದ್ಯಕ್ಕಾಗಿ ಚಂದರ್ ನಗರ್ ಪ್ರದೇಶದಲ್ಲಿ ಜನ ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹೂ ತುಂಬಿಸಿಕೊಂಡು ಬಂದು ಅದನ್ನು ಕ್ಯೂ ನಿಂತವರ ಮೇಲೆ ಎಸೆದಿದ್ದಾರೆ. ಇದನ್ನು ಅಲ್ಲೇ ಇದ್ದ ಸ್ಥಳೀಯರು ವಿಡಿಯೋ ಮಾಡಿದ್ದಾರೆ.

    ”ನೀವು ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸರಿದೂಗಿಸುವವರಾಗಿದ್ದೀರಿ… ನೀವಿಲ್ಲಂದರೆ ಸರ್ಕಾರಕ್ಕೆ ಹಣ ಬರಲ್ಲ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ” ಎಂದು ಹೇಳಿದ್ದಾರೆ. ಹೂ ಹಾಕುವಾಗ ವ್ಯಕ್ತಿ ಮಾಸ್ಕ್ ಧರಿಸಿದ್ದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದನ್ನು ವಿಡಿಯೋದಲ್ಲಿ ಗಮನಿಸಬಹುದು.

    ಇತ್ತ ಸೋಮವಾರ ವಸಂತ್ ವಿಹಾರ್ ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ವೈನ್ ಹಾಗೂ ಬಾರ್ ಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿದ್ದಕ್ಕೆ ಮ್ಯಾನೇಜರ್ ಗಳಿಗೆ ಈ ನೋಟಿಸ್ ನೀಡಿದ್ದಾರೆ.

    ದೇಶಾದ್ಯಂತ ಸೋಮವಾರ ವೈನ್ ಶಾಪ್ ಗಳು ಬಾಗಿಲು ತೆರೆದಿದ್ದು, ಖರೀದಿ ಮಾಡಲು ಜನ ಮುಗಿ ಬಿದ್ದ ಹಿನ್ನೆಲೆಯಲ್ಲಿ ಮತ್ತೆ ಸರ್ಕಾರ ಬಂದ್ ಮಾಡಿಸದ ಪ್ರಸಂಗವೂ ನಡೆದಿತ್ತು.

  • ಕುಡಿಯಲು ಹಣ ಕೊಡದ್ದಕ್ಕೆ ಗರ್ಭಿಣಿ ಪತ್ನಿ ತಲೆಗೆ ಗುಂಡು ಹೊಡೆದ- ಭಯದಿಂದ ಪೊದೆಯಲ್ಲಿ ಅವಿತ ಮಗ

    ಕುಡಿಯಲು ಹಣ ಕೊಡದ್ದಕ್ಕೆ ಗರ್ಭಿಣಿ ಪತ್ನಿ ತಲೆಗೆ ಗುಂಡು ಹೊಡೆದ- ಭಯದಿಂದ ಪೊದೆಯಲ್ಲಿ ಅವಿತ ಮಗ

    – ಪತ್ನಿ ಕೊಂದು ಆರೋಪಿ ಸ್ಥಳದಿಂದ ಎಸ್ಕೇಪ್
    – 4 ಗಂಟೆಯ ನಂತ್ರ ಪೊದೆಯೊಳಗೆ ಮಗ ಪತ್ತೆ

    ಲಕ್ನೋ: ವ್ಯಕ್ತಿಯೊಬ್ಬ ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ್ದರಿಂದ ತನ್ನ ಗರ್ಭಿಣಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸರ್ಪಥಾನ್ ಪ್ರದೇಶದ ಭಟೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೇಹಾ (25) ಮೃತ ಗರ್ಭಿಣಿ. ಆರೋಪಿಯನ್ನು ದೀಪಕ್ ಸಿಂಗ್ ಎಂದು ಗುರುತಿಸಲಾಗಿದೆ. ದೀಪಕ್ ಪತ್ನಿಯನ್ನು ತನ್ನ 4 ವರ್ಷದ ಮಗನ ಮುಂದೆ ಕೊಂದ ನಂತರ ಸ್ಥಳದಿಂದ ಪರಾರಿಯಾಗಿದ್ದನು. ಆದರೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಮಹಾಮಾರಿ ಕೊರೊನಾವನ್ನು ತಡೆಯಲು ಕೇಂದ್ರ ಸರ್ಕಾರ ಇಡೀ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಆದರೆ 42 ದಿನಗಳ ನಂತರ ಮೇ 1 ರಂದು ಸರ್ಕಾರ ಕೆಲವು ನಿರ್ಬಂಧಗಳೊಂದಿಗೆ ರೆಡ್, ಗ್ರೀನ್ ಮತ್ತು ಆರೆಂಜ್ ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಹೀಗಾಗಿ ಆರೋಪಿ ದೀಪಕ್ ತನ್ನ ಪತ್ನಿ ನೇಹಾಳನ್ನು ಮದ್ಯ ಖರೀದಿಸಲು ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಪತ್ನಿ ಹಣ ಕೊಡಲು ನಿರಾಕರಿಸಿದ್ದಾಳೆ.

    ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಆರೋಪಿ ದೀಪಕ್ ಪಿಸ್ತೂಲಿನಿಂದ ಪತ್ನಿಗೆ ಮಗನ ಮುಂದೆಯೇ ಶೂಟ್ ಮಾಡಿದ್ದಾನೆ. ಆರೋಪಿ ಪತ್ನಿಯ ತಲೆಗೆ ಗುಂಡು ಹೊಡೆದಿದ್ದಾನೆ. ಈ ಘಟನೆಯಿಂದ ಹೆದರಿದ ಆರೋಪಿ ಮಗ ಮನೆಯಿಂದ ಓಡಿಹೋಗಿ ಪೊದೆಗಳಲ್ಲಿ ಅಡಗಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ನೇಹಾ ಮೃತಪಟ್ಟಿದ್ದಳು.

    ಮಾಹಿತಿ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ನೇಹಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಆರೋಪಿಯ ಮಗನನ್ನು ನಾಲ್ಕು ಗಂಟೆಗಳ ನಂತರ ಪೊದೆಯಲ್ಲಿ ಪತ್ತೆ ಮಾಡಿದ್ದಾರೆ. ಆಗ ಬಾಲಕ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ. ಇತ್ತ ಪತ್ನಿಗೆ ಗುಂಡು ಹೊಡೆದ ನಂತರ ಆರೋಪಿ ಸಿಂಗ್ ಪರಾರಿಯಾಗಿದ್ದನು. ನಂತರ ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿ ಬಂಧಿಸಿದ್ದಾರೆ.

    ನೇಹಾ ನಾಲ್ಕು ವರ್ಷಗಳ ಹಿಂದೆ ದೀಪಕ್ ಜೊತೆಗೆ ಮದುವೆಯಾಗಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಲಾಕ್‍ಡೌನ್ ಆಗುವ ಮೊದಲು ನೇಹಾ ತನ್ನ ಪತಿಯೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಳು. ಸದ್ಯಕ್ಕೆ ಮೃತಳ ಸಹೋದರನ ನೀಡಿದ ದೂರಿನ ಆಧಾರದ ಮೇರೆಗೆ ದೀಪಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

     

  • ‘ಮದ್ಯ’ವಿಲ್ಲದೆ ‘ಮಧ್ಯ’ರಾತ್ರಿ ಎದ್ದು ಕೂರ್ತಿದ್ದೆ: ಎಣ್ಣೆಪ್ರಿಯನ ಮನದಾಳದ ಮಾತು

    ‘ಮದ್ಯ’ವಿಲ್ಲದೆ ‘ಮಧ್ಯ’ರಾತ್ರಿ ಎದ್ದು ಕೂರ್ತಿದ್ದೆ: ಎಣ್ಣೆಪ್ರಿಯನ ಮನದಾಳದ ಮಾತು

    – ಮೊದಲ ಗ್ರಾಹಕನಿಗೆ ವೈನ್‍ಶಾಪ್‍ನಲ್ಲಿ ಸನ್ಮಾನ

    ಬೆಳಗಾವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಕರ್ನಾಟದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಣ್ಣೆ ಪ್ರಿಯರು ಫುಲ್ ಖುಷಿಯಾಗಿದ್ದಾರೆ.

    ಈ ಸಂಬಂಧ ವ್ಯಕ್ತಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಾರ್ ಓಪನ್ ಮಾಡಿರೋದು ತುಂಬಾ ಖುಷಿಯಾಗುತ್ತಿದೆ. ನಿನ್ನೆ ಟಿವಿಯಲ್ಲಿ ಮೇ 4ರಂದು ಮದ್ಯದಂಗಡಿಗಳು ಓಪನ್ ಅಂದಾಗ ತುಂಬಾನೇ ಖುಷಿಯಾಯ್ತು. ಹೀಗಾಗಿ ಇಂದು ಬೆಳಗ್ಗೆನೇ ಬಂದು ಟೋಕನ್ ತೆಗೆದುಕೊಂಡು ಕ್ಯೂನಲ್ಲಿ ನಿಂತಿದ್ದೇನೆ ಎಂದರು.

    ಕುಡಿಯದಿದ್ದರೆ ಕೈ, ಕಾಲು ನಡುಗುತ್ತದೆ. ಎಣ್ಣೆ ಇಲ್ಲ ಅಂದ್ರೆ ತುಂಬಾ ಸುಸ್ತಾಗುತ್ತದೆ. ದಿನಾ ಕುಡಿಯುವ ನಮಗೆ ಎಣ್ಣೆ ಬೇಕೇ ಬೇಕು. ಕುಡಿಯದಿದ್ದರೆ ನಿದ್ದೆ ಬರಲ್ಲ. ಇಂತಹ ಸಮಸ್ಯೆಗಳು ಆರಂಭವಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

    ಈ ಒಂದು ತಿಂಗಳಲ್ಲಿ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದವರ ಕೈಯಿಂದ 400-600 ರೂ. ಕೊಟ್ಟು ಖರೀದಿಸಿ ಕುಡಿಯುತ್ತಿದ್ದೆ. ಇಲ್ಲಾಂದ್ರೆ ಹಂಗೆ ಮಲಗುತ್ತಿದ್ದೆ. ಹೀಗೆ ಮಲಗಿದ್ರೆ ರಾತ್ರಿ ಪೂರ್ತಿ ನಿದ್ದೆ ಬರುತ್ತಿರಲಿಲ್ಲ. ಹೀಗಾಗಿ ಮುಂಜಾನೆ 4 ಗಂಟೆಗೆ ಎಚ್ಚರ ಆಗುತ್ತಿತ್ತು. ಆಗ ಮನೆಯಿಂದ ಹೊರಗಡೆ ಬಂದು ವಾಕಿಂಗ್ ಮಾಡಿ, ತಿರುಗಾಡಿ ಮತ್ತೆ ಮನೆಗೆ ಹೋಗುತ್ತಿದ್ದೆ ಎಂದರು.

    ಅಲ್ಲದೆ ಈಗ ಮದ್ಯ ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ಮತ್ತೆ ಟೋಕನ್ ತೆಗೆದುಕೊಳ್ಳುತ್ತೇನೆ. ಯಾಕಂದ್ರೆ ಮತ್ತೆ ಬಂದ್ ಮಾಡಿದ್ರೆ ಏನು ಮಾಡೋದು. ಅದಿಕೆ ಮನೆಗೋಗಿ ಮತ್ತೆ ಬಂದು ಮದ್ಯ ಖರೀದಿ ಮಾಡುವುದಾಗಿ ತಿಳಿಸಿದರು.

    ವೈನ್ ಶಾಪ್ ನವರಿಂದ ಸನ್ಮಾನ:
    ಮೊದಲು ಬಂದ ಗ್ರಾಹಕನಿಗೆ ವೈನ್ ಶಾಪ್ ಮಾಲೀಕರು ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಇದಕ್ಕಾಗಿ ನನಗೆ ತುಂಬಾ ಖುಷಿ ಅನಿಸ್ತಿದೆ ಎಂದು ಇದೇ ವೇಳೆ ಮದ್ಯ ಪ್ರಿಯ ಸಂತಸ ವ್ಯಕ್ತಪಡಿಸಿದರು.

    ಈ ಬಗ್ಗೆ ವೈನ್ ಶಾಪ್ ನವರು ಮಾತನಾಡಿ, ನಮ್ಮ ಅಂಗಡಿ ಇಂದು ಓಪನ್ ಆಗಿರುವುದಕ್ಕೆ ಖುಷಿಯಿಂದ ನಾವು ಸನ್ಮಾನ ಮಾಡಿದ್ದೇವೆ. ಅಬಕಾರಿ ಇಲಾಖೆ ಅಂಗಡಿ ಓಪನ್ ಮಾಡಲು ಅವಕಾಶ ನೀಡಿದೆ. ಹೀಗಾಗಿ ನಾನು ಇಲಾಖೆಗೆ ಧನ್ಯವಾದ ತಿಳಿಸಲು ಬಯಸುವುದಾಗಿ ಹೇಳಿದರು.

  • ಬೆಳಗಾವಿಯ 10 ಪ್ರದೇಶಗಳಲ್ಲಿ ಸಿಗಲ್ಲ ಮದ್ಯ

    ಬೆಳಗಾವಿಯ 10 ಪ್ರದೇಶಗಳಲ್ಲಿ ಸಿಗಲ್ಲ ಮದ್ಯ

    ಬೆಳಗಾವಿ: ಜಿಲ್ಲೆಯ 10 ಪ್ರದೇಶಗಳನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲಾಗಿದ್ದು, ಈ ಕಂಟೈನ್ಮೆಂಟ್ ಝೋನ್ ಗಳಲ್ಲಿ ಇಂದು ಕೂಡ ಮದ್ಯ ಸಿಗಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೆಳಗಾವಿ ನಗರದ ಕ್ಯಾಂಪ್ ಪ್ರದೇಶ, ಅಮನ್ ನಗರ, ಆಜಾದ್ ಗಲ್ಲಿ, ಸಂಗಮೇಶ್ವರ ನಗರ, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಬೆಳಗುಂದಿ, ಪೀರನವಾಡಿ, ಯಳ್ಳೂರು, ಹುಕ್ಕೇರಿ ತಾಲೂಕಿನ ಸಂಕೇಶ್ವರ, ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಎಣ್ಣೆ ಸಿಗಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಎಣ್ಣೆ ಪ್ರಿಯರು ನಿರಾಶರಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಈ 10 ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದ ಕಡೆ ಎಣ್ಣೆ ಸಿಗುತ್ತಿದೆ. ಒಂದು ವೇಳೆ ಈ 10 ಕಂಟೈನ್‍ಮೆಂಟ್ ಝೋನ್ ನಲ್ಲಿ ಎಣ್ಣೆ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುತ್ತದೆ. ಆರೆಂಜ್ ಝೋನ್ ಬೆಳಗಾವಿಯಲ್ಲಿ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಮಾತ್ರವಲ್ಲದೆ ಸೀಲ್‍ಡೌನ್ ಪ್ರದೇಶಗಳಲ್ಲಿ ಯಾವುದೇ ರೀತಿಯ ಆರ್ಥಿಕ ಚಟುವಟಿಕೆಗಳು ಇರಲ್ಲ.

    ಬೆಳಗಾವಿ ತಾಲೂಕು, ಹುಕ್ಕೇರಿ ತಾಲೂಕಿನ ಸಂಕೇಶ್ವರ, ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಮೂರು ತಾಲೂಕು ಹೊರತುಪಡಿಸಿ ಉಳಿದೆಡೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.

    ಮಾಸ್ಕ್ ಧರಿಸದಿದ್ದರೆ, ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುತ್ತಿದೆ. ಕಾಂಪ್ಲೆಕ್ಸ್ ಗಳಲ್ಲಿರುವ ಮಳಿಗೆಗಳು, ಮಾಲ್‍ಗಳನ್ನು ತೆರೆಯಲು ಅವಕಾಶವಿಲ್ಲ. ಕೈಗಾರಿಕೋದ್ಯಮಗಳಲ್ಲಿ ಶೇ.50ರಷ್ಟು ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಕಾರ್ಮಿಕರಿಗೆ ಯಾವುದೇ ರೀತಿಯ ಪಾಸ್‍ಗಳಿಗೆ ಅಗತ್ಯವಿಲ್ಲ. ಕಾರ್ಖಾನೆಯವರು ಸೆಲ್ಫ್ ಡಿಕ್ಲೆರೇಷನ್ ಕೊಟ್ಟು ಕಾರ್ಖಾನೆ ತೆರೆಯಲು ಅವಕಾಶ ನೀಡಲಾಗಿದೆ.

    ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕ ಕೆಲಸಕ್ಕೆ ಹಾಗೂ ಮದುವೆ ಸಮಾರಂಭದಲ್ಲಿ 50 ಜನರಿಗೆ ಮಾತ್ರ ಅವಕಾಶ ನಿಡಲಾಗಿದೆ.

