Tag: airline

  • ಆ.21ರವರೆಗೆ ಭಾರತದ ವಿಮಾನಗಳ ಮೇಲೆ ನಿಷೇಧ ಹೇರಿದ ಕೆನಡಾ

    ಆ.21ರವರೆಗೆ ಭಾರತದ ವಿಮಾನಗಳ ಮೇಲೆ ನಿಷೇಧ ಹೇರಿದ ಕೆನಡಾ

    ಒಟ್ಟಾವಾ: ಭಾರತದಿಂದ ಕೆನಡಾ ತೆರಳುವ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು 2021ರ ಆಗಸ್ಟ್ 21ರವರೆಗೆ ನಿಷೇಧಿಸಲಾಗಿದೆ ಎಂದು ಕೆನಡಾ ಸರ್ಕಾರ ಮಂಗಳವಾರ ಘೋಷಿಸಿದೆ. ಹೀಗಾಗಿ ಭಾರತದಿಂದ ಕೆನಡಾಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿರುವ ಪ್ರಯಾಣಿಕರು ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ.

    ಭಾರತ ಮತ್ತು ಕೆನಡಾ ನಡುವಿನ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಪುನಾರಂಭಿಸಲು ಇತ್ತೀಚೆಗಷ್ಟೇ ಕೆನಡಾ ಹಾಗೂ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಏರ್ ಇಂಡಿಯಾ ಟೊರೊಂಟೊ ಪ್ರತಿನಿಧಿಯನ್ನು ಭೇಟಿ ಮಾಡಿದ್ದರು. ಜೊತೆಗೆ ಉಭಯ ರಾಷ್ಟ್ರಗಳ ನಡುವೆ ವಿಮಾನಯಾನಗಳನ್ನು ಪುನಾರಂಭಿಸುವುದು ಮುಖ್ಯವಾಗಿದೆ. ಅದರಲ್ಲಿಯೂ ಕಾಲೇಜುಗಳನ್ನು ಪುನಃ ತೆರೆಯುವ ದೃಷ್ಟಿಯಿಂದ ವಿಮಾನ ಹಾರಾಟವನ್ನು ಪ್ರಾರಂಭಿಸಬೇಕು ಎಂದು ಹೇಳಿದ್ದರು.

    ಭಾರತ ಹೊರತುಪಡಿಸಿ ಉಳಿದ ಅಂತರಾಷ್ಟ್ರಿಯ ಪ್ರಯಾಣಿಕರು ಲಸಿಕೆ ಪಡೆದು ಕೆನಾಗೆ ಆಗಮಿಸಬಹುದಾಗಿದೆ. ಈ ನಿಯಮ ಪರವಾನಗಿ ಹೊಂದಿರುವ ಕಾರ್ಮಿಕರು, ವಿದೇಶಿ ವಿದ್ಯಾರ್ಥಿಗಳು ಮತ್ತು ಮೂಲ ನಿವಾಸಿಗಳಿಗೂ ಅನ್ವಯಿಸಲಾಗಿದೆ. ಇದನ್ನೂ ಓದಿ:ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು

  • ಟಿಕೆಟ್ ಬುಕ್ಕಿಂಗ್ ಬೇಡ – ಮೇ 3ರ ಬಳಿಕವೂ ರೈಲು, ವಿಮಾನ ಸಂಚಾರ ಅನುಮಾನ

    ಟಿಕೆಟ್ ಬುಕ್ಕಿಂಗ್ ಬೇಡ – ಮೇ 3ರ ಬಳಿಕವೂ ರೈಲು, ವಿಮಾನ ಸಂಚಾರ ಅನುಮಾನ

    – ಕೇಂದ್ರದಿಂದ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮೇ 3ರ ಲಾಕ್‍ಡೌನ್ ಅಂತ್ಯದ ಬಳಿಕವೂ ಬಸ್, ರೈಲು, ವಿಮಾನ ಸಂಚಾರ ಅನುಮಾನ ಎನ್ನಲಾಗುತ್ತಿದೆ. ಮೇ 3ರ ಬಳಿಕ ಟಿಕೆಟ್ ಬುಕ್ಕಿಂಗ್ ಆರಂಭಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ಮೇ 4ರಿಂದ ಆಯ್ದ ಕೆಲವು ನಗರಗಳಿಗೆ ದೇಶಿಯ ವಿಮಾನಗಳ ಹಾರಾಟ ಮತ್ತು ಜೂನ್ 1ರಿಂದ ಅಂತರರಾಷ್ಟ್ರೀಯ ವಿಮಾನಗಳಗಳ ಹಾರಾಟ ಪುನಾರಂಭವಾಗಲಿದ್ದು, ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ವಿಮಾನಯಾನ ಸಂಸ್ಥೆಗಳು ಜಾಹೀರಾತು ನೀಡಿದ್ದವು.

    ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಶನಿವಾರ ಕೇಂದ್ರ ಸಚಿವರ ಸಭೆಯಲ್ಲಿ ವಿಮಾನ ಮತ್ತು ರೈಲುಗಳ ಸಂಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಂಚಾರ ಆರಂಭಿಸದಿರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಅಂತಿಮ ಸ್ಪಷ್ಟನೆ ಬಳಿಕವೇ ಅಂತಿಮ ನಿರ್ಧಾರಗಳನ್ನು ಪ್ರಕಟಿಸಲಿ ಎಂದು ಸಚಿವರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

    ಸಭೆ ಬಳಿಕ ಈ ಬಗ್ಗೆ ಟ್ವಿಟ್ ಮಾಡಿರುವ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಬಗ್ಗೆ ಯಾವುದೇ ನಿಲುವು ಕೇಂದ್ರ ವಿಮಾನಯಾನ ಸಚಿವಾಲಯ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮಗಳು ಬಹುತೇಕ ರೈಲು ಪ್ರಯಾಣಕ್ಕೂ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದ ಕೇಂದ್ರ ಸರ್ಕಾರ ಮಾರ್ಚ್ 24ರಿಂದ ಮೇ 3ರವರೆಗೂ ಮಾಡಿರುವ ಎಲ್ಲ ಮುಂಗಡ ಟಿಕೆಟ್‍ಗಳ ಹಣ ಮರುಪಾವತಿ ಮಾಡಲು ಸೂಚನೆ ನೀಡಿತ್ತು.

  • ಮುಗಂಡ ಟಿಕೆಟ್ ಬುಕ್ಕಿಂಗ್ ಹಣ ವಾಪಸ್ ನೀಡಿ- ಕೇಂದ್ರ ಸರ್ಕಾರ ಸೂಚನೆ

    ಮುಗಂಡ ಟಿಕೆಟ್ ಬುಕ್ಕಿಂಗ್ ಹಣ ವಾಪಸ್ ನೀಡಿ- ಕೇಂದ್ರ ಸರ್ಕಾರ ಸೂಚನೆ

    ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಬುಕ್ ಮಾಡಲಾಗಿದ್ದ ಎಲ್ಲ ಮುಗಂಡ ಟಿಕೆಟ್ ಗಳ ಹಣ ವಾಪಸ್ ನೀಡುವಂತೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಲಾಯ ಸೂಚನೆ ನೀಡಿದೆ.

    ಇಂದು ಖಾಸಗಿ ವಿಮಾನಯಾನ ಸಂಸ್ಥೆಗಳ ಸಿಇಓಗಳ ಸಭೆ ನಡೆಸಿದ ಸಚಿವಲಾಯ ಈ ಖಡಕ್ ಸೂಚನೆ ನೀಡಿದೆ. ಗ್ರಾಹಕರಿಗೆ ಮರು ಪ್ರಯಾಣ ನಿಗದಿ ಮಾಡಿಕೊಳ್ಳಲು ಸೂಚಿಸುವಂತಿಲ್ಲ. ಗ್ರಾಹಕ ಟಿಕೆಟ್ ರದ್ದು ಮಾಡಲು ಬಯಸಿದರೆ, ದಂಡವನ್ನು ವಿಧಿಸದೇ ಸಂಪೂರ್ಣ ಹಣ ವಾಪಸ್ ನೀಡಬೇಕು. ಇದು ಅಂತರಾಷ್ಟ್ರೀಯ ಮತ್ತು ದೇಶಿಯ ಟಿಕೆಟ್ ಗಳಿಗೂ ಅನ್ವಯವಾಗಲಿದೆ ಎಂದು ಸೂಚಿಸಲಾಗಿದೆ.

    ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 24 ರಿಂದ ಮೇ3 ವರೆಗೂ ಲಾಕ್‍ಡೌನ್ ಹೇರಲಾಗಿದ್ದು, ಈ ವೇಳೆ ಎಲ್ಲ ಅಂತರರಾಷ್ಟ್ರೀಯ ದೇಶಿಯ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಬುಕ್ ಮಾಡಿದ್ದ ಟಿಕೆಟ್‍ಗಳ ಹಣ ಮರು ಪಾವತಿ ಮಾಡಲು ಕೆಲ ಕಂಪನಿಗಳು ಹಿಂದೇಟು ಹಾಕಿದ್ದಲ್ಲದೇ ಬದಲಿ ಪ್ರಯಾಣ ದಿನಾಂಕ ನಿಗದಿ ಮಾಡಿಕೊಳ್ಳಲು ಸೂಚಿಸಿದ್ದವು. ಇದೇ ಮಾದರಿಯಲ್ಲಿ ಗ್ರಾಹಕರಿಂದ ಹಲವು ದೂರುಗಳ ದಾಖಲಾದ ಹಿನ್ನೆಲೆ ಇಂದು ಸಭೆ ನಡೆಸಿ ಈ ಸೂಚನೆ ನೀಡಲಾಗಿದೆ.

  • ಇನ್ನು ಮುಂದೆ ವಿಮಾನದಲ್ಲೂ ವೈಫೈ ಬಳಸಬಹುದು

    ಇನ್ನು ಮುಂದೆ ವಿಮಾನದಲ್ಲೂ ವೈಫೈ ಬಳಸಬಹುದು

    – ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ವೈಫೈ
    – ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ

    ನವದೆಹಲಿ: ಇನ್ನು ಮುಂದೆ ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಪ್ರಯಾಣಿಕರು ವಿಮಾನದಲ್ಲಿ ವೈಫೈ ಬಳಸಿಕೊಳ್ಳಬಹುದು.

    ಇಲ್ಲಿಯವರೆಗೆ ಭಾರತದ ವಾಯುಸೀಮೆ ವ್ಯಾಪ್ತಿಯ ಸಂಚಾರದಲ್ಲಿ ವೈಫೈ ಬಳಕೆಗೆ ಅನುಮತಿ ಸಿಕ್ಕಿರಲಿಲ್ಲ. ಹಲವು ವರ್ಷಗಳಿಂದ ಈ ಸೇವೆ ಆರಂಭಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದ್ದರೂ ಭದ್ರತಾ ಕಾರಣಗಳಿಂದ ಸರ್ಕಾರ ಮೊಬೈಲ್ ಫೋನ್ ಮತ್ತು ಇಂಟರ್ ನೆಟ್ ಬಳಕೆಗೆ ಅನುಮತಿ ನೀಡಿರಲಿಲ್ಲ. ಆದರೆ ಈಗ ನಾಗರಿಕ ವಿಮಾನಯಾನ ಸಚಿವಾಲಯ ವೈಫೈ ಬಳಕೆಗೆ ಅನುಮತಿ ನೀಡಿದೆ.

    ಫೆ.21 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಸಚಿವಾಲಯ, ಪೈಲಟ್ ಅನುಮತಿ ನೀಡಿದರೆ ಪ್ರಯಾಣಿಕರು ಫ್ಲೈಟ್ ಮೊಡ್ ಅಥವಾ ಏರ್ ಪ್ಲೇನ್ ಮೊಡ್ ಹಾಕಿಕೊಂಡು ವಿಮಾನದಲ್ಲಿನ ವೈಫೈ ಸೇವೆ ಬಳಸಿಕೊಂಡು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಇ- ರೀಡರ್ ಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

    2018ರಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿರುವ ವಿಮಾನದೊಳಗೆ ವೈಫೈ ಬಳಸಲು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು.

    ವಿಮಾನವೊಂದು 3 ಸಾವಿರ ಮೀಟರ್ ಗಿಂತ ಮೇಲಕ್ಕೆ ಹಾರಲು ಆರಂಭಿಸಿದ ನಂತರ ಇಂಟರ್ ನೆಟ್ ಸಂಪರ್ಕ ಒದಗಿಸಬಹುದು. ಸ್ಯಾಟಲೈಟ್ ಮತ್ತು ಟೆರೆಸ್ಟ್ರಿಯಲ್ (ಭೂಮಿ) ನೆಟ್ ವರ್ಕ್ ಮೂಲಕ ಇಂಟರ್ ನೆಟ್ ಬಳಕೆಗೆ ಅವಕಾಶ ನೀಡಬಹುದು ಎಂದು ಟ್ರಾಯ್ ತನ್ನ ಶಿಫಾರಸ್ಸಿನಲ್ಲಿ ತಿಳಿಸಿತ್ತು.

    ಸಾಮಾನ್ಯವಾಗಿ ಯಾವುದೇ ವಿಮಾನಗಳು ಟೇಕಾಫ್ ಆಗಿ ನಾಲ್ಕೈದು ನಿಮಿಷಗಳಲ್ಲೇ 3 ಸಾವಿರ ಮೀಟರ್ ಗಿಂತ ಹೆಚ್ಚಿನ ಎತ್ತರ ತಲುಪುತ್ತದೆ. ಹೀಗಾಗಿ ವೈಫೈ ನೀಡಲು ಯಾವುದೇ ಸಮಸ್ಯೆ ಇರುವುದಿಲ್ಲ. ವಿಮಾನದಲ್ಲಿ ಎರಡು ರೀತಿಯ ಮೂಲಕ ವೈಫೈ ಸೌಲಭ್ಯ ಪಡೆಯಬಹುದು. ಒಂದನೆಯದ್ದು ಭೂಮಿಯಿಂದ ಆಕಾಶಕ್ಕೆ ಇನ್ನೊಂದು ಉಪಗ್ರಹದ ಮೂಲಕ.

    ಭೂಮಿಯಿಂದ ನೆಟ್:
    ಮೊಬೈಲ್ ಬ್ರಾಡ್ ಬ್ಯಾಂಡ್ ಟವರ್ ಗಳ ಮೂಲಕ ವಿಮಾನದ ಒಳಗಡೆ ಇರುವ ಆಂಟೇನಾಗಳಿಗೆ ಸಿಗ್ನಲ್ ಕಳುಹಿಸುತ್ತದೆ. ಎಲ್ಲ ಕಡೆ ಸಿಗ್ನಲ್ ಸಿಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ವಿಮಾನಗಳು ಸಾಗರದಲ್ಲಿ ಸಂಚರಿಸುವಾಗ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

    ಉಪಗ್ರಹ ನೆಟ್:
    ಈಗ ಹೇಗೆ ಒಂದು ಟಿವಿ ವಾಹಿನಿ ನೆಲದಲ್ಲಿರುವ ಕಚೇರಿಯಿಂದ ಸಿಗ್ನಲ್ ಗಳನ್ನು ಉಪಗ್ರಹಕ್ಕೆ ಕಳುಹಿಸಿ ಡಿಟಿಎಚ್ ಮೂಲಕ ವೀಕ್ಷಕರನ್ನು ತಲಪುತ್ತದೋ ಅದೇ ರೀತಿಯಾಗಿ ನೆಲದಿಂದ ವಿಮಾನಕ್ಕೆ ಎಲ್ಲ ಸಿಗ್ನಲ್ ಗಳನ್ನು ಉಪಗ್ರಹದ ಮೂಲಕವೇ ರವಾನಿಸಲಾಗುತ್ತದೆ. ವಿಮಾನ ತನ್ನ ಆಂಟೆನಾದ ಮೂಲಕ ಉಪಗ್ರಹದಿಂದ ಸಿಗ್ನಲ್ ಪಡೆದು ಬಳಿಕ ರೂಟರ್ ಮೂಲಕ ವೈಫೈ ಸೇವೆ ನೀಡಲಾಗುತ್ತದೆ. ಈ ವ್ಯವಸ್ಥೆಗಾಗಿ ರಿಸೀವರ್ ಮತ್ತು ಟ್ರಾನ್ಸ್ ಮೀಟರ್ ಗಳ ಬಳಕೆ ಮಾಡಲಾಗುತ್ತದೆ.

    ಏರ್ ಏಷ್ಯಾ, ಏರ್ ಚೀನಾ, ಏರ್ ಫ್ರಾನ್ಸ್, ಕತಾರ್ ಏರ್‍ವೇಸ್, ಬ್ರಿಟಿಷ್ ಏರ್‍ವೇಸ್, ಎಮಿರೇಟ್ಸ್, ವರ್ಜಿನ್ ಅಮೆರಿಕ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರಯಾಣಿಕರಿಗೆ ವೈಫೈ ಸೇವೆ ನೀಡುತ್ತಿವೆ.

  • ಹಾರಾಟ ನಿಲ್ಲಿಸಿದ ಜೆಟ್ ಏರ್‍ವೇಸ್?

    ಹಾರಾಟ ನಿಲ್ಲಿಸಿದ ಜೆಟ್ ಏರ್‍ವೇಸ್?

    ಮುಂಬೈ: ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‍ವೇಸ್ ಬುಧವಾರ ರಾತ್ರಿಯಿಂದ ತನ್ನ ಹಾರಾಟವನ್ನು ನಿಲ್ಲಿಸಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ.

    ಜೆಟ್ ಏರ್‍ವೇಸ್ ತಾತ್ಕಲಿಕ ನಿರ್ವಹಣೆಗಾಗಿ ತುರ್ತು 400 ಕೋಟಿ ರೂ. ಹಣವನ್ನು ಸಾಲವಾಗಿ ನೀಡಬೇಕೆಂದು ಸಾರ್ವಜನಿಕ ಬ್ಯಾಂಕ್‍ಗಳಲ್ಲಿ ಕೇಳಿಕೊಂಡಿತ್ತು. ಜೆಟ್ ಏರ್‍ವೇಸ್ ಅರ್ಜಿಯನ್ನು ಬ್ಯಾಂಕ್ ಗಳು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಹಾರಾಟವನ್ನು ತಾತ್ಕಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ವರದಿಯಾಗಿದೆ.

    ಇಂದು ನಡೆದ ಸಭೆಯಲ್ಲಿ ಹಣಕಾಸುವ ನೀಡುವ ವಿಚಾರವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಒಂದು ವೇಳೆ ಗುರುವಾರ ಬ್ಯಾಂಕ್ ಗಳು ಹಣಕಾಸಿನ ನೆರವು ನೀಡದೇ ಇದ್ದಲ್ಲಿ ಜೆಟ್ ಏರ್‍ವೇಸ್ ತನ್ನ ಹಾರಾಟವನ್ನು ನಿಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆಗೆ ಸಾರ್ವಜನಿಕ ರಂಗದ ಬ್ಯಾಂಕ್‍ಗಳು 1500 ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ನೀಡಲು ಮುಂದಾಗಿದ್ದವು. ಆದರೆ ಇದೂವರೆಗೆ ಕೇವಲ 300 ಕೋಟಿಯನ್ನು ಮಾತ್ರ ಬಿಡುಗಡೆ ಆಗಿದೆ. ಸದ್ಯ ತುರ್ತು 400 ಕೋಟಿ ನೀಡಬೇಕೆಂದು ಕಂಪನಿಯ ಸಿಇಓ ವಿನಯ್ ದುಬೆ ಮನವಿ ಮಾಡಿದ್ದರು. ಮಂಗಳವಾರ ಬ್ಯಾಂಕ್‍ಗಳ ಜೊತೆ ನಡೆದ ಸಭೆಯ ವಿಫಲವಾಗಿತ್ತು. ಕಂಪನಿಯ ನಿರ್ವಹಣೆಗೆ ಹಣ ಸಮಸ್ಯೆ ಎದುರಾಗಿದ್ದರಿಂದ ಕೇವಲ ಆರೇಳು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಡಿಸೆಂಬರ್ ನಲ್ಲಿ 123 ವಿಮಾನಗಳ ಸೇವೆಯನ್ನು ಒದಗಿಸುತ್ತಿತ್ತು.

    ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳ ಹಿತರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕೆಂದು ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್ ಉಪಾಧ್ಯಕ್ಷ ಆಸಿಂ ವಲೈನಿ ತಿಳಿಸಿದ್ದರು.

    1993ರಲ್ಲಿ ನರೇಶ್ ಮತ್ತು ಅನಿತಾ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಜೆಟ್ ಏರ್‍ವೇಸ್ ಸುಮಾರು 7 ಸಾವಿರ ಕೋಟಿಗೂ ಅಧಿಕ ಸಾಲವನ್ನು ಮಾಡಿಕೊಂಡಿದೆ. 2013ರಲ್ಲಿ ಸಾಲದ ಸುಳಿಯಲ್ಲಿ ಸಂಸ್ಥೆ ಸಿಲುಕಿದ್ದಾಗ, ಅಬುದಾಭಿಯ ಎತಿಹಾದ್ ಏರ್‍ವೇಸ್ ಸಂಸ್ಥೆ ಶೇ.24ರಷ್ಟು (ಸುಮಾರು 4 ಸಾವಿರ ಕೋಟಿ) ಪಾಲನ್ನು ಖರೀದಿಸಿತ್ತು.