Tag: alcohol

  • ಇನ್ನೊಂದು ಪೆಗ್ ಬೇಡ ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ ಸ್ನೇಹಿತ

    ಇನ್ನೊಂದು ಪೆಗ್ ಬೇಡ ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ ಸ್ನೇಹಿತ

    – ಎಣ್ಣೆ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ

    ಲಕ್ನೋ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಪೀರ್ಖೇಡಾ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಪೊಲೀಸರು ಶುಕ್ರವಾರ ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

    ಐದು ದಿನಗಳ ಹಿಂದೆ ಜಸ್ಬೀರ್‍ನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಮದ್ಯ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು. 60 ವರ್ಷದ ಜಸ್ಬೀರ್‍ನನ್ನು ಆತನ ಸ್ನೇಹಿತ ಮದ್ಯ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯನ್ನು 55 ವರ್ಷದ ಕೃಷ್ಣಪಾಲ್ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಅನುಮಾನದ ಮೇರೆಗೆ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಜಸ್ಬೀರ್‍ಗೆ ಪೆಗ್ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.

  • ಫಸ್ಟ್ ನೈಟ್‍ನಲ್ಲೇ ಗಂಡ ಫುಲ್ ಟೈಟ್ – ಒಂದೇ ತಿಂಗಳಿಗೆ ಪತಿ ವಿರುದ್ಧ ಪತ್ನಿ ದೂರು

    ಫಸ್ಟ್ ನೈಟ್‍ನಲ್ಲೇ ಗಂಡ ಫುಲ್ ಟೈಟ್ – ಒಂದೇ ತಿಂಗಳಿಗೆ ಪತಿ ವಿರುದ್ಧ ಪತ್ನಿ ದೂರು

    – ಗಂಡನಿಂದ ಕಿರುಕುಳ, ಮಂತ್ರವಾದಿಗಳಿಂದ ಛಾಟಿಯೇಟು
    – ಮೊದ್ಲ ಮದ್ವೆ ಮುಚ್ಚಿಟ್ಟು 2ನೇ ಮದ್ವೆಯಾಗಿರೋ ಆರೋಪಿ

    ಬೆಂಗಳೂರು: ಮದುವೆ ಆದ ದಿನವೇ ಪತ್ನಿಗೆ ಪತಿರಾಯ ಕಿರುಕುಳ ನೀಡಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    2020ರ ಅಕ್ಟೋಬರ್ 29ರಂದು ಭರತ್ ಎಂಬಾತನ ಜೊತೆಗೆ ಯುವತಿಯ ಮದುವೆಯಾಗಿದೆ. ಮೊದಲ ರಾತ್ರಿಯೇ ಪತಿ ಕಂಠಪೂರ್ತಿ ಕುಡಿದುಕೊಂಡು ಬಂದಿದ್ದ. ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಪತಿಯನ್ನು ನೋಡಿದ ಪತ್ನಿ ಅಂತರ ಕಾಯ್ದುಕೊಂಡಿದ್ದಳು. ಈ ವಿಚಾರ ತಿಳಿದ ಪತಿ ಮನೆಯವರು ಸೊಸೆಗೆ ದೆವ್ವ ಬಂದಿದೆ ಅಂತ ಕಿರುಕುಳ ನೀಡಲು ಆರಂಭಿಸಿದ್ದಾರೆ.

    ಮಂಚದ ಕೆಳಗೆ ನಿಂಬೆಹಣ್ಣು ಇಡುವುದು. ಮಾಟಮಂತ್ರ ಮಾಡಿಸುವವರ ಕೈಯಲ್ಲಿ ಛಾಟಿಯಿಂದ ಹೊಡೆಸುವುದು. ತಲೆ ಮೇಲೆ ನಿಂಬೆ ಹಣ್ಣು ಕೊಯ್ಯುವುದು, ಮುಖಕ್ಕೆ ಬೂದಿ ಹಾಕುವುದು, ಬೂದಿಯನ್ನು ಅನ್ನದಲ್ಲಿ ಮಿಕ್ಸ್ ಮಾಡಿ ತಿನ್ನಿಸುವುದು ಮಾಡಿದ್ದಾರೆ. ಇವೆಲ್ಲದಕ್ಕೆ ವಿರೋಧಿಸಿದ್ರೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡುವುದು. ಇಷ್ಟು ಮಾತ್ರವಲ್ಲದೆ ನಿನ್ನ ಇಲ್ಲೇ ಸಾಯಿಸುತ್ತೇವೆ ಅಂತ ಊಟ ನೀಡದೇ ಪತಿ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡುತ್ತಿದ್ದರು.

    ಪತಿ ಮನೆಯವರ ಕಿರುಕುಳದಿಂದ ಬೇಸತ್ತ ನವವಿವಾಹಿತೆ ಹೆಚ್‍ಎಎಲ್ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಯುವತಿಯ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿ ಭರತ್ ರೆಡ್ಡಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಮದುವೆ ಮುಚ್ಟಿಟ್ಟು 2ನೇ ಮದುವೆಯಾಗಿರುವುದು ಬಯಲಾಗಿದೆ.

  • ಭಿಕ್ಷೆ ಬೇಡುವಂತೆ ತಂದೆಯಿಂದಲೇ 11 ವರ್ಷದ ಬಾಲಕನಿಗೆ ಒತ್ತಡ- 200 ರೂ. ಸಂಗ್ರಹಿಸದ್ದಕ್ಕೆ ಹಲ್ಲೆ

    ಭಿಕ್ಷೆ ಬೇಡುವಂತೆ ತಂದೆಯಿಂದಲೇ 11 ವರ್ಷದ ಬಾಲಕನಿಗೆ ಒತ್ತಡ- 200 ರೂ. ಸಂಗ್ರಹಿಸದ್ದಕ್ಕೆ ಹಲ್ಲೆ

    – ಬಾಲ ಸಹಾಯವಾಣಿಗೆ ಕರೆ ಮಾಡಿ ವಿದ್ಯಾರ್ಥಿ ಅಳಲು

    ಜೈಪುರ: ತನ್ನ 11 ವರ್ಷದ ಮಗನಿಗೆ ಭಿಕ್ಷೆ ಬೇಡುವಂತೆ ಒತ್ತಾಯಿಸಿದ್ದು, ಹಣ ಸಂಗ್ರಹಿಸಿಕೊಂಡು ಬಾರದ್ದಕ್ಕೆ ಮನಬಂದಂತೆ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ತಂದೆಯ ವಿಕೃತ ವರ್ತನೆಯಿಂದ ಬೇಸತ್ತು 11 ವರ್ಷದ ವಿದ್ಯಾರ್ಥಿ ಬಾಲ ಸಹಾಯವಾಣಿಗೆ ಕರೆ ಮಾಡಿದ್ದಾನೆ. ನಂತರ ಪಾಪಿ ತಂದೆಯನ್ನು ಬಂಧಿಸಲಾಗಿದೆ. ಬಾಲ ಸಹಾಯವಾಣಿಯ ಸ್ವಯಂ ಸೇವಕರು ಬಾಲಕನನ್ನು ರಕ್ಷಿಸಿದ್ದಾರೆ. ಸೋಮವಾರ ವಿದ್ಯಾರ್ಥಿ ಬಾಲ ಸಹಾಯವಾಣಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದಾನೆ. ನಂತರ ಸಂಸ್ಥೆಯ ಸದಸ್ಯರು ಗಂಜ್ ಪೊಲೀಸರಿಗೆ ಘಟನೆ ಕುರಿತು ವಿವರಿಸಿದ್ದಾರೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದ ಮೇಲೆ ಗಾಯದ ಗುರುತುಗಳಾಗಿದ್ದಕ್ಕೆ ಚಿಕಿತ್ಸೆ ನೀಡಿದ್ದಾರೆ.

    ತಂದೆ ಮಗನನ್ನು ಶಾಲೆಗೆ ಕಳುಹಿಸುತ್ತಿದ್ದ ಅಲ್ಲದೆ ಕೊರೊನಾ ಅವಧಿಯಲ್ಲಿ ಆನ್‍ಲೈನ್ ತರಗತಿಗೂ ಕಳುಹಿಸಿದ್ದ. ದರೂ ಭಿಕ್ಷೆ ಬೇಡುವಂತೆ ಬಾಲಕನಿಗೆ ಒತ್ತಾಯಿಸುತ್ತಿದ್ದ. 11 ವರ್ಷದ ಬಾಲಕ ಭಿಕ್ಷೆ ಬೇಡಿ 200ರೂ. ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆ ಆರೋಪಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ.

    ಭಾನುವಾರ ಆರೋಪಿ ಅಪ್ರಾಪ್ತ ಭಾಲಕನನ್ನು ಕೋಲಿನಿಂದ ಥಳಿಸಿದ್ದು, ಗಲಾಟೆ ಮಾಡದಂತೆ ಬೆದರಿಸಿದ್ದಾನೆ. ಮರುದಿನ ಬಾಲಕ ಬಾಲ ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಬಾಲಕನನ್ನು ರಕ್ಷಿಸಲಾಗಿದೆ.

    ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. 11 ವರ್ಷದ ಬಾಲಕನನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಾಳೆ. ತಂದೆ ಮದ್ಯ ವ್ಯಸನಿಯಾಗಿದ್ದಾನೆ. ತಂದೆ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಬಾಲಕ ವಿವರಿಸಿದ್ದಾನೆ. ಅಲ್ಲದೆ ಮದ್ಯ ಸೇವಿಸಲು ಹಣವಿಲ್ಲದ ಕಾರಣ ಆರೋಪಿ ತನ್ನ ಮಗನನ್ನೇ ಭಿಕ್ಷೆ ಬೇಡಲು ಕಳುಹಿಸಿದ್ದಾನೆ.

  • ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೊಟ್ಟವನನ್ನೇ ಕೊಚ್ಚಿ ಕೊಂದ

    ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೊಟ್ಟವನನ್ನೇ ಕೊಚ್ಚಿ ಕೊಂದ

    – ತನಗೆ ತಂದಿದ್ದ ಊಟ ನೀಡಿದ್ದ ಯುವಕ

    ಮಂಡ್ಯ: ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೇಳಿ ಪಡೆದುಕೊಂಡ. ಕೊನೆಗೆ ಎಣ್ಣೆ ಮತ್ತು ಊಟ ಕೊಟ್ಟವನನ್ನೇ ಗುಂಪು ಕಟ್ಟಿಕೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ನಿವಾಸಿ ಪೂರ್ಣಚಂದ್ರ (28) ಎಂಬಾತನನ್ನು ಲಾಂಗು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಕ್ಕನಹಳ್ಳಿ ಗ್ರಾಮದ ವಿನಯ್ ಹಾಗೂ ಆತನ 6 ಮಂದಿ ಸ್ನೇಹಿತರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಘಟನೆ ಶುಕ್ರವಾರ ರಾತ್ರಿ ಶ್ರೀರಂಗಪಟ್ಟಣದ ಶ್ರೀರಾಂಪುರ ಬಳಿಯ ಕ್ರಷರ್ ಬಳಿ ನಡೆದಿದ್ದು, ಈ ಘಟನೆಯಿಂದ ಶ್ರೀರಂಗಪಟ್ಟಣ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದ ರಾತ್ರಿ ಕೊಲೆಯಾದ ಪೂರ್ಣಚಂದ್ರ ಹಾಗೂ ಆತನ ಸ್ನೇಹಿತರಾದ ಪವನ್, ಚಾಮರಾಜ ಜೊತೆ ಜಕ್ಕನಹಳ್ಳಿಯ ಅಂಗಡಿಯ ಬಳಿ ಗೇಮ್ ಆಡಿಕೊಂಡು ಕಾಲ ಕಳೆಯುತ್ತಿದ್ದನು. ನಂತರ ಕ್ರಷರ್ ಬಳಿ ಸ್ನೇಹಿತರೊಂದಿಗೆ ಹೋಗಿ ಸ್ವಲ್ಪ ಹೊತ್ತು ಟೈಮ್ ಪಾಸ್ ಮಾಡಿಕೊಂಡು ನಂತರ ಪೂರ್ಣಚಂದ್ರ ಊಟಕ್ಕೆ ಕುಳಿತಿದ್ದನು.

    ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ವಿನಯ್ ಎಣ್ಣೆ ಕೇಳಿದ್ದಾನೆ. ಆಗ ಪೂರ್ಣಚಂದ್ರ ಕ್ರಷರ್ ಸಿಬ್ಬಂದಿಗೆ ತಂದಿದ್ದ ಬಿಯರ್ ಕೊಟ್ಟಿದ್ದಾನೆ. ಇದಾದ ಬಳಿಕ ಆರೋಪಿ ವಿನಯ್ ಊಟ ಕೇಳಿದ್ದು, ಕೊನೆಗೆ ತನಗೆ ತಂದಿದ್ದ ಚಪಾತಿಯನ್ನು ನೀಡಿದ್ದಾನೆ. ನಂತರ ಚಪಾತಿ ತಿಂದು, ಎಣ್ಣೆ ಕುಡಿದು ಆರೋಪಿ ಹೋಗಿದ್ದಾನೆ. ಹತ್ತು ನಿಮಿಷದ ನಂತರ ವಿನಯ್ ಗುಂಪಿನಲ್ಲಿ ಬಂದು ಪೂರ್ಣಚಂದ್ರನ ಜೊತೆಗೆ ಇದ್ದವರನ್ನು ಎದುರಿಸಿ ಪೂರ್ಣಚಂದ್ರನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

    ಕೊಲೆಗೆ ಇನ್ನೂ ನಿಖರ ತಿಳಿದು ಬಂದಿಲ್ಲ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಮದ್ಯದಲ್ಲಿ ಕೀಟನಾಶಕ ಬೆರೆಸಿದ ಪತ್ನಿ – ಗಂಡನ ಜೊತೆ ಸ್ನೇಹಿತನೂ ಸಾವು

    ಮದ್ಯದಲ್ಲಿ ಕೀಟನಾಶಕ ಬೆರೆಸಿದ ಪತ್ನಿ – ಗಂಡನ ಜೊತೆ ಸ್ನೇಹಿತನೂ ಸಾವು

    – ಪ್ರೀತಿಸಿ ಮದ್ವೆಯಾಗಿದ್ದ ಪತಿಯನ್ನೇ ಕೊಂದ್ಳು
    – ಮರುದಿನ ಕುಡಿಯಲೆಂದು ಎಣ್ಣೆ ತಂದಿದ್ದ

    ಹೈದರಾಬಾದ್: ಮಹಿಳೆಯೊಬ್ಬಳು ಪತಿಯ ಕಿರುಕುಳವನ್ನು ಸಹಿಸಲಾಗದೆ ಅವನು ತಂದಿದ್ದ ಮದ್ಯದಲ್ಲಿ ಕೀಟನಾಶಕವನ್ನು ಬೆರೆಸಿದ್ದಾಳೆ. ಆದರೆ ಪತಿಯ ಜೊತೆ ಆತನ ಗೆಳೆಯನೂ ಮದ್ಯ ಕುಡಿದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಭೀಮವರಂ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಬಾಲರಾಜು ಮತ್ತು ಆತನ ಸ್ನೇಹಿತ ವೆಂಕಟರತ್ನಂ ನಾಯ್ಡು ಎಂದು ಗುರುತಿಸಲಾಗಿದೆ. ಬಾಲರಾಜು ಪತ್ನಿ ಮಲ್ಯಮ್ಮ ಮದ್ಯದಲ್ಲಿ ಕೀಟನಾಶಕ ಬೆರೆಸಿ ಪತಿಯನ್ನು ಕೊಲೆ ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಜೆ.ಬಾಲರಾಜು ಹತ್ತು ವರ್ಷಗಳ ಹಿಂದೆ ಮಲ್ಯಮ್ಮಳನ್ನು ಪ್ರೀತಿಸಿ ಮದುವೆಯಾಗಿದ್ದನು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದ ಕೆಲ ವರ್ಷಗಳ ಕಾಲ ಮೃತ ಬಾಲರಾಜು ಪತ್ನಿಯನ್ನು ಚೆನ್ನಾಗಿ ನೋಡಿಕೊಂಡಿದ್ದನು. ಆದರೆ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕುಡಿತದ ದಾಸನಾಗಿದ್ದ ಮೃತ ಬಾಲರಾಜು ತನ್ನ ಹೆಂಡತಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದ್ದನು.

    ಇತ್ತೀಚಿಗೆ ಬಾಲರಾಜು ಹೆಚ್ಚಾಗಿ ಮಲ್ಯಮ್ಮಳನ್ನು ಹಿಂಸಿಸುತ್ತಿದ್ದನು. ಕೊನೆಗೆ ಪತಿಯ ಕಿರುಕುಳವನ್ನು ಸಹಿಸಲಾಗದೆ ಮಲ್ಯಮ್ಮ ತನ್ನ ಗಂಡನನ್ನು ಕೊಲ್ಲಲು ನಿರ್ಧರಿಸಿದ್ದಳು. ಅದರಂತೆಯೇ ಸೆ.23 ರಂದು ಬಾಲರಾಜು ಅತಿಯಾಗಿ ಕುಡಿದು ಮನೆಗೆ ಬಂದಿದ್ದನು. ಜೊತೆಗೆ ಮರುದಿನ ಕುಡಿಯಲು ಮದ್ಯದ ಬಾಟಲ್ ತೆಗೆದುಕೊಂಡು ಮನೆಗೆ ಬಂದಿದ್ದನು. ಆರೋಪಿ ಮಲ್ಯಮ್ಮ ಪ್ಲಾನ್ ಮಾಡಿ ಅದೇ ಮದ್ಯಕ್ಕೆ ಕೀಟನಾಶಕ ಬೆರೆಸಿದ್ದಳು.

    ಮರುದಿನ ಬಾಲರಾಜು ಮನೆಯಲ್ಲಿಯೇ ಕುಳಿತಿಕೊಂಡು ಮದ್ಯಪಾನ ಮಾಡುತ್ತಿದ್ದನು. ಈ ವೇಳೆ ಆತನ ಗೆಳೆಯ ವೆಂಕಟರತ್ನಂ ನಾಯ್ಡು ಮನೆಗೆ ಬಂದಿದ್ದನು. ಆಗ ಕೀಟನಾಶಕ ಬೆರೆಸಿರುವುದು ಗೊತ್ತಿಲ್ಲದೆ ಇಬ್ಬರು ಮದ್ಯವನ್ನು ಕುಡಿದಿದ್ದಾರೆ. ಮದ್ಯಪಾನ ಮಾಡಿದ ನಂತರ ಇಬ್ಬರೂ ಅಸ್ವಸ್ಥರಾಗಿದ್ದಾರೆ. ನಂತರ ಆಕೆಯೇ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ ಮದ್ಯ ಕುಡಿದು ಮೃತಪಟ್ಟಿದ್ದಾರೆ ಎಂದು ಆರೋಪಿ ಮಲ್ಯಮ್ಮ ಪೊಲೀಸರ ಮುಂದೆ ಸುಳ್ಳು ಹೇಳಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೀಟನಾಶಕದಿಂದ ಸಾವನ್ನಪ್ಪಿರುವುದು ಬಹಿರಂಗವಾಗಿದೆ. ಕೂಡಲೇ ಆಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಪತಿ ತುಂಬಾ ಹಿಂಸೆ ನೀಡುತ್ತಿದ್ದನು. ಜೊತೆಗೆ ನನ್ನ ಮಕ್ಕಳ ಭವಿಷ್ಯಕ್ಕಾಗಿ ಆತನನ್ನು ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

  • ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿ ಫೋಟೋ ಕ್ಲಿಕ್ – ಬ್ಲ್ಯಾಕ್‍ಮೇಲ್

    ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿ ಫೋಟೋ ಕ್ಲಿಕ್ – ಬ್ಲ್ಯಾಕ್‍ಮೇಲ್

    – ಪಬ್, ಬಾರ್‌ಗೆ ಕರ್ಕೊಂಡು ಹೋಗ್ತಿದ್ದ
    – ದಪ್ಪ ಇದ್ದೀಯಾ ಎಂದು ಹಿಂಸೆ

    ಬೆಂಗಳೂರು: ಪತಿ ಪ್ರತಿದಿನ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದು, ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಗಂಡನ ವಿರುದ್ಧ ದೂರು ದಾಖಲಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    27 ವರ್ಷದ ಮಹಿಳೆ ಪತಿಯ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ರವೀಂದ್ರನಾಥನ್ ಎಂದು ಗುರುತಿಸಲಾಗಿದೆ. 2 ವರ್ಷದ ಹಿಂದೆ ಮಹಿಳೆ ರವೀಂದ್ರನಾಥನ್ ಜೊತೆ ಮದುವೆಯಾಗಿದ್ದು, ಬೆಂಗಳೂರಿನ ಚಿಕ್ಕಮಾವಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

    ಮದುವೆ ನಂತರ ನಾವು ಅನ್ಯೋನ್ಯವಾಗಿದ್ದೆವು. ಆದರೆ ದಿನ ಕಳೆದಂತೆ ಪತಿ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದನು. ಮನೆಯಲ್ಲಿಯೇ ಪ್ರತಿದಿನ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದನು. ಒಂದು ವೇಳೆ ನಾನು ಮದ್ಯಪಾನ ಮಾಡಲು ನಿರಾಕರಿಸಿದರೆ ಥಳಿಸುತ್ತಿದ್ದನು. ಅಷ್ಟೇ ಅಲ್ಲದೇ ಪತಿ ಆಗಾಗ ನನ್ನನ್ನು ಬಾರ್ ಮತ್ತು ಪಬ್‍ಗಳಿಗೆ ಕರೆದುಕೊಂಡು ಹೋಗುತ್ತಿದ್ದನು. ಅಲ್ಲಿಯೂ ಸಹ ಬಲವಂತವಾಗಿ ಮದ್ಯಪಾನ ಮಾಡಿಸುತ್ತಿದ್ದನು ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪತಿ ನನ್ನ ಫೋಟೋಗಳನ್ನು ತನ್ನ ಫೋನಿನಲ್ಲಿ ತೆಗೆದುಕೊಳ್ಳುತ್ತಿದ್ದನು. ನಂತರ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದಕರಿಗೆ ಹಾಕಿದ್ದಾನೆ. ಅಲ್ಲದೇ ಕೆಲಸಕ್ಕೆ ಹೋಗಿ ಮನೆಯ ಖರ್ಚುಗಳನ್ನು ನೀನೆ ನೋಡಿಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.

    ಆರೋಪಿ ರವೀಂದ್ರನಾಥನ್ ಮಹಿಳೆಗೆ ನೀನು ದಪ್ಪಗಿದ್ದೀಯಾ, ನೋಡಲು ಚೆನ್ನಾಗಿಲ್ಲ ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಸದ್ಯಕ್ಕೆ ಮಹಿಳೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಆರೋಪಿ ರವೀಂದ್ರನಾಥನ್ ವಿರುದ್ಧ ದೂರು ದಾಖಲಾಗಿದ್ದು, ಬಸವನಗುಡಿ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

  • ಐದು ತಿಂಗಳ ಬಳಿಕ ಕೊಡಗಿನಲ್ಲಿ ಬಾರ್ ಓಪನ್- ಮದ್ಯಪ್ರಿಯರು ಫುಲ್ ಖುಷ್

    ಐದು ತಿಂಗಳ ಬಳಿಕ ಕೊಡಗಿನಲ್ಲಿ ಬಾರ್ ಓಪನ್- ಮದ್ಯಪ್ರಿಯರು ಫುಲ್ ಖುಷ್

    ಮಡಿಕೇರಿ: ಕೊರೊನಾದಿಂದಾಗಿ ಐದು ತಿಂಗಳಿಂದಲೂ ಮುಚ್ಚಿದ್ದ ಬಾರ್ ಗಳು ಇಂದು ಮತ್ತೆ ಓಪನ್ ಆಗಿರುವುದಕ್ಕೆ ಮದ್ಯಪ್ರಿಯರು ಫುಲ್ ಖುಷಿಯಾಗಿದ್ದಾರೆ. ಬಾರ್ ಗಳು ಓಪನ್ ಆಗುತ್ತಿದ್ದಂತೆ ಮದ್ಯಪ್ರಿಯರು ಸ್ನೇಹಿತರೊಂದಿಗೆ ಬಾರ್ ಗಳತ್ತ ಮುಖ ಮಾಡಿದ್ದಾರೆ.

    ಇಷ್ಟು ದಿನ ಬಾರ್ ಗಳು ಮುಚ್ಚಿದ್ದರಿಂದ ಲಿಕ್ಕರ್ ಶಾಪ್ ಗಳಿಂದ ಇಷ್ಟ ಬಂದ ಬ್ರಾಂಡ್ ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಮನೆಯಲ್ಲಿ ಒಬ್ಬರೇ ಕುಳಿತು ಕುಡಿಯಬೇಕಿತ್ತು. ಇದರಿಂದ ಯಾವುದೇ ರೀತಿಯ ಮಜಾ ಎನಿಸುತ್ತಿರಲಿಲ್ಲ. ಆದರೆ ಈಗ ಬಾರ್ ಓಪನ್ ಆಗಿರುವುದರಿಂದ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಹೊಡೆಯೋದೆ ಮಜಾ ಎನ್ನುತ್ತಿದ್ದಾರೆ ಮದ್ಯಪ್ರಿಯರು.

    ಇಂದಿನಿಂದ ಶೇಕಡ 50 ರಷ್ಟು ಗ್ರಾಹಕರಿಗೆ ಅವಕಾಶ ನೀಡಿ, ಬಾರ್ ಓಪನ್ ಆಗಿರುವ ಹಿನ್ನೆಲೆಯಲ್ಲಿ ಅಷ್ಟೇ ಗ್ರಾಹಕರಿಗೆ ಅವಕಾಶ ನೀಡಿ ಬಾರ್ ತೆರೆಯಲಾಗಿದ್ದು, ಕೊಡಗಿನಲ್ಲಿ ಮದ್ಯಪ್ರಿಯರು ಬಾರ್ ಗಳಲ್ಲಿ ಕುಳಿತು ಸ್ನೇಹಿತರೊಂದಿಗೆ ಎಣ್ಣೆ ಎಂಜಾಯ್ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದ ಕಷ್ಟ ಸುಖಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಖುಷಿ ಖುಷಿಯಾಗಿ ಬಾರ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ.

  • ಪತ್ನಿಯ ಎದೆ, ಕೈ, ಕುತ್ತಿಗೆ, ಗುಪ್ತಾಂಗವನ್ನು ಕಚ್ಚಿ ಕೊಲೆಗೈದ ಅಂಧ ಪತಿ

    ಪತ್ನಿಯ ಎದೆ, ಕೈ, ಕುತ್ತಿಗೆ, ಗುಪ್ತಾಂಗವನ್ನು ಕಚ್ಚಿ ಕೊಲೆಗೈದ ಅಂಧ ಪತಿ

    ಕೋಲಾರ: ಕುಡಿದ ಅಮಲಿನಲ್ಲಿದ್ದ ಅಂಧ ಪತಿಯೊಬ್ಬ ಪತ್ನಿಗೆ ದೈಹಿಕವಾಗಿ ಹಿಂಸೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೋರಹೊಸ ಹಳ್ಳಿಯಲ್ಲಿ ನಡೆದಿದೆ.

    ರತ್ನಮ್ಮ (28) ಕೊಲೆಯಾದ ದುರ್ದೈವಿ. ಪತಿ ಮಂಜುನಾಥ್ ಕುಡಿದ ಅಮಲಿನಲ್ಲಿ ಪತ್ನಿಯ ಎದೆ, ಮೈ-ಕೈ, ಕುತ್ತಿಗೆ, ಗುಪ್ತಾಂಗವನ್ನ ಬಾಯಿಂದ ಕಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಮಂಜುನಾಥ್ ರೈಲು ನಿಲ್ದಾಣ ಹಾಗೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಡತನದ ಮಧ್ಯೆ ಜೀವನ ನಡೆಸುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಗಾಯಗೊಂಡು ಬಿದ್ದಿದ್ದ ಹೆಂಡತಿಯನ್ನ ಮನೆಯೊಳಗೆ ಬಿಟ್ಟು, ಮಕ್ಕಳನ್ನ ಮನೆಯಿಂದ ಹೊರ ಹಾಕಿ ಪರಾರಿಯಾಗಿದ್ದಾನೆ.

    ರತ್ನಮ್ಮ ಸಂಬಂಧಿಕರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಂಜುನಾಥ್‍ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ತಂದೆಯ ಅವಾಂತರದಿಂದ ಇಬ್ಬರು ಮಕ್ಕಳು ಕೂಡ ಈಗ ಅನಾಥವಾಗಿದ್ದಾರೆ.

    ಕೊರೊನಾ ಲಾಕ್‍ಡೌನ್ ಆಗಿ ರೈಲುಗಳಿಲ್ಲದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಿಕ್ಷೆ ಬೇಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೇ ನೆರೆಹೊರೆಯವರ ಮೇಲೂ ರೌಡಿಯಿಸಂ ತೋರಿಸುತ್ತಿದ್ದನು. ನಾಲ್ಕು ದಿನಗಳಿಂದ ಪತ್ನಿಯ ಎದೆಯನ್ನ, ಮೈ-ಕೈ ಹಾಗೂ ಗುಪ್ತಾಂಗವನ್ನ ಕಚ್ಚಿ ಗಾಯಗೊಳಿಸುತ್ತಿದ್ದನು. ಅಲ್ಲದೇ ತಲೆಗೆ ಹೊಡೆದು ಗಾಯಗೊಳಿಸಿದರ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಗ್ರಾಮದ ಮಹಿಳೆಯೊಬ್ಬರು ಹೇಳಿದ್ದಾರೆ.

    ಆರೋಪಿ ಅಂಗವಿಕಲನೂ ಎನ್ನದೆ ಆತನಿಗೆ ಶಿಕ್ಷೆಯಾಗಬೇಕು. ಮಗನಿಗೆ ಸಾಥ್ ನೀಡುತ್ತಿದ್ದ ತಾಯಿಯನ್ನು ಬಂಧಿಸಿ ಎಂದು ಗ್ರಾಮದ ಮಹಿಳೆಯರು ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಮನವಿ ಸಲ್ಲಿಸಿದರು ಸದ್ಯಕ್ಕೆ ಆರೋಪಿ ಪತಿ ಮಂಜುನಾಥ್‍ನನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಇಲ್ಲಿ ಕುಡಿಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು 150 ಪೀಸ್ ಮಾಡಿ, ಕಾಲು ಪುಡಿಗೈದು, ತಲೆ ಜಜ್ಜಿದರು!

    ಇಲ್ಲಿ ಕುಡಿಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು 150 ಪೀಸ್ ಮಾಡಿ, ಕಾಲು ಪುಡಿಗೈದು, ತಲೆ ಜಜ್ಜಿದರು!

    ರಾಯ್ಪುರ: ಮನೆಯ ಮುಂದೆ ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ 60 ವರ್ಷದ ವ್ಯಕ್ತಿಯನ್ನು 20ರ ಆಸುಪಾಸಿನ ಯುವಕರಿಬ್ಬರು ಭಯಾನಕವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್ ಗಢದ ಭಿಲೈ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿ ರಾಮ್ ಚೌಹಾಣ್ ಅವರನ್ನು ದುರ್ಗೇಶ್ ಸಾಹು ಹಾಗೂ ಲೋಕೇಶ್ ಸಾಹು ಭೀಕರವಾಗಿ ಹತ್ಯೆ ಮಾಡಿದ್ದಾರೆ. ರಾಮ್ ಚೌಹಾಣ್ ದೇಹವನ್ನು ಬ್ಲೇಡ್ ಮೂಲಕ 150 ಪೀಸ್ ಮಾಡಿದ್ದಾರೆ. ಕಾಲುಗಳನ್ನು ಪುಡಿಗೈದು, ತಲೆಯನ್ನು ಜಜ್ಜಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಮ್ ಚೌಹಾನ್ ಅವರು ಎಂದಿನಂತೆ ರಾತ್ರಿ ಊಟ ಮಗಿಸಿ ಮನೆಯ ಹೊರಗಡೆ ವಾಕ್ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಇಬ್ಬರು ಯುವಕರು ಸಿಗರೇಟ್ ಸೇದುತ್ತಾ, ಮದ್ಯಪಾನ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ತೆರಳಿ ಇಲ್ಲಿ ಮದ್ಯಪಾನ ಮಾಡಬೇಡಿ. ಬೇರೆ ಕಡೆ ಹೋಗಿ ಎಂದು ಹೇಳಿದ್ದಾರೆ.

    ವ್ಯಕ್ತಿಯ ಮಾತಿನಿಂದ ರೊಚ್ಚಿಗೆದ್ದ ಯುವಕರು ವಾಗ್ದಾಳಿ ನಡೆಸಿದರು. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಕುಡಿದ ಮತ್ತಿನಲ್ಲಿದ್ದ ಯುವಕರು ವ್ಯಕ್ತಿಯನ್ನು ಮನೆಯೊಳಗಡೆ ಕೂಡಿ ಹಾಕಿ ಕೊಲೆ ಮಾಡಿದ್ದಾರೆ.

    ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವ್ಯಕ್ತಿ ನಮ್ಮನ್ನು ಇಲ್ಲಿ ಕುಡಿಬೇಡಿ ಅಂದಾಗ ಅವರ ಮಾತನ್ನು ಕೇಳಲು ನಿರಾಕರಿಸಿದೆವು. ಈ ವೇಳೆ ಅವರು ನಮಗೆ ಹೊಡೆದರು. ಇದರಿಂದ ರೊಚ್ಚಿಗೊದ್ದು, ವ್ಯಕ್ತಿಯನ್ನು ಮನೆಯೊಳಗೆ ತಳ್ಳಿ ಬಾಗಿಲು ಹಾಕಿದೆವು ಎಂದಿದ್ದಾರೆ. ಅಲ್ಲದೆ ಮನೆಯೊಳಗೆ ಇದ್ದ ಮಗನನ್ನು ಬೆದರಿಕೆ ಹಾಕಿ ಹೊರಗೆ ಕಳುಹಿಸಿದ್ದಾರೆ. ಬಳಿಕ ಇಬ್ಬರಲ್ಲಿ ಒಬ್ಬ ಬ್ಲೇಡ್ ತೆಗೆದುಕೊಂಡು ವ್ಯಕ್ತಿಯನ್ನು ಕತ್ತರಿಸಲು ಆರಂಭಿಸಿದ್ದಾನೆ. ಇನ್ನೊಬ್ಬ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಬಂದು ವ್ಯಕ್ತಿಯ ಕಾಲುಗಳನ್ನು ಪುಡಿಗೈದಿದ್ದಾನೆ. ನಂತರ ತಲೆಗೆ ಇಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.

    ವ್ಯಕ್ತಿಯನ್ನು ಕೊಲೆಗೈದ ನಂತರ ಮನೆಯಿಂದ ಹೊರ ಬಂದ ಆರೋಪಿಗಳು, ಭಯಭೀತನಾಗಿದ್ದ ಮಗನ ಬಳಿ ಹೋದರು. ಅಲ್ಲದೆ ಆತನ ಎದುರು ಚೌಹಾನ್ ಕೊಲೆ ಮಾಡಿರುವುದಾಗಿ ಕೂಗಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನನ್ನು ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ. ಆರೋಪಿಗಳಿಬ್ಬರೂ ಮದ್ಯದ ನಶೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಬಕಾರಿ ಸಚಿವ ನಾಗೇಶ್ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

    ಅಬಕಾರಿ ಸಚಿವ ನಾಗೇಶ್ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

    – ಲಾಕ್‍ಡೌನ್ ವೇಳೆ ರಾಜ್ಯದಲ್ಲೇ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ

    ಕೋಲಾರ: ಜಿಲ್ಲೆಯಲ್ಲಿ ಶಾಶ್ವತ ಕುಡಿಯೋ ನೀರಿಗೂ ಬರ ಇದೆ. ಆದರೆ ಕೊರೊನಾ ಸಂಕಷ್ಟದ ಮಧ್ಯೆ ಮದ್ಯ ಮಾರಾಟಕ್ಕೆ ಬರವಿಲ್ಲ ಅನ್ನೋ ಅಂಶವೊಂದು ಬಯಲಾಗಿದೆ. ಲಾಕ್‍ಡೌನ್ ಬಳಿಕ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದ್ದು, ರಾಜ್ಯದಲ್ಲೆ ಎಣ್ಣೆ ಸಚಿವರ ತವರು ಜಿಲ್ಲೆ ಅಕ್ರಮ ಮದ್ಯ ಮಾರಾಟದಲ್ಲಿ 1 ನೇ ಸ್ಥಾನ ಪಡೆದಿದೆ.

    ಕೋಲಾರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿಗೆ ಇಲ್ಲಿ ಬರವಿದೆ. ಆದರೆ ಅಬಕಾರಿ ಸಚಿವ ಹೆಚ್.ನಾಗೇಶ್ ತಮ್ಮ ಒಂದು ವರ್ಷದ ಅವಧಿಯಲ್ಲೆ ತನ್ನ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡುವ ಮೂಲಕ ವಿನೂತನ ರೀತಿಯ ಸಾಧನೆ ಮಾಡಿದ್ದಾರೆ.

    ಹೌದು. ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಕೋಲಾರ ಜಿಲ್ಲೆಯಲ್ಲಿ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದೆ. ಕಳೆದ ಜುಲೈ ತಿಂಗಳಿಗೂ 2020 ರ ಜುಲೈ ತಿಂಗಳಲ್ಲಿ 66 ಸಾವಿರ ಮದ್ಯದ ಬಾಕ್ಸ್ ಗಳು ಹೆಚ್ಚಾಗಿ ಮಾರಾಟವಾಗಿದೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಆಂಧ್ರಪ್ರದೇಶದಲ್ಲಿ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುತ್ತಿರುವುದು ಹಾಗೂ ರಾಜ್ಯದ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವುದೇ ಮದ್ಯ ಮಾರಾಟ ಹೆಚ್ಚಾಗುವುದಕ್ಕೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆಂಧ್ರ ಹಾಗೂ ತಮಿಳುನಾಡು ಗಡಿಗಳಲ್ಲಿ ಹೆಚ್ಚಾಗಿ ಮದ್ಯದಂಗಡಿಗಳು ತಲೆ ಎತ್ತಿದ್ದು, ನೆರೆಯ ಮದ್ಯ ಪ್ರಿಯರನ್ನ ಆಕರ್ಷಿಸುತ್ತಿರುವುದೇ ಮತ್ತೊಂದು ಕಾರಣ.

    ನೆರೆಯ ಆಂಧ್ರ ಹಾಗೂ ತಮಿಳುನಾಡು ರಾಜ್ಯದ ಬಾರ್‍ಗಳು ಗಡಿಯಿಂದ ದೂರಕ್ಕೆ ಇದ್ದು, ಮದ್ಯ ಪ್ರಿಯರು ಹೋಗಿ ಬರಲು ಕಷ್ಟ. ರಾಜ್ಯದ ಮದ್ಯ ಕ್ವಾಲಿಟಿ ಹಾಗೂ ಕ್ವಾಂಟಿಟಿಗೆ ಮೂರು ರಾಜ್ಯದ ಮದ್ಯಪ್ರಿಯರು ಮನಸೋತಿದ್ದಾರೆ. ಪರಿಣಾಮ ಲಾಕ್‍ಡೌನ್ ವೇಳೆ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಮಾರಾಟ ಕೂಡ ನಡೆದಿದೆ. ಲಾಕ್‍ಡೌನ್ ವೇಳೆ ಮದ್ಯ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿತ್ತು. ಹಾಗಾಗಿ ಲಾಕ್ ಡೌನ್ ಅವಧಿಯಲ್ಲಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮದ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 2075 ಲೀ ಮದ್ಯ, 989 ಲೀ ಬಿಯರ್, 120 ಲೀ ವೈನ್, 111 ಲೀ ಸೇಂಧಿ, 75 ಲೀ ಕಳ್ಳ ಭಟ್ಟಿ, 462 ಲೀ ಬೆಲ್ಲದ ಕೊಳೆ ಹಾಗೂ ಅರೋಪಿಗಳಿಂದ 16 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ ರಾಜ್ಯದಲ್ಲೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ ಅನ್ನೋದು ಮತ್ತೊಂದು ವಿಶೇಷ.

    ಅಬಕಾರಿ ಸಚಿವ ನಾಗೇಶ್ ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಯಾವುದೇ ಉಪಯೋಗವಾಗುವ ಸಾಧನೆ ಮಾಡಿಲ್ಲವಾದ್ರು, ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡಿದ್ದು ವಿಶೇಷ ಸಾಧನೆ ಅಂದರೆ ತಪ್ಪಲ್ಲ. ಇನ್ನಾದ್ರೂ ಜಿಲ್ಲೆಯ ಸಮಗ್ರ ಅಭಿವೃದ್ದಿ ಕಡೆ ಗಮನ ಹರಸಿ, ಸರ್ಕಾರಕ್ಕೆ ಒಳ್ಳೆಯ ಹೆಸರು ಸಿಗಲಿ ಅನ್ನೋದೆ ಎಲ್ಲರ ಆಶಯ.