  • ರಾಜ್ಯದ ಮೂರು ಜಿಲ್ಲೆ ಹೊರತುಪಡಿಸಿ ಎಲ್ಲ ಕಡೆ ಎಣ್ಣೆ ಸಿಗುತ್ತೆ- ಆದ್ರೆ ಷರತ್ತು ಅನ್ವಯ

    ರಾಜ್ಯದ ಮೂರು ಜಿಲ್ಲೆ ಹೊರತುಪಡಿಸಿ ಎಲ್ಲ ಕಡೆ ಎಣ್ಣೆ ಸಿಗುತ್ತೆ- ಆದ್ರೆ ಷರತ್ತು ಅನ್ವಯ

    ನವದೆಹಲಿ: ಹಸಿರು, ಕಿತ್ತಳೆ ವಲಯದ ಜಿಲ್ಲೆಯಲ್ಲಿರುವ ಮದ್ಯಪ್ರಿಯರಿಗೆ ಗುಡ್‍ನ್ಯೂಸ್. ಕೊರೊನಾ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಮೇ 4 ರಿಂದ ಎಣ್ಣೆ ಸಿಗಲಿದೆ.

    ಕೇಂದ್ರ ಸರ್ಕಾರ ಮತ್ತೆ ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದು, ಮೇ 17ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಈ ಅವಧಿಯಲ್ಲಿ ಕಿತ್ತಾಳೆ, ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯ ಮಾರಾಟದ ಜೊತೆ ಪಾನ್ ಅಂಗಡಿ ತೆರೆಯಲು ಅನುಮತಿ ನೀಡಿದೆ.

    ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದರೂ ಷರತ್ತು ವಿಧಿಸಿದೆ. ಅಂಗಡಿಯಲ್ಲಿ ಕುಡಿಯುವಂತಿಲ್ಲ. ಪಾರ್ಸೆಲ್ ಗೆ ಮಾತ್ರ ಅನುಮತಿ. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಬಾರಿ 5 ಜನ ಅಂಗಡಿಯ ಮುಂದೆ ನಿಲ್ಲಬಹುದು. ವ್ಯಕ್ತಿಗಳು ಕನಿಷ್ಟ 6 ಅಡಿ ಅಂತರದಲ್ಲಿ ನಿಲ್ಲಬೇಕು ಎಂದು ಷರತ್ತು ವಿಧಿಸಿದೆ. ಹಸಿರು ವಲಯಲ್ಲಿ ಮಾತ್ರ ಅನುಮತಿ ನೀಡಿದ್ದು, ಕೆಂಪು ವಲಯ ಮತ್ತು ಕಿತ್ತಳೆ ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ. ಕರ್ನಾಟಕದ ಕೆಂಪು ವಲಯದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರಿನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿಲ್ಲ.

    ಕೇಂದ್ರ ಸರ್ಕಾರ ಕೊರೊನಾ ಪೀಡಿತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಇಂದು ಪರಿಷ್ಕರಿಸಿದೆ. ಕಿತ್ತಳೆ ವಲಯದಲ್ಲಿದ್ದ ಜಿಲ್ಲೆಗಳನ್ನು ಹಸಿರು ವಲಯಕ್ಕೂ, ಕೆಂಪು ವಲಯದಲ್ಲಿದ್ದ ಜಿಲ್ಲೆಗಳು ಕಿತ್ತಳೆ ವಲಯದಲ್ಲಿ ಸ್ಥಾನ ಪಡೆದಿದೆ. ಈ ಮೊದಲು ಕೊರೊನಾ ಪ್ರಕರಣ ದಾಖಲಾಗದ ಜಿಲ್ಲೆಗಳು ಹಸಿರು ವಲಯದಲ್ಲೂ, ಕಡಿಮೆ ಪ್ರಕರಣ ದಾಖಲಾದ ಜಿಲ್ಲೆಗಳು ಕಿತ್ತಳೆ ವಲಯಕ್ಕೂ, ಅತಿ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳು ಕೆಂಪು ವಲಯದಲ್ಲಿ ಸ್ಥಾನ ಪಡೆಯುತ್ತಿತ್ತು.

    14 ದಿನಗಳಿಂದ ಯಾವುದೇ ಪ್ರಕರಣ ಬೆಳಕಿಗೆ ಬಾರದೇ ಇದ್ದಲ್ಲಿ ಕಿತ್ತಳೆ ವಲಯದಲ್ಲಿದ್ದ ಜಿಲ್ಲೆ ಹಸಿರು ಜಿಲ್ಲೆಯಾಗುತ್ತಿತ್ತು. ಕೆಂಪು ವಲಯಲ್ಲಿದ್ದ ಜಿಲ್ಲೆಯಲ್ಲಿ 14 ದಿನಗಳ ಕಾಲ ಕೊರೊನಾ ಬಾರದೇ ಇದ್ದಲ್ಲಿ ಕಿತ್ತಳೆ ವಲಯದಲ್ಲಿ, ಬಳಿಕ 14 ದಿನಗಳ ಕಾಲ ಯಾವುದೇ ಪ್ರಕರಣ ಬಾರದೇ ಇದ್ದಲ್ಲಿ ಹಸಿರು ವಲಯದಲ್ಲಿ ಸ್ಥಾನ ಪಡೆಯುತ್ತಿತ್ತು.

    ಹೊಸ ಮಾನದಂಡ ಏನು?
    ಈ ಮೊದಲು ಪ್ರಕರಣಗಳು ದ್ವಿಗುಣವಾಗುವುದರ ಮೇಲೆ ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಪ್ರಕಟಿಸಲಾಗುತ್ತಿತ್ತು. ಈಗ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಪರಿಷ್ಕರಣೆಗೊಳಿಸಲಾಗಿದೆ. ಹೊಸದಾಗಿ ಎಷ್ಟು ಪ್ರಕರಣಗಳು ದಾಖಲಾಗುತ್ತಿದೆ? ಎಷ್ಟು ದಿನಕ್ಕೆ ಪ್ರಕರಣ ದ್ವಿಗುಣವಾಗುತ್ತಿದೆ? ಎಷ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ? ಎಷ್ಟು ಪರೀಕ್ಷೆ ನಡೆಯುತ್ತಿದೆ? ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹೇಗಿದೆ? ಈ ಮಾನದಂಡಗಳನ್ನು ಆಧಾರಿಸಿ ಪರಿಷ್ಕೃತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದನ್ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

    ಪ್ರತಿ ವಾರಕ್ಕೊಮ್ಮೆ ಈ ಪಟ್ಟಿ ಬದಲಾಗುತ್ತದೆ. ಪ್ರಸ್ತುತ ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಳೆ, 319 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ಪರಿಷ್ಕರಣೆಯಿಂದಾಗಿ ಕರ್ನಾಟಕದಲ್ಲಿ 3 ಜಿಲ್ಲೆಗಳು ಕೆಂಪು ವಲಯದಲ್ಲಿ, 13 ಜಿಲ್ಲೆಗಳು ಕಿತ್ತಳೆ ವಲಯದಲ್ಲಿ, 14 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ, ಚಿಕ್ಕಬಳ್ಳಾಪುರವನ್ನು ಕೆಂಪು ವಲಯದಿಂದ ಕೈಬಿಟ್ಟಿದೆ.

    ಯಾವ ಜಿಲ್ಲೆ ಯಾವ ವಲಯದಲ್ಲಿದೆ?
    ಕೆಂಪು ವಲಯ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು

    ಕಿತ್ತಳೆ ವಲಯ: ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ್, ಉತ್ತರ ಕನ್ನಡ, ತುಮಕೂರು.

    ಹಸಿರು ವಲಯ: ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ.

  • ಎಣ್ಣೆ ಸಹವಾಸ ಹೆಂಡ್ತಿ ಮಕ್ಕಳು ಉಪವಾಸ, ಸದ್ಯಕ್ಕೆ ಎಣ್ಣೆ ಬೇಡ್ವೇ ಬೇಡ: ಆರ್ ಅಶೋಕ್

    ಎಣ್ಣೆ ಸಹವಾಸ ಹೆಂಡ್ತಿ ಮಕ್ಕಳು ಉಪವಾಸ, ಸದ್ಯಕ್ಕೆ ಎಣ್ಣೆ ಬೇಡ್ವೇ ಬೇಡ: ಆರ್ ಅಶೋಕ್

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಮದ್ಯದಂಗಡಿ ತೆರೆಯುವಂತೆ ಜನಸಾಮಾನ್ಯರು ಒತ್ತಾಯಿಸುತ್ತಿದ್ದಾರೆ. ಆದರೆ ಇತ್ತ ಎಣ್ಣೆ ಸಹವಾಸ ಬೇಡವೇ ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಮದ್ಯದ ಅಂಗಡಿ ತೆರೆಯಲು ಅನುಮತಿ ಸಿಗುತ್ತಾ ಎಂಬ ಪ್ರಶ್ನೆಗೆ, ಎಣ್ಣೆ ನಮ್ಮದಲ್ಲ, ಊಟ ಮಾತ್ರ ನಮ್ಮದು. ಎಣ್ಣೆ ನಿಮ್ಮದು, ಊಟ ನಮ್ಮದು. ಸದ್ಯಕ್ಕೆ ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೇ ಆಗೋದು. ಈಗ ಏನದರೂ ನಾವು ಎಣ್ಣೆ ಬಿಟ್ಟರೆ ಕೊಟ್ಟಿರೋ ರೇಷನ್ ಎಲ್ಲಾ ಹೋಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಸದ್ಯ ಎಣ್ಣೆ ವಿಚಾರ ಬೇಡವೇ ಬೇಡ ಎಂದು ಉತ್ತರಿಸಿದರು.

    ಬೆಂಗಳೂರಿನಲ್ಲಿ ಮಳೆ ಬಂದು ಕಳೆದ ಎರಡು ದಿನಗಳಿಂದ ಅನಾಹುತಗಳಾಗಿವೆ. ಬೇಗ ಮಳೆ ಪ್ರಾರಂಭ ಆಗಿದೆ. ಸಾಮಾನ್ಯ ಮಳೆಗಿಂತ ಈ ಬಾರಿ ಅಧಿಕ ಮಳೆಯಾಗುತ್ತೆ ಎಂದು ಹಲವಾರು ಸಮೀಕ್ಷೆಗಳು ನಡೆದಿವೆ ಎಂದರು.

    ಮಳೆ ಬಂದು ರಸ್ತೆ ಹಾಳಾಗಿದೆ, ಗೋಡೆ ಕುಸಿದಿರುವ ವಿಚಾರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲವನ್ನು ಹೇಗೆ ತಡೆಯುವುದು ಎಂಬ ಬಗ್ಗೆ ಇಂದು ಸಂಜೆ ಬಿಬಿಎಂಪಿ ಸಭೆ ಕರೆದಿದ್ದೇವೆ. ನಮಗೆ ಕೊರೊನಾ ನಿಯಂತ್ರಣ ಒಂದು ಕಡೆ ಸವಾಲಾದರೆ ಮತ್ತೊಂದು ಕಡೆ ಮಳೆಯದ್ದು ಮತ್ತೊಂದು ಸವಾಲಾಗಿದೆ ಎಂದರು.

  • ಜೀವ ಮತ್ತು ಜೀವನ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ: ಡಿಸಿಎಂ ಲಕ್ಷ್ಮಣ್ ಸವದಿ

    ಜೀವ ಮತ್ತು ಜೀವನ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ: ಡಿಸಿಎಂ ಲಕ್ಷ್ಮಣ್ ಸವದಿ

    ರಾಯಚೂರು: ಜನಪ್ರತಿನಿಧಿಗಳು ಜಾತಿ, ರಾಜಕೀಯ ಬಿಟ್ಟು ನಿಜವಾಗಿ ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕಿದೆ. ಎಲ್ಲವೂ ಸರ್ಕಾರದಿಂದ ಸಾಧ್ಯವಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಜೀವ ಮತ್ತು ಜೀವನ ಉಳಿಸಲು ಹಾಗೂ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕರೆ ನೀಡಿದ್ದಾರೆ.

    ರಾಯಚೂರು ಜಲ್ಲೆಯಲ್ಲಿ ಡಿಸಿಎಂ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಬೆಳೆ ವೀಕ್ಷಣೆ ಮಾಡಿದರೆ. ಬಳಿಕ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಕೊರೊನಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೊರೊನಾ ಸೋಂಕು ಜಿಲ್ಲೆಗೆ ತಗುಲದಂತೆ ನೋಡಿಕೊಳ್ಳಬೇಕಿದೆ. ಆಂಧ್ರಪ್ರದೇಶ, ತೆಲಂಗಾಣದಿಂದ ಭತ್ತ ತರುವುದು ಆತಂಕಕ್ಕೆ ಕಾರಣವಾಗಿದೆ. ಭತ್ತದ ಚೀಲಗಳ ಮೂಲಕ ರಾಯಚೂರಿಗೆ ಕೊರೊನಾ ಸೋಂಕು ಬರಬಾರದು. ಹೀಗಾಗಿ ರಾಯಚೂರು ಜಿಲ್ಲಾಡಳಿತ ಇನ್ನೂ ಎಚ್ಚರಿಕೆಯಿಂದ ಇರಬೇಕು. ಮೈಮರೆಯದೆ ಜಾಗೃತಿಯಿಂದ ಇರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಲಾಕ್‍ಡೌನ್ ಇದಿಯೋ ಇಲ್ಲವೋ ಅನ್ನೋ ಪರಸ್ಥಿತಿ ಜಿಲ್ಲೆಯಲ್ಲಿ ಇರಬಾರದು ಎಂದು ಎಚ್ಚರಿಸಿದರು.

    ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾಗೃತಿಯಿದೆ. ಸರ್ಕಾರದಿಂದಲೇ ಎಲ್ಲವೂ ಸಾಧ್ಯವಿಲ್ಲ, ಜನರು ಕೂಡ ಸಹಕರಿಸಬೇಕಿದೆ. ಉತ್ತರ ಪ್ರದೇಶ ಹಾಗೂ ಕೇರಳದ ಆಯ್ದ ಅಂಶಗಳ ಹೊಸ ಕಾನೂನುನಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಇದರಿಂದ ಈಗ ಪೊಲೀಸರಿಗೆ ಕೆಲಸ ಮಾಡಲು ಹೊಸ ಆಸರೆ ಸಿಗಲಿದೆ. ಬೇರೆ ಜಿಲ್ಲೆಗಳ ಕೂಲಿಕಾರ್ಮಿಕರನ್ನ ಕರೆತರಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿನ ಕೂಲಿಕಾರ್ಮಿಕರನ್ನ ಕರೆತರಲು ಚರ್ಚೆ ನಡೆದಿದೆ ಎಂದರು.

    ಕುಡಿಯುವ ನೀರಿನ ಸಮಸ್ಯೆಗೆ 25 ಲಕ್ಷ ಸಾಲುವುದಿಲ್ಲ. ಟಾಸ್ಕ್ ಫೋರ್ಸ್‍ಗೆ ಹೆಚ್ಚು ಅನುದಾನ ಕೊಡಬೇಕು ಅಂತ ಶಾಸಕರಾದ ಶಿವನಗೌಡ ನಾಯಕ್, ಬಸನಗೌಡ ದದ್ದಲ ಸಭೆಯಲ್ಲಿ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ನಿಮ್ಮ ಕ್ಷೇತ್ರಗಳಿಗೆ ಬೇಕಿರುವ ಅನುದಾನದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಿಡುಗಡೆ ಮಾಡೋಣ ಎಂದರು. ಈಗ ಕೊಟ್ಟಿರುವ ಪಡಿತರ ಜನರಿಗೆ ಮೂರು ತಿಂಗಳು ಸಾಲುತ್ತೆ. ಅಕ್ಕಿ ಜೊತೆ ಇತರೆ ಅಡುಗೆ ಪದಾರ್ಥಗಳನ್ನ ಕೊಡುವ ಬಗ್ಗೆ ಯೋಚಿಸುತ್ತೇವೆ ಎಂದರು.

    ಇದೇ ವೇಳೆ ಲಾಕ್‍ಡೌನ್‍ನಿಂದ ಮದ್ಯದ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆ ಅಕ್ರಮ ಮದ್ಯ, ಕಳ್ಳಭಟ್ಟಿ, ಅಕ್ರಮ ಸಿಎಚ್ ಪೌಡರ್, ಸೇಂದಿ ಮಾರಾಟ ಜೋರಾಗಿದೆ ಅಂತ ಅಬಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ತೆಲಂಗಾಣ ಗಡಿಯಿಂದ ಬರುತ್ತಿರುವ ಸಿಎಚ್ ಪೌಡರ್, ಅಕ್ರಮ ಮದ್ಯದ ದಂಧೆ ಸಂಪೂರ್ಣ ನಿಲ್ಲಬೇಕು. ಕಳ್ಳಭಟ್ಟಿ ದಂಧೆ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತೆ. ಬಾರ್ ಮಾಲೀಕರೇ ತಮ್ಮ ಬಾರ್ ಕಳ್ಳತನ ಮಾಡಿಸುತ್ತಿರುವ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅಬಕಾರಿ ಡಿಸಿಗೆ ಡಿಸಿಎಂ ಎಚ್ಚರಿಕೆ ನೀಡಿದರು.