Tag: Alan Walker

  • ಮಾಸ್ಕ್ ಮಹಿಮೆ : ಮಾಸ್ಕ್ ಇಲ್ಲದೇ ಮನೆಯಿಂದಾಚೆ ಬರಲ್ಲ ಡಿಜೆ ಅಲೆನ್ ವಾಕರ್

    ಮಾಸ್ಕ್ ಮಹಿಮೆ : ಮಾಸ್ಕ್ ಇಲ್ಲದೇ ಮನೆಯಿಂದಾಚೆ ಬರಲ್ಲ ಡಿಜೆ ಅಲೆನ್ ವಾಕರ್

    ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ ನ ಖ್ಯಾತ ಡಿಜೆ ಅಲೆನ್ ವಾಕರ್ (Alan Walker) ಸದಾ ಮಾಸ್ಕ್ (Mask) ಹಾಕಿಕೊಂಡು ಮನೆಯಿಂದ ಆಚೆ ಬರುತ್ತಾರೆ. ಕಾರ್ಯಕ್ರಮದಲ್ಲೂ ಅವರು ಮಾಸ್ಕ್ ಮರೆಯುವುದಿಲ್ಲ. ಎಲ್ಲರೂ ತಮ್ಮನ್ನು ಗುರುತಿಸಲಿ, ತಮ್ಮ ಅಂದವನ್ನು ನೋಡಲಿ ಎಂದು ಬಯಸಿದರೆ, ಆದರೆ ಅಲೆನ್ ಮಾತ್ರ ಮುಖ ಮುಚ್ಚಿಕೊಂಡೆ ಓಡಾಡುತ್ತಾರೆ.

    ಅಷ್ಟಕ್ಕೂ ಅಲೆನ್ ಮಾಸ್ಕ್ ಹಾಕಿಕೊಂಡೇ ಇರುವುದು ಯಾಕೆ? ಕೋವಿಡ್ ನಂತರವೂ ಅವರು ಮಾಸ್ಕ್ ಹಾಕಿಕೊಳ್ಳುವುದು ಯಾಕೆ ಎಂದು ಹಲವರು ಪ್ರಶ್ನೆ ಕೂಡ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ಕೋವಿಡ್ ಗಿಂತ ಮುಂಚೆಯೇ ಅವರು ಮಾಸ್ಕ್ ಧರಿಸಿಕೊಂಡೇ ಓಡಾಡುತ್ತಿದ್ದರಂತೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ 2015ರಿಂದ ಅವರು ನಿರಂತವಾಗಿ ಮಾಸ್ಕ್ ಧರಿಸುತ್ತಿದ್ದಾರೆ.

    ನಿನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೂ ಅಲೆನ್ ಆಗಮಿಸಿದ್ದರು. ಆಗಲೂ ಅವರು ಮಾಸ್ಕ್ ಧರಿಸಿಕೊಂಡೇ ಇದ್ದರು. ಕಾರ್ಯಕ್ರಮದಲ್ಲಾದರೂ ಅವರು ಮಾಸ್ಕ್  ತೆಗೆಯುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಅವರು ಕೊನೆಗೂ ಮಾಸ್ಕ್ ತಗೆಯಲಿಲ್ಲ. ಹಾಗೆಯೇ ಕಾರ್ಯಕ್ರಮ ನಡೆಸಿಕೊಟ್ಟು ಮತ್ತಷ್ಟು ಕುತೂಹಲಕ್ಕೆ ಕಾರಣವಾದರು.

    ತಾವು ಮಾಸ್ಕ್ ಧರಿಸಿಯೇ ಇರುವುದಕ್ಕೆ  ನಾನಾ ಕಾರಣಗಳನ್ನೂ ಅವರು ಕೊಟ್ಟಿದ್ದಾರೆ. ಮಾಸ್ಕ್ ಇಲ್ಲದೇ ಓಡಾಡಿದರೆ, ಜನರು ತಮ್ಮನ್ನು ಬಹುಬೇಗ ಗುರುತಿಸುತ್ತಾರಂತೆ. ಹಾಗಾಗಿ ತಮ್ಮ ಖಾಸಗಿ ಕ್ಷಣಗಳಿಗೆ ಧಕ್ಕೆ ಆಗುತ್ತದೆ. ಜನರು ಗುರುತಿಸದಂತೆ ಓಡಾಡಿದರೆ ನೆಮ್ಮದಿ. ಹಾಗಾಗಿ ಸದಾ ಮಾಸ್ಕ್ ಧರಿಸುತ್ತೇನೆ ಎಂದಿದ್ದಾರೆ.

    ಮತ್ತೊಂದು ಕಡೆ ಇದೇ ಮಾಸ್ಕ್ ವಿಚಾರವಾಗಿ ಮಾತನಾಡಿರುವ ಅವರು, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಮಾನರಂತೆಯೇ ಇರಬೇಕು. ನನಗೆ ಮಾಸ್ಕ್ ಆ ರೀತಿಯ ಸಂದೇಶವನ್ನು ನೀಡುತ್ತದೆ ಎಂದು ಭಾವಿಸಿದ್ದೇನೆ. ಸಮಾನತೆಗಾಗಿ ನಾನು ಸದಾ ಮಾಸ್ಕ್ ಧರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

  • RCB Unbox: ‘ಕೆಜಿಎಫ್’ ಹಾಡು ರಿಮಿಕ್ಸ್  ಮಾಡಿದ ಡಿಜೆ ಅಲೆನ್

    RCB Unbox: ‘ಕೆಜಿಎಫ್’ ಹಾಡು ರಿಮಿಕ್ಸ್ ಮಾಡಿದ ಡಿಜೆ ಅಲೆನ್

    ನಿನ್ನೆ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಅನ್ಬಾಕ್ಸ್ ಇವೆಂಟ್ ನಲ್ಲಿ ಹಾಲಿವುಡ್ ಹೆಸರಾಂತ ಡಿಜೆ ಅಲೆನ್ ವಾಕರ್ (Alan Walker) ಅದ್ಭುತವಾದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದರಲ್ಲೂ ಕನ್ನಡದ, ಯಶ್ ನಟನೆಯ ಕೆಜಿಎಫ್ ಸಿನಿಮಾದ ಹಾಡೊಂದನ್ನು ರಿಮಿಕ್ಸ್ ಮಾಡಿ ಎಲ್ಲರನ್ನೂ ಕುಣಿಸಿದರು. ಕಾರ್ಯಕ್ರಮಕ್ಕೂ ಮುನ್ನ ಯಾವ ಹಾಡನ್ನು ರಿಮಿಕ್ಸ್ ಮಾಡಲು ಬಯಸುತ್ತೀರಿ ಎಂದು ಅಲೆನ್ ಕೇಳಿದ್ದರು. ಜನರ ಕೋರಿಕೆಯಂತೆ ಕೆಜಿಎಫ್ ಚಿತ್ರದ ಹಾಡೊಂದನ್ನು ಅವರು ಆಯ್ಕೆ ಮಾಡಿಕೊಂಡಿದ್ದರು.

    ನಿರೀಕ್ಷೆಯಂತೆ ಅನ್‌ಬಾಕ್ಸ್‌ (RCB Unbox) ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ (Royal Challengers Bengalore) ಇನ್ಮುಂದೆ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’ (Royal Challengers Bengaluru) ಎಂದು ಬದಲಾಗಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರ್‌ಸಿಬಿ (RCB) ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮ ನಡೆಯಿತು. ಈ ವೇಳೆ ಆರ್‌ಸಿಬಿ ಹೆಸರಿನಲ್ಲಿ ‘ಬೆಂಗಳೂರ್‌’ ಪದವನ್ನು ತೆಗೆದು ‘ಬೆಂಗಳೂರು’ ಎಂದು ಬದಲಾಯಿಸಿಕೊಂಡಿದೆ.

    ಹೆಸರು ಬದಲಾಯಿಸಿರುವ ಲೋಗೋ ಹಾಗೂ ನೀಲಿ ಬಣ್ಣ ಹೊಸ ಜೆರ್ಸಿ ತೊಟ್ಟಿರುವ ಆರ್‌ಸಿಬಿ ತಂಡದ ಆಟಗಾರರು ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 2024 ರ ಐಪಿಎಲ್‌ಗೆ ಕೊಹ್ಲಿ ಪಡೆ (Virat Kohli) ಹೊಸ ಹೆಸರು ಮತ್ತು ಜೆರ್ಸಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌ಸಿಬಿ, ‘ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಮ್ಮ ತಂಡ, ನಿಮ್ಮ RCB!’ ಎಂದು ಬರೆದುಕೊಂಡಿದೆ.

     

    ಆರ್‌ಸಿಬಿ ಆಟಗಾರರು ಹೊಸ ಜೆರ್ಸಿ ತೊಟ್ಟಿರುವ ಫೋಟೋವನ್ನು ಹಂಚಿಕೊಂಡು, ‘RCB ಕೆಂಪಾಗಿದೆ. ಈಗ ನೀಲಿ ಬಣ್ಣಕ್ಕೆ ಮುತ್ತಿಕ್ಕಿದೆ. ನಮ್ಮ ಹೊಸ ರಕ್ಷಾಕವಚದೊಂದಿಗೆ ನಾವು ಸಿದ್ಧರಿದ್ದೇವೆ. ನಿಮಗಾಗಿ ಬೋಲ್ಡ್ ಆಗಿ ಆಡಲು’ ಎಂದು ಬರೆದುಕೊಂಡಿದೆ.