Tag: Airstike

  • ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಬಾಲಾಕೋಟ್‌ ಮೇಲೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಸುಮಾರು 300 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ಪಾಕಿಸ್ತಾನ ಬಹಿರಂಗವಾಗಿಯೇ ಒಪ್ಪಿಕೊಂಡಿದೆ.

    ಉರ್ದು ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾ ಅವರು ಏರ್‌ಸ್ಟ್ರೈಕ್‌ನಲ್ಲಿ 300 ಮಂದಿ ಸಾವನ್ನಪ್ಪಿರುವುದು ನಿಜ ಎಂದು ಹೇಳಿದ್ದಾರೆ.

    ಭಾರತ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ದಾಳಿ ನಡೆಸಿತ್ತು. ಇದರಲ್ಲಿ 300 ಮಂದಿ ಸಾವನ್ನಪ್ಪಿದ್ದರು. ನಾವು ಮಿಲಿಟರಿ ಸಿಬ್ಬಂದಿ ಇರುವ ಅವರ ಹೈಕಮಾಂಡ್​ನ್ನು ಗುರಿಯಾಗಿಸಿದ್ದೆವು. ನಮ್ಮದು ನ್ಯಾಯಯುತ ಗುರಿಯಾಗಿತ್ತು. ನಮ್ಮ ಗುರಿ ಅವರ ಗುರಿಗಿಂತಲೂ ವಿಭಿನ್ನವಾಗಿತ್ತು. ಯಾಕೆಂದರೆ ನಮ್ಮ ಗುರಿ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಿಬ್ಬಂದಿ ಆಗಿತ್ತು ಎಂದಿದ್ದಾರೆ.

    ಕಳೆದ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ಎನ್(ಪಿಎಂಎಲ್-ಎನ್) ನಾಯಕ ಆಯಾಝ್ ಸಾದಿಖ್ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಭಾರತದ ದಾಳಿಗೆ ಹೆದರಿ ಪಾಕಿಸ್ತಾನ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿಕೆ ನೀಡಿದ ನಂತರ ಅಘಾ ಹಿಲಾ ಅವರ ಈ ಹೇಳಿಕೆ ಈಗ ಭಾರೀ ಮಹತ್ವ ಪಡೆದಿದೆ.

    ಕಳೆದ ವರ್ಷ 2019ರ ಫೆಬ್ರವರಿಯಲ್ಲಿ ಬಂಧಿತರಾಗಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ಅಂದು ರಾತ್ರಿ 9 ಗಂಟೆಗೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪರಿಪರಿಯಾಗಿ ಕೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಜ್ವಾ ಅವರ ಕಾಲು ಭಯದಿಂದ ನಡುಗಿ ಹೋಗಿತ್ತು ಎಂದು ಹೇಳಿಕೆ ನೀಡಿದ್ದರು.

    ಪುಲ್ವಾಮಾದಲ್ಲಿ ಆತ್ಮಹುತಿ ದಾಳಿಕೋರನೊಬ್ಬ ಸ್ಫೋಟಕ ತುಂಬಿದ್ದ ಮಾರುತಿ ಇಕೋ ಕಾರನ್ನು ಸಿಆರ್‌ಪಿಎಫ್‌ ಬಸ್ಸಿಗೆ ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ಕೃತ್ಯಕ್ಕೆ ಪ್ರತಿಯಾಗಿ ಭಾರತ 2019ರ ಫೆ.26ರಂದು ನಸುಕಿನ ಜಾವ ವಾಯುಸೇನೆ ಮಿರಾಜ್‌ ವಿಮಾನದ ಮೂಲಕ ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿತ್ತು.

    ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿರಬಹುದು ಎಂದು ಭಾರತ ಸರ್ಕಾರ ಹೇಳಿತ್ತು. ಆದರೆ ಪಾಕಿಸ್ತಾನ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿ ಭಾರತದ ವಾದವನ್ನು ತಿರಸ್ಕರಿಸಿತ್ತು. ಬಳಿಕ ವಿದೇಶಿ ಮಾಧ್ಯಮಗಳು ಇಲ್ಲಿ ಉಗ್ರರ ಶಿಬಿರ ನಡೆಯುತ್ತಿತ್ತು. ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಮೂಲಗಳನ್ನು ಆಧಾರಿಸಿ ವರದಿ ಮಾಡಿದ್ದವು.

    ಭಾರತ ಸೇನೆ ಬಾಲಾಕೋಟ್‌ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಫೆ.28ರ ಬೆಳಗ್ಗೆ ಪಾಕಿಸ್ತಾನ ವಾಯುಸೇನೆ ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಮುಂದಾಗಿತ್ತು. ಆದರ ಪಾಕಿಸ್ತಾನ ಈ ಕುತಂತ್ರವನ್ನು ಭಾರತದ ಯುದ್ಧವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಈ ವೇಳೆ ಮಿಗ್‌ ವಿಮಾನವನ್ನು ಹಾರಿಸುತ್ತಿದ್ದ ಅಭಿನಂದನ್‌ ಪಾಕಿಸ್ತಾನದ ಎಫ್‌ 16 ಯುದ್ಧವಿಮಾನದ ಜೊತೆಗೆ ಡಾಗ್‌ಫೈಟ್‌ ಮಾಡಿ ಕೆಳಗೆ ಉರುಳಿಸಿದ್ದರು.