Tag: alcohol

  • ಎಣ್ಣೆ ಕೊಡದಿದ್ದರೆ ಧರಣಿ- ನಿವೃತ್ತ ಸೈನಿಕರ ಎಚ್ಚರಿಕೆಗೆ ಮಣಿದ ಅಬಕಾರಿ ಇಲಾಖೆ

    ಎಣ್ಣೆ ಕೊಡದಿದ್ದರೆ ಧರಣಿ- ನಿವೃತ್ತ ಸೈನಿಕರ ಎಚ್ಚರಿಕೆಗೆ ಮಣಿದ ಅಬಕಾರಿ ಇಲಾಖೆ

    ಶಿವಮೊಗ್ಗ: ಮದ್ಯ ನೀಡುವಂತೆ ನಿವೃತ್ತ ಸೈನಿಕರು ಆಗ್ರಹಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಗರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮಿಲಿಟರಿ ಕ್ಯಾಂಟೀನ್ ಸಹ ಬಂದ್ ಆಗಿತ್ತು. ಆದರೆ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ದಿನದಿಂದ ಮಿಲಿಟರಿ ಕ್ಯಾಂಟೀನ್ ಓಪನ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಯಾವುದೇ ಸಮಸ್ಯೆ ಇಲ್ಲದೇ ನಿವೃತ್ತ ಸೈನಿಕರು ಕ್ಯಾಂಟೀನ್‍ನಲ್ಲಿ ಮದ್ಯ ಖರೀದಿ ಮಾಡುತ್ತಿದ್ದರು.

    ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ನೂರಾರು ಮಂದಿ ನಿವೃತ್ತ ಸೈನಿಕರು ಇಂದು ಬೆಳಗ್ಗೆ ನಗರದ ಹೊಳೆ ಬಸ್ ನಿಲ್ದಾಣದ ಸಮೀಪದ ಮಿಲಿಟರಿ ಕ್ಯಾಂಟೀನ್‍ಗೆ ಮದ್ಯ ಖರೀದಿಸಲೆಂದು ಆಗಮಿಸಿದ್ದರು. ಈ ವೇಳೆ ನಿವೃತ್ತ ಸೈನಿಕರು ಮದ್ಯ ಖರೀದಿಗೆ ಸರದಿ ಸಾಲಿನಲ್ಲೇ ನಿಂತಿದ್ದರು. ಆದರೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್‌ಪೆಕ್ಟರ್ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಮದ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಯಾಂಟೀನ್‍ನಲ್ಲಿದ್ದ ಸ್ಟಾಕ್ ಸಹ ಪರಿಶೀಲನೆ ನಡೆಸಿದರು.

    ಈ ವೇಳೆ ಎರಡು ಬ್ರಾಂಡ್‍ನ ಬಾಟಲಿಗಳ ಮೇಲೆ ಪೇಪರ್ ಸೀಲ್ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ಅಬಕಾರಿ ಇನ್ಸ್‌ಪೆಕ್ಟರ್ ಅವರು ಮದ್ಯ ಮಾರಾಟ ನಿಲ್ಲಿಸುವಂತೆ ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಿ ತೆರಳಿದರು. ಅದರಂತೆ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟವನ್ನು ಅಧಿಕಾರಿಗಳು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೆರಳಿದ ನಿವೃತ್ತ ಸೈನಿಕರು ಅಬಕಾರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮದ್ಯದ ಬಾಟಲಿಗಳು ಕ್ಯಾಂಟೀನ್‍ಗೆ ತಲುಪುವ ಮುನ್ನ ನಾಲ್ಕೈದು ಕಡೆ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲಿಸಿದ ನಂತರವೇ ಕ್ಯಾಂಟೀನ್‍ಗೆ ಬರುತ್ತವೆ. ಹೀಗಿರುವಾಗ ಸೀಲ್ ಇಲ್ಲ ಅಂದರೆ ಅದು ಅಬಕಾರಿ ಇಲಾಖೆಯವರ ತಪ್ಪು. ಸೀಲ್ ಇಲ್ಲ ಅಂದ ಮೇಲೆ ಯಾಕೆ ಕಳುಹಿಸಿದರು ಎಂದು ಅಬಕಾರಿ ಸಿಬ್ಬಂದಿ ವಿರುದ್ಧವೇ ನಿವೃತ್ತ ಸೈನಿಕರು ಗುಡುಗಿದರು.

    ನಾವು ಕೊರೊನಾ ಪಾಸ್ ಪಡೆದು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರ ದೂರದ ಊರುಗಳಿಂದ ಮದ್ಯ ಖರೀದಿಸಲು ಬಂದಿದ್ದೇವೆ. ನಾವು ಮದ್ಯ ತೆಗೆದುಕೊಂಡೇ ಹೋಗುವುದು. ಒಂದು ವೇಳೆ ನೀವು ಕೊಡದಿದ್ದರೆ ಅಬಕಾರಿ ಇಲಾಖೆ ಕಚೇರಿ ಎದುರೇ ಧರಣಿ ನಡೆಸುತ್ತೇವೆ ಎಂದು ನಿವೃತ್ತ ಸೈನಿಕರು ಎಚ್ಚರಿಕೆ ನೀಡಿದರು.

    ಇದರಿಂದಾಗಿ ಅಬಕಾರಿ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಪರಿಶೀಲನೆ ನಡೆಸುವ ನೆಪ ಹೇಳಿ, ಸುಮ್ಮನೆ ಯಾಕೆ ನಿವೃತ್ತ ಸೈನಿಕರನ್ನು ಎದುರು ಹಾಕಿಕೊಳ್ಳುವುದು ಎಂಬ ಕಾರಣದಿಂದ ನಾವು ಇದನ್ನು ನಂತರ ಪರಿಶೀಲಿಸುತ್ತೇವೆ. ಸದ್ಯ ನೀವೀಗ ಮದ್ಯ ತೆಗೆದುಕೊಂಡು ಹೋಗಿ ಎಂದು ಹೇಳಿ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟರು.

  • ಎಣ್ಣೆ ಮತ್ತಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ – ಸೂರಿಲ್ಲದೇ ಪತ್ನಿ ಕಣ್ಣೀರು

    ಎಣ್ಣೆ ಮತ್ತಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ – ಸೂರಿಲ್ಲದೇ ಪತ್ನಿ ಕಣ್ಣೀರು

    ಬಳ್ಳಾರಿ: ಕಂಠಪೂರ್ತಿ ಮದ್ಯ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದ ಕುಡುಕನೋರ್ವ ತನ್ನ ಮನೆಗೇ ಬೆಂಕಿ ಹಚ್ಚಿದ ಘಟನೆ ಬಳ್ಳಾರಿಯ ಕೊಳ್ಳೆಗಲ್ಲು ಗ್ರಾಮದ ಶ್ರೀರಾಮುಲು ನಗರದಲ್ಲಿ ನಡೆದಿದೆ.

    ಕೊಳಗಲ್ಲು ಗ್ರಾಮದ ನಿವಾಸಿ ಚಿದಾನಂದ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಕುಡುಕನ ಅವಾಂತರದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಈ ಚಿದಾನಂದ ಶುಕ್ರವಾರ ತಡ ರಾತ್ರಿ ವಿಪರೀತ ಮದ್ಯಸೇವನೆ ಮಾಡಿದ್ದನು. ಮದ್ಯದ ಅಮಲಿನಲ್ಲಿದ್ದ ಚಿದಾನಂದ ತನ್ನ ಮನೆಯೊಳಗಿನ ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದಾನೆ. ಅದರಿಂದ ಇಡೀ ಮನೆಯ ಒಳಗಿದ್ದ ವಸ್ತುಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.

    ಚಿದಾನಂದನ ಪತ್ನಿ ಶಾಂತಮ್ಮನವರು ಅಗಸಗಿರಿ ಕೆಲಸ ಮಾಡುತ್ತಿದ್ದು, ಬೇರೆಯವರ ಮನೆಯಿಂದ ಬಟ್ಟೆಗಳನ್ನ ತೊಳೆಯೋದಕ್ಕೆ ತಂದಿಟ್ಟಿದ್ದರು. ಪತಿಯ ಮದ್ಯದ ಚಟದಿಂದ ಈಗ ಆ ಬಟ್ಟೆಗಳೂ ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಮಾತನಾಡಿದ ಶಾಂತಮ್ಮ, ಬಾರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ವಿಪರೀತ ಕುಡಿದು ಬಂದು ಈ ರೀತಿ ಮಾಡಿದ್ದಾನೆ. ನೋಡಿ ಮನೆಯೊಳಗೆ ಎಲ್ಲಾ ವಸ್ತುಗಳೂ ಸುಟ್ಟು ಕರಕಲಾಗಿವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

  • ಚೌಕಾಬಾರದಲ್ಲಿ ಗೆದ್ದ 500 ರೂ.ಗಾಗಿ ಅಣ್ಣನನ್ನೇ ಕೊಲೆಗೈದ ತಮ್ಮ

    ಚೌಕಾಬಾರದಲ್ಲಿ ಗೆದ್ದ 500 ರೂ.ಗಾಗಿ ಅಣ್ಣನನ್ನೇ ಕೊಲೆಗೈದ ತಮ್ಮ

    -ಮದ್ಯದ ಅಮಲಿನಲ್ಲಿ ಅಣ್ಣನನ್ನು ಥಳಿಸಿಕೊಂದ ತಮ್ಮ

    ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ತಮ್ಮನೇ ಅಣ್ಣನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಉಪ್ಪಾರ ಬೀರನಹಳ್ಳಿ ಪಿಡಬ್ಲ್ಯುಡಿ ಕ್ವಾಟರ್ಸ್‍ನಲ್ಲಿ ನಡೆದಿದೆ.

    ಸಹೋದರರಿಬ್ಬರು ಮನೆ ಮುಂದೆ ಚೌಕಾಬಾರ ಆಟವಾಡುತ್ತಿದ್ದಾಗ ಕ್ಷುಲಕ್ಕ ಕಾರಣಕ್ಕೆ ಗಲಾಟೆ ಆರಂಭವಾಗಿದೆ. ತಮ್ಮ ಕಿರಣ್ ಬಳಿ ಅಣ್ಣ ಅರುಣ್ ಚೌಕಾಬಾರ ಆಟದಲ್ಲಿ 500 ರೂಪಾಯಿ ಸೋತಿದ್ದ. ಈ ವೇಳೆ ತಮ್ಮ ಕಿರಣ್ ಮೊದಲು ಸೋತ ಹಣ ಕೊಡು, ಆಮೇಲೆ ಆಡೋಣ ಎಂದು ದುಂಬಾಲು ಬಿದ್ದಿದ್ದಾನೆ. ಈ ವೇಳೆ ಅಣ್ಣ ಅರುಣ್, ಕೊಡ್ತೀನಿ ಆಡೋ ಎಂದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಇಬ್ಬರು ಸಹೋದರರ ನಡುವ ಗಲಾಟೆ ನಡೆದಿದೆ.

    ಗಲಾಟೆಯಲ್ಲಿ ಕಿರಣ್ 26 ವರ್ಷದ ಅಣ್ಣ ಅರುಣ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಕೆಳಗೆ ಬಿದ್ದ ಅರುಣ್ ತಲೆಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿದ್ದ. ಕೂಡಲೇ ಅರುಣ್‍ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಸಾವಿಗೀಡಾಗಿದ್ದಾನೆ.

    ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಿರಣ್‍ನನ್ನು ಬಂಧಿಸಿದ್ದಾರೆ.

  • ಕಂಠಪೂರ್ತಿ ಕುಡಿದಿದ್ದ ರೌಡಿಶೀಟರ್‌ನನ್ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಕಂಠಪೂರ್ತಿ ಕುಡಿದಿದ್ದ ರೌಡಿಶೀಟರ್‌ನನ್ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮದ್ಯ ಸಿಗದೆ ಸೈಲೆಂಟ್ ಆಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ವೈಲೆಂಟ್ ಆಗಿದೆ. ಮದ್ಯ ಮಾರಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದಾಗಿನಿಂತ ನಿತ್ಯವೂ ಒಂದಿಲ್ಲೊಂದು ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ.

    ಕೆಲ ದುಷ್ಕರ್ಮಿಗಳು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ಓರ್ವ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ. ಬ್ಯಾಟರಾಯನಪುರದ ಅಶೋಕ್ ಅಲಿಯಾಸ್ ದಡಿಯಾ ಕೊಲೆಯಾದ ರೌಡಿಶೀಟರ್. ಬ್ಯಾಟರಾಯನಪುರದ ಭಾರತೀನಗರದಲ್ಲಿ ಘಟನೆ ನಡೆದಿದೆ.

    ಗುರುವಾರ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ಅಶೋಕ್‍ನನ್ನು ಟಾರ್ಗೆಟ್ ಮಾಡಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿಯೇ ಈ ಕೊಲೆ ನಡೆದಿರಬಹುದು. ಗೆಳೆಯರಿಂದಲೇ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅವರು, ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

  • ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಮರ್ಡರ್- ಆರೋಪಿ ಸೋದರನ ಬರ್ಬರ ಹತ್ಯೆ

    ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಮರ್ಡರ್- ಆರೋಪಿ ಸೋದರನ ಬರ್ಬರ ಹತ್ಯೆ

    ಕೊಲೆಯಾಗಿದ್ದ ಸತೀಶ್

    ಮೈಸೂರು: ಮೂರು ದಿನಗಳ ಹಿಂದೆ ನಡೆದಿದ್ದ ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

    ಕ್ಯಾತಮಾರನಹಳ್ಳಿಯ ಅಭಿಷೇಕ್ (22) ಕೊಲೆಯಾದ ದುರ್ದೈವಿ. ಮೂರು ದಿನಗಳ ಹಿಂದೆ ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ವೇಳೆ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದರು. ಆರೋಪಿ ಕಿರಣ್ ಸಹೋದರ ಅಭಿಷೇಕ್  ನನ್ನು ಈಗ ಕೊಲೆ ಮಾಡಿದ್ದಾರೆ.

    ಕಿರಣ್ ಮೇ 4ರಂದು ಸತೀಶ್‍ನನ್ನು ಕೊಲೆ ಮಾಡಿದ್ದ. ಹೀಗಾಗಿ ಸತೀಶ್‍ನನ್ನ ಕೊಲೆ ಮಾಡಿದ್ದಕ್ಕೆ ಆರೋಪಿ ಕಿರಣ್ ಸಹೋದರ ಅಭಿಷೇಕ್‍ನನ್ನು ಕೊಲೆ ಮಾಡಲಾಗಿದೆ. ಕೊಲೆ ಆರೋಪದ ಮೇಲೆ ಗುರುವಾರ ಕಿರಣ್ ಜೈಲು ಸೇರಿದ್ದನು. ಈ ವೇಳೆ ಅಭಿಷೇಕ್ ನನ್ನು ಫೋನ್ ಮಾಡಿ ಕರೆಸಿಕೊಂಡು ಮೃತ ಸತೀಶ್ ಸ್ನೇಹಿತರಾದ ಇರ್ಫಾನ್, ಮಹೇಶ್ ಕೊಲೆ ಮಾಡಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಇರ್ಫಾನ್ ಹಾಗೂ ಮಹೇಶ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿತ್ತು. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದರು. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿಟ್ಟಿದ್ದ ಎಣ್ಣೆಯನ್ನೇ ಕದ್ದ ಪೇದೆ

    ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿಟ್ಟಿದ್ದ ಎಣ್ಣೆಯನ್ನೇ ಕದ್ದ ಪೇದೆ

    – ಚಾಲಕನ ಜೊತೆ ಸೇರಿ ಮದ್ಯ ಎಗರಿಸಿದ ಪೊಲೀಸ್
    – ಸಿಸಿಟಿವಿಯಿಂದ ಬಯಲಾಯ್ತು ಪೇದೆ ಅಸಲಿಯತ್ತು

    ಹೈದರಾಬಾದ್: ಲಾಕ್‍ಡೌನ್ ಅವಧಿಯಲ್ಲಿ ಮದ್ಯದಂಗಡಿಗಳಿಂದ ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಮದ್ಯವನ್ನ ಪೊಲೀಸ್ ಪೇದೆಯೇ ಕದ್ದು ಸಿಕ್ಕಿಬಿದ್ದ ಘಟನೆ ತೆಲಂಗಾಣದ ಕರೀಮ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಕರೀಮ್‍ನಗರ ಜಿಲ್ಲೆಯ ಇರಡು ಟೌನ್ ಪೊಲೀಸ್ ಠಾಣೆಯಲ್ಲಿ ಮದ್ಯವನ್ನು ಸೀಜ್ ಮಾಡಿ ಇಡಲಾಗಿತ್ತು. ಲಾಕ್‍ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಹಲವು ಮದ್ಯದಂಗಡಿಗಳನ್ನು ಸೀಜ್ ಮಾಡಿ, ಅಂಗಡಿಯಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಆದರೆ ಪೊಲೀಸ್ ಪೇದೆ ಅರುಣ್ ಹಾಗೂ ವಾಹನ ಚಾಲಕ ರಾಣಾ ಮದ್ಯದ ಆಸೆಗೆ ಬಿದ್ದು ಠಾಣೆಯಲ್ಲಿದ್ದ ಸುಮಾರು 69 ಮದ್ಯದ ಬಾಟಲಿಗಳನ್ನು ಕದ್ದಿದ್ದರು. ಅಲ್ಲದೇ ಈ ಮದ್ಯವನ್ನು ಅಕ್ರಮವಾಗಿ ಮಾರಾಟ ಕೂಡ ಮಾಡಿದ್ದರು.

    ಮೇ 4ರಂದು ಹಿರಿಯ ಪೊಲೀಸ್ ಅಧಿಕಾರಿ ಠಾಣೆಯಲ್ಲಿ ಇರಿಸಿದ್ದ ಮದ್ಯದ ಬಾಟಲಿಗಳು ಕಡಿಮೆ ಕಾಣುತ್ತಿದೆ ಎಂದು ಪರಿಶೀಲನೆ ನಡೆಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ಹೆಚ್ಚು ಮಂದಿಗೆ ತಿಳಿಸದೆ ಠಾಣೆಯಲ್ಲಿ ಇರಿಸಿದ್ದ ಮದ್ಯವನ್ನು ಕದ್ದಿದ್ದು ಯಾರು ಎಂದು ಪತ್ತೆ ಹಚ್ಚಲು ಮುಂದಾದರು. ಈ ವೇಳೆ ಠಾಣೆಯಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಚಾಲಕನನ್ನು ವಿಚಾರಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದು, ಪೊಲೀಸ್ ಪೇದೆಯ ಅಸಲಿಯತ್ತನ್ನು ಬಯಲು ಮಾಡಿದ್ದಾನೆ. ಇಬ್ಬರೂ ಸೇರಿ ಮದ್ಯ ಕಳ್ಳತನ ಮಾಡಿರುವುದನ್ನು ಚಾಲಕ ಒಪ್ಪಿಕೊಂಡಿದ್ದಾನೆ.

    ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಮೇ 4ರಂದು ಈ ಘಟನೆ ಬೆಳಕಿಗೆ ಬಂದಿದ್ದರೂ ಪೊಲೀಸರು ಮಾತ್ರ ಠಾಣೆಯ ಹೆಸರು ಹಾಳಾಗುತ್ತದೆ ಎಂದು ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೂ ಪ್ರಕರಣ ಬಯಲಾಗಿದ್ದು, ಎಲ್ಲೆಡೆ ಸುದ್ದಿ ಹರಡಿದೆ. ಸಾರ್ವಜನಿಕರಿಗೆ ರಕ್ಷಣೆ ನೀಡಿ, ಕಳ್ಳತನ ಮಾಡುವವರನ್ನು ಹಿಡಿದು ಬುದ್ಧಿ ಕಲಿಸಬೇಕಾದ ಪೊಲೀಸರೇ ಈ ರೀತಿ ಕಳ್ಳತನ ಮಾಡುವುದು ತಪ್ಪು ಎಂದು ಪೊಲೀಸ್ ಪೇದೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮದ್ಯದ ಮತ್ತಿನಲ್ಲಿ ಪತ್ನಿಯ ಕತ್ತು ಸೀಳಿದ ಪಾಪಿ

    ಮದ್ಯದ ಮತ್ತಿನಲ್ಲಿ ಪತ್ನಿಯ ಕತ್ತು ಸೀಳಿದ ಪಾಪಿ

    ಬೆಂಗಳೂರು: ಮದ್ಯದ ಮತ್ತಿನಲ್ಲಿ ಪಾಪಿ ಪತಿಯೊಬ್ಬ ಪತ್ನಿಯನ್ನ ಕೊಲೆಗೈದ ಘಟನೆ ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

    ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯ ದಿವ್ಯ (24) ಕೊಲೆಯಾದ ಪತ್ನಿ. ತೀರ್ಥಪ್ರಸಾದ್ ಕೊಲೆಗೈದ ಪತಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತೀರ್ಥಪ್ರಸಾದ್ ಕೃತ್ಯ ಎಸದಿದ್ದಾನೆ ಎನ್ನಲಾಗಿದೆ.

    ಕಾರು ಚಾಲಕನಾಗಿದ್ದ ತೀರ್ಥಪ್ರಸಾದ್ ಬುಧವಾರ ಮದ್ಯ ಕುಡಿದು ಮನೆ ಬಂದಿದ್ದ. ಈ ವೇಳೆ ಪತ್ನಿಯ ಜೊತೆಗೆ ಜಗಳ ಆರಂಭಿಸಿ ಚಾಕುವಿನಿಂದ ಕತ್ತು ಸೀಳಿ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಪ್ರತ್ಯೇಕ ಪ್ರಕರಣ:
    ಮದ್ಯಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನವೇ ಕುಡಿದ ನಶೆಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಪೂರ್ವ ತಾಲೂಕು ಹಂಚರಹಳ್ಳಿ ಚರ್ಚ್ ಬಳಿ ನಡೆದಿದೆ.

    ಸೋಮವಾರ ರಾತ್ರಿ ಮತ್ತೆ ಮದ್ಯ ಕುಡಿದ ಅಮಲಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ರೌಡಿಶೀಟರ್ ಪ್ರಶಾಂತ್, ಮಧು, ಕಟ್ಟುಗೊಲ್ಲಹಳ್ಳಿಯ ರೌಡಿಶೀಟರ್ ರಾಜ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಆವಲಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಮದ್ಯದ ಅಮಲಿನಲ್ಲಿ ತಮ್ಮನ ಕೈ ಕಟ್ ಮಾಡಿದ ಅಣ್ಣ

    ಮದ್ಯದ ಅಮಲಿನಲ್ಲಿ ತಮ್ಮನ ಕೈ ಕಟ್ ಮಾಡಿದ ಅಣ್ಣ

    ಚಿಕ್ಕಬಳ್ಳಾಪುರ: ಮದ್ಯದ ಅಮಲಿನಲ್ಲಿ ಸಹೋದರರ ನಡುವೆ ಜಗಳ ನಡೆದಿದ್ದು, ಕೋಪದ ಕೈಗೆ ಬುದ್ಧಿ ಕೊಟ್ಟ ಅಣ್ಣ, ತಮ್ಮನ ಕೈಯನ್ನೇ ತುಂಡರಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿಗಳಾದ 38 ವರ್ಷದ ಕೃಷ್ಣಪ್ಪ ಹಾಗೂ ತಮ್ಮ 33 ವರ್ಷದ ಹನುಮಂತರಾಯಪ್ಪ ಇಬ್ಬರು ಸಹೋದರರು. ಇಂದು ಮದ್ಯ ಸೇವಿಸಿ ಬಳಿಕ ಇಬ್ಬರು ಮನೆಯಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಜಗಳ ಆರಂಭವಾಗಿದ್ದೆ. ಮದ್ಯದ ಮತ್ತಿನಲ್ಲಿದ್ದ ಕಾರಣ ಜಗಳ ವಿಕೋಪಕ್ಕೆ ದಾರಿ ಮಾಡಿಕೊಟ್ಟಿದ್ದು, ತಮ್ಮನತ್ತ ಅಣ್ಣ ಮಚ್ಚು ಬೀಸಿದ್ದಾನೆ. ಅಣ್ಣ ಬೀಸಿದ ಮಚ್ಚಿನೇಟಿನಿಂದ ಪಾರಾಗಲು ಯತ್ನಿಸಿದ ತಮ್ಮ ಹನುಮಂತರಾಯಪ್ಪ ತನ್ನ ಎಡಗೈ ಅಡ್ಡ ಇಟ್ಡಿದ್ದು, ಪರಿಣಾಮ ಆತನ ಕೈ ಸಂಪೂರ್ಣ ಕಟ್ ಆಗಿ ನೆಲಕ್ಕೆ ಬಿದ್ದಿದೆ.

    ಗಾಯಾಳುವಿಗೆ ಗೌರಿಬಿದನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಂತರ ಕೃಷ್ಣಪ್ಪ ಸ್ಥಳದಿಂದ ಪರಾರಿಯಾಗಿದ್ದು, ಮಾಹಿತಿ ಪಡೆದಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

    ಬರೋಬ್ಬರಿ 41 ದಿನಗಳ ಬಳಿಕ ಸರ್ಕಾರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಆ ಬಳಿಕ ಅಪಘಾತ, ಹಲ್ಲೆ ಪ್ರಕರಣಗಳು ಹೆಚ್ಚು ವರದಿಯಾಗಿದೆ. ಘಟನೆಯಲ್ಲಿ ಹನುಮಂತರಾಯಪ್ಪ, ಕೃಷ್ಣಪ್ಪ ಇಬ್ಬರು ಮದ್ಯವ್ಯಸನಿಗಳಾಗಿದ್ದು, ಇವರ ಕಿರುಕುಳ ತಾಳಲಾರದೆ ಹೆಂಡತಿಯರು ಸಹ ಇವರನ್ನು ತೊರೆದಿದ್ದರು. ಸಣ್ಣ ಪುಟ್ಟ ವಿಚಾರಗಳಿಗೂ ಇಬ್ಬರು ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

  • ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ

    ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ

    – ‘ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು 2 ಕ್ವಾಟ್ರು ಕುಡ್ದಿದ್ದೀನಿ’

    ಚಿಕ್ಕಮಗಳೂರು: ಹೆಂಡತಿ-ಮಕ್ಕಳಿಗೆ ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಅಂದ್ರು ಮಾಲೀಕ ಹಣ ಕೊಡಲಿಲ್ಲ ಅಂತ ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಅವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು ಊರಿಗೆ ಹೋಗಿಲ್ಲ. ಹೀಗಾಗಿ ಮಾಲೀಕನಿಗೆ ಹೆಂಡತಿ-ಮಕ್ಕಳಿಗೆ ಜೀವನಕ್ಕೆ ದುಡ್ಡು ಬೇಕು, ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಕೇಳಿಕೊಂಡಿದ್ದರೂ ಮಾಲೀಕ ಹಣ ಹಾಕಿರಲಿಲ್ಲ. ಇದರಿಂದಾಗಿ ಎಣ್ಣೆ ಮತ್ತಲ್ಲಿದ್ದ ರಂಗಪ್ಪ ಟಿಪ್ಪರ್ ನಲ್ಲಿ ಅರ್ಧ ಟ್ಯಾಂಕರ್ ಡಿಸೇಲ್ ಇದ್ದರಿಂದ ಊರಿಗೆ ಮುಟ್ತಿನಿ ಎನ್ನುವ ನಂಬಿಕೆ ಬಂದಿತ್ತು. ಆದರೆ ಮಾಲೀಕನಿಗೆ ಹೇಳದೆ ಲಾರಿ ತಂದು ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ಸಿಕ್ಕಿಬಿದ್ದಿದ್ದಾನೆ.

    ಮದ್ಯದ ಮತ್ತಿನಲ್ಲಿದ್ದ ರಂಗಪ್ಪ, “ಊಟಕ್ಕೆ ದುಡ್ ಇರಲಿಲ್ಲ, ಊಟವೂ ಇಲ್ಲ. ಹಣ ಯಾರ್ ಕೊಡ್ತಾರೆ. ಒಂದು ಹೊಟೇಲ್ ಇಲ್ಲ. ಅದಕ್ಕೆ ಲಾರಿಯಲ್ಲಿ ಡಿಸೇಲ್ ಇತ್ತು ಕೀ ನನ್ನ ಬಳಿಯೇ ಇತ್ತು. ಊರಿಗೆ ಹೊರಟಿದ್ದೇನೆ. ಬಿಟ್ಟರೇ ಊರಿಗೆ ಹೋಗ್ತೀನಿ. ಬಿಡಲಿಲ್ಲ ಅಂದ್ರೆ ಲಾರಿಯನ್ನ ಇಲ್ಲೇ ನಿಲ್ಲಿಸ್ತೀನಿ. ಸಾಕು ನನಗೆ ಊಟ ಕೊಡಿ” ಎಂದು ಪೊಲೀಸರಿಗೆ ಕೇಳಿದ್ದಾನೆ. ಸ್ಥಳೀಯರು ಕೇಳಿದ ಪ್ರಶ್ನೆಗೆಲ್ಲಾ ಹರಳು ಹುರಿದಂತೆ ಉತ್ತರಿಸಿದ ರಂಗಪ್ಪ, “ರೆಕಾರ್ಡ್ ಮಾಡ್ಕಳಿ, ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು ಎರಡು ಕ್ವಾಟ್ರು ಕುಡಿದಿದ್ದೀನೆ. ಹೆಂಡತಿ-ಮಕ್ಕಳ ನೋಡ್ಬೇಕು ಹೋಗ್ತೀನಿ” ಎಂದಿದ್ದಾನೆ.

  • ‘ಕುಡಿದು ಗಲಾಟೆ ಮಾಡಬೇಡ’ – ತಾಯಿ ಸಾಯುವವರೆಗೂ ದೊಣ್ಣೆಯಲ್ಲಿ ಹೊಡೆದ ಮಗ

    ‘ಕುಡಿದು ಗಲಾಟೆ ಮಾಡಬೇಡ’ – ತಾಯಿ ಸಾಯುವವರೆಗೂ ದೊಣ್ಣೆಯಲ್ಲಿ ಹೊಡೆದ ಮಗ

    – ಪಕ್ಕದ ಮನೆಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡ ಪತ್ನಿ

    ರಾಯ್ಪರ್: ಕುಡಿದು ಗಲಾಟೆ ಮಾಡಬೇಡ ಎಂದಿದ್ದಕ್ಕೆ ತಾಯಿಯನ್ನು ಮಗನೋರ್ವ ಸಾಯುವರೆಗೆ ದೊಣ್ಣೆಯಿಂದ ಹೊಡೆದಿರುವ ಘಟನೆ ಚತ್ತೀಸ್‍ಗಢದ ಜಂಜಗೀರ್ ಚಂಪಾ ಜಿಲ್ಲೆಯಲ್ಲಿ ನಡೆದಿದೆ.

    ತಾಯಿಯನ್ನೇ ಹೊಡೆದು ಕೊಂದ ಪಾಪಿ ಮಗನನ್ನು ಅಮೃತ್ ಲಾಲ್ ಗಡೆವಾಲ್ ಎಂದು ಗುರುತಿಸಲಾಗಿದೆ. ಮದ್ಯಪಾನಕ್ಕೆ ದಾಸನಾಗಿದ್ದ ಅಮೃತ್ ಲಾಲ್ ಲಾಕ್‍ಡೌನ್‍ನಿಂದ ಮದ್ಯದಂಗಡಿ ಮುಚ್ಚಿದ ದಿನದಿಂದಲೂ ಸಮ್ಮನೆ ಇದ್ದ. ಆದರೆ ಸೋಮವಾರದಿಂದ ಬಾರ್ ಗಳು ಓಪನ್ ಆದ ಕಾರಣ ಇಂದು ಕಂಠಪೂರ್ತಿ ಕುಡಿದು ಬಂದಿದ್ದಾನೆ.

    ಬಂದವನೇ ಅಮೃತ್ ಲಾಲ್ ತನ್ನ ಗ್ರಾಮವಾದ ಪುಟ್ಪುರದಲ್ಲಿ ಜನರಿಗೆ ತೊಂದರೆ ಕೊಡಲು ಆರಂಭಿಸಿದ್ದಾನೆ. ಜೊತೆಗೆ ರಸ್ತೆಯಲ್ಲಿ ನಿಂತುಕೊಂಡು ಓಡಾಡುವ ಮಂದಿ ಜೊತೆ ಜಗಳವಾಡಿದ್ದಾನೆ. ಕುಡುಕನ ತೊಂದರೆಯನ್ನು ಸಹಿಸಿಕೊಳ್ಳದ ಗ್ರಾಮಸ್ಥರು ಹೇಗೋ ಆತನ ಮನವೊಲಿಸಿ ಮನೆಗೆ ಹೋಗುವಂತೆ ಹೇಳಿದ್ದಾರೆ. ನಂತರ ಅಮೃತ್ ಲಾಲ್ ಮನೆಗೆ ಬಂದಿದ್ದಾನೆ.

    ಮನೆಗೆ ಬಂದವ ಮನೆಯ ಮುಂದೆ ಕೂಡ ಗಲಾಟೆ ಮಾಡಿ ಅಕ್ಕಪಕ್ಕದ ಮನೆಯವರ ಜೊತೆ ಜಗಳಕ್ಕೆ ಹೋಗಿದ್ದಾನೆ. ಈ ವೇಳೆ ಆತನ ಪತ್ನಿ ಹಾಗೂ ವೃದ್ಧೆ ತಾಯಿ ಮನೆಯೊಳಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ಕೋಪಗೊಂಡ ಲಾಲ್ ದೊಣ್ಣೆ ತೆಗೆದುಕೊಂಡು ಇಬ್ಬರಿಗೂ ಹೊಡೆಯಲು ಆರಂಭಿಸಿದ್ದಾನೆ. ಈ ವೇಳೆ ಪತ್ನಿ ಪಕ್ಕದ ಮನೆಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಆದರೆ ಅಮೃತ್ ಲಾಲ್ ತಾಯಿಯನ್ನು ದೊಣ್ಣೆಯಿಂದ ಹೊಡೆದು ಸ್ಥಳದಲ್ಲೇ ಕೊಂದು ಹಾಕಿದ್ದಾನೆ.

    ಇದಾದ ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಘಟನಾ ಸ್ಥಳದಲ್ಲೇ ಇದ್ದ ಅಮೃತ್ ಲಾಲ್ ನನ್ನು ಬಂಧಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.