Tag: Aizawl

  • ದಶಕಗಳ ಕನಸು ನನಸು – ಕಣಿವೆ ರಾಜ್ಯ ಮಿಜೋರಾಂಗೆ ಮೊದಲ ರೈಲು ಮಾರ್ಗ; ವಿಶೇಷತೆಗಳೇನು?

    ದಶಕಗಳ ಕನಸು ನನಸು – ಕಣಿವೆ ರಾಜ್ಯ ಮಿಜೋರಾಂಗೆ ಮೊದಲ ರೈಲು ಮಾರ್ಗ; ವಿಶೇಷತೆಗಳೇನು?

    ಮಿಜೋರಾಂ ರಾಜಧಾನಿ ಐಜ್ವಾಲ್ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ‌ ಸೆ.13ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಅಲ್ಲಿನ ಜನತೆಯ ದಶಕದ ಕನಸು ನನಸಾಗಿದೆ. ಅಲ್ಲದೇ ಐಜ್ವಾಲ್‌ ನಗರ ಮೊಟ್ಟ ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲ ಸೇರಿಕೊಂಡಿದೆ. ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ. ಹಾಗಿದ್ರೆ ಇದರ ವಿಶೇಷತೆ ಏನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಬೈರಾಬಿ- ಸೈರಾಂಗ್‌ ನಡುವಿನ ಈ ರೈಲು ಮಾರ್ಗವನ್ನು ಸೆ.13 ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ದುರ್ಗಮ ಗುಡ್ಡಗಾಡು ಪ್ರದೇಶ, ಆಳವಾದ ಕಂದಕ, ಕಣಿವೆಗಳಿಂದ ಕೂಡಿರುವ ಈಶಾನ್ಯ ರಾಜ್ಯದಲ್ಲಿರೈಲು ಮಾರ್ಗ ಕಾರ್ಯಗತಗೊಂಡಿದ್ದೇ ದೊಡ್ಡ ಸಾಹಸ. ಮೊದಲು ಸಿಲ್ಚಾರ್‌ನಿಂದ ಐಜ್ವಾಲ್‌ಗೆ 8-10 ಗಂಟೆ ಪ್ರಯಾಣ ಮಾಡಬೇಕಿತ್ತು. ಈಗ ಕೇವಲ 4 ಗಂಟೆಯಲ್ಲಿ ಐಜ್ವಾಲ್‌ ತಲುಪಬಹುದು.

    8,070 ಕೋಟಿ ರೂ. ವೆಚ್ಚದ ಯೋಜನೆ:
    ಭಾರತೀಯ ರೈಲ್ವೆ (ಎನ್‌ಎಫ್‌ಆರ್) ಈ ನೂತನ ರೈಲು ಮಾರ್ಗವನ್ನು ನಿರ್ಮಿಸಿದೆ. ಅಸ್ಸಾಂ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಈ ರಾಜ್ಯದ ಗಡಿ ಭಾಗದವರೆಗೆ ರೈಲ್ವೆ ಸಂಪರ್ಕ ಈ ಹಿಂದೆಯೇ ಇತ್ತು. ಆದರೆ, ರಾಜ್ಯದೊಳಗೆ ಇನ್ನೂ ರೈಲು ಸಂಪರ್ಕ ಕಲ್ಪಿಸಿರಲಿಲ್ಲ. ಈಗ ರಾಜ್ಯದೊಳಗೆ ರೈಲಿನ ಸದ್ದು ಮೊಳಗಲಿದೆ. 2014ರ ನವೆಂಬರ್‌ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ರಾಜ್ಯದಲ್ಲಿ ಬೈರಾಬಿಯಿಂದ ಸೈರಾಂಗ್‌ ತನಕ ಹೊಸ ರೈಲು ಮಾರ್ಗದ ಶಿಲಾನ್ಯಾಸ ನೆರವೇರಿಸಿದ್ದರು. 2016ರ ಮಾ.21ರಂದು ಅಸ್ಸಾಂನಿಂದ ಬೈರಾಬಿವರೆಗೆ ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತನೆ ಮಾಡುವ ಮೂಲಕ ಮಿಜೋರಾಂನ ಬೈರಾಬಿಗೆ ಮೊದಲ ರೈಲು ತಲುಪಿತು. ಈ ಯೋಜನೆಗೆ 8,070 ಕೋಟಿ ರೂ. ವೆಚ್ಚವಾಗಿದೆ.

    11 ವರ್ಷಗಳ ಬಳಿಕ ಕಾಮಗಾರಿ ಪೂರ್ಣ:
    ರೈಲ್ವೆ ಟ್ರ್ಯಾಕ್‌ ಬಹುತೇಕ ಸುರಂಗ ಮತ್ತು ಸೇತುವೆ ಮೇಲೆಯೇ ನಿರ್ಮಾಣವಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಇಲ್ಲಿಭಾರಿ ಮಳೆ ಸುರಿಯುತ್ತಿರುತ್ತದೆ. ಈ ಸಂದರ್ಭದಲ್ಲಿಕೆಲಸ ಮಾಡಲು ಸಾಧ್ಯವೇ ಇಲ್ಲ. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರವೇ ಕಾಮಗಾರಿ ಸಾಧ್ಯ. ಸಣ್ಣ ಮಳೆ ಬಂದರೂ ಕಾರ್ಮಿಕರು ಕಾಮಗಾರಿ ಪ್ರದೇಶಕ್ಕೆ ತಲುಪುವುದೇ ದೊಡ್ಡ ಸಾಹಸ. ಯಾವಾಗ ಗುಡ್ಡ ಕುಸಿದು ಬೀಳುತ್ತದೆಯೋ ಎನ್ನುವ ಆತಂಕ. ನಿರ್ಮಾಣಕ್ಕೆ ಬೇಕಾದ ಭಾರಿ ವಾಹನಗಳನ್ನು ತೆಗೆದುಕೊಂಡು ಹೋಗುವುದು ಇನ್ನಷ್ಟು ದುಸ್ತರ.  ಈ ಎಲ್ಲಾಕಷ್ಟಗಳ ಹೊರತಾಗಿಯೂ ಸುಸಜ್ಜಿತ ಟ್ರ್ಯಾಕ್‌ ನಿರ್ಮಾಣವಾಗಿದೆ. ಇಂಥ ರೈಲು ಮಾರ್ಗದಲ್ಲಿಸಾಗುವುದೇ ಒಂದು ಸುಂದರ ಅನುಭವ. ಈ ಮಾರ್ಗದಲ್ಲಿಹೊರ್ಟೋಕಿ, ಕೌನ್ಪುಯಿ, ಮುವಾಲ್ಖಾಂಗ್‌ ಮತ್ತು ಸೈರಾಗ್‌ ಸೇರಿದಂತೆ ಒಟ್ಟು ನಾಲ್ಕು ರೈಲು ನಿಲ್ದಾಣಗಳಿವೆ.

    45 ಸುರಂಗ, 153 ಸೇತುವೆ:
    ಬೈರಾಬಿ- ಸೈರಾಂಗ್‌ ರೈಲು ಮಾರ್ಗದಲ್ಲಿಒಟ್ಟು 45 ಸುರಂಗಗಳಿದ್ದು ಒಟ್ಟು ಮಾರ್ಗದ 15.885 ಕಿ.ಮೀ ನಷ್ಟು (31%) ದೂರವನ್ನು ಸುರಂಗ ಮಾರ್ಗಗಳೇ ಒಳಗೊಂಡಿವೆ. ಒಟ್ಟು ಸೇತುವೆಗಳ ಉದ್ದ 11.78 ಕಿ.ಮೀ ಇದ್ದು, ಮೇಲ್ಸೇತುವೆ, ಕೆಳಸೇತುವೆ ಸೇರಿ ಒಟ್ಟು 153 ಸೇತುವೆಗಳಿವೆ. ನೆಲದಿಂದ 114 ಮೀಟರ್‌ ಎತ್ತರದಲ್ಲಿ ಕಂಬ ನಿರ್ಮಿಸಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಹಾಗೂ ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ ರೈಲ್ವೆ ಮಾರ್ಗ ಬಯಲಿನಲ್ಲಿದೆ.  ಕೆಲವೆಡೆ ಮಳೆಯಿಂದಾಗಿ ಭೂಕುಸಿತ ತಡೆಯಲು ಗುಡ್ಡಗಳನ್ನು ಸೂಕ್ತ ರಕ್ಷಣಾ ಯೋಜನೆಗಳೊಂದಿಗೆ ಬಲಪಡಿಸಲಾಗಿದೆ. ಸದ್ಯಕ್ಕೆ ಈ ಮಾರ್ಗದಲ್ಲಿ 3 ರೈಲು ಸಂಚಾರ ಆರಂಭಿಸಲಾಗಿದೆ. ಐಜ್ವಾಲ್‌- ದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌, ಐಜ್ವಾಲ್‌- ಕೋಲ್ಕತ್ತಾ ಎಕ್ಸ್‌ಪ್ರೆಸ್‌ ಮತ್ತು ಐಜ್ವಾಲ್‌- ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆರಂಭಗೊಂಡಿದೆ.

    ಸುರಂಗಗಳಲ್ಲಿ ಈಶಾನ್ಯ ಸಂಸ್ಕೃತಿ ಚಿತ್ರಣ:
    ಸುರಂಗಗಳ ಮುಖಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳನ್ನು ಮೂಡಿಸಲಾಗಿದೆ.ಇವುಗಳಲ್ಲಿ ಮಿಜೋರಾಂ ಜನರ ಉಡುಪು, ಹಬ್ಬ, ಸಂಪ್ರದಾಯಗಳು, ಗ್ರಾಮೀಣ ಜೀವನಶೈಲಿ, ಹಾಗೆಯೇ ರಾಜ್ಯದ ಸಸ್ಯಜೀವಿ ಮತ್ತು ಪ್ರಾಣಿಜೀವಿಗಳ ಚಿತ್ರಣ ನೀಡಲಾಗಿದೆ. 

    722 ಕಿ.ಮೀ. ಅಂತಾರಾಷ್ಟ್ರೀಯ ಗಡಿ:
    ಮಿಜೋರಾಂ 21,087 ಚ.ಕಿ.ಮೀ ಗಳಷ್ಟು ವಿಸ್ತಾರವಾಗಿದ್ದು, ಪಶ್ಚಿಮಕ್ಕೆ ಬಾಂಗ್ಲಾದೇಶ ಮತ್ತು ಪೂರ್ವ ಮತ್ತು ದಕ್ಷಿಣಕ್ಕೆ ಮ್ಯಾನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇದು 722 ಕಿ.ಮೀ. ಗಳ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ. ಮಿಜೋರಾಂನ ರಾಜಧಾನಿ ಐಜ್ವಾಲ್‌. ಇದು ತನ್ನ ಅಪೂರ್ವ ಪ್ರಕೃತಿ ಸೌಂದರ್ಯದಿಂದ ಮೈದುಂಬಿಕೊಂಡಿದೆ. ಐಜ್ವಾಲ್ ಸಮುದ್ರಮಟ್ಟದಿಂದ ಸುಮಾರು 1,131 ಮೀಟರ್‌ ಎತ್ತರದಲ್ಲಿದ್ದು, ಮುಗಿಲೆತ್ತರದ ಬೆಟ್ಟಗಳಿಂದ ರಮಣೀಯವಾಗಿ ಕಂಗೊಳಿಸುತ್ತಿದೆ.

    ಪ್ರವಾಸೋದ್ಯಮಕ್ಕೆ ಲಾಭ:
    ಮಿಜೋರಾಂನಲ್ಲಿ ಸದ್ಯಕ್ಕೆ ಪ್ರವಾಸೋದ್ಯಮ, ಬಿದಿರಿನ ಕರಕುಶಲ ವಸ್ತುಗಳು, ಶುಂಠಿ, ಅಡಿಕೆ, ಅರಣ್ಯಜನ್ಯ ಉತ್ಪನ್ನಗಳನ್ನೇ ಅವಲಂಬಿಸಿದೆ. ದೊಡ್ಡ ಶಿಕ್ಷಣ ಸಂಸ್ಥೆಗಳಾಗಲಿ, ವೈದ್ಯಕೀಯ ಕ್ಷೇತ್ರದಲ್ಲಾಗಲಿ ಮುಂಚೂಣಿಯಲ್ಲಿಲ್ಲ. ಆದರೆ, ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿಕೊಂಡಿರುವುದು ಹೆಮ್ಮೆಯ ವಿಷಯವೇ ಸರಿ. ರೈಲ್ವೆ ಸಂಪರ್ಕದಿಂದ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದರ ಜೊತೆಗೆ, ಉನ್ನತ ಶಿಕ್ಷಣ, ವ್ಯಾಪಾರ, ವೈದ್ಯಕೀಯ ಕ್ಷೇತ್ರದಲ್ಲಿ ಜನರು ಬೇರೆ ರಾಜ್ಯದೊಂದಿಗೆ ಸುಲಭ ಸಂಪರ್ಕಕ್ಕೆ ಸಹಕಾರಿಯಾಗಿದೆ. 2025ರ ಆಗಸ್ಟ್‌ನಲ್ಲಿ ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿದೆ.

    ಅಂದಾಜು 15 ಲಕ್ಷ ಜನಸಂಖ್ಯೆವುಳ್ಳ ಮಿಜೋರಾಂ ರಾಜ್ಯದ ಸಾಮಾಜಿಕ, ಆರ್ಥಿಕ ಪ್ರಗತಿಗೆ ಬೈರಾಬಿ ಸೈರಾಂಗ್ ರೈಲು ಮಾರ್ಗವು ವಿಶೇಷ ಕೊಡುಗೆ ನೀಡಲಿದೆ. ಬಹುತೇಕ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಿಜೋ ಭಾಷಿಗರ ಜನರ ಜೀವನ ಮಟ್ಟ ಸುಧಾರಿಸುವುದರ ಜೊತೆಗೆ ವ್ಯಾಪಾರ ವಹಿವಾಟಿಗೆ ಈ ಮಾರ್ಗವು ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಅಸ್ಸಾಂನ ಗುವಾಹಟಿ, ಸಿಲ್ವಾರ್, ದಿಲ್ಲಿಗೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇದಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಿಗೆ ಉತ್ತಮ ಪ್ರವೇಶ ಸಿಕ್ಕಂತಾಗಿದೆ. ನೂತನ ಮಾರ್ಗದಿಂದ ಐಜ್ವಾಲ್ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದ್ದು, ಸ್ಥಳೀಯ ಅರಣ್ಯ ಉತ್ಪನ್ನಗಳು, ಕುಶಲಕಲೆಗಳು, ತೋಟಗಾರಿಕೆ ಉತ್ಪನ್ನಗಳ ಸಾಗಾಟ ಸುಲಭವಾಗಲಿದೆ.

    ಮ್ಯಾನ್ಮಾರ್‌ವರೆಗೆ ವಿಸ್ತರಣೆ ಗುರಿ:
    ಐಜ್ವಾಲ್ ಹೊರಭಾಗದಲ್ಲಿರುವ ಸೈರಾಂಗ್‌ನಿಂದ ಮ್ಯಾನ್ಮಾರ್ ಗಡಿಯಲ್ಲಿರುವ ಝರಿನ್ನುಯಿವರೆಗೆ ರೈಲು ಮಾರ್ಗವನ್ನು ವಿಸ್ತರಿಸುವ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದೆ. ಬಂಗಾಲ ಕೊಲ್ಲಿಯ ಮೂಲಕ 539 ಕಿ.ಮೀ. ಸಮುದ್ರ ಮಾರ್ಗದಲ್ಲಿ ಕೋಲ್ಕತಾ ಬಂದರಿನ ಮೂಲಕ ಮಿಜೋರಾಂಗೆ ಸಂಪರ್ಕಿಸುವ ಗುರಿ ಇದೆ. ಈ ಮಾರ್ಗ ನಿರ್ಮಾಣವಾದರೆ ಆಗ್ನೆಯ ಏಷ್ಯಾದೊಂದಿಗೆ ವ್ಯಾಪಾರ, ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.

    ಈ ರೈಲ್ವೆ ಯೋಜನೆ ಮಿಜೋರಾಂ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ. ದೇಶದ ಬೇರೆಬೇರೆ ರಾಜ್ಯಗಳೊಂದಿಗೆ ಸಂಪರ್ಕಕ್ಕೆ ಅನುಕೂಲವಾಗಲಿದ್ದು. ರಾಜ್ಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. 

  • ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಐಜ್ವಾಲ್:‌ ಇಂದು (ಮಂಗಳವಾರ) ಬೆಳಗ್ಗೆ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮಿಜೋರಾಂನ ಐಜ್ವಾಲ್ (Aizawl, Mizoram)  ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಐಜ್ವಾಲ್ ಪಟ್ಟಣದ ದಕ್ಷಿಣ ಪರಿಧಿಯಲ್ಲಿ ನೆಲೆಗೊಂಡಿರುವ ಮೆಲ್ತಮ್ ಮತ್ತು ಹ್ಲಿಮೆನ್ ಸಮೀಪದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರಲ್ಲಿ 7 ಮಂದಿ ಸ್ಥಳೀಯರು ಹಾಗೂ ಮೂವರು ಹೊರ ರಾಜ್ಯದವರು. ಇನ್ನೂ 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದುವರೆಗೆ 10 ಮೃತದೇಹಗಳು ಪತ್ತೆಯಾಗಿದೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಆದರೆ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ – 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

    ಹಲವೆಡೆ ಭೂಕುಸಿತ: ನಿರಂತರ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಮಳೆಯಿಂದಾಗಿ ರಾಜ್ಯದ ಹಲವೆಡೆ ಭೂಕುಸಿತ ಉಂಟಾಗಿದೆ. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ಐಜ್ವಾಲ್ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಇದಲ್ಲದೆ ಹಲವಾರು ಅಂತರ್-ರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

    ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಲಾಲ್ದುಹೋಮ ಅವರು ಗೃಹ ಸಚಿವ ಕೆ ಸಪ್ದಂಗ, ಮುಖ್ಯ ಕಾರ್ಯದರ್ಶಿ ರೇಣು ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಕರೆದಿದ್ದಾರೆ. ಇನ್ನು ಭಾರೀ ಮಳೆಯ ಕಾರಣ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

  • ಕೈಕೊಟ್ಟ EVM; ವೋಟ್ ಮಾಡಲಾಗದೇ ಮಿಜೋರಾಂ ಸಿಎಂ ವಾಪಸ್

    ಕೈಕೊಟ್ಟ EVM; ವೋಟ್ ಮಾಡಲಾಗದೇ ಮಿಜೋರಾಂ ಸಿಎಂ ವಾಪಸ್

    ಐಜ್ವಾಲ್: ಮಿಜೋರಾಂ (Mizoram) ಹಾಗೂ ಛತ್ತೀಸ್‌ಗಢ ವಿಧಾನಸಭೆಗೆ ಇಂದು (ಮಂಗಳವಾರ) ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಮತದಾನದ ದಿನದಂದು ಮಿಜೋರಾಂನ ಮುಖ್ಯಮಂತ್ರಿ ರಾಜಧಾನಿ ಐಜ್ವಾಲ್‌ನ (Aizawl) ಮತಗಟ್ಟೆಯನ್ನು ತಲುಪಿದರೂ ಮತಚಲಾಯಿಸಲಾಗದೆ ವಾಪಸಾಗಿದ್ದಾರೆ.

    ಮಿಜೋರಾಂ ಮುಖ್ಯಮಂತ್ರಿ ಮತ್ತು ಎಂಎನ್‌ಎಫ್ ಅಧ್ಯಕ್ಷ ಝೋರಂತಂಗ (Zoramthanga) ಅವರು ಚುನಾವಣೆಗೆ ಮತಚಲಾಯಿಸಲು ತೆರಳಿದರೂ ಇವಿಎಂ (EVM) ಯಂತ್ರ ಕೈಕೊಟ್ಟ ಕಾರಣ ಮತಚಲಾಯಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ. ಮತಯಂತ್ರ ಕಾರ್ಯನಿರ್ವಹಿಸದ ಕಾರಣ ಕೆಲ ಸಮಯ ಪ್ರಯತ್ನಿಸಿದೆ. ಆದರೆ ಮತಚಲಾಯಿಸಲು ಆಗದೇ ಹೋದ ಕಾರಣ ಬೆಳಗ್ಗೆ ಸಭೆಯ ನಂತರ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಮಿಜೋರಾಂನಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಈಶಾನ್ಯ ರಾಜ್ಯಾದ್ಯಂತ 1,276 ಮತಗಟ್ಟೆಗಳಲ್ಲಿ 8,00,000 ಕ್ಕೂ ಹೆಚ್ಚು ಅರ್ಹ ಮತದಾರರು ಇಂದು ಮತಚಲಾಯಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಚುನಾವಣೆ ದಿನವೇ ಮಾವೋವಾದಿಗಳಿಂದ ಸ್ಫೋಟ – ಕರ್ತವ್ಯದಲ್ಲಿದ್ದ ಯೋಧನಿಗೆ ಗಾಯ

     

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ರಾಜ್ಯದ ಜನರಲ್ಲಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಿಜೋರಾಂ, ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನ ಇಂದು

  • ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ

    ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ

    ಐಜ್ವಾಲ್: ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು (Railway Bridge Collapse) ಬಿದ್ದ ಪರಿಣಾಮ 17 ಮಂದಿ ದುರ್ಮರಣಹೊಂದಿರುವ ಘಟನೆ ಮಿಜೋರಾಂನಲ್ಲಿ (Mizoram) ನಡೆದಿದೆ.

    ಮಿಜೋರಾಂನ ಐಜ್ವಾಲ್‌ನಿಂದ (Aizawl) ಸುಮಾರು 21 ಕಿ.ಮೀ ದೂರದಲ್ಲಿರುವ ಸಾಯಿರಾಂಗ್ (Sairang) ಪ್ರದೇಶದಲ್ಲಿ ಈ ದುರ್ಘಟನೆ ವರದಿಯಾಗಿದೆ. ಇನ್ನೂ ಹಲವರು ಸ್ಥಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸೇತುವೆ ಕುಸಿದ ಸಂದರ್ಭದಲ್ಲಿ ಸುಮಾರು 35-40 ಕಟ್ಟಡ ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

    ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಐಜ್ವಾಲ್ ಬಳಿಯ ಸಾಯಿರಾಂಗ್‌ನಲ್ಲಿ ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಇಂದು ಕುಸಿದಿದೆ. ಕನಿಷ್ಠ 17 ಕಾರ್ಮಿಕರ ಸಾವಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ದುರಂತದಿಂದ ತೀವ್ರ ದುಃಖವಾಗಿದೆ. ನಾನು ಎಲ್ಲಾ ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಯೋಗಿ ಅವರ ಕಾಲು ಮುಟ್ಟಿ ರಜನಿ ನಮಸ್ಕರಿಸಿದ್ದು ತಪ್ಪೇನೂ ಇಲ್ಲ: ಅಣ್ಣಾಮಲೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]