Tag: Alamatti Dam

  • ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ: ಡಿಕೆಶಿ

    ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ: ಡಿಕೆಶಿ

    – ಒಂದು ವಾರದಲ್ಲಿ ಭೂಸ್ವಾಧೀನಕ್ಕೆ ಪರಿಹಾರ ಮೊತ್ತ ಘೋಷಣೆ

    ವಿಜಯಪುರ: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 518 ಮೀ.ನಿಂದ 524 ಮೀ. ಎತ್ತರಿಸುವ ಬಗ್ಗೆ ಆದ್ಯತೆ ಮತ್ತು ಬದ್ಧತೆ ನಮ್ಮ ಸರ್ಕಾರಕ್ಕಿದೆ. ಮುಂದಿನ ಒಂದು ವಾರದೊಳಗೆ ಭೂಸ್ವಾಧೀನಕ್ಕೆ ನಿಗದಿ ಮಾಡಿರುವ ಬೆಲೆ ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

    ಆಲಮಟ್ಟಿ ಅಣೆಕಟ್ಟಿನಲ್ಲಿ ಕೃಷ್ಣಾ ನದಿಗೆ ಶನಿವಾರ ಬಾಗಿನ ಅರ್ಪಣೆ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಹಾಗೂ ಯೋಜನೆ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ನಡೆಸಿ ಬೆಲೆ ನಿಗದಿ ತೀರ್ಮಾನ ಮಾಡಲಾಗುವುದು. ಯಾವುದೇ ಮೇಲ್ಮನವಿ ಇಲ್ಲದಂತೆ ಒಂದೇ ಹಂತದ ಒಪ್ಪಿತ ಭೂಸ್ವಾಧೀನಕ್ಕೆ ಮುಖಂಡರು, ಜನಪ್ರತಿನಿಧಿಗಳು ಒಪ್ಪಿಗೆ ನೀಡಬೇಕು. ಪುನರ್ವಸತಿ ಬಗ್ಗೆ ಪ್ರತ್ಯೇಕ ತೀರ್ಮಾನ ಮಾಡಲಾಗುವುದು. ಸಮುದ್ರಕ್ಕೆ ಹೋಗುತ್ತಿರುವ ನೀರನ್ನು ನಮ್ಮ ಜನರಿಗೆ ನೀರಾವರಿ ಕಲ್ಪಿಸುವುದು ನಮ್ಮ ಸಂಕಲ್ಪ. ಇದನ್ನು ಇದೇ ಅವಧಿಯಲ್ಲಿ ಮಾಡಲು ಮುಂದಾಗಿದ್ದೇವೆ ಎಂದರು. ಇದನ್ನೂ ಓದಿ: ಹಿಂದೂಗಳ ಸಂಖ್ಯೆ ಹೆಚ್ಚಾಗದಿದ್ರೆ ಭಾರತ, ಪಾಕ್ ಆಗುತ್ತೆ: ಕಲ್ಲಡ್ಕ ಪ್ರಭಾಕರ ಭಟ್

    ಮುಳುಗಡೆ ಜಮೀನುಗಳಿಗೆ ಉದಾರ ಮನಸ್ಸಿನಿಂದ ಪರಿಹಾರ ನೀಡಬೇಕು. ಕಾಲುವೆಗಳು ಹಾದು ಹೋಗುವ ಕಡೆ ರೈತರಿಗೆ ಅನುಕೂಲವಾಗುವುದರಿಂದ ಇಂತಿಷ್ಟೇ ಪರಿಹಾರ ಬೇಕು ಎನ್ನುವ ಬೇಡಿಕೆಯಿಲ್ಲ ಎಂದು ಶಾಸಕರಾದ ಯಶವಂತರಾಯ ಗೌಡ ಪಾಟೀಲರು ಅಭಿಪ್ರಾಯ ತಿಳಿಸಿದ್ದಾರೆ. ಶಿವಾನಂದ ಪಾಟೀಲರು, ಎಂ.ಬಿ.ಪಾಟೀಲರು ಸಹ ತಮ್ಮ ಸಲಹೆಗಳನ್ನು ನೀಡಿದ್ದಾರೆ. ನಾವು ಕೇಂದ್ರದ ಮೇಲೆ ಹಾಕುತ್ತಿರುವ ಒತ್ತಡ ನೋಡಿದರೆ, ಯಾವ ಕ್ಷಣದಲ್ಲಿ ಬೇಕಾದರೂ ಅಧಿಸೂಚನೆ ಹೊರಡಿಸಬಹುದು. ನಮ್ಮ ಪಾಲು ನಮಗೆ ಸಿಗಲೇಬೇಕು. ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ನಾವು ಎಲ್ಲಾ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್ – ಹನಿಮೂನ್‌ ಕೊಲೆ ಕೇಸ್‌ ಚಾರ್ಜ್‌ಶೀಟ್‌ನಲ್ಲೇನಿದೆ?

    ಈ ವಿಚಾರವಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಜಲಶಕ್ತಿ ಸಚಿವರನ್ನು ಮುಖ್ಯಮಂತ್ರಿಯವರು, ನಾನು ಹಾಗೂ ಸಣ್ಣ ನೀರಾವರಿ ಸಚಿವರು ಮನವಿ ಮಾಡಿದ್ದೆವು. ನಾನು ಸುಮಾರು ಐದು ಬಾರಿ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಧಾನಿಯವರ ಗಮನಕ್ಕೂ ಇದನ್ನು ತರಲಾಗಿತ್ತು. ಎರಡು ಬಾರಿ ಇದರ ಬಗ್ಗೆ ಸಂಬಂಧಪಟ್ಟ ರಾಜ್ಯಗಳ ಸಭೆ ಕರೆಯಲಾಗಿತ್ತು. ಆಂಧ್ರಪ್ರದೇಶದವರು ಒಮ್ಮೆ ಮಹಾರಾಷ್ಟ್ರದವರು ಮತ್ತೊಮ್ಮೆ ಸಭೆಯನ್ನು ಮುಂದಕ್ಕೆ ಹಾಕಿಸಿದರು ಎನ್ನುವ ಮಾಹಿತಿಯಿದೆ ಎಂದು ಹೇಳಿದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಇಬ್ಬರು ಯುವಕರ ಬಂಧನ

    ಈ ಬಗ್ಗೆ ಮತ್ತೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದಾಗ ಅವರು ‘ಗಾಬರಿಯಾಗಬೇಡಿ, ತಾಂತ್ರಿಕ ವಿಚಾರದ ಕಾರಣಕ್ಕೆ ಸಭೆ ಮುಂದಕ್ಕೆ ಹಾಕಲಾಯಿತು. ಮತ್ತೊಮ್ಮೆ ಸಭೆ ಕರೆಯುವುದಾಗಿ’ ಆಶ್ವಾಸನೆ ನೀಡಿದ್ದಾರೆ. ಅಣೆಕಟ್ಟು ಎತ್ತರ ಹೆಚ್ಚಳ ಕುರಿತಂತೆ ಯಾವುದೇ ತಕರಾರುಗಳು ಇಲ್ಲವೆಂದು ಮಹಾರಾಷ್ಟ್ರದವರು ಈ ಹಿಂದೆ ತಿಳಿಸಿದ್ದರು ಎಂದು ಎಂ.ಬಿ.ಪಾಟೀಲರು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಸರಿಯಿಲ್ಲ ಅಂತ ಹೇಳಲಿ: ಬೊಮ್ಮಾಯಿ

    ರೈತರ ಭೂಮಿ ಸ್ವಾಧೀನಕ್ಕೆ ಒಳಪಡಿಸಿಕೊಳ್ಳುವ ಬಗ್ಗೆ ಅನೇಕ ಸಭೆಗಳನ್ನು ನಡೆಸಲಾಗಿದೆ. ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಇಂತಿಷ್ಟು ಪರಿಹಾರವೆಂದು ನಿಗದಿ ಮಾಡಲಾಗಿತ್ತು. ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ ಎಂದು ಅನೇಕ ಜನಪ್ರತಿನಿಧಿಗಳು ಒತ್ತಡ ಹಾಕಿ ಇದನ್ನು ನಿಲ್ಲಿಸಿದರು. ಇತ್ತೀಚೆಗೆ ಆಲಮಟ್ಟಿ ಭಾಗದ ಜನಪ್ರತಿನಿಧಿಗಳ, ಸಚಿವರ, ರೈತರ ಸಭೆ ನಡೆಸಿ ಅದರ ತೀರ್ಮಾನವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ರೈತರ ಸ್ವಾಗತ – 1.5 ಕೋಟಿಯಿಂದ 2.5 ಕೋಟಿ ರೂ. ಪರಿಹಾರಕ್ಕೆ ಸಂತಸ

    ಪರಿಹಾರದ ವಿಚಾರವಾಗಿ ಸುಮಾರು 20 ಸಾವಿರ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅನೇಕ ವಕೀಲರು ರೈತರನ್ನ ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಾರಿಗೂ ಸಹ ಅನುಕೂಲವಾಗುವುದಿಲ್ಲ ಎನ್ನುವುದನ್ನು ರೈತರು ಅರಿಯಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಪ್ರಾಮಾಣಿಕರಾಗಿದ್ರೆ ಸೆಂಥಿಲ್‌ ಸಿಎಂ ಬಳಿ ಮಾತಾಡಿ ಸಿಬಿಐ, ಎನ್ಐಎಗೆ ಕೊಡಲಿ : ರೆಡ್ಡಿ ಸವಾಲು

    ಅಣೆಕಟ್ಟು ಎತ್ತರ ಹೆಚ್ಚಳ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿ ನಮ್ಮ ಸರ್ಕಾರ ಬದ್ಧತೆ ಮೆರೆದಿದೆ. ಈ ವರ್ಷ 100 ಟಿಎಂಸಿಗೂ ಹೆಚ್ಚು ನೀರು, ಕೆಲವೊಮ್ಮೆ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದ ಉದಾಹರಣೆಯಿದೆ. ವರುಣನ ಕೃಪೆಯಿಂದ ಆಲಮಟ್ಟಿ ಅಣೆಕಟ್ಟು ತುಂಬಿ ಎಲ್ಲರಿಗೂ ಸಂತಸ ಉಂಟು ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ:  ಧರ್ಮಸ್ಥಳ ಕೇಸ್ | ಅಣ್ಣಾಮಲೈ ವಿಚಾರಣೆ ಯಾಕಿಲ್ಲ? – ಸಸಿಕಾಂತ್ ಸೆಂಥಿಲ್

  • `ಮಹಾ’ ಮಳೆಯಬ್ಬರಕ್ಕೆ ಅಪಾಯ ಮಟ್ಟ ಮೀರಿದ ಕೃಷ್ಣೆ – ಆಲಮಟ್ಟಿ ಜಲಾಶಯಕ್ಕೆ 2.45 ಲಕ್ಷ ಕ್ಯೂಸೆಕ್ ಒಳಹರಿವು

    `ಮಹಾ’ ಮಳೆಯಬ್ಬರಕ್ಕೆ ಅಪಾಯ ಮಟ್ಟ ಮೀರಿದ ಕೃಷ್ಣೆ – ಆಲಮಟ್ಟಿ ಜಲಾಶಯಕ್ಕೆ 2.45 ಲಕ್ಷ ಕ್ಯೂಸೆಕ್ ಒಳಹರಿವು

    – 36 ಗೇಟ್‌ಗಳಿಂದ ನಾರಾಯಣಪುರ ಡ್ಯಾಂಗೆ 2.50 ಲಕ್ಷ ಕ್ಯೂಸೆಕ್ ರಿಲೀಸ್

    ವಿಜಯಪುರ: ಮಹಾರಾಷ್ಟ್ರದಲ್ಲಿ  ಮಳೆಯಬ್ಬರ ಜೋರಾಗಿರುವ ಹಿನ್ನೆಲೆ ಕೃಷ್ಣಾ ನದಿ (Krishna River) ಅಪಾಯಮಟ್ಟ ಮೀರಿ ಹರಿಯುತ್ತಿದೆ.

    ಧಾರಾಕಾರ ಮಳೆಯಾದ ಹಿನ್ನೆಲೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿಯಲ್ಲಿರುವ ಆಲಮಟ್ಟಿ ಜಲಾಶಯಕ್ಕೆ (Alamatti Dam) ಒಳಹರಿವು ಹೆಚ್ಚಾಗಿದ್ದು, 2,45,000 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಸುರಕ್ಷತಾ ದೃಷ್ಟಿಯಿಂದ 26 ಗೇಟ್‌ಗಳ ಮೂಲಕ ನಾರಾಯಣಪುರ ಜಲಾಶಯಕ್ಕೆ (Narayanapur Dam) 2,50,000 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.ಇದನ್ನೂ ಓದಿ: ಆ.25 ರಿಂದ ಅಮೆರಿಕಗೆ ಅಂಚೆ ಸೇವೆ ಸ್ಥಗಿತಗೊಳಿಸಿದ ಭಾರತ

    ಇನ್ನೂ ನಾರಾಯಣಪುರ ಜಲಾಶಯದಿಂದಲೂ (Narayanapur Dam) ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನ ಹರಿಬಿಡಲಾಗುತ್ತಿದ್ದು, ರಾಯಚೂರಿನ ದೇವದುರ್ಗದ ಐತಿಹಾಸಿಕ ಕೊಪ್ಪರ ಲಕ್ಷ್ಮೀ ನರಸಿಂಹ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.

    ನೂರಾರು ವರ್ಷಗಳ ಇತಿಹಾಸವಿರುವ ಲಕ್ಷ್ಮೀ ನರಸಿಂಹ ದೇವಾಲಯ ಸುತ್ತಲೂ ನೀರು ಆವರಿಸಿದೆ. ದೇವಾಲಯ ಬಳಿ ರಭಸವಾಗಿ ನೀರು ಹರಿಯುತ್ತಿದ್ದು, ಭಕ್ತರು ದೇವಾಲಯ ಬಳಿ ಸುಳಿಯದಂತಾಗಿದೆ. ಅರ್ಚಕರು ಪೂಜೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ದೇವಾಲಯ ಮುಳುಗಡೆಯಾಗಲಿದೆ. ಈಗಾಗಲೇ ದೇವದುರ್ಗ ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆಯಾಗಿದೆ.ಇದನ್ನೂ ಓದಿ: ಶ್ರೀಲಂಕಾದ ಬೀಚ್‌ನಲ್ಲಿ ಗೋಲ್ಡ್‌ ಫಿಶ್‌ನಂತೆ ಕಂಗೊಳಿಸಿದ ಸೋನು!

  • ಮಹಾರಾಷ್ಟ್ರದ ತಕರಾರಿನ ಹಿಂದೆ ಬರೀ ರಾಜಕೀಯ ದುರುದ್ದೇಶ: ಎಂ.ಬಿ ಪಾಟೀಲ್

    ಮಹಾರಾಷ್ಟ್ರದ ತಕರಾರಿನ ಹಿಂದೆ ಬರೀ ರಾಜಕೀಯ ದುರುದ್ದೇಶ: ಎಂ.ಬಿ ಪಾಟೀಲ್

    – ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದಿಂದ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಎನ್ನುವುದು ಅರ್ಥಹೀನ

    ಬೆಂಗಳೂರು: ಕರ್ನಾಟಕವು ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎನ್ನುವ ಮಹಾರಾಷ್ಟ್ರದ ತಕರಾರಿಗೆ ಅರ್ಥವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಕಿಡಿಕಾರಿದ್ದಾರೆ.

    ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟನ್ನು (Alamatti Dam) ನಾವು ಕಟ್ಟುವುದಕ್ಕೂ ಮೊದಲೇ ಸಾಂಗ್ಲಿಯಲ್ಲಿ (Sangli) 1964, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಅಣೆಕಟ್ಟಿನ ಎತ್ತರವನ್ನು 524.256 ಮೀ.ಗೆ ನಾವು ಏರಿಸಬಹುದು ಎಂದು 2000ದಲ್ಲೇ ಹೇಳಿದೆ. ಇದಾದ ಮೇಲೂ ಮಹಾರಾಷ್ಟ್ರವು (Maharashtra) ನಮಗೆ ವಿರುದ್ಧವಾಗಿ 2005 ರಲ್ಲಿ ನ್ಯಾಯಾಧಿಕರಣಕ್ಕೆ ಹೋಯಿತು. ಆದರೆ, ಅದರ ಮಧ್ಯಂತರ ಮನವಿಯಲ್ಲೂ ತಿರಸ್ಕೃತಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಚ್‌ಎನ್ ವ್ಯಾಲಿ ನೀರನ್ನ ಸಂಪುಟ ಸದಸ್ಯರಿಗೆ ಕುಡಿಸಿ ಶುದ್ಧತೆ ಸಾಬೀತುಪಡಿಸಲಿ: ಸಚಿವ ಸುಧಾಕರ್‌ಗೆ ಸಂಸದ ಸುಧಾಕರ್‌ ಸವಾಲ್‌

    ಆಲಮಟ್ಟಿ ಅಣೆಕಟ್ಟಿನ ಕಾರಣದಿಂದಾಗಿಯೇ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ (Kollapura) ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ವಾದವನ್ನು ನ್ಯಾಯಮಂಡಳಿಯು ಪುರಸ್ಕರಿಸಿಲ್ಲ. ಈ ಸಂಬಂಧವಾಗಿ ನ್ಯಾಯಾಧಿಕರಣವು 2010 ಮತ್ತು 2013ರಲ್ಲಿ ಕೂಡ ವಿಸ್ತೃತ ವರದಿ ನೀಡಿದೆ. ಈ ವಿಚಾರದಲ್ಲಿ ಹಿಪ್ಪರಗಿ ಜಲಾಶಯವನ್ನೂ ಪರಿಗಣಿಸಿದೆ. ಜೊತೆಗೆ, ಕೃಷ್ಣಾ ನೀರು ಹಂಚಿಕೆ ಸಂಬಂಧ ರಚಿಸಲಾದ ಎರಡನೆಯ ನ್ಯಾಯಾಧಿಕರಣವು ನೀಡಿರುವ ತೀರ್ಪನ್ನು ಇದುವರೆಗೂ ಯಾವ ರಾಜ್ಯಗಳೂ ಪ್ರಶ್ನಿಸಿಲ್ಲ. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ತಕರಾರು ತೆಗೆಯುವುದರ ಹಿಂದಿನ ಉದ್ದೇಶ ಯಾರಿಗಾದರೂ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಗಡಿ ಮುಂದಿದ್ದ ಉಪ್ಪಿನ ಮೂಟೆ ಕದ್ದ ಕಳ್ಳರು

    ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ತನಗೆ ನೀರು ಬರುವುದಿಲ್ಲ ಎಂದು ಆಂಧ್ರಪ್ರದೇಶ ಕೂಡ (ವಿಭಜನೆಗೂ ಮುನ್ನ) ಆಕ್ಷೇಪ ಮಾಡಿತ್ತು. ಆದರೆ, ಅವರ ವಾದ ಕೂಡ ಬಿದ್ದು ಹೋಗಿದೆ. ಈಗ ನಾವು ಅಣೆಕಟ್ಟಿನ ಎತ್ತರಕ್ಕೆ ಮುಂದಾಗಿರುವುದನ್ನು ಮರುಪರಿಶೀಲಿಸಲು ಮಹಾರಾಷ್ಟ್ರವು ಆಗ್ರಹಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. 5 ವರ್ಷಗಳ ಕಾಲ ನೀರಾವರಿ ಸಚಿವನಾಗಿದ್ದ ನನಗೆ ಇದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ನೀಡುವ ಮಾಹಿತಿ ನಿಖರ, ನಿಷ್ಪಕ್ಷಪಾತವಾಗಿರಬೇಕು – ಇ.ಡಿ ಕಿವಿಹಿಂಡಿದ ದೆಹಲಿ ಕೋರ್ಟ್

    ಸಾಂಗ್ಲಿ ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳು ವಿಪರೀತ ಒತ್ತುವರಿಯಾಗಿವೆ. ಇದಕ್ಕೆ ಸಂಬಂಧಿಸಿದ ವರದಿ ನನ್ನ ಬಳಿ ಇದೆ. ಅಲ್ಲಿನ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಗಮನ ಕೊಡಬೇಕು. ಅದನ್ನು ಬಿಟ್ಟು ನಮಗೆ ಅಡ್ಡಗಾಲು ಹಾಕಬಾರದು. ನನ್ನಲ್ಲಿರುವ ದಾಖಲೆಗಳನ್ನು ನಾನು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೂ ಕೊಡುತ್ತೇನೆ. ನಾವು ಇದಕ್ಕೆ ವಿವರವಾಗಿ ತಕ್ಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

  • ವಿಜಯಪುರದ ರಸ್ತೆ, ರೈಲು, ವಾಯುಮಾರ್ಗ ಎಲ್ಲವೂ ಅಭಿವೃದ್ಧಿಯಾಗಲಿದೆ: ಎಂ.ಬಿ ಪಾಟೀಲ್

    ವಿಜಯಪುರದ ರಸ್ತೆ, ರೈಲು, ವಾಯುಮಾರ್ಗ ಎಲ್ಲವೂ ಅಭಿವೃದ್ಧಿಯಾಗಲಿದೆ: ಎಂ.ಬಿ ಪಾಟೀಲ್

    – ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸಿದ್ರೆ ಮಹಾರಾಷ್ಟ್ರಕ್ಕೆ ಯಾವುದೇ ಬಾಧಕ ಇಲ್ಲ

    ವಿಜಯಪುರ: ಜಿಲ್ಲೆಯಲ್ಲಿ ರಸ್ತೆ, ರೈಲು, ವಾಯುಮಾರ್ಗ ಸೇರಿ ಎಲ್ಲವೂ ಅಭಿವೃದ್ಧಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಮಾಹಿತಿ ನೀಡಿದರು.

    ಜಿಲ್ಲಾಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿಯಿಂದ (Hubballi) ನೇರವಾಗಿ ವಿಜಯಪುರಕ್ಕೆ ರೈಲು ಬೇಕು. ಸದ್ಯಕ್ಕೆ ಹುಬ್ಬಳ್ಳಿಯಿಂದ ಗದಗಕ್ಕೆ (Gadag) ಹೋಗಿ ಅಲ್ಲಿಂದ ವಿಜಯಪುರಕ್ಕೆ ಸಂಚರಿಸುತ್ತದೆ. ಹೀಗಾಗಿ ಬಹಳ ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಗದಗಕ್ಕೆ ಸಾಕಷ್ಟು ರೈಲುಗಳಿವೆ. ಹೀಗಾಗಿ ನೇರವಾಗಿ ರೈಲು ಬೇಕು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ (V Somanna) ಅವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜಕಾರಣಿ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

    ವಿಮಾನ ನಿಲ್ದಾಣದ ಪರಿಸ್ಥಿತಿ ಸ್ವಲ್ಪ ನಾಜುಕಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಇಸಿಯು ತೆಗೆದುಕೊಳ್ಳದೆ ಕೆಲಸ ಮಾಡಿದ್ದೇವೆ. ಈಗ ಮತ್ತೆ ಅಪೀಲ್ ಹೋಗಲು ಅಡ್ವಕೇಟ್ ಜನರಲ್‌ಗೆ ಹೇಳಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಸಹಕಾರ ನೀಡುತ್ತದೆ. ಒಟ್ಟಿನಲ್ಲಿ ವಿಜಯಪುರಕ್ಕೆ ರೈಲು, ರಸ್ತೆ, ವಾಯುಮಾರ್ಗ ಎಲ್ಲವೂ ಅಭಿವೃದ್ಧಿ ಆಗಲಿದೆ ಎಂದರು.

    ಇನ್ನೂ ಇದೇ ವೇಳೆ ಆಲಮಟ್ಟಿ ಜಲಾಶಯದ (Almatti Reservoir) ಎತ್ತರ ಹೆಚ್ಚಳದ ವಿಚಾರವಾಗಿ, ಆಲಮಟ್ಟಿ ಜಲಾಶಯ 1 ಮೀ. ಎತ್ತರ ಮಾಡಿದ್ರೂ ಅಷ್ಟೆ, 10 ಮೀ. ಹೆಚ್ಚಿಗೆ ಮಾಡಿದರೂ ಅಷ್ಟೇ ಏನು ಸಮಸ್ಯೆಯಿಲ್ಲ. ಈ ಕುರಿತು ಟೆಕ್ನಿಕಲ್ ಟೀಂ ಜೊತೆ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ. ಇನ್ನೂ ಎತ್ತರ ಹೆಚ್ಚಿಸುವುದರಿಂದ ಮಹಾರಾಷ್ಟ್ರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಈ ಮೊದಲೇ ವರದಿಗಳು ಬಂದಿವೆ. ಇದರ ಬಗ್ಗೆ ಎಲ್ಲ ಪರಿಶೀಲನೆ ಆಗಿದೆ. ಎಲ್ಲ ಆತಂಕಗಳು ಸುಳ್ಳು ಎಂದು ಹೇಳಿದರು.ಇದನ್ನೂ ಓದಿ: ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಪ್ರಿಯಕರನೊಂದಿಗೆ ಪರಾರಿಯಾದ ಕೇಡಿ ಲೇಡಿ!

  • ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ, ವಿತರಣಾ ಕಾಲುವೆಗಳ ಜಾಲದ ಆಧುನೀಕರಣಕ್ಕೆ ಅನುಮೋದನೆ: ಕಾರಜೋಳ

    ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ, ವಿತರಣಾ ಕಾಲುವೆಗಳ ಜಾಲದ ಆಧುನೀಕರಣಕ್ಕೆ ಅನುಮೋದನೆ: ಕಾರಜೋಳ

    ಬೆಂಗಳೂರು/ಬಾಗಲಕೋಟೆ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳ ಜಾಲದ ಆಧುನೀಕರಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ಆಧುನೀಕರಣ ಕಾಮಗಾರಿಯ ವಿವರವಾದ ಯೋಜನಾ ವರದಿಗೆ 75.41 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗೆ ಡಿ.20ರಂದೇ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ 0.00 ರಿಂದ 68.24 ಕಿ.ಮೀ. ವರೆಗಿನ (ಹಾಳಾಗಿರುವ ಆಯ್ದ ಭಾಗಗಳ) ಹಾಗೂ ವಿತರಣಾ ಕಾಲುವೆಗಳ ಸಂರಚನೆ ಒಳಗೊಂಡ ಆಧುನೀಕರಣ ಕಾಮಗಾರಿಯ 112.48 ಕೋಟಿ ರೂ. ಅಂದಾಜು ಮೊತ್ತದ (2016-17ನೇ ಸಾಲಿನ ದರಪಟ್ಟಿ ಅನ್ವಯ) ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ಕೂಡ ಸಿಕ್ಕಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ನದ್ದು ದೇಶದಲ್ಲಿ ಹಾರದ ಬಾವುಟ: ಆರ್. ಅಶೋಕ್ ವ್ಯಂಗ್ಯ

    ಇದಕ್ಕೆ ಸಂಬಂಧಿಸಿದಂತೆ ಆಧುನೀಕರಣದ ಪ್ಯಾಕೇಜ್ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಗುತ್ತಿಗೆ ವಹಿಸಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಅದಾದ ನಂತರ 0.00 ರಿಂದ 68.24 ಕಿ.ಮೀ. ವರೆಗಿನ (ಆಯ್ದ ಭಾಗಗಳ) ವಿತರಣಾ ಕಾಲುವೆಗಳ ಆಧುನೀಕರಣದ ಕಾಮಗಾರಿಗಳನ್ನು 3 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ವಹಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

    ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರತಿನಿಧಿಗಳು ಆಲಮಟ್ಟಿ ಎಡದಂಡೆ ಕಾಲುವೆಯ ಸುಮಾರು 30 ಕಿ.ಮೀ. ಆಧುನೀಕರಣ ಕಾಮಗಾರಿಯನ್ನು ತೆಗೆದುಕೊಂಡಿದ್ದು, ಇನ್ನುಳಿದ 56 ಕಿ.ಮೀ. ಕಾಲುವೆಯ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮನವಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಈ ಕಾಲುವೆ ಜಾಲದ ಆಧುನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ಕೋರಲಾಗಿತ್ತು. ಆಲಮಟ್ಟಿ ಎಡದಂಡೆ ಕಾಲುವೆಯ ಜಾಲದ ಆಧುನೀಕರಣ ಕಾಮಗಾರಿಯ ಪ್ರಸ್ತಾವನೆಯಿಂದ ಕಾಲುವೆ ಜಾಲದಲ್ಲಿ ಸಮರ್ಪಕ ನೀರು ನಿಯಂತ್ರಣ ಹಾಗೂ ನಿರ್ವಹಣೆ ಸಾಧ್ಯವಾಗುವುದರಿಂದ ನಿಗದಿತ ಅಚ್ಚುಕಟ್ಟು ಕ್ಷೇತ್ರಕ್ಕೆ ಮತ್ತು ಕಾಲುವೆ ಜಾಲದ ಕೊನೆ ಅಂಚಿನ ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೈಜಾಕ್ ಮಾಡೋದಕ್ಕೆ ಮೇಕೆದಾಟು ಯೋಜನೆಯನ್ನು ಹೆಚ್‌ಡಿಕೆ ಮಾಡಿದ್ರಾ: ಸಿದ್ದರಾಮಯ್ಯ ತಿರುಗೇಟು

  • ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕ್ರಮವಹಿಸಬೇಕು: ಕಾರಜೋಳ

    ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕ್ರಮವಹಿಸಬೇಕು: ಕಾರಜೋಳ

    ಬೆಂಗಳೂರು: ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕ್ರಮವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಇಂದು ತಿಳಿಸಿದರು.

    ಕೃಷ್ಣಾ ನ್ಯಾಯಾಧೀಕರಣ ಅಂತಿಮ ಐತೀರ್ಪು ಗೆಜೆಟ್ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನೆಯ ವಿವರವಾದ ವರದಿಗೆ ಸಕ್ಷಮ ಪ್ರಾಧಿಕಾರಗಳ ತಿರುವಳಿ ಮೂಲಕ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ಮೀ.ದಿಂದ 524.256 ಮೀ.ಗೆ ಎತ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ:  ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಹೆಚ್‍ಡಿಕೆ

    ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಆಗಸ್ಟ್ 25 ರಂದು ನವದೆಹಲಿಗೆ ಭೇಟಿ ನೀಡಿದ್ದೇವು. ಆ ವೇಳೆ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಮಾನ್ಯ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪುನ್ನು ಆದ್ಯತೆ ಮೇರೆಗೆ ಗೆಜೆಟ್ ಪ್ರಕಟಣೆ ಮಾಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

     

    ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಬಾಕಿ ಇರಿಸಿ ರಾಜ್ಯವು ಸಲ್ಲಿಸಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ವಿವರವಾದ ಯೋಜನಾ ವರದಿಯ ಅಪ್ರೈಸಲ್ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಲು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಎಸ್.ಪಾಟೀಲ್ ಅವರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಇದನ್ನೂ ಓದಿ:  ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಕ್ಕೆ ಜೀವಗಳು ಬಲಿ

    2013 ರಿಂದ 2019ರವರೆಗೆ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಏನು ಮಾಡಲಿಲ್ಲ. ಮಹಾರಾಷ್ಟ್ರದೊಂದಿಗೆ ಮಾತನಾಡಿ ಕೃಷ್ಣಾ ಜಲವಿವಾದದ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಜಂಟಿಯಾಗಿ ಪ್ರಮಾಣ ವಚನ ಸಲ್ಲಿಸಿದ್ದೇವೆ ಎಂದು ಟಾಂಗ್ ಕೊಟ್ಟರು.

     

    ಸರ್ವೋಚ್ಛ ನ್ಯಾಯಾಲಯದ 2011 ಸೆಪ್ಟೆಂಬರ್ 16ರ ತೀರ್ಪಿನಂತೆ ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಲಾಗಿದೆ. ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪಿನ ಕುರಿತಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಗಳು ಇತ್ಯರ್ಥವಾಗಬೇಕಿದೆ ಎಂದಿದ್ದಾರೆ. ಇದನ್ನೂ ಓದಿ:  ಶಾರುಖ್ ಅಭಿಮಾನಿಗೆ ಕೊನೆಗೂ ಸುಪ್ರೀಂನಲ್ಲಿ ಸಿಕ್ತು ಜಯ

    ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸುವಂತೆ ಮತ್ತು ನ್ಯಾಯಾಧೀಕರಣ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ 2019ರ ಫೆಬ್ರವರಿ 18 ರಂದು ಸುಪ್ರೀಂಗೆ ರಾಜ್ಯ ಸರ್ಕಾರವು ಮಧ್ಯಕಾಲಿನ ಅರ್ಜಿಯನ್ನು ಸಲ್ಲಿಸಿದೆ. ಸದರಿ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿ ಅನುಮತಿ ಕೋರಿ 2020ರ ಜನವರಿ 23 ರಂದು ಅರ್ಜಿ ಸಲ್ಲಿಸಲಾಗಿದೆ ಎಂದು ಸಚಿವರು ವಿವರವಾಗಿ ಉತ್ತರಿಸಿದರು.

  • ಆಲಮಟ್ಟಿ ಡ್ಯಾಂ 524 ಅಡಿಗೆ ಎತ್ತರಿಸಲು ಕ್ರಮ: ಸಿಎಂ ಬೊಮ್ಮಾಯಿ

    ಆಲಮಟ್ಟಿ ಡ್ಯಾಂ 524 ಅಡಿಗೆ ಎತ್ತರಿಸಲು ಕ್ರಮ: ಸಿಎಂ ಬೊಮ್ಮಾಯಿ

    ಹಾವೇರಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯವನ್ನು 524 ಅಡಿಗೆ ಏರಿಕೆ ಮಾಡಲು ತಜ್ಞರ ತಂಡದ ಜತೆ ದೆಹಲಿಯಲ್ಲಿ ಚರ್ಚಿಸುತ್ತೇನೆ. ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆದಷ್ಟು ಬೇಗ ನೋಟಿಫಿಕೇಷನ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಹಾವೇರಿ ಜಿಲ್ಲೆಯಲ್ಲಿ ಮರಣ ಪ್ರಮಾಣ ಏರಿಕೆ ಸಂಬಂಧ ತಜ್ಞರ ವರದಿ ಬಂದಿದ್ದು, ಆರೋಗ್ಯ ಇಲಾಖೆಯ ವೈಫಲ್ಯ ಸಾಬೀತಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಇದು ಹಾವೇರಿ ಜಿಲ್ಲೆಗೆ ಮಾತ್ರ ಸಂಬಂಧಿಸಿದ್ದಲ್ಲ. ಇಡೀ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಬಂದಾಗ ಹಲವಾರು ಸಮಸ್ಯೆಗಳು ಉಂಟಾಗಿವೆ. ತಜ್ಞರು ಕೆಲವು ಸಲಹೆ, ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆಯನ್ನು ಉನ್ನತೀಕರಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

    ಆಗಸ್ಟ್ 21ರಂದು ಆಲಮಟ್ಟಿ ಡ್ಯಾಂಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು. ಸಿಎಂ ಆಗಮನ ಹಿನ್ನೆಲೆ ಆಲಮಟ್ಟಿ ಆಣೆಕಟ್ಟಿ ವಧುವಿನಂತೆ ಕಂಗೊಳಿಸುತ್ತಿತ್ತು. ಇದನ್ನೂ ಓದಿ: 1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ 30 ರಂದು ಸಿಎಂ ನೇತೃತ್ವದಲ್ಲಿ ಸಭೆ

  • ಆಲಮಟ್ಟಿ ಹಿನ್ನೀರಿನ ಕಥೆಯನ್ನು ಕಣ್ಣೀರಿಡುತ್ತಾ ಹಾಡಿದ ರೈತ

    ಆಲಮಟ್ಟಿ ಹಿನ್ನೀರಿನ ಕಥೆಯನ್ನು ಕಣ್ಣೀರಿಡುತ್ತಾ ಹಾಡಿದ ರೈತ

    ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನ ಕಥೆಯನ್ನು ರೈತರೊಬ್ಬರು ಕಣ್ಣೀರಿಡುತ್ತಾ ಹಾಡಿ, ಅಲ್ಲಿನ ರೈತರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ವಿವರಿಸಿದ್ದಾರೆ.

    ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯ ನಿರ್ಮಾಣವಾದ ಮೇಲೆ ಅದರ ಹಿನ್ನೀರಿನ ರೈತ ಕಣ್ಣೀರಿನ ಕಥೆಯನ್ನು ಹಾಡಿನಲ್ಲಿ ತಿಳಿಸಲಾಗಿದೆ. ಜಿಲ್ಲೆಯ ಕೆಂಚನೂರ ಗ್ರಾಮದ ರೈತ ಅಳುತ್ತಲೇ ಈ ಕಥೆಯನ್ನು ಹಾಡಿದ್ದಾರೆ. ಜಿಲ್ಲೆ ಎದುರಿಸುತ್ತಿರುವ ಅಪಾರ ಪ್ರಮಾಣದ ಪ್ರವಾಹ ಹಿನ್ನೆಲೆಯಲ್ಲಿ ರೈತ ಹಾಡಿನ ಮೂಲಕ ಅಳುತ್ತಲೇ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ಜಲಾವೃತಗೊಂಡಿರುವ ತಮ್ಮ ಜಮೀನಿನ ಮುಂದೆ ನಿಂತು ರೈತ ಈ ಹಾಡನಲ್ಲಿ ಕಷ್ಟ ಪಟ್ಟು ಬೆಳೆಸಿದ ಬೆಳೆ ಹಾನಿಯಾಗಿರುವ ಬಗ್ಗೆ, ಕಷ್ಟದಲ್ಲೇ ಬದುಕುತ್ತಿರುವ ಆಲಮಟ್ಟಿ ಹಿನ್ನೀರಿನ ಜನರ ಬದುಕಿನ ಬಗ್ಗೆ ಅಳುತ್ತಲೇ ವಿವರಿಸಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಗಮನಿಸಿದರೆ ಎಷ್ಟರ ಮಟ್ಟಿಗೆ ಈ ಭಾಗದ ರೈತರು ಕುಗ್ಗಿ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

  • ನಮ್ಮ ನಾಡಿನ ನೀರೇ ನಮ್ಮ ಪಾಲಿಗಿಲ್ಲ- ತೆಲಂಗಾಣಕ್ಕೆ ಹರಿಯುತ್ತೆ ಕೃಷ್ಣೆ ನೀರು

    ನಮ್ಮ ನಾಡಿನ ನೀರೇ ನಮ್ಮ ಪಾಲಿಗಿಲ್ಲ- ತೆಲಂಗಾಣಕ್ಕೆ ಹರಿಯುತ್ತೆ ಕೃಷ್ಣೆ ನೀರು

    ವಿಜಯಪುರ: ಜಿಲ್ಲೆಯಲ್ಲಿ ಹನಿ ನೀರಿಗೂ ತತ್ವಾರ. ಆದರೆ ಪಕ್ಕದ ರಾಜ್ಯಕ್ಕೆ ಇಲ್ಲಿನ ಡ್ಯಾಂನಿಂದ ನೀರು ಬಿಡಲು ಸರ್ಕಾರ ಆದೇಶಿಸಿದೆ. ಕೃಷ್ಣೆಯ ನೀರನ್ನು ಬೇರೊಂದು ರಾಜ್ಯಕ್ಕೆ ಬಿಡುವ ಮೂಲಕ ಸಚಿವರು ಕೂಡ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ವಿಜಯಪುರ- ಬಾಗಲಕೋಟೆ ಜಿಲ್ಲೆಯ ಮಕ್ಕಳ ನೀರಿನ ದಾಹ ತಣಿಯದಿದ್ದರೂ ಚಿಂತೆಯಿಲ್ಲ ತೆಲಂಗಾಣಕ್ಕೆ ಕೃಷ್ಣೆಯ ನೀರು ಹರಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಹನಿನೀರಿಗೂ ತತ್ವಾರ ಎದುರಾಗಿ ಪ್ರತಿಯೊಬ್ಬರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೂ ಆಲಮಟ್ಟಿಯಿಂದ ನಾರಾಯಣಪುರ ಡ್ಯಾಂಗೆ 2 ಟಿಎಂಸಿ ನೀರನ್ನ ಜಲಾಶಯಕ್ಕೆ ಹರಿಸಲಾಗಿದೆ.

    ಜಿಲ್ಲೆಯ ಜನರಿಗೆ ನೀರು ಕೊಡದಿದ್ದರಿಂದ ಜೋಳ, ಗೋಧಿ ಮೊದಲಾದ ಬೆಳೆಗಳು ರೈತನ ಕೈಗೆ ಬರಲಿಲ್ಲ. ರೈತರು ಪ್ರತಿಭಟನೆ ನಡೆಸಿ ಹಿಂಗಾರು ಹಂಗಾಮಿಗೆ ಕಾಲುವೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿದ್ದರು. ಆದರೆ ರೈತರ ಈ ಬೇಡಿಕೆಯನ್ನು ಸರ್ಕಾರ ಮನ್ನಿಸದೇ ಮತ್ತೊಂದು ರಾಜ್ಯಕ್ಕೆ ನೀರು ಹರಿಸುತ್ತಿರುವುದು ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎಂದು ರೈತ ಸದಾಶಿವ ಹೇಳಿದ್ದಾರೆ.

    ಅವಳಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹೇಳಿದ್ದಾರೆ. ಕೊಯ್ನಾ ಜಲಾಶಯದಿಂದ ನೀರು ತರಿಸಿಕೊಳ್ಳಲು ಗಂಭೀರ ಆಸಕ್ತಿ ತಾಳದ ರಾಜ್ಯ ಸರ್ಕಾರ ಈಗ ತೆಲಂಗಾಣಕ್ಕೆ ನೀರು ಬಿಡುವ ವಿಷಯದಲ್ಲಿ ವಿಶೇಷ ಆಸಕ್ತಿ ತೋರಿಸಿ ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  • ಭಾನುವಾರ ನಿಗದಿಯಾಗಿದ್ದ ಆಲಮಟ್ಟಿ ಜಲಾಶಯದ ಬಾಗಿನ ಕಾರ್ಯಕ್ರಮ ರದ್ದು

    ಭಾನುವಾರ ನಿಗದಿಯಾಗಿದ್ದ ಆಲಮಟ್ಟಿ ಜಲಾಶಯದ ಬಾಗಿನ ಕಾರ್ಯಕ್ರಮ ರದ್ದು

    ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದಾಗಿ ಇಂದು ನಿಗದಿಯಾಗಿದ್ದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕಾರ್ಯಕ್ರಮ ನಿಮಿತ್ತ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಮಧ್ಯಾಹ್ನ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಬೆಳಗ್ಗಿನಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಹೆಲಿಕಾಪ್ಟರ್ ಪೈಲಟ್ ಹವಾಮಾನ ಸರಿ ಇಲ್ಲದ ಕಾರಣ ಅನುಮತಿಗೆ ನಿರಾಕರಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿಕೆ ಶಿವಕುಮಾರ್, ಸುರಿಯುತ್ತಿರುವ ಮಳೆಯಿಂದಾಗಿ ಪೈಲಟ್ ವಿಜಯಪುರ ಪ್ರಯಾಣಕ್ಕೆ ನಿರಾಕರಿಸಿದ್ದರು. ಹೀಗಾಗಿ ರಸ್ತೆ ಮೂಲಕ ತೆರಳಲು ನಿರ್ಧಾರ ಮಾಡಿದ್ದೇವು, ಆದರೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಾಹನಗಳ ಮುಖಾಂತರ ತಲುಪಲು ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಗಿನ ಕಾರ್ಯಕ್ರಮವನ್ನು ರದ್ದುಗೊಳಿಸಿ ಇದೇ ಆಗಸ್ಟ್ 15ರಂದು ಕಾರ್ಯಕ್ರಮವನ್ನು ನಡೆಸುವುದಾಗಿ ಹೇಳಿದ್ದಾರೆ.

    ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಮಾನ ನಿಲ್ದಾಣದಿಂದ ಬಸವರಾಜ ಹೊರಟ್ಟಿ ಮನೆಗೆ ತೆರಳಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದ್ದು, ಒಂದು ವಾರದ ಬಳಿಕ ಕಾರ್ಯಕ್ರಮವನ್ನು ನಡೆಸುವುದಾಗಿ ತಿಳಿಸಿದ್ದಾರೆ.

    ಹವಾಮಾನ ವೈಪರೀತ್ಯದಿಂದ ಏಕಾಏಕಿ ಸಿಎಂ ಕಾರ್ಯಕ್ರಮ ರದ್ದುಗೊಂಡಿದ್ದರಿಂದ, ಆಲಮಟ್ಟಿ ಜಲಾಶಯದಲ್ಲಿ ಮನವಿ ಕೊಡಲು ಬಂದಿದ್ದ ರೈತರು ಅಸಮಾಧಾನ ಹೊರಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews