Tag: Ajit Agarkar

  • ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ರವಿಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆ ಮುರಿದು ಅಜಿತ್ ಅಗರ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಚಹಲ್ 6 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ 48.4 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟ್ ಆಗಿದೆ. 10 ಓವರ್ ಎಸೆದು, 42 ರನ್ ನೀಡಿ 6 ವಿಕೆಟ್ ಕಿತ್ತ ಚಹಲ್ ಕೋಚ್ ರವಿಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 1991 ರಲ್ಲಿ ಪರ್ತ್ ಪಂದ್ಯದಲ್ಲಿ ಸ್ಪಿನ್ನರ್ ಆಗಿದ್ದ ಶಾಸ್ತ್ರಿ 15 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.

    ಅಜಿತ್ ಅಗರ್ಕರ್ ಮೆಲ್ಬರ್ನ್ ಕ್ರೀಡಾಂಗಣದಲ್ಲಿ 9.3 ಓವರ್ ಎಸೆದು 42 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಉಸ್ಮಾನ್ ಖವಜಾ, ಶೇನ್ ಮಾರ್ಶ್, ಪೀಟರ್ ಹ್ಯಾಂಡ್ಸ್‍ಕಾಂಬ್, ಸ್ಟೋಯಿನ್ ಸನ್, ರಿಚರ್ಡ್ ಸನ್, ಆಡಂ ಜಂಪಾ ಅವರ ವಿಕೆಟ್ ಪಡೆದು ಆಸ್ಟ್ರೇಲಿಯಾದ ರನ್ ವೇಗಕ್ಕೆ ಕಡಿವಾಣ ಹಾಕಿದರು.

    ಪೀಟರ್ ಹ್ಯಾಂಡ್ಸ್‍ಕಾಂಬ್ 58 ರನ್(63 ಎಸೆತ, 2 ಬೌಂಡರಿ) ಹೊಡೆದು ಆಸೀಸ್ ರನ್ ಹೆಚ್ಚಿಸಲು ನೆರವಾದರು. ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು.

    ಈ ಪಂದ್ಯ ಸೇರಿದಂತೆ ಒಟ್ಟು 35 ಪಂದ್ಯ ಆಡಿರುವ ಚಹಲ್ 62 ವಿಕೆಟ್ ಪಡೆದಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 22 ರನ್ ನೀಡಿ 5 ವಿಕೆಟ್ ಪಡೆದಿದ್ದು ಇದೂವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv