Tag: ajim

  • ಕ್ರಾಂತಿ ಅಸೋಸಿಯೇಷನ್‍ನಿಂದ ಹಸಿವು ಮುಕ್ತ ಕ್ರಾಂತಿ – ವಿಜಯಪುರದ ಮಹ್ಮದ್ ಅಜೀಂ ಪಬ್ಲಿಕ್ ಹೀರೋ

    ಕ್ರಾಂತಿ ಅಸೋಸಿಯೇಷನ್‍ನಿಂದ ಹಸಿವು ಮುಕ್ತ ಕ್ರಾಂತಿ – ವಿಜಯಪುರದ ಮಹ್ಮದ್ ಅಜೀಂ ಪಬ್ಲಿಕ್ ಹೀರೋ

    ವಿಜಯಪುರ: ಪ್ರತಿ ನಿತ್ಯ ಅದೆಷ್ಟೋ ನಿರ್ಗತಿಕ, ಅಸಾಹಯಕ ಜನರು ಒಪ್ಪತ್ತು ಊಟಕ್ಕೂ ಗತಿ ಇಲ್ಲದೆ ಕಡು ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಒಂದು ಹೊತ್ತು ಮಾತ್ರ ಊಟ ಮಾಡಿ ಜೀವನ ಸಾಗಿಸುವವರು ಇದ್ದಾರೆ. ಹಾಗೆಯೇ ಅದೆಷ್ಟೋ ಜನರು ಪ್ರತಿ ನಿತ್ಯ ಆಹಾರ ಹಾಳು ಮಾಡಿ ತಿಪ್ಪೆಗೆ ಎಸೆಯುವ ಜನರು ನಮ್ಮೊಂದಿಗೆ ಇದ್ದಾರೆ. ಆದರೆ ಈ ವಿಷಯದಲ್ಲಿ ವಿಜಯಪುರದ ನಿರ್ಗತಿಕರು ಮಾತ್ರ ಲಕ್ಕಿ ಅನ್ನಬೇಕು. ವಿಜಯಪುರದ ನಿರ್ಗತಿಕ ಜನರಿಗೆ ಅನ್ನದಾತರಾಗಿ ಸಂಸ್ಥೆಯೊಂದು ನಿಂತಿದ್ದು, ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ವಿಜಯಪುರದ ಸಕಫ್‍ರೋಜಾ ಬಡಾವಣೆ ಜನರು ನಿರ್ಗತಿಕರ ಹೊಟ್ಟೆ ತುಂಬಿಸಲು ಅಡುಗೆ ಮಾಡುತ್ತಿದ್ದಾರೆ. ಬಡಾವಣೆ ವಿದ್ಯಾರ್ಥಿಗಳು, ಕೂಲಿ ಮಾಡೋ ಮಂದಿ ಸಂಜೆ ಆಗುತ್ತಿದ್ದಂತೆಯೇ ಮಹ್ಮದ್ ಅಜೀಂ ಇನಾಂದಾರ್ ಮನೆಯಲ್ಲಿ ಸೇರುತ್ತಾರೆ. ಒಬ್ಬರು ತರಾಕಾರಿ ಹೆಚ್ಚಿದ್ದರೆ, ಇನ್ನೊಬ್ಬರು ಒಗ್ಗರಣೆ ಹಾಕುತ್ತಾರೆ. ಎಲ್ಲರೂ ಸೇರಿ ಪೊಟ್ಟಣ ಕಟ್ಟುತ್ತಾರೆ. ಬೈಕ್‍ಗಳಲ್ಲಿ ನಿರ್ಗತಿಕರ ಬಳಿ ತೆರಳಿ ಊಟ ನೀಡಿ ಬರುತ್ತಾರೆ. ಇದು ಅವರ ನಿತ್ಯದ ಕಾಯಕವಾಗಿದೆ.

    ವರ್ಷದ ಹಿಂದೊಮ್ಮೆ ಅಜೀಂ ಹೊರಗೆ ಹೋಗಿದ್ದಾಗ ನಿರ್ಗತಿಕನೋರ್ವ ರಸ್ತೆ ದಾಟಲು ಪರದಾಡುತ್ತಿದ್ದರು. ಆಗ ಅವರನ್ನ ರಸ್ತೆ ದಾಟಿಸಿದ ಅಜೀಂ, ಊಟ ಆಯ್ತಾ ತಾತಾ ಅಂತ ಕೇಳಿದ್ದರಂತೆ. ನಮ್ಮಂತಹವರಿಗೆಲ್ಲ ಎಲ್ಲಿ ಊಟ, ನಿಮ್ಮಂತಹವರು ಏನಾದರು ಕೊಟ್ಟರೆ ಮಾತ್ರ ಊಟ ಅಂದಿದ್ದರಂತೆ. ಅಂದು ನಿರ್ಗತಿಕರಿಗೆ ಆಸರೆ ಆಗಲು ಪಣ ತೊಟ್ಟ ಅಜೀಂ, ಕ್ರಾಂತಿ ಅಸೋಸಿಯೇಷನ್‍ ಹುಟ್ಟು ಹಾಕಿದರು, ಅದರ ಫಲವಾಗಿ ಇಂದು ನೂರಾರು ನಿರ್ಗತಿಕರ ಹಸಿವು ನೀಗುತ್ತಿದೆ.

    ಪ್ರತಿನಿತ್ಯ 4 ರಿಂದ 5 ಸಾವಿರ ರೂ. ಇದಕ್ಕೆ ಖರ್ಚಾಗುತ್ತದೆ. ಅಜೀಂ ಒಳ್ಳೆಯ ಕಾರ್ಯಕ್ಕೆ ನಗರದ ಸಹೃದಯ ದಾನಿಗಳ ನೆರವಿದೆ. ಯಾವುದೇ ಕಾರ್ಯಕ್ರಮದಲ್ಲಿ ಅಡುಗೆ ಉಳಿದರೆ ಅದನ್ನು ನಿರ್ಗತಿಕರಿಗೆ ತಲುಪಿಸುತ್ತಾರೆ.