Tag: aksai chin

  • ಭಾರತದ ಜೊತೆ ಸ್ನೇಹ ಹಸ್ತ ಚಾಚಿ ಕಿರಿಕ್‌ – ಲಡಾಖ್‌ನಲ್ಲಿ 2 ಕೌಂಟಿ ರಚಿಸಿ ಚೀನಾ ಕ್ಯಾತೆ

    ಭಾರತದ ಜೊತೆ ಸ್ನೇಹ ಹಸ್ತ ಚಾಚಿ ಕಿರಿಕ್‌ – ಲಡಾಖ್‌ನಲ್ಲಿ 2 ಕೌಂಟಿ ರಚಿಸಿ ಚೀನಾ ಕ್ಯಾತೆ

    ನವದೆಹಲಿ: ಭಾರತದೊಂದಿಗೆ (India) ಸ್ನೇಹ ಹಸ್ತ ಚಾಚಿ ನಂತರ ಕಿರಿಕ್‌ ಮಾಡುವ ಚಾಳಿಯನ್ನು ಮತ್ತೆ ಚೀನಾ (China) ಮುಂದುವರಿಸಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಅಕ್ಸಾಯ್ ಚಿನ್‌ನಲ್ಲಿ (Aksai Chin) ಚೀನಾ ಎರಡು ಹೊಸ ‘ಕೌಂಟಿ’ಗಳನ್ನು ರಚಿಸಿ  ಕ್ಯಾತೆ ತೆಗೆದಿದೆ.

    ಚೀನಾದ ಈ ಪ್ರಯತ್ನಕ್ಕೆ ಭಾರತ ಸರ್ಕಾರ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.  ಭಾರತೀಯ ಭೂಪ್ರದೇಶದಲ್ಲಿ ಅಕ್ರಮ ಚೀನೀ ಆಕ್ರಮಣವನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಖಾರವಾಗಿ ತಿಳಿಸಿದೆ.

     

    ವಾರದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್. ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿರುವ ಚೀನಾದ ಕ್ರಮವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳೆಂದು ಕರೆಯಲ್ಪಡುವ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿವೆ (Ladakh) ಎಂದು ಹೇಳಿದರು. ಇದನ್ನೂ ಓದಿ: ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್‌| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?

    ಹೊಸ ಕೌಂಟಿಗಳ ರಚನೆಯು ಪ್ರದೇಶದ ಮೇಲೆ ತನ್ನ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಈ ನಡೆಯು ಈ ಪ್ರದೇಶವನ್ನು ‘ಅಕ್ರಮ’ವಾಗಿ ಹಾಗೂ ‘ಬಲವಂತ’ದಿಂದ ಆಕ್ರಮಿಸಿಕೊಳ್ಳಲು ಚೀನಾಕ್ಕೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂದು ತಿಳಿಸಿದರು.

    ಅಕ್ಸಯ್‌ ಚೀನ್‌ ಏಲ್ಲಿದೆ?
    ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ಮತ್ತು ಚೀನಾದ ಸಂಬಂಧ ಚೆನ್ನಾಗಿತ್ತು. ಆದರೆ ಕುತಂತ್ರಿ ಚೀನಾ ಭಾರತಕ್ಕೆ ಹಿಂದುಗಡೆಯಿಂದ ಚೂರಿ ಹಾಕಿತ್ತು. 1950 ರ ದಶಕದಲ್ಲಿ ಚೀನಾ ಟಿಬೆಟ್ ಸಂಪರ್ಕಿಸುವ ಸಲುವಾಗಿ ಅಕ್ಸಯ್‌ ಚೀನ್‌ ಪ್ರದೇಶದ ಮೂಲಕ ಮಿಲಿಟರಿ ರಸ್ತೆಯ ನಿರ್ಮಾಣಕ್ಕೆ ಕೈಹಾಕಿತ್ತು.

    ಚೀನಾದವರು ರಸ್ತೆ ನಿರ್ಮಿಸುವಾಗ ಭಾರತದ ಸೈನಿಕರು ಅಲ್ಲಿ ಗಸ್ತು ಕಾಯುತ್ತಿರಲಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ಈ ಸಂದರ್ಭದಲ್ಲಿ ಸೈನಿಕರು ಅಲ್ಲಿ ಗಸ್ತು ತಿರುಗುತ್ತಿರಲಿಲ್ಲ. ಯಾಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 5,000 ಮೀಟರ್ ಎತ್ತರದಲ್ಲಿದೆ. ಇಲ್ಲಿ ಜನವಸತಿ ಇಲ್ಲದ ಕಾರಣ ಅಲ್ಲಿ ಏನಾಗುತ್ತಿದೆ ಎನ್ನುವುದು ಅಷ್ಟು ಸುಲಭವಾಗಿ ತಿಳಿಯುತ್ತಿರಲಿಲ್ಲ. 1958ರಲ್ಲಿ 1,200 ಕಿಲೋಮೀಟರ್‌ ಉದ್ದದ ರಸ್ತೆಯನ್ನು ಚೀನಾ ನಿರ್ಮಾಣ ಮಾಡಿತ್ತು.

    1958ರಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಭಾರತ ಬಲವಾಗಿ ಚೀನಾ ನಡೆಯನ್ನು ವಿರೋಧಿಸಿತ್ತು. ಯಾವುದೇ ಯುದ್ಧ ಮಾಡದೇ ಭಾರತದ 38,000 ಚದರ ಕಿ.ಮೀ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಈ 38,000 ಚದರ ಕಿ.ಮೀ ಜಾಗವೇ ಈಗಿನ ಅಕ್ಷಯ್‌ ಚೀನ್‌. ಇದನ್ನು ಚೀನಾ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.

  • ಪಿಓಕೆಯೊಂದಿಗೆ ಅಕ್ಷಯ್ ಚಿನ್ ಭಾರತದ ಅವಿಭಾಜ್ಯ ಅಂಗ

    ಪಿಓಕೆಯೊಂದಿಗೆ ಅಕ್ಷಯ್ ಚಿನ್ ಭಾರತದ ಅವಿಭಾಜ್ಯ ಅಂಗ

    ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಆಕ್ಷಯ್ ಚಿನ್ ಸಹ ಭಾರತದ ಅವಿಭಾಜ್ಯ ಅಂಗ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಲೋಕಸಭೆಯಲ್ಲಿ ಇಂದು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿಯ ರದ್ದು ಕುರಿತಂತೆ ನಡೆಯುತ್ತಿರುವ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಜಮ್ಮು ಕಾಶ್ಮೀರವನ್ನು ರಾತ್ರಿ ಬೆಳಗಾಗುವುದರ ಒಳಗಡೆ ಎರಡು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದೀರಿ. ಇದರಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹೇಗಾಗುತ್ತದೆ. ನೀವು ಪಾಕ್ ಆಕ್ರಮಿತ ಕಾಶ್ಮೀರ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ರಾಜ್ಯವನ್ನು ವಿಭಜನೆ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.

    ಇದಕ್ಕೆ ಕೂಡಲೇ ಉತ್ತರ ನೀಡಿದ ಶಾ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಮತ್ತು ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಇದರ ಬಗ್ಗೆ ಆಧಾರವಿದೆ. ಪಿಓಕೆಯನ್ನು ನಾವು ಪರಿಗಣಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾನು ಹೇಳುತ್ತೇನೆ. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಾಗ ಮಾತ್ರ ಅದು ಜಮ್ಮು ಕಾಶ್ಮೀರ ಆಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಷಯ್ ಚಿನ್ ಸೇರಿಸಿ ಜಮ್ಮು ಕಾಶ್ಮೀರದ ಗಡಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಪಿಓಕೆ ಮತ್ತು ಅಕ್ಷಯ್ ಚಿನ್ ಎರಡೂ ಭಾರತದ ಅವಿಭಾಜ್ಯ ಅಂಗಗಳು ಎಂದು ಉತ್ತರಿಸಿದರು.