Tag: akshaya patra foundation

  • ಅಕ್ಷಯ ಪಾತ್ರೆ ಪ್ರತಿಷ್ಠಾನದಿಂದ ಪ್ರತಿನಿತ್ಯ 95 ಸಾವಿರ ಜನಕ್ಕೆ ಉಚಿತ ಊಟ

    ಅಕ್ಷಯ ಪಾತ್ರೆ ಪ್ರತಿಷ್ಠಾನದಿಂದ ಪ್ರತಿನಿತ್ಯ 95 ಸಾವಿರ ಜನಕ್ಕೆ ಉಚಿತ ಊಟ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ದೇಶಾದ್ಯಂತ ಅನೇಕ ಜನ ಆಹಾರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಅಕ್ಷಯ ಪಾತ್ರೆ ಪ್ರತಿಷ್ಠಾನವು ಅನೇಕ ಜನರ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದೆ. ಅದರಲ್ಲೂ ನಗರದ ಕೂಲಿ ಕಾರ್ಮಿಕರು, ಸ್ಮಶಾನದ ಸಿಬ್ಬಂದಿ, ಪೋಲಿಸರು, ಆರೋಗ್ಯ ಸಿಬ್ಬಂದಿಗಳಿಗೆ ಫುಡ್ ಪ್ಯಾಕೆಟ್ ಗಳ ವಿತರಣೆ ಮಾಡುತ್ತಿದೆ.

    ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ 95,000 ಜನರಿಗೆ ಫುಡ್ ಪ್ಯಾಕೆಟ್ ಗಳನ್ನು ವಿತರಣೆ ಮಾಡುತ್ತಿದೆ. ಅದರಲ್ಲಿ 1,450 ಸ್ಮಶಾನ ಸಿಬ್ಬಂದಿಗಳಿಗೆ ನಿತ್ಯ ಊಟ ಹಂಚುತ್ತಿದ್ದಾರೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ 700 ಆರೋಗ್ಯ ಸಿಬ್ಬಂದಿಗೆ ಆಹಾರದ ಪೊಟ್ಟಣಗಳನ್ನು ನೀಡುತ್ತಿದ್ದಾರೆ. ಕೆ.ಆರ್.ಮಾರ್ಕೆಟ್ ನಲ್ಲಿ 2500 ಕೂಲಿ ಕಾರ್ಮಿಕರು,ಭಿಕ್ಷಕರಿಗೆ ಮಧ್ಯಾಹ್ನದ ಊಟ ಪಡೆಯುತ್ತಿದ್ದಾರೆ. ಜೊತೆಗೆ ದಿನವೂ 17000 ಪೋಲಿಸರಿಗೆ ನಿತ್ಯ ಆಹಾರ ಸೇವೆ ನೀಡಲಾಗುತ್ತಿದೆ.

    ಹಾಗೆಯೇ ಸರ್ಕಾರಿ ಆಸ್ಪತ್ರೆಯ 5000 ಸಿಬ್ಬಂದಿಗೆ ಪ್ರತಿದಿನ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಈ ಮೂಲಕ ಕೊರೊನಾ ಸಮಯದಲ್ಲೂ ಹೃದಯವಂತಿಕೆಯನ್ನು ಮೆರೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಕ್ಷಯ ಪಾತ್ರೆ ಪ್ರತಿಷ್ಠಾನದ ಸಾರ್ವಜನಿಕ ಸಂಪರ್ಕಾಧಿಕಾರಿ ನವೀನ್ ನೀರದ್ ದಾಸ್, ಬೆಂಗಳೂರಿನ 17 ಸ್ಮಶಾನಗಳಿಗೆ ಊಟ ಪೂರೈಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ, ಮಕ್ಕಳಿಗೆ ಕಿಟ್ ಗಳನ್ನು ನೀಡಲಾಗುತ್ತಿದೆ ಎಂದರು.

  • ನಮ್ಮ ಕ್ಯಾಂಟೀನ್ ಯೋಜನೆಗೆ ಇಸ್ಕಾನ್ ಅಕ್ಷಯ ಪಾತ್ರೆ ಜೊತೆ ಸರ್ಕಾರ ಒಪ್ಪಂದ

    ನಮ್ಮ ಕ್ಯಾಂಟೀನ್ ಯೋಜನೆಗೆ ಇಸ್ಕಾನ್ ಅಕ್ಷಯ ಪಾತ್ರೆ ಜೊತೆ ಸರ್ಕಾರ ಒಪ್ಪಂದ

    – ಬೆಂಗಳೂರಲ್ಲಿ 5 ರೂ.ಗೆ ತಿಂಡಿ, 10ರೂ.ಗೆ ಊಟ

    ಬೆಂಗಳೂರು: ರಾಜ್ಯ ಸರ್ಕಾರ ಬುಧವಾರದಂದು ಬಜೆಟ್‍ನಲ್ಲಿ ಪ್ರಕಟಿಸಿರುವ `ನಮ್ಮ ಕ್ಯಾಂಟೀನ್’ ಯೋಜನೆಗೆ ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ನಮ್ಮ ಕ್ಯಾಂಟೀನ್ ಅನುಷ್ಠಾನಕ್ಕೆ ಅಕ್ಷಯ ಪಾತ್ರೆ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಬೆಂಗಳೂರಿನ 198 ವಾರ್ಡ್‍ಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭವಾಗಲಿದ್ದು, ಅಕ್ಷಯ ಪಾತ್ರೆ ಫೌಂಡೇಷನ್ ಈ ಯೋಜನೆಯ ಹೊಣೆ ವಹಿಸಿಕೊಳ್ಳಲಿದೆ. ನಮ್ಮ ಕ್ಯಾಂಟೀನ್‍ಗಳಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಅಕ್ಷಯ ಪಾತ್ರೆ ಫೌಂಡೇಷನ್ ಇದಕ್ಕೆ 60 ರೂ. ನಿಗದಿ ಮಾಡಿದ್ದು, 35 ರೂಪಾಯಿಯನ್ನು ಸರ್ಕಾರ ನೀಡಲಿದೆ.

    ಆಹಾರ ಮತ್ತು ನಾಗರೀಕ ಪೂರೈಕೆ ಸರಬರಾಜು ಇಲಾಖೆಯಿಂದ ನಮ್ಮ ಕ್ಯಾಂಟೀನ್ ನಡೆಸಲು ಯೋಜನೆ ರೂಪಿಸಲಾಗಿದ್ದು, ಜಾಗ ನಿಯೋಜನೆಗೆ ಆಹಾರ ಇಲಾಖೆ ಬಿಬಿಎಂಪಿ ಸಹಾಯ ಪಡೆಯಲಿದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳೋ ದೃಷ್ಟಿಯಿಂದ ಆಲೋಚನೆ ಮಾಡಲಾಗಿದ್ದು, ಈಗಾಗ್ಲೇ ಆಹಾರ ಇಲಾಖೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದೆ. ಪ್ರತಿ ನಿತ್ಯ ಒಂದು ಲಕ್ಷ ಜನರಿಗೆ ಮೂರು ಹೊತ್ತಿನ ಆಹಾರ ಪೂರೈಕೆ ಮಾಡುವ ಆಶಯ ಹೊಂದಲಾಗಿದೆ.

    ಇನ್ನೆರಡು ತಿಂಗಳ ಒಳಗೆ ನಮ್ಮ ಕ್ಯಾಂಟಿನ್‍ನಲ್ಲಿ ಊಟದ ಭಾಗ್ಯ ಸಿಗಲಿದೆ. ನಮ್ಮ ಕ್ಯಾಂಟಿನ್ ಯೋಜನೆಗೆ 100 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ.