Tag: Alamatti Dam

  • ಆಲಮಟ್ಟಿ ಎಡದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು: ಕಂಗಾಲಾದ ರೈತರು

    ಆಲಮಟ್ಟಿ ಎಡದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು: ಕಂಗಾಲಾದ ರೈತರು

    ವಿಜಯಪುರ: ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ ಘಟನೆ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಲೂಟಗೆರಿ ಗ್ರಾಮದ ಬಳಿ ನಡೆದಿದೆ.

    ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ. ಹೀಗಾಗಿ ಕಾಲುವೆ ಮೈದುಂಬಿ ಹರಿಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಲೂಟಗೆರಿ ಸಮೀಪದಲ್ಲಿ ಕಾಲುವೆಯ ಒಂದು ಬದಿಯ ದಂಡೆ ಒಡೆದಿದೆ. ಹೀಗಾಗಿ ನೂರಾರು ರೈತರಿಗೆ ಸೇರಿದ್ದ ಸುಮಾರು 300 ಎಕರೆ ಜಮೀನಿಗೆ ನೀರು ನುಗ್ಗಿದ್ದು ತೊಗರಿ, ಹೆಸರು ಕಾಳು, ಈರುಳ್ಳಿ ಬೆಳೆಗಳು ಸಂಪೂರ್ಣ ನಾಶವಾಗಿವೆ.

    ನೀರು ಬಿಡುವ ಮೊದಲೇ ಕಾಲುವೆ ಬಿರುಕು ಬಿಟ್ಟಿತ್ತು. ನೀರಿನ ರಭಸಕ್ಕೆ ಕೊರೆತ ಉಂಟಾಗಿ, ಕಾಲುವೆ ಒಡೆದಿದೆ. ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿ ಬೆಳೆ ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ನೀರಾವರಿ ಅಧಿಕಾರಿಗಳಿಗೆ ಕಾಲುವೆ ಒಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಿದ್ದಾರೆ.

    ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಗೆ ಸೂಕ್ತ ಕಾರಣ ನೀಡುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.

  • ಆಲಮಟ್ಟಿ ಡ್ಯಾಂ ಭರ್ತಿ: ರೈತರ ಮೊಗದಲ್ಲಿ ಸಂತಸ

    ಆಲಮಟ್ಟಿ ಡ್ಯಾಂ ಭರ್ತಿ: ರೈತರ ಮೊಗದಲ್ಲಿ ಸಂತಸ

    ವಿಜಯಪುರ: ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆ ತುಂಬಿ ಹರಿಯುತ್ತಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಲಾಲ್‍ಬಹದ್ದೂರ್ ಶಾಸ್ತ್ರಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಾಶಯ ತುಂಬಿದ್ದು, ಜನರಲ್ಲಿ ಹರ್ಷ ತಂದಿದೆ. ಗರಿಷ್ಠ 519.60 ಮೀಟರ್ ಎತ್ತರದ ಡ್ಯಾಂನಲ್ಲಿ 519.60 ಮೀಟರ್ ನೀರು ಸಂಗ್ರಹವಾಗಿದೆ.

    ಇನ್ನು ಒಳ ಹರಿವು 35,672 ಕ್ಯೂಸೆಕ್ ಇದ್ದು, 12 ಕ್ರೆಸ್ಟ್ ಗೇಟ್‍ಗಳಿಂದ 35,672 ಕ್ಯೂಸೆಕ್ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಜಲಾಶಯ ಭರ್ತಿಯಾಗಿದ್ದು, ರೈತರಲ್ಲಿ ಮತ್ತು ಜನರಲ್ಲಿ ಕೊಂಚ ಸಂತಸ ಮೂಡಿಸಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.