Tag: Airplane

  • ಆಗಸದಲ್ಲೇ ಹೊತ್ತಿ ಉರಿದ ವಿಮಾನದ ಇಂಜಿನ್

    ಆಗಸದಲ್ಲೇ ಹೊತ್ತಿ ಉರಿದ ವಿಮಾನದ ಇಂಜಿನ್

    ವಾಷಿಂಗ್ಟನ್: ವಿಮಾನವೊಂದು ಹಾರಾಡುತ್ತಿರುವಾಗಲೇ ಇಂಜಿನ್ ಹೊತ್ತಿ ಉರಿದ ಭಯಾನಕ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಯುನೈಟೆಡ್ ಏರ್ ಲೈನ್ಸ್ ವಿಮಾನವು 231 ಮಂದಿ ಪ್ರಯಾಣಿಕರು ಮತ್ತು 10 ಜನ ಸಿಬ್ಬಂದಿಗಳೊಂದಿಗೆ ಡೆನ್ವರ್ ನಿಂದ ಹೊನಲುಲುಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಏಕಾಏಕಿ ವಿಮಾನದ ಇಂಜಿನ್‍ನಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

    https://twitter.com/ThePlanetaryGuy/status/1363246229816291328

    ವಿಮಾನದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು, ನಡುಗಲು ಪ್ರಾರಂಭಿಸಿದಾಗ ತಕ್ಷಣ ಫೈಲಟ್ ತುರ್ತು ಭೂಸ್ಪರ್ಶ ಮಾಡಿ 241 ಜನರ ಪ್ರಾಣವನ್ನು ರಕ್ಷಿಸಿದ್ದಾರೆ.

    ಡೆನ್ವರ್ ನಿಂದ ಹೊನಲುಲುಗೆ ಹೊರಟಿದ್ದ ವಿಮಾನ ಯುಎ 328 ಏಫ್‍ನಲ್ಲಿ ಕಾಣಿಸಿಕೊಂಡ ಇಂಜಿನ್ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಯಾವುದೇ ಸಾವುನೋವುಗಳು ಸಂಭವಿಸದೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನದ ಆಡಳಿತ ಮಂಡಳಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    ವಿಮಾನದ ಇಂಜಿನ್ ಹೊತ್ತಿ ಉರಿದ ಪರಿಣಾಮವಾಗಿ ಬಿಡಿಭಾಗಗಳು ಕಟ್ಟಡಗಳ ಮಧ್ಯೆ, ಮತ್ತು ಮೈದಾನಕ್ಕೆ ಬಿದ್ದಿದೆ. ವಿಮಾನದಲ್ಲಿ ಕಾಣಿಸಿಕೊಂಡ ದೋಷವನ್ನು ಪರೀಕ್ಷಿಸಲು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ತಯಾರಿ ನಡೆಸಿದೆ.

  • ಕನ್ನಡಿಗರ ನೆರವಿಗೆ ನಿಂತ ಕೇಂದ್ರ- ವಿಶೇಷ ವಿಮಾನ, ರೈಲು ವ್ಯವಸ್ಥೆ

    ಕನ್ನಡಿಗರ ನೆರವಿಗೆ ನಿಂತ ಕೇಂದ್ರ- ವಿಶೇಷ ವಿಮಾನ, ರೈಲು ವ್ಯವಸ್ಥೆ

    ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಉತ್ತರ ಭಾರತದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ದೆಹಲಿಯಿಂದ ಕರ್ನಾಟಕಕ್ಕೆ ಇನ್ನೆರಡು ದಿನಗಳಲ್ಲಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

    ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಉತ್ತರ ಭಾರತದಲ್ಲಿ ಸಿಲುಕಿರುವ ಕನ್ನಡಿಗರು ರಾಜ್ಯಕ್ಕೆ ಮರಳುವುದಕ್ಕಾಗಿ ವಿಶೇಷ ರೈಲೊಂದನ್ನು ಓಡಿಸಲು ರೈಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ. ಈ ಸಂಬಂಧ ರೈಲ್ವೆ ಸಚಿವ ಪಿಯುಶ್ ಗೋಯಲ್ ಜೊತೆಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರನ್ನ ಕರೆ ತರಲು ಮುಂದಾದ ಕೇಂದ್ರ- ಹೊರ ರಾಜ್ಯದ ಕನ್ನಡಿಗರನ್ನ ಮರೆತ ರಾಜ್ಯ ಸರ್ಕಾರ

    ದೆಹಲಿಯ ಹೊರತಾಗಿ ಹರ್ಯಾಣ, ಪಂಜಾಬ್ ಮತ್ತಿತರ ಸಮೀಪದ ಸ್ಥಳಗಳಿಂದಲೂ ಜನರು ರಾಜ್ಯಕ್ಕೆ ವಾಪಸ್ ಆಗಬಹುದಾಗಿದೆ. ಈ ನಿಟ್ಟಿನಲ್ಲಿ ದೆಹಲಿಯ ಸುತ್ತ ಬೇರೆ ನೇರ ಪ್ರದೇಶಗಳಲ್ಲಿರುವ ಕನ್ನಡಿಗರನ್ನು ಕೂಡಲೇ ದೆಹಲಿಗೆ ಕರೆಸಿಕೊಂಡು ಅವರನ್ನೂ ಇದೇ ರೈಲಿನಲ್ಲಿ ಕರ್ನಾಟಕಕ್ಕೆ ಕಳುಹಿಸಿಕೊಡಲು ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ದೆಹಲಿ ಮತ್ತಿತರ ಸ್ಥಳಗಳಿಂದ ತಮ್ಮ ಸ್ವಂತ ವಾಹನದಲ್ಲಿ ಕರ್ನಾಟಕಕ್ಕೆ ಮರಳಲು ಇಚ್ಛಿಸಿದ ಅನೇಕ ದೆಹಲಿ ಕನ್ನಡಿಗರು ಹಾಗೂ ಯಾತ್ರಾರ್ಥಿಗಳಿಗೂ ಅಗತ್ಯ ಪರವಾನಿಗೆ ನೀಡಲಾಗುತ್ತಿದೆ.

    ದುಬೈನಿಂದ 2 ವಿಶೇಷ ವಿಮಾನ:
    ಅರಬ್ ದೇಶಗಳಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಮರಳಲು ಎರಡು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದ್ದು, ಮೇ 12ರಂದು ಯುಎಇನಿಂದ ಮಂಗಳೂರಿಗೆ ವಿಮಾನ ಸಂಚರಿಸುವುದನ್ನು ವಿದೇಶಾಂಗ ಸಚಿವರು ಖಚಿತಪಡಿಸಿದ್ದಾರೆ. ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದ್ದು, ಅದರ ವೇಳಾಪಟ್ಟಿ ಪ್ರಕಟವಾಗಬೇಕಿದೆ ಎಂದು ಸದಾನಂದಗೌಡ ಅವರು ತಿಳಿಸಿದ್ದಾರೆ.

  • ಫೇಸ್‍ಬುಕ್ ಗೆಳೆಯನನ್ನು ನೋಡಲು ಭೋಪಾಲ್‍ಗೆ ತೆರಳಿದ ಬೆಂಗ್ಳೂರಿನ ಅಪ್ರಾಪ್ತೆ

    ಫೇಸ್‍ಬುಕ್ ಗೆಳೆಯನನ್ನು ನೋಡಲು ಭೋಪಾಲ್‍ಗೆ ತೆರಳಿದ ಬೆಂಗ್ಳೂರಿನ ಅಪ್ರಾಪ್ತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 10 ನೇ ತರಗತಿಯ ಹುಡುಗಿಯೊಬ್ಬಳು ತನ್ನ ಫೇಸ್‍ಬುಕ್ ಗೆಳೆಯನಿಗೆ ಸರ್ಪ್ರೈಸ್ ನೀಡಲು ವಿಮಾನದ ಮೂಲಕ ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

    ಫೇಸ್‍ಬುಕ್ ಗೆಳೆಯನು ಕೂಡ ಅಪ್ರಾಪ್ತ. ಮನೆಯಲ್ಲಿ ತಂದೆಯ ಜೊತೆ ಹುಡುಗಿ ಜಗಳ ಮಾಡಿಕೊಂಡು ತನ್ನ ಫೇಸ್‍ಬುಕ್ ಗೆಳೆಯನ ನೋಡಲು ವಿಮಾನದಲ್ಲಿ ಭೋಪಾಲ್‍ಗೆ ಹೋಗಿದ್ದು, ಅಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಸದ್ಯ ಬೆಂಗಳೂರಿಗೆ ವಾಪಸ್ಸಾಗಿದ್ದಾಳೆ.

    ಹುಡುಗಿಯು ಶನಿವಾರ ಹುಡುಗನಿಗೆ ಹೇಳದೆ ಅವನ ಮನೆಯ ಹತ್ತಿರ ಹೋಗಿದ್ದಾಳೆ. ಹುಡುಗಿಯನ್ನು ಮನೆಯ ಹತ್ತಿರ ನೋಡಿದ ಹುಡುಗ, ಅಲ್ಲಿಂದ ಕರೆದುಕೊಂಡು ಹೋಗಿ ಹೋಟೆಲಿನಲ್ಲಿ ರೂಮ್ ಮಾಡಿದ್ದಾನೆ. ಆದರೆ ಅವಳ ಜೊತೆ ಇರುವ ಬದಲಾಗಿ ನೀನು ವಾಪಸ್ ಮನೆಗೆ ಹೋಗು ಎಂದು ಬುದ್ಧಿಮಾತು ಹೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ ಹೋಟೆಲಿನಲ್ಲಿ ಗಲಾಟೆ ಮಾಡಿದ್ದಾಳೆ.

    ಹೀಗೆ ಹಬೀಬ್‍ಗಂಜ್‍ನ ಹೋಟೆಲಿನಲ್ಲಿ ಗಲಾಟೆ ಮಾಡುತ್ತಿದ್ದ ಹುಡುಗಿ ಸೋಮವಾರ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹುಡುಗಿಯನ್ನು ವಿಚಾರಿಸಿ ಆಕೆ ಇನ್ನೂ ಅಪ್ರಾಪ್ತೆ ಎಂದು ತಿಳಿದ ಪೊಲೀಸರು, ಅವಳನ್ನು ಠಾಣೆಗೆ ಕರೆದುಕೊಂಡು ಹೋಗದೆ ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಹೋಗಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಆಕೆಯನ್ನು ಕೌನ್ಸ್ ಲಿಂಗ್ ಮಾಡಿದ ಅಧಿಕಾರಿಗಳಿಗೆ ಹುಡುಗಿ, ತನ್ನ ಫೇಸ್‍ಬುಕ್ ಗೆಳೆಯನ ನಡತೆಯನ್ನು ಪರೀಕ್ಷೆ ಮಾಡಲು ನಾನು ಇಲ್ಲಿಗೆ ಬಂದಿದ್ದು ಎಂದು ಹೇಳಿದ್ದಾಳೆ. ಶನಿವಾರ ಹುಡುಗಿ ತನ್ನ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಂತರ ಅವನು ತನ್ನ ಮನೆಯಲ್ಲಿ ನೀನು ಉಳಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಹೋಟೆಲ್ ಬುಕ್ ಮಾಡಿದ್ದಾನೆ. ಆದರೆ ಅವಳ ಜೊತೆ ಉಳಿದುಕೊಳ್ಳದೆ ಸೋಮವಾರ ನೀನು ಮನಗೆ ವಾಪಸ್ ಹೋಗು ಎಂದು ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಬೇಸರಗೊಂಡ ಆಕೆ ಹುಡುಗನ ಜೊತೆ ಜಗಳವಾಡಿ ಹೋಟೆಲ್ ಬಿಟ್ಟು ಹೊರಗೆ ಬಂದು ಪೊಲೀಸರ ಕೈಗೆ ಸಿಕ್ಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರಾಜೀವ್ ಜೈನ್, ಹುಡುಗಿ ಫೇಸ್‍ಬುಕ್‍ನಲ್ಲಿ ತುಂಬಾ ಸ್ನೇಹಿತರನ್ನು ಹೊಂದಿದ್ದಾಳೆ. ಮನೆಯಲ್ಲಿ ತಂದೆಯ ಜೊತೆ ಜಗಳವಾಡಿಕೊಂಡು, ಕಾಲ್ ಸೆಂಟರ್‍ ನಲ್ಲಿ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಅವಳ ಫೇಸ್‍ಬುಕ್ ಗೆಳೆಯನನ್ನು ಭೇಟಿಯಾಗಲು ಭೋಪಾಲ್‍ಗೆ ಬಂದಿದ್ದಾಳೆ. ಆದರೆ ತನ್ನ ಮಗಳು ಅವಳ ಚಿಕ್ಕಮ್ಮನ ಮನೆಗೆ ಹೋಗಿರಬಹುದು ಎಂದು ಆಕೆಯ ಪೋಷಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಾವು ಆಕೆಗೆ ಮನೆಬಿಟ್ಟು ಬರುವುದು ತಪ್ಪು ಎಂದು ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಆಕೆಯ ತಂದೆ ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾಗಿದ್ದು, ಮಗಳು ಪಬ್‍ಗೆ ಹೋಗುವುದನ್ನು ನಿರಾಕರಿಸಿದ್ದಾರೆ. ಈ ಕಾರಣದಿಂದ ಮನೆಯಲ್ಲಿ ಜಗಳವಾಡಿಕೊಂಡು ಶುಕ್ರವಾರ ಭೋಪಾಲ್‍ಗೆ ವಿಮಾನ ಹತ್ತಿದ್ದಾಳೆ. ನಂತರ ಅಲ್ಲಿ ತನ್ನ ಇಬ್ಬರು ಫೇಸ್‍ಬುಕ್ ಗೆಳೆಯರ ಸಹಾಯ ಪಡೆದು ಶನಿವಾರ ಆಕೆಯ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಾವು ಆಕೆಯ ತಂದೆಗೆ ಕರೆ ಮಾಡಿ, ಬಂದು ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದೆವು. ಅದರಂತೆ ಬಂದ ಅವರ ತಂದೆ, ಮಂಗಳವಾರ ರಾತ್ರಿ ಆಕೆಯನ್ನು ಕರೆದುಕೊಂಡು ಮನೆಗೆ ಹೋದರು ಎಂದು ಜೈನ್ ಹೇಳಿದ್ದಾರೆ.

    ನಾನು ಆಕೆಯ ತಂದೆಗೆ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಹೇಳಿದ್ದೇವೆ. ಮಕ್ಕಳ ಈ ಹಂತದಲ್ಲಿ ಪೋಷಕರು ಅವರ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳು ಪೋಷಕರಿಗೆ ಹೇಳದೆ ಈ ರೀತಿ ಹೊರಗೆ ಬರುವುದು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ನಾವು ಹುಡುಗಿಗೆ ಹೇಳಿದ್ದೇವೆ. ಆಕೆ ನೋಡಲು ಬಂದ ಹುಡುಗ ಒಳ್ಳೆಯವನು. ಇಲ್ಲದಿದ್ದರೆ ಈ ವಿಚಾರ ತುಂಬಾ ಗಂಭೀರವಾಗರುತ್ತಿತ್ತು ಎಂದು ಜೈನ್ ತಿಳಿಸಿದ್ದಾರೆ.

  • ಎದ್ದು ನಿಂತು ಚಪ್ಪಾಳೆ- ವಿಮಾನದೊಳಗೆ ಅಭಿ ಪೋಷಕರಿಗೆ ಗೌರವದ ಆಹ್ವಾನ

    ಎದ್ದು ನಿಂತು ಚಪ್ಪಾಳೆ- ವಿಮಾನದೊಳಗೆ ಅಭಿ ಪೋಷಕರಿಗೆ ಗೌರವದ ಆಹ್ವಾನ

    ನವದೆಹಲಿ: ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಮೃತಸರದ ವಾಘಾ ಗಡಿಗೆ ತೆರಳಿದ್ದಾರೆ.

    ಹೆಮ್ಮೆಯ ಪುತ್ರ ಅಭಿನಂದನ್ ಬರುತ್ತಿರುವ ಮಾಹಿತಿ ತಿಳಿದ ತಕ್ಷಣ ಅವರ ತಂದೆ ನಿವೃತ್ತ ಏರ್‍ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್ ಮತ್ತು ತಾಯಿ ಶೋಭಾ ವರ್ಥಮಾನ್ ಅವರು ಗುರುವಾರ ರಾತ್ರಿ ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ:ಭಾರತೀಯರಿಗೆ ಅಭಿನಂದನ್ ತಂದೆ ಧನ್ಯವಾದ

    ಅಭಿನಂದನ್ ಪೋಷಕರು ವಿಮಾನದ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅದರೊಳಗಿದ್ದ ಸಹ ಪ್ರಯಾಣಿಕರು ಹರ್ಷೋದ್ಗಾರ ಕೂಗಿದ್ದು, ಅಲ್ಲದೇ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬರಮಾಡಿಕೊಂಡಿದ್ದರು. ಮಧ್ಯರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಏರ್ ಪೋರ್ಟ್ ನಲ್ಲಿಯೂ ಕೂಡ ಸೇನೆಯವರು ಅವರನ್ನು ಗೌರವದಿಂದ ಸ್ವಾಗತಿಸಿದ್ದಾರೆ.

    ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ. ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಆಗಿದ್ದು, ತಾಯಿ ಶೋಭಾ ವರ್ಥಮಾನ್ ವೈದ್ಯರಾಗಿದ್ದಾರೆ. ಪೋಷಕರು ದೆಹಲಿಗೆ ಬಂದು ಇಳಿದ ಕೂಡಲೇ ಅಮೃತಸರಕ್ಕೆ ತೆರಳಿದ್ದಾರೆ.

    ಪಾಕಿಸ್ತಾನವು ವಾಘಾ ಗಡಿಯಲ್ಲಿ ಇಂದು ಮಧ್ಯಾಹ್ನದ ಬಳಿಕ 3.30ರ ಸುಮಾರಿಗೆ ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯರ ಸಂಭ್ರಮ ಮುಗಿಲುಮುಟ್ಟಿದೆ. ಅಲ್ಲದೇ ವಾಘಾ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯ ಸೈನಿಕ ಅಭಿಯನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